ನಿಮ್ಮ ನಿರ್ಧಾರ ಸರಿಯಿದೆ, ಇಸ್ಲಾಮಿಗೆ ಮತಾಂತರವಾಗಿಬಿಡಿ!

ಎಲ್ಲ ಮುಗಿದು ಹೋಯ್ತು. ಯಾವುದಕ್ಕಾಗಿ ಹೋರಾಟ ಮಾಡುತ್ತಿದ್ದೆವೋ ಅದು ಈಗ ಜಾರಿಯಾಗಿದೆ. ಹೀಗೆ ಜಾರಿಯಾದ ಮೇಲೆ ನಮಗೆ ಸಂವಿಧಾನ ಆತಂಕದಲ್ಲಿದೆ, ಅಳಿವಿನಂಚಿನಲ್ಲಿದೆ ಎನ್ನುವುದು ಬಿಟ್ಟರೆ ಬೇರೆ ಯಾವ ಮಾರ್ಗವನ್ನೂ ಉಳಿಸದಂತೆ ಮಾಡಿದ್ದಾರೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಇಬ್ಬರು ಸೇರಿ.

ಹೌದು, ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ರಾಷ್ಟ್ರಪತಿಯವರ ಅಂಕಿತವೂ ಸಿಕ್ಕಿದೆ. ಇದೊಂದು ಹೊಡೆತದಿಂದ ದೇಶದ ಹೊರಗಿರುವ ಶತ್ರುಗಳಿಂದ ದೇಶದ ಒಳಗಿರುವ ಶತ್ರುಗಳವರೆಗೂ ಎಲ್ಲರಿಗೂ ನೋವಾಗಿದೆ. ಅವರೆಲ್ಲ ಈ ಮೇಲಿನಂತೆ ಮಾತಾಡದೇ ಇನ್ನು ಹೇಗೆ ಮಾತಾಡಬೇಕಾಗುತ್ತದೆ ಹೇಳಿ?

ಇದು ಯಾವಾಗಲೂ ಮಾತಾಡುವುದೇ, ಇದಕ್ಕೇನೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೇರಳದಲ್ಲಿ ಪಿಣರಾಯಿ ವಿಜಯನ್‌ ಎಂಬ ಮುಖ್ಯಮಂತ್ರಿಯಂತೂ ಮೋದಿ ಸರ್ಕಾರ ಏನೇ ಜಾರಿ ಮಾಡಲಿ, ಇದು ಸಂವಿಧಾನ ವಿರೋಧಿ ಹಾಗೂ ಇದು ಕೇರಳದಲ್ಲಿ ಜಾರಿಯಾಗುವುದಿಲ್ಲ ಎಂದುಕೊಂಡೇ ಬಂದಿದ್ದಾರೆ. ಪ್ರತಿಭಟನೆ, ವಾಗ್ಯುದ್ಧ, ಮೋದಿ ಕೋಮುವಾದಿ ಎಂದು ಹೇಳಿ ಮನೆಗೆ ದಾರಿ ನೋಡುತ್ತಿದ್ದ ಮಂದಿ ಈಗ ಹೊಸ ಮಾದರಿಯ ಪ್ರತಿಭಟನೆ ಶುರು ಮಾಡಿದ್ದಾರೆ. ಇಸ್ಲಾಮಿಗೆ ಮತಾಂತರವಾಗುವುದು. ಅಷ್ಟೇ ಅಲ್ಲ, ಇತರರನ್ನೂ ಇಸ್ಲಾಂ ರಿಲಿಜಿಯನ್‌ ಅನ್ನು ಒಪ್ಪಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಮನವಿ ಮಾಡಲಾಗುತ್ತಿದೆ.

ಪೌರತ್ವ ತಿದ್ದುಪಡಿ ಬಿಲ್‌ ಬೇಡವೇ ಬೇಡ ಎಂದು ಕುಳಿತಿದ್ದದ್ದು ಒಂದು ಹಂತದ ಹೋರಾಟವಾಯಿತು. ಆದರೆ, ಎಲ್ಲಿ ಇದು ಜಾರಿಗೆ ಬರುತ್ತದೆ ಎಂದು ತಿಳಿಯಿತೋ, ಹೋರಾಟಗಾರ ಎಂದು ಹೇಳಿಕೊಳ್ಳುವ, ಕೇವಲ ಹಿಂದೂ ವಿರೋಧಿ ಹೋರಾಟಗಳನ್ನೇ ಮಾಡುವ ಹರ್ಷ್‌ ಮಂದರ್‌ ಒಂದು ಟ್ವೀಟ್‌ನಲ್ಲಿ ‘ಒಮ್ಮೆ ಈ ಬಿಲ್‌ ಪಾಸ್‌ ಆಗಿದ್ದೇ ಆದಲ್ಲಿ, ನಾನು ಅಧಿಕೃತವಾಗಿ ಮುಸ್ಲಿಂ ಎಂದು ನೋಂದಣಿ ಮಾಡಿಸಿಕೊಂಡು, ಎನ್‌ಆರ್‌ಸಿಗೆ ಯಾವುದೇ ದಾಖಲೆಗಳನ್ನೂ ಕೊಡದೇ, ದಾಖಲೆ ನೀಡದ ಇನ್ನಿತರ ಮುಸ್ಲಿಮರಿಗೆ ಯಾವ ಶಿಕ್ಷೆ ಆಗುತ್ತೋ ಅದು ನನಗೂ ಆಗಲಿ, ನನ್ನಿಂದಲೂ ಪೌರತ್ವ ಕಿತ್ತುಕೊಳ್ಳಲಿ. ನೀವೆಲ್ಲರೂ ಇದಕ್ಕೆ ಕೈಜೋಡಿಸಿ’ ಎಂದು ಬರೆದಿದ್ದಾರೆ.

ತೀರಾ ಬಾಲಿಶ ಹೋರಾಟ ಇದು ಎಂಬುದು ಒಂದೆಡೆಯಾದರೆ, ಮುಸ್ಲಿಮರಿಗೆ ಆತಂಕಕಾರಿ ಸುದ್ದಿಯೂ ಹೌದು. ಈ ಟ್ವೀಟ್‌ನಲ್ಲೇ ಅವರಿಗೆ ಅದೆಷ್ಟು ಪಕ್ಕಾ ಆಗಿದೆ ಎಂದರೆ, ದಾಖಲೆ ಕೊಡದ/ಕೊಡುವುದಕ್ಕೆ ದಾಖಲೆಯೇ ಇಲ್ಲದ ಬಾಂಗ್ಲಾ-ಪಾಕ್‌ ಅಕ್ರಮ ವಲಸಿಗರು ಬಹಳ ಇದ್ದಾರೆ ಎಂದು ಇವರೇ ಒಪ್ಪಿಕೊಳ್ಳುವುದು ಒಂದಾದರೆ, ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆ ಅಳಿದುಳಿದಿರುವ ಮುಸ್ಲಿಂ ವಲಸಿಗರನ್ನು ಕಿತ್ತೆಸೆಯುವ ಬ್ರಹ್ಮಾಸ್ತ್ರ ಎಂದೂ ಒಪ್ಪಿಕೊಂಡಂತಿದೆ.

ಹರ್ಷ್‌ ಮಂದರ್‌ರಂತೇ ಇನ್ನಷ್ಟು ಅವಿವೇಕಿಗಳಾದ ಜೆಎನ್‌ಯು ಪ್ರಾಡಕ್ಟ್ ಶೆಹ್ಲಾ ರಶೀದ್‌, ಮಲಯಾಳಿ ಕ್ರೀಡಾಪಟು ಒ.ಪಿ. ಜೈಷಾ ಹೀಗೆ ಪಟ್ಟಿ ಸಾಗುತ್ತದೆ. ಎಲ್ಲರೂ ಈಗ ತಿದ್ದುಪಡಿಯಾಗಿರುವ ಬಿಲ್‌ ಅನ್ನು ವಿರೋಧಿಸಿ ಮತಾಂತರವಾಗುತ್ತೇವೆ ಎಂದು ಘೋಷಿಸಿಕೊಂಡು ಬಿಟ್ಟಿದ್ದಾರೆ.

ಇಲ್ಲೊಂದು ವಿಚಿತ್ರ ಗಮನಿಸಿದ್ದೀರಾ? ಪಾಕ್‌-ಬಾಂಗ್ಲಾದಿಂದ ಬರುತ್ತಿರುವ ಹಿಂದೂಗಳು ಭಾರತಕ್ಕೆ ಬರುತ್ತಿರುವುದೇ ಅಲ್ಲಿ ಇಸ್ಲಾಮಿಗೆ ಮತಾಂತರವಾಗು ಅಥವಾ ಕಾಫಿರ್‌ (ಅಲ್ಲಾಹುವಿನ ಮೇಲೆ ನಂಬಿಕೆಯಿಲ್ಲದಿರುವವ) ಆಗಿರುವ ನೀವು ಸಾಯಿ ಎಂದು ಹಿಂಸೆ ಕೊಡುತ್ತಿರುವುದರಿಂದ. ಇದನ್ನು ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದನಾಗಿರುವ ಡೆರೆಕ್‌ ಒ ಬ್ರೈನ್‌ ಹೇಳಿದ್ದಾರೆ. ‘ನನ್ನ ಕುಟುಂಬದವರು ಅಲ್ಲಿದ್ದರು, ಅವರಿಗೆ ಮತಾಂತರವಾಗಬೇಕು ಅಥವಾ ಇಲ್ಲ ದೇಶ ಬಿಡಬೇಕು ಎಂದಾಗ, ಮತಾಂತರವಾಗಿದ್ದರು’ ಎಂದಿದ್ದಾರೆ.

ಬೇರೆ ದೇಶದ ಮುಸ್ಲಿಂ ಉಗ್ರರಿಗೆ ಹಿಂದೂಗಳು ಇಸ್ಲಾಮಿಗೆ ಮತಾಂತರ ಆಗುವುದೇ ಬೇಕಾಗಿರುವುದು. ಇದನ್ನೇ ಭಾರತದಲ್ಲಿ ಪ್ರತಿಭಟನೆಯಂತೆ ಮಾಡುತ್ತಿದ್ದಾರೆಂದರೆ, ‘ಭಾರತಕ್ಕೆ ಬರಲಾಗದ ಪಾಕ್‌ ಮುಸ್ಲಿಮರು, ದೂರ ಉಳಿದೇ ಭಾರತೀಯರನ್ನು ಮತಾಂತರ ಮಾಡಿಸಿ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ’ ಎಂದೂ ಹೇಳಬಹುದಲ್ಲವೇ?

ಈಗ ಮತಾಂತರ ಆಗುತ್ತೇನೆ ಎಂದು ಕುಣಿದಾಡುವವರಲ್ಲಿ ಎಷ್ಟು ಜನರು ಸಿಕ್ಖರ ಮಾರಣಹೋಮವಾದಾಗ, ಎಷ್ಟು ಜನರು ಸಿಕ್ಖ್‌ ಧರ್ಮಕ್ಕೆ ಮತಾಂತರವಾಗಿದ್ದರು? ಅದೂ ಬೇಡ, ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದ ಹೊರದಬ್ಬಿದ್ದು ಮುಸ್ಲಿಂ ಸಮುದಾಯವೇ! ಅದರಲ್ಲಿ ಯಾವುದೇ ಅನುಮಾನವಿಲ್ಲ. ಎಷ್ಟು ಜನರು ಬ್ರಾಹ್ಮಣರಾಗಿ ಮತಾಂತರವಾಗಿದ್ದರು ಸ್ವಾಮಿ ಲೆಕ್ಕ ಕೊಡಿ ಎಂದು ಕೇಳಿದರೆ, ಒಬ್ಬನ ಬಳಿಯೂ ಉತ್ತರವಿಲ್ಲ.

ಮತಾಂತರವಾಗುತ್ತೇನೆ ಎಂದ ಮಂದಿಯೆಲ್ಲರೂ ಮೊದಲು ಆ ಕೆಲಸ ಮಾಡಲೇಬೇಕು. ಏಕೆಂದರೆ, ಇವರೆಲ್ಲರೂ ನ ಘರ್‌ ಕಾ, ನಾ ಘಾಟ್‌ ಕಾ ಎಂಬಂತೆ. ಇತ್ತ ಹಿಂದೂ ಧರ್ಮದಲ್ಲಿದ್ದು, ಇಲ್ಲಿನ ಆಚಾರಗಳನ್ನು ಮಾಡದೇ ಸ್ವರ್ಗಕ್ಕೂ ಹೋಗುವುದಿಲ್ಲ. ಅತ್ತ 72 ಕನ್ಯೆಯರೂ ಸಿಗುವುದಿಲ್ಲ. ತಾನೇನೋ ದೊಡ್ಡ ಗಾಂಧಿಯೆಂಬಂತೆ ಇದರ ಬಗ್ಗೆ ಪುಟಗಟ್ಟಲೆ ಗೀಚಿಕೊಂಡಿರುವ ಹರ್ಷ್‌ ಮಂದರ್‌, ‘ನಾನು ಹಿಂದೂ ದೇವರು ಧರ್ಮಗಳನ್ನೇನೂ ನಂಬುವುದಿಲ್ಲ. ಪರಮ ನಾಸ್ತಿಕ. ಆದರೆ, ಸರ್ಕಾರಿ ದಾಖಲೆಗಳಲ್ಲಿ ನಾನು ಹಿಂದೂ ಅಂತ ಅಲ್ಲ, ಮುಸ್ಲಿಂ ಎಂದು ನೋಂದಾವಣೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. ಹಿಂದೂ ಧರ್ಮಕ್ಕೇ ಉಪಯೋಗವಿಲ್ಲದ ಪರದೇಶಿ, ಇಸ್ಲಾಮಿಗೆ ದಿನಕ್ಕೈದು ಬಾರಿ ಟೊಪ್ಪಿ ಹಾಕಿ ನಮಾಜು ಮಾಡುತ್ತಾನಾ? ಅಸತೋಮಾ ಸದ್ಗಮಯ ಎನ್ನುವುದನ್ನೇ ಕಲಿಯದ ಆಸಾಮಿ, ಅಲ್ಲಾಹು ಅಕ್ಬರ್‌ ಹೇಳುತ್ತಾನಾ? ಸ್ವತಃ ಅಲ್ಲಾಹುವೇ ನಂಬುವುದಿಲ್ಲ.

ಇವನೇ ಇನ್ನೊಂದು ಕಡೆ ಹೇಳುತ್ತಾನೆ, ‘ಜಯಪ್ರಕಾಶ್‌ ನಾರಾಯಣ್‌ ಕರೆ ಕೊಟ್ಟಿದ್ದರಿಂದ ನಾನು ನನ್ನ ಹೆಸರಿನಿಂದ ಸಿಂಗ್‌ ಎಂಬುದನ್ನು ತೆಗೆದು ಹಾಕಿದ್ದೇನೆ’ ಎಂದು. ಜಾತ್ಯತೀತದ ಅರ್ಥ ಇದಾ? ತಾನು ಹುಟ್ಟಿದ ಧರ್ಮವನ್ನೇ ಗೌರವಿಸದ, ಅದರ ಬಗ್ಗೆಯೇ ಕೀಳರಿಮೆ ಇಟ್ಟುಕೊಂಡ ನಾಸ್ತಿಕನೊಬ್ಬ ಇಸ್ಲಾಮಿಗೆ ಮತಾಂತರವಾಗುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿದೆಯೇ?

ಮತಾಂತರವಾಗುತ್ತೇನೆ ಎಂದು ಕುಣಿಯುವವರು ಮತ್ತು ಮುಸ್ಲಿಮರಿಗೆ ಭಾರತ ಆಶ್ರಯ ನೀಡಬೇಕು ಎಂದು ಹೇಳುವವರನ್ನು ನೋಡಿದರೆ ಒಂದು ದೊಡ್ಡ ಪ್ರಶ್ನೆ ಕಾಡುತ್ತದೆ. ಯಾವನೋ ಕಾಶ್ಮೀರದಲ್ಲಿ ಮುಸ್ಲಿಂ ಉಗ್ರಗಾಮಿ ಸತ್ತಿದ್ದಕ್ಕೆಲ್ಲ ಭಾರತದಲ್ಲಿ ಮುಸ್ಲಿಮರಿಗೆ ಭಯ ಆಗಿದೆ. ಮುಸ್ಲಿಮರು ಭಾರತದಲ್ಲಿ ಸುರಕ್ಷಿತವಾಗಿಲ್ಲ. ಅವರು ಇನ್ನೆಲ್ಲಾದರೂ ಹೋಗಬೇಕು. ಇಲ್ಲಿ ಹಿಂದೂಗಳು ನಮ್ಮನ್ನು ಕೊಲ್ಲುತ್ತಿದ್ದಾರೆ ಎಂದು ಬಟ್ಟೆ ಹರಿದುಕೊಂಡು ಅತ್ತಿದ್ದರು.

ಆದರೆ ಈ ಪೌರತ್ವ ತಿದ್ದುಪಡಿ ಬಿಲ್‌ನಲ್ಲಿ ದೇಶಕ್ಕೆ ಕಂಟಕವಾಗಿರುವ ಇಸ್ಲಾಮಿಕ್‌ ರಾಷ್ಟ್ರಗಳ ಮುಸ್ಲಿಮರನ್ನು ದೂರ ಇಟ್ಟಾಗ, ‘ಹೌದಪ್ಪಾ, ನಾವಂತೂ ನರಕದಲ್ಲಿದ್ದೇವೆ. ನೀವು ಯಾಕೆ ಇಲ್ಲಿಗೆ ಬರುತ್ತೀರ. ಪಾಕಿಸ್ಥಾನ-ಬಾಂಗ್ಲಾ-ಆಫ್ಘಾನಿಸ್ಥಾನವೇ ನಮ್ಮಂಥ ಮುಸ್ಲಿಮರಿಗೆ ಹೇಳಿ ಮಾಡಿಸಿದ ದೇಶ’ ಎಂದು ಯಾಕಾಗಿ ಹೇಳಲಿಲ್ಲ? ಎಲ್ಲ ಬಿಟ್ಟು ಭಾರತಕ್ಕೇ ಉಗ್ರವಾದಿ ದೇಶಗಳ ಭಾರತವಿರೋಧಿ ಮುಸ್ಲಿಮರನ್ನು ಕರೆತರುವ ಪ್ರಯತ್ನ ಇಲ್ಲಿನ ಮುಸ್ಲಿಮರಿಗೇಕೆ? ಇದಲ್ಲವಾ ಆಷಾಢಭೂತಿತನ ಎಂದರೆ? ಮುಸ್ಲಿಮರಿಗೆ ತೊಂದರೆಯೂ ಆಗ್ತಿದೆ, ಆದರೆ, ಆ ತೊಂದರೆಯಾಗುತ್ತಿರುವ ರಾಷ್ಟ್ರಕ್ಕೆ ಇನ್ನೊಂದು ದೇಶದ ಉಗ್ರವಾದಿ ಮುಸ್ಲಿಮರೂ ಬರಬೇಕು ಎಂದರೆ ಹೇಗೆ ಸಾರ್‌?

ಬಹುಶಃ ಇಂಥ ಬುದ್ಧಿಗೇ ನಿಜವಾದ ಮುಸ್ಲಿಂ ಭಾರತವನ್ನು ತಾಯ್ನಾಡು ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಅಂಬೇಡ್ಕರ್‌ ಅವರು ಹೇಳಿದ್ದಿರಬೇಕು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮ್ಮ ದೇಶದ್ದೋ ಅಥವಾ ಯಾವ ದೇಶದ ಮುಸ್ಲಿಮರಿಗೆ ಈ ಮಾತನ್ನು ಹೇಳಿದ್ದಾರೆ ಎಂಬುದು ಓದುಗರಿಗೆ ಬಿಟ್ಟಿದ್ದು, ಅವರು ತಮ್ಮ ‘ಪಾಕಿಸ್ಥಾನ್‌ ಆರ್‌ ಪಾರ್ಟಿಷನ್‌ ಆಫ್‌ ಇಂಡಿಯಾ’ ಪುಸ್ತಕದ 12ನೇ ಅಧ್ಯಾಯದ, 5ನೇ ಭಾಗದ, ಪುಟ ಸಂಖ್ಯೆ: 330ರಲ್ಲಿ ಇಸ್ಲಾಮ್‌ ಕುರಿತು ಹೇಳುವಾಗ, ‘ಹಿಂದೂ ಧರ್ಮ ಜನರನ್ನು ವಿಭಜಿಸುತ್ತದೆ ಮತ್ತು ಇಸ್ಲಾಂ ಜನರನ್ನು ಒಂದು ಮಾಡುತ್ತದೆ ಎನ್ನುವುದು ಕೇವಲ ಅರ್ಧ ಸತ್ಯವಷ್ಟೇ. ಮುಸ್ಲಿಮರಲ್ಲಿ ಭ್ರಾತೃತ್ವ ಎಂಬುದು ಮುಸ್ಲಿಮರೊಳಗೆ ಮಾತ್ರ, ಅದು ಸಾರ್ವತ್ರಿಕವಲ್ಲ. ಎಲ್ಲಿ ಇಸ್ಲಾಮಿಕ್‌ ಆಡಳಿತ ಇರುತ್ತದೆಯೋ ಅದೇ ಮುಸ್ಲಿಮನ ದೇಶ. ಅಂದರೆ, ಒಬ್ಬ ನಿಜವಾದ ಮುಸ್ಲಿಮನಿಗೆ ಹಿಂದೂವನ್ನು ತಮ್ಮ ಬಂಧು ಬಳಗದವನೆಂದೇ ಭಾವಿಸಿ, ಭಾರತವನ್ನು ತಾಯ್ನಾಡು ಎಂದು ಒಪ್ಪಿಕೊಳ್ಳುವುದಕ್ಕೆ ಇಸ್ಲಾಂ ಯಾವಾಗಲೂ ಅನುಮತಿಸುವುದಿಲ್ಲ. ಬಹುಶಃ ಇದೇ ಕಾರಣಕ್ಕಿರಬೇಕು, ಮೌಲಾನಾ ಮಹಮ್ಮದ್‌ ಅಲಿ ಅತ್ಯುತ್ತಮ ಭಾರತೀಯರೆನಿಸಿಕೊಂಡರೂ ನಿಜವಾದ ಮುಸ್ಲಿಂ ಆಗಿದ್ದರಿಂದಲೇ, ತನ್ನ ದೇಹವನ್ನು ಭಾರತವನ್ನು ಬಿಟ್ಟು ಜೆರುಸಲೇಮ್‌ನಲ್ಲಿ ಮಣ್ಣು ಮಾಡುವುದಕ್ಕೆ ಇಚ್ಛಿಸಿದ್ದು’ ಎಂದಿದ್ದಾರೆ. ಇನ್ನು ಪುಟ ಸಂಖ್ಯೆ: 301ರಲ್ಲಿ, ‘ಮುಸ್ಲಿಮನಿಗೆ ಹಿಂದೂ ಕಾಫಿರ್‌ ಅಷ್ಟೇ. ಕಾಫಿರರು ಯಾವುದೇ ಗೌರವಕ್ಕೆ ಅರ್ಹರಲ್ಲ. ಅವನು ಯಾವುದೇ ಘನತೆಯಿಲ್ಲದೇ ಕೆಳಸ್ಥರದಲ್ಲಿ ಹುಟ್ಟಿದವ’ ಎಂದಿದ್ದಾರೆ.

ಇದಕ್ಕೆ ಸರಿಯಾಗಿ ನಿನ್ನೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು (ಅಕ್ರಮ ವಲಸಿಗರು?) ಹೋಗುವ ಬರುವ ರೈಲಿಗೆ ಕಲ್ಲು ಹೊಡೆದಿದ್ದಾರೆ. ಅವರ ಪಾಡಿಗೆ ಅವರು ಹೋಗುತ್ತಿದ್ದ ಅಮಾಯಕ ಜನರ ಮೇಲೆ ಕಲ್ಲಲ್ಲಿ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅನೇಕ ಎಡಪಂಥೀಯರ ತವರುಮನೆಯಾದ, ಜೆಎನ್‌ಯುಗೆ ಅಪ್ಪನ ಸ್ಥಾನದಲ್ಲಿರುವ ಜಾಮಿಯಾ ಮಿಲಿಯಾ ವಿವಿಯಲ್ಲಿ ನಿನ್ನೆ ಮುಸ್ಲಿಂ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಹೆಸರಲ್ಲಿ ದಾಂಧಲೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಬಂದ ಪೊಲೀಸರಿಗೆ ‘ಒಳಗೆ ಬಂದರೆ ಗುಂಡು ಹಾರಿಸುತ್ತೇವೆ’ ಎಂದು ಕೂಗಿ ಹೇಳಿದ್ದಾರೆ.

ಅಂಬೇಡ್ಕರ್‌ ಹೇಳಿದ್ದು ಇಂಥ ಮುಸ್ಲಿಮರ ಬಗ್ಗೆಯೇನು? ಗೊತ್ತಿಲ್ಲ. ಆದರೆ, ಇಂಥವರ ಮತ್ತು ನಮ್ಮ ದೇಶದ ಮುಸ್ಲಿಮರ ಬ್ರೇನ್‌ವಾಶ್‌ ಮಾಡುವುದಕ್ಕೇ ಬರಲಿರುವ ಪಾಕ್‌ ಮುಸ್ಲಿಮರ ಬೆಂಬಲಕ್ಕೆ ನಿಲ್ಲುವುದಕ್ಕಾಗಿ, ತಮ್ಮ ಧರ್ಮವನ್ನೇ ಹೀನ ಎಂದು ಮುಸ್ಲಿಮರಾಗುವುದಕ್ಕೆ ಹೊರಟಿರುವುದು ಮಾತ್ರ ನಮ್ಮ ಬುದ್ಧಿಜೀವಿ ಹಿಂದೂಗಳು!

ಈ ಕಾಯ್ದೆ ವಿರೋಧಿಸುತ್ತಿರುವ ಒಬ್ಬನಿಗೂ ಇದು ಏನು ಎಂಬುದೇ ಅರ್ಥವಾಗಿಲ್ಲ. ಯಾರೋ ಹೇಳಿದ್ರಂತೆ, ಸಂಧ್ಯಾವಂದನೆ ಮಾಡುವಾಗ ಅಘ್ರ್ಯ ಬಿಟ್ಟರೆ ಬಹಳ ಪುಣ್ಯ ಅಂತ. ಆದರೆ, ಇಲ್ಲೊಬ್ಬ ಬೋದಾಳ ಅಘ್ರ್ಯ ಬಿಟ್ಟರೇ ಅಷ್ಟು ಪುಣ್ಯ ಬರುವಾಗ, ಸಂಧ್ಯಾವಂದನೆಯನ್ನೇ ಬಿಟ್ಟರೆ ಇನ್ನೆಷ್ಟು ಪುಣ್ಯ ಬರಬಹುದು ಎಂದು ಸಂಧ್ಯಾವಂದನೆ ಬಿಟ್ಟಂತೆಯೇ ಆಗಿದೆ. ಪಾಕ್‌ ಮುಸ್ಲಿಮರನ್ನು ಒಳಬಿಟ್ಟುಕೊಳ್ಳದ ದೇಶದಲ್ಲಿ ನಾವು ಸೇಫಾ ಎಂದು ಹೋರಾಟ ಮಾಡುವುದಕ್ಕೆ ಮತ್ತೊಂದು ಕಾರಣ ಹುಡುಕುವ ಮತ್ತು ಇಂಥವರ ಆಟಕ್ಕೆ ಕಚ್ಚೆ ಕಟ್ಟುವ ಬುದ್ಧಿಜೀವಿಗಳಿಗೆ ಶುಭವಾಗಲಿ. ನಿಮ್ಮಂಥವರು ಹಿಂದೂ ಧರ್ಮದಲ್ಲಿದ್ದೀರ ಎಂದು ಹೇಳಿಕೊಳ್ಳುವುದಕ್ಕೂ ಅವಮಾನ. ಹಾಗಾಗಿ ದಯವಿಟ್ಟು ನಿಮ್ಮಿಷ್ಟದಂತೆ ಇಸ್ಲಾಮಿಗೇ ಮತಾಂತರವಾಗಿಬಿಡಿ. ಹಿಂದೂ ಧರ್ಮವಾದರೂ ಚೊಕ್ಕವಾಗುತ್ತದೆ. ಜತೆಗೆ ಇಸ್ಲಾಂ ಕೂಡ ಆಗಬಹುದು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya