ಹೊಸ ಭಾರತ ಮೇಜು ಕುಟ್ಟಿ ಮಾತಾಡ್ತಿದೆ ನೋಡಿ!

 

29 ಅಕ್ಟೋಬರ್‌ 2020ರ ರಾತ್ರಿ. ಪಾಕ್‌ನಿಂದ ಒಂದು ವೀಡಿಯೊ ಬಂತು. ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ಸಂಸದನೊಬ್ಬ ಮಾತಾಡಿದ್ದ ವಿಡಿಯೊ. ಅದರಲ್ಲಿ ಆತ ಹೇಳ್ತಾನೆ, ‘ಅವತ್ತು ನಾವು ಭಾರತದ ಅಭಿನಂದನ್‌ನನ್ನ ಹಿಡಿದಿದ್ವಲ್ಲ, ಅವ್ನನ್ನ ನಾವು ಬಿಡಲೇಬೇಕಿತ್ತು. ಅವತ್ತು ಬಹಳ ಆತಂಕದಲ್ಲಿದ್ದ ಸಚಿವರು ಇಮ್ರಾನ್‌ ಖಾನ್‌ ಸಾಹೇಬ್ರನ್ನ ಭೇಟಿಯಾಗಕ್ಕೆ ನಿಂತಿದ್ದರು. ಆಗ ಅವರ ತೊಡೆ ನಡುಗುತ್ತಿತ್ತು, ಬೆವರು ಇಳಿಯುತ್ತಿತ್ತು. ಬಂದವರೇ ಒಂದೇ ಉಸಿರಿನಲ್ಲಿ, ಸಹಾಬ್‌, ನಾವು ಅಭಿನಂದನ್‌ನ ಬಿಡಲೇಬೇಕು. ಇಲ್ಲದಿದ್ದರೆ ರಾತ್ರಿ ಒಂಭತ್ತಕ್ಕೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತೆ ಎಂದು ಭಯಭೀತಗೊಂಡಿದ್ದರು.’

ಹೀಗೆಂದು ಪಾರ್ಲಿಮೆಂಟ್‌ನಲ್ಲೇ ಹೇಳಿದ ಅಧಿಕೃತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ನನಗೆ ಎಂದು ನೆನಪಾದದ್ದು ಪ್ರಧಾನಿ ಮೋದಿಯವರ ಒಂದು ಹೇಳಿಕೆ – ‘ಒಬ್ಬ ಅಭಿನಂದನ್‌ರನ್ನು ಸೇಫ್‌ ಆಗಿ ವಾಪಸ್‌ ಕಳಿಸದೇ ಇದ್ದಿದ್ದರೆ ಪರಿಣಾಮ ಕೆಟ್ಟದಾಗಿರುತ್ತೆ ಎಂದು ಎಚ್ಚರಿಕೆ ನೀಡಿದ್ದೆ’ ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ಪ್ರಕಟಿಸಿದಾಗ ರಾಜಕಾರಣಿಗಳು, ಅವರ ಚೇಲಾಗಳು, ಮೋದಿ ವಿರೋಧಿಗಳು ಎಲ್ಲರೂ ಸೇರಿ ಇವೆಲ್ಲ ಸುಳ್ಳು, ಅಭಿನಂದನ್‌ ಹೆಸರಿನಲ್ಲಿ ರಾಜಕೀಯ ಮಾಡೋದನ್ನ ಬಿಡಿ ಎಂದೆಲ್ಲ ಹೇಳಿದ್ದರು. ಆದರೆ, ಮೋದಿ ಹೇಳಿಕೆಯ ಅಸಲಿಯತ್ತು ಗೊತ್ತಾಗಿದ್ದು ಮಾತ್ರ ಶತ್ರು ರಾಷ್ಟ್ರವೇ ಅದನ್ನ ಒಪ್ಪಿ ಪಾರ್ಲಿಮೆಂಟ್‌ನಲ್ಲೇ ಬಾಯ್ಬಿಟ್ಟಾಗ.

ಇವತ್ತಿನ ಲೇಖನದ ವಿಷಯ ಅದಲ್ಲ. ಅಸಲಿ ವಿಷಯ ಏನೆಂದರೆ, ಪಾಕ್‌ ಹಂದಿಗಳು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ವಿಶ್ವಸಂಸ್ಥೆ ಬಾಗಿಲಿಗೆ, ಅಮೆರಿಕದ ಪಡಸಾಲೆಗೆ ಹೋಗಿ, ಕುನ್ನಿಯ ಹಾಗೆ ಗಂಟೆಗಟ್ಟಲೆ ಕಾದು, ಅವ್ರು ಬಾ ಅಂದಾಗ ಒಳಗ್‌ ಬಂದು, ‘ಸಾರ್‌, ನಮ್‌ ದೇಶದ್‌ ಮೇಲೆ ಪಾಕ್‌ ದಾಳಿ ಮಾಡಿದೆ. ಏನಾದ್ರೂ ಮಾಡಿ ನ್ಯಾಯ ಕೊಡ್ಸಿ’ ಎಂದು ಮನಮೋಹನ ಸಿಂಗ್‌ ಕಾಲದ ಭಾರತಕ್ಕೂ, ಪುಲ್ವಾಮಾ ದಾಳಿಯ ಪ್ರತೀಕಾರಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಗಾಗೂ ಕಾಯದೇ ವೈಮಾನಿಕ ದಾಳಿ ಮಾಡಿದ ಮೇಲೆ, ಅದೇ ಅಮೆರಿಕ ಆದಿಯಾಗಿ ವಿಶ್ವದ ವಿವಿಧ ದೇಶಗಳು, ‘ಭಾರತ ಸರಿಯಾಗೇ ಮಾಡಿದೆ. ಅದು ಅದರ ಆಂತರಿಕ ವಿಚಾರ. ನಾವು ಅದಕ್ಕೆ ತಲೆ ಹಾಕಲ್ಲ’ ಎಂದು ಹೇಳುವಂತೆ ಆಗಿರುವ ಪ್ರಸ್ತುತ ಭಾರತಕ್ಕೂ ಬಹಳ… ಅಂದರೆ ಕಿಲೋಮೀಟರ್‌ಗಟ್ಟಲೆ ದೂರ ಬಂದಿದ್ದೇವೆ.

ಕೆಲಸ ಮಾಡಿದ್ದು ಯಾವುದು? ಭಾರತದ ರಾಜತಾಂತ್ರಿಕ ನೀತಿ.

ಒಂದು ಮಾತಿದೆ, ನಮ್ಮ ಬಳಿ ಶಸ್ತ್ರಾಸ್ತ್ರ ಇದೆ ಎಂದು ಶತ್ರು ನಾಶಕ್ಕೇ ಹೋಗಬಾರದು. ಬದಲಿಗೆ, ಅವರನ್ನು ನಾಶ ಮಾಡುವ ಅಸ್ತ್ರ ನಮ್ಮಲ್ಲಿದೆ ಎಂದು ಅವರಿಗೆ ತಿಳಿದಿರಬೇಕು. ಶತ್ರು ಪ್ರತಿ ಸಲ ಭಯದಲ್ಲೇ ಜೀವನ ಮಾಡ್ತಾ ಇರಬೇಕು. ನಮ್ಮ ಬಗ್ಗೆ ಯೋಚನೆ ಮಾಡುವುದಕ್ಕೂ ಹೆದರಬೇಕು.

ಇದು ಭಾರತ ಅಳವಡಿಸಿಕೊಂಡು ಬಂದ ನೀತಿ. ನಾವು ಕದ್ದು ಮುಚ್ಚಿ ನ್ಯೂಕ್ಲಿಯರ್‌ ಟೆಸ್ಟ್‌ ಮಾಡಿದಾಗ ನಮ್ಮ ದೇಶದ ಮೇಲೆ ಸ್ಯಾಂಕ್ಷನ್‌ಗಳನ್ನ ಹಾಕಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯದರ್ಶಿಯೇ ಇವತ್ತು ಭಾರತದ ಬಾಗಿಲಿಗೇ ಬಂದು ಮೂಲ ವಿನಿಮಯ ಹಾಗೂ ಸಹಕಾರ ಒಪ್ಪಂದ(ಬಿಇಸಿಎ)ಕ್ಕೆ ಒಪ್ಪಂದದ ಜೊತೆಗೆ ಇನ್ನಷ್ಟು ಒಪ್ಪಂದಕ್ಕೆ ಸಹಿ ಮಾಡಿಕೊಂಡು ಹೋಗುತ್ತಾರೆ ಎಂದರೆ, ಭಾರತವು ವಿಶ್ವ ರಾಷ್ಟ್ರಗಳ ಕಣ್ಣಲ್ಲಿ ಎಂಥ ದೊಡ್ಡ ನಾಯಕನಾಗಿ ಕಾಣುತ್ತಿರಬಹುದು ಎಂದು ಅಂದಾಜು ಮಾಡಿಕೊಳ್ಳಿ.

ಭಾರತವು ಅಮೆರಿಕದ ಹಾಗಲ್ಲ. ಶತ್ರು ರಾಷ್ಟ್ರ ಅಥವಾ ಯಾವುದೇ ರಾಷ್ಟ್ರ ಮಣಿಸುವುದಕ್ಕೆ ಬೇರೆ ರಾಷ್ಟ್ರಗಳ ಜತೆ ಗ್ಯಾಂಗ್‌ ಅಪ್‌ ಆಗುವುದಿಲ್ಲ. ತನ್ನ ಮತ್ತು ಶತ್ರು ರಾಷ್ಟ್ರದ ವಿಚಾರ ನಾವೇ ತೀರ್ಮಾನ ಮಾಡಿಕೊಳ್ಳುತ್ತೇವೆ. ಇನ್ನೊಬ್ಬರ ಅಗತ್ಯ ಇಲ್ಲ ಎಂದು ಹೇಳುತ್ತಲೇ ಬಂದಿದೆ. ಇದು ಭಾರತದ ನೀತಿ. ಅದೇ ಕಾರಣಕ್ಕೆ ಇವತ್ತಿಗೂ ಅಮೆರಿಕ ‘ನಮಗೆ ಭಾರತ ಹೂಂ ಎಂದರೆ ಮಾತ್ರ ನಾವು ಕಾಶ್ಮೀರ ವಿವಾದ ಬಗೆಹರಿಸುವುದಕ್ಕೆ ಬರುತ್ತೇವೆ’ ಎಂದು ಮೂಲೇಲೇ ಕುಂತು ಹೇಳುತ್ತಿರುವುದು.

ಆದರೂ, ಭಾರತಕ್ಕೆ ಬಂದಾಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೋ ಚೀನಾದ ಬಗ್ಗೆ ವಾಚಾಮಗೋಚರ ಬಯ್ದರೂ ಭಾರತ ಮಾತ್ರ ಪ್ರತಿಕ್ರಿಯಿಸುವುದಕ್ಕೂ ಹೋಗಿಲ್ಲ. ಆದರೆ, ಇಷ್ಟಾದರೂ ಎಲ್ಲ ದೇಶಗಳಿಗೂ ಭಾರತವೇ ಈಗ ಫೆವರಿಟ್‌. ಇದೇ ಕಾರಣಕ್ಕೆ ಸೌದಿ ಅರೇಬಿಯಾದ ದೇಶಗಳೂ ಮಹಾರಾಷ್ಟ್ರದ ರತ್ನಗಿರಿಯಲ್ಲಿ ತೈಲದ ಮೇಲೆ ಬಹಳ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ.

ದಿವಂಗತ ಸುಷ್ಮಾ ಸ್ವರಾಜ್‌ ಭಾರತದಿಂದ ಇಸ್ಲಾಮಿಕ್‌ ಸಹಕಾರ ಸಂಘದ ಸಭೆಗೆ ಬಂದರೆ ಪಾಕ್‌ ಬರುವುದಿಲ್ಲ ಎಂದರೂ, ಇಸ್ಲಾಮಿಕ್‌ ರಾಷ್ಟ್ರಗಳು ‘ನೀವು ಬರದಿದ್ದರೆ ಕತ್ತೆ ಬಾಲ’ ಎಂದು ಸಭೆ ಮುಂದುವರಿಸಿದ ನಿದರ್ಶನಗಳು ವಿಶ್ವ ಮಟ್ಟದಲ್ಲಿ ಈಕ್ವೇಶನ್‌ಗಳು ಬದಲಾಗುತ್ತಿವೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

ಇಡೀ ವಿಶ್ವವನ್ನೇ ಆವರಿಸಿದ್ದ ಚೀನಾ ಕೊಟ್ಟ ಕೋವಿಡ್‌ನ ಒಂದು ಚಮಕ್‌ನಿಂದಾಗಿ ಬಹುತೇಕ ಎಲ್ಲ ರಾಷ್ಟ್ರಗಳೂ ಚೀನಾವನ್ನು ವಿರೋಧಿಸುವುದಕ್ಕೆ ಭಾರತವನ್ನು ಬೆಂಬಲಿಸುತ್ತಿದೆ ಎಂದು ವಾದಿಸಿದರೂ, ಭಾರತ ಬೆಳೆದು ಬಂದ ಹಾದಿ ಅಷ್ಟು ಸುಲಭದ್ದಂತೂ ಆಗಿರಲಿಲ್ಲ. ಹಾವನ್ನೇ ತೋರಿಸಿ ಇದು ನಮ್ಮ ದೇಶದ ಸಂಸ್ಕೃತಿ ಎಂಬ ನೆಹರೂ ಕಾಲದಿಂದ ಸಿಂಹ ಧಾಮಕ್ಕೆ ಕರೆದುಕೊಂಡು ಹೋಗುವ ಮೋದಿಯವರೆಗೂ ಬಹಳವೇ ಬೆಳೆದಿದೆ. ಅದನ್ನೊಮ್ಮೆ ತಿಳಿಯಲೇ ಬೇಕು.

ಮೊದಲೆಲ್ಲ ಶೀತಲ ಸಮರದ ಕಾಲದಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ತೀರ ಅಂದರೆ ತೀರ ಹಳಸಿತ್ತು. 1971 ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಂತೂ ಇನ್ನೇನಾಗುತ್ತೋ ಎಂಬ ಸ್ಥಿತಿಯಲ್ಲಿತ್ತು ಭಾರತದ ಸ್ಥಿತಿ. ಆ ಶೀತಲ ಸಮರದಲ್ಲಿ ಅಮೆರಿಕಕ್ಕೂ ರಷ್ಯಾಗೂ ಬೆಂಬಲ ಕೊಡದೇ ಅಂತರ ಕಾಯ್ದುಕೊಳ್ಳುವ ಭಾರತದ ನೀತಿಯಿಂದ ಅಮೆರಿಕ ಏನು ಮಾಡಿದ್ರೂ ಅನುಭವಿಸಬೇಕಾದ ಸ್ಥಿತಿಯಲ್ಲಿದ್ದೆವು. 1991ರಲ್ಲಿ ಕಿಕ್‌ಲೈಟರ್‌ ಪ್ರಸ್ತಾವನೆಯಿಂದ ಒಂದಷ್ಟು ಭಾರತ-ಅಮೆರಿಕದ ಸಂಬಂಧ ಚೇತರಿಕೆ ಕಂಡಿದ್ದು. ಅಮೆರಿಕ ಸೇನಾ ಕಮಾಂಡರ್‌ ಆಗಿದ್ದ ಲೆಫ್ಟಿನೆಂಟ್‌ ಜನರಲ್‌ ಕ್ಲಾಡ್‌ ಕಿಕ್‌ಲೈಟರ್‌ ನೇತೃತ್ವದಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೂ ತೊಂಭತ್ತರ ದಶಕದಲ್ಲಿ ಭಾರತ-ಅಮೆರಿಕ ಸಂಬಂಧ ಬಹಳ ಏನೂ ಸುಧಾರಣೆ ಆಗಲಿಲ್ಲವೇಕೆಂದರೆ, 1998ರಲ್ಲಿ ಪೋಕ್ರಾನ್‌ನಲ್ಲಿ ಮಾಡಿದ ನ್ಯೂಕ್ಲಿಯರ್‌ ಪರೀಕ್ಷೆಯಿಂದ.

ಅಮೆರಿಕವು ಇತರ ಪಾಶ್ಚಾತ್ಯ ದೇಶಗಳ ಜೊತೆ ಒಪ್ಪಂದ ಮಾಡಿಕೊಂಡು, ಭಾರತದ ಮೇಲೆ ಸ್ಯಾಂಕ್ಷನ್‌ಗಳ ಮೇಲೆ ಸ್ಯಾಂಕ್ಷನ್‌ಗಳನ್ನು ಹಾಕುತ್ತಾ ಇನ್ನಷ್ಟು ಶಿಕ್ಷೆ ಕೊಡುವುದಕ್ಕೆ ನೋಡಿತ್ತು. ಆದರೆ 2001ರ ವಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿಯಿಂದ ಅಮೆರಿಕಕ್ಕೆ ಬುದ್ಧಿ ಬಂತು. ಆಫ್ಘಾನಿಸ್ಥಾನ-ಪಾಕ್‌ನ ಕೈವಾಡ ಇರುವುದು ಸಾಬೀತಾದ ಮೇಲೆ ಭಾರತವು ಪಾಕಿಸ್ಥಾನವನ್ನ ವಿರೋಧಿಸಿದ್ದು ಎಷ್ಟು ಸರಿ ಎಂಬುದು ಮನವರಿಕೆಯಾಯಿತು. ನಂತರ ಭಾರತದ ಜತೆ 2005ರಿಂದ 10 ವರ್ಷಗಳವರೆಗೆ ಮಾಡಿಕೊಂಡ ರಕ್ಷಣಾ ಒಪ್ಪಂದದಿಂದ ಅಷ್ಟೇನೂ ಸುಧಾರಣೆ ಕಾಣದಿದ್ದರೂ ಪೇಪರ್‌ನಲ್ಲಿ ಮಾತ್ರ ಭಾರತ-ಅಮೆರಿಕ ಚೆನ್ನಾಗಿತ್ತಷ್ಟೇ.

ಆದರೆ ಕಾಂಗ್ರೆಸ್‌ಗೆ ಇನ್ನೂ ಮುಸ್ಲಿಮರನ್ನ ಓಲೈಸುವ ಕಂಫರ್ಟ್‌ ಜೋನ್‌ನಿಂದ ಹೊರ ಬರುವ ಯೋಚನೆಯೇ ಇರಲಿಲ್ಲ. ಹಾಗಾಗಿ ಇಸ್ಲಾಮಿಕ್‌ ಉಗ್ರವಾದದ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಕ್ಕೆ ಮೀನ ಮೇಷ ಎಣಿಸಿದ್ದರಿಂದ ಎಲ್ಲವೂ ಅಲ್ಲಲ್ಲೇ ಬಿದ್ದಿತ್ತು.

ಆದರೆ, 2015ರ ನಂತರ ಮೋದಿ ಸರ್ಕಾರ ‘ನಮ್ಮ ದೇಶದ ಮುಗ್ಧ ಮುಸ್ಲಿಮರು ಬೇರೆ, ಇಸ್ಲಾಮಿಕ್‌ ಉಗ್ರಗಾಮಿಗಳು ಬೇರೆ’ ಎಂದು ಉಗ್ರರನ್ನು ಹೊಡೆದುರುಳಿಸಿದ್ದರಿಂದ, ದೇಶ ದೇಶ ಸುತ್ತಿ ಹಲವಾರು ಒಪ್ಪಂದ ಮಾಡಿಕೊಂಡಿದ್ದರಿಂದ ರಾಜತಾಂತ್ರಿಕವಾಗಿ ಅಮೆರಿಕದ ಮೇಲೂ ಒಂದಷ್ಟು ಒತ್ತಡ ಬಿತ್ತು. ಗೆದ್ದ ಎತ್ತಿನ ಬಾಲ ಹಿಡಿಯುವ ಅಮೆರಿಕವು ವಿಶ್ವಮಟ್ಟದಲ್ಲಿ ಹೊಸ ಭಾರತಕ್ಕೆ ಸಿಗುತ್ತಿರುವ ಮನ್ನಣೆ ನೋಡಿ, ಸಹಜವಾಗಿ ಭಾರತದ ಜತಗೆ ಇನ್ನಷ್ಟು ಒಪ್ಪಂದ ಮಾಡಿಕೊಂಡಿತ್ತು. ನಿಮಗ್ಯಾರು ಶತ್ರುಗಳೋ ನಮಗೂ ಸಹ ಎಂಬಂಥ ಸ್ನೇಹ ಆರಂಭವಾಯಿತು. ಜತೆಗೆ ನಂಬಿಕೆಯೂ ಹೆಚ್ಚಾಗುತ್ತಾ ಹೋಯ್ತು.

ಪರಿಣಾಮ ಎಷ್ಟೋ ಡ್ರೋನ್‌ಗಳು, ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಲು ಅಮೆರಿಕ ತನ್ನನ್ನು ತಾನು ತೆರೆದುಕೊಂಡಿದ್ದು. ಅಮೆರಿಕದ ಜತೆಗೆ ರಕ್ಷಣಾ ಸಂಬಂಧ ಸಂಪೂರ್ಣ ಸಹಕಾರ ಬೇಕೆಂದರೆ, ಅವರ 4 ಮೂಲಭೂತ ಒಪ್ಪಂದಕ್ಕೆ ಸಹಿ ಹಾಕಿರಬೇಕು. ನಂಬಿಕೆಯ ಸಮಸ್ಯೆ ಇದ್ದಿದ್ದರಿಂದ, 2002ರಲ್ಲಿ ಜನರಲ್‌ ಸೆಕ್ಯುರಿಟಿ ಆಫ್‌ ಮಿಲಿಟರಿ ಇನ್ಫರ್ಮೇಷನ್‌ ಅಗ್ರೀಮೆಂಟ್‌(ಜಿಎಸ್‌ಒಎಂಐಎ) ಸಹಿ ಮಾಡಿದ ಮೇಲೆ ಅಲ್ಲಿಗೇ ನಿಂತಿತ್ತು. ಆದರೆ ದಶಕಗಳ ದೊಡ್ಡ ಅಂತರದ ನಂತರ 2016ರಲ್ಲಿ ಎರಡನೇ ಒಪ್ಪಂದ ಲಾಜಿಸ್ಟಿಕ್ಸ್‌ ಎಕ್ಸ್‌ಚೇಂಜ್‌ ಮೆಮೊರೆಂಡಂ ಆಫ್‌ ಅಗ್ರೀಮೆಂಟ್‌ (ಲೊಮೊವಾ)ಗೆ ಸಹಿ ಹಾಕಲಾಗಿತ್ತು. 2018ರಲ್ಲಿ ಬಹಳ ಮುಖ್ಯವಾದ ಕಮ್ಯುನಿಕೇಷನ್‌ ಕಂಪಾಟಬಿಲಿಟಿ ಆ್ಯಂಡ್‌ ಸೆಕ್ಯುರಿಟಿ ಅಗ್ರೀಮೆಂಟ್‌(ಕಾಮ್‌ಕಾಸಾ)ಗೆ ಸಹಿ ಹಾಕಿತ್ತು.

ಇದಾದ ಮೇಲೆ ಅಂದರೆ, 2020ರ ಅಕ್ಟೋಬರ್‌ನಲ್ಲಿ ಕೊನೆಯ ಮೂಲ ವಿನಿಮಯ ಹಾಗೂ ಸಹಕಾರ ಒಪ್ಪಂದ (ಬೆಕಾ)ಗೆ ಸಹಿ ಮಾಡಲಾಯಿತು. ಇದರಿಂದ ಏನ್‌ ಆಗುತ್ತೆ ಎಂದು ಕೇಳುವುದಕ್ಕೂ ಮುನ್ನ, ಈ ಒಪ್ಪಂದಕ್ಕೆ ಸಹಿ ಹಾಕಿ ಖುರ್ಚಿಯಿಂದ ಎದ್ದ ಅಮೆರಿಕದ ಮೈಕ್‌ ಪಾಂಪಿಯೋ ಚೀನಾಗೆ ಆವಾಜ್‌ ಹಾಕಿದ್ದನ್ನೊಮ್ಮೆ ನೆನೆಸಿಕೊಳ್ಳಿ.

ಅಷ್ಟೇ ಅಲ್ಲ, ಇದರಿಂದ ಭಾರತವು ಅಮೆರಿಕ ಸೇರಿದಂತೆ ನಾಲ್ಕು ರಾಷ್ಟ್ರಗಳು ಅನೌಪಚಾರಿಕವಾಗಿ ಕ್ವಾಡ್‌ ಮಾಡಿಕೊಂಡಿದೆ. ಇದು ಸಮುದ್ರದಲ್ಲಿ ಸಾಮರ್ಥ್ಯ‌ ಪ್ರದರ್ಶನ ಎಂಬಂತೆ ಕಂಡರೂ, ಚೀನಾಗೆ ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಎಚ್ಚರಿಕೆ ನೀಡುವ ಒಪ್ಪಂದದಂತೆಯೇ ಇದೆ. ಈ ಮಧ್ಯೆ ಹುಬ್ಬೇರಿಸುವ ಸಂಗತಿ ಏನೆಂದರೆ, ಈಗ ಇದೇ ಅಮೆರಿಕದ ನೆರವಿನಿಂದ ಭಾರತಕ್ಕೆ 5 ಐಸ್‌(5 ಕಣ್ಣು) ಯೋಜನೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಇದು ಆಸ್ಪ್ರೇಲಿಯಾ, ಕೆನಡಾ, ನ್ಯೂಜಿಲೆಂಡ್‌, ಯುಕೆ ಮತ್ತು ಅಮೆರಿಕ ನೇತೃತ್ವದಲ್ಲಿ ನಡೆಯುವ ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಗುಂಪು. ಕೇವಲ ಪಾಲ್ಗೊಳ್ಳಲು ಆಹ್ವಾನ ನೀಡಿರುವ ಭಾರತಕ್ಕೆ ಮುಂದೇನಾದರೂ ಇದಕ್ಕೆ ಪಾಲುದಾರರಾಗಲು ಅನುಮತಿ ಸಿಕ್ಕರೆ, ಭಾರತದ ಗುಪ್ತಚರ ಅಂಗ ಎಷ್ಟು ಬಲವಾಗುತ್ತದೆ ಎಂದು ಊಹಿಸಿಕೊಳ್ಳಲೂ ಅಸಾಧ್ಯ.

ಭಿಕ್ಷೆ ಬೇಡುವ ಭಾರತ ಯಾವಾಗ್ಲೋ ಸತ್ತು ಹೋಗಿದೆ. ಇನ್ನೇನಿದ್ದರೂ, ಮೇಜು ಕುಟ್ಟಿ ಮಾತಾಡುವ ಹೊಸ ಭಾರತದ ದರ್ಬಾರ್‌ ಮಾತ್ರ ನೋಡುವುದಕ್ಕೆ ಸಿಗುತ್ತದೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya