ಈ ಕಲಿಯುಗದ ಪರಾಶರರೇ, ತ್ರೇತಾಯುಗದ ಹನುಮಂತ!

ನೀವು ಈ ವಿಚಿತ್ರವನ್ನು ಗಮನಿಸಿದ್ದೀರಾ? ರಾಮನ ಹಿಂದೆ, ರಾಮನಿಗಾಗಿ, ರಾಮನಿಗೋಸ್ಕರ ಕೆಲಸ ಮಾಡಿದ, ಜೀವ ತ್ಯಾಗ ಮಾಡಿದಷ್ಟು ಜನರು ಬಹುಶಃ ಯಾವುದೇ ರಾಜನಿಗೂ ಮಾಡಿರಿಲಿಕ್ಕಿಲ್ಲ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಸಹ ರಾಮನಿಗೆ ಬೆಂಬಲಾಗಿ ನಿಂತವೇ ಆಗಿದೆ.

ರಾಮ ಸೇತುವೆಯನ್ನು ಕಟ್ಟುವುದಕ್ಕೆ ಅದೆಷ್ಟು ಮಂಗಗಳು ಬೆಂಬಲ ನೀಡಿದ್ದವು ಬಲ್ಲಿರಾ? ರಾಮ ಕಾಡಿನಿಂದ ಲಂಕೆಗೆ ಹೋಗಿ ರಾವಣನನ್ನು ವಧಿಸುವವರೆಗೆ ಅದೆಷ್ಟೋ ಜನರು ರಾಮನಿಗೆ ಬೆಂಬಲವಾಗಿ ನಿಂತರು. ಒಬ್ಬೊಬ್ಬರದ್ದೂ ಒಂದೊಂದು ಪಾತ್ರ. ಆದರೆ ಎಲ್ಲವೂ ಪ್ರಮುಖವಾದ ಪಾತ್ರಗಳೇ. ಆದರೆ ಹನುಮಂತ, ಜಟಾಯುರಂಥ ಪಾತ್ರಗಳು ಸದಾ ಕಾಡುತ್ತಲೇ ಇರುತ್ತವೆ.

ಹಾಗೇ, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಇದ್ದ ಕಾನೂನು ಸಮಸ್ಯೆಯನ್ನು ಬಿಡಿಸುವಲ್ಲಿ ಜೀವನವನ್ನೇ ಮುಡಿಪಾಗಿಟ್ಟವರಲ್ಲಿ ಪ್ರಮುಖರು ಹಿರಿಯ ವಕೀಲರಾದ ಶ್ರೀ ಕೆ. ಪರಾಶರನ್‌. ಅರೇ, ಕಾಸು ತೆಗೆದುಕೊಳ್ಳುವ ಈ ವಕೀಲರಿಗೇಕೆ ಇಷ್ಟು ಮರ್ಯಾದೆ ಎಂದರೆ, ನಿಮ್ಮ ಪ್ರಶ್ನೆ ಸರಿಯಾಗೇ ಇದೆ. ಪರಾಶರನ್‌, ಕೇವಲ ಒಬ್ಬ ವಕೀಲ ಎನ್ನುವುದಕ್ಕಿಂತ ಈ ಕಾಲಕ್ಕೆ 92 ವರ್ಷವಾದರೂ ಇನ್ನೂ ಜೀವ ಹಿಡಿದಿಟ್ಟುಕೊಂಡು ರಾಮನಿಗಾಗಿ ತಾನು ವಾದ ಮಾಡುತ್ತೇನೆ ಎಂದು ಪಣತೊಟ್ಟು ಕೋರ್ಟ್‌ಗೆ ಬರುತ್ತಿದ್ದ ವಕೀಲ. ಹಾಗಾಗಿಯೇ ಇವತ್ತಿಗೂ ಅವರಿಗೆ ಅಷ್ಟು ಗೌರವ, ಮಾನ್ಯತೆ.

ನೀವು ಕೋರ್ಟ್‌ಗೆ ಹೋದರೆ ಅಲ್ಲಿ ವಕೀಲರು ಹೇಗೆ ವಾದ ಮಾಡುತ್ತಾರೆ ಎಂದು ನೋಡಿರುತ್ತೀರಿ. ಕೋರ್ಟ್‌ಗೆ ಹೋಗಿಲ್ಲವೆಂದರೆ, ಖಂಡಿತವಾಗಿಯೂ ಟಿ.ಎನ್‌. ಸೀತಾರಾಂ ಅವರ ಧಾರಾವಾಹಿಗಳಲ್ಲಾದರೂ ನೀವು ವಕೀಲರು ವಾದ ಮಾಡುವುದನ್ನು ನೋಡಿರುತ್ತೀರಿ. ಎಲ್ಲರೂ ವಿಚಾರಣೆ ಮುಗಿಯುವವರೆಗೂ ನಿಂತುಕೊಂಡೇ ತಮ್ಮ ವಾದವನ್ನು ನ್ಯಾಯಾಧೀಶರ ಮುಂದಿಡುತ್ತಾರೆ.

ನಿಜಜೀವನದಲ್ಲೂ ಸ್ವಲ್ಪ ಹೀಗೆ, ಕೋರ್ಟ್‌ನಲ್ಲಿ ಬೇರೆ ಪ್ರಕರಣ ನಡೆಯುತ್ತಿರುವಾಗಷ್ಟೇ ಕೂರಬಹುದು. ಇಲ್ಲವಾದರೆ ನಿಂತೇ ಇರಬೇಕು. ಕೆಲವೊಮ್ಮೆ ಇಂಥ ಪ್ರಕರಣಗಳಲ್ಲಿ ವಾದಗಳು ಹೇಗಿರುತ್ತದೆಂದರೆ, ನ್ಯಾಯಾಧೀಶರು ಶುರು ಮಾಡಿ ಎಂದು ಹೇಳುವುದೇ ತಡ, 1 ತಾಸು ಹೇಗೆ ಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ. ಹಾಗೆ ಸಮಯ ಕಳೆದುಹೋಗಿರುತ್ತದೆ.

ಅಯೋಧ್ಯೆ ವಿಚಾರಣೆಯಲ್ಲೂ ಅಷ್ಟೇ, ತಾಸುಗಳೇ ಆಗುತ್ತಿತ್ತು. ಆದರೂ 92ರ ಯುವಕ ಪರಾಶರನ್‌ ಮಾತ್ರ ನಿಂತೇ ವಾದ ಮಾಡುತ್ತಿದ್ದರು. ಹೆಚ್ಚೆಂದರೆ ಆಗಾಗ ನೀರು ಕುಡಿಯುತ್ತಿದ್ದರಂತೆ. ಸೋಜಿಗ ಎಂದರೆ ನ್ಯಾಯಾಧೀಶರೆಲ್ಲ ಇವರಿಗಿಂತ ಸಣ್ಣ ವಯಸ್ಸಿನವರು, ವೃದ್ಧಾಪ್ಯಕ್ಕೆ ಕಾಲಿಡುತ್ತಿರುವವರು. ಹಾಗಾಗಿಯೇ ಏನೋ ಇವರ ಮೇಲೆ ಕರುಣೆ ಹಾಗೂ ಅಪಾರ ಪಾಂಡಿತ್ಯಕ್ಕೆ ಗೌರವಿಸುವಂತೆ ಭಾರತದ ಮುಖ್ಯ ನಾಯಮೂರ್ತಿ ಕೇಳುತ್ತಾರೆ, ‘ಮಿಸ್ಟರ್‌ ಪರಾಶರನ್‌, ನೀವು ಕುಳಿತುಕೊಂಡು ವಾದ ಮಾಡಲು ಇಚ್ಛಿಸುತ್ತೀರಾ?’ ಎಂದು. ಪರಾಶರನ್‌ ಅವರಿಗೆ ಗೊತ್ತು ತಾನು ಮಾಡುತ್ತಿರುವುದು ರಾಮ ಸೇವೆ ಅಂತ.

ಆದರೆ ಅದನ್ನು ಕೋರ್ಟ್‌ನಲ್ಲಿ ಹೇಗೆ ಹೇಳಬೇಕು? ಪರಾಶರನ್‌ ಹೇಳುತ್ತಾರೆ – ‘ಮೈ ಲಾರ್ಡ್‌, ನೀವು ಸಹೃದಯಿಗಳು. ಆದರೆ ನಿಂತುಕೊಂಡೇ ವಾದ ಮಂಡಿಸುವುದು ಇಲ್ಲಿರುವ ಸಂಪ್ರದಾಯ, ಪದ್ಧತಿ. ನಾನು ಅದಕ್ಕೆ ಸದಾ ಗೌರವಿಸುತ್ತೇನೆ. ಹಾಗಾಗಿ ಎಷ್ಟೇ ಹೊತ್ತಾದರೂ ನಿಂತೇ ವಾದ ಮಂಡಿಸುತ್ತೇನೆ’ ಎಂದು ನಗುಮೊಗದಲ್ಲಿ ಉತ್ತರಿಸುತ್ತಿದ್ದರು. ಇದು ಯಾರೋ 50-60ರ ವ್ಯಕ್ತಿ ಹೇಳಿದ್ದರೆ ಅಚ್ಚರಿಯಾಗುತ್ತಿರಲಿಲ್ಲ. ಬದಲಿಗೆ 92ರ ವ್ಯಕ್ತಿ ಇಂಥ ಮಾತು ಹೇಳುವುದನ್ನು ಕೇಳಿದ್ದೀರಾ?

ಮುಸ್ಲಿಮರ ಪರ ವಾದ ಮಾಡಿದ್ದ ಇವರಿಗಿಂತ ಬಹಳ ಚಿಕ್ಕ ವಯಸ್ಸಿನ ರಾಜೀವ್‌ ಧವನ್‌ ಸಹ, ತನಗೆ ನಿತ್ಯವೂ ಬಂದು ನಿಂತು ವಾದ ಮಾಡುವುದಕ್ಕಾಗುವುದಿಲ್ಲ, ಹಾಗಾಗಿ, ದಿನ ನಿತ್ಯದ ವಿಚಾರಣೆ ಬೇಡ ಎಂದು ಮನವಿ ಮಾಡಿದ್ದರು. ಆದರೆ, ಸುಪ್ರೀಂ ಅದನ್ನು ನಿರಾಕರಿಸಿತ್ತು ಎಂಬುದು ಬೇರೆ ವಿಷಯ.

ಇಷ್ಟೇ ಅಲ್ಲ, ಪರಾಶರನ್‌ ರಾಮನ ವಿಷಯ ಬಂತು ಎಂದರೆ, ಮೊದಲು ನಿಂತಿರುತ್ತಾರೆ. ರಾಮ ಸೇತುವೆ ಯೋಜನೆಯ ವಿಚಾರದಲ್ಲೂ ಅಷ್ಟೇ, ಈ ಯೋಜನೆಯ ವಿರುದ್ಧ ಮತ್ತು ಪರ ವಾದಿಸುವುದಕ್ಕೆ ಒಂದೇ ಸಲ ಆಫರ್‌ ಬಂದಿದ್ದವು. ಪರಾಶರನ್‌ ಮತ್ತೆ ರಾಮನ ಪರವೇ ನಿಂತು, ರಾಮ ಸೇತುವೆ ಇತ್ತು ಎಂಬುದಕ್ಕೆ ಸ್ಕಂದ ಪುರಾಣದ ಉದಾಹರಣೆಗಳನ್ನೆಲ್ಲ ಕೋರ್ಟ್‌ ಮುಂದಿಟ್ಟಿದ್ದರು. ಏಕೆ ಹೀಗೆ ಎಂದು ಕೇಳಿದರೆ, ‘ನಾನು ರಾಮನಿಗಾಗಿ ಮಾಡುವ ಅಳಿಲು ಸೇವೆಯಷ್ಟೇ ಇದು’ ಎಂದಷ್ಟೇ ಹೇಳಿ ಮುಂದೆ ಹೆಜ್ಜೆ ಹಾಕುತ್ತಾರೆ.

ಇಷ್ಟೇ ಅಲ್ಲ, ಶಬರಿಮಲೆ ವಿಚಾರಣೆಯಲ್ಲಿ ಅವರು ಮಾಡುತ್ತಿದ್ದ ವಾದ ಎಷ್ಟು ಮೊನಚಾಗಿರುತ್ತಿದ್ದವೆಂದರೆ, ನ್ಯಾಯಮೂರ್ತಿಗಳು ಅಚ್ಚರಿಯಿಂದ ನೋಡುತ್ತಿದ್ದರಂತೆ. ಒಮ್ಮೆ ಶಬರಿಮಲೆಯ ವಿಚಾರಣೆಯಲ್ಲಿ ಕೋರ್ಟ್‌ಗೇ ಪ್ರಶ್ನಿಸಿದ್ದರು, ‘ಪ್ರಾರ್ಥನೆ ಮಾಡುವ ಮಾನಸಿಕ ಹಕ್ಕಿನ ವಿರುದ್ಧವಾಗಿ ತಪ್ಪು ಪ್ರಶ್ನೆಗಳನ್ನು ಕೇಳುತ್ತಿದ್ದೀರೇನು?’ ಎಂದು ಶುರು ಮಾಡಿದ ಪರಾಶರನ್‌, ‘ನೋಡಿ ಯಾರಾದರೂ ಒಬ್ಬ ವ್ಯಕ್ತಿ ಬಂದು ‘‘ನಾನು ಪ್ರಾರ್ಥನೆ ಮಾಡುವಾಗ ಸಿಗರೇಟ್‌ ಸೇದಲೇ?’’ ಎಂದು ಕೇಳಿದರೆ ನನ್ನಿಂದ ಕೆನ್ನೆಗೆ ಪೆಟ್ಟು ತಿನ್ನುತ್ತಾನೆ. ಆದರೆ ‘‘ನಾನು ಸಿಗರೇಟ್‌ ಸೇದುವಾಗ ಪ್ರಾರ್ಥಿಸಲೇ ?’’ ಎಂದು ಕೇಳಿದರೆ ಅವನನ್ನು ಮೆಚ್ಚಿಕೊಳ್ಳುತ್ತೇನೆ. ಹಾಗಾಗಿ ಸರಿಯಾದ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತದೆ, ತಪ್ಪಾದ ಪ್ರಶ್ನೆಗೆ ತಪ್ಪು ಉತ್ತರವೇ ಸಿಗುತ್ತದೆ’ ಎಂದು ನ್ಯಾಯಮೂರ್ತಿಗಳಿಗೇ ಹೇಳಿದ್ದರು.

ಇವರು ತಮ್ಮ ವಾದವನ್ನು ಮಂಡಿಸುತ್ತಿರುವಾಗಲೇ ನೈಷ್ಠಿಕ ಬ್ರಹ್ಮಚರ್ಯ ಎಂದರೇನು ಎಂಬುದನ್ನು ತಿಳಿಸಲು ಸುಪ್ರಿಂ ಕೋರ್ಟ್‌ನಲ್ಲೇ ಸುಂದರಾಕಾಂಡದ ಶ್ಲೋಕಗಳನ್ನು ಉಚ್ಚರಿಸಿದ್ದರು. ಅಯ್ಯಪ್ಪ ಸಹ ನೈಷ್ಠಿಕ ಬ್ರಹ್ಮಚರ್ಯವನ್ನು ಅನುಸರಿಸುತ್ತಿದ್ದ. ಈ ವಾದವನ್ನು ಕೋರ್ಟ್‌ನಲ್ಲಿ ಬಹಳ ವಿಸ್ತೃತವಾಗಿ ತಿಳಿಸಿದ್ದರು. ಧರ್ಮ ಶಾಸ್ತ್ರಗಳಲ್ಲಿ ಇವರಿಗಿರುವ ಜ್ಞಾನ ಮತ್ತೊಬ್ಬರಿಗೆ ಹೋಲಿಸಲಾಗದಂಥದ್ದು ಎಂದರೂ ಅತಿಶಯೋಕ್ತಿಯಲ್ಲ.

ಬಹುಶಃ ಇವರ ಈ ನಿಷ್ಠೆಗೋ ಏನೋ, ಕಾನೂನು ವಲಯದಲ್ಲಿ ಸೇರಿದಂತೆ ಇವರನ್ನು ಪ್ರೀತಿಯಿಂದ ಪಿತಾಮಹ ಎಂದೇ ಕರೆಯುತ್ತಾರೆ. ಅಷ್ಟೇ ಯಾಕೆ ಸುಪ್ರೀ ಕೋರ್ಟ್‌ ನ್ಯಾಯಮೂರ್ತಿ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಮಾಜಿ ಮುಖ್ಯ ನಾಯಮೂರ್ತಿಯಾಗಿರುವ ಸಂಜಯ್‌ ಕಿಶನ್‌ ಕೌಲ್‌ರವರು ಒಮ್ಮೆ ಇವರ ಬಗ್ಗೆ ಉಲ್ಲೇಖಿಸುತ್ತಾ, ‘ತಮ್ಮ ಧರ್ಮದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಕಾನೂನಿಗೆ ಇವರು ನೀಡಿರುವ ಕೊಡುಗೆಯಿಂದಲೇ ಇವರು ಪಿತಾಮಹರಾಗಿದ್ದಾರೆ’ ಎಂದು ಹೇಳಿದ್ದರು.

ಧರ್ಮದ ಬಗ್ಗೆ ಇವರಿಗೆ ಇರುವ ಪಾಂಡಿತ್ಯವೆಲ್ಲವೂ ಇವರ ಕುಟುಂಬದಿಂದಲೇ ಬಂದಿದ್ದು. 1927ರಲ್ಲಿ ತಮಿಳುನಾಡಿದ ಶ್ರೀರಂಗಂನಲ್ಲಿ ಹುಟ್ಟಿದರು. ಇವರ ತಂದೆ ಕೇಶವ ಐಯ್ಯಂಗಾರರೂ ವಕೀಲರಾಗಿದ್ದು ಆಗಲೇ, ಮದ್ರಾಸ್‌ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದವರು. ಅಲ್ಲದೇ, ಬಹುಮುಖ್ಯವಾಗಿ ವೇದ-ಶಾಸ್ತ್ರಾಧ್ಯಯನ ಮಾಡಿದವರೂ ಆಗಿದ್ದರು. ಅಧ್ಯಯನದ ಜತೆ ಅಧ್ಯಾಪನವನ್ನೂ ಮಾಡುತ್ತಿದ್ದರು. ಹಾಗಾಗಿ ಮಗ ಪರಾಶರರಿಗೆ ಇವೆಲ್ಲ ಮೊದಲಿನಿಂದಲೇ ಬಂದಿತ್ತು. ರಾಮನ ಬಗ್ಗೆ ತಿಳಿದ ಯಾರಿಗೆ ತಾನೆ ಪ್ರೀತಿ ಹುಟ್ಟುವುದಿಲ್ಲ ಹೇಳಿ? ಪರಾಶರರಿಗೂ ರಾಮನ ಮೇಲೆ ಪ್ರೀತಿ-ಭಕ್ತಿ ಹುಟ್ಟಿತು.

ಪರಾಶರನ್‌ ತನ್ನ ವೃತ್ತಿಯನ್ನು ಅತ್ಯಂತ ಹೆಚ್ಚು ಗೌರವಿಸುವವರು. ಅದಕ್ಕೇ ಅವರ ಮಾತಿಗೆ ನ್ಯಾಯಮೂರ್ತಿಗಳೂ ಗೌರವ ಕೊಡುತ್ತಿದ್ದದ್ದು. ಅವರಿಗೆ ಎರಡು ಮದುವೆಯಾಗಿ ಎಂದು ಅವರೇ ಕೆಲವು ಕಡೆ ಒಪ್ಪಿಕೊಂಡಿದ್ದಾರೆ. ‘ನಾನು ಎರಡು ಮದುವೆಯಾಗಿ ತಪ್ಪು ಮಾಡಿದ್ದೇನೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. 1949ರಲ್ಲಿ ನಾನು ಸರೋಜಾಳ ಜತೆ ಮೊದಲ ಬಾರಿ ವಿವಾಹವಾದೆ. ನಂತರ ನಾನು ವಕೀಲನಾಗಿ ಸೇರ್ಪಡೆಯಾದ ಮೇಲೆ ಒಂದು ವರ್ಷದ ನಂತರ ಕಾನೂನು ಎಂಬುವವಳೊಂದಿಗೆ ಎರಡನೇ ವಿವಾಹವಾದೆ. ಎಲ್ಲರಿಗೂ ಎರಡನೇ ಹೆಂಡತಿಯ ಮೇಲೇ ಪ್ರೀತಿ ಜಾಸ್ತಿ. ಹಾಗೇ ನನಗೂ ಕಾನೂನಿನ ಮೇಲೇ ಹೆಚ್ಚು ಪ್ರೀತಿ ಇದ್ದಿದ್ದಕ್ಕೇ ಮೊದಲಿನವಳಿಗಿಂತ ಎರಡನೇಯವಳ ಜೊತೆಯೇ ಹೆಚ್ಚು ಕಾಲ ಕಳೆಯುತ್ತಿದ್ದೆ’.

ಇದನ್ನು ಏಕೆ ಹೇಳಬೇಕಾಯಿತೆಂದರೆ, ಪರಾಶರನ್‌ ಅವರು ಕೆಲಸ ಮಾಡುವುದರಲ್ಲಿರಾಕ್ಷಸರು. ಇನ್ನು ವೇದಾಧ್ಯಯನ ಮಾಡಿದ ರಾಕ್ಷಸರೆಂದರೆ ಕೇಳಬೇಕೇ? ಊಟ ಆಹಾರದ ಚಿಂತೆಯನ್ನೇ ಮರೆತು 18 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡುತ್ತಿದ್ದವರು ಪರಾಶರನ್‌. ಕಾನೂನಿನಲ್ಲಿ ಹೆಚ್ಚಾಗಿ ಸಂವಿಧಾನದ ಬಗ್ಗೆಯೇ ಅಧ್ಯಯನ ಹೆಚ್ಚಿರುವ ಪರಾಶರನ್‌ಗೆ ಎಲ್ಲರೂ ತಲೆ ಬಾಗುತ್ತಾರೆ. ಮೂರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇವರ ಬಗ್ಗೆಯೇ Law and Dharma: A tribute to the Pitamaha of the Indian Bar ಎಂಬ ಪುಸ್ತಕವನ್ನೂ ಬರೆದಿರುವುದು ಇವರ ಜ್ಞಾನಕ್ಕೆ ಹಿಡಿದ ಕನ್ನಡಿ.

ಪರಾಶರನ್‌ ಅವರಿಗೆ ರಾಮ ಮಂದಿರ ಕಟ್ಟಬೇಕು ಎಂಬ ತುಡಿತ ಹೇಗಿತ್ತು ಎಂಬುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಮೇಲೆ ಹೇಳಿದಂತೆ, ಮುಸ್ಲಿಮರ ಪರ ವಕೀಲ ರಾಜೀವ್‌ ಧವನ್‌ ಅವರು ತನಗೆ ದಿನ ನಿತ್ಯದ ವಿಚಾರಣೆಗೆ ಹಾಜರಾಗುವುದಕ್ಕಾಗುವುದಿಲ್ಲ. ತಿಂಗಳುಗಳ ಅಂತರದಲ್ಲೇ ವಿಚಾರಣೆ ನಡೆಯಲಿ ಎಂದಿದ್ದರು. ಇದರ ಹಿಂದಿನ ಇನ್ನೊಂದು ದುರುದ್ದೇಶ ಏನೆಂದರೆ, ಇಷ್ಟು ವರ್ಷಗಳು ಕಳೆದ ಹಾಗೆ, ಮುಂದೆಯೂ ಶತಮಾನಗಳವರೆಗೆ ಈ ಪ್ರಕರಣ ಸಾಗುತ್ತಿರಲಿ ಎಂದೂ ಇತ್ತು. ಆದರೆ, ಪರಾಶರನ್‌ ಕೋರ್ಟ್‌ನಲ್ಲೇ ಹೇಳಿದ ಒಂದೇ ಒಂದು ಮಾತಿಗೆ ರಾಜೀವ್‌ ಧವನ್‌ ಮರುಮಾತಾಡದೇ ಕುಳಿತುಬಿಟ್ಟರು. ಪರಾಶರನ್‌ ಹೇಳಿದ್ದೇನು ಗೊತ್ತಾ? ‘ಬ್ರದರ್‌ ನಾನು ಸಾಯುವುದಕ್ಕೆ ಮುನ್ನ ಇರುವ ಒಂದೇ ಒಂದು ಕಡೆಯ ಆಸೆ ಏನೆಂದರೆ, ಈ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು. ಪ್ಲೀಸ್‌ ಸಹಕರಿಸಿ’ ಎಂದಾಗ ರಾಜೀವ್‌ ಧವನ್‌ ಕ್ಲೀನ್‌ ಬೋಲ್ಡ್‌ ಆಗಿದ್ದರು.

ಹೀಗೆಲ್ಲ ಅವರು ಹೇಳುವಾಗ ನಾವು ಮತ್ತೊಮ್ಮೆ ಮಗದೊಮ್ಮೆ ನೆನೆಯಬೇಕಾದ್ದೇನು ಗೊತ್ತಾ? ಶ್ರೀರಾಮ ದೇವರು 92ರ ವೃದ್ಧರಿಗೂ ಚಿರಯೌವನ ಕೊಡುತ್ತಾನೆ. ರಾಮನೇ ಸುಳ್ಳು ಎನ್ನುವ ಭಗವಾನನಂತವರಿಗೂ ದಿನ ನಿತ್ಯ ಆಸ್ಪತ್ರೆಯ ಬಿಳಿ ಬೆಡ್‌ನಲ್ಲೇ ಬಿದ್ದಿರುವ ಮುಪ್ಪು ಕೊಡುತ್ತಾನೆ. ತ್ರೇತಾಯುಗದಲ್ಲಿ ಸಂಭವಿಸಿದ ರಾಮಾಯಣದಲ್ಲಿ ರಾಮನಿಗೆ ನಿಸ್ವಾರ್ಥದಿಂದ ಬೆಂಬಲವಾಗಿ ನಿಂತಿದ್ದು ಹನುಮಂತ. ಹಾಗೇ ಈ ಕಲಿಯುಗದಲ್ಲಿ ರಾಮನನ್ನು ಮಂದಿರಕ್ಕೆ ಸೇರಿಸಿದವನೂ ಹನುಮಂತನೇ. ಪರಾಶರನ್‌ರ ವೇಷದಲ್ಲಿ ಬಂದಿದ್ದ ಹನುಮಂತ. ಹೌದೊ ಇಲ್ಲವೋ ನೀವೇ ನೋಡಿ, ಹನುಮಂತ ಚಿರಂಜೀವಿ ಸಾವಿಲ್ಲದವನು ಎನ್ನುತ್ತಾರೆ. ಪರಾಶರನ್‌ 92 ವರ್ಷವಾದರೂ ರಾಮ ಮಂದಿರಕ್ಕಾಗಿ ವಾದಿಸಿದ್ದಾರೆ. ಸಹಜವಾಗಿ ಈ ವಯಸ್ಸಿನಲ್ಲಿ ಮರೆವು ಜಾಸ್ತಿ. ಸ್ವಂತ ಮಕ್ಕಳೇ ನೆನಪಿರುವುದಿಲ್ಲ. ಆದರೂ ಯಾವೊಂದನ್ನೂ ಮರೆಯದೇ, ವೇದ ಶಾಸ್ತ್ರಗಳಲ್ಲಿರುವ ಶ್ಲೋಕವನ್ನೂ ನೆನೆದು ಕೋರ್ಟ್‌ನಲ್ಲಿ ನಿಂತೇ ವಾದಿಸುತ್ತಾರೆಂದರೆ, ಈತ ಕಲಿಯುಗದ ಹನುಮಂತನಲ್ಲದೇ ಇನ್ನೇನು?

ಮಾತು ಹೊರಡುತ್ತಿಲ್ಲ. ಜೈ ಶ್ರೀ ರಾಮ್‌!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya