ಮೋದಿ ಸರ್ಕಾರ ಬೀಳಿಸಲು ಜೀನ್‌ ಶಾರ್ಪ್‌ನ 198 ತಂತ್ರಗಳು!

ಅನೇಕ ಬಾರಿ ಅನಿಸುವುದುಂಟು, ನಾವೆಲ್ಲ ಪತ್ರಕರ್ತರು ಬಾಯಿ ಮುಚ್ಚಿಕೊಂಡು ಘಟನೆಯ ವರದಿಯಷ್ಟನ್ನೇ ಮಾಡಿಕೊಂಡು ಸುಮ್ಮನಿರುವುದು ನಮ್ಮ ಸಂಬಳದ ಆಯಾಮದಿಂದಲೂ, ನಮ್ಮ ನೆಮ್ಮದಿಯ ಆಯಾಮದಿಂದಲೂ ಉತ್ತಮವಾದ ನಿರ್ಧಾರ ಎಂದು. ಆದರೂ ಹಾಗೆ ಮಾಡಿದರೆ ಅಸಲಿ ಸಂಗತಿಗಳನ್ನು ಜನರ ಮುಂದೆ ಇಡುವವರಾರು ಎಂದು ಅನಿಸುತ್ತದೆ. ಆಕ್ಚುವಲ್‌ ಸುದ್ದಿಗಳಲ್ಲಿ ಏನಾದರೊಂದು ಅಡಗಿರುತ್ತದೆ. ಅದನ್ನು ನಿತ್ಯ ನೋಡುವವರಿಗೆ ಇದರಲ್ಲಿ ಒಂದು ಪ್ಯಾಟರ್ನ್‌ ಇದೆಯಲ್ಲ ಎಂದೆನಿಸುವುದು ಸತ್ಯ. ಆ ಅನುಮಾನದ ಮೇಲೆ ಸತ್ಯ ಹುಡುಕುತ್ತಾ ಹೋದಾಗ, ಸಮಾಜದಲ್ಲಿ ನಡೆಯುತ್ತಿರುವುದು ಯಾವುದೂ ಆಕಸ್ಮಿಕವಲ್ಲ ಎಂಬುದು ನಮಗೆ ಅರಿವಾಗುತ್ತದೆ. ಕೆಲವೊಮ್ಮೆ ಆ ಅರಿವಾಗುವುದರೊಳಗೆ ಅಲ್ಲೋಲ-ಕಲ್ಲೋಲವಾಗಿರುತ್ತದೆ.

ಅಮೆರಿಕದ ಜೀನ್‌ ಶಾರ್ಪ್‌ ಎಂಬ ರಾಜ್ಯಶಾಸ್ತ್ರಜ್ಞ ಒಂದು ಸರ್ಕಾರವನ್ನು ಬೀಳಿಸುವುದು ಹೇಗೆ ಎಂಬ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ಅಲ್ಲದೇ ಆತ ಒಂದು ಸಮರ್ಥ ಸರ್ಕಾರವನ್ನು ಹೇಗೆ ಯಾವುದೂ ಹೊಡಿ, ಬಡಿ, ಕಡಿ ಇಲ್ಲದೇ, ಪ್ರಜಾತಾಂತ್ರಿಕವಾಗಿಯೇ ಕೆಳಗೆ ಬೀಳಿಸಬಹುದು ಎಂಬುದಕ್ಕೆ 198 ಉಪಾಯಗಳನ್ನು ತಿಳಿಸಿದ್ದಾನೆ. ಮೊದಲಿಗೆ ಶಾಂತಿ, ಪ್ರಜಾಪ್ರಭುತ್ವ ಇತ್ಯಾದಿ ಮಾರ್ಗದಲ್ಲಿ ನಮ್ಮ ಪ್ರತಿಭಟನೆ ಶುರು ಮಾಡಬೇಕು. ಅದು ತೀವ್ರಮಟ್ಟಕ್ಕೆ ಹೋದಾಗ ಪರಿಸ್ಥಿತಿ ಹೇಗಾಗುತ್ತದೆ ಎಂದರೆ ಸರ್ಕಾರಕ್ಕೆ ಯಾವ ಕೆಲಸವೂ ಮಾಡಲಾಗದೇ ಲಕ್ವಾ ಹೊಡೆದಂತೆ ವ್ಯವಸ್ಥೆ ಸ್ತಬ್ಧವಾಗುತ್ತದೆ. ಕೊನೆಗೆ ಈ ಲಕ್ವಾ ಹೊಡೆದ ವ್ಯವಸ್ಥೆಯೇ ಜನರ ಕಣ್ಣಮುಂದೆ ಬಂದು ಸರ್ಕಾರ ನೆಲಕಚ್ಚುತ್ತದೆ. ಇದೊಂಥರಾ ಬಯೋ ವಾರ್‌ ಇದ್ದಂತಯೇ. ಮದ್ದು ಗುಂಡುಗಳಿಲ್ಲದೇ ಎಲ್ಲ ದೇಶಗಳನ್ನೂ ಸರ್ವನಾಶ ಮಾಡಬಹುದು. ಹಾಗೇ ಜೀನ್‌ ಶಾರ್ಪ್‌ ತಿಳಿಸಿರುವಂಥ ತಂತ್ರಗಳಿಂದ ಸರ್ಕಾರವನ್ನು ಕೆಳಗುರುಳಿಸಬಹುದು. ಈತ ತಿಳಿಸಿರುವ ಎಷ್ಟೋ ಅಂಶಗಳನ್ನು ಈಜಿಪ್ತ್‌ನ ತಹ್ರಿರ್‌ ಸ್ಕ್ವೇರ್‌ – ಉಕ್ರೇನ್‌ ರಷ್ಯಾದ ವಿರುದ್ಧ ಮಾಡಿದ್ದು ಎಲ್ಲವೂ.

ಆತ ತಿಳಿಸಿರುವ ಅಂಶಗಳ್ಯಾವುದು ಗೊತ್ತಾ? ನಮ್ಮ ಭದ್ರತಾ ಸಿಬ್ಬಂದಿ ಮೇಲೇ ಕಲ್ಲು ತೂರಾಟ ಮಾಡುವುದು, ರಸ್ತೆ-ತಡೆ, ಅಗ್ನಿಶಾಮಕ ವಾಹನಗಳ ಮೇಲೇ ಬೆಂಕಿ ಹಚ್ಚಿ ಉಳಿದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಇಡುವುದು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳನ್ನು ಮುಂದಿನ ಸಾಲಿನಲ್ಲಿರಿಸುವುದು, ಆ್ಯಸಿಡ್‌ ಪ್ಯಾಕೆಟ್‌ಗಳನ್ನೆಸೆಯುವುದು, ಪೆಟ್ರೋಲ್‌ ಬಾಂಬ್‌ ಹಾಕುವುದು, ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಪದೇಪದೆ ಸುದ್ದಿ ಮಾಡಿಸುವುದು, ಸುಳ್ಳು ಸುದ್ದಿ ಹಂಚಿಸಿ ನಮ್ಮ ಜನರನ್ನು ನಮ್ಮ ದೇಶದ ಸರ್ಕಾರದ ವಿರುದ್ಧವೇ ಎತ್ತಿಕಟ್ಟುವುದು ಸೇರಿದಂತೆ, ಹೇಳದ್ನಲ್ಲ, ಒಟ್ಟು 198 ಕುತಂತ್ರಗಳನ್ನು ಬರೆದಿದ್ದಾನೆ ಜೀನ್‌ ಶಾರ್ಪ್‌.

ಈಗ ಇವೆಲ್ಲವನ್ನೂ ದಿಲ್ಲಿ ಮತ್ತು ದೇಶಾದ್ಯಂತ ಆಗುತ್ತಿರುವ ಧರ್ಮ-ಧರ್ಮಗಳ ಜಗಳ, ಗಲಭೆ, ಮುಸ್ಲಿಮರು ನಾವು ಸರ್ಕಾರವನ್ನು ನಂಬುವುದಿಲ್ಲ ಎನ್ನುವುದು, ಆಶಾ ಕಾರ್ಯಕರ್ತೆಯರು ಗೌಪ್ಯವಾಗಿ ನಮ್ಮ ದಾಖಲೆಗಳನ್ನು ಕದ್ದು ಇನ್ನೇನೋ ಮಾಡುತ್ತಾರೆಂದು ಜನರು ಭ್ರಮಿಸುವುದು, ಹಾಗೆ ಭ್ರಮಿಸಿ ಮಸೀದಿಯಲ್ಲಿ ಘೋಷಣೆ ಕೂಗುವುದು, ಜನ ಸೇರುವುದು, ಕಲ್ಲು ತೂರಾಟ, ಶಹೀನ್‌ ಬಾಗ್‌ ಹೋರಾಟ, ಹೆಂಗಸರನ್ನು ಮುಂದಿಟ್ಟುಕೊಂಡು ಹಿಂದಿನಿಂದ ಕಲ್ಲೆಸೆಯುವುದನ್ನೆಲ್ಲ ಹೋಲಿಸಿ ನೋಡಿ.
ಪೊಲೀಸರು ಹೊಡೆದರು, ಸರ್ಕಾರ ಮೋಸ ಮಾಡಿತು ಜನರು ರೊಚ್ಚಿಗೆದ್ದರು ಎಂಬುದು ಆಕಸ್ಮಿಕವಾಗಿ ಕಂಡರೂ ಎಲ್ಲವೂ ಚುಕ್ಕಿ ಇಟ್ಟು ರಂಗೋಲಿ ಬರೆದಷ್ಟು ಸ್ಪಷ್ಟವಾಗಿದೆ. ಯಾವ ಪ್ರತಿಭಟನೆಯೂ ಒಬ್ಬ ಪ್ಲಾನ್‌ ಮಾಡಿ ಇಟ್ಟ ಚುಕ್ಕಿಯನ್ನು ಮೀರಿ ಹೋಗಿಲ್ಲ. ಸರ್ಕಾರವನ್ನು ಉರುಳಿಸುವುದಕ್ಕೆ ಜೀನ್‌ ಶಾರ್ಪ್‌ ಏನು ಹೇಳಿದ್ದನೋ ಅವೆಲ್ಲವೂ ಚಾಚೂ ತಪ್ಪದೇ ಅನಸರಿಸಲಾಗುತ್ತಿದೆ.

ಸಿಎಎಗೂ ನಮ್ಮ ಭಾರತೀಯ ಮುಸ್ಲಿಮರಿಗೂ ಏನೂ ಸಂಬಂಧವಿಲ್ಲದಿದ್ದರೂ ಅವರೇಕೆ ರೊಚ್ಚಿಗೆದ್ದರು? ವಿವಿಧ ಮತ-ಜಾತಿಯವರೆಲ್ಲ ಒಟ್ಟಿಗೆ ಕೋಟ್ಯಂತರ ಜನರು ಸೇರಿ ಬಾಳ್ವೆ ನಡೆಸುತ್ತಿರುವಾಗ ಜಾತ್ಯತೀತತೆಯಿಲ್ಲ ಎಂಬ ಕಥೆಗಳೇ ಬರಬಾರದು. ನಮ್ಮ ದೇಶ ಫ್ರೆಂಚ್‌, ಪೋರ್ಚುಗೀಸ್‌, ಬ್ರಿಟಿಷ್‌, ಮೊಘಲ್‌ಗಳನ್ನು ಆಳ್ವಿಕೆಯನ್ನು ಕಂಡು ಎದುರಿಸಿ ಸದೃಢವಾಗಿ ನಿಂತಿದೆ. 70 ವರ್ಷಗಳ ಕುಟುಂಬದ ಆಳ್ವಿಕೆ, ಅನ್ಯಾಯ, ಅಕ್ರಮ, ಭ್ರಷ್ಟಾಚಾರ ಎಲ್ಲವನ್ನೂ ಸಹಿಸಿಕೊಂಡರು. ದುರಂತ ಏನೆಂದರೆ, ಚೆನ್ನಾಗಿ ಓದಿರುವವರೇ, ಬುದ್ಧಿವಂತರೇ ಸುಳ್ಳು ಸುದ್ದಿಗಳನ್ನು ನಂಬಿ ಎಲ್ಲರಿಗೂ ಹಂಚುತ್ತಿದ್ದಾರೆ. ಇವೆಲ್ಲವೂ ಪ್ರಧಾನಿ ನೇತೃತ್ವದ ಮೋದಿ ಸರ್ಕಾರವನ್ನೇ ಶತಾಯಗತಾಯ ಕೆಳಗಿಳಿಸಲೇ ಬೇಕೆಂದು ಮಾಡುತ್ತಿರುವ ಪ್ರಯತ್ನಗಳು.

ಎಲ್ಲ ರಾಜಕಾರಣಿಗಳು ಶ್ರೀಮಂತರ ಮನೆಯಿಂದಲೋ, ರಾಜರ ಕುಟುಂಬದಿಂದಲೋ ಬಂದಿದ್ದನ್ನು ನೋಡಿದ್ದ ನಮಗೆ ಒಬ್ಬ ಚಾಯ್‌ವಾಲ ಪ್ರಧಾನಿ ಆಗುವುದನ್ನು ನೋಡಿರಲಿಲ್ಲ. ಈ ಶ್ರೀಮಂತರಿಗಿಂತ ಜನರ ನಾಡಿಯನ್ನು ಅರ್ಥ ಮಾಡಿಕೊಳ್ಳುವವನು ಒಬ್ಬ ಚಹಾ ಮಾರುವವನು ಮಾತ್ರ ಎಂದು ನಮಗೆ ತಿಳಿಯಲೇ ಇಲ್ಲವಲ್ಲ. ಒಂದು ವಿಷಯ ಸ್ಪಷ್ಟ- ಮೋದಿಗೆ ಸ್ಪಷ್ಟವಾಗಿ ಗೊತ್ತಿದೆ, ಈ ದೇಶದಲ್ಲಿ ಬದಲಾವಣೆ ತರಬೇಕೆಂದರೆ ಕೇವಲ ಕಾನೂನು ಮಾಡುವುದರಿಂದ ಆಗವುದಿಲ್ಲ ಬದಲಿಗೆ ಆಂದೋಲನದಿಂದ ಅಂತ. ಹಾಗಾಗಿ ಮೋದಿ ಏನೇ ಮಾಡಿದರೂ ಅದಕ್ಕೆ ಜನರು ದೊಡ್ಡ ಮಟ್ಟದಿಂದ ಸ್ವೀಕಾರ ಮಾಡಿ, ಅವರೇ ದೇಶದ ಮೂಲೆ ಮೂಲೆಗೂ ಮುಟ್ಟಿಸಿದರು.

ಗುಜರಾತಿ ವೈದ್ಯರೊಬ್ಬರು ಮಾಡಿರುವ ಸಂದರ್ಶನದಲ್ಲಿ ಮೋದಿಯನ್ನು ‘ಮತ್ತೆ ಇತ್ತೀಚೆಗೆ ಏನ್‌ ಮಾಡ್ತಾ ಇದೀರ?’ ಎಂದು ಕೇಳುತ್ತಾರೆ. ಅದಕ್ಕೆ ನಾವು ನೀವೆಲ್ಲ ‘ಹಾಂ, ಎಲ್ಲವೂ ಚೆನ್ನಾಗಿದೆ. ಮಾಮೂಲಿ ಕೆಲಸ’ ಎಂದು ಉತ್ತರಿಸುತ್ತಾರೆ. ಆದರೆ ಮೋದಿ ಉತ್ತರಿಸಿದ್ದು ‘ಸಾಧನಾ’ ಎಂದು. ‘ಏನ್‌ ಸಾಧನಾ ಸರ್‌’ ಎಂದು ಕೇಳಿದಾಗ ‘ನಿದ್ದೆಯನ್ನು ಗೆಲ್ಲುವ ಸಾಧನಾ’ ಎಂದರು. ‘ಈಗಾಗಲೇ ನೀವು ಕೇವಲ ನಾಲ್ಕು ತಾಸು ನಿದ್ದೆ ಮಾಡುತ್ತೀರಿ ಎಂಬ ಸುದ್ದಿಯಿದೆ. ಆದರೂ ಇನ್ನೆಷ್ಟು ನಿದ್ದೆ ಕಡಿಮೆ ಮಾಡಬೇಕೆಂದಿದ್ದೀರಿ?’ ಎಂದಾಗ ಮೋದಿ ಹೇಳ್ತಾರೆ ‘ನನಗೆ ನಿದ್ದೆ ಮಾಡಲೇಬಾರದು ಅಂತ ಇದೆ’. ಇದನ್ನು ನಾವೆಲ್ಲ ಊಹಿಸಲು ಸಾಧ್ಯವೇ?

ಮೋದಿ ಮುಂದುವರಿಯುತ್ತಾ ಹೇಳ್ತಾರೆ ‘ನಾನಿದನ್ನ ಯಾಕೆ ಹೇಳ್ತೀನಿ ಅಂದರೆ ನನಗೆ ಅನುಭವ ಆಗಿದೆ, ಸಾಧನಾದಿಂದ ನಿದ್ದೆಯನ್ನು ಗೆಲ್ಲಬಹುದು. ಮಹಾತ್ಮರು ಹೇಳ್ತಾರಲ್ಲ, ಹನುಮಂತ ನಿದ್ದೆಯನ್ನೇ ಮಾಡಲಿಲ್ಲ ಅಂತ’. ಅದೆಲ್ಲ ಸರಿ ನಿದ್ದೆ ಯಾಕೆ ಬೇಡ ಎಂದು ಕೇಳಿದಾಗ, ‘ಈ ದೇಶ ಮತ್ತು ಬಡತನದ ಕಾರಣದಿಂದ. ನಮ್ಮ ಮಹಾನ್‌ ದೇಶ ಆದರೆ ನಮ್ಮನ್ನು ಲೂಟಿ ಮಾಡಿಬಿಟ್ಟಿದ್ದಾರೆ. ಇದನ್ನು ನಾನು ಸರಿ ಮಾಡಬೇಕಿದೆ. ಅದಕ್ಕೆ ನನಗೆ 20 ಗಂಟೆ ಸಾಕಾಗುವುದಿಲ್ಲ. ಬದಲಿಗೆ ಎಲ್ಲ 24 ಗಂಟೆಯೂ ಬೇಕು’ ಎಂದು ಮೋದಿ ಹೇಳುವಾಗ, ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಇದನ್ನು ಕೇಳಿದ ಸಂದರ್ಶಕರ ಕಣ್ಣೂ ಒದ್ದೆಯಾಗಿತ್ತು.

ನೀವೇ ಎಲ್ಲ ಉಗ್ರಗಾಮಿಗಳ ಹಿಟ್‌ಲಿಸ್ಟ್‌ನ ಮೊದಲ ಹೆಸರು. ನಿಮಗೆ ಭಯ ಆಗುವುದಿಲ್ಲವೇ? ಎಂದು ಕೇಳಿದಾಗ, ‘ನನ್ನ ಜೀವನದ ಉದ್ದೇಶವೇ ಈ ದೇಶ ಸೇವೆ ಮಾಡುವುದು. ಅದನ್ನು ಮಾಡುವವರೆಗೂ ನನ್ನನ್ನು ಯಾರೂ ಏನೂ ಮಾಡುವುದಕ್ಕಾಗುವುದಿಲ್ಲ. ನನ್ನ ಸೇವೆ ಮುಗಿದ ಮೇಲೆ ಯಾರೂ ನನ್ನನ್ನು ಉಳಿಸುವುದಕ್ಕಾಗುವುದಿಲ್ಲ. ನನಗೆ ಸಾವೆಂದರೆ ಭಯವಿಲ್ಲ. ನಾನಿಲ್ಲಿ ಉದ್ದೇಶವನ್ನು ಪೂರೈಸುವುದಕ್ಕಷ್ಟೇ ಬಂದಿದ್ದೇನೆ’ ಎಂದರು ಮೋದಿ.

ಆದರೆ, ಕುತಂತ್ರ ಮಾಡುವವರು ಏನು ಮಾಡಿದರು ಗೊತ್ತಾ? ಮೋದಿಯನ್ನು ದೊಡ್ಡ ಹಿಟ್ಲರ್‌, ಜನರಿಗೆ-ಮಾಧ್ಯಮಗಳಿಗೆ ಸ್ವಾತಂತ್ರ್ಯವನ್ನೇ ಕೊಟ್ಟಿಲ್ಲ ಎಂದು ಬಿಂಬಿಸಲು ಶುರು ಮಾಡಿದ್ದಾರೆ. ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಏನು ಎಂದು ಚೀನಾ ಸರ್ಕಾರವನ್ನು ನೋಡಿದರೆ ಗೊತ್ತಾಗುತ್ತದೆ. ಚೀನಾ ಸರ್ಕಾರ ತನ್ನ ಪೊಲೀಸರ ಎಲ್ಲ ದಬ್ಬಾಳಿಕೆಯ ವಿಡಿಯೊಗಳನ್ನೂ ಡಿಲೀಟ್‌ ಮಾಡಿದೆ, ಸಾವಿನ ಸಂಖ್ಯೆಯ ಬಗ್ಗೆ ಸತ್ಯ ಹೇಳಿದ ವೈದ್ಯರೇ ಕೊರೋನಾದಿಂದ ಮೃತಪಟ್ಟರು ಎಂಬ ಸುದ್ದಿ ಬರುತ್ತಿದೆ. ಜನರ ಪಾಡಂತೂ ನಾಯಿಪಾಡು. ಆದರೆ, ನಮ್ಮ ದೇಶದಲ್ಲಿ ಇವೆಲ್ಲವೂ ನಡೆದೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ವಾಚಾಮಗೋಚರ ಬಯ್ದರೂ ವಿಡಿಯೊ-ಪೋಸ್ಟ್‌ ಡಿಲೀಟ್‌ ಮಾಡಿಸುವುದಿರಲಿ, ಒಂದು ಕೇಸೂ ದಾಖಲಾಗಲ್ಲ. ಅಸಲಿಗೆ ಮೋದಿ ಹಿಟ್ಲರ್ರೇ ಆಗಬೇಕಿದ್ದರೆ 6 ವರ್ಷ ಬೇಕಾಗೇ ಇರಲಿಲ್ಲ. ಇಷ್ಟೊತ್ತಿಗಾಗಲೇ ಆಗಿಬಿಡುತ್ತಿತ್ತು. ಯಾಕಾಗಿಲ್ಲ?

ಜೀನ್‌ ಶಾರ್ಪ್‌ ಹೇಳ್ತಾನೆ, ಕೆಲವೊಂದು ವ್ಯವಸ್ಥೆಗಳು ಸರ್ಕಾರವನ್ನು ಬಲಪಡಿಸುತ್ತದೆ. ಅಂಥದ್ದನ್ನು ಮೀಡಿಯಾದ ಮೂಲಕ ನೆಲಕ್ಕುರುಳುವಂತೆ ಮಾಡಬಹುದು ಎಂದು. ಹೀಗೆ, ನಮ್ಮ ಪ್ರಧಾನಿಯನ್ನು, ಸರ್ಕಾರವನ್ನು ಬೆಂಬಲಿಸಿಕೊಂಡು ಯಾವುದೇ ಸಂತರು, ಉದ್ಯಮಿಗಳು, ಪತ್ರಕರ್ತರು, ಜನ ಸಾಮಾನ್ಯರು ಬಂದರೆ ಅವರ ವಿರುದ್ಧ ಸುದ್ದಿಗಳು ಪ್ರಕಟವಾಗುತ್ತದೆ. ಅಥವಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಳಿದು, ಇವರೆಲ್ಲ ಪ್ರಧಾನಿಯಿಂದ ನೇರವಾಗಿ ಜನ್‌ಧನ್‌ ಅಕೌಂಟ್‌ಗೆ ಹಣ ಹಾಕಿಸಿಕೊಂಡೇ ಮಾತಾಡುತ್ತಿದ್ದಾರೆಂದು ಹೇಳಿಬಿಡುವ ಕೆಲಸ ನಡೆಯುತ್ತದೆ. ಯಾಕಪ್ಪಾ ಬೇಕು ಇವೆಲ್ಲ ನಾವು ಸುಮ್ಮನಾದಾಗ, ಸರ್ಕಾರವನ್ನು ಬೀಳಿಸುವ ಜೀನ್‌ ಶಾರ್ಪ್‌ ಪಾಠಗಳ ಪ್ರ್ಯಾಕ್ಟಿಕಲ್‌ ಕೆಲಸ ಶುರು.

ಇನ್ನೂ ಎಷ್ಟು ಮಾಡಬೇಕು ಸ್ವಾಮಿ ಈ ದೇಶಕ್ಕೆ? ಹೌದು, ಕೊರೋನಾ ಬರುವುದು ಯಾರಿಗೂ ಗೊತ್ತಿರಲಿಲ್ಲ. ಲಾಕ್‌ಡೌನ್‌ ಮಾಡಬೇಕೆಂಬ ಉದ್ದೇಶವೂ ಇರಲಿಲ್ಲ. ಎಲ್ಲವೂ ಅಚಾನಕ್‌ ಆಗಿ ಆಗುತ್ತಿರುವಾಗ, ಲಾಕ್‌ಡೌನ್‌ನ್ನು ಮಾತ್ರ ವ್ಯವಸ್ಥಿತವಾಗಿ, ಸಭೆ ನಡೆಸಿ, ಏನೇನು ಮಾಡಬೇಕೆಂದು ಯೋಚನೆ ಮಾಡಿ ಯೋಜನೆ ರೂಪಿಸಿ ಮಾಡುವುದಕ್ಕಾಗುವುದಿಲ್ಲ. ಅದಕ್ಕೆ ಅದೇ ದೊಡ್ಡ ತಪ್ಪು ಎಂದು ಬಿಂಬಿಸುವುದಾದರೆ ಮಾಡಿರುವ ಒಳ್ಳೆಯ ಕೆಲಸವನ್ನು ಹೇಳುವವರಾರ‍ಯರು? ಚೀನಾ 10 ದಿನಗಳಲ್ಲಿ 1000 ಹಾಸಿಗೆಯ ಆಸ್ಪತ್ರೆ ಕಟ್ಟಿದ್ದು ಸುದ್ದಿಯಾಗುತ್ತದೆ ಆದರೆ, ಒಂದೇ ದಿನದಲ್ಲಿ ಭಾರತೀಯ ರೈಲ್ವೆ 6,370 ಹಾಸಿಗೆಯ ವ್ಯವಸ್ಥೆಯನ್ನು ಇಂಥ ಕೊರೋನಾ ಸಮಯದಲ್ಲಿ ಮಾಡಿದ್ದನ್ನು ನಮ್ಮ ಮೀಡಿಯಾಗಳು ಹೇಳುವುದೇ ಇಲ್ಲ.

ನಮ್ಮಲ್ಲಿ ಪ್ರಕಟವಾಗುವುದು ದಿಲ್ಲಿಯ ಆನಂದ್‌ ವಿಹಾರ್‌ನಿಂದ ಎಲ್ಲ ವಲಸಿಗ ಕಾರ್ಮಿಕರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಮಾತ್ರ. ಜೀನ್‌ ಶಾರ್ಪ್‌ನ 101ನೇ ತಂತ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಜನರನ್ನು ಆತಂಕಕ್ಕೀಡು ಮಾಡುವುದೂ ಒಂದು.

ಲೋಕಸಭೆ ಚುನಾವಣೆಯಲ್ಲಿ ಮೋದಿ ಮೋಸ ಮಾಡಿದರು ಎಂಬ ಆರೋಪ ಕೇಳಿ ಬಂತು. ಇದು ಮೋದಿ ಸರ್ಕಾರ ಗೆಲ್ಲುವ ಎಲ್ಲ ಕಡೆಯೂ ಕೇಳಿ ಬರುವಂಥದ್ದೇ. ಅಕ್ರಮವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಇವರೆಲ್ಲ 198 ಕುತಂತ್ರಗಳನ್ನೂ ಪ್ರಯೋಗ ಮಾಡಬಹುದು ಆದರೆ ಮೋದಿ ಸರ್ಕಾರ ಮಾತ್ರ ನಿಯತ್ತಾಗಿರಬೇಕು ಎಂದು ಹೇಳುವ ಮಂದಿಗೆ ಯಾವ ಚಪ್ಪಲಿಯಿಂದ ಹೊಡೆಯಬೇಕು ಹೇಳಿ? ಇಂಥ ನರಿಗಳ ಸಂಹಾರಕ್ಕೆ ನಾನಂತೂ ಮೋಸ ಮಾಡಿಯೇ ಮಾಡುತ್ತಿದ್ದೆ. ಈ ಕಾಲದಲ್ಲಿ ರಾಮನಿಗೆ ಬೆಲೆಯೇ ಇಲ್ಲ. ಕೃಷ್ಣನ ತಂತ್ರವೇ ಬೇಕು.

ಕೊರೋನಾ ಮಾರಿ ಅಪ್ಪಳಿಸಿದಾಗಿನಿಂದ ಸರ್ಕಾರ ತನ್ನ ಕೈಯಲ್ಲಿ ಏನಾಗುತ್ತದೆಯೋ ಎಲ್ಲವನ್ನೂ ಮಾಡಿದೆ. ತೆರಿಗೆ, ಉದ್ಯಮ, ಎಲ್ಲವಕ್ಕೂ ವಿನಾಯಿತಿ-ರಿಯಾಯಿತಿ ಎಲ್ಲವೂ ನೀಡಿದೆ. ಯಾವುದಾದರೂ ಒಂದು ರಾಷ್ಟ್ರ ಕೊರೋನಾ ನಂತರ ಆರ್ಥಿಕವಾಗಿ ಚೇತರಿಸಿಕೊಳ್ಳಬಲ್ಲಂಥದ್ದು ಎಂದರೆ ಅದು ಭಾರತ ಮಾತ್ರ. ಏಕೆಂದರೆ, ನಮ್ಮಲ್ಲಿ ಶೆ.90ರಷ್ಟು ಜನರು ಇನ್ಯಾರದ್ದೋ ಮೇಲೆ ಅವಲಂಬಿತರಾಗಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಂತೆ ದುಡಿಯುವುದೇ ಸಾಲ ತೀರಿಸುವುದಕ್ಕೆ ಎಂಬಂತಿಲ್ಲ. ಅವಶ್ಯವಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತೇವೆ. ಆದರೆ ಅಲ್ಲಿಯವರೆಗೂ ಮೋದಿ ಸರ್ಕಾರ ಬೀಳಿಸುವ ಏಕೈಕ ಉದ್ದೇಶದಿಂದ ಜೀನ್‌ ಶಾರ್ಪ್‌ನ ಎಲ್ಲ 198 ತಂತ್ರಗಳೂ ಪ್ರಯೋಗವಾಗಿ ದೇಶ ಹಾಳು ಮಾಡಿರುತ್ತಾರಾ? ಕಾದು ನೋಡಬೇಕು.

ನಾಳೆ ಸತ್ಯ ಹೇಳಿಲ್ಲ ಎಂದಾಗಬಾರದಲ್ಲ. ಇರೋದನ್ನ ನಿಮ್ಮ ಮುಂದಿಟ್ಟಿದ್ದೇನೆ. ನನಗಂತೂ ನಿರಾಳ ಭಾವ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya