ಮಿಣಿ ಮಿಣಿ ಮಿನುಗುತ್ತಿರುವ ಪೊಲೀಸರೇ, ಥ್ಯಾಂಕ್ಸ್‌!

ನನ್ನ ಸ್ನೇಹಿತನೊಬ್ಬ ಇದ್ದಾನೆ. ಅವನಿಗೆ ಸ್ವಲ್ಪ ಕಿವುಡು. ಮಶೀನ್‌ ಹಾಕಿಕೊಳ್ಳುತ್ತಾನೆ ಅಂದ ಮೇಲೆ ಸ್ವಲ್ಪ ಜಾಸ್ತಿಯೇ ಕಿವುಡು ಬಿಡಿ. ಇತ್ತೀಚೆಗೆ ಬೆಂಗಳೂರು ಪೊಲೀಸರು ಸುರಕ್ಷಾ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು. ಇದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ, ಆಪತ್ತಿನ ಕಾಲದಲ್ಲಿ ಕೆಂಪು ಗುಂಡಿಯನ್ನು ಒತ್ತಿದರೆ ಆಯ್ತು, ಕೇವಲ ಏಳು ನಿಮಿಷದಲ್ಲಿ ಪೊಲೀಸರು ನೀವಿರುವ ಜಾಗದಲ್ಲಿರುತ್ತಾರೆ. ಆಂಧ್ರದಲ್ಲಿ ಪ್ರಿಯಾಂಕಾ ರೆಡ್ಡಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂದರ್ಭದಲ್ಲಿ, ಬೆಂಗಳೂರಿನ ಮಹಿಳೆಯರನ್ನು ರಕ್ಷಿಸುವುದಕ್ಕೆಂದು ಈ ಆ್ಯಪ್‌ ಪರಿಚಯಿಸಲಾಯಿತು. ಇದನ್ನು ಜನರು ಇನ್‌ಸ್ಟಾಲ್‌ ಮಾಡಿ ಜನರು ಪರೀಕ್ಷಿಸುತ್ತಿದ್ದರು. ಅದರಲ್ಲಿ ನನ್ನ ಕಿವುಡ ಫ್ರೆಂಡ್‌ ಸಹ ಒಬ್ಬ. ಅವನು ಅವನ ಅಮ್ಮನ ಫೋನ್‌ಗೆ ಇನ್‌ಸ್ಟಾಲ್‌ ಮಾಡಿ, ಕೆಂಪು ಗುಂಡಿಯನ್ನು ಒತ್ತಿದ್ದಾನೆ. ಮುಂದೇನು ತಿಳಿದಿಲ್ಲ. ಹಾಗೇ ಫೋನ್‌ ಇಟ್ಟು ಹೋದ. ಕಿವಿಗೆ ಮಶೀನ್‌ ಹಾಕಿಕೊಳ್ಳದ ಕಾರಣ, ವಾಪಸ್‌ ಆ ನಂಬರಿಗೆ ಪೊಲೀಸರು ಮೂರು ಬಾರಿ ಕರೆ ಮಾಡಿದ್ದರು. ಇವನಿಗೆ ಕೇಳಲಿಲ್ಲ. ಸುಮಾರು ಏಳೆಂಟು ನಿಮಿಷಕ್ಕೆ ಎರ್ಟಿಗಾ ಕಾರ್‌ನಲ್ಲಿ ಒಂದಿಬ್ಬರು ಪೇದೆಗಳು ಮನೆ ಕೆಳಗೆ ಬಂದು ಹುಡುಕುತ್ತಿದ್ದಾರೆ. ಇವರ ಮನೆಯ ಮಾಲೀಕರನ್ನು ಮಾತಾಡಿಸುತ್ತಿದ್ದರು. ಹೆದರಿದ ಹುಡುಗ ಅಮ್ಮನನ್ನು ಮುಂದೆ ಬಿಟ್ಟು, ಟೆಸ್ಟ್‌ ಮಾಡಲು ಹಾಗೆ ಅಮ್ಮನೇ ಮಾಡಿದ್ದಳೆಂದು ಹೇಳಿಸಿದ. ಏನಮ್ಮಾ, ನಮ್‌ ಫೋನ್‌ ಎತ್ತಬೇಕಲ್ವಾ? ಸುಮ್ಮನೆ ಬಟ್‌ ಒತ್ತಿ, ಕಂಟ್ರೋಲ್‌ ರೂಮಿಂದ ಕಾಲ್‌ ಬಂದ ಮೇಲೂ ಏನೂ ಉತ್ತರ ಕೊಡದಿದ್ದರೆ ನಾವು ಏನೆಂದುಕೊಳ್ಳಬೇಕು? ಎಂದು ಪ್ರಶ್ನಿಸಿ ವಾಪಸಾಗಿದ್ದಾರೆ.

 

ಹೌದು. ಪೊಲೀಸರ ವ್ಯವಸ್ಥೆ ಸಿನಿಮಾದಲ್ಲಿ ತೋರಿಸಿದ ಹಾಗಿಲ್ಲ. ಎಲ್ಲ ಮುಗಿದ ಮೇಲೆ ಜೀಪ್‌ ತಂದು ನಿಲ್ಲಿಸುವ ಹಳೆ ನೀರು ಕೊಚ್ಚಿಕೊಂಡು ಹೋಗಿದೆ. ಈಗಿರುವುದು ಏನಿದ್ದರೂ ಹೊಸ ನೀರು. ಯುವ ಐಪಿಎಸ್‌ ಅಧಿಕಾರಿಗಳು, ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್‌ ಇನ್ಸ್‌ಪೆಕ್ಟರ್‌ಗಳು. ಇದಕ್ಕೆ ಉದಾಹರಣೆಯೇ ಈಗ ಬದಲಾಗಿರುವ ಪೊಲೀಸ್‌ ವ್ಯವಸ್ಥೆ. ಇದನ್ನು ಎಷ್ಟು ಜನರು ಗಮನಿಸಿದ್ದೀರಾ?

 

ಹೌದು, ಕೆಲವರಿಗೆ ಥ್ಯಾಂಕ್ಸ್‌ ಹೇಳುವುದಕ್ಕೇ ಆಗುವುದಿಲ್ಲ. ಅದಕ್ಕೆ ಥ್ಯಾಂಕ್‌ಲೆಸ್‌ ಜಾಬ್‌ ಎನ್ನುತ್ತಾರೆ. ಯೋಧರು, ಪೊಲೀಸರು, ವೈದ್ಯರು, ಬಸ್ಸಿನ ಡ್ರೈವರ್‌ಗಳು ಹೀಗೆ… ಇವರೆಲ್ಲ ಇಲ್ಲದೇ ಜಗತ್ತು ನಡೆಯೋದಿಲ್ಲ. ಆದರೆ, ಕೆಲಸವಾದಮೇಲೆ ಯಾರೂ ಥ್ಯಾಂಕ್ಸ್‌ ಸಹ ಹೇಳೋದಿಲ್ಲ. ಅವರ ಕೆಲಸವನ್ನೂ ಗುರುತಿಸೋದಿಲ್ಲ. ಆ ತಪ್ಪನ್ನು ನಾವು ಮಾಡುವುದು ಬೇಡ. ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕೆನಿಸಿದ್ದು, ಪೊಲೀಸರ ಇತ್ತೀಚಿನ ನಡೆಯಿಂದ.

 

ಬೆಂಗಳೂರು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಅವರು ಇತ್ತೀಚೆಗೆ ಒಂದು ಟ್ವೀಟ್‌ ಮಾಡಿದ್ದರು. 30 ನಿಮಿಷದಲ್ಲಿ ಡೆಲಿವರಿ ಮಾಡಬೇಕೆಂದು ಸಿಗ್ನಲ್‌ಗಳನ್ನೆಲ್ಲ ಜಂಪ್‌ ಮಾಡಿ ಸ್ವಲ್ಪ ತಡವಾಗಿ ತಂದುಕೊಡುವ ಹುಡುಗನಿಂದ ಉಚಿತ ಪಿಜ್ಜಾ ತಿನ್ನುವುದಕ್ಕೆ ನಮಗೆ ಮನಸ್ಸಾದರೂ ಬರುತ್ತದೆಯೇ? ಇಂಥ ಡೆಲಿವರಿ ಹುಡುಗರ ಪ್ರಾಣ ಉಳಿಸುವುದಕ್ಕೆ ಪಿಜ್ಜಾದವರು 40 ನಿಮಿಷ ಡೆಲಿವರಿ ಸಮಯ ನಿಗದಿಪಡಿಸುವುದರ ಬಗ್ಗೆ ಗಮನಹರಿಸುತ್ತಿದ್ದೇನೆ ಎಂದರು.

 

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಭಾಸ್ಕರ್‌ ರಾವ್‌ ಅವರಿಗೆ ಯಾರೂ ದೂರು ನೀಡಿಲ್ಲ, ಎಫ್‌ಐಆರ್‌ ಆಗಿಲ್ಲ. ಆದರೂ, ನಮ್ಮಂತೆಯೇ ಎಲ್ಲರ ಜೀವವೂ ಎಂದು ತಿಳಿದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ರಿಪ್ಪೈ ಮಾಡಿದ ಸ್ವಿಗ್ಗಿ ನಮ್ಮದೇನೂ ಅಂಥ ಟ್ರಾಫಿಕ್‌ ಉಲ್ಲಂಘನೆಯಿಲ್ಲ ಎಂದಿತು. ಬಹಳ ಕೂಲ್‌ ಆಗಿದ್ದ ಭಾಸ್ಕರ್‌ ರಾವ್‌ ಅವರು ಅಷ್ಟೇ ಖಾರವಾಗಿ, ನೀವೇ ಅತ್ಯಂತ ಹೆಚ್ಚು ಟ್ರಾಫಿಕ್‌ ಉಲ್ಲಂಘನೆಗಳನ್ನು ಮಾಡುವುದು. ಹೀಗೆ ಉಲ್ಲಂಘನೆ ಮಾಡಿದ ನಿಮ್ಮ ಹುಡುಗರು ನಮ್ಮನ್ನು ಬಿಟ್ಟುಬಿಡಿ ಎಂದು ಪೊಲೀಸರ ಬಳಿ ಬೇಡುತ್ತಿರುತ್ತಾರೆ. ನೆನಪಿಡಿ ಇನ್ನೊಮ್ಮೆ ಏನಾದರೂ ಸ್ವಿಗ್ಗಿ ಹುಡುಗರಿಗೆ ರಸ್ತೆ ಅಪಘಾತವಾದರೆ, ನೀವು ಕಂಬಿ ಎಣಿಸಬೇಕಾಗುತ್ತದೆ ಎಂದರು.

 

ಬಹುಶಃ ಹೀಗೆ, ತಮ್ಮ ವೈಯಕ್ತಿಕ ಖಾತೆಯಿಂದ ಖಡಕ್‌ ಆಗಿ ಉತ್ತರ ಕೊಟ್ಟ ಮತ್ತೊಬ್ಬರು ಈ ಹಿಂದೆ ಇರಲಿಕ್ಕಿಲ್ಲ. ಅಂದರೆ, ಈಗಿನ ಪೊಲೀಸ್‌ ಅಧಿಕಾರಿಗಳಿಗೆ ಜನರ ಬಗ್ಗೆ ನಿಜವಾಗಿಯೂ ಕಾಳಜಿಯಿರುವುದು ಸ್ಪಷ್ಟವಾಗುತ್ತದೆ.

 

ಕೇವಲ ಒಂದೆರಡು ವಾರದ ಸುದ್ದಿಯನ್ನು ನೋಡಿದರೂ ಸಾಕು, ನಮ್ಮ ಬೆಂಗಳೂರು ಪೊಲೀಸರು ಎಷ್ಟು ಕೂಲ್‌ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಐತಿಹಾಸಿಕ ಸಿನಿಮಾ ತಾನಾಜಿ ಬಿಡುಗಡೆಯಾಗಿತ್ತು. ಬೆಂಗಳೂರು ಉತ್ತರ ಭಾಗದ ಡಿಸಿಪಿ ಶಶಿಕುಮಾರ್‌ ಐಪಿಎಸ್‌ ಸೇರಿ ಆ ಭಾಗದ ಪೊಲೀಸ್‌ ಅಧಿಕಾರಿಗಳಿಗೆ ಒರಾಯನ್‌ ಮಾಲ್‌ನಲ್ಲಿ ತಾನಾಜಿ ಚಿತ್ರ ವೀಕ್ಷಣೆಯನ್ನು ಏರ್ಪಡಿಸಲಾಗಿತ್ತು. ಅಲ್ಲದೇ, ಅದಾದಮೇಲೆ ಖ್ಯಾತ ಸಂಗೀತಗಾರ್ತಿ ವಸುಂದರಾ ರಾಜೆ ಅವರು ಝಂಬೆ ನುಡಿಸುವುದನ್ನೂ ಹೇಳಿಕೊಟ್ಟರು.

 

ಇದನ್ನೆಲ್ಲ ನಾವು ಮುಂಚೆ ನೋಡಲಾಗುತ್ತಿತ್ತಾ? ನಾನು ಸಣ್ಣವನಿದ್ದಾಗ, ಊಟ ಮಾಡದಿದ್ದರೆ, ದೊಡ್ಡವರ ಮಾತು ಕೇಳದಿದ್ದರೆ, ಹೆಚ್ಚು ಹಠ ಮಾಡುತ್ತಿದ್ದರೆ ಅಲ್ನೋಡು ಪೊಲೀಸ್‌ ಬಂದ. ನಿನ್‌ ಎತ್ಕೊಂಡ್‌ ಹೋಗ್ತಾನೆ, ಜೈಲಿಗೆ ಹಾಕ್ತಾನೆ, ಹೊಡೀತಾನೆ ಎಂಬುದನ್ನೆಲ್ಲ ಹೇಳಿ, ಪೊಲೀಸ್‌ ಎಂದರೆ ನಮಗೆಲ್ಲ ಗುಮ್ಮ ಎಂಬಂತೆ ಮಾಡಿಬಿಟ್ಟಿದ್ದರು. ಈಗ ಜನಸ್ನೇಹಿ ಪೊಲೀಸ್‌ ಎಂಬ ಪರಿಕಲ್ಪನೆ ಹುಟ್ಟಿಕೊಂಡ ಮೇಲೂ ಜನರು ಮಾತ್ರ ತಮ್ಮ ನಿಲುವನ್ನು ಬದಲಾಯಿಸಿಕೊಂಡಿರಲಿಲ್ಲ. ತಪ್ಪು ಮಾಡಿರುವವನಿಗಿಂತ ತಪ್ಪು ಮಾಡದವನೇ ಪೊಲೀಸ್‌ ಮಾತಾಡಿಸಿದರೆ ಹೆದರುತ್ತಿದ್ದ! ಈಗ ಅದೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿರುವುದನ್ನು ನೋಡಬಹುದು.

 

ಸಿನಿಮಾದಲ್ಲಿ ತೋರಿಸುವ ಹಾಗೆ, ಪೊಲೀಸರು ದಡ್ಡರೂ ಅಲ್ಲ. ಈ ಸಮಯದಲ್ಲಿ ಬಹಳವಾಗಿ ಕಾಡುವವರು ಐಪಿಎಸ್‌ ಮಾಜಿ ಅಧಿಕಾರಿ ಅಣ್ಣಾಮಲೈ ಅವರು. ನಮ್ಮ ಪೊಲೀಸ್‌ ಸಿಬ್ಬಂದಿ ಹೆಚ್ಚು ಓದಿಕೊಂಡಿರಬೇಕು ಎಂಬ ಉದ್ದೇಶದಿಂದ ಬೆಂಗಳೂರು ದಕ್ಷಿಣ ವಿಭಾಗದ 17 ಪೊಲೀಸ್‌ ಠಾಣೆಗಳಲ್ಲಿ ಗ್ರಂಥಾಲಯ ತೆರೆದಿದ್ದರು. ಇದಕ್ಕೆ ಪುಸ್ತಕಗಳನ್ನು ದಾನ ಮಾಡಿ ಎಂದಾಗ, ಒಂದೇ ಸಲಕ್ಕೆ 700 ಪುಸ್ತಕಗಳು ಬಂದಿದ್ದವು. ಇದು ಪೊಲೀಸರು ಎಷ್ಟು ಬಳಸಿಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು. ಆದರೆ, ಒಬ್ಬ ಮೇಲಧಿಕಾರಿಯಾಗಿ ಅಣ್ಣಾಮಲೈ ಒಂದು ಪ್ರಯತ್ನವನ್ನಂತೂ ಮಾಡಿರಲ್ಲ. ಹೀಗೂ ಯಾರ್‌ ಮಾಡ್ತಾರೆ ಸ್ವಾಮಿ?

 

ಬರೀ ಇಷ್ಟನ್ನೇ ಮಾಡಿಕೊಂಡಿದ್ದರೆ ಪೊಲೀಸರು ದಾರಿ ತಪ್ಪುತ್ತಿದ್ದಾರೆ ಎನ್ನಬಹುದಿತ್ತು. ಏಕೆಂದರೆ, ನಮ್ಮಂಥ ಸುದ್ದಿ ಮಾಧ್ಯಮಗಳಿಗೆ ಪೊಲೀಸರು ಕೆಲಸ ಮಾಡಿದರೂ ಸುದ್ದಿ, ಮಾಡದಿದ್ದರೂ ಸುದ್ದಿ. ಆದರೆ, ಪೊಲೀಸರು ಸಿನಿಮಾ ನೋಡುತ್ತಾ ಕರ್ತವ್ಯ ಮರೆಯಲಿಲ್ಲ. ಮೊನ್ನೆ ಬೆಂಗಳೂರಿನಲ್ಲಿ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಎಲ್ಲೂ ಅವಘಢವಾಗದಂತೆ ತಡೆದದ್ದು ಸುಲಭದ ಕೆಲಸವಾಗಿರಲಿಲ್ಲ. ನೇರ ರಸ್ತೆಗೆ ಇಳಿದ ಐಪಿಎಸ್‌ ಅಧಿಕಾರಿಗಳು(ಸಹಜವಾಗಿ ಇವರು ಮಾಧ್ಯಮಕ್ಕೆ ವರದಿ ಕೊಡುವುವವರಷ್ಟೇ ಆಗಿರುತ್ತಾರೆ) ಜನರ ಜತೆಗೆ ಮಾತಾಡಿ, ಸಿಎಎ ಎಂದರೇನು? ಅದರಿಂದ ಯಾರಿಗೂ ತೊಂದರೆ ಇಲ್ಲವೆಂದು ಧೈರ್ಯವಾಗಿ ಹೇಳಿದ್ದಕ್ಕೆ ಪ್ರತಿಭಟನಾಕಾರರು, ಯೇ ಸಹಿ ಬಾತ್‌ ಹೈ ಎಂದು ವಾಪಸ್‌ ಹೋಗಿರುವುದನ್ನೂ ನೋಡಿದ್ದೇವೆ. ಗಲಭೆ ಮಾಡುವ ಉದ್ದೇಶದಿಂದ ಬಂದ ಮಹಿಳೆಗೆ, ನೀವೇನೋ ಜನರನ್ನು ರೊಚ್ಚಿಗೆಬ್ಬಿಸಿ ಹೋಗುತ್ತೀರ, ಆದರೆ ನಾಳೆ ನಿಮ್ಮಿಂದ ಕೇಸ್‌ ಬೀಳುವುದು ಈ ಪಾಪದ ಯುವಕರ ಮೇಲೆ. ಇಲ್ಲಿಂದ ಹೋದರೆ ಸರಿ ಎಂದು ಗದರಿಯೂ ಸಿಎಎ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಸೌಮ್ಯವಾಗಿ ಮಾತನ್ನೂ ಆಡಿದರು, ಗದರಬೇಕಾದ ಕಡೆ ಗದರಿದರು, ಲಾಠಿ ಬೀಸಿದರೆ ಮಾತ್ರ ನಮಗೆ ಅರ್ಥವಾಗುತ್ತೆ ಎಂಬುವವರಿಗೆ ಅದನ್ನೂ ತೋರಿಸಿದರು. ಒಟ್ಟಾರೆಯಾಗಿ, ನಗರದಲ್ಲಿ ಶಾಂತಿ ಕಾಪಾಡುವುದೇ ನಮ್ಮ ಉದ್ದೇಶ ಎಂದು ಪಣತೊಟ್ಟಂತಿತ್ತು.

 

ಒಳ್ಳೆಯ ಮಾತಿನಲ್ಲಿ ಬುದ್ಧಿ ಕಲಿಯದೇ ಪ್ರಭಾವಿ ನಾಯಕರ ಕೊಲೆ ಸಂಚು ರೂಪಿಸಿದ ಆರೋಪಿತ ಎಸ್‌ಡಿಪಿಐನ ಆರು ಜನರನ್ನು ಬಂಧಿಸಿದ್ದು ಒಂದು ಕಡೆಯಾದರೆ, ಸೊಂಟದಲ್ಲಿ ಇಟ್ಟುಕೊಂಡಿರುವ ಗನ್‌ ಫೋಟೋಶೂಟ್‌ ಮಾಡುವುದಕ್ಕಲ್ಲ, ನಿಜವಾಗಿ ಶೂಟ್‌ ಮಾಡುವುದಕ್ಕೆ ಎಂದು ಮಂಗಳೂರಿನಲ್ಲಿ ಸಾಬೀತು ಮಾಡಿದ್ದಾರೆ. ಅಷ್ಟೇ ಅಲ್ಲ, ಬಾಂಬ್‌ ಇಟ್ಟವನು ಯಾವುದೇ ಧರ್ಮದವನಾದರೂ ಜೈಲಿಗಟ್ಟುತ್ತೇವೆ ಎಂಬುದನ್ನು ಬೆಂಗಳೂರು-ಮಂಗಳೂರು ಪೊಲೀಸರು ಒಟ್ಟಾಗಿ ತೋರಿಸಿಕೊಟ್ಟರು.

 

ಇಷ್ಟೆಲ್ಲ ಮಾಡಿದ ಇವರ ಕಾರ್ಯಾಚರಣೆಯೇ ನಕಲಿ ಎಂದು ಮಿಣಿ ಮಿಣಿ ಸ್ವಾಮಿ ಹೇಳಬಹುದು ಅಥವಾ ಅವರು ಮಾಡುವ ಎಲ್ಲ ಕೆಲಸಕ್ಕೂ ಅಡ್ಡಿತಂದೊಡ್ಡುತ್ತಿದ್ದಾರೆ. ಬದಲಿಗೆ, ‘ಹೌದಪ್ಪಾ, ನಾವೆಲ್ಲ ಮನೆಯಲ್ಲಿ ಕಾರ್ಡ್ಸ್ ಆಡುತ್ತಾ, ಎಣ್ಣೆ ಹೊಡೆಯುತ್ತಾ ಇದ್ದಾಗ, ಇನ್ಯಾವ ನಟಿಯನ್ನು ಮದುವೆಯಾಗೋಣ ಎಂದು ಆಲ್ಪಂ ನೋಡುತ್ತಿದ್ದಾಗ, ಪೊಲೀಸರು ಅವರವರ ಧರ್ಮಪತ್ನಿಯನ್ನೇ ಬಿಟ್ಟು ಬಂದು ರಕ್ಷಣೆ ನೀಡಿದರಲ್ಲ’ ಎಂದು ಒಂದು ಮಾತು ಯಾವ ಸ್ವಾಮಿಯ ಬಾಯಲ್ಲೂ ಬರುವುದಿಲ್ಲ.

 

ಹೌದು, ಇವರ ಕೆಲಸಗಳೆಲ್ಲ ಒಂಥರಾ ಹೈವೇ ರಸ್ತೆಯಲ್ಲಿ ಊರು ತೋರಿಸುವ ಬೋರ್ಡ್‌ ಇದ್ದಂತೆಯೇ. ಎಲ್ಲರೂ ನೋಡಿ ಮುಂದೆ ಸಾಗುತ್ತಿರುತ್ತಾರೆ, ಊರು ಸೇರುತ್ತಾರೆ, ಗುರಿ ಮುಟ್ಟುತ್ತಾರೆ. ಬೋರ್ಡ್‌ ಮಾತ್ರ ಇದ್ದಲ್ಲೇ ಇರುತ್ತದೆ. ಯಾರೂ ಥ್ಯಾಂಕ್ಸ್‌ ಹೇಳುವುದಿಲ್ಲ. ಥ್ಯಾಂಕ್ಸ್‌ ಹೇಳಲಿಲ್ಲ ಎಂಬ ಮಾತ್ರಕ್ಕೆ ಮೈಸೂರಿಗೆ ದಾರಿ ತೋರುವ ಬೋರ್ಡ್‌ ಮಂಗಳೂರಿಗೋ ಮುಂಬೈಗೋ ದಾರಿ ತೋರಿದರೆ ಆಗುವ ಅನಾಹುತ ನೆನಪಿಸಿಕೊಳ್ಳಿ?! ಹಾಗೇ ಪೊಲೀಸರು, ಇಂಥ ಮಿಣಿ ಮಿಣಿ ರಾಜಕಾರಣಕ್ಕೆ ಬೇಸತ್ತು ‘ಯಾವ ಬೋ*ಮಗ ಬಾಂಬ್‌ ಇಟ್ರೆ ನಂಗೇನು? ಅದರಲ್ಲಿ ಪಾಂಡ್ಸ್‌ ಪೌಡರ್ರಿದೆಯೋ, ಮಿಣಿ ಮಿಣಿ ಪೌಡರ್‌ ಇದೆಯೋ ಎಂದು ಮಿಣಿ ಮಿಣಿ ಸ್ವಾಮಿ ಹೇಳಿದ ಮೇಲೆ ನೋಡಿದರಾಯ್ತು’ ಎಂದುಕೊಂಡು ಸುಮ್ಮನಾದರೆ, ಪರಿಸ್ಥಿತಿ ಹೇಗಿರುತ್ತಿತ್ತು ಊಹಿಸಿಕೊಳ್ಳಬಲ್ಲಿರಾ? ಅವತ್ತು ಮಂಗಳೂರು ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಗನ್‌ಹೌಸ್‌ ಒಳಗೆ ನುಗ್ಗಿ ಗನ್‌ ಮತ್ತು ಗುಂಡುಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಹೋದಾಗ, ‘ಬಂದ ಪ್ರತಿಭಟನಾಕಾರರು ಸಂನ್ಯಾಸಿಗಳೂ ಇರಬಹುದು, ಇವರು ಕುಂಭ ಮೇಳಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವವರಿರಬಹುದು. ಹಾಗಾಗಿ ಮಿಣಿ ಮಿಣಿ ಸ್ವಾಮಿ ವೀಡಿಯೋ ಬಿಟ್ಟ ಮೇಲೆ ನೋಡೋಣ’ ಎಂದುಕೊಂಡು ಸುಮ್ಮನಿದ್ದರೆ ಏನಾಗುತ್ತಿತ್ತು ಊಹಿಸಿ?

 

ನಿಮಗೆ ಬೇಕೋ ಬೇಡವೋ, ಇವರು ಇವರ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈಗಂತೂ ಯುವ ಪೊಲೀಸ್‌ ಅಧಿಕಾರಿಗಳು ಮೊದಲಿಗಿಂತ ಫಾಸ್ಟ್‌ ಆಗಿದ್ದಾರೆ, ಬೈಕ್‌ ರೈಡ್‌ ಟ್ರಿಪ್‌ ಹೋಗುತ್ತಾರೆ, ಚಿತ್ರಕಲೆಯನ್ನೂ ಮಾಡುತ್ತಾರೆ, ಕೊಲೆ ಮಾಡಿದವನನ್ನೂ ಹಿಡಿಯುತ್ತಾರೆ.

 

ನಮ್ಮ ಯೋಗ್ಯತೆಗೆ ಇವರಿಗೆ ಬೇರೇನೂ ಕೊಡುವುದಕ್ಕಂತೂ ಆಗಲ್ಲ. ಆದರೆ, ಒಂದು ಥ್ಯಾಂಕ್ಸ್‌ ಆದರೂ ಹೇಳಬಹುದಲ್ಲವೇ? ಇವರಿಗೆ ಥ್ಯಾಂಕ್ಸ್‌ ಹೇಳುವುದರಿಂದ, ಇವರನ್ನು ನಾವು ದೊಡ್ಡವರನ್ನಾಗಿ ಮಾಡುತ್ತಿಲ್ಲ. ಬದಲಿಗೆ ನಾವು ದೊಡ್ಡವರಾಗುತ್ತಿದ್ದೇವೆ. ನಮ್ಮನ್ನು ಸುರಕ್ಷಿತವಾಗಿಟ್ಟ ರಾಜ್ಯದ ಎಲ್ಲ ಪೊಲೀಸರಿಗೂ ಅನಂತ ಅನಂತ ಧನ್ಯವಾದ!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya