ನಿಯಮ ಪಾಲಿಸಿದರೆ ದಂಡದ ಚಿಂತೆಯೇಕೆ?

 

ಮಹೇಶ್‌ ಬಾಬು ಅಭಿನಯದ ಭರತ್‌ ಅನೆ ನೇನು ಸಿನಿಮಾದ ಒಂದು ದೃಶ್ಯವನ್ನು ನೆನೆಯೋಣ. ಸಿನಿಮಾದಲ್ಲಿ ನಟ ಮಹೇಶ್‌ ಬಾಬು ಆಂಧ್ರದ ಮುಖ್ಯಮಂತ್ರಿಯಾಗುತ್ತಾರೆ. ಅದಕ್ಕೂ ಮುನ್ನ ಅವರು ರಸ್ತೆಗಳಲ್ಲಿ ಓಡಾಡುವಾಗ, ಸಂಚಾರಿ ನಿಯಮ ಉಲ್ಲಂಘನೆಯೂ ಬಹಳ ಸಹಜ ಎನ್ನಿಸುವಷ್ಟರ ಮಟ್ಟಿಗೆ ಜನರ ವರ್ತನೆಯಿದ್ದಿದ್ದನ್ನು ಗಮನಿಸುತ್ತಾರೆ. ತಾವು ಮುಖ್ಯಮಂತ್ರಿಯಾದ ಮೇಲೆ ಪರವಾನಗಿ ಇಲ್ಲದೇ ವಾಹನ ಚಲಾಯಿಸುವವರಿಗೆ 500 ರೂ. ಇದ್ದಿದ್ದನ್ನು 10 ಸಾವಿರಕ್ಕೆ ಏರಿಸುತ್ತಾರೆ. ಸಿಗ್ನಲ್‌ ಜಂಪ್‌ ಮಾಡಿದರೆ 1,000 ಇದ್ದದ್ದನ್ನು 20 ಸಾವಿರ ರೂ.ಗೆ ಏರಿಸುತ್ತಾರೆ. ವಾಹನ ಓಡಿಸುವಾಗ ಮೊಬೈಲ್‌ ಉಪಯೋಗಿಸಿದರೆ 1,000 ರೂ. ಇದ್ದಿದ್ದನ್ನು 25 ಸಾವಿರ ರೂ.ಗೆ ಏರಿಸುತ್ತಾರೆ. ಬೇಕಾಬಿಟ್ಟ ವಾಹನ ಚಲಾಯಿಸುವುದಕ್ಕೆ 1,000 ದಿಂದ 30 ಸಾವಿರಕ್ಕೆ ಏರಿಸುತ್ತಾರೆ. ರಾಜ್ಯದಲ್ಲೆಲ್ಲ ಅಲ್ಲೋಲ-ಕಲ್ಲೋಲವಾಗುತ್ತದೆ. ಜನರು ದಂಡ ಕಟ್ಟುವುದಕ್ಕೇ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಈ ಚಿತ್ರದಿಂದ ಪ್ರೇರಣೆ ಪಡೆದವರೆನ್ನುವಂತೆ ಪ್ರಧಾನಿ ಮೋದಿ ಸರ್ಕಾರ ಸಹ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಹಾಕುವ ದಂಡದ ಮೊತ್ತವನ್ನೂ ಏರಿಸಿದೆ. ಮಹೇಶ್‌ ಬಾಬು ಸಿನಿಮಾದಲ್ಲಿ ಏರಿಸಿದ್ದು ಅತಿರೇಖ ಎನ್ನುವಂತಿದ್ದರೆ, ಮೋದಿ ಸರ್ಕಾರ ಮಹೇಶ್‌ ಬಾಬುಗಿಂತ ಹೃದಯವಂತರು ಎನ್ನಬಹುದು. ಹೆಲ್ಮೆಟ್‌ ಇಲ್ಲದ ಪ್ರಯಾಣಕ್ಕೆ 1,000 ರೂ. ದಂಡ ಹಾಕಿದ್ದಾರೆ. ಇನ್ನೂ ಹಲವು ಉಲ್ಲಂಘನೆಗಳಿಗೆ ಅದರ ಅನುಸಾರವಾಗಿ ದಂಡ ಹೆಚ್ಚಿಸಿದ್ದಾರೆ. ಇದು ಸೆಪ್ಟೆಂಬರ್‌ ಒಂದರಿಂದ ಜಾರಿಯಾಗಿದ್ದು, ಟ್ರ್ಯಾಕ್ಟರ್‌ ಓಡಿಸುವವನಿಗೆ 59 ಸಾವಿರ ರೂ. ದಂಡ, ಆಟೊಚಾಲಕನಿಗೆ 47,500 ರೂ. ದಂಡ, ಮತ್ತೊಬ್ಬ ಆಟೊಚಾಲಕನ ಮೇಲೆ 32,500 ರೂ. ದಂಡ, ಬೆಂಗಳೂರಿನಲ್ಲೂ ಒಬ್ಬನ ಮೇಲೆ 20,000 ರೂ. ದಂಡ ಎಂಬೆಲ್ಲ ಸುದ್ದಿಗಳನ್ನು ವರದಿ ಮಾಡುತ್ತಿದೆ.
ತಮ್ಮ ಮಕ್ಕಳಿಗೆ ಬಯ್ದು ಬುದ್ಧಿ ಕಲಿಸುವುದಕ್ಕೂ ಟೈಂ ಇಲ್ಲದ ಜವಾಬ್ದಾರಿಯುತರೆಲ್ಲ ಮೋದಿಗೆ ಬಯ್ಯಲು ಟಿಕೆಟ್‌ ಪಡೆದು ಬರುತ್ತಿದಾರೆ. ಇದು ಜನರನ್ನು ಸುಲಿಗೆ ಮಾಡುವ ಒಂದು ಹೊಸ ಮಾರ್ಗವಷ್ಟೇ, ಇಷ್ಟೆಲ್ಲ ಹೆಚ್ಚಿಸುವ ಅಗತ್ಯ ಏನಿತ್ತು ಎಂದೆಲ್ಲ ಕೇಳುತ್ತಿದ್ದಾರೆ. ಅಷ್ಟೆಲ್ಲ ಹೆಚ್ಚಿಸಿದ್ದು ಯಾಕೆ ಎಂದು ಕೇಳುವ ಮುನ್ನ ಯಾಕಾಗಿ ಹೆಚ್ಚಿಸಬಾರದು ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ.

ನಾವು ನಮ್ಮನ್ನಷ್ಟೇ ನೋಡುತ್ತಿದ್ದೇವೆ. ಆದರೆ, ಬೇರೆ ದೇಶಗಳನ್ನು ನೋಡಿದರೆ, ಅಲ್ಲಿ ಹಾಕುವ ದಂಡ ಕಟ್ಟುವುದಕ್ಕೆ ಹೋದರೆ ಕಣ್ಣಲ್ಲಿ ನೀರಲ್ಲ, ರಕ್ತವೇ ಬರುತ್ತದೆ. ಅಮೆರಿಕದಲ್ಲಿ ಹೆಚ್ಚಿಗೆ ವೇಗದಲ್ಲಿ ಗಾಡಿ ಓಡಿಸಿದ ವ್ಯಕ್ತಿಗೆ 1,79,000 ರೂಪಾಯಿ ದಂಡ ಹಾಕಿದ್ದಾರೆ. ಅಲ್ಲದೇ ಜೈಲು ಶಿಕ್ಷೆ ಕೂಡ ವಿಧಿಸಬಹುದು. ಐಸ್ಲೆಂಡ್‌ನಲ್ಲಿ 1,94,000 ರೂಪಾಯಿ ದಂಡವಿದೆ. ಯುಕೆನಲ್ಲಿ ಪೋರ್ಶೆ ಕಾರ್‌ನವನು 172ಮೈಲಿ ವೇಗದಲ್ಲಿ ಚಲಾಯಿಸಿದ ಎಂದು ಅವನಿಗೆ ಹಾಕಿದ್ದ ದಂಡ 5,74,000. ಬಹಳ ಮೈಲಿಗಳವರೆಗೂ ನೇರವಾಗಿದ್ದು, ಖಾಲಿಯಾಗಿರುವುದಕ್ಕೇ ಖ್ಯಾತಿ ಪಡೆದಿರುವ ಹೈವೆಗಳಲ್ಲಿ ಒಂದು ಕೆನಡಾದ ಹೈವೇ. ಆದರೆ ಹುಚ್ಚಾಪಟ್ಟೆ ಗಾಡಿ ಓಡಿಸಿದರೆ, ಜೀವನಪರ್ಯಂತ ಜೀತ ಮಾಡಿಯೇ ಬದುಕುವಂಥ ಪರಿಸ್ಥಿತಿಯೂ ಬರಬಹುದು. ಏಕೆಂದರೆ ಅಲ್ಲಿನ ಕಾನೂನಿನ ಪ್ರಕಾರ, ವೇಗವಾಗಿ ವಾಹನ ಓಡಿಸುವವರಿಗೆ 18 ಲಕ್ಷ ರೂಪಾಯಿಯವರೆಗೂ ದಂಡ ವಿಧಿಸಬಹುದಾಗಿದೆ. ಇನ್ನು ಫಿನ್ಲೆಂಡ್‌ನಲ್ಲಿ ಮನುಷ್ಯದ ಆದಾಯದ ಅನುಸಾರ ದಂಡ ವಿಧಿಸುವ ಕಾನೂನು ಸಹ ಇದೆ. ಅಷ್ಟಾದರೂ ಯಾವನೋ ಒಬ್ಬ ಆಸಾಮಿ ವೇಗದಲ್ಲಿ ಗಾಡಿ ಚಲಾಯಿಸುತ್ತಿದ್ದ ಎಂದು ಅವನಿಗೆ ಹಾಕಿದ ದಂಡವೆಷ್ಟು ಗೊತ್ತಾ? 1.5 ಕೋಟಿ ರೂ.!! ಮಹೇಶ್‌ ಬಾಬು ಸಿನಿಮಾದಲ್ಲಿ ನೋಡಿದ ಹಣವೇ ಅತಿರೇಕ ಎಂದುಕೊಂಡಿದ್ದ ನಮಗೆ, ಫಿನ್ಲೆಂಡ್‌ನಲ್ಲಿ ನಿಜವಾಗಿಯೂ ಇಷ್ಟು ಮೊತ್ತದ ದಂಡ ಹಾಕಿದ್ದು ಅಚ್ಚರಿಯೇ ಸರಿ.

ಆದರೆ ಯಾಕೆ ಹೀಗೆ ಇಲ್ಲಿ ಇಷ್ಟೆಲ್ಲ ದಂಡ ಹಾಕುತ್ತಿದ್ದಾರೆ? ಅದರಿಂದ ಪರಿಣಾಮವೇನಾಗಿದೆ? ಉತ್ತರ ಇಷ್ಟೇ- ಮೇಲೆ ಉಲ್ಲೇಖಿಸಿದ ದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯು ಮೊದಲಿನಿಂದಲೂ ಬಹಳವೇ ಏನಿಸುವಷ್ಟರ ಮಟ್ಟಿಗೆ ಇತ್ತು. ಇದನ್ನು ತಡೆಯುವುದಕ್ಕಾಗಿ ಅವರು ಹೆಚ್ಚಿಗೆ ದಂಡ ವಿಧಿಸುತ್ತಾ ಬಂದರು. ಕೆಲವು ವರ್ಷ ಇದು ಸಫಲವಾಗಲಿಲ್ಲವಾದರೂ, ಕ್ರಮೇಣ ಒಮ್ಮೆ ದಂಡ ಕಟ್ಟಿದವರು ಮತ್ತೊಮ್ಮೆ ಕಟ್ಟುತ್ತಿರಲಿಲ್ಲ. ಹಾಗೇ, ಎಲ್ಲರಲ್ಲೂ ಜಾಗೃತಿ ಮೂಡಿ ಪ್ರಕರಣಗಳೇ ಕಡಿಮೆಯಾಗಿವೆ. ಇದನ್ನೇ ಭಾರತವೂ ಅನುಸರಿಸುತ್ತಿದೆ. ಅದರಲ್ಲಿ ತಪ್ಪೇನು?

ಈಗ ಹೊಸ ಪ್ರಶ್ನೆ ಬರುತ್ತದೆ, ಅದೆಲ್ಲ ಸರಿ, ಆ ದೇಶಗಳಲ್ಲಿ ಅಷ್ಟು ಕಟ್ಟುವ ತಾಕತ್ತಿದೆ ಕಟ್ಟುತ್ತಾರೆ ಹಾಗೂ ಆ ದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾದವು ಎಂದು ಭಾರತಕ್ಕೂ ಹೇಗೆ ಅನ್ವಯಿಸಲಾಗುತ್ತೆ ಎಂಬುದು. ಅದಕ್ಕೆ ದಾಖಲೆ ಕೊಡುತ್ತಾ ಹೋದರೆ, ಒಂದೇ ಲೇಖನಕ್ಕೆ ಮುಗಿಯುವುದಿಲ್ಲ. ಹಾಗಾಗಿ ಇತ್ತೀಚಿನ ಎರಡ್ಮೂರು ರಾಜ್ಯಗಳ ಅಂಕಿ ಅಂಶಗಳನ್ನು ಕೊಡುತ್ತಿದ್ದೇನೆ.

ಹೆಚ್ಚು ಜನಜಂಗುಳಿ ಇರುವ ಮುಂಬೈನಲ್ಲಿ 2018ರ ಲೆಕ್ಕ ನೋಡಿದರೆ, ಒಟ್ಟು 139 ಕೋಟಿ ರುಪಾಯಿಯಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ. 2017ಕ್ಕಿಂತ 8.6 ಕೋಟಿ ರೂ.ನ್ನು ಹೆಚ್ಚಿಗೆ ವಸೂಲಿ ಮಾಡಿದ್ದಾರೆ. ಅಂದರೆ ಅಲ್ಲಿಗೆ ಪ್ರಕರಣಗಳೂ ಹೆಚ್ಚಾಗಿದೆ ಎಂದಾಯಿತು. ಹೈದರಾಬಾದ್‌ನಲ್ಲಿ 2017ರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾದದ್ದು 37 ಲಕ್ಷವಾಗಿದ್ದು, 27 ಕೋಟಿ ರೂ. ವಸೂಲಿಯಾಗಿದೆ. ಆದರೆ 2018ರ ಲೆಕ್ಕ ನೋಡಿದರೆ ಅಚ್ಚರಿಯಾಗುತ್ತದೆ. ಒಟ್ಟು 46 ಲಕ್ಷ ಪ್ರಕರಣಗಳು ದಾಖಲಾಗಿದ್ದು, 54 ಕೋಟಿ ರೂ. ವಸೂಲಾಗಿದೆ. ದಂಡ ಹಾಕಿದರೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಯಾಕಾಗಿ? ಜೇಬಲ್ಲಿ ಹಣ ಇದೆ. ಹೆಲ್ಮೆಟ್‌ ಇಲ್ಲದೇ ಗಾಡಿ ಓಡಿಸಿದರೆ ಕಟ್ಟಬೇಕಾಗಿದ್ದದ್ದು ಕೇವಲ 100 ರೂ. ಮಾತ್ರ. ಒಂದು ದರ್ಶಿನಿಯಲ್ಲಿ ಊಟ ಮಾಡಿ ಜ್ಯೂಸ್‌ ಕುಡಿದು ಬೀಡಾ ಹಾಕಿದರೇ ನೂರೈವತ್ತಾಗುವ ಕಾಲದಲ್ಲಿ 100 ರೂಪಾಯಿಗೆ ಲೆಕ್ಕವೇ ಇಲ್ಲದಂತಾಗಿತ್ತು. 1,000 ರೂ. ಮಾಡಿರುವುದು ಸ್ವಲ್ಪ ಚಿಂತೆ ಮಾಡುವ ಹಾಗೆ ಮಾಡಿದೆ. ದಂಡ ಕಟ್ಟುವವನಾದರೂ ಎಷ್ಟು ದಿನ ಎಂದು ಕಟ್ಟುತ್ತಾನೆ? ಕೊನೆಗೆ ಆಫೀಸಿಗೆ ತಡ ಆದರೂ ತೊಂದರೆ ಇಲ್ಲ. ಹೆಚ್ಚೆಂದರೆ 500 ರೂ. ಕಳೆದುಕೊಳ್ಳಬಹುದು. ಆದರೆ ರಸ್ತೆಯಲ್ಲಿ ಮಾತ್ರ ಸಾವಕಾಶವಾಗಿ, ಎಲ್ಲ ಸಿಗ್ನಲ್‌ನಲ್ಲೂ ನಿಂತೇ ಬರುತ್ತೇನೆ ಎಂಬ ನಿರ್ಧಾರಕ್ಕೆ ಬರಲೇಬೇಕಾಗುತ್ತದೆ. ಜೇಬಿಗೆ ಕತ್ತರಿ ಬೀಳದವರು ಬೀಳುವವರೆಗೂ ಕಾಯುತ್ತಾರಷ್ಟೇ.

ಈಗ ದಂಡ ಹೆಚ್ಚಿಸಿದ ತಕ್ಷಣವೇ ಪ್ರಕರಣಗಳು ಕಡಿಮೆಯಾಗುವುದಿಲ್ಲ. ಸ್ವಲ್ಪ ಸಮಯ ಬೇಕು. ಯಾಕೆಂದರೆ ಇಷ್ಟಾದರೂ ಹೊಸ ಕಾನೂನು ಸುಮಾರು ಜನರಿಗೆ ತಿಳಿಯದೇ ಎಷ್ಟೋ ಪ್ರಕರಣಗಳು ದಾಖಲಾಗಿಬಿಟ್ಟಿದೆ. ಬೇರೆ ರಾಜ್ಯಗಳು ಬಿಡಿ, ನಮ್ಮ ಬೆಂಗಳೂರು ಒಂದರಲ್ಲೇ ಇದೇ ವರ್ಷ 2019ರ ಜುಲೈ 24ರಿಂದ ಆಗಸ್ಟ್‌ 17ರ ತನಕ, ಅಂದರೆ ಕೇವಲ 14 ದಿನಗಳಲ್ಲಿ ಒಟ್ಟು 13,890 ಪ್ರಕರಣಗಳನ್ನು ದಾಖಲಿಸಿ 98.27 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದಾರೆ. ಇದರಲ್ಲಿ ವಾಹನ ಚಲಾಯಿಸುವಾಗ ಮೊಬೈಲ್‌ ಬಳಸುತ್ತಿರುವವರ ವಿರುದ್ಧ ದಾಖಲಾಗಿರುವ ಪ್ರಕರಣಗಳೇ 5,797! ಇನ್ನು ನಿಗದಿತಕ್ಕಿಂತ ಹೆಚ್ಚು ತೂಕವನ್ನು ಹಾಕಿ ವಾಹನ ಚಲಾಲಿಸುತ್ತಿರುವವರ ವಿರುದ್ಧ 2,513 ಪ್ರಕರಣಗಳನ್ನು ದಾಖಲಿಸಿದ್ದು, 25.13 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೇ, ನೊ ಪಾರ್ಕಿಂಗ್‌ನಲ್ಲೇ ಕುಬೇರನ ಮೊಮ್ಮಗನ ಹಾಗೆ ಗಾಡಿ ನಿಲ್ಲಿಸುತ್ತಿದ್ದ 1,433 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 14.33 ಲಕ್ಷ ರೂ. ದಂಡ ವಸೂಲಾಗಿದೆ. ಬೇಕಾಬಿಟ್ಟಿ ವಾಹನ ಚಲಾಯಿಸುವವರಿಂದಲೂ 15.63 ಲಕ್ಷ ರೂ. ದಂಡ ಎತ್ತಲಾಗಿದೆ.

ಇಷ್ಟೆಲ್ಲ ಹೇಳಿದರೂ ಕೆಲವರ ವಾದ ಹೇಗಿರುತ್ತೆ ಗೊತ್ತಾ? ಹೌದು ರೀ, ದಂಡದ ಮೊತ್ತ ಹೆಚ್ಚಿಸಿದ್ದಾರೆ ನಿಜ. ಆದರೆ, ಇದರಿಂದ ಪೊಲೀಸರು ದುಡ್ಡು ಹೊಡೆಯಲು ಅನುಕೂಲ ಮಾಡಿಕೊಟ್ಟಂತೆಯೇ ವಿನಾ ಜನರಿಗೂ ಬುದ್ಧಿ ಬರಲ್ಲ ಅಥವಾ ಸರ್ಕಾರಕ್ಕೂ ಹಣ ಹೋಗುವುದಿಲ್ಲ. ಈಗ ಪೊಲೀಸರು ಹಣವನ್ನು ಸರ್ಕಾರಕ್ಕೆ ಕಟ್ಟದೇ ಜೇಬಿಗಿಳಿಸುತ್ತಾರೆ ಎಂಬ ಆರೋಪ ನಿಜವಾಗುವುದು ಯಾವಾಗ? ಸಾರ್ವಜನಿಕರು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ 50 ಕಿ.ಮೀ. ವೇಗದಲ್ಲಿ ಗಾಡಿ ಓಡಿಸಿದರೆ, ಹೆಲ್ಮೆಟ್‌ ಧರಿಸಿದ್ದರೆ, ಸಿಗ್ನಲ್‌ ಜಂಪ್‌ ಮಾಡದಿದ್ದರೆ, ಅಡ್ಡಾದಿಡ್ಡಿ ಗಾಡಿ ಓಡಿಸದಿದ್ದರೆ, ಒನ್‌ ವೇನಲ್ಲಿ ಹೋಗದಿದ್ದರೆ ಹೀಗೆ ಬಹಳ ಸರಳವಾದ ಒಂದಷ್ಟು ನಿಯಮಗಳನ್ನು ಪಾಲನೆ ಮಾಡಿಬಿಟ್ಟರೆ, ಜನರನ್ನು ಪೊಲೀಸರು ಯಾಕಾಗಿ ಹಿಡಿಯುತ್ತಾರೆ? 70-80ರಲ್ಲಿ ಓಡಿಸುವ ಗಾಡಿಗೆ ಅಡ್ಡ ಬಂದು ಜೀವಕ್ಕೇ ಕುತ್ತು ತಂದುಕೊಂಡು ಹಿಡಿಯುವುದಕ್ಕೆ ಪೊಲೀಸರಿಗ್ಯಾವ ಕರ್ಮ?

ನಿಯಮವನ್ನು ಪಾಲನೆ ಮಾಡದೇ ಇದ್ದಾಗ, ದಂಡ ಬೀಳುತ್ತದೆ. ದಂಡ ಕಟ್ಟುವಷ್ಟು ಹಣ ಇಲ್ಲದಿದ್ದಾಗ ಸಹಜವಾಗಿಯೇ ವ್ಯವಹಾರ ಶುರು ಮಾಡಿಕೊಳ್ಳಬೇಕಾಗುತ್ತದೆ. ವ್ಯವಹಾರ ಮಾಡುವುದು ಯಾರ ಅನಿವಾರ್ಯಕ್ಕೆ? ತಪ್ಪು ಮಾಡಿದವನ ಅನಿವಾರ್ಯಕ್ಕೆ. ಮೊದಲೆಲ್ಲ ಬಾರಲ್ಲಿ 8 ಸಾವಿರ ರೂ. ಖರ್ಚು ಮಾಡಿ ಪಾರ್ಟಿ ಮಾಡಿ, ಆ ಅವಸ್ಥೆಯಲ್ಲೇ ಗಾಡಿ ಓಡಿಸಿ ಸಿಕ್ಕಿಬಿದ್ದಾಗ 4000 ರೂ. ಕಟ್ಟಬೇಕಿತ್ತು. ವ್ಯವಹಾರ ಮಾಡಿದರೆ, 2,500ಕ್ಕೆ ಮುಗಿಯುತ್ತಿತ್ತು. ಬಾರಲ್ಲಿ 8 ಸಾವಿರ ಚೆಲ್ಲಿದವನಿಗೆ 2500 ಸಾವಿರ ಯಾವ ಲೆಕ್ಕ? ಕೊಡುತ್ತಿದ್ದ. ಆದರೆ ಈಗ 10,000 ಸಾವಿರ ಆಗಿರುವುದರಿಂದ, 5 ಸಾವಿರದ ಕಡಿಮೆ ಬಿಡುವ ಮಾತೇ ಇರುವುದಿಲ್ಲ. ಕೋರ್ಟ್‌ನಲ್ಲೇ ಕಟ್ಟಿದರೆ, 10,000ದ ಜತೆಗೆ ಲಾಯರ್‌ ಫೀಸು, ಕೋರ್ಟ್‌ ಫೀಸು ಇತ್ಯಾದಿ. ಜತೆಗೆ ದಿನವೆಲ್ಲ ಹಾಳು. ರಾತ್ರಿ ಕುಡಿದ ಲವಲೇಶವೂ ದೇಹಲ್ಲಿರದೇ ಬೆವರಾಗಿ ಹರಿದಿರುತ್ತದೆ. ಹೀಗಾದಾಗ ಇನ್ನೊಮ್ಮೆ ಕುಡಿಯುವಾಗ, ಹಣ ಕಟ್ಟಿದ ಘೋರ ಇತಿಹಾಸ ನೆನಪಾಗುತ್ತದೆ. ಕ್ಯಾಬ್‌ ಬುಕ್‌ ಮಾಡುತ್ತಾರೆ.

ತಾತ್ಪರ್ಯ ಇಷ್ಟೇ: ತಪ್ಪೇ ಮಾಡದಿದ್ದರೆ, ದಂಡ ಕಟ್ಟುವುದೂ ಇರುವುದಿಲ್ಲ, ಲಂಚ ಕೊಡುವುದೂ ಇರುವುದಿಲ್ಲ. ಆದರೆ ಪೊಲೀಸರು ಲಂಚ ಕೇಳುತ್ತಾರೆ ಎಂಬೆಲ್ಲ ಕಾರಣ ನೀಡಿ ದಂಡದ ಮೊತ್ತವನ್ನೇ ಇಳಿಸಿ ಎಂದರೆ, ಮುಂದೆ ನಿಯಮವನ್ನು ಉಲ್ಲಂಘಿಸಿಯೇ ತೀರುತ್ತೇವೆಂದು ವಿರೋಧಿಸುತ್ತಿರುವವರೇ ತಯಾರಾಗಿದ್ದಾರೆಂದು ಅರ್ಥ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya