ಸಂತೋಷ್ ಜೀ ಪ್ರಭಾವಿಗಳಾ? ಹೇಗೆ? ಯಾಕೆ?

Who is influential?
ಹೀಗೊಂದು ಪ್ರಶ್ನೆ ನನ್ನನ್ನು ಕಾಡಿದ್ದು ಇವತ್ತು ಬೆಳಗಿನಿಂದ. ಪೇಪರ್‌ ಓದಿದಾಗಿನಿಂದ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪೇಪರ್‌ ಓದಿದಾಗಿನಿಂದ. ಹೌದ್ರೀ, ಸಂತೋಷ್‌ ಜೀ ಬಗ್ಗೆಯೇ ಮಾತಾಡ್ತಾ ಇರೋದು.

ಇಂಡಿಯನ್‌ ಎಕ್ಸ್‌ಪ್ರೆಸ್‌ನವರು ಒಟ್ಟು ನೂರು ಜನರನ್ನು ಭಾರತದ ಪ್ರಭಾವಿಗಳು ಎಂದು ಗುರುತಿಸಿದ್ದಾರೆ. ಸುಮ್ಮನೆ ಆ ಪಟ್ಟಿಯನ್ನು ಒಮ್ಮೆ ಇಣುಕಿ ನೋಡಿ, ಬಹಳ ಉದ್ದ ಆಗುತ್ತೆ ಎಂದರೆ, ಜಸ್ಟ್‌ 50 ಜನರ ಹೆಸರು ಮತ್ತು ಅವರ ಪಟ್ಟ ನೋಡಿ. ಎಲ್ಲರೂ ಮುಖ್ಯಮಂತ್ರಿಯೋ, ಸಚಿವನೋ, ಕಂಪನಿಯ ಸಿಇಒ, ಎಂ.ಡಿ., ಸುಪ್ರೀಂ ಕೋರ್ಟ್‌ನ ಜಡ್ಜ್‌ ಅಥವಾ ಸಿನಿಮಾ ನಟ-ನಟಿಯರು. ಇವರನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಭಾವಿಗಳು ಎಂದು ನಮಗೆ ಸಪರೇಟ್‌ ಆಗಿ ಹೇಳುವುದು ಬೇಕಿಲ್ಲ, ಅಧಿಕಾರ ಇದೆ, ಬ್ಯಾಗ್ರೌಂಡ್‌ ಹಾಗಿದೆ ಬೇಡ ಎಂದರೂ ಪ್ರಭಾವಿಗಳೇ ಅವರೆಲ್ಲ.

ಆದರೆ ಈ ಹದಿನಾರದನೇ ಸ್ಥಾನದಲ್ಲಿರುವ ವ್ಯಕ್ತಿಯನ್ನು ನೋಡಿ. ಬಿಳಿ ಪಂಚೆ, ಬಿಳಿ ಜುಬ್ಬ, ಬಿಳಿ ಕೂದಲು, ಕೆಂಪಿ ಕುಂಕುಮ, ಹವಾಯಿ ಮಾದರಿಯ ಸವೆದ ಚಪ್ಪಲಿ, ಮನುಷ್ಯ ಬಹಳ ಓಡಾಡಿಸ್ತಾನೆ ಮಾರಾಯ ಎಂದು ದೂರು ಹೇಳುವ ಬಳಲಿರುವ ಕಾಲುಗಳು! ಹೆಸರು ಬಿ.ಎಲ್‌. ಸಂತೋಷ್‌.

ನೂರು ಜನರನ್ನು ನೋಡಿ, ಸಂತೋಷ್‌ ಜೀ ಅವರನ್ನು ನೋಡಿ. ವ್ಯತ್ಯಾಸ ಕಂಡಿತಾ? ಇವರ ಹತ್ರ ದುಡ್ಡಿಲ್ಲ, ಹಾಕುವ ಡ್ರೆಸ್ಸು ಬ್ರಾಂಡೆಡ್‌ ಅಲ್ಲ, ಸಿನಿಮಾ ನಟನಲ್ಲ, ಹೇಳಿಕೊಳ್ಳುವ ಯಾವ ಹಿನ್ನೆಲೆಯೂ ಇಲ್ಲ. ಮತ್ತೆ ಏನ್‌ ಸಾಧನೆ ಮಾಡಿದ್ದಕ್ಕೆ ಈ ಪಟ್ಟ ಸಾರ್‌ ಎಂದು ಕೇಳಿದರೆ, ಸಂಘಟನೆ, ಸಂಘಟನೆ ಮತ್ತು ಸಂಘಟನೆ ಮಾತ್ರ. ಈಗಲೂ ಒಂದು ಫೋನ್‌ ಮಾಡಿದರೂ, ಒಂದು ರುಪಾಯಿ ಅಪೇಕ್ಷಿಸದೇ ಪ್ರೀತಿಯಿಂದ ಜನರು ಕೆಲಸ ಮಾಡಿಕೊಡುತ್ತಾರೆ.

ಯಾಕಾಗಿ? ಕಾರಣ ಇದೆ. ಚುನಾವಣೆಯ ನಂತರ ಗೆದ್ದ ಮೇಲೆ ಕೆಲ ನಾಯಕರು, ಧನ್ಯವಾದ ಅದೂ ಇದು ಎಂದು ಹೇಳುತ್ತಾರೆ. ಮತದಾನ ಮುಗಿದ ದಿನ ಹುಡುಗರಿಗೆ ಸಿಗದೇ ಬಾಕಿ ಉಳಿಸಿಕೊಳ್ಳುವ ನಾಯಕರೇ ಹೆಚ್ಚು. ಸೋತರೆ ಹಣ ಕೊಡಲ್ಲ, ಗೆದ್ದರೆ ಹಣ ಕೊಟ್ಟು ಮತ್ತಷ್ಟು ಪ್ರಚಾರ ಗಿಟ್ಟಿಸಿಕೊಳ್ತಾರೆ. ಆದರೆ ಯಾವುದೇ ರಾಜಕೀಯ ಪದವಿಯನ್ನು ಹೊಂದದ ಸಂತೋಷ್‌ ಜೀ ಲೋಕಸಭಾ ಚುನಾವಣಾ ಪ್ರಚಾರ ಮುಗಿದ ದಿನ ಕಾರ್ಯಕರ್ತರಿಗೆ ಇನ್ನು ನಿಮಗಾಗಿ ಸಮಯ ಮಾಡಿಕೊಳ್ಳಿ ಎಂಬ ಪತ್ರ ನೋಡಿ ಬಹಳ ಅಚ್ಚರಿ ಎನಿಸಿತ್ತು.

ಪ್ರಜಾಪ್ರಭುತ್ವವನ್ನು ಹಬ್ಬ ಎನ್ನುತ್ತಾರೆ ನಿಜ. ಒಂದು ಹಬ್ಬದಲ್ಲಿ, ಸುಮ್ಮನೆ ಬಂದು ಊಟ ಮಾಡಿಕೊಂಡು, ಒಂದೊಳ್ಳೆ ಮಾತಾಡಿ ಹೋಗುವವರು ಬಹಳ ಇರುತ್ತಾರೆ. ನಾವು ಅವರಿಗೆ ಧನ್ಯವಾದ ಹೇಳುತ್ತೇವೆ. ಆದರೆ ಹಿತ್ತಲಕಡೆ ಪಾತ್ರೆ ತೊಳೆಯುವವರು, ಬೆಳಗಿನ ಜಾವ ಬೇಗ ಎದ್ದು ಅಡುಗೆ ಮಾಡುವವರು, ಚಾಪೆ ಮಡಿಸಿಡುವವರು, ಚಪ್ಪರ ಹಾಕುವುದಕ್ಕೆ ನೆರವಾದವರು ಹೀಗೆ ಇಂಥ ಎಲ್ಲರಿಗೂ ಕಾರ್ಯಕ್ರಮ ಆದಮೇಲೆ ಧನ್ಯವಾದ ಹೇಳುವುದಿದೆಯಲ್ಲ. ಅದು ನಮ್ಮ ಸಂಸ್ಕೃತಿ. ಸಂತೋಷ್‌ ಜೀ ಅವತ್ತು ಅದನ್ನು ಮಾಡಿದ್ದರು. ಪಾತ್ರೆ ತೊಳೆಯುವವನು ಸಂತೋಷ್‌ ಜೀ ಮಾತು ಕೇಳಬೇಕೆಂದಿಲ್ಲ. ಆದರೆ, ಅವರಿಗೂ ಫೋನ್‌ ಮಾಡುವ ಮಟ್ಟದಲ್ಲಿ ಇಂಥ ನಾಯಕ ಇದಾರೆ ಎಂದರೆ, ಆ ಅನುಭವ ಹೇಗಿರುತ್ತದೆ ಎಂದು ನನ್ನಂಥ ಕಿರಿಯನಿಗೆ ಗೊತ್ತಿರುತ್ತದಷ್ಟೇ.

ಕಳೆದ ವರ್ಷ ಚುನಾವಣಾ ಪ್ರಚಾರದ ವರದಿಗಾರಿಕೆ ಮಾಡುವುದಕ್ಕೆ ಊರೂರು ಸುತ್ತುತ್ತಿದ್ದಾಗ ಸಂತೋಷ್‌ ಜೀ ಅವರೂ ಕಂಡರು. ಅಲ್ಲಿ ಅಮಿತ್‌ ಷಾ, ಯಡಿಯೂರಪ್ಪರಂಥ ಘಟಾನುಘಟಿಗಳೇ ಇದ್ದರು. ವ್ಯಾನ್‌ ಮೇಲೆ ಸಂತೋಷ್‌ ಜೀ ಇರುತ್ತಾರೆ ನಮ್ಮ ಪೇಪರ್‌ಗೆ ಒಂದು ಫೋಟೊ ಕ್ಲಿಕ್ಕಿಸುವ ಎಂದುಕೊಂಡರೆ, ಸಂತೋಷ್‌ ಜೀ ವ್ಯಾನ್‌ ಮೇಲೆ ಇಲ್ಲವೇ ಇಲ್ಲ.
ಅಲ್ಲೆಲ್ಲೋ ನೂಕು ನುಗ್ಗಲಿನಲ್ಲಿ ಕಾರ್ಯಕರ್ತರನ್ನು ಸರಿಸುತ್ತಾ, ಜಾಗ ಬಿಡ್ರೀ ಎಂದು ಕೂಗುತ್ತಾ ವ್ಯಾನ್‌ಗೆ ದಾರಿ ಮಾಡಿಕೊಡುತ್ತಿದ್ದರು. ಸರಸರ ಎಂದು ಜನರು ಜಾಗ ಮಾಡಿಕೊಟ್ಟರು. ನನಗೆ ಬರುವ ಐಡಿಯಾಗಳು ಸಿಲ್ಲಿ ಎಂದುಕೊಂಡರೂ ಅಡ್ಡಿಯಿಲ್ಲ ಒಂದು ವಿಷಯ ಹೇಳಿಬಿಡುತ್ತೇನೆ – ಅವತ್ತಿದ್ದ ಆ ಜನರ ಮಧ್ಯದಲ್ಲಿ ಪ್ಯಾಂಟ್‌ ಹಾಕಿಕೊಂಡೇ ಹೋಗುವುದಕ್ಕೆ ಕಷ್ಟ. ಅಂಥದಲ್ಲಿ ಪಂಚೆ ಸುತ್ತಿಕೊಂಡು, ಸಾದಾ ಜುಬ್ಬ ಹಾಕಿ ಯಾವ ಧೈರ್ಯದ ಮೇಲೆ ಅಲ್ಲಿ ನುಗ್ಗಿದರೂ ಎಂದೇ ಅರ್ಥವಾಗಿರಲಿಲ್ಲ. ಅದಕ್ಕೆ ಧೈರ್ಯ ಬೇಕಿಲ್ಲ, ಜನರನ್ನು ಹ್ಯಾಂಡಲ್‌ ಮಾಡುವ ಪ್ರೀತಿ ಮುಖ್ಯ ಎಂದು ಅರ್ಥವಾಗಿದ್ದು ಜನರು ರಸ್ತೆಯನ್ನು ಫ್ರೀ ಮಾಡಿಕೊಟ್ಟಾಗಲೇ.

ಯಾಕಾಗಿ ಅವರು ಇವತ್ತು ಪ್ರಭಾವಿ ಅಂತ ಯಾರಿಗಾದರೂ ಡೌಟ್‌ ಇದ್ದರೆ, ದಯವಿಟ್ಟು ಇದನ್ನು ಓದಿ ಕ್ಲಿಯರ್‌ ಮಾಡಿಕೊಳ್ಳಿ.
ದಿಲ್ಲಿಯವರು ಕರ್ನಾಟಕ ಅಥವಾ ದಕ್ಷಿಣ ಭಾರತದವರನ್ನು ಹೇಗೆ ನೋಡುತ್ತಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ, ಸಂತೋಷ್‌ ಜೀಗೆ ದಕ್ಷಿಣ ಭಾರತದ ಚುನಾವಣೆಯ ಉಸ್ತುವಾರಿ ಕೊಟ್ಟರು. ತೆಲುಗು, ತಮಿಳುನಾಡು ಮತ್ತು ನಾವೆಲ್ಲ ‘ದೇವ್ರಾಣೆ ಅರ್ಥ ಆಗ್ತಿಲ್ಲ ಗುರೂ’ ಎಂದುಕೊಳ್ಳುವ ಮಲಯಾಳಿ ಭಾಷೆಯ ನಾಡನ್ನೂ ಸುತ್ತಿ ಬಂದಿದ್ದಾರೆ ಸಂತೋಷ್‌ ಜೀ. ಮಲಯಾಳಿಗಳು ಹೇಗೆ ಎಂದು ಐಟಿ ಫೀಲ್ಡ್‌ನಲ್ಲಿರುವವರೇ ಹೇಳ್ತಾರೆ ಕೇಳಿ. ಅಂಥವರೂ ಸಂತೋಷ್‌ ಜೀರನ್ನು ಒಪ್ಪಿಕೊಂಡರಲ್ಲ. ಹೇಗೆ? ಅವರು ಆಗ ಪ್ರಭಾವಿ ಆಗಿರಲಿಲ್ಲ. ಬದಲಿಗೆ ಸಂಘಟಿಸುವ ಶಕ್ತಿಯಿಂದ. ಈಗ ಅವರನ್ನು ದಿಲ್ಲಿ ಇನ್ನೂ ಹತ್ತಿರ ಹತ್ತಿರ ಬಿಟ್ಟುಕೊಂಡಿದೆ. ಯಾಕಾಗಿ? ಮತ್ತೆ ಕಾರಣ ಹೇಳಬೇಕಾ? ಹ್ಹಹ್ಹಾ!

ಅಷ್ಟೇ ಯಾಕೆ? ನಾನು ಮೊನ್ನೆ ತಿರುವಣ್ಣಾಮಲೈಗೆ ಹೋದಾಗ, ಅಲ್ಲಿ ಯಾವುದೇ ನಿಯಮ ಇಲ್ಲದಿದ್ದರೂ ಆ ಸೆಕೆಗೆ ಪ್ಯಾಂಟ್‌ ಶರ್ಟ್‌ ಕಳಚಿ, ಪಂಚೆ, ಶಲ್ಯ ಉಡಬೇಕಾಗಿ ಬಂತು. ನಾನು ಪಂಚೆ ಉಟ್ಟು ರೆಡಿಯಾಗಿ ನಿಂತಾಗ ನನ್ನ ಜತೆಗೆ ಬಂದಿದ್ದ ಮಿತ್ರರೊಬ್ಬರು ನನ್ನನ್ನ ನೋಡಲಿಲ್ಲ, ನನ್ನ ಪಂಚೆಯನ್ನೇ ನೋಡುತ್ತಿದ್ದರು. ಯಾಕೆ ಸ್ವಾಮಿ, ಏನಾದ್ರೂ ಮಿಸ್ಟೇಕ್‌ ಇದ್ಯಾ? ಅಥವಾ ಒಳಗೆ ಏನಾದ್ರೂ ಕಾಣಿಸ್ತಿದೆಯಾ ಎಂದು ಜೋರಾಗಿ ನಕ್ಕೆ. ಆಗ ಅವರು ನಗಲಿಲ್ಲ. ಬಹಳ ಸೀರಿಯಸ್‌ ಆಗೇ, ‘ಇಲ್ಲ ಸಾರ್‌ ಈ ಸ್ಟೈಲಲ್ಲಿ ಸಂತೋಷ್‌ ಜೀ ಪಂಚೆ ಉಡುತ್ತಾರೆ. ನೋಡಿದೀನಿ’ ಅಂದ್ರು. ಅಷ್ಟೇ ಅಲ್ಲ, ‘ನನಗೂ ಹೇಳಿಕೊಡಿ ಹೇಗೆ ಉಟ್ಟುಕೊಂಡಿರಿ’ ಎಂದು ಕೇಳಿ, ಮತ್ತೊಮ್ಮೆ ನಾನು ಪಂಚೆ ಬಿಚ್ಚಿ, ಅವರ ಮುಂದೆಯೇ ಉಡಬೇಕಾಯಿತು.

ಪ್ರಭಾವಿಗಳು ಬೀರುವ ಪ್ರಭಾವ ಇಂಥದ್ದು.ಅಮಿತಾಬ್‌ ಬಚ್ಚನ್‌ ಹಾಕುವ ದುಬಾರಿ ಬಟ್ಟೆಯನ್ನು ಮತ್ತೊಬ್ಬ ಶ್ರೀಮಂತ ಹಾಕಿ, ಅದರಿಂದ ಕಡಿಮೆ ದರದಲ್ಲಿ ಸಿಗುವ ಅಂಥದ್ದನ್ನೇ ಮಾಮೂಲಿ ಜನರು ಹಾಕಿ ಅದು ಫೇಮಸ್‌ ಆಗುವುದು ಮಾಮೂಲಿ. ಅದು ಪ್ರಭಾವ ಆಗುವ ಬದಲು ಸಮೂಹ ಸನ್ನಿ ಆಗಿಬಿಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ ಒಂದು ಫ್ಯಾಷನ್‌ ಪರಂಪರಾನುಗತವಾಗಿ ಬಂದಿದ್ದು, ಸಾಮಾನ್ಯ ಜನರೂ ಅನುಸರಿಸುತ್ತಿದ್ದು, ಅದನ್ನು ಒಬ್ಬ ಮಹನೀಯರು ಧರಿಸಿದ ಮೇಲೆ, ಅದು ಶ್ರೀಮಂತರು ಅಥವಾ ಸಮಾಜದಲ್ಲಿ ಮೇಲ್ಪಂಕ್ತಿಯಲ್ಲಿರುವ ಜನರ ಗಮನ ಸೆಳೆಯುತ್ತದಲ್ಲ, ನಿಜವಾಗಿ ತಳದಿಂದ ತಾರಕಕ್ಕೇರಿದ ಪ್ರಭಾವಿಗಳ ಪ್ರಭಾವದ ಲಕ್ಷಣ.

ಉದಾಹರಣೆಗೆ ನೀರು ಹರಿಯುವಾಗ ಒಂದು ದೊಡ್ಡ ಮರವನ್ನು ಬಿಸಾಡಿದರೆ ಹರಿಯುವ ಕಡೆ ಹೋಗುತ್ತದೆ. ಎಲ್ಲರೂ ಮರದ ಕಡೆ ಅಚ್ಚರಿಯಿಂದ ನೋಡುತ್ತಾರೆ ನಿಜ. ಆದರೆ ಅದು ಕಾಮನ್‌. ಆದರೆ, ಗರುಡ ಸಂಜೀವಿನಿ ಬೇರನ್ನು ಹರಿಯುವ ನೀರಿನಲ್ಲಿ ಬಿಟ್ಟು ಹೋಗಿ. ನೀರು ಹರಿಯುವ ಕಡೆ ಬಿಟ್ಟು ನೋಡಿ, ಉಲ್ಟಾ ಹೋಗುತ್ತಿರುತ್ತದೆ. ಆಗ ದೊಡ್ಡ ಮರವನ್ನು ಮರೆಯುವ ಜನ ಗರುಡ ಸಂಜೀವಿನಿಯ ವಿಡಿಯೊ ಮಾಡಲು ಶುರು ಮಾಡುತ್ತಾರೆ. ಹಾಗೆಂದು ಗರುಡ ಸಂಜೀವಿನಿಯನ್ನು ಹತ್ತು ಬೇರುಗಳ ಮಧ್ಯೆ ಇಟ್ಟರೆ ಯಾವುದು ಏನು ಎಂದು ಗೊತ್ತಾಗುವುದಿಲ್ಲ. ಅಷ್ಟು ಸಾಮಾನ್ಯವಾಗಿರುತ್ತದೆ. ಗೊತ್ತಾಗುವ ಸಮಯದಲ್ಲಿ ಅದರ ಶಕ್ತಿ ಏನು ಎಂದು ತಿಳಿಯುತ್ತದೆ. ಪ್ರಭಾವಿಗಳೂ ಹಾಗೇ, ಎಲ್ಲರ ಜತೆಗೆ ಸಾಮಾನ್ಯವಾಗಿದ್ದು, ಅಗತ್ಯ ಬಂದಾಗ ಅವರು ಯಾರು ಎಂದು ತಿಳಿಯುತ್ತದೆ. ಪ್ರಭಾವಿಗಳು ಕೇವಲ ಒಳ್ಳೊಳ್ಳೆ ಬಟ್ಟೆ ಹಾಕಬೇಕು ಅಂತಿಲ್ಲ. ಅವರು ಪಂಚೆ ಉಟ್ಟರೂ ಅದನ್ನೂ ಸ್ಟೈಲ್‌ ಎಂದೇ ಜನ ಪರಿಗಣಿಸುತ್ತಾರೆ. ಅದನ್ನು ಕಲಿಯುವುದಕ್ಕೆ ಯತ್ನಿಸುತ್ತಾರೆ. ಅಂಥವರ ಜೀವನವನ್ನು ಜನರು ಫಾಲೋ ಮಾಡುತ್ತಾರೆ. ವಿಷ್ಣುವರ್ಧನ್‌ ಅವರು ಬಿಳಿ ಬಟ್ಟ, ತಲೆಗೆ ಟೋಪಿ ಹಾಕಿಕೊಳ್ಳುವ ಮೊದಲು ಯಾರೂ ಹಾಕಿರಲಿಲ್ಲವಾ? ಹಾಕಿದ್ದರು. ಇದೂ ಹಾಗೇ.

ಇನ್ನೂ ಅವರು ಹೆಂಗೆ ಸ್ವಾಮಿ ಪ್ರಭಾವಿ ಎಂದು ಡೌಟಿದ್ದರೆ, ಅದು ಡೌಟಲ್ಲ, ಹೊಟ್ಟೆಕಿಚ್ಚು ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಲ್ಲೆ. ಬೇಕಾದ್ರೆ ಹೌದೋ ಇಲ್ಲವೋ ಆತ್ಮಾವಲೋಕನ ಮಾಡಿಕೊಳ್ಳಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya