ಗಾಡ್‌ ವಿಲ್ಲಿಂಗ್‌ ಗುಂಡಪ್ಪ, ನಿಮ್ಮ ಮರೆಯಲಿ ಹ್ಯಾಂಗಪ್ಪ?

ಇದೇ ದಿನ 1975ರಲ್ಲಿ ಸಾಹಿತ್ಯ ಲೋಕದ ಋುಷಿ ಡಾ. ಡಿ. ವಿ. ಗುಂಡಪ್ಪನವರು ನಮ್ಮನ್ನು ಬಿಟ್ಟು ಹೋಗಿದ್ದರು. ಅವರು ಹೋದರು ಎಂದ ಮಾತ್ರಕ್ಕೆ ಅವರು ಹೀಗಿದ್ದರು, ಹಾಗಿದ್ದರು ಎಂದು ಸಾಧನೆಗಳ ಪಟ್ಟಿ ಮಾಡಿ, ಪೇಪರ್‌ ತುಂಬಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುವುದಿಲ್ಲ. ಏಕೆಂದರೆ, ನಾನು ಸಣ್ಣವನಿದ್ದಾಗಿನಿಂದಲೂ ಪಠ್ಯ ಶೈಲಿಯಲ್ಲಿ ಡಿವಿಜಿಯವರನ್ನು ಓದಿ ಸಾಧಾರಣ ಮುದುಕ ಎಂದಷ್ಟೇ ತಿಳಿದಿದ್ದ ನನಗೆ ಅವರ ‘ಜೀವನಧರ್ಮಯೋಗ ಅಥವಾ ಭಗವದ್ಗೀತಾ ತಾತ್ಪರ್ಯ’ ಓದಿದಾಗ ಅಚ್ಚರಿಗೊಂಡಿದ್ದೆ. ಮುದುಕ ಅಷ್ಟೇ ಎಂದು ತಿಳಿದ ನನ್ನ ಬುದ್ಧಿಮಟ್ಟಕ್ಕೆ ನಾನೇ ಶಪಿಸಿಕೊಂಡೆ. ಆ ಪಾಪದ ಪರಿಹಾರಕ್ಕಾದರೂ ಸತತವಾಗಿ ಅವರನ್ನು ಓದಿದೆ, ಕೇಳಿದೆ. ಅದರಲ್ಲಿ ಕೆಲ ಆಯ್ದ ಹಾಗೂ ಅಪರೂಪದ ಸಂಗತಿಗಳನ್ನು ತಿಳಿಸುತ್ತೇನೆ. ಇದೂ ಒಂದು ರೀತಿಯ ಪಾಪ ಪ್ರಾಯಶ್ಚಿತ್ತವೇ!

ಬಾಲ್ಯದಿಂದಲೂ ಡಿವಿಜಿಯವರ ಬಗ್ಗೆ ಹೇಳಬಹುದು. ನೀಲತ್ತಹಳ್ಳಿ ಕಸ್ತೂರಿಯವರು ‘ಡಾ. ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ’ ಎಂಬ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ಡಿವಿಜಿಯವರ ಬಾಲ್ಯದ ಬಗ್ಗೆ ಬರೆಯುತ್ತಾರೆ. ಕೆಲವೊಂದನ್ನು ಡಿವಿಜಿಯವರೇ ಬರೆದುಕೊಂಡಿದ್ದನ್ನು ನೀಲತ್ತಹಳ್ಳಿಯವರು ದಾಖಲಿಸಿದ್ದಾರೆ.  ಡಿವಿಜಿಯವರಿಗೆ ಮೂವರೆಂದರೆ ಪ್ರಾಣ. ಅವರ ತಾಯಿಯ ತಾಯಿ ಸಾಕಮ್ಮ, ತಾಯಿ ಮತ್ತು ಸೋದರಮಾವ ತಿಮ್ಮಪ್ಪ. ತಿಮ್ಮ ಗುರುವಿನ ಪ್ರೇರಣೆಯೂ ಅವರೇ. ಸೋದರಮಾವನ ಬಹುತೇಕ ಕೆಲಸ ಡಿವಿಜಿಯವರನ್ನು ತಂದೆಯ ಕೋಪದಿಂದ ಬಚಾವ್‌ ಮಾಡುವುದೇ ಆಗುತ್ತಿತ್ತು. ಅದಕ್ಕೊಂದು ಐಡಿಯಾ ಹುಡುಕಿದ್ದರು, ಡಿವಿಜಿಯವರು ನಿತ್ಯ ಮಗ್ಗಿ ಹೇಳಬೇಕಿತ್ತಂತೆ. ಇದು ಕಡ್ಡಾಯವಂತೆ. ಇದನ್ನು ಸ್ವತಃ ಡಿವಿಜಿಯವರೇ ಹೀಗೆ ಬರೆಯುತ್ತಾರೆ ?‘‘ಒಂದರಿಂದ ಹತ್ತೊಂದಲೆಯವರೆಗೂ ಹಾಗೂ ಹೀಗೂ ನಿರ್ವಾಹ ಮಾಡುತ್ತಿದ್ದೆ. ಹನ್ನೆರಡೊಂದಲೆಯಿಂದ ಮುಂದಕ್ಕೆ ತಪ್ಪುಗಳು. ನನ್ನ ಸೋದರ ಮಾವಂದಿರು ಈ ಮೇಲಣ ಎಲ್ಲ ಪಾಠಕ್ಕೂ ನನ್ನ ತಯಾರು ಮಾಡಿದರು. ಅವರ ವಿಶೇಷಾಂಶ ಲೆಕ್ಕ. ಅದರ ವಿಚಕ್ಷ ಣೆ ಹೀಗೆ- ನಮ್ಮ ನಡುಮನೆಯಲ್ಲಿ ಒಂದು ಕತ್ತಲೆ ಮೂಲೆಯಲ್ಲಿ ಅವರು ಕುಳಿತು ನನ್ನನ್ನು ಹತ್ತಿರ ಕೂಡಿಸಿಕೊಳ್ಳುವರು. ನನ್ನ ಅಜ್ಜಿ ಏನಾದರೂ ತಿಂಡಿ ಕೋಡುಬಳೆ, ಚಕ್ಕುಲಿ ಇತ್ಯಾದಿ ಹವಣಿಸುವರು. ನನ್ನ ಮಾವ ಗಟ್ಟಿಯಾದ ಧ್ವನಿಯಲ್ಲಿ ‘ಹದಿನೆಂಟಾರಲ ಎಷ್ಟು?’ ಎಂದು ಕೇಳುವರು. ಮರುಕ್ಷ ಣವೇ ಮೆಲುದನಿಯಲ್ಲಿ ನನ್ನ ಕಿವಿಯಲ್ಲಿ ‘ನೂರೆಂಟು’ ಎಂದು ಉಸಿರುವರು. ನಾನು ಗಟ್ಟಿಯಾಗಿ ‘ನೂರೆಂಟು’ ಎಂದು ಕೂಗುವೆ. ಆಗ ಒಂದು ಚೂರು ಕೋಡುಬಳೆ ಬಾಯಿಗೆ.

ಇದರ ಅಂತರಂಗವನ್ನು ಕೇಳಬೇಕು. ನನಗೆ ಹದಿನೆಂಟಾರಲೆ ಎಷ್ಟೆಂದು ಗೊತ್ತಿಲ್ಲವೆಂದು ನನ್ನ ಮಾವನಿಗೆ ಗೊತ್ತು. ನನ್ನ ಬಾಯಿಂದ ತಪ್ಪು ಹೊರಟರೆ ಅದು ನನ್ನ ತಂದೆಯ ಕಿವಿಗೆ ಬಿದ್ದೀತು. ಆಗ ನನಗೆ ದಡ್ಡು ಬುಡ್ಡು ದಾಸಯ್ಯ ಆದೀತು. ನಾನು ಪೆಟ್ಟು ತಿಂದು ಅತ್ತರೆ ನನ್ನ ಮಾವನಿಗೂ, ನನ್ನ ಅಜ್ಜಿಗೂ ತಡೆಯಲಾರದಷ್ಟು ನೋವು. ಈ ಸಂಕಟವನ್ನು ಪಡಲಾರದೆ ನನ್ನ ಮಾವ ಒಂದು ಒಳ್ಳೆಯ ಸುಳ್ಳಿನಿಂದ ನನ್ನನ್ನು ಕಾಪಾಡುತ್ತಿದ್ದರು. ಕೊಂಚ ಕಾಲದ ಮೇಲೆ ನನ್ನ ತಂದೆ ಈ ನಮ್ಮ ಕತ್ತಲೆ ಕೋಣೆ ಉಪಾಯವನ್ನು ಕಂಡು ನನಗೂ, ನನ್ನ ಮಾವನಿಗೂ ಇಬ್ಬರಿಗೂ ತಕ್ಕ ಶಾಸ್ತಿಯನ್ನು ಸಲ್ಲಿಸಿದರು.’’

ಬಹುತೇಕ ಇದರಲ್ಲಿ ಡಿವಿಜಿಯವರು ತಮ್ಮ ಬಾಲ್ಯವನ್ನೇ ಕಟ್ಟಿಕೊಟ್ಟಿದ್ದಾರೆ. ಎಷ್ಟು ಚಂದ ಅಲ್ವಾ? ಕೇವಲ ಎರಡೇ ಪ್ಯಾರಾದಲ್ಲಿ ಆ ಮೂವರು ಇವರನ್ನು ಹೇಗೆ ಕಾದುಕೊಂಡರು ಎಂಬುದರಿಂದ ಬಹಳ ಸುಲಭವಾಗಿ ಸನ್ನಿವೇಶವನ್ನೇ ಕಣ್ಣ ಮುಂದೆ ತಂದಿಟ್ಟಿದ್ದಾರೆ. ಇದು ಡಿವಿಜಿಯವರ ಬರವಣಿಗೆ ಯಲ್ಲಿರುವ ಶಕ್ತಿ.

ಇನ್ನು ಹಾಗೂ ಹೀಗೂ ಸರ್ಕಸ್‌ ಮಾಡಿ ಒಂದಷ್ಟು ಓದಿಕೊಂಡ ಗುಂಡಪ್ಪನವರು ಒಂದು ನೌಕರಿ ಹಿಡಿಯಬೇಕು, ಲಾಯರ್‌ ಆಗಬೇಕು ಇತ್ಯಾದಿ ಆಸೆ ಅವರ ತಂದೆಯವರದು. ಆದರೆ ಡಿವಿಜಿಗೆ ಈ ತಾಪೇದಾರಿ ಎಂದರೆ ವಾಕರಿಕೆ. ತನ್ನ ಕಾಲ ಮೇಲೆ ತಾನು ನಿಲ್ಲುವ ಹಂಬಲ. ಮೊದಲು ಕೆಲವು ದಿನ ಬದಲಿ ಶಾಲಾ ಮಾಸ್ತರರ ಕೆಲಸ ಮಾಡಿದರು.ಮನಸ್ಸು ಮಾಡಿದ್ದರೆ ಅದೇ ಖಾಯಂ ಆಗುತ್ತಿತ್ತೇನೋ. ಅವರ ಪಾಠಪ್ರವಚನ ಆಗಿನ ಜಿಲ್ಲಾಧಿಕಾರಿ ಸರ್‌ ಕೆ.ಪಿ. ಪುಟ್ಟಣ್ಣ ಶೆಟ್ಟರ ಗಮನ ಸೆಳೆದಿತ್ತು. ಇದರ ಸದುಪಯೋಗ ಪಡೆದು, ಮಗನಿಗೆ ಕಾಯಂ ನೌಕರಿ ಕೊಡಿಸಲು ತಂದೆಗೆ ತವಕ. ಶೆಟ್ಟರನ್ನು ಹೋಗಿ ಕಾಣಲು ಮಗನನ್ನು ಒತ್ತಾಯಿಸಿದರು. ಒಲ್ಲದ ಮನಸ್ಸಿನಿಂದ ಡಿವಿಜಿ ಅರ್ಜಿ ಬರೆದರು. ಜಿಲ್ಲಾಧಿಕಾರಿಗಳನ್ನು ನೋಡಲು ಹೋಗುವಾಗ ತಲೆಗೆ ರುಮಾಲು ಧರಿಸಿರಬೇಕು ಎಂಬ ನಿಯಮ ತಂದೆಯವರದ್ದು. ಡಿವಿಜಿಯವರ ತಲೆಯ ಮೇಲಿದ್ದದ್ದು ಟೋಪಿ. ರುಮಾಲಿಗೆ ಅವರು ಒಪ್ಪರು. ತಕರಾರು ಬಿತ್ತು. ಕೊನೆಗೆ ಮಧ್ಯಸ್ಥಿಕೆಯಾಯಿತು. ಅದೇನು ಗೊತ್ತಾ? ಜಿಲ್ಲಾಧಿಕಾರಿಗಳ ಬಿಡಾರದವರೆಗೂ ಟೋಪಿಯಲ್ಲೇ ಹೋಗುವುದು, ಅಲ್ಲಿ ಒಂದು ಕ್ಷ ಣ ರುಮಾಲು ಧರಿಸಿ ಸಾಹೇಬರನ್ನು ನೋಡುವುದು! ಸರಿ ಒಂದು ಕೈಯಲ್ಲಿ ರುಮಾಲು ಮತ್ತೊಂದು ಕೈಯಲ್ಲಿ ಅರ್ಜಿ ಹಿಡಿದು ಹೊರಟರು. ಸೆಟ್ಟಿ ಸಿಂಗಾರ ಆಗುವ ವೇಳೆಗೆ ಪಟ್ಟಣ ಸೂರೆ ಹೋಗಿತ್ತಂತೆ. ಸಾಹೇಬರ ಸಮಯ ಮೀರಿ ಅವರು ವಿಶ್ರಾಂತಿಗೆ ತೆರಳಿದ್ದರು. ಭೇಟಿಯಾಗಲೇ ಇಲ್ಲ. ಪ್ರಸಂಗ ಮುಗಿಯಿತು. ಗುಂಡಪ್ಪನವರು ಕ್ಯಾರೆ ಎನ್ನದಿದ್ದರೂ, ತಂದೆಯ ಬಯ್ಗುಳ ತಡೆದುಕೊಳ್ಳುವುದೇ ತಲೆನೋವಾಗಿತ್ತು.

ಸ್ವಂತ ಕಾಲಲ್ಲಿ ನಿಲ್ಲಬೇಕೆಂಬ ಆಸೆಯ ಜತೆಗೆ, ಡಿವಿಜಿಯವರಿಗೆ ಲಾಯರ್‌ ಆಗುವ ಆಸೆ ಇತ್ತೋ ಏನೋ ಗೊತ್ತಿಲ್ಲ. ಆದರೆ ಒಂದೇ ಒಂದು ಘಟನೆಯಿಂದ ಅವರು ಲಾಯರ್ರೂ ಆಗಲಿಲ್ಲ ಎಂಬುದು ಸತ್ಯ. ಹಿರಿಯಜ್ಜ ಲಾಯರ್‌ ಶೇಷಗಿರಿಯಪ್ಪನವರ ಪುಸ್ತಕ ಸಂಗ್ರಹವನ್ನೊಮ್ಮೆ ನೋಡುತ್ತಿದ್ದಾಗ ಡಿವಿಜಿಗೆ ಒಂದು ಪುಸ್ತಕದ ಸಾಲು ಕಾಣಿಸಿತು ? ‘”A good lawyer is a bad neighbour(ಒಳ್ಳೆಯ ವಕೀಲ ಕೆಟ್ಟ ನೆರೆಹೊರೆ)’. ಆ ಕ್ಷ ಣವೇ ಲಾಯರಿ ಕೆಲಸ ಸುತರಾಂ ಬೇಡ ಎಂದು ನಿಶ್ಚಯಿಸಿದರು. ಅದಕ್ಕೆ ಡಿವಿಜಿಯೇ ಬರೆದುಕೊಳ್ಳುತ್ತಾರೆ, ‘‘ನನ್ನ ತಾತ ಅದೃಷ್ಟಶಾಲಿ. ತಾತನ ಅದೃಷ್ಟ ಮೊಮ್ಮಗನಿಗೆ ದಾಯವಾಗಿ ಬರುವುದಿಲ್ಲ. ನನ್ನ ಜಾತಕದಲ್ಲಿ ಫಕೀರತನ ಬರೆದಿದೆ’’! ನಿಜವಾಗಿ ಮನುಷ್ಯ ಬಾಳಿದ್ದು ಹಾಗೇ!

ಡಿವಿಜಿಯವರು ಬಹಳ ಸೀರಿಯಸ್‌ ಎಂದುಕೊಂಡವರಿಗೆ ಒಂದು ವಿನೋದದ ಸಂಗತಿಯಿದೆ. ಒಂದಲ್ಲ, ಸುಮಾರಿದೆ ಹೇಳುತ್ತಾ ಹೋದರೆ ಚರಿತ್ರೆಯನ್ನೇ ಬರೆಯಬಹುದು. ಹಾಗೆ ಒಂದು ಘಟನೆ ನೆನೆಯುವ ಹಾಗಿದ್ದರೆ, ಒಮ್ಮೆ ಡಿವಿಜಿ ಮತ್ತು ಗೆಳೆಯರು ಎಲ್ಲಿಗೋ ಹೊರಟಿದ್ದರಂತೆ. ತುಮಕೂರಿನ ಬಳಿ ಕಾರ್‌ ಕೆಟ್ಟು ನಿಂತಿತು. ಶಿವಾ ಎಂದು ಹತ್ತಿರದಲ್ಲೇ ಇದ್ದ ಸ್ನೇಹಿತರ ಮನೆಗೆ ಹೋದರು. ಕಾಫಿ ತೀರ್ಥವೆಲ್ಲ ಆಯಿತು. ಜತೆಗೆ ಬಂದಿದ್ದ ಗೆಳೆಯರು, ‘ಇನ್ನು ಹೊರಡೋಣವೇ?’ ಎಂದು ಕೇಳಿದರು. ಅದಕ್ಕೆ ಡಿವಿಜಿ ಹೇಳ್ತಾರೆ, ‘ಇರಿ, ನಾವು ಬರುವಾಗ ಮನೆಯ ಹೆಂಗಸು ಪಾಪ ಅಡುಗೆಮನೆಯಲ್ಲಿ ಅವರೇಕಾಳು ಸುಲಿಯುತ್ತಾ ಇದ್ರು, ಪಾಪ ಉಪ್ಪಿಟ್ಟು ಏನಾದ್ರೂ ಮಾಡಿದ್ರೆ ತಿನ್ನದೇ ಇದ್ದರೆ ಅನ್ಯಾಯ ಆಗೋದಿಲ್ವೇ? ಆದ್ರಿಂದ ಒಳಗಿನ ಪರಿಸ್ಥಿತಿ ಏನಿದೆ ನೋಡಿಯೇ ಹೊರಡೋಣ’ ಎಂದರಂತೆ. ಅದಕ್ಕೆ ಸ್ನೇಹಿತರು, ‘ಸ್ವಾಮಿ, ಮೊದಲೇ ನಿಮ್ಮದು ವಾಯು ಪ್ರಕೃತಿ. ಅವರೇಕಾಳು ತಿಂದರೆ ತೊಂದರೆ ಆಗಲ್ವೇ?’ ಎಂದು ಕೇಳಿದರಂತೆ. ಅದಕ್ಕೆ ಡಿವಿಜಿ ಹೇಳ್ತಾರೆ, ‘ನಿನಗೆ ಬುದ್ಧಿನೇ ಇಲ್ಲ ಕಣೋ, ಅವರೇಕಾಳು ನಿರ್ಮಿಸಿದ ಭಗವಂತ, ಶುಂಠಿ, ಜೀರಿಗೆ, ತುಳಸಿ ನಿರ್ಮಿಸಿಲ್ಲವೇ? ಸುಮ್ಮನೆ ಅವರೇಕಾಳೂ ತಿಂದು ಇದನ್ನೂ ತಿಂದು ಹೊರಡೋಣ’ ಎಂದರಂತೆ.

ಅವರೆಷ್ಟು ಜ್ಞಾನಿಗಳೋ ಅಷ್ಟೇ ಖಾದ್ಯಗಳ ವಿಶ್ಲೇಷಕರೂ ಆಗಿದ್ದರು. ಒಮ್ಮೆ ಮಹಾಮಹೋಪಾಧ್ಯಾಯ ರಂಗನಾಥ ಶರ್ಮರಿಗೆ ಕೇಳಿದರಂತೆ, ‘ಶರ್ಮಾ ನಿಮಗೆಕೃಷ್ಣಾಚಾರ್ಯರು ತಿಳಿದಿದ್ದರೋ?’. ಅದಕ್ಕೆ ಶರ್ಮಾರು, ‘ಇಲ್ಲ ನನಗೆ ಅವರ ಪುತ್ರ ತಿಮ್ಮಣ್ಣಾಚಾರ್ಯರು ಗುರುಗಳು’ ಎಂದರು. ಡಿವಿಜಿ ಮುಂದುವರಿಸುತ್ತಾ, ‘ನೋಡಿ, ನಾನು ವ್ಯಾಕರಣ ಶಾಸ್ತ್ರ ಕಲಿಯಬೇಕೆಂದು ಅವರನ್ನು ಆಶ್ರಯಿಸಿದೆ. ಆದರೆ ಮಹನೀಯರಾದ ಅವರಿಂದ ನನಗೆ ಶಬ್ದ ಶಾಸ್ತ್ರದ ಆಚಾರ್ಯತ್ವ ಬರಲಿಲ್ಲ. ಸೂಪ ಶಾಸ್ತ್ರದ ಆಚಾರ್ಯತ್ವ ಬಂತು.’ ಸೂಪ ಎಂದರೆ ಊಟ. ‘ಅಂಥ ಸಜ್ಜನ ಮಾಧ್ವರ ಅಡುಗೆರುಚಿ ನಾಲಿಗೆಗೆ ಊರಿತೇ ವಿನಾ ಅಮರವಾಣಿ ಬರಲಿಲ್ಲ’ ಎನ್ನುತ್ತಾ ಒಂದು ವಿನೋದ ಪದ್ಯವನ್ನು ತಿರುಚಿ ಹೇಳಿದರು, ‘ನ ವೇದಾಂತೇ ಗಾಢಾನಚ ಪರಚಿತಂ ಶಬ್ದಶಾಸ್ತ್ರಂ, ನವಾ ತರ್ಕೇ ವೇದೇ ನಚ ಸರಸತ ಕಾವ್ಯನಿವಹೇ ವಯಂ, ಶ್ರೀಮದ್‌ ಬ್ಯಾಳಿ ಹುಳಿ, ಪಳದ್ಯ, ಕೋಸುಂಬರಿ, ತೊವ್ವಿ, ಹಯಗ್ರೀವ, ಆಂಬೋಡಿ, ಕರಿಕಡಬು ಅತದ್ಧನ್ಯ ರಸಿಕಾಃ’ ಎಂದರು. ಅಂದರೆ, ನಾವು ವೇದಾಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನು ಅರಿತವರಲ್ಲ, ತರ್ಕವೇದಗಳಲ್ಲಿ ಪರಿಶ್ರಮವಿಲ್ಲ, ಸಾಹಿತ್ಯಗಳಲ್ಲಿ ಸರಸತೆಯಿಲ್ಲ. ಕೇವಲ ಶ್ರೀಮದ್‌ ಬೇಳೆ ಹುಳಿ, ಪಳದ್ಯ, ಕೋಸುಂಬರಿ, ತೊವ್ವೆ, ಹಯಗ್ರೀವ, ಆಂಬೊಡೆ, ಕರಿಗಡಬು ಮತ್ತು ಮೊಸರನ್ನಗಳಲ್ಲಿ ರಸಿಕರಾದೆವು.

ಡಿವಿಜಿ ಎಂದರೆ ಹಾಗೇ, ಇದ್ದಿದ್ದರಲ್ಲಿ ಸುಖಿಯಾಗಿರೋದು. ಇಷ್ಟೇ ಅವರಿಗೆ ಗೊತ್ತಿದ್ದು. ನಾವೆಲ್ಲ ಅಯ್ಯೋ ನನ್‌ ಹತ್ರ ಇದಿಲ್ಲ, ಅದಿಲ್ಲ ಎಂದು ಕೊರಗುತ್ತೇವೆ. ಈ ಪಟ್ಟಿಗೆ ನನ್ನ ಹೆಸರನ್ನೇ ದಪ್ಪಕ್ಷ ರದಲ್ಲಿ ಬರೆದರೂ ಅಡ್ಡಿಯಿಲ್ಲ. ಆದರೆ ಡಿವಿಜಿಯವರನ್ನು ಓದಿದ ಮೇಲೆ ಖಂಡಿತವಾಗಿಯೂ ಒಂದು ದಿನವೂ ದೂರಲಿಲ್ಲ. ಯಾಕೆ?

ಈ ಉದಾರಹಣೆ ಕೇಳಿ: ಒಮ್ಮೆ ಸರ್‌. ಎಂ. ವಿಶ್ವೇಶ್ವರಯ್ಯನವರು ಡಿವಿಜಿಯವರ ಜತೆ ಕೆಲಸದ ನಿಮಿತ್ತ ಮಾತನಾಡಲು ಮನೆಗೆ ಬರಬಹುದೇ ಎಂದು ಪತ್ರ ಬರೆದರಂತೆ. ಅದಕ್ಕೆ ಡಿವಿಜಿ ಬರೆಯುತ್ತಾರೆ, ‘ಇಲ್ಲ ನೀವು ಬರಬೇಡಿ. ಬಂದರೆ ನಿಮಗೇ ಬೇಜಾರಾಗುತ್ತದೆ. ಏಕೆಂದರೆ ನನಗೆ ಧನಸಹಾಯವಾಗಬೇಕು ಎಂದು ನೀವು ನಾಲ್ಕಾರು ಸಲ ಪ್ರಯತ್ನ ಮಾಡಿದ್ದೀರಿ. ನನ್ನ ಮೊಂಡುತನದಿಂದ ಅದನ್ನೆಲ್ಲ ತಿರಸ್ಕರಿಸಿದ್ದೇನೆ. ನೀವು ನನ್ನ ಮನೆಗೆ ಬಂದರೆ ನಿಮ್ಮನ್ನು ನಿಮ್ಮ ಸ್ಥಾನಕ್ಕೆ ತಕ್ಕಂತೆ ನೋಡಿಕೊಳ್ಳುವಷ್ಟು ಸಾಮರ್ಥ್ಯ‌ವಿಲ್ಲ. ಸ್ವಲ್ಪ ದಾರಿದ್ರ್ಯವಿದೆ. ಆದ್ದರಿಂದ ನಮ್ಮ ಮನೆಗೆ ಬಂದರೆ ನಿಮಗೆ ಎರಡು ರೀತಿಯ ಬೇಜಾರಾಗುತ್ತೆ. ಒಂದು ಇವನು ಎಷ್ಟು ಹೇಳಿದರೂ ಮೊಂಡುತನ ಮಾಡಿದನಲ್ಲ ಎಂದು ನಂತರ, ಅದರಿಂದ ಬೇಜಾರು. ಇದು ಅನವಶ್ಯಕವಾಗಿದ್ದರಿಂದ ನಾನೇ ನಿಮ್ಮಲ್ಲಿ ಬಂದು ಭೇಟಿಯಾಗುತ್ತೇನೆ’ ಎಂದು ಬರೆದರು.

ಹಾಗಾದರೆ ಡಿವಿಜಿ ಬಳಿ ಹಣ ಇರಲಿಲ್ಲವಾ? ಇತ್ತು. ಯಾವ ಮಾದರಿಯಲ್ಲಿ ಎಂಬುದು ಮುಖ್ಯ.

ಡಿವಿಜಿಯವರ ಹುಟ್ಟುಹಬ್ಬದ ದಿನ ಸಾರ್ವಜನಿಕರೆಲ್ಲ ಸೇರಿ ಡಿವಿಜಿಯವರಿಗೆ ಒಂದು ಲಕ್ಷ  ರೂ.ಕೊಟ್ಟು ಸನ್ಮಾನಿಸಿದರು. ಆದರೆ ದಾರಿದ್ರ್ಯವಿದ್ದರೂ ಬಂದ ಹಣದಲ್ಲಿ ಒಂದು ರೂಪಾಯಿ ಸಹ ಉಳಿಸಿಕೊಳ್ಳದೇ ಅವರೇ ಕಟ್ಟಿರುವ ಗೋಖಲೆ ಸಂಸ್ಥೆಗೆ ಕೊಟ್ಟರು. ಆ ಷರತ್ತಿನ ಮೇಲೇ, ಡಿವಿಜಿಯವರು ಸನ್ಮಾನಕ್ಕೆ ತಲೆ ಕೊಟ್ಟಿದ್ದಂತೆ. ಆದರೆ ಅದರ ಮಾರನೇ ದಿನ ಆದದ್ದೇನು ಗೊತ್ತಾ? ಸುಧಾ ನಿಯತಕಾಲಿಕೆಯ ಸಂಪಾದಕರಾಗಿದ್ದ ಸೇತುರಾವ್‌ ಅವರು ಡಿವಿಜಿ ಮನೆಯ ಮುಂದೆ ಇರುವ ಅಂಗಡಿ ಪಕ್ಕದಲ್ಲಿ ಸಿಗರೇಟ್‌ ಸೇದುತ್ತಾ ನಿಂತಿದ್ದರಂತೆ. ಮನೆಯಲ್ಲಿದ್ದ ಅವರ ಸಹಾಯಕ ಒಂದು ಚೀಟಿಯನ್ನು ತಂದು ಅಂಗಡಿಗೆ ಕೊಟ್ಟ. ಶತವಾಧಾನಿ ಡಾ. ಆರ್‌. ಗಣೇಶರಿಗೆ ಅವಧಾನ ಕಲೆ ಹೇಗೋ, ಪತ್ರಕರ್ತರಿಗೆ ಅನುಮಾನ ಕಲೆ ಹಾಗೆ. ಹೀಗೆಲ್ಲ ಚೀಟಿ ಹೋದರೆ ಬಿಡುತ್ತಾರೆಯೇ? ತರಿಸಿ ಓದಿದರು, ನಿಬ್ಬೆರಗಾದರು. ಅದರಲ್ಲಿ ಹೀಗಿತ್ತು ? ‘ನಮ್ಮ ಮನೆಗೆ ಕಾಫಿಪುಡಿ, ಸಕ್ಕರೆ ಬೇಕಾಗಿದೆ. ತಕ್ಷ ಣಕ್ಕೆ ಕೊಡುವುದಕ್ಕೆ ಹಣವಿಲ್ಲ. ನಂತರ ಕೊಟ್ಟರೆ ಆದೀತೇ?’!

ಅಲ್ಲ ಸ್ವಾಮಿ, ನಿನ್ನೆಯಷ್ಟೇ ಮನುಷ್ಯನಿಗೆ ಒಂದು ಲಕ್ಷ  ರೂ. ಬಂದಿದೆ. ಒಂದು ರೂಪಾಯಿಯನ್ನೂ ತನಗಿಟ್ಟುಕೊಳ್ಳದೇ, ಮಾರನೇ ದಿನ ಕಾಫಿಪುಡಿಗೆ ಚೀಟಿ ಕಳುಹಿಸುವವರನ್ನು ಸಾಹಿತಿಯೆಂದಷ್ಟೇ ಹೇಳುತ್ತೀರೋ? ಅಥವಾ ಸಾಹಿತ್ಯ ಲೋಕದ ಋುಷಿ ಎನ್ನುತ್ತೀರೋ?

ಆಗ ಹೊಟ್ಟೆ ಉರಿ ಹೇಗಿರುತ್ತದೆ ನೋಡಿ, ಒಂದು ಲಕ್ಷ  ರೂ. ಬಂದಿದ್ದನ್ನು ನೋಡಿದ ಆಗಿನ ತೆರಿಗೆ ಆಧಿಕಾರಿಯೊಬ್ಬರು, ಡಿವಿಜಿಗೆತೆರಿಗೆ ತಪ್ಪಿಸಿಕೊಂಡಿದ್ದೀರೆಂದುಆರೋಪಿಸಿಸೆಕ್ಷ ನ್‌ 148 ಅನ್ವಯ ನೋಟಿಸ್‌ ಕಳುಹಿಸಿ, ಕಚೇರಿಗೆ ಹಾಜರಾಗುವುದಕ್ಕೆ ಹೇಳಿದರು. ಈಗ ಬಸವನಗುಡಿಯ ಗೋಖಲೆ ಸಂಸ್ಥೆಯ ಗ್ರಂಥಪಾಲಕರಾಗಿರುವ ಕೃಷ್ಣಮೂರ್ತಿಯವರ ಕೈಯಲ್ಲೇ ಕೊಟ್ಟು ಕಳುಹಿಸಿದರು. ಡಿವಿಜಿಯವರು ತಮ್ಮ ದೇಹ ಭಾರವಿರುವುದರಿಂದ ಅಲ್ಲಿಯವರೆಗೆ ಬರುವುದ ಕ್ಕಾಗುವುದಿಲ್ಲವೆಂದೂ, ಇಂಥ ದಿನಾಂಕದಂದು ಕಾರ್‌ ವ್ಯವಸ್ಥೆ ಮಾಡಿಸುತ್ತೇನೆ ತಾವೇ ಬನ್ನಿರೆಂದು ಪತ್ರ ಬರೆದರು. ಅದಕ್ಕೆ ಸಿಟ್ಟಿಗೆದ್ದ ಅಧಿಕಾರಿ, ಸರ್ಕಾರಿ ಕಾರ್‌ ನನಗೇ ಇರುವಾಗ, ಇವರೇನು ನನಗೆ ಹೇಳುವುದು ಅದೆಷ್ಟು ದುರಹಂಕಾರ ಎಂದು ಮನೆಗೆ ಹೋದರಂತೆ. ಕಾಯುತ್ತಾ ಕುಳಿತಿದ್ದ ಡಿವಿಜಿ ಬರಮಾಡಿಕೊಂಡರು. ಡಿವಿಜಿ ಮನೆಯಲ್ಲಿ ಏನೂ ಇರಲಿಲ್ಲ. ಒಂದು ಕೋಣೆಗೆ ಕರೆದುಕೊಂಡು ಹೋದ ಡಿವಿಜಿ ಅವರನ್ನು ಕುಳಿತುಕೊಳ್ಳುವಂತೆ ಹೇಳಿ, ಏನು ಕೇಳಬೇಕೋ ಕೇಳಿ ಎಂದರು. ಡಿವಿಜಿ ಕೋಣೆ ಹೇಗಿತ್ತು? ಎಲ್ಲಿ ನೋಡಿದರೂ ಕೇವಲ ಪುಸ್ತಕ, ಪುಸ್ತಕ ಮತ್ತು ಪುಸ್ತಕಗಳು ಮಾತ್ರ. ಜತೆಗೆ ಒಂದು ಗಣಪತಿ ಹಾಗೂ ಸರಸ್ವತಿ ವಿಗ್ರಹ. ಗ್ರಹಚಾರ ಬಿಡಿಸುತ್ತೇನೆಂದು ಬಂದ ಐಟಿ ಅಧಿಕಾರಿಯ ಮುಖ ಬೆಳಚಿಕೊಂಡಿತ್ತು. ತಪ್ಪಿನ ಅರಿವಾಯಿತು. ಆಗಿಂದ್ದಾಗ್ಗೆ ಸಾಷ್ಟಾಂಗ ನಮಸ್ಕಾರ ಮಾಡಿ, ನನ್ನದು ತಪ್ಪಾಯ್ತು ಸಾರ್‌ ಎಂದು ಹೇಳಿ, ನಿಮ್ಮಂಥೋರಿಗೆ ನೋಟಿಸ್‌ ನೀಡಿ ತಪ್ಪು ಮಾಡಿದೆ ಎಂದರು. ಅಷ್ಟೊತ್ತಿಗೆ ಪಕೋಡಾ ಬಂತು, ‘ತಗೋಳಿ, ಪಕೋಡ ತಗೋಳಿ’ ಎಂದು ಕೊಟ್ಟರಂತೆ.

ಬ್ರಿಟಿಷರ ಕಂಪನಿ ಸರ್ಕಾರ ಆಗಲೇ ಸಾವಿರ ರೂ.ಗಳ ಗೌರವಧನದ ಚೆಕ್‌ಅನ್ನು ಕ್ಯಾಶ್‌ ಮಾಡಿಕೊಳ್ಳದೇ ಟ್ರಂಕ್‌ನಲ್ಲಿಟ್ಟಿದ್ದ ಸಂತನ ಮನೆಗೆ ಐಟಿ ಅಧಿಕಾರಿ ಬಂದರೆ ಇನ್ನೇನು ಸಿಗುತ್ತದೆ ಹೇಳಿ? ಪಕೋಡ ಸಿಕ್ಕಿದ್ದೇ ಅಧಿಕಾರಿಯ ಪುಣ್ಯ.

ಇಂಥ ಗುಂಡಪ್ಪನವರನ್ನು ಟಿ.ಪಿ. ಕೈಲಾಸಂ ಅವರು ಯಾವಾಗಲೂ ಗಾಡ್‌ ವಿಲ್ಲಿಂಗ್‌(God Willing) ಗುಂಡಪ್ಪ ಎಂದು ಕರೆಯುತ್ತಿದ್ದರಂತೆ. ಅರೆ ಹೀಗೇಕೆ ಅವರನ್ನು ಕರೆಯುತ್ತೀರ ಎಂದು ಯಾರೋ ಕೇಳಿದರಂತೆ. ಅದಕ್ಕೆ ಟಿ.ಪಿ. ಕೈಲಾಸಂ ಕೊಟ್ಟ ಉತ್ತರ ಡಿವಿಜಿಯವರ ಮೇಲೆ ಅವರೆಷ್ಟು ಗೌರವ ಇಟ್ಟಿದ್ದರು ಎಂದು ತಿಳಿಯುತ್ತದೆ. ಅವರು ಹೇಳುತ್ತಾರೆ,‘ಇವರ ಹೆಸರು ಡಿ.ವಿ. ಗುಂಡಪ್ಪ. ಡಿ.ವಿ. ಎಂದರೆನಾನಿಟ್ಟ ಹೆಸರುಡಿಯೊ ವ್ಯಾಲೆಂಟೆ.

ಲ್ಯಾಟಿನ್‌ನಲ್ಲಿ ಡಿಯೊ ವ್ಯಾಲೆಂಟೆ ಎಂದರೆ ಗಾಡ್‌ ವಿಲ್ಲಿಂಗ್‌. ಅರ್ಥಾತ್‌ ದೇವರ ಇಚ್ಛೆಯ ಗುಂಡಪ್ಪ. ಅಂದರೆ, ದೇವರು ಅಪೇಕ್ಷೆಪಟ್ಟರೆ ಮಾತ್ರವೇ ಗುಂಡಪ್ಪನಂಥವರು ಹುಟ್ಟುವುದಕ್ಕೆ ಸಾಧ್ಯ. ಅದಕ್ಕೆ ನಾನು ಅವರನ್ನು ಗಾಡ್‌ ವಿಲ್ಲಿಂಗ್‌ ಗುಂಡಪ್ಪ ಎಂದು ಕರೆಯುತ್ತೇನೆ’ ಎಂದರಂತೆ. ಈಗ ನನಗಿರುವ ಬೇಸರವೊಂದೇ. ನನ್ನ ಅಪ್ಪ-ಅಮ್ಮ ಮದುವೆಯಾಗಿ ಒಂದೇ ವರ್ಷಕ್ಕೆ ನಾನು ಹುಟ್ಟಿದೆನಂತೆ. ನಮ್ಮ ಅಪ್ಪ ಅಮ್ಮ 30 ವರ್ಷ ಮೊದಲೇ ಮದುವೆಯಾಗಿ ನಾನು ಹುಟ್ಟಿದ್ದರೆ ಪ್ರಳಯ ಆಗುತ್ತಿತ್ತಾ? ಒಂದಷ್ಟು ಕಾಲ ಡಿವಿಜಿಯವರೊಟ್ಟಿಗಾದರೂ ಆಡಿ ಬೆಳೆಯುತ್ತಿದ್ದೆ.

ಇನ್ನೂ ಕಾಲ ಮಿಂಚಿಲ್ಲ. ಅವರನ್ನು ಓದಿಯಾದರೂ ಅವರ ಬಗ್ಗೆ ತಿಳಿಯೋಣ. ನಾನು ಇಲ್ಲಿ ತಿಳಿಸಿರುವ ಅಷ್ಟೂ ವಿಷಯಗಳನ್ನು ‘ಡಾ. ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ’, ಡಿ. ಆರ್‌. ವೆಂಕಟರಮಣನ್‌ರ ‘ವಿರಕ್ತ ರಾಷ್ಟ್ರಕ ಡಿ.ವಿ.ಜಿ’, ಡಾ. ಗುರುರಾಜ ಕರ್ಜಗಿಯವರ, ಮಹಾಮಹೋಪಾಧ್ಯಾಯ ಡಾ. ರಂಗನಾಥ ಶರ್ಮರ, ಶತಾವಧಾನಿ ಡಾ. ಆರ್‌.ಗಣೇಶರ ಮಾತುಗಳಿಂದ ತಿಳಿದುಕೊಂಡೆ. ಡಿವಿಜಿಯವರನ್ನು ನಾವು ನಮ್ಮ ನಡುವೆಯೇ ಜೀವಂತವಾಗಿರಿಸಿಕೊಳ್ಳಬೇಕಾದ ಒಂದೇ ಒಂದು ಮಾರ್ಗ ಎಂದರೆ ಅವರನ್ನು ಓದುವುದು, ಅವರ ಮಂಕುತಿಮ್ಮನ ಕಗ್ಗದಂತೆ ನಡೆಯುವುದು ಮತ್ತು ಇನ್ನೊಬ್ಬರಿಗೆ ಅವರ ಬಗ್ಗೆ ತಿಳಿಸುವುದು. ಮರೆತರೆ ಡಿವಿಜಿಗೇನೂ ತೊಂದರೆಯಿಲ್ಲ, ಬದುಕಿದ್ದಾಗಲೇ ಯಾರಿಗೂ, ಯಾವುದಕ್ಕೂ ಕ್ಯಾರೆ ಎನ್ನದ ಆತ್ಮ, ನೆನೆದಿಲ್ಲ ಎಂದು ಕೊರಗುವುದೇ? ಅವರನ್ನು ಮರೆತರೆ ನಾವೇ ನತದೃಷ್ಟರು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya