ರಾಜಕಾರಣಿಗಳ ಬುದ್ಧಿ ಗೊತ್ತಾಗದೇ ಬುದ್ದುಗಳಾಗುತ್ತಿರುವವರು…

 

ನಾನು ಅತ್ಯಂತ ಹೆಚ್ಚು ವಿರೋಧಿಸಿ ಲೇಖನವನ್ನು ಬರೆದ ಕಾಂಗ್ರೆಸ್‌ನ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಅಚಾನಕ್‌ ಆಗಿ ಭೇಟಿಯಾಗಬೇಕಾದ ಪರಿಸ್ಥಿತಿ ಬಂತು. ರಸ್ತೆಯಲ್ಲೇ ನಿಂತು ಮಾತಾಡುವುದೇನು ಎಂದು ಕೆಫೆಯೊಂದರಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆವು. ಅಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಆಡಿದ ಒಂದು ಮಾತು ನನ್ನನ್ನು ಈಗಲೂ ಕಾಡುತ್ತಿದೆ. ಅವರು ಹೇಳಿದ್ದು ಹೀಗೆ – ‘ಅಯ್ಯೋ ಸುಮ್ನಿರಿ ಸಾರ್‌.. ಯಾವ್‌ ಪಕ್ಷ ಆದ್ರೇನು? ರಾಜಕಾರಣಿಗಳೆಲ್ಲರೂ ಒಂದೇ. ಕಾರ್ಯಕರ್ತರು ಕಿತ್ತಾಡ್ತಾರಷ್ಟೇ!

ಇದೆಷ್ಟು ಆರಾಮಾಗಿ ಹೇಳಿಬಿಟ್ಟರು ಎಂದುಕೊಳ್ಳುವ ಹಾಗೂ ಇಲ್ಲ. ಯಾಕೆಂದರೆ, ವಾಸ್ತವವೇ ಅದು. ವೈಯಕ್ತಿಕವಾಗಿ ಅವರ ಜತೆ ಮಾತಿಗೆ ಕುಳಿತಿದ್ದರಿಂದ ಬಿಚ್ಚಿ ಮಾತನಾಡಿದರು. ಇಲ್ಲದಿದ್ದರೆ, ಕಾಂಗ್ರೆಸ್‌ ರಾಜಕಾರಣಿಯ ಹಾಗೇ ಮಾತನಾಡುತ್ತಿದ್ದರೇನೋ. ಆದರೆ, ಅವರು ಹಾಗೆ ಹೇಳುತ್ತಿದ್ದ ಸಮಯದಲ್ಲಿ ನನ್ನ ಕಣ್ಣೆದುರಿಗೆ ಸುಮಾರು ಘಟನೆಗಳು ಹಾದು ಹೋದವು. ಒಂದು ವಿಷಯ ನೆನಪಿನಲ್ಲಿಡೋಣ, ಕಾರ್ಯಕರ್ತರೆಂದರೆ ಎಲ್ಲರೂ ಗೂಂಡಾಗಳಲ್ಲ, ಅದರಲ್ಲೂ ಕೊಡುವ 500 ರು. ಬಿರಿಯಾನಿ ಊಟಕ್ಕಾಗಿ ಬಂದವರಿರುತ್ತಾರೆ, ಇನ್ನು ಕೆಲವರು ಮನೆ ಮಠ ಬಿಟ್ಟು ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದವರಿರುತ್ತಾರೆ. ಅಂಥವರೆಲ್ಲ ಯಾರೋ ರಾಜಕಾರಣಿಗಾಗಿ ಯಾಕೆ ಜೀವನ ಹಾಳು ಮಾಡಿಕೊಳ್ಳಬೇಕು?

ರಾಜಕಾರಣಿಗಳೆಲ್ಲ ಒಂದು ಎನ್ನುತ್ತಿದ್ದಾಗ, ಫೇಸ್ಬುಕ್‌ನಲ್ಲಿ ಜೆಡಿಎಸ್‌ ಅಭಿಮಾನಿಗಳು ಅವಾಚ್ಯ ಶಬ್ದಗಳಲ್ಲಿ ಬಯ್ದು ಪೋಸ್ಟ್‌ ಹಾಕುವುದು ನೆನಪಾಯಿತು. ಒಂದೊಂದು ಪೋಸ್ಟ್‌ ನೋಡಿಬಿಟ್ಟರೆ, ಇವರ ಮನೆಯಲ್ಲಿ ಅಮ್ಮ ಇಲ್ಲ, ಅಕ್ಕ ಇಲ್ಲ ಅಥವಾ ಯಾವುದೇ ಹೆಣ್ಣುಮಕ್ಕಳ ಜತೆಗೇ ಹುಟ್ಟಿದವರಲ್ಲ ಎಂಬಷ್ಟು ಕೆಟ್ಟದಾಗಿ ಸೊಂಟದ ಕೆಳಗಿನ ಭಾಷೆಯಲ್ಲೇ ಸೈದ್ಧಾಂತಿಕ ವಿರೋಧಿಗಳನ್ನು ಎದುರಿಸುವುದು. ಈ ಜನ್ಮ ಬಿಡಿ, ಪೂರ್ವ ಜನ್ಮದಲ್ಲಿ ಮರ್ಯಾದೆ ಇಟ್ಟುಕೊಂಡ ಯಾವನೇ ಆದರೂ, ಅವರ ಜತೆ ಮಾತಾಡಿ ಬಾಯಿ, ಮನಸ್ಸು ಹೊಲಸು ಮಾಡುವುದಕ್ಕಿಂತ ನೀನೇ ಗೆದ್ದೆ ಎಂದು ಹೇಳಿ ಸುಮ್ಮನಿರುವುದು ಲೇಸು ಎನ್ನುವಂತೆ ಮಾತಾಡುತ್ತಾರೆ. ಇಷ್ಟೇ ಅಲ್ಲ, ಕಾಂಗ್ರೆಸ್‌ ಕಾರ್ಯಕರ್ತರು ಮತ್ತೊಂದು ಥರ. ಕಡಿಮೆ ಹೇಳಿದರೆ ಅರ್ಥ ಆಗಲ್ಲ, ಹೆಚ್ಚು ಹೇಳಿದರೆ ಮನೆ ಮುಂದೆಯೇ ಬರುತ್ತಾರೆ. ಇಂಥ ನಡವಳಿಕೆಗಳು ಕೇವಲ ಇವೆರಡೇ ಪಕ್ಷಕ್ಕಲ್ಲ.. ಎಲ್ಲರಿಗೂ ಅನ್ವಯ.

ಇತ್ತೀಚಿನ ಒಂದು ಪ್ರಕರಣವನ್ನೇ ತೆಗೆದುಕೊಳ್ಳೋಣ. ಮುಖ್ಯಮಂತ್ರಿ ಯಡಿಯೂರಪ್ಪನವರು ನಿಖಿಲ್‌ ಕುಮಾರಸ್ವಾಮಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರ ಜತೆಗೆ ಇನ್ನಷ್ಟು ಬಿಜೆಪಿಯ ದೊಡ್ಡ ದೊಡ್ಡ ತಲೆಗಳೇ ಹೋಗಿತ್ತು. ಕುಮಾರಸ್ವಾಮಿ ಇತ್ಯಾದಿಯಾಗಿ ಯಾರೂ ಅವರನ್ನು ಬಯ್ದಿಲ್ಲ, ನಿಂದಿಸಿಲ್ಲ, ಅಥವಾ ಇನ್ಯಾವ ಹಲ್ಲೆಯನ್ನೂ ಮಾಡಿಲ್ಲ. ಎಲ್ಲರೂ ಖುಷಿಯಿಂದ ಇದ್ದರು. ಫೇಸ್ಬುಕ್‌ನಲ್ಲಿ ಗೌಡರ ಕುಟುಂಬದ ವಿರುದ್ಧ ಮಾತಾಡಿದರೆ, ಅಮ್ಮ, ಅಕ್ಕ ಎಂದೆಲ್ಲ ಮಾತನಾಡುವ ಜೆಡಿಎಸ್‌ ಅಭಿಮಾನಿಗಳು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಹಣ ಕೊಟ್ಟಿದ್ದಕ್ಕೋ ಅಥವಾ ಜಾತಿ ಅಭಿಮಾನದಿಂದಲೋ ಕುಮಾರಸ್ವಾಮಿಯವರನ್ನು ಬೆಂಬಲಿಸುವುದಕ್ಕೆ ಯಡಿಯೂರಪ್ಪನವರ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡುವವರಿಗೆ ಈಗ ಉತ್ತರ ಕೊಡುವುದಕ್ಕಾಗುತ್ತದೆಯೇ? ಯಾರ ಅಭಿಮಾನಿಗಳಿಗೆ ಬಯ್ಯುತ್ತಿದ್ದರೋ, ಆ ಅಭಿಮಾನಿಗಳ ನಾಯಕನಿಗೆ ಕುಮಾರಸ್ವಾಮಿ ಆಹ್ವಾನ ನೀಡಿದ್ದನ್ನು ನೋಡಿಯೂ, ಯಾವುದೇ ಪಕ್ಷದ ಕಾರ್ಯಕರ್ತರು/ಅಭಿಮಾನಿಗಳು ಯಾವುದೇ ರಾಜಕಾರಣಿಗೆ ದಾಳವಲ್ಲ ಅಂತ ತಿಳಿಯುವ ಮೂರ್ಖತನ ಇದೆಯಲ್ಲ, ಅದು ಬೇಕಂತಲೇ ಬೂಟನ್ನು ಬಾಯಿಗೆ ತುರುಕಿಕೊಂಡಂತೆ!

ಕಾರ್ಯಕರ್ತರೋ, ಅಭಿಮಾನಿಗಳೋ… ಇವರೆಲ್ಲ ಏನನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೋಲುತ್ತಿದ್ದಾರೆ ಎಂದರೆ, ಎಲ್ಲ ರಾಜಕಾರಣಿಗಳು ಮಾಡುವುದು ತಮ್ಮ ಉದ್ಧಾರಕ್ಕಾಗಿಯೇ ವಿನಾ ಬೆಂಬಲಿಗರ ಮನೆ ಬೆಳಗಿಸುವುದಕ್ಕಲ್ಲ. ಪ್ರಜಾಪ್ರಭುತ್ವ ಅಥವಾ ಮತ್ತೊಂದೋ! ಏನನ್ನಾದರೂ ಹೇಳಿಕೊಳ್ಳಲಿ. ಎಲ್ಲೋ ನರೇಂದ್ರ ಮೋದಿಯವರಂಥ ಬೆರಳೆಣಿಕೆಯಷ್ಟು ನಿಸ್ವಾರ್ಥ ನಾಯಕರನ್ನು ಬಿಟ್ಟರೆ ಯಾರಿದ್ದಾರೆ ಎಲ್ಲವನೂ ತನ್ನ ಹೊಟ್ಟೆ ತುಂಬಿಸುವುದಕ್ಕೆ ಮಾಡಿಕೊಳ್ಳುವುದೇ ಹೆಚ್ಚು.
ಇಲ್ಲದಿದ್ದರೆ, ಸಚಿವ ಸ್ಥಾನ ಬೇಕು ಎಂದು ಕೇಳುವುದೇಕೆ? ಸಚಿವ ಸ್ಥಾನ ಕೊಟ್ಟರೂ ಇಂಥದ್ದೇ ಖಾತೆ ಬೇಕು ಎಂದು ಕೇಳುವುದೇಕೆ? ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹಾರುವುದೇಕೆ? ಇವೆಲ್ಲವೂ ಜನರಿಗಾಗೇ ಮಾಡುತ್ತಿದ್ದಾರೆ ಎಂದರೆ, ಅದನ್ನು ನಂಬುವುದಕ್ಕೆ ಅಭಿಮಾನಿಗಳೆಂಬ ದಡ್ಡಶಿಖಾಮಣಿಗಳನ್ನು ಬಿಟ್ಟರೆ ಇನ್ಯಾರಿಗೆ ತಲೆ ಕೆಟ್ಟಿದೆ?

ಅಕ್ಬರ್‌ ಮತ್ತು ಬೀರ್ಬಲ್‌ನ ಕಥೆಯೊಂದು ನೆನಪಾಗುತ್ತದೆ. ಒಮ್ಮೆ ಅಕ್ಬರ್‌ ಹೇಳಿದನಂತೆ, ತಾಯಿಯೊಬ್ಬಳೇ ತನಗಿಂತಲೂ ಹೆಚ್ಚು ಮಕ್ಕಳನ್ನು ಪ್ರೀತಿಸುವುದು ಎಂದು. ಅದಕ್ಕೆ ಬೀರ್ಬಲ್‌, ‘ಜಹಂಪನಾ ಅದೆಲ್ಲ ಸುಳ್ಳು ಯಾಕೆಂದರೆ ತಮಗಿಂತ ಹೆಚ್ಚು ಯಾರೂ ಯಾರನ್ನೂ ಪ್ರೀತಿಸುವುದಿಲ್ಲ’ ಎನ್ನುತ್ತಾನೆ. ‘ಅರೇ ಇದು ಹೇಗೆ?’ ಎಂದು ಕೇಳಿದಾಗ, ‘ಬೇಕಾದರೆ ಸಾಬೀತು ಮಾಡಿಯೇ ತೋರಿಸುತ್ತೇನೆ’ ಎನ್ನುತ್ತಾನೆ ಬೀರ್ಬಲ್‌. ಮಾರನೇ ದಿನ ಒಂದು ಮಂಗವನ್ನು ತಂದು ಒಂದು ತೊಟ್ಟಿಯಲ್ಲಿಟ್ಟು ನೀರು ತುಂಬಿಸುತ್ತಾ ಬಂದರಂತೆ. ಆಗ ಅಮ್ಮ ಕೋತಿಯು, ಮರಿಯನ್ನು ತನ್ನ ತಲೆಯ ಮೇಲಿಟ್ಟುಕೊಂಡಿತಂತೆ. ಅಕ್ಬರ್‌, ‘ತಾನು ಹೇಳಿದ್ದೇ ನಿಜವಾಯಿತು ನೋಡಿದೆಯಾ?’ ಎಂದು ಕೇಳುತ್ತಾನೆ. ಅದಕ್ಕೆ ಬೀರ್ಬಲ್‌, ‘ಇನ್ನಷ್ಟು ನೀರನ್ನು ಹೊಯ್ಯಿರಿ’ ಎಂದು ಸೇವಕರಿಗೆ ಹೇಳುತ್ತಾನೆ. ಆಗ ಎಲ್ಲಿ ತಾನು ಮುಳುಗುವ ಕಾಲ ಬಂತೋ, ಅಮ್ಮ ಕೋತಿಯು, ಮರಿ ಕೋತಿಯನ್ನು ಕೆಳಗೆ ಹಾಕಿ ಅದರ ಮೇಲೆ ನಿಂತುಕೊಂಡು ಜೀವ ಉಳಿಸಿಕೊಂಡಿತಂತೆ.

ಇಲ್ಲಿ ರಾಜಕಾರಣಿಗಳ ಹಣೆಬರಹವೂ ಅಷ್ಟೇ, ಯಾರೂ ನಿಮಗೆ ಸಹಾಯ ಮಾಡುವುದಕ್ಕೆ ಕಾಯುತ್ತಾಇರುವುದಿಲ್ಲ. ಅವರು ಬಂದಿರುವುದು ಅವರವರು ದುಡ್ಡು ಮಾಡಿಕೊಳ್ಳುವುದಕ್ಕೇ ವಿನಾ, ನಿಮ್ಮನ್ನು ಉದ್ಧಾರ ಮಾಡುವುದಕ್ಕಲ್ಲ. ಅವರೇನೋ ಮಾಡುತ್ತಾರೆ ಎಂದು ಜಗಳವಾಡಿದರೆ ಅನುಭವಿಸುವವರು ನೀವಷ್ಟೇ ವಿನಾ ಇನ್ನೊಬ್ಬರಲ್ಲ.

ಕಾಂಗ್ರೆಸ್‌ನ ಕೃಷ್ಣಪ್ಪನವರ ಸಹೋದರನ ಮಗಳಿಗೂ ಜೆಡಿಎಸ್‌ನ ಕುಮಾರಸ್ವಾಮಿಯ ಮಗನಿಗೂ ಮದುವೆ ಎಂದು ನಿಶ್ಚಯವಾದಾಗ, ಅರೇ ಇದೇನು ಎಂದು ಕೇಳುವಂತಿಲ್ಲ. ಯಾಕೆಂದರೆ, ಸಂಬಂಧವೇ ಬೇರೆ ರಾಜಕೀಯವೇ ಬೇರೆ. ಅದನ್ನು ಅರ್ಥ ಮಾಡಿಕೊಳ್ಳದ ನೀವು ಪೆಕ್ಕರುಗಳೇ ವಿನಾ, ರಾಜಕಾರಣಿಗಳಲ್ಲ. ರಾಜಕಾರಣಿಗಳು ತಿಂದ ಬಾಳೆಯಲ್ಲಿ, ಅರ್ಧ ತಿಂದು ಬಿಟ್ಟಿರುವ ಬೋಂಡಾ, ಮೂಲಂಗಿ ಪಲ್ಯವೇ ಮೃಷ್ಟಾನ್ನ ಎನ್ನುವ ಅಭಿಮಾನಿಗಳು ಇವರೆಲ್ಲ ಏನು ಮಾಡಿದರೂ ಸರಿ, ಅನ್ಯಾಯ ಮಾಡಿ ಸರ್ಕಾರ ಬೀಳಿಸಿದರೂ ಸರಿ ಎನ್ನಬೇಕಷ್ಟೇ ವಿನಾ, ಪ್ರಾಮಾಣಿಕ ಕಾರ್ಯಕರ್ತ ಇಂಥದ್ದನ್ನು ಹೇಗೆ ಸಹಿಸಿಕೊಳ್ಳುತ್ತಾನೆ ಹೇಳಿ? ಜೆಡಿಎಸ್‌ ಮತ್ತು ಬಿಜೆಪಿ ಸೇರಿ ಅಧಿಕಾರವನ್ನೇ ನಡೆಸಿತ್ತು.

ಮಾತು ತಪ್ಪಿದ ಕುಮಾರಸ್ವಾಮಿ ಎಂದು ಗೊತ್ತಿದ್ದರೂ ಅವರನ್ನು ಬೆಂಬಲಿಸಲೇ ಬೇಕಾಯಿತು. ಇವರಿವರು ಮಾಡಿಕೊಂಡ ಕಿತ್ತಾಟಕ್ಕೂ, ಒಪ್ಪಂದಕ್ಕೂ ಕಾರ್ಯಕರ್ತರು ಅಲ್ಲಿ ಪಲ್ಲಕ್ಕಿ ಹೊರುವವರಾದರೇ ವಿನಾ, ಪಲ್ಲಕ್ಕಿಯಲ್ಲಿ ಇರುವವರು ಹಾಗೇ ಇದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೂ, ಜೆಡಿಎಸ್ಸಿಗೂ ಯಾವಾಗಲೂ ಜಗಳವೇ.. ಇವರ ಜಗಳ ನಿಂತಿದ್ದೇ ಇಲ್ಲ. ಆದರೆ, ಕಳೆದ ಬಾರಿ ಚುನಾವಣೆಗೆ ಎರಡೂ ಪಕ್ಷ ಒಟ್ಟಾಗೇ ಚುನಾವಣೆಗೆ ನಿಂತಿತ್ತು. ಇದು ಕಾರ್ಯಕರ್ತರಿಗೆ ಮಾಡಿದ ದ್ರೋಹ ಎಂದು ಅವರು ಯಾವತ್ತೂ ತಿಳಿದೇ ಇಲ್ಲ. ಅವರಿಗೆ ನಾವು ಯಾಕಾಗಿ ಒಟ್ಟಾಗುತ್ತಿದ್ದೇವೆ ಎಂಬ ಅರಿವಿತ್ತು. ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಒಪ್ಪಂದ ಮಾಡಿಕೊಳ್ಳಲೇ ಬೇಕಾದ ಸ್ಥಿತಿ ಇದೆ. ಗೆದ್ದರೆ ಮಾತ್ರ ತಾವುಗಳು ಅಧಿಕಾರದಲ್ಲಿರುವುದಕ್ಕೆ ಸಾಧ್ಯ. ಅಧಿಕಾರದಲ್ಲಿದ್ದರೆ ಮಾತ್ರ ಅದೇ ಕಾರ್ಯಕರ್ತರು/ಅಭಿಮಾನಿಗಳು, ಜನರಿಂದ ಮರ್ಯಾದೆ. ಇಲ್ಲವಾದರೆ, ಮಾಜಿ ನಾಯಕರು ಎಂದು ಜನರು ಹತ್ತಿರಕ್ಕೂ ಸುಳಿಯುವುದಿಲ್ಲ ಎಂಬ ಸ್ಪಷ್ಟ ಅರಿವು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಇತ್ತು. ಹೊಡೆದಾಡಿ ಸತ್ತವರು ಕಾರ್ಯಕರ್ತರು. ಸತ್ತರೆ, ಅವರ ಮನೆಗೆ ರಾಜಕಾರಣಿಗಳು ಹೋಗಿ ಬರುತ್ತಾರೆ. ಬದುಕಿದ್ದರೆ, ಕಿತ್ತಾಡುವುದನ್ನು ನೋಡುತ್ತಾರೆ.

ಇನ್ನು ಮತ್ತೊಂದು ತಾಜಾ ಉದಾಹರಣೆ ಎಂದರೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ಇಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ಗೆ ಯಾವಾಗಲೂ ಜಗಳವೇ! ಕಾಂಗ್ರೆಸ್‌ನವರು ನಕಲಿ ವೋಟರ್‌ ಐಡಿ ಮಾಡಿಸುತ್ತಿದ್ದರೆ ಅದನ್ನು ಬೇಧಿಸಿದ್ದು ಜೆಡಿಎಸ್‌ನವರು. ಇನ್ನು ಎಷ್ಟೋ ವಿಚಾರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೂ ಬಿಜೆಪಿ ಕಾರ್ಯಕರ್ತರಿಗೂ ಹೊಡೆದಾಟವಾಗಿದೆ. ಎಷ್ಟೋ ಜನರು ಆಸ್ಪತ್ರೆ ಸೇರಿದ್ದಾರೆ. ಇನ್ನೆಷ್ಟೋ ಜನರ ಮೇಲೆ ಪ್ರಕರಣದ ದಾಖಲಾಗಿದೆ.

ಆದರೆ, ಏಕಾಏಕಿ ಮುನಿರತ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದಾರೆ. ಈಗ ಹೊಡೆತ ತಿಂದ ಆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ಏನು ಮಾಡಬೇಕು ಹೇಳಿ? ಇವರೇನೋ ಅಧಿಕಾರದಾಸೆಗೋ ಅಥವಾ ‘‘ಜನಸೇವೆ’’ಗೋ ಬಂದರು. ಆದರೆ, ಮುಖ ಮೂತಿ ನೋಡದೇ ಹೊಡೆದಾಡಿಕೊಂಡ ಹುಡುಗರು ಹೋಗಿ, ‘ನಿನ್ನೆ ಹೊಡೆದಾಟವಾಡಿಕೊಂಡಿದ್ದೆವು, ಅದನ್ನೆಲ್ಲ ಮರೆತುಬಿಡೋಣ ಇವತ್ತಿಂದ ನಮ್ಮ ಹಾರುವ ನಾಯಕನಿಗೆ ಕೆಲಸ ಮಾಡೋಣ’ ಎಂದು ಹೇಳುತ್ತಾರೆ ಎಂದು ಹೇಗೆ ಭ್ರಮಿಸುತ್ತೀರ ಸ್ವಾಮಿ? ಕಾರ್ಯಕರ್ತರನ್ನು ನಿಮ್ಮ ಮನೆಯ ನಾಯಿಗಳೆಂದುಕೊಂಡಿರಾ? ಹೊಡೆದರೂ, ದೂಡಿದರೂ ಶಿಳ್ಳೆ ಹೊಡೆದಾಗ ಬಾಲ ಅಲ್ಲಾಡಿಸಿಕೊಂಡು ಬರುವುದಕ್ಕೆ?

ಎಷ್ಟೋ ಕಾರ್ಯಕರ್ತರ ಮನೆಯ ನೆಮ್ಮದಿಯೇ ಹಾಳಾಗಿದೆ ಸಾರ್‌.. ಎಷ್ಟೋ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಹುಡುಗರು ಈ ವಯಸ್ಸಲ್ಲಿ ಚೆನ್ನಾಗಿ ದುಡಿದು ಮನೆಗೆ ಒಳ್ಳೆಯ ಮಗನಾಗುವ ಬದಲು, ಕೋರ್ಟು ಕಚೇರಿ ಎಂದು ಅಲೆಯುತ್ತಿದ್ದಾರೆ. ರಾಜಕಾರಣಿಗಳು ಸಂದಿಯಲ್ಲಿ ಸಂಧಿ ಮಾಡಿಕೊಂಡುಬಿಟ್ಟರೆ ಕಾರ್ಯಕರ್ತರ ಪಾಡೇನು?

ಶಾಸಕ ಗೋಪಾಲಯ್ಯನವರು ಅವರ ಕ್ಷೇತ್ರದಲ್ಲಿ ಹೆಂಗೆ ಎಂದು ಎಲ್ಲರಿಗೂ ಗೊತ್ತು. ಅವರ ಪರವಾಗಿ ಒಂದು ಜೋರು ಧ್ವನಿಯಲ್ಲಿ ಸಹ ಮಾತನಾಡದ ಸಚಿವ ಸುರೇಶ್‌ ಕುಮಾರ್‌ ಪ್ರಚಾರ ಮಾಡಬೇಕಾಯ್ತು. ಆಗ ಹೇಗಾಗಿತ್ತು ಎಂದು ಸುರೇಶ್‌ ಕುಮಾರ್‌ ಅವರನ್ನೇ ಕೇಳಿ ನೋಡಬೇಕು.

ಅನಂತ ಕುಮಾರ್‌ ಹೆಗಡೆ ಭಾಷಣ ಕೇಳಿಬಿಟ್ಟರೆ ಎಂಥವನೂ ಎದ್ದು ಏನಾದರೊಂದು ಮಾಡುವ ಹಾಗಿರುತ್ತದೆ. ಕಳೆದ ಬಾರಿ ಉತ್ತರಕನ್ನಡಕ್ಕೆ ಹೋದಾಗ ಒಂದಷ್ಟು ಅಭಿಮಾನಿಗಳು ಇಂಥದ್ದರ ಪರಿಣಾಮವಾಗಿ ಪ್ರಕರಣವನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿಯಿತು. ಇದುವರೆಗೂ ಅವರ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ಭಾಷಣ ಮಾಡಿದವರೂ ಬರಲಿಲ್ಲ, ಬೇರೆ ರಾಜಕಾರಣಿಗಳೂ ಬರಲಿಲ್ಲ. ಅವರವರ ಹಣೆಬರಹಗಳನ್ನು ಅವರವರೇ ಅನುಭವಿಸುತ್ತಿದ್ದಾರೆ. ಭಾಷಣ ಮಾಡುವವರು ಭಾಷಣ ಮಾಡುತ್ತಲೇ ಇದ್ದಾರೆ.
ಈ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ನಾವು ನೋಡಬಹುದು. ಅವರು ಬರೆಯುತ್ತಾರೆ –

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರ ಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ |
ವರಸೂತ್ರಯೋಗವಿದು – ಮಂಕುತಿಮ್ಮ ||

ರಾಜಕಾರಣಿಗಳೂ ಅಷ್ಟೇ, ಮನದ ಆಲಯದಲ್ಲಿ ಎರಡು ಕೋಣೆಗಳನ್ನು ಮಾಡಿಕೊಂಡಿದ್ದಾರೆ. ಒಂದರಲ್ಲಿ ರಾಜಕೀಯದ ಆಟಗಳನ್ನು ಆಡುತ್ತಾರೆ. ಇನ್ನೊಂದರಲ್ಲಿ ವಿರೋಧ ಪಕ್ಷದ ಅದೇ ನಾಯಕನ ಜತೆ ಸಂಬಂಧ ಬೆಳೆಸುವುದರಿಂದ ಹಿಡಿದು ಬಿಜಿನೆಸ್‌ನಲ್ಲಿ ಪಾಟ್ರ್ನರ್‌ ಮಾಡಿಕೊಳ್ಳುವವರೆಗೂ ಉತ್ತಮವಾದೇ ಇರುತ್ತಾರೆ. ಇವರಂತೆ ಕಾರ್ಯಕರ್ತರೂ ಸ್ವಲ್ಪ ಸಮಾಧಾನ ತಂದುಕೊಳ್ಳಬೇಕು. ಫೇಸ್ಬುಕ್‌ನಲ್ಲಿ ಯಾವನಿಗೋ ಅವಾಚ್ಯ ಶಬ್ದಗಳಿಂದ ಬಯ್ಯುವುದರಿಂದ, ಬಯ್ಯಿಸಿಕೊಂಡವನ ಕೋಪಕ್ಕೆ ಅನ್ಯಾಯವಾಗಿ ಗುರಿಯಾಗುತ್ತೀರೇ ವಿನಾ, ನಯಾ ಪೈಸೆ ಹುಟ್ಟುವುದಿಲ್ಲ ಅಥವಾ ಪಕ್ಷದಲ್ಲಿ ಸ್ಥಾನಮಾನ ಕೊಟ್ಟು ಸಚಿವ ಸ್ಥಾನಕ್ಕೇರಿಸುವುದಿಲ್ಲ. ರಾಜಕಾರಣಿಗಳ ಕನ್ನಡಕದಿಂದಲೇ ರಾಜಕಾರಣವನ್ನು ನೋಡಲು ಇನ್ನಾದರೂ ಕಲಿಯಿರಿ. ಜೀವನಪರ್ಯಂತ ಬಿಸ್ಕತ್ತಿಗೆ ಬಾಯೊಡ್ಡುವ ಜೀವನವೇ ಆಗಿಬಿಡುತ್ತದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya