ಕೇಂದ್ರದ ಕಾಯ್ದೆಗಳೇಕೆ ಜನರಿಗೆ ಅರ್ಥವಾಗ್ತಿಲ್ಲ? ಬಿಜೆಪಿಯೇಕೆ ಮಾತಾಡ್ತಿಲ್ಲ?

ನಿಮಗೆಲ್ಲ ಬೆಂಗಳೂರಿನ ಬಸವನಗುಡಿಯಲ್ಲಿರೋ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಗೊತ್ತಿರಬೇಕಲ್ಲವೇ? ಗೊತ್ತಿಲ್ಲ ಅಂತ ಮಾತ್ರ ಹೇಳ್ಬೇಡಿ ಯಾಕಂದ್ರೆ, ನಮ್ಮ ಡಿ.ವಿ.ಗುಂಡಪ್ಪನವರು ಬೀದಿ ಬೀದಿಯಲ್ಲಿ ಚಂದಾ ಎತ್ತಿ ಬಹಳ ಪ್ರೀತಿಯಿಂದ ಸ್ಥಾಪಿಸಿರೋ ಸಂಸ್ಥೆ. ಇವತ್ತು ಅಲ್ಲಿ ಕೆಲ ದೇಶ, ಧರ್ಮ ಎಂಬಿತ್ಯಾದಿ ವಿಚಾರಗಳ ಬಗ್ಗೆ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿರಬಹುದು. ಆದರೆ ನನ್ನ ಮಿತ್ರ ಹೇಳುವ ಪ್ರಕಾರ ಇದರ ಉದ್ದೇಶ ಬೇರೆಯದೇ ಅಂತೆ.
ಆಡಳಿತ-ಸಾರ್ವಜನಿಕರಿಗೆ ಕೊಂಡಿಯಾಗುವ ಉದ್ದೇಶ ಮತ್ತು ಆಡಳಿತದಿಂದ ಜಾರಿಯಾಗುವ ಕಾನೂನು-ಕಾಯ್ದೆಗಳ ಬಗ್ಗೆ ಮುಕ್ತ ಚರ್ಚೆಗೆ ಅನುವಾಗುವಂತಹ ವೇದಿಕೆಯನ್ನು ನಿರ್ಮಾಣ ಮಾಡಬೇಕು, ನಿಯಮಗಳು ಜಾರಿಗೆ ಬಂದ ನಂತರ ಇದರ ಬಗ್ಗೆ ಅದು ವಿವರವಾಗಿ ಚರ್ಚೆಯಾಗಬೇಕು, ಅಪೇಕ್ಷೆಗೆ ತಕ್ಕಂತೆ ಆಡಳಿತದಲ್ಲಿ ಏನೇನು ಬದಲಾವಣೆಯಾಗಬೇಕು ಎಂಬ ಬಗ್ಗೆ ವೈಚಾರಿಕ ಚರ್ಚೆ ನಡೆಸುವುದಕ್ಕೆ ಸ್ಥಾಪನೆ ಮಾಡಿದ್ದು ಎಂದರು. ಇದ್ದರೂ ಇರಬಹುದೇನೋ.
ಆದರೆ ಅಂಥದ್ದೊಂದು ಚರ್ಚೆಯೇ ನಡೆಯದ ಕಾರಣ ಇವತ್ತು ಬಿಜೆಪಿ ಎಡವುತ್ತಿದೆ ಎಂದರೆ ನಂಬುತ್ತೀರಾ?
ಹೇಗೆ ನೋಡೋಣ. ಬಿಜೆಪಿಯ ಇತ್ತೀಚಿನ ಕೃಷಿ ಕಾಯ್ದೆಯನ್ನೇ ತೆಗೆದುಕೊಳ್ಳಿ. ಇದೆಂಥ ಅತ್ಯುತ್ತಮ ಕಾಯ್ದೆ ಎಂದರೆ, ನಿಜಕ್ಕೂ ರೈತನ ಬಾಳನ್ನು ಮತ್ತಷ್ಟು ಈಸಿಯಾಗಿ ಮಾಡಿ, ಎಲ್ಲ ರೈತನನ್ನು ಸ್ವತಂತ್ರರನ್ನಾಗಿಸುವ ಒಂದು ಕಾಯ್ದೆ ಇದು. ದಲ್ಲಾಳಿಗಳಿಗೆ ಕಮಿಷನ್‌ ಲೆಕ್ಕದಲ್ಲಿ ಹಣ ಕೊಟ್ಟು ಕೊಟ್ಟು ಬೇಸತ್ತ ರೈತನಿಗೆ ಮುಕ್ತಿ ನೀಡುವ ಒಂದು ಕಾಯ್ದೆ. ಕಾಯ್ದೆಯನ್ನು ಓದಿ ಅರ್ಥ ಮಾಡಿಕೊಂಡವರಿಗೆ ಇದು ಗೊತ್ತಾಗುತ್ತದೆ. ಬಾಕಿಯವರು ಏನು ಮಾಡಬೇಕು? ಅದೆಲ್ಲ ಬಿಡಿ, ಈ ಕಾಯ್ದೆ ಬರುವ ಮುನ್ನ ಏನಾದರೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆಯೇ? ಸರಿ, ಇದನ್ನು ಜನರಿಗೆ ಅರ್ಥ ಮಾಡಿಸುವುದಕ್ಕೆ ಸರ್ಕಾರ ಏನು ಮಾಡಿದೆ? ಎಲ್ಲ ಮರೆತುಬಿಡಿ, ಬಿಜೆಪಿ ಸಂಸದರಿಗೆ, ಶಾಸಕರಿಗಾದರೂ ಈ ಕೃಷಿ ಕಾಯ್ದೆಯ ಬಗ್ಗೆ ಗೊತ್ತಿದೆಯೇ? ಇನ್ನು ಜನರಿಗೆ ಗೊತ್ತಾಗುವುದಕ್ಕೆ ಹೇಗೆ ಸಾಧ್ಯ?
ಪ್ರತಿಭಟನೆಯ ಆರಂಭ ಇದು. ಏನೋ ತಮಗೆ ಅರ್ಥವಾಗದ ಹಾಗೆ ಏನೇನೋ ಕಾನೂನು ಮಾಡುತ್ತಿದ್ದಾರೆ ಎಂದು ಹೆದರಿರುವ ರೈತನಿಗೆ ಒಂದಷ್ಟು ದೇಶ ವಿರೋಧಿ ಖಲಿಸ್ಥಾನಿಯರು ಬಂದು ಕಿವಿ ಊದಿದರು. ಈಗ ಬಿಜೆಪಿಗೆ ನೀರನ್ನು ಹಾಲಿನಿಂದ ಬೇರ್ಪಡಿಸುವ ಕೆಲಸ ಬಂತು. ಖಲಿಸ್ಥಾನಿಯರಿಗೆ ಹೊಡೆದರೂ ರೈತರಿಗೇ ಹೊಡೆದರು ಎಂದು ಸುದ್ದಿ ಮಾಡುವ ಮಾಧ್ಯಮಗಳು, ಅದನ್ನೇ ಎತ್ತಿ ವಿದೇಶಿ ಪತ್ರಿಕೆಗಳಲ್ಲಿ ಪುಟಗಟ್ಟಲೇ ಲೇಖನ ಬರೆಯುವ ಅವಕಾಶವಾದಿಗಳು. ಇವೆಲ್ಲಕ್ಕೂ ಬಿಜೆಪಿಯೇ ಕಾರಣ ಎಂಬುದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ.
ಯಾರ ಉದಾಹರಣೆಯೂ ಬೇಡ. ನನ್ನದೇ ಹೇಳ್ತೇನೆ ಕೇಳಿ. ಕೃಷಿ ಮಸೂದೆ ಬಂದಾಗ ಈಗ ಹೋರಾಟ ಮಾಡುತ್ತಿರುವವರಲ್ಲಿರುವ ಪ್ರಶ್ನೆಯೇ ನನ್ನಲ್ಲೂ ಇತ್ತು. ಇನ್ನೂ ಹೆಚ್ಚೇ ಇತ್ತು. ಇದನ್ನೆಲ್ಲ ಪರಿಹರಿಸುವುದಕ್ಕೆ ಕೆಲ ರಾಜಕಾರಣಿಗಳನ್ನ ಕೇಳಿದೆ. ಅವರ ಪಿಎಗಳನ್ನು ಕೇಳಿದೆ. ಹೆಚ್ಚೆಂದರೆ ಬಿಜೆಪಿ ಐಟಿ ಸೆಲ್‌ನವರು ಮತ್ತು ರಾಜಕಾರಣಿಗಳ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ ಮಾಡುವ ಮಂದಿ ತಯಾರಿಸಿದ್ದ ಗ್ರಾಫಿಕ್‌ ಚಿತ್ರ ಕಳಿಸಿಕೊಟ್ಟರು. ಅದನ್ನು ಓದಿದರೆ ಗೊತ್ತಿದ್ದದ್ದೂ ಮರೆತು ಮಂಡೆ ಹಾಳಾಗೋದು ಖಂಡಿತ.
ಸರಿ, ಭಾರತ ಸರ್ಕಾರದ ಜಾಲತಾಣದಲ್ಲಾದರೂ ಹುಡು ಕೋಣ ಎಂದು ನೋಡಿದರೆ ಅಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಬಿಟ್ಟರೆ ಮತ್ತೊಂದು ಭಾಷೆಯಲ್ಲಿ ಕೃಷಿ ಮಸೂದೆಯ ವಿವರ ಇರಲಿಲ್ಲ. ಇನ್‌ಫ್ಯಾಕ್ಟ್, ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟಿಸಿ ಅಂತ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಹಾಕಿದ್ದ ಅರ್ಜಿಯೊಂದು ವಿಚಾರಣೆಗೆ ಬಂದಿತ್ತು. ಮತ್ತೆಲ್ಲಿ ಹುಡುಕೋದು. ಪರ ಮಾತಾಡಬೇಕೋ ವಿರೋಧ ಮಾತಾಡಬೇಕೋ ಎಂಬ ಗೊಂದಲದಲ್ಲಿದ್ದಾಗ ಅದನ್ನು ಪರಿಹರಿಸಿದವರು ಆರ್ಥಿಕ ತಜ್ಞ ಸಮೀರ್‌ ಕಾಗಲ್ಕರ್‌. ಇಷ್ಟೆಲ್ಲ ಹುಡುಕುವ ಚಟ ಅಂತನೇ ಅಂದ್ಕೊಳಿ, ನನಗಿರಬಹುದು. ಆದರೆ, ಸಾಮಾನ್ಯ ಜನರು ಸರಿಯಾಗಿ ಮನೆಕೆಲಸವೇ ಮಾಡಲ್ಲ, ಇನ್ನು ಕಾಯ್ದೆಯ ಬಗ್ಗೆ ಹೋಮ್‌ ವರ್ಕ್‌ ಮಾಡ್ತಾರಾ? ಕೇಂದ್ರ ಸರ್ಕಾರದ ರೈತ ಹಿತದ ಕಾಯ್ದೆ ಹಾಳಾಗುತ್ತಿರುವುದು ಇಲ್ಲೇ. ಅರ್ಥ ಮಾಡಿಸುವಲ್ಲಿ.
ವಿರೋಧಿಸಿ ಹೋರಾಟ ಮಾಡುತ್ತಿರುವವರಿಗೆ ಕಾಯ್ದೆಯ ಬಗ್ಗೆ ಒಂದಕ್ಷರವೂ ಗೊತ್ತಿಲ್ಲ ಎಂದು ಎಷ್ಟು ಆತ್ಮವಿಶ್ವಾಸದಿಂದ ಹೇಳಬಲ್ಲೆನೋ, ಅದೇ ಆತ್ಮವಿಶ್ವಾಸದಿಂದ ಈ ಕಾಯ್ದೆ ಬೆಂಬಲಿಸುತ್ತಿರುವ ಬಿಜೆಪಿಯ ರಾಜಕಾರಣಿಗಳಿಗೂ ಇದರ ಬಗ್ಗೆ ಗೊತ್ತಿದೆಯೇ ಎಂದು ಕೇಳುತ್ತೇನೆ. ಯಾಕಂದ್ರೆ ಇವರಾರ‍ಯರೂ ಓದಿಕೊಂಡಿಲ್ಲ ಎಂಬುದು ಸತ್ಯ. ಇಲ್ಲವಾದರೆ, ಮೊನ್ನೆ ರೈತರ ಪ್ರತಿಭಟನೆ ಆದಾಗ ರೈತರಿಗೆ ಹಿಂಗಲ್ಲ ಕಣ್ರಪ್ಪ ಹಿಂಗೆ ಎಂದು ತಿಳಿಹೇಳುವ ಪ್ರಯತ್ನವನ್ನು ಎಲ್ಲೊ ಒಂದಿಬ್ಬರು ಸಂಸದರು ಮಾಡಿದ್ದಾರೆ ಎಂಬುದು ಬಿಟ್ಟರೆ ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ? ಶಾಸಕರು ಎಲ್ಲಿ ಅಡಗಿದ್ದಾರೆ? ನಿಮ್ಮ ಬೇಜವಾಬ್ದಾರಿತನಕ್ಕೆ ಮೋದಿಯನ್ನು ಜನರು ಹಿಟ್ಲರ್‌ ಎನ್ನುತ್ತಿದ್ದಾರೆ. ಕೊನೆಗೆ ಅದು ನಿಮ್ಮ ಕಾಲುಬುಡಕ್ಕೇ ಬಂದಾಗ ತೀರ ತಡವಾಗಿರುತ್ತದೆ.
ಸಿಎಎ ಕಾಯ್ದೆಯನ್ನೇ ತೆಗೆದುಕೊಳ್ಳೋಣ. ಈ ಪುಣ್ಯಾತ್ಮದ ಕಾಯೆು್ದ, ಭಾರತೀಯರಿಗೆ ಸಂಬಂಧವೇ ಇಲ್ಲದ್ದು. ಭಾರತದ ನೆರೆ ರಾಷ್ಟ್ರದಲ್ಲಿ ಧರ್ಮದ ಆಧಾರದ ಮೇಲೆ ಶೋಷಣೆಗೆ ಒಳಗಾಗಿರುವ ಭಾರತ ಮೂಲದ ಹಿಂದೂ, ಜೈನ ಇತ್ಯಾದಿ ಧರ್ಮಗಳ ಜನರಿಗೆ ಭಾರತರ ಪೌರತ್ವ ಕೊಡುವ ಕಾಯ್ದೆ. ಆದರೆ ಹೋರಾಟ ಮಾಡಿದ್ದು ಇಲ್ಲಿನ ಮುಸ್ಲಿಮರು. ಯಾಕಾಗಿ? ನಮ್ಮ ಪೌರತ್ವ ಕಸಿಯುತ್ತಾರೆ, ಪಾಕಿಸ್ಥಾನಕ್ಕೆ ಕಳುಹಿಸುತ್ತಾರೆ ಎಂದು. ಅದಕ್ಕೇ ಇಡೀ ವಿಶ್ವದ ಮುಂದೆ ಭಾರತದ ಮರ್ಯಾದೆ ಹೋಗುವಂತೆ ದಿಲ್ಲಿಯಲ್ಲಿ ಶಹೀನ್‌ ಭಾಗ್‌ ಪ್ರತಿಭಟನೆ ನಡೆಯಿತು. ಇದರಲ್ಲಿ ದೇಶ ವಿರೋಧಿ ಸಂಘಟನೆಗಳು, ಪಾಕ್‌ನ ಗುಪ್ತಚರ ಸಂಸ್ಥೆ, ಭಯೋತ್ಪಾದಕ ಸಂಘಟನೆಗಳ ಕೈವಾಡ ಒಂದೊಂದೇ ಹೊರ ಬರುತ್ತಿದೆ. ಅಂಥದ್ದೇ ಪ್ರತಿಭಟನೆಯ ಎರಡನೇ ಭಾಗ, ರೈತರ ಹೆಸರಿನಲ್ಲಿ ನಡೆಯುತ್ತಿದೆ.
ಸಿಎಎ ತರುವ ಮುನ್ನ ಎಷ್ಟು ಚರ್ಚೆ ನಡೆದಿದೆ? ಯಾವ ಧರ್ಮದ ರಾಜಕಾರಣಿಗಳು ಇದನ್ನು ತಮ್ಮ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಜನರನ್ನು ಎತ್ತಿ ಕಟ್ಟುತ್ತಾರೆ ಎಂದು ನಿಮಗೆ ಮೊದಲೇ ಗೊತ್ತಿಲ್ಲದೇ ಏನೂ ಇಲ್ಲ. ಅಥವಾ ಆಶ್ಚರ್ಯ ವ್ಯಕ್ತಪಡಿಸುವಷ್ಟು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ದುರ್ಬಲ ಅಲ್ಲ. ಹಾಗಾದರೆ, ಇಂಥ ಕಾಯ್ದೆ ತರುವ ಮುನ್ನ ಜನರ ಮನಸ್ಸನ್ನು ಯಾಕೆ ಮೊದಲೇ ಪಕ್ವ ಮಾಡಲಿಲ್ಲ? ಬಿಜೆಪಿ ಮಾಡ್ತಾ ಇರೋ ತಪ್ಪೇ ಇದು. ಮೊದಲು ಕಾಯ್ದೆ ತಂದು ಸುಮ್ಮನೆ ಕೂರೋದು. ಹೀಗೆ ಮಾಡಿದ್ರೆ ಯಾವನಿಗೆ ಗೊತ್ತಾಗಬೇಕು ಅದು ಒಳ್ಳೇದಾ ಕೆಟ್ಟದ್ದಾ ಅಂತ?
ಹಾಗಂತ ಎಲ್ಲ ಕಾಯ್ದೆಗೂ ಚರ್ಚೆ ಮಾಡಬೇಕು ಅಂತೇನಿಲ್ಲ. ನೋಟು ಅಮಾನ್ಯೀಕರಣ ಮಾಡಿದಾಗ, ಮುಂದೇನು ಸವಾಲು ಬರುತ್ತೆ ಎಂದು ನೋಡಿ ಕೆಲಸ ಮಾಡಬಹುದಿತ್ತು. ಆದರೆ ಅದಾಗಲಿಲ್ಲ. ನೋಟ್‌ ಬ್ಯಾನ್‌ ಮಾಡಿದ್ದು ಎಷ್ಟು ಒಳ್ಳೇದಾಯ್ತು ಅಂದ್ರೆ ಕಾಶ್ಮೀರದಲ್ಲಿ ಕಲ್ಲು ತೂರಾಟ ಬಂದ್‌ ಆಯ್ತು, ಭಯೋತ್ಪಾದಕರಿಗೆ ತಾವು ತಂದ ಹಣವನ್ನು ಹೇಗೆ ದಾಟಿಸುವುದು ಎಂದು ತಿಳಿಯದೇ ದಂಗಾದರು, ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನ ರಸ್ತೆಬದಿಯ ಕಸದಬುಟ್ಟಿಯಲ್ಲಿ ತಂದಿಟ್ಟು ಸುಟ್ಟು ಹೋದರು. ಅದಕ್ಕೇ ಈಗಲೂ ಜನರು ನೋಟ್‌ ಬ್ಯಾನ್‌ ಎಂದ ತಕ್ಷಣ ಹೇಳುವುದು ಒಂದೇ ಮಾತು ಒಳ್ಳೇ ಕೆಲಸ, ಆದರೆ ಸಮರ್ಥವಾಗಿ ನಿಭಾಯಿಸಕ್ಕೆ ಆಗ್ಲಿಲ್ಲ ಎಂದು. ಆದರೂ ಆಗ ಜನರು ಸಹಿಸಿಕೊಂಡರು. ಎಲ್ಲ ಟೈಮಲ್ಲೂ ಸುಮ್ಮನೆ ಕೂತರೆ ಕೆಲಸ ಆಗಲ್ಲ ಅನ್ನೋದನ್ನ ಬಿಜೆಪಿ ಈಗಲಾದರೂ ಅರ್ಥ ಮಾಡಿಕೊಳ್ಳಬೇಕಿದೆ.
ಇವರು ಮಾತಾಡದೇ ಇದ್ದಿದ್ದಕ್ಕೆ, ಇವರ ಬದಲಿಗೆ ಕಾಂಗ್ರೆಸ್‌ನವರು, ಪಾಕ್‌ಗೆ ಹುಟ್ಟಿದ ಸಂಘಟನೆಗಳು, ಭಯೋತ್ಪಾದಕರು, ಖಲಿಸ್ಥಾನಿ ಉಗ್ರರು ಜನರನ್ನು ಬೇಗ ತಲುಪಿ, ಸುಳ್ಳುಗಳ ಮೂಲಕ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಬೇರೆ ದೇಶದಲ್ಲಿ ಹೇಗಿದ್ಯೋ ಗೊತ್ತಿಲ್ಲ ಆದ್ರೆ ಅನಕ್ಷರಸ್ಥರನ್ನು, ಅವಿದ್ಯಾವಂತರನ್ನು, ಮಧ್ಯಮವರ್ಗದವರನ್ನು, ಬಡವರನ್ನು ಯಾರು ಮೊದಲು ತಲುಪುತ್ತಾರೋ ಅವರ ಪರವೇ ಈ ಮೇಲಿನ ವರ್ಗದವರು ಇರುತ್ತಾರೆ. ಇದು ಪ್ರತಿಯೊಂದು ಹಂತದಲ್ಲೂ ಸಾಬೀತಾಗುತ್ತಾ ಇದೆ.
ಆದ್ರೆ ವಿಚಿತ್ರ ನೋಡಿ, ನೂತನ ಶಿಕ್ಷಣ ನೀತಿ-2020ನ್ನು ತಂದಾಗ ಒಂದಷ್ಟು ಜನರು ವಿರೋಧಿಸಬೇಕಲ್ಲಾ ಎಂದು ವಿರೋಧಿಸಿದರೇ ವಿನಾ, ಹೆಚ್ಚಾಗಿ ವಿರೋಧ ಮಾಡಲಿಲ್ಲ. ಯಾಕೆ ಗೊತ್ತಾ? ಇದರ ಬಗ್ಗೆ ಶಿಕ್ಷಣ ತಜ್ಞರ ಬಳಿ ಅಷ್ಟು ಚರ್ಚೆಗಳಾಗಿವೆ. ಎಷ್ಟೋ ಶಿಕ್ಷಕರ, ಪೋಷಕರ ಸಮ್ಮತಿ ಇದಕ್ಕಿದೆ. ಹಾಗಾಗಿ ಈಗ ಇದರ ಸದ್ದೇ ಇಲ್ಲ. ನೀವು ಗ್ರೀಕ್‌ ಇತಿಹಾಸ ಓದಿ. ಅಲ್ಲೂ ಅಷ್ಟೇ, ಯಾವುದೇ ಕಾನೂನು ಬರುವ ಮುನ್ನ ಸೆನೆಟ್‌ನಲ್ಲಿ ಈಗಿನ ಹಾಗೆ ಗಂಜಿಗಿರಾಕಿಗಳಲ್ಲದೇ ನಿಜವಾದ ಬುದ್ಧಿಜೀವಿಗಳು ಇದರ ಬಗ್ಗೆ ಹಲವಾರು ದಿನಗಳವರೆಗೆ ಚರ್ಚೆ ಮಾಡಿ, ಒಂದಷ್ಟು ಕೋಪ ತಾಪ ಆಕ್ರೋಶ ಎಲ್ಲ ಭಾವನೆಗಳು ಬಂದು ಹೋಗಿ, ನಂತರ ಆದೇಶ ಹೊರಗೆ ಬರುತ್ತಿತ್ತು. ಕಾಂಗ್ರೆಸ್‌ನ್ನು ಬುಡಸಮೇತ ಕಿತ್ತೊಗೆಯಬೇಕೆಂದಿರುವ ಬಿಜೆಪಿಯೇ ಹೇಳದೇ ಕೇಳದೇ ಒಳ್ಳೇ ಕಾಯ್ದೆ ಕೊಟ್ಟರೂ ಏನೂ ಉಪಯೋಗವಾಗುವುದಿಲ್ಲ. ಅದು ಬಿಡಿ, ಅಮ್ಮ ಕೊಡುವುದು ಊಟ, ಸಿಹಿ ತಿಂಡಿ ಎಂಬುದು ಮಗುವಿಗೆ ಚೆನ್ನಾಗಿಯೇ ಅರಿವಿದ್ದರೂ, ಕೈಗೆ ಕೊಟ್ಟಿದ್ದು ಏನಮ್ಮಾ ಇದು? ಎಂದು ಮಗು ಕೇಳಿ, ನೋಡಿಯೇ ತಿನ್ನುತ್ತದೆ. ರುಚಿ ಚೆನ್ನಾಗಿರದಿದ್ದರೆ ಮಗುವೇ ಅದನ್ನು ತುಪ್ಪುವಾಗ, ನಿಮ್ಮ ಕಾನೂನು ಕಾಯ್ದೆಗಳೆಲ್ಲ ಯಾವನಿಗೆ ಅರ್ಥ ಮಾಡಿಕೊಳ್ಳುವ ಪುರಸೊತ್ತು ಇರುತ್ತದೆ ಸ್ವಾಮಿ?
ಪಂಜಾಬಲ್ಲೂ ಅಷ್ಟೇ ಅಲ್ಲಿನ ರೈತರು ಹೋರಾಟ ಮಾಡುವ ಅಗತ್ಯವೇ ಇಲ್ಲ. ಯಾಕೆಂದರೆ, ಲಾಕ್‌ಡೌನ್‌ ಇದ್ದಿದ್ದರಿಂದ ಎಪಿಎಂಸಿ ಮಂಡಿ ಇಲ್ಲದಿದ್ದರೂ ಸಹ, ಸರ್ಕಾರ ಸುಮಾರು 39 ಮಿಲಿಯನ್‌ ಟನ್‌ ಗೋಧಿಯನ್ನು ಖರೀದಿಸಿದೆ. ಯಾವೊಬ್ಬ ರೈತನೂ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಮಾರಲೇ ಇಲ್ಲ. 70 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನ ಸರ್ಕಾರ ರೈತರಿಗೆ ಆಗ ನೀಡಿದೆ. ಈ ಲಾಕ್‌ಡೌನ್‌ನಲ್ಲಿ ಯಾವುದಾದರೂ ಒಂದು ಕ್ಷೇತ್ರ ಅತ್ಯಂತ ಕಡಿಮೆ ನಷ್ಟಗಳನ್ನು ಅನುಭವಿಸಿದ್ದರೆ ಅದು ಕೃಷಿ ಕ್ಷೇತ್ರ.
ಇಷ್ಟೆಲ್ಲ ಓದಿದ ಮೇಲೆ ಕೆಲ ರಾಜಕಾಣಿಗಳಿಗೆ ಅನಿಸಬಹುದು, ‘ನಿನ್ನೆ ಮೊನ್ನೆ ಹುಟ್ಟಿದವರೆಲ್ಲ ನಮಗೆ ರಾಜಕೀಯ ಪಾಠ ಮಾಡ್ತಾರೆ ನೊಡ್‌ ಗುರೂ’ ಎಂದು. ಅಥವಾ ರಾಜಕಾರಣಿಗಳು ‘ಇವ್ನು ಹೇಳ್ತಾ ಇದ್ದಂಗೆ ಎಲ್ಲ ಓದ್ತಾ ಡಂಗೂರ ಸಾರುವವನಾಗುತ್ತಾ ಹೋದ್ರೆ ಬೇರೆ ಕೆಲಸ ನಿಮ್ಮಪ್ಪ ಬಂದು ಮಾಡ್ತಾನಾ?’ ಎಂದೂ ಕೇಳಬಹುದು.
ಮೋದಿ ಸರ್ಕಾರ ಬರುವ ಮುನ್ನ ಕಾಂಗ್ರೆಸ್‌ ರಾಜಕಾರಣಿಗಳೂ ಇದೇ ದರ್ಪದಲ್ಲಿದ್ದರು. ಆದ್ರೆ ಮತದಾರ ಅವರನ್ನು ನೆಲಕಚ್ಚುವಂತೆ ಮಾಡಿದ. ಇವತ್ತು ಕಾಂಗ್ರೆಸ್‌ನ ‘ಕಾ’ ಕೂಡ ದೇಶದಲ್ಲಿ ಕಾಣ್ತಾ ಇಲ್ಲ. ಇದಕ್ಕೂ ಮೀರಿ ಬಿಜೆಪಿ ನಾವಿರೋದೇ ಹಿಂಗೆ ಅಂದ್ರೆ, ನೀವು ಹೋಗೋದಷ್ಟೇ ಅಲ್ಲ, ಕುಮಾರಣ್ಣನಂಥ ಪಕ್ಷಗಳನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಿಹೋಗುತ್ತೀರಿ ಅನ್ನೋದನ್ನ ಮಾತ್ರ ಮರೆಯಬೇಡಿ

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya