ಜ್ಞಾನದ ಸೂಪರ್ ಪವರ್ ಆಗಲಿದೆಯೇ ಭಾರತ!?

ಸುಮಾರು ಹತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿ ಹುಟ್ಟಿ ಜರ್ಮನಿಯಲ್ಲಿ ಓದಿ ಬಂದ ಮಿತ್ರರೊಬ್ಬರು ಹೇಳುತ್ತಿದ್ದರು, ವಿದೇಶಗಳಲ್ಲಿ ಶಿಕ್ಷಣ ತುಂಬ ಚೆನ್ನಾಗಿದೆ. ಕಾಲೇಜು-ಡಿಗ್ರಿ ಎಲ್ಲ ಶಿಕ್ಷಣವನ್ನೂ ಉಚಿತವಾಗಿ ಕೊಡ್ತಾರೆ. ಅಲ್ಲಿ ಸಿಸ್ಟಂ ಕೂಡಾ ಚೆನ್ನಾಗಿದೆ. ಆದರೆ ಪಠ್ಯಕ್ರಮ ಚೆನ್ನಾಗಿಲ್ಲ. ಬಹಳ ಸುಲಭವಾದ ವಿಷಯಗಳು. ಓದು ಬಿಡು, ಯಾರೂ ಕೇರ್ ಮಾಡೋರಿಲ್ಲ. ಆದ್ರೆ ಭಾರತದಲ್ಲಿ ಹಾಗಿಲ್ಲ. ಚಿಕ್ಕ ವಯಸ್ಸಿಗೆ ಏನೇನೋ ಕಲಿಯುವಷ್ಟು ಜ್ಞಾನ. ಬಿಡದೇ ಓದಿಸುವ ಶಿಕ್ಷಕರು, ಕಲಿಯುವ ಹಸಿವಿರುವ ಮಕ್ಕಳು, ಮಧ್ಯರಾತ್ರಿಯಲ್ಲೂ ಮೇಷ್ಟ್ರಿಗೆ ಕರೆ ಮಾಡಿದರೆ ಡೌಟ್ ಕ್ಲಿಯರ್ ಮಾಡುವ ಸಂಸ್ಕಾರ. ಇದರ ಜತೆಗೆ ವಿದೇಶದಲ್ಲಿರುವ ಸಿಸ್ಟಂ ಇದ್ದರೆ ಭಾರತ ವಿಶ್ವಗುರುವಾಗಲಿಕ್ಕೆ ಸಾಕು ಅಂತ.

ಆಗ ಅನಿಸ್ತಿತ್ತು ನಮ್ಮಲ್ಲಿ ಇಂಥದ್ದೊಂದು ಪದ್ಧತಿ ಯಾಕೆ ಅನುಸರಿಸ್ತಾ ಇಲ್ಲ? ಇದ್ದಿದ್ದು ಹಾಗೇ ಇದ್ಕೊಂಡ್ ಹೋಗ್ಲಿ ಎಂಬ ಮನೋಭಾವ ಏಕೆ ಅಂತ. ಆದರೆ, ಇನ್ನು ಆ ರೀತಿ ಯೋಚನೆ ಮಾಡೋದೇ ಬೇಡ. ಭಾರತ ನಿಜಾರ್ಥದಲ್ಲಿ ವಿಶ್ವಗುರುವಾಗಲಿದೆ ಎಂಬ ವಿಶ್ವಾಸವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಡಿಸಿದೆ.

ಕಳೆದ ಎರಡು ದಿನದ ಹಿಂದೆ, ಕೇಂದ್ರ ಸಂಪುಟದಿಂದ ಅನುಮೋದನೆ ಪಡೆದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಇಂಥದ್ದೊಂದು ವಿಶ್ವಗುರು ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಸಾಗಲಿದೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ಆಯಾಮ ಕೊಡಲು ಶುರು ಮಾಡಿದ್ದಾರೆ. ಮೊದಲು ಇದನ್ನು ಸಂವಿಧಾನದ ನೆಲೆಗಟ್ಟಿನಲ್ಲಿ ಹೇಗಿದೆ ಎಂದು ನೋಡೋಣ.

ಮೂಲಭೂತ ಹಕ್ಕುಗಳಾದ ಸಂವಿಧಾನದ ಆರ್ಟಿಕಲ್ 15(5), 21ಎ, 29, 30, 350 ಮತ್ತು 351. ಸಂವಿಧಾನದ ರಾಜ್ಯ ನೀತಿಯ ನಿರ್ದೇಶನ ತತ್ತ್ವಗಳ ಭಾಗದಲ್ಲಿ ಆರ್ಟಿಕಲ್ 44 ಮತ್ತು 45ನಲ್ಲಿ ಶಿಕ್ಷಣದ ಬಗ್ಗೆ ಚೆನ್ನಾಗಿಯೇ ಹೇಳಿದ್ದಾರೆ. ಇನ್ನು ಸ್ಟೇಟ್ ಲಿಸ್ಟ್, ಸಹವರ್ತಿ ಲಿಸ್ಟ್ ಎಲ್ಲದರಲ್ಲೂ ಶಿಕ್ಷಣಕ್ಕೆ ಪ್ರಾಮುಖ್ಯತೆ ಇದ್ದೇ ಇದೆ.

1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಜಾಗಕ್ಕೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಏನಿದೆ, ಇದು 21ನೇ ಶತಮಾನದಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ. ಇದರ ಬಗ್ಗೆ ಈಗಾಗಲೇ ಎಲ್ಲ ಪತ್ರಿಕೆಗಳೂ ವರದಿ ಮಾಡಿರುವುದರಿಂದ, ಏನೇನು ಮಾಡಿದ್ದಾರೆ ಎಂದು ಹೇಳುವುದಕ್ಕೆ ಹೋಗದೇ, ಅದರ ಹಿಂದಿನ ಉದ್ದೇಶ ಏನು ಎಂದು ತಿಳಿದುಕೊಳ್ಳುವುದು ಮುಖ್ಯ.

ಇಲ್ಲಿವರೆಗೂ 10+2 ಅಂದರೆ, ಒಂದರಿಂದ 10ನೇ ತರಗತಿ ಮತ್ತು ಪಿಯುಸಿ ಎಂದಾಗಿದ್ದಿದ್ದರ ಬದಲಿಗೆ 5+3+3+4 ಎಂಬ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ ನಿತಿ ರೂಪಿಸಲಾಗಿದೆ. ಅಂದರೆ ಅಂಗನವಾಡಿ (3ವರ್ಷದಿಂದಲೇ)ಯಿಂದ 2ನೇ ತರಗತಿಯವರಿಗೆ 5 ವರ್ಷ, 3-5ನೇ ತರಗತಿಯವರೆಗೆ 3 ವರ್ಷ, 6-8ನೇ ತರಗತಿಯವರೆಗೆ 3 ವರ್ಷ ಮತ್ತು9-12ನೇ ಗ್ರೇಡ್ವರೆಗೆ 4 ವರ್ಷ. ಹಾಗೆ ಮಾಡಿದರೇನು ಹೀಗೆ ಮಾಡಿದರೇನು ಎಂದು ಕೊರಗಬೇಡಿ. ಬದಲಿಗೆ ಪಠ್ಯಕ್ರಮ ನೋಡಿ. ಒಂದು ಸಲ ಖುಷಿಯಾಗುತ್ತದೆ.

5ನೇ ತರಗತಿಯವರೆಗೆ ಕಡ್ಡಾಯ ಮಾತೃಭಾಷೆಯಲ್ಲೂ ಕಲಿಕೆ ಇರಬೇಕು ಎಂದು ಹೇಳಿರುವುದಿದೆಯಲ್ಲ, ಬಹುಶಃ ನಮ್ಮ ದೇಶದ ಅಸ್ಮಿತೆಯದ ಸ್ಥಳೀಯ/ಮಾತೃಭಾಷೆಯನ್ನು ಮುಂದಿನ ಪೀಳಿಗೆಯೂ ಜೀವಂತವಾಗಿ ಉಳಿಸಿಕೊಳ್ಳುವ ಏಕೈಕ ಮಾರ್ಗವೇ ಶಾಲಾ ಶಿಕ್ಷಣ. ಇವತ್ತಿಗೂ ಬಹಳಷ್ಟು ಮನೆಗಳಲ್ಲಿ ಮಾತೃಭಾಷೆ ಕನ್ನಡವಾಗಿದ್ದರೂ, ಬರೆಯಲು ಬರದ, ಓದಲು ಬರದ ಎಷ್ಟೋ ಮಂದಿಯನ್ನು ಸ್ವತಃ ನಾನೇ ನೋಡಿದ್ದೇನೆ. ಅವೆಲ್ಲ ಬಿಡಿ, ಎಷ್ಟೋ ಕನ್ನಡಪರ ಹೋರಾಟಗಾರರಿಗೇ ಲಘು, ಗುರು, ಸಮಾಸ ಇಂಥವು ಕನ್ನಡದಲ್ಲಿ ಇವೆ ಎನ್ನುವುದು ಗೊತ್ತಿರುವುದು ಬಿಡಿ ಕನ್ನಡಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳೆಂಬುದು ಇವೆಯೆಂಬುದೂ ತಿಳಿದಿಲ್ಲ! ಅವರಂತೂ ಹಾಳಾದ್ರೂ, ಅವರ ಮಕ್ಕಳಾದರೂ ಶುದ್ಧ ಕನ್ನಡ ಕಲಿಯುವ ಏಕೈಕ ಮಾರ್ಗ ಈ ಹೊಸ ನೀತಿ. ಇದರಂತೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಸಂಸ್ಕೃತ ಭಾಷೆಯಿರುತ್ತದೆ.

ಇಷ್ಟೇ ಅಲ್ಲ, ಇದರ ಜತೆಗೆ ಕನ್ನಡದಲ್ಲಿ ಪಾಠ ಮಾಡುವವರೇ ಬೇಕಿರುವುದರಿಂದ, ಸಹಜವಾಗಿ ಕನ್ನಡ ಕಲಿತ ಮೇಷ್ಟ್ರಿಗೆ ಬೇಡಿಕೆ ಹೆಚ್ಚು. ಹಳ್ಳಿಗಳಿಗೇ ಬರಲೇ ಇಚ್ಛಿಸದ ಮಂದಿ, ಈಗ ಅನಿವಾರ್ಯವಾಗಿ ಬಂದೇ ಬರುತ್ತಾರೆ. ಕೆಲವರು ತಮ್ಮ ತವರೂರಿಗೂ ಬರಲಿಚ್ಛಿಸುತ್ತಾರೆ. ಮೋದಿ ಸರ್ಕಾರ ಹಿಂದಿ ಹೇರುತ್ತಿದೆ ಎಂದು ಬೊಬ್ಬಿಡುವವರಿಗೆ ಈ ನೀತಿ ತಕ್ಕ ಉತ್ತರ ಎಂಬಂತಾಗಿದೆ. ಇನ್ನು ಮತ್ತೊಂದು ಪ್ರಮುಖ ಸಂಗತಿಯೆಂದರೆ, 6ನೇ ತರಗತಿಯಿಂದಲೇ ಕಂಪ್ಯೂಟರ್ ಕೋಡಿಂಗ್ ಇರುತ್ತದೆ. ಬಹುಶಃ ಭಾರತದಲ್ಲಿರುವಷ್ಟು ಎಂಜಿನಿಯರ್ಗಳು ಇನ್ನೆಲ್ಲೂ ಇರಲಿಕ್ಕಿಲ್ಲ. ಈ ಕಾರಣಕ್ಕೆ ಮತ್ತು ಎಂಜಿನಿಯರಿಂಗ್ ಓದಿದವರು ಮಾತ್ರ ಉತ್ತಮರು ಎಂಬ ನಮ್ಮೆಲ್ಲರ ಭ್ರಮೆಯನ್ನು ಕಳಚಲೂ ಇದು ಸಹಕಾರಿ. ಒಟ್ಟಾರೆ ಮಕ್ಕಳಿಗೆ ಪದವಿ ಪೂರ್ವದ ಹಂತದವರೆಗೂ ಇಂಥದ್ದು ಓದಿಲ್ಲ ಎಂದಾಗಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಕೊಡಲಾಗಿದೆ. ಇದರ ಜತೆಗೆ ಜೀವನಕ್ಕೆ ಬೇಕಾದ ಕೌಶಲಗಳಾದ ಮಡಕೆ ಮಾಡುವುದು, ಬಡಿಗೆ ಕೆಲಸ ಇತ್ಯಾದಿಗಳೂ ಈಗ ಕೆಲಸಕ್ಕೆ ಬಾರದ ಪಠ್ಯೇತರ ಆಗಿರದೆ ಪ್ರಾಯೋಗಿಕ ಪರೀಕ್ಷೆಗಳ ಸಾಲಿನಲ್ಲಿ ನಿಲ್ಲುವುದರಿಂದ, ನಗರ ಪ್ರದೇಶದ ಮಕ್ಕಳಿಗೆ ಹಳ್ಳಿಯ ಟಚ್ ಇಲ್ಲದಿದ್ದರೂ, ವಿಷಯ ಜ್ಞಾನ ಅಂತೂ ಇದ್ದೇ ಇರುವಂತೆ ಮಾಡಲಾಗುತ್ತದೆ.

ಇನ್ನೂ ಮಜಾ ಎಂದರೆ, ನಾಲ್ಕು ವರ್ಷ ಪದವಿ ಕೋರ್ಸ್ಗಳದ್ದು. ನಾವೆಲ್ಲ ಮೂರು ವರ್ಷ ಪದವಿ ಮಾಡಿ ಬಂದವರು. ನಾಲ್ಕು ಎಂದರೆ ಹೆಚ್ಚಾದಂತಾಗಿಲ್ವಾ? ಇಲ್ಲ. ಯಾಕೆ? ಇಲ್ಲಿ ಇನ್ನೊಂದು ವಿಚಿತ್ರ ಏನೆಂದರೆ, ನಾಲ್ಕು ವರ್ಷ ಓದಲೇಬೇಕೆಂದೇನೂ ಇಲ್ಲ. ಪದವಿಯ ಮೊದಲನೇ ವರ್ಷವಾದ ಮೇಲೆ ಬಿಟ್ಟರೆ, ಒಂದು ಪ್ರಮಾಣಪತ್ರ ಕೊಡುತ್ತಾರೆ. ಎರಡನೇ ವರ್ಷದಲ್ಲಿ ಬಿಟ್ಟರೆ ಡಿಪ್ಲೊಮಾ ಪ್ರಮಾಣಪತ್ರ ಕೊಡುತ್ತಾರೆ. ಮೂರನೇ ವರ್ಷದಲ್ಲಿ ಬಿಟ್ಟರೆ ಪದವಿ ಪ್ರಮಾಣಪತ್ರ. ನಾಲ್ಕೂ ವರ್ಷ ಪೂರೈಸಿದರೆ, ಪದವಿ ಮತ್ತು ರಿಸರ್ಚ್ ಪ್ರಮಾಣಪತ್ರ ಕೊಡುತ್ತಾರೆ. ಇದಾದ ಮೇಲೆ ನೀವೇನೂ ಸ್ನಾತಕೋತ್ತರ ಪದವಿಯನ್ನು ಎರಡು ವರ್ಷ ಮಾಡುವುದೇ ಬೇಡ. ರಿಸರ್ಚ್ ಪ್ರಮಾಣಪತ್ರ ಇದ್ದರೆ, ಒಂದೇ ವರ್ಷ! ಕಾರಣಾಂತರಗಳಿಂದ ಓದುವುದಕ್ಕಾಗದೇ ಕಾಲೇಜು ಬಿಡುವಂತಾದರೆ, ಅಂಥವರಿಗೂ ಇದು ವರದಾನವೇ ಆಗಿದೆ.

ಈಗ ಉದಾಹರಣೆಗೆ ನಾನು ಎಂಜಿನಿಯರಿಂಗ್ ಓದುತ್ತಿದ್ದರೂ, ನನಗೆ ಆರ್ಟ್ಸ್ನಲ್ಲಿರುವ ಭಾರತೀಯ ಇತಿಹಾಸ ಮತ್ತು ಬಿಕಾಂನ ಅರ್ಥಶಾಸ್ತ್ರವನ್ನು ಓದಬೇಕೆನಿಸಿದರೆ, ಯೆಸ್ ಅದಕ್ಕೂ ಇಂಟಿಗ್ರೇಟೆಡ್ ಕೋರ್ಸ್ನಲ್ಲಿ ವ್ಯವಸ್ಥೆ ಇದೆ. ಸಂವಿಧಾನದ ಆಶಯದಂತೆ, ಎಲ್ಲರೂ ಎಲ್ಲ ಮಾದರಿಯ ಶಿಕ್ಷಣವೂ ಸಿಗುವಂತಾಗಿದೆ. ಹಾಂ, ಈಗ ವಿಜ್ಞಾನ ಓದುವವನು ಮಾತ್ರ ಐಐಟಿಗೆ ಹೋಗಬೇಕೆಂದಿಲ್ಲ, ಬದಲಿಗೆ ಆರ್ಟ್ಸ್, ಕಾಮರ್ಸ್ ಓದುವವರಿಗೂ ಅಲ್ಲಿ ಜಾಗವಿದೆ. ವಿಜ್ಞಾನ ವಿಷಯ ತೆಗೆದುಕೊಂಡವರನ್ನು ದೇವರಂತೆ ಕಾಣುವ, ಅದು ತೆಗೆದುಕೊಂಡರೆ ಮಾತ್ರ ಜೀವನದಲ್ಲಿ ಉದ್ಧಾರ ಆಗ್ತೀವಿ ಎಂಬ ಭ್ರಮೆ ಕಳಚುವುದಕ್ಕೆ ಇದು ರಾಮಬಾಣ.

ಸಿಸ್ಟಂ ಚೆನ್ನಾಗಿದೆ. ವಿದೇಶಗಳಲ್ಲೂ ಹೆಚ್ಚೂ ಕಡಿಮೆ ಹೀಗೇ ಇದೆ. ಆದರೆ, ಇವೆಲ್ಲ ವಿಶೇಷ ಎನಿಸಿರುವುದು ಯಾಕೆ ಗೊತ್ತಾ? ಇದಕ್ಕೆ ಭಾರತೀಯ ಸಂಸ್ಕೃತಿಯ ಟಚ್ ಕೊಟ್ಟಿದ್ದರಿಂದ, ನಮ್ಮ ಮಾತೃಭಾಷೆಯಲ್ಲೇ ಕಲಿಯಬೇಕೆಂದು ಕಡ್ಡಾಯ ಮಾಡಿದ್ದರಿಂದ. ಜತೆಗೆ ನಮ್ಮ ಪರಂಪರೆಯ ಸಂಸ್ಕೃತವನ್ನು ಆಯ್ಕೆಯ ಭಾಷೆಯಾಗಿಟ್ಟಿದ್ದರಿಂದ. ಇದರಿಂದ ಕನಿಷ್ಠವೆಂದರೂ ಮಕ್ಕಳಿಗೆ ಮೂರು ಭಾಷೆಗಳ ಮೇಲಿನ ಹಿಡಿತ ಕೇವಲ ಶಾಲೆಯಿಂದಲೇ ಬರುತ್ತದೆ. ಬೇರೆ ಭಾಷೆಗಳು ಪರಿಸರದಿಂದಲೇ ಬರುತ್ತದೆ.

ಒಬ್ಬ ವಿದ್ಯಾರ್ಥಿ ಪಿಯುಸಿಗೆ ಬರುವುದರೊಳಗೆ ಬಹುತೇಕ ಮಡಕೆ ಮಾಡುವ ಕಲೆಯಿಂದ ಹಿಡಿದು, ಕಂಪ್ಯೂಟರ್ ಮಷೀನ್ವರೆಗೂ ಎಲ್ಲದರ ಪರಿಚಯವೂ ಇರುತ್ತದೆ. ಇನ್ನೇನಿದ್ದರೂ, ಕನಸು ಸಾಕಾರ ಮಾಡಿಕೊಳ್ಳುವುದಕ್ಕೆ ಓದುವುದೊಂದೇ ಬಾಕಿ. ಬಹುಶಃ ಇದಕ್ಕಿಂತ ಶಿಕ್ಷಣದಲ್ಲಿ ಇನ್ನೊಂದು ಉತ್ತಮ ನೀತಿ ಸಾಧ್ಯವಿಲ್ಲವೇನೋ ಎಂಬಷ್ಟು ಮಟ್ಟಿಗೆ ಕಸ್ತೂರಿ ರಂಗನ್ ನೇತೃತ್ವದ ತಂಡ ಇದನ್ನು ರೂಪಿಸಿದೆ.

ನನಗೆ ಇಷ್ಟವಾದ ಇನ್ನೊಂದು ಸಂಗತಿ ಎಂದರೆ, ಶಿಕ್ಷಕರಿಗೆ ವಯಸ್ಸಾಯ್ತು ಎಂದು ಬಡ್ತಿ ನೀಡುವ ಪದ್ಧತಿ ಬದಲಿಗೆ ನಿಜವಾಗಿ ಮೆರಿಟ್ ಆಧಾರದ ಮೇಲೆ ಬಡ್ತಿ ನೀಡುವ ಪದ್ಧತಿ ಪರಿಚಯಿಸಿದ್ದು! ಇದರಿಂದ ನಿಜವಾಗಿ ಅರ್ಹರಿರುವ ಶಿಕ್ಷಕರಿಗೆ ವಿದ್ಯಾರ್ಥಿಗಳು, ಹಸಿವಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರು ಸಿಕ್ಕಂತಾಗುತ್ತದೆ.
ಇನ್ನು ಕೆಲ ವಿದ್ಯಾರ್ಥಿಗಳು ಪ್ರತಿಷ್ಠಿತ ಆಕ್ಸ್ಫರ್ಡ್, ಸ್ಟ್ಯಾಂಡ್ಫರ್ಡ್ನಂಥ ವಿವಿಯಲ್ಲೇ ಓದಬೇಕು ಎಂದು ಹೋಗಿ ವಾಪಸ್ ಭಾರತಕ್ಕೆ ವಾಪಸ್ ಬರದೇ ಅಲ್ಲೇ ಸೆಟ್ಲ್ ಆಗುವುದು ಈಗ ಸಹಜವಾಗಿಬಿಟ್ಟಿದೆ. ಬಹುಶಃ ಇದನ್ನು ತಡೆಯುವುದಕ್ಕೋ ಅಥವಾ ಅಲ್ಲಿ ಹೋಗಲಾಗದ ವಿದ್ಯಾರ್ಥಿಗಳು ಇಲ್ಲೇ ಓದಲಿ ಎಂಬ ಯೋಜನೆಯಿಂದಲೋ, ವಿಶ್ವದ ಟಾಪ್ 100 ವಿವಿಗಳಿಗೆ ಭಾರತದಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ಅವಕಾಶವನ್ನು ಈ ನೀತಿ ನೀಡಿದೆ. ಇದರ ಸಾಧಕ ಬಾಧಕ ಏನೇ ಇದ್ದರೂ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇಂಥದ್ದೊಂದು ಪ್ರಯತ್ನವೇ ನಡೆದಿಲ್ಲವಲ್ಲ ಎಂಬುದು ಮಾತ್ರ ಸತ್ಯ.

ಇವರನ್ನು ಆಹ್ವಾನಿಸಿದ್ದೇವೆ ಎಂದ ಮಾತ್ರಕ್ಕೆ ವಿದೇಶಿ ಅಥವಾ ಸ್ವದೇಶಿ ವಿವಿಗಳ ನಿಯಂತ್ರಣವಿಲ್ಲ ಎಂದುಕೊಳ್ಳಬೇಡಿ. ಹೊಸತಾಗಿ ನಾಮಕರಣಗೊಂಡಿರುವ ಶಿಕ್ಷಣ ಸಚಿವಾಲಯ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಶಾಲಾ ಮಟ್ಟದಿಂದಲೂ ಸರ್ಕಾರಿ ಶಾಲೆಗಳಿಗೆ ಯಾವ ನಿಯಮವೋ, ಅದೇ ನಿಯಮ ಖಾಸಗಿ ಶಾಲೆಗಳಿಗೆ ಅನ್ವಯಿಸುವಂತೆ ನೀತಿ ರೂಪಿಸಲಾಗಿದೆ.

ಒಟ್ಟಾರೆ, ಈ ನೂತನ ಶಿಕ್ಷಣ ನೀತಿಯೊಂದು ಸರಿಯಾಗಿ ಜಾರಿಯಾಗಿದ್ದೇ ಆದಲ್ಲಿ, ಅನುಮಾನವೇ ಬೇಡ 2035ರ ವೇಳೆಗೆ ಭಾರತವು ವಿಶ್ವಗುರುವಾಗಲಿದೆ ಅಥವಾ ಜ್ಞಾನದ ಸೂಪರ್ ಪವರ್ ಆಗಲಿದೆ. ನಮ್ಮ ದೇಶದ ಸಮಸ್ಯೆಯೇ ಇದು. ಇಲ್ಲಿರುವ ನೀತಿಗಳು ಯಾವ ದೇಶದಲ್ಲೂ ಇಲ್ಲ. ಅಷ್ಟು ಸುಂದರ, ಸ್ಪಷ್ಟ. ಆದರೆ ಅನುಷ್ಠಾನಕ್ಕೆ ಬರುವಲ್ಲಿ ಮಾತ್ರ ಸೋಲುತ್ತದೆ. ಮೇಲಾಗಿ ಇದು ಕೇವಲ ನೀತಿಯಷ್ಟೇ. ಕಾಯ್ದೆಯಲ್ಲ. ಸಂವಿಧಾನದಲ್ಲಿರುವ ರಾಜ್ಯ ನೀತಿಯ ನಿರ್ದೇಶನ ತತ್ತ್ವಗಳನ್ನು ಸರ್ಕಾರ ಪಾಲಿಸಲೇಬೇಕು ಎಂದು ಹೇಳಿದ್ದರೂ, ಹಾಗೆ ಪಾಲಿಸಲಿಲ್ಲ ಎಂದರೆ, ಕೋರ್ಟ್ಗೆ ಹೋಗುವ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿಲ್ಲ.

ಆದರೆ ಮೋದಿ ಸರ್ಕಾರದ ಪ್ರಣಾಳಿಕೆಯಲ್ಲೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆಂದು ಹೇಳಿರುವುದರಿಂದ, ಈಗಾಗಲೇ ಕೇಂದ್ರವು ಇದಕ್ಕೆ ಅನುಮೋದನೇ ನೀಡಿರುವುದರಿಂದ, ರಾಜ್ಯಗಳು ಜಾರಿ ಮಾಡುವುದಕ್ಕೆ ಉತ್ಸುಕರಾಗಿರುವುದರಿಂದ, ಅನುಷ್ಠಾನಕ್ಕೆ ಬರುತ್ತದೆ ಎನ್ನಿಸಲಾರಂಭಿಸಿದೆ. ವಿದ್ಯೆಯೆಂಬ ಯಜ್ಞ ಶುರುವಾಗಿದೆ, ಭಾರತ ನಿಜಾರ್ಥದಲ್ಲಿ ವಿಶ್ವ ಗುರುವಾಗುವುದನ್ನು ನೋಡೋಣ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya