ಟಿಪ್ಪು ಜಯಂತಿಯಂದೇ ವಿಗ್ರಹ ಒಡೆದು ಹೋಳಾಯಿತು

ಸ್ವಲ್ಪ ದಿನಗಳಲ್ಲೇ 26/11 ಎಂಬ ದಿನಾಂಕ ಬರುತ್ತದೆ. ಮುಂಬೈ ದಾಳಿಯನ್ನು ನೆನೆದು ಉಗ್ರವಾದಕ್ಕೆ ಧಿಕ್ಕಾರ ಎಂದು ಒಂದಷ್ಟು ಜನ ಕೂಗಿದರೆ ಮತ್ತೊಂದಷ್ಟು ಜನ ಸಂಜೆಯಾಗುತ್ತಲೇ ಕ್ಯಾಂಡಲ್‌ ಹಿಡಿದು ಮೆರವಣಿಗೆ ಹೋಗುತ್ತಾರೆ. ಇನ್ನೊಂದಷ್ಟು ಮಂದಿ ಮನೆಯಲ್ಲೇ ಕುಂತು ಸಾಮಾಜಿಕ ಜಾಲತಾಣದಲ್ಲಿ ದಾಳಿಯ ಫೋಟೊಗಳನ್ನು ಹಾಕಿ ಮರುಕ ವ್ಯಕ್ತಪಡಿಸುತ್ತಾರೆ. ಟಿವಿಗಳಲ್ಲಿ ವಿಶೇಷ ಕಾರ್ಯಕ್ರಮ, ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ.

ಆದರೆ ಯಾರೊಬ್ಬರಿಗೂ 20/11 ನೆನಪಿರುವುದೇ ಇಲ್ಲ. ಈಗಲೂ ಈ ಲೇಖನ ಓದುವಾಗಲೂ ಇವತ್ತು 22ನೇ ತಾರೀಖು. ಹಾಗಾದರೆ ಮೊನ್ನೆ ಅಂಥದ್ದೇನಾಯ್ತು ಎಂದು ಕೇಳುವವರೂ ಇದ್ದಾರೆ. ಹಾಸನದ ದೊಡ್ಡಗದ್ದವನಹಳ್ಳಿಯ ಮಹಾಲಕ್ಷ್ಮೇ/ಭದ್ರಕಾಳಿ ಅಮ್ಮನವರ ದೇವಸ್ಥಾನದ ಮೂಲ ಮೂರ್ತಿಯೇ ಎರಡು ಹೋಳಾಗಿದ್ದ ವೀಡಿಯೋ/ಫೋಟೊಗಳನ್ನು ನೋಡಿದಾಗ ನಾನು 2020ರಲ್ಲೇ ಇದ್ದೀನಾ ಅಥವಾ ಮೊಘಲರ ಕಾಲದಲ್ಲೋ ಎಂದೆನಿಸಿತು. ಮನಸ್ಸಿಗೆ ತೀರಾ ನೋವಾದ ದಿನ ಅಂದ್ರೆ ಅದು 20/11/2020.

ಸರಿ ದೇವಸ್ಥಾನದ ಅಂಥ ಚಂದದ ವಿಗ್ರಹ ಹೇಗೆ ಬಿತ್ತು ಎಂದರೆ ಒಬ್ಬೊಬ್ಬ ಒಂದೊಂದು ಕಥೆ ಹೇಳುತ್ತಿದ್ದಾನೆಯೇ ವಿನಾ, ಯಾರಿಗೂ ಏನಾಯ್ತು ಎಂಬ ಅರಿವೇ ಇಲ್ಲ. ಬೇಕಾಗೂ ಇಲ್ಲವೆನ್ನುವ ರೀತಿ ಜನರಿದ್ದಾರೆ. ಏನೋ ಆಯ್ತಂತೆ, ಬಿತ್ತಂತೆ, ಹೋಯ್ತಂತೆ ಎನ್ನುವುದಕ್ಕೆ ಅದು ಯಾವುದೋ ಶ್ರೀಮಂತ ವ್ಯಕ್ತಿ ತನ್ನ ಪಾಪ ತೊಳೆದುಕೊಳ್ಳುವುದಕ್ಕೆ ಕಟ್ಟಿರುವ ದೇವಸ್ಥಾನವಲ್ಲ. 900 ವರ್ಷಕ್ಕಿಂತಲೂ ಹಳೆಯದಾದ ದೇವಸ್ಥಾನ. ಹೊಯ್ಸಳರು ಕಟ್ಟಿಸಿರುವ ಮೊಟ್ಟ ಮೊದಲ ದೇವಾಲಯವೂ ಹೌದು. ಏಕೈಕ ಚತುಷ್ಕೂಟ ದೇವಸ್ಥಾನವೂ ಹೌದು. ಅಷ್ಟೇ ಅಲ್ಲ, ಕೊಲ್ಹಾಪುರ ಮಹಾಲಕ್ಷ್ಮೇಯನ್ನೇ ಹೋಲುವ ವಿಗ್ರಹ ಅದಾಗಿತ್ತು ಎಂದೂ ಹೇಳುತ್ತಾರೆ. ಅದಕ್ಕೆ ಇದನ್ನ ಅಭಿನವ ಕೊಲ್ಹಾಪುರಿ ಎಂದೂ ಕರೆಯಲಾಗುತ್ತಿತ್ತು. ಇಲ್ಲಿನ ಸಿಕ್ಕಿರುವ ಶಾಸನಗಳ ಪ್ರಕಾರ ವಿಶ್ವಕರ್ಮ ಸುಭಾಷಿತನೆಂದು ಹೆಸರು ಮಾಡಿದ್ದ ಮಲ್ಲೋಜ ಮಾಣಿಯೋಜ ಎಂಬವನು ಕಟ್ಟಿದ್ದ ದೇವಸ್ಥಾನವೆಂದು ತಿಳಿದುಬರುತ್ತದೆ.

ಸಾಲದ್ದಕ್ಕೆ 1958ರ ಆ ಕಾಲದಲ್ಲೇ ಇದನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ಈ ದೇವಾಲಯ ಅದೆಷ್ಟು ಕ್ರಮಬದ್ಧವಾಗಿದೆ ಎಂದರೆ, ಇದು ಒಟ್ಟು ಒಂಬತ್ತು ಶಿಖರಗಳಿರುವ ಚತುಷ್ಕೂಟ ದೇವಾಲಯವಾಗಿದ್ದು, ಮಹಾಲಕ್ಷ್ಮೇ ಗುಡಿಯ ಶಿಖರ ಚಾಲುಕ್ಯ ಶೈಲಿಯಲ್ಲಿ ಮತ್ತು ಉಳಿದ ಗೋಪುರಗಳು ಕದಂಬ ನಾಗರ ಶೈಲಿಯಲ್ಲಿದೆ. ಇದು ಸೇರಿ ಇನ್ನೂ ಇತರ ವೈಶಿಷ್ಟ್ಯಗಳಿಂದ ಸಮೃದ್ಧವಾಗಿರುವ ಈ ದೇವಸ್ಥಾನ ಕರ್ನಾಟಕದಲ್ಲೇ ಎಲ್ಲೂ ಇಲ್ಲ.

ಇನ್ನೂ ವಿಶೇಷ ನೋಡಿ, ಕಾಳಿಯನ್ನ ನೀವು ಸೌಮ್ಯ ಸ್ವರೂಪದಲ್ಲಿ ನೋಡಬಹುದು ಅಥವಾ ಉಗ್ರರೂಪದಲ್ಲಿ ನೋಡಬಹುದು. ಆದರೆ ಇಲ್ಲಿ ಕಾಳಿಯನ್ನು ಶಾಂತಗೊಳಿಸುವುದಕ್ಕೆ ವಿಷ್ಣುವನ್ನು ಎದುರಿಗೆ ಪ್ರತಿಷ್ಠಾಪನೆ ಮಾಡಿದ್ದಾರೆ. ಹಾಗೇ ಶಿವನನ್ನ ಶಾಂತಗೊಳಿಸುವುದಕ್ಕೆ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ದೇಶದಲ್ಲೇ ಇಂಥದ್ದೊಂದು ವಾಸ್ತು ವೈಶಿಷ್ಟ್ಯಗಳಿಂದ ಕೂಡಿರುವ ದೇವಾಲಯ ಇಲ್ಲ ಎಂದರೂ ಅತಿಶಯೋಕ್ತಿಯಲ್ಲ. ಈ ದೇವಾಲಯದಲ್ಲಿ ಎಲ್ಲೂ ಕಾಣಸಿಗದ ನಗ್ನವಾಗಿರುವ 7 ಅಡಿ ಎತ್ತರದ ಬೇತಾಳಗಳು(ಭೂತನಾಥ) ದ್ವಾರಪಾಲಕರಾಗಿದ್ದಾರೆ. ಇದನ್ನೇ ಇಲ್ಲಿ ಕೆತ್ತಲಾಗಿದೆ. ಇದೂ ಸಹ ವಿಶೇಷವೇ.

ಇನ್ನು ಅಲ್ಲಿನ ಕೆತ್ತನೆಯ ಬಗ್ಗೆ ಇನ್ನೊಂದು ವಿಶೇಷವೂ ತಿಳಿಯಿತು. ಅದೇನೆಂದರೆ, ಇವತ್ತು ನಮ್ಮ ಬಳಿ ಒಳ್ಳೊಳ್ಳೆ ಟೆಕ್ನಾಲಜಿಗಳು ಏನೋ ಇವೆ. ಒಂದು ಶಿಲ್ಪವನ್ನು ಹೇಗೆ ಬೇಕೋ ಹಾಗೆ ಕೆತ್ತಬಹುದು. ಆದರೆ, ಆಗಿನ ಕಾಲದಲ್ಲಿ ಹಾಗೆಲ್ಲ ಇರಲಿಲ್ಲ. ಇರೋದ್ರಲ್ಲೇ ಬೆಸ್ಟ್‌ ಎಂಬ ಶಿಲ್ಪವನ್ನು ಕೆತ್ತಬೇಕಾಗಿತ್ತು. ಅವತ್ತಿನ ಬೆಸ್ಟ್‌ ಏನಿದೆ ಅದು ಇವತ್ತಿನ ಕಲಾವಿದರಿಗೂ ಹೇಗೆ ಮಾಡಿದರು ಎಂದೇ ಅರ್ಥವಾಗದ ಹಾಗಿದೆ. ಕೆತ್ತನೆಯಲ್ಲಿ ಬಹಳ ಹೆಸರು ಮಾಡಿದ ವಿಶ್ವಕರ್ಮರು, ಏನೋ ಒಂದು ಗಿಡಮೂಲಿಕೆಗಳನ್ನು ಎಲ್ಲಿಂದಲೋ ಈ ದೇವಸ್ಥಾನಕ್ಕೆ ತಂದು ಇಲ್ಲೇ ಅರೆದು, ರಸ ಹಿಂಡಿ ಕಲ್ಲುಗಳ ಮೇಲೆ ಹಾಕುತ್ತಿದ್ದರಂತೆ. ಆಗ ಕೆಲ ದಿನಗಳವರೆಗೆ ಕಲ್ಲುಗಳೇ ಸ್ವಲ್ಪ ಮೆತ್ತಗಾಗುತ್ತಿದ್ದವಂತೆ. ಆಗ, ಜಕಣಾಚಾರಿಗಳು ಹೇಗೆ ಬೇಕೋ ಹಾಗೆ ಕೆತ್ತಿ ಇಟ್ಟ ಮೇಲೆ ಕಲ್ಲುಗಳು ಗಟ್ಟಿಯಾಗುತ್ತಿದ್ದವಂತೆ. ಅಂದು ಗಟ್ಟಿಯಾದ ಕಲ್ಲು ಈಗಲೂ ಒಂದು ಚೂರು ಆಕಾರ ಕಳೆದುಕೊಳ್ಳದೇ ನಿಂತಿದೆ. ಇದೇ ದೇವಸ್ಥಾನದಲ್ಲಿ ಗಿಡಮೂಲಿಕೆ ಅರೆಯುವ ಕಲ್ಲುಗಳನ್ನೂ ಕಾಣಬಹುದು.

ಇವೆಲ್ಲ ಸಂಗತಿಗಳನ್ನು ನೀವು ಆ ದೇವಸ್ಥಾನಕ್ಕೆ ಹೋದರೆ ಗೈಡ್‌ಗಳು ಮತ್ತು ಊರಿನ ಜನರೂ ಹೇಳುತ್ತಾರೆ. ಇಲ್ಲಿ ಹೇಳಿರುವುದಕ್ಕಿಂತ ಹೆಚ್ಚು ಮಾಹಿತಿಯನ್ನೇ ನೀಡಬಹುದು. ವಿಷಯ ಅದಲ್ಲ. ವಿಷಯ ಏನೆಂದರೆ, ಇಂಥ ವಿಶೇಷ ಸ್ಥಾನಮಾನ ಇರುವ ದೇವಾಲಯದ ವಿಗ್ರಹವೊಂದು ಒಡೆದು ಹೋಗುತ್ತದೆಯೆಂದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಏನು ಗೆಣಸು ಕೀಳುತ್ತಿದೆಯೇ?

ಈ ದೇವಸ್ಥಾನದಲ್ಲಿ ಇಂಥ ಯಡವಟ್ಟುಗಳು ನಡೆದಿದ್ದು ಇದೇ ಮೊದಲಲ್ಲ. ಬದಲಿಗೆ 40 ವರ್ಷಗಳ ಹಿಂದೆಯೇ ದೇವಸ್ಥಾನದಲ್ಲಿರುವ ವಿಷ್ಣುವಿನ ಮೂರ್ತಿಯೂ ಕಳ್ಳತನವಾಗಿದೆ. ಈಗ ಅದೇ ಜಾಗದಲ್ಲಿ ಭೈರವನ ವಿಗ್ರಹವಿದೆ. ಅಂದರೆ, ಈ ದೇವಸ್ಥಾನದ ಮೇಲೆ ಜನ ಭಕ್ತಿಯಿಂದ ಹೇಗೆ ಬರುತ್ತಾರೋ, ಹಾಗೇ ಇದಕ್ಕೊಂದು ಗತಿ ಕಾಣಿಸಬೇಕು, ಏನನ್ನಾದರೂ ಕದ್ದು ತಾನು ಲಾಭ ಮಾಡಿಕೊಳ್ಳಬೇಕು ಎಂದು ಬರುವವರೂ ಇದ್ದಾರೆ. ಅಂದರೆ, ಇದು ಎಂಥ ಮುಖ್ಯವಾದ ದೇವಸ್ಥಾನ ಎಂಬುದನ್ನು ಲೆಕ್ಕ ಹಾಕಿಕೊಳ್ಳಿ.
ಹೀಗಿರುವಾಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ(ಎಎಸ್‌ಐ) ಜವಾಬ್ದಾರಿ ಎಂಥದ್ದಿರಬೇಕು ಹೇಳಿ? ಆದರೆ ಇವರು ಮಾಡಿರುವುದೇನು? ಅಲ್ಲಿನ ಸ್ಥಳೀಯರೇ ಹೇಳುತ್ತಾರೆ ಆ ದೇವಸ್ಥಾನದೊಳಗೆ ನಾಯಿ, ನರಿ, ಹಂದಿಗಳೆಲ್ಲ ಹೋಗುತ್ತಿರುತ್ತವೆ ಎಂದು. 900ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ದೇವಸ್ಥಾನಕ್ಕೆ ಎಎಸ್‌ಐನ ಭದ್ರತೆ ಇಷ್ಟು ದರಿದ್ರವಾಗಿದೆ. ಯಾವನು ಎಲ್ಲಿ ಬೇಕಾದರೂ ಹೋಗಬಹುದು ಅಂತಾಗಿದ್ದಕ್ಕೇ ಅಲ್ಲವೇ ನಾವು ವಿಷ್ಣುವಿನ ಮೂರ್ತಿಯನ್ನು ಕಳೆದುಕೊಂಡಿದ್ದು? ಇಷ್ಟಾದರೂ ಬುದ್ಧಿ ಬಂದಿಲ್ಲವೇ ಎಎಸ್‌ಐಗೆ? ಆಗ ಮುಸ್ಲಿಂ ರಾಜರು ನಮ್ಮ ಈ ದೇವಸ್ಥಾನವನ್ನು ಒಮ್ಮೆ ಒಡೆದು ಹಾಕಿದ್ದರು. ಈಗ ನಿಮ್ಮಂಥ ಅಯೋಗ್ಯರೇ ವಿಗ್ರಹ ಒಡೆಯುವುದಕ್ಕೆ ಅನುವು ಮಾಡಿಕೊಟ್ಟಿದ್ದೀರ ಅಲ್ಲವೇ?

ನಾನು ಎಎಸ್‌ಐ ಮೇಲೆ ಆಕ್ರೋಶಗೊಳ್ಳುವುದಕ್ಕೂ ಬಲವಾದ ಕಾರಣವಿದೆ.
ಮೊದಲಿಗೆ ಹೀಗೊಂದು ವಿಗ್ರಹ ಹೋಳಾಗಿದೆ ಎಂಬ ಸುದ್ದಿ ಬಂದಾಗ ಇದು ಕೆಲ ‘ಶಾಂತಿದೂತರ’ ಕೃತ್ಯವಿರಬಹುದು ಎಂದುಕೊಂಡೆ. ವಿಚಾರಿಸಿದಾಗ ಇದೂ ಅಲ್ಲ ಎಂಬುದು ತಿಳಿಯಿತು. ಹಾಗಾದರೆ ಒಡೆದದ್ದು ಹೇಗೆ? ನಿಧಿ ಹುಡುಕುವ ಪ್ರಯತ್ನವೇ? ಅದನ್ನೂ ಕೇಳಿ ಆಯ್ತು. ಅದರ ಸುಳಿವೂ ಇಲ್ಲ ಎಂದಾಯಿತು. ಮತ್ತೊಮ್ಮೆ ಕಳ್ಳರ ದಾಳಿಯೇ? ವಿಗ್ರಹ ಎತ್ತುವಾಗ ಕೈ ಜಾರಿ ಬಿದ್ದ ನಂತರ ಪರಾರಿಯಾಗಿದ್ದಾರೆಯೇ? ಅದೂ ಇಲ್ಲ. ಈ ಯಾವ ಕಾರಣವೂ ಅಲ್ಲ. ಹಾಗಾದರೆ ಏನು ಕಾರಣ?

ಸತ್ಯ ಕೇವಲ ಅರ್ಚಕರಿಗೆ ಮಾತ್ರ ಗೊತ್ತಿತ್ತು. ಯಾವುದೇ ವಿಗ್ರಹ ಕೂರಿಸುವಾಗ ಅಷ್ಟಬಂಧ ಹಾಕಿದ ನಂತರವೇ ಅದನ್ನು ಪ್ರತಿಷ್ಠಾಪಿಸಿರುತ್ತಾರೆ. ಈ ಕ್ಷೇತ್ರದಲ್ಲಿ ನುರಿತವರು ಹೇಳುವ ಪ್ರಕಾರ ಅಷ್ಟಬಂಧ ಎಂಬುದು ಶಾಶ್ವತವಂತೂ ಅಲ್ಲ. ನಿಯಮದ ಪ್ರಕಾರ 12 ವರ್ಷಕ್ಕೊಮ್ಮೆ ಪುನಃ ಪ್ರತಿಷ್ಠಾಪಿಸಬೇಕು. ಆದರೆ ಈ ಎಎಸ್‌ಐನವರ ಕೈಗೆ ಬಂದ ಮೇಲೆ ಎಷ್ಟೋ ದೇವಸ್ಥಾನಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಒಂದು ಕಲ್ಲು ಎತ್ತಿ ಪಕ್ಕಕ್ಕಿಡಬೇಕು ಎಂದರೂ ಈ ದೊಣೆನಾಯಕರ ಅಪ್ಪಣೆ ಬೇಕೇ ಬೇಕು. ಈ ಅಯೋಗ್ಯರಿಗೆ ಎಷ್ಟು ಹೇಳಿದರೂ ಕ್ಯಾರೇ ಎನ್ನುವುದಿಲ್ಲ. ಎಲ್ಲ ಬಿಟ್ಟು ನಾವೇ ಸರಿ ಮಾಡಿಕೊಳ್ಳುತ್ತೇವೆ ಎಂದರೂ ಕೊನೆಗೆ ನಾವೇ ಕೋರ್ಟು ಕೇಸು ಎಂದು ಓಡಾಡಬೇಕು.

ಭದ್ರಕಾಳಿ ಅಮ್ಮನವರ ವಿಗ್ರಹ ಒಡೆದಿದ್ದೂ ಹೀಗೆ. ಕಳೆದ ಕೆಲ ವರ್ಷಗಳಿಂದ ಈ ವಿಗ್ರಹದ ಅಷ್ಟಬಂಧ ಸಡಿಲವಾಗಿದೆ, ವಿಗ್ರಹ ಅಲುಗಾಡುತ್ತಿದೆ ಎಂದು ಅರ್ಚಕರು ಹೇಳಿ ಹೇಳಿ ಉಸಿರೇ ಇಲ್ಲದಂತಾಗಿದ್ದಾರೆ. ಕಳೆದ ಒಂದೆರಡು ತಿಂಗಳ ಹಿಂದೆಯೂ ಸ್ವಾಮಿ ದಯವಿಟ್ಟು ನೋಡಿ ವಿಗ್ರಹ ಅಲುಗಾಡುತ್ತಿದೆ ಎಂದು ದೂರು ನೀಡಿದ್ದಾರೆ.

ಭದ್ರಕಾಳಿ ದೇವರೇನು ನಮ್ಮಪ್ಪಂದಾ ಎಂದು ಕುಳಿತ ದರಿದ್ರ ಅಧಿಕಾರಿಗಳ ಕರ್ಮಕ್ಕೆ ಇಡೀ ಭಕ್ತಸಮುದಾಯವೇ ಕಣ್ಣೀರಿಡುವಂತಾಗಿದೆ. ವಿಗ್ರಹ ಗೋಡೆಯ ಬಲದ ಮೇಲೆ ಇರುವುದಲ್ಲ. ವಿಗ್ರಹದ ಕೆಳಗೆ ಇರುವ ಸಣ್ಣ ಗೂಟದ ಆಕಾರದ ಮೇಲೇ ನಿಂತಿರುವಂಥದ್ದು. ಮುಂಭಾರ ಜಾಸ್ತಿಯಾಗಿ ವಿಗ್ರಹ ಬಿದ್ದಿದೆ. ಇದು ಅದಾಗದೇ ಬಿತ್ತಾ? ಅಥವಾ ನಾಯಿ, ನರಿ, ಹಂದಿಗಳು ಬಂದು ಹೋಗಿದ್ದಕ್ಕೆ ಬಿತ್ತಾ ಎಂಬುದು ಸ್ಪಷ್ಟವಿಲ್ಲ. ಒಟ್ಟಿನಲ್ಲಿ ಬೆಳಗ್ಗೆ ಎಂದಿನಂತೆ ಮಡಿಯಲ್ಲಿ ಬಂದ ಅರ್ಚಕರಿಗೆ ಇಷ್ಟು ವರ್ಷದಿಂದ ಪೂಜೆ ಮಾಡಿಕೊಂಡು ಬಂದಿದ್ದಂಥ ವಿಗ್ರಹ ಒಡೆದು ಹೋಳಾಗಿ ಬಿದ್ದಿರುವುದು ನೋಡಿ ದಿಗ್ಭ್ರಮೆಯಾಗಿದೆ.

ಮತ್ತೆ ಮತ್ತೆ ಕೇಳಬೇಕಿದೆ. ಆಗಲ್ಲ ಎಂದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ದೇವಸ್ಥಾನ ಬಿಟ್ಟು ನಿವಾಳಿಸಲಿ. ಬೇಕು ಬೇಕೆಂದಾಗ ಬಂದು ಅಲ್ಲಿ ಇಲ್ಲಿ ನೆಲ ಬಗೆದು ಮಡಕೆಯ ಚೂರು, ಮರದ ತೊಗಟೆ ಇತ್ಯಾದಿಗಳನ್ನು ಎತ್ತಿಕೊಂಡು ವರ್ಷಗಟ್ಟಲೆ ಹಾಳು ಅಧ್ಯಯನ ಮಾಡಿಕೊಂಡು ಬಿದ್ದಿರಲಿ. ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನು ಹಿಂದೂಗಳಿಗೆ ಬಿಡಿ. ನಾವು ಹುಂಡಿಯ ಕಾಸಿನಿಂದ ದೇವಸ್ಥಾನಕ್ಕೆ ಮತ್ತೆ ಕಳೆ ತರುತ್ತೇವೆ. ಇಲ್ಲವಾದರೆ, ದೇವಸ್ಥಾನ ಎಂಬ ಭಕ್ತಿಯಿಲ್ಲವಾದರೂ ರಾಷ್ಟ್ರೀಯ ಸ್ಮಾರಕ ಎಂಬುದಕ್ಕಾದರೂ ಅಲ್ಲಿನ ಸಮಸ್ಯೆಗಳನ್ನು ಬೇಗ ಬಗೆಹರಿಸಲಿ.

ಯಾವುದು ಆಗಲ್ಲವೆಂದರೆ ಯಾವ ಕರ್ಮಕ್ಕೆ ಇವರ ಅಧ್ಯಯನಗಳು? ನೆಲ ಬಗೆದು ಮಡಿಕೆ ತೆಗೆಯುವ ಕೆಲಸ? ಇಂಥ ಉದ್ಯೋಗಕ್ಕೆ ನಮ್ಮ ತೆರಿಗೆಯ ಹಣವನ್ನೇಕೆ ಕೊಡಬೇಕು? ಇದು ಕೇವಲ ಒಂದು ದೇವಸ್ಥಾನದ ಕಥೆಯಲ್ಲ. ಕರ್ನಾಟಕದ ಎಷ್ಟೋ ದೇವಸ್ಥಾನಗಳ ಹಣೆಬರವೂ ಹೀಗೇ ಆಗಿದೆ. ಹೆಸರಿಗಷ್ಟೇ ದೇವಸ್ಥಾನ. ಅಲ್ಲಿ ಪೂಜೆ ನಡೆಯಬೇಕಲ್ಲ ಎಂದು ನಡೆಯುತ್ತಿದೆ. ಅಲ್ಲೇ ಹಂಪಿಯ ಬಿಷ್ಟಪ್ಪಯ್ಯನವರ ಗೋಪುರದಲ್ಲೂ ಎಷ್ಟೋ ದೇವತೆಗಳಿಗೆ ಪೂಜೆಯೇ ಇಲ್ಲ. ಶತಶತಮಾನಗಳಿಂದ ಬಂದ ಆಚಾರ ಈ ಎಎಸ್‌ಐನಿಂದ ನಿಂತು ಹೋಗಿದೆ. ಎಲ್ಲದಕ್ಕೂ ಸರ್ಕಾರದಿಂದಲೇ ಪತ್ರ-ಅರ್ಜಿ ಬರೆದೇ ಒಪ್ಪಿಗೆ ಪಡೆಯಬೇಕು. ಇಲ್ಲವಾದರೆ ಕೇಸ್‌. ಇದು ಮನುಷ್ಯರಿಗೆ ಮಾತ್ರ ಅನ್ವಯ. ಆದರೆ ನಾಯಿಗಳು, ಹಂದಿಗಳು ಮಾತ್ರ ದೇವಸ್ಥಾನದ ಒಳಗೆ ಹೋಗಿ ಮೂತ್ರ ಮಾಡಿ ಬಂದರೂ ಇವರಿಗೆ ಸಂಬಂಧವೇ ಇರುವುದಿಲ್ಲ.

ಮುಸ್ಲಿಮರ ದಾಳಿಗೇ ಬಗ್ಗದ ದೇವಾಲಯ, ಟಿಪ್ಪು ಜಯಂತಿಯ ದಿನವೇ ಒಡೆದು ಹೋಯಿತು. ಹಿಂದೂಗಳು ಆಗಲೂ ಧ್ವನಿ ಎತ್ತಲಿಲ್ಲ, ಈಗಲೂ ಎತ್ತುವುದಿಲ್ಲ. ನಾಚಿಕೆಯಾಗಬೇಕು ನಮ್ಮ ಜನ್ಮಕ್ಕೆ.

 

 

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya