ಅಂಬೇಡ್ಕರ್‌ರ ಪ್ರಶ್ನೆಗೆ ಉತ್ತರಿಸಿ ‘ಗಾಂಧಿಯವರು ಮಹಾತ್ಮರೇ?’

 

ಬಹಳ ದೊಡ್ಡದೊಂದು ಚರ್ಚೆ ಈ ವಾರ ನಡೆಯಿತು. ಅದೇನೆಂದರೆ, ಗಾಂಧಿ ಮಾಡಿದ ಸತ್ಯಾಗ್ರಹ ಉಪವಾಸದಂಥ ಹೋರಾಟಗಳು ಡ್ರಾಮಾ ಎಂದು ಸಂಸದ ಅನಂತಕುಮಾರ ಹೆಗಡೆ ಅವರು ಹೇಳಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದನ್ನು ಇಟ್ಟುಕೊಂಡು ಎಲ್ಲರೂ ಅನಂತಕುಮಾರ್‌ಹೆಗಡೆಯವರಿಗೆ ಇತಿಹಾಸದ ಕ್ಲಾಸ್‌ ತೆಗೆದುಕೊಂಡರು. ಇನ್ನಷ್ಟು ಜನರು ಅವರನ್ನು ಬಯ್ದರು.

ಹೌದು, ಅನಂತಕುಮಾರ ಹೆಗಡೆ ಹೋದ ಕಾರ್ಯಕ್ರಮ ಸಾವರ್ಕರ್‌ ಸಂಬಂಧಿತ ಕಾರ್ಯಕ್ರಮವಾಗಿತ್ತು. ಅಲ್ಲಿ, ಸಾವರ್ಕರ್‌ ಬಗ್ಗೆ ಹೆಚ್ಚು ಹೇಳುವ ಬದಲು ಹಿಂದುತ್ವ ಇತ್ಯಾದಿಗಳ ಬಗ್ಗೆ ಮಾತನಾಡಿದ್ದರು. ಅದೇ ವೇಳೆ ಗಾಂಧಿಯ ಬಗ್ಗೆಯೂ ಸೂಚ್ಯವಾಗಿ ಮಾತನಾಡಿದ್ದರು. ಇವರೇಕೆ ವಿಷಯದ ಬಗ್ಗೆ ಮಾತನಾಡುತ್ತಿಲ್ಲ ಎಂದೆನಿಸಿದ್ದೂ ನಿಜ.

ಆದರೆ, ‘ಸತ್ಯ’ ‘ಅಹಿಂಸೆ’ ಎಂದರೆ ಗಾಂಧಿ ಮಾತ್ರವಾ? ಅವರೇನು ಪೇಟೆಂಟ್‌ ಇಟ್ಟುಕೊಂಡಿದ್ದಾರಾ? ಗಾಂಧಿ ಬಗ್ಗೆ ಯಾರು ಏನು ಹೇಳಿದರೋ ಅದನ್ನೆಲ್ಲ ಕೇಳಿಕೊಂಡು ಅವರ ಭಜನೆ ಮಾಡಬೇಕಾ? ಅವರನ್ನು ಅವರ ನಿರ್ಧಾರಗಳನ್ನು ಪ್ರಶ್ನಿಸುವ, ಚರ್ಚಿಸುವ ಹಕ್ಕೇ ಇಲ್ಲ ಎಂದರೆ, ಇದೆಂಥ ಭಾರತದಲ್ಲಿ ನಾವಿದ್ದೇವೆ? ವಿಚಿತ್ರ ನೋಡಿ, ಸಾವರ್ಕರ್‌ ಸರಿ ಇಲ್ಲ, ದೇಶದ್ರೋಹಿ, ಹಿಂದೂವಾದಿ, ಮನುವಾದಿ ಅಂತೆಲ್ಲ ಮಾತಾಡಬಹುದಂತೆ ಆದರೆ, ಗಾಂಧಿಯನ್ನು ಮಾತ್ರ ಪ್ರಶ್ನಿಸಬಾರದಂತೆ. ಹಾಗೆ ಅವರ ಬಗ್ಗೆ ಮಾತಾಡಿದರೆ, ಪಾಕ್‌ನಲ್ಲಿ ಜಿನ್ನಾ ವಿರುದ್ಧ ಮಾತನಾಡಿದಂತೆ ವರ್ತಿಸುವ ಮಂದಿ ಭಾರತದಲ್ಲಿದ್ದಾರೆ.
ಸತ್ಯ ಯಾವತ್ತಿದ್ದರೂ ಸತ್ಯವೇ ಅಲ್ಲವೇ? ಸತ್ಯವನ್ನೇ ಹೇಳಬೇಕು ಎಂಬ ಗಾಂಧಿಯ ಮಾತಿಗೆ ಬೆಲೆ ಕೊಟ್ಟು ಗಾಂಧಿಯ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡೋಣ. ಹೀಗೆಂದುಕೊಂಡು ಬರೆಯಲು ಹೊರಟ ನನಗೆ ಅನಿಸಿದ್ದು, ನಮ್ಮ ದೇಶದ ದುರಂತ ಏನೆಂದರೆ, ಸತ್ಯ ಹೇಳುವುದಷ್ಟೇ, ಸತ್ಯವನ್ನು ಯಾರು ಹೇಳುತ್ತಾರೆ ಎಂಬುದೂ ಇಲ್ಲಿ ಮುಖ್ಯ! ಹಾಗಾಗಿ ಜಾತ್ಯತೀತದ ಮೂರ್ತಿಯಂತಿರುವ ಅಂಬೇಡ್ಕರ್‌ ಅವರು ಗಾಂಧಿಯ ಬರೆದಿರುವುದನ್ನೇ ಉಲ್ಲೇಖಿಸಿ, ಗಾಂಧಿಯ ಚಿತ್ರಣವನ್ನು ಕೊಡಲಿಚ್ಛಿಸುತ್ತೇನೆ. ಆಗ ಗಾಂಧಿಯ ಅಸಲಿ ಮುಖ ಏನು ಎಂಬುದು ಜನರಿಗೆ ತಿಳಿಯಬಹುದು. ಗಾಂಧಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಇದೊಂದನ್ನು ಓದಿದರೆ ಸಾಕು ಎಂಬಂತಿದೆ.

ಇದು ಮೊದಲ ಬಾರಿಗೆ 1934ರ ನವೆಂಬರ್‌ನಲ್ಲಿ ಚಿತ್ರ ಎಂಬ ಮರಾಠಿ ಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದದ್ದು. ಅಲ್ಲದೇ ಇದು ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು’ ಎಂಬ ಕರ್ನಾಟಕ ಸರ್ಕಾರ ಮುದ್ರಿಸಿರುವ ಪುಸ್ತಕದ 17ನೇ ಸಂಪುಟದ 455ನೇ ಪುಟದಲ್ಲಿ ‘ಗಾಂಧಿಯವರು ಮಹಾತ್ಮರೇ?’ ಎಂಬ ಭಾಗದಲ್ಲಿ ಮುದ್ರಿತವಾಗಿದೆ. ನಾನು ಹೇಳಿದರೆ ಕೋಮುವಾದಿ ಅಂದರೂ ಅಚ್ಚರಿಯಿಲ್ಲ. ಅಥವಾ ನನ್ನ ಅಜ್ಜ ಗೋಡ್ಸೆಯಾಗಿದ್ದ ಅದಕ್ಕೆ ಗಾಂಧಿಯನ್ನು ವಿರೋಧಿಸುತ್ತಿದ್ದಾನೆ ಎಂದು ಎಡಪಂಥೀಯರು ಬಾಯಿ ಹರಿದುಕೊಳ್ಳಲಿಕ್ಕೂ ಸಾಕು. ಆದರೆ ಗೋಡ್ಸೆಗೂ ಅಂಬೇಡ್ಕರ್‌ಗೂ ಯಾವುದೇ ಸಂಬಂಧ ಇಲ್ಲವೆಂದು ಖಾತ್ರಿಪಡಿಸಿಕೊಂಡ ಮೇಲೆ ಅವರ ಪುಸ್ತಕದಿಂದಲೇ ಹೇಗೆ ಬಣ್ಣಿಸಿದ್ದಾರೆ ಎಂದು ಹೇಳಿದರೆ ನಿಜವಾದ ಗಾಂಧಿ ಹೇಗಿದ್ದರು ಎಂಬ ಕಲ್ಪನೆ ಬರಬಹುದು.

ಗಾಂಧಿಗಿಂತ ಮೊದಲೂ ಜನರು ಪ್ರಾಣವನ್ನೇ ಅರ್ಪಿಸಿದ್ದಾರೆ. ಗಾಂಧಿಯ ಸಮಕಾಲೀನರೂ ಇವರಿಗಿಂತ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಆದರೆ ಗಾಂಧಿ ಮಾತ್ರ ಮಹಾತ್ಮ ಏಕೆ? ಅವರು ತೊಡುವ ಬಟ್ಟೆಯಿಂದಲಾ? ಅಥವಾ ಇನ್ಯಾವುದಕ್ಕೆ? ಅಂಬೇಡ್ಕರ್‌ ಹೇಳುತ್ತಾರೆ: ‘ಒಬ್ಬ ವ್ಯಕ್ತಿ ಸೂಟ್‌ ಧರಿಸಿದರೆ ಅಥವಾ ಸಾಮಾನ್ಯ ಉಡುಪನ್ನು ಧರಿಸಿದರೆ ಜನರು ಅವನನ್ನು ನೋಡಲೂ ಇಷ್ಟಪಡುವುದಿಲ್ಲ. ಆದರೆ ಅದೇ ವ್ಯಕ್ತಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದರೆ, ಬೆತ್ತಲೆಯಾಗಿ ಓಡಾಡಿದರೆ, ಕೂದಲುಗಳನ್ನು ಉದ್ದವಾಗಿ ಬಿಟ್ಟರೆ, ಜನರನ್ನು ಬಯ್ಯುತ್ತಿದ್ದರೆ, ಚರಂಡಿಯ ಕೊಳಕು ನೀರನ್ನು ಕುಡಿಯುತ್ತಿದ್ದರೆ ಜನರು ಅವನ ಪಾದಗಳ ಮೇಲೆ ಬಿದ್ದು ಪೂಜಿಸುತ್ತಾರೆ. ಇಂಥ ಸಂದರ್ಭದಲ್ಲಿ ಗಾಂಧಿ ಮಹಾತ್ಮರಾದರೆ ಅಚ್ಚರಿಯೇನೂ ಇಲ್ಲ. ಬೇರೆ ಯಾವುದೇ ನಾಗರಿಕ ದೇಶಗಳಲ್ಲಿ ಇಂಥ ಇಂಥ ಅಭ್ಯಾಸಗಳನ್ನು ಅನುಸರಿಸಿದ್ದನ್ನು ನೋಡಿದ್ದರೆ ಜನರು ನಗುತ್ತಿದ್ದರು!’ ಎಂದಿದ್ದಾರೆ ಅಂಬೇಡ್ಕರ್‌.

ಸಮಸ್ಯೆ ಏನಾಗಿದೆ ಎಂದರೆ, ಯಾರಾದರೂ ಮೊದಲು ಏನನ್ನಾದರೂ ಹೇಳಿಬಿಟ್ಟರೆ, ಅದನ್ನು ಅವರ ಹೆಸರಿಗೇ ಪೇಟೆಂಟ್‌ ಮಾಡಿಬಿಡುವ ಚಾಳಿ ಭಾರತದಲ್ಲಿ ಕಾಣಬಹುದು. ಉದಾಹರಣೆಗೆ ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಎಂದರು ನಿಜ. ಆದರೆ ಅದು ಕಠೋಪನಿಷತ್ತಿನಲ್ಲಿ ‘ಉತ್ತಿಷ್ಠತ ಜಾಗೃತ ಪ್ರಾಪ್ಯವರಾನ್ಭೋಧತ,ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುಗಂರ್‍ ಪಥಸ್ತತ್ಕವಯೋ ವದಂತಿ’ ಎಂದಿದ್ದಾರೆ ಎಂಬುದನ್ನು ಮರೆತೇ ಬಿಟ್ಟಿದ್ದೇವೆ. ಹಾಗೇ ಸಂವಿಧಾನ ಎಂದರೆ ಅಂಬೇಡ್ಕರ್‌ ಅಷ್ಟೇ ಅಲ್ಲ, ಅದನ್ನು ಅವರೊಬ್ಬರೇ ಬರೆದಿಲ್ಲ. ಅವರ ಜತೆಗೆ ಒಂದು ದೊಡ್ಡ ತಂಡವೇ ಇತ್ತು. ಅದರ ಅಧ್ಯಕ್ಷ ಅಂಬೇಡ್ಕರ್‌ ಅಷ್ಟೇ. ಹಾಗೆ ನೋಡಿದರೆ ಸಂವಿಧಾನವನ್ನು ಮೊದಲು ಅಕ್ಷರಶಃ ಕೈಯಲ್ಲಿ ಬರೆದವರು ಅಂಬೇಡ್ಕರ್‌ ಅಲ್ಲ, ಬದಲಿಗೆ ಪ್ರೇಮ್‌ ಬಿಹಾರಿ ರೈಝಾದಾ! ನಮ್ಮ ಸಂವಿಧಾನದಲ್ಲಿನ ಎಷ್ಟೋ ಅಂಶಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ಪಡೆದುಕೊಂಡಿದ್ದು. ಹಾಗೇ, ಸತ್ಯ ಮಾತಾಡಬೇಕು ಅಥವಾ ಅಹಿಂಸೆ ಎಂದ ತಕ್ಷಣ ಗಾಂಧಿಯ ಕೋಲಿಗೆ ನೇತುಹಾಕಿಬಿಡುವುದಲ್ಲ. ಇವರಿಗಿಂತ ಮೊದಲು ಬುದ್ಧನೇ ಹೇಳಿದ್ದಾನೆ. ಬುದ್ಧನಿಗಿಂತ ಮೊದಲು ನಮ್ಮ ವೇದ-ಉಪನಿಷತ್ತುಗಳಲ್ಲಿ ಬಂದಿದೆ. ಆದರೆ ಈ ಯಾರೋ ಹೇಳಿದ ವಿಷಯವನ್ನು ಯಾರು ಯಾಕಾಗಿ ಬಳಸಿಕೊಂಡರು ಎಂಬುದರ ಮೇಲೆ ಅವರ ವ್ಯಕ್ತಿತ್ವವನ್ನು ಅಳೆಯಬಹುದು. ವಿವೇಕಾನಂದರು ಜನರನ್ನು ಎಬ್ಬಿಸಿದರು, ಸ್ವಾರ್ಥವಿರಲಿಲ್ಲ. ಅಂಬೇಡ್ಕರ್‌ ಅವರು ನಮಗಾಗಿ ಸಂವಿಧಾನವನ್ನು ಕೊಟ್ಟರು, ಸ್ವಾರ್ಥವಿರಲಿಲ್ಲ. ಆದರೆ, ಗಾಂಧಿಗೆ ಇದ್ದಿದ್ದು ಸ್ವಾರ್ಥ!

ಇದನ್ನು ಅಂಬೇಡ್ಕರ್‌ ಹೇಗೆ ಹೇಳುತ್ತಾರೆ, ಕೇಳಿ : ‘ಸಾವಿರಾರು ವರ್ಷಗಳ ಹಿಂದೆ ಭಗವಾನ್‌ ಬುದ್ಧ ಸತ್ಯ ಮತ್ತು ಅಹಿಂಸೆಯ ಬಗ್ಗೆ ಸಂದೇಶವನ್ನು ಜಗತ್ತಿಗೆ ನೀಡಿರಲಿಲ್ಲವೇ? ಸತ್ಯ ಮತ್ತು ಅಹಿಂಸೆಯನ್ನು ಗಾಂಧಿಯವರ ಸ್ವಂತ ಚಿಂತನೆಗಳೆಂದು ಪರಿಗಣಿಸಿ ದಡ್ಡಶಿಖಾಮಣಿಗಳು ಮತ್ತು ಜನ್ಮತಃ ಮೂರ್ಖರಾದವರನ್ನು ಬಿಟ್ಟು ಬೇರೆ ಯಾರೂ ಅವರಿಗೆ ಪ್ರಶಸ್ತಿಯನ್ನು ನೀಡುವುದಿಲ್ಲ.’ ‘ನಾವು ಅವರ ಉಪದೇಶ ಮತ್ತು ಪ್ರವಚನಗಳನ್ನು ಕೇಳಿದಾಗ ಅವರು ಇತರರ ಸರಕುಗಳನ್ನು ತಮ್ಮದನ್ನಾಗಿ ಮಾಡಿಕೊಂಡಿರುವುದು ಕಾಣಿಸುತ್ತದೆ.’ ಎಂದಿದ್ದಾರೆ. ಇವರ ಸ್ವಂತದ್ದು ಎಂದು ಏನೂ ಇಲ್ಲವಾಗಿರುವಾಗ, ಸತ್ಯ ಅಹಿಂಸೆಯಲ್ಲ ನಾಟಕಗಳು ಎಂದು ಹೇಳುವುದಕ್ಕೆ ಯಾರಿಗೇಕೆ ಹೆದರಬೇಕು?

ನೆಹರೂರನ್ನು ಮೊದಲ ಪ್ರಧಾನಿ ಮಾಡಿದ್ದರಿಂದ ಹಿಡಿದು, ಇವರು ತೆಗೆದುಕೊಂಡ ಅನೇಕ ನಿರ್ಧಾರಗಳು ಅವರ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದಕ್ಕೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅಂಬೇಡ್ಕರ್‌ ಎಷ್ಟು ಚೆನ್ನಾಗಿ ಹೇಳುತ್ತಾರೆ ನೋಡಿ: ‘ನಾನು ಗಾಂಧಿಯವರನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡಿದಾಗ, ಅವರ ಗುಣದಲ್ಲಿ ನನಗೆ ಪ್ರಾಮಾಣಿಕತೆ ಮತ್ತು ಗಾಂಭೀರ್ಯಕ್ಕಿಂತ ಕುತಂತ್ರವೇ ಹೆಚ್ಚಾಗಿರುವುದು ನನಗೆ ಮನದಟ್ಟಾಯಿತು. ತನ್ನ ಸಾಮರ್ಥ್ಯ‌ ಮತ್ತು ಚಾರಿತ್ರ್ಯಗಳಲ್ಲಿ ನಂಬಿಕೆ ಇರುವ ವ್ಯಕ್ತಿ ವಾಸ್ತವವನ್ನು ಧೈರ್ಯವಾಗಿ, ಪೌರುಷಯುಕ್ತನಾಗಿ ಎದುರಿಸುತ್ತಾನೆ. ವಿಶ್ವಾಸಘಾತುಕತನ ಮತ್ತು ಮೋಸ ಎಂಬುದು ದುರ್ಬಲರ ಅಸ್ತ್ರಗಳು. ಅದನ್ನು ಗಾಂಧಿ ಯಾವಾಗಲೂ ಉಪಯೋಗಿಸುತ್ತಿದ್ದರು.’ ಇದಕ್ಕಿಂತ ಇನ್ನೇನಾದರೂ ಬೇಕಾ? ಇದನ್ನೇ ನಾನು ಹೇಳಿದ್ದರೆ ನೂರಕ್ಕೆ ನೂರಷ್ಟು ಕೋಮುವಾದಿಯಾಗುತ್ತಿದ್ದೆ.

ಗಾಂಧಿ ಹಣ ಸಂಗ್ರಹಿಸುವುದಕ್ಕೆ ಏನೇನೆಲ್ಲ ಮಾಡಿದ್ದರು ಎಂಬುದನ್ನು ವಿವರಿಸುತ್ತಾ ಅಂಬೇಡ್ಕರ್‌ ಹೇಳುತ್ತಾರೆ: ‘ಸ್ವಲ್ಪ ವರ್ಷಗಳವರೆಗೆ ತಾನು ಗೋಖಲೆಯವರ ವಿನೀತ ಶಿಷ್ಯ ಎಂದು ಹೇಳಿಕೊಳ್ಳುತ್ತಿದ್ದರು. ಇದಾದ ಮೇಲೆ ಕೆಲ ವರ್ಷಗಳು ತಿಲಕರನ್ನು ಆರಾಧಿಸಿದರು. ನಂತರ ತಿಲಕರನ್ನೂ ದ್ವೇಷಿಸಿದರು. ತಿಲಕರ ಹೆಸರನ್ನು ಬಳಸಿಕೊಳ್ಳದೇ ಇದ್ದಿದ್ದರೆ 10 ಲಕ್ಷ ರೂ.ಗಳನ್ನು ಸ್ವರಾಜ್ಯ ನಿಧಿಗೆ ಸಂಗ್ರಹಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.’

ಅಷ್ಟೇ ಅಲ್ಲ, ಸರ್ವಧರ್ಮಗಳನ್ನು ಪ್ರೀತಿಸುತ್ತಿದ್ದರು ಎಂದೆಲ್ಲ ಈಗಿನ ಜಾತ್ಯತೀತವಾದಿಗಳು ಹೇಳುತ್ತಾರಲ್ಲ, ಅದಕ್ಕೆ ತದ್ವಿರುದ್ಧವಾಗಿದ್ದರು ಎಂದು ಅಂಬೇಡ್ಕರ್‌ ಬರಹಗಳೇ ಹೇಳುತ್ತದೆ: ‘ಗಾಂಧಿಯವರು ಕ್ರಿಶ್ಚಿಯನ್‌ ಧರ್ಮಕ್ಕೆ ಕಟ್ಟಾ ವಿರೋಧಿಯಾಗಿದ್ದರು. ಪಾಶ್ಚಿಮಾತ್ಯರನ್ನು ಮೆಚ್ಚಿಸಲು, ಬಿಕ್ಕಟ್ಟಿನ ಸಮಯದಲ್ಲಿ ಬೈಬಲ್ಲಿನಿಂದ ಉದ್ಧರಣಗಳನ್ನು ನೀಡುತ್ತಿದ್ದರು.’

ಅಲ್ಲ ಸ್ವಾಮಿ, ಅಂಬೇಡ್ಕರ್‌ ಬೌದ್ಧಕ್ಕೆ ಶರಣಾದಂತೆ, ಗಾಂಧಿಯೂ ಕ್ರಿಶ್ಚಿಯನ್‌ ಆಗಿ ಮತಾಂತರವಾಗುವುದಕ್ಕೆ ಯಾರೇನು ತಡೆದಿರಲಿಲ್ಲ. ಇಂಥವರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎನ್ನುವುದು ಮೂರ್ಖತನವೇ ಅಲ್ಲವೇ?

ಮಹಾತ್ಮಾ ಗಾಂಧಿ ಸ್ವಾತಂತ್ರ್ಯ ತಂದು ಕೊಡಲು ಏನು ಮಾಡಿದ್ದಾರೋ ಗೊತ್ತಿಲ್ಲ, ಆದರೆ, ಧರ್ಮದ ಹೆಸರಲ್ಲಿ ಕೆಲ ನೀಚ ರಾಜಕಾರಣವನ್ನಂತೂ ಮಾಡಿದ್ದಾರೆ ಎಂಬುದು ಅಂಬೇಡ್ಕರ್‌ ಅವರ ಬರಹಗಳಿಂದ ಪದೇ ಪದೆ ಸಾಬೀತಾಗುತ್ತದೆ. ಬಹುಶಃ ಇವರ ನೀಚತನವೇ ಇನ್ನೂ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿರಬೇಕು. ಇದಕ್ಕೂ ಅಂಬೇಡ್ಕರ್‌ ಬಹಳ ನೊಂದು ಬರೆದಂಥದ್ದನ್ನು ಓದಿಬಿಟ್ಟರೆ ಗಾಂಧಿಯ ಬಗ್ಗೆ ಇನ್ನು ಹೇಳುವುದಕ್ಕೇನೂ ಉಳಿದಿಲ್ಲ ಎನಿಸಿಬಿಡುತ್ತದೆ. ಅವರು ಬರೆದಿರುವುದು ಹೀಗೆ: ‘ದುಂಡುಮೇಜಿನ ಪರಿಷತ್ತಿನಲ್ಲಿ ಅವರು(ಗಾಂಧಿ) ಜನರಿಗೆ ಹೀಗೆಂದರು: ‘‘ದಲಿತವರ್ಗಗಳವರ ಪ್ರತಿನಿಧಿಗಳು ಮುಂದಿಡುವ ಬೇಡಿಕೆಗಳಿಗೆ ನಾನು ಯಾವುದೇ ಆಕ್ಷೇಪಣೆಯನ್ನೂ ಮಾಡುವುದಿಲ್ಲ.’’ ಆದರೆ ಬೇಡಿಕೆ ಇಟ್ಟ ತಕ್ಷಣ ತಾವು ನೀಡಿದ್ದ ಆಸ್ವಾಸನೆಯನ್ನು ಮರೆತರು. ನಾನು ಅವರ ಈ ವರ್ತನೆಯನ್ನು ದಲಿತ ವರ್ಗಕ್ಕೆ ಮಾಡಿದ ವಂಚನೆಯೆಂದು ಕರೆಯುತ್ತೇನೆ. ಅವರು ಮುಸ್ಲಿಮರ ಬಳಿಗೆ ಹೋಗಿ, ದಲಿತ ವರ್ಗಗಳ ಬೇಡಿಕೆಯನ್ನು ಮುಸ್ಲಿಮರು ವಿರೋಧಿಸಿದರೆ, ಮುಸ್ಲಿಮರ 14 ಬೇಡಿಕೆಗಳಿಗೆ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದರು.’ ಎಂದಿದ್ದಾರೆ ಅಂಬೇಡ್ಕರ್‌. ಇದನ್ನು ಹೇಳಿದ ಮೇಲೆ ಅಂಬೇಡ್ಕರ್‌ ಅವರು ಬಹಳ ಆಕ್ರೋಶದಿಂದ ‘ಎಂಥ ನೀಚನೂ ಇಂಥ ಕೆಲಸವನ್ನು ಮಾಡುವುದಿಲ್ಲ. ಇದು ಗಾಂಧಿಯವರ ದ್ರೋಹಚಿಂತನೆಯ ಒಂದು ಪ್ರಕರಣ’ ಎಂದಿದ್ದಾರೆ.

ಇದಾದ ಮೇಲೆ ನನಗನಿಸಿದ್ದು, ಹಿಂದೂ ಮುಸ್ಲಿಮರು ಇವತ್ತು ಕಿತ್ತಾಡುತ್ತಿರುವುದಕ್ಕೆ ಇವರೇ ಕಾರಣರಾಗಿಬಿಟ್ಟರು ಎಂದು. ಅಂಬೇಡ್ಕರ್‌ರ ಅಭಿಪ್ರಾಯವೂ ಇದೇ! ಮತ್ತು ಅಷ್ಟೇ ನಿರ್ಭೀತರಾಗಿ ಅವರು ‘ಹಿಂದೂ ಮುಸ್ಲಿಂ ನಡುವಿನ ಹಗೆತನಕ್ಕೆ ಗಾಂಧಿಯವರ ಮೋಸಗಾರಿಕೆಯ ವರ್ತನೆಯೇ ಕಾರಣ’ ಎಂದು ಇತಿಹಾಸ ಅಳಿಸಲಾಗದಂತೆ ಬರೆದು ಹೋಗಿದ್ದಾರೆ.

ಸಾವರ್ಕರ್‌ ಯಾವಾಗಲೋ ಬ್ರಿಟಿಷರಿಗೆ ಕ್ಷಮಾದಾನ ಕೋರಿ ಪತ್ರ ಬರೆದರು ಎಂದು ಅದೆಂಥದ್ದೋ ಗೀಚಿದ್ದನ್ನು ತಂದು ತೋರಿಸಿ, ಸಾವರ್ಕರ್‌ ಹೇಡಿ ಎಂದರೆ, ಗಾಂಧಿಯ ಲೀಲೆಗಳನ್ನು ಮುಂದಿಟ್ಟು ‘ಇಂಥ ಕೆಲಸ ಮಾಡುವವನಿಗೆ ಏನಂತ ಕರೆಯುತ್ತೀರ’ ಎಂದೇ ಕೇಳಬೇಕಾಗುತ್ತದೆ. ಮಹಾತ್ಮರಾದರೆ ಮನೆಯಲ್ಲಿಟ್ಟುಕೊಳ್ಳಿ, ರಾಷ್ಟ್ರಪಿತನಾದರೆ ನಿಮ್ಮ ಪಿತನ ಪಕ್ಕವೇ ಫೋಟೊ ಇಟ್ಟು ಪೂಜೆ ಮಾಡಿ. ಆದರೆ, ಸತ್ಯ ಹೇಳಬೇಡ ಎನ್ನಲು ಯಾರಿಗೂ ಯಾವುದೇ ಹಕ್ಕಿಲ್ಲ. ಸತ್ಯವಾದರೆ ಹೇಳಲೇಬೇಕು. ನೆಹರೂಗೆ ಮಕ್ಕಳೆಂದರೆ ಇಷ್ಟ ಅದಕ್ಕೆ ನವೆಂಬರ್‌ 14ನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆಂಬ ಕಟ್ಟು ಕಥೆಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದೆ ಯುವ ಪೀಳಿಗೆ. ಸತ್ಯ ಹೇಳಲು ಬಿಡಿ. ಇದೇ ಗಾಂಧಿ ಆಶಯ!

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya