‘ಕಷ್ಟ ಇತ್ತಾದರೂ ನಾನು ಆಡಿದ್ದು ಗೆಲ್ಲುವುದಕ್ಕಾಗಿಯೇ…!’

ಸ್ವಿಜರ್ಲೆಂಡ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಪಿಯನ್‌ಶಿಪ್‌ನಲ್ಲಿ ಜಪಾನ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪಿ.ವಿ. ಸಿಂಧು. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ನಡೆದ ಫೈನಲ್‌ ಮುಖಾಮುಖಿಯಲ್ಲಿ ನಜೊಮಿ ಒಕುಹರಾ ವಿರುದ್ಧ 21-7, 21-7ರ ಅಂತರದಿಂದ ಸಾಧಿಸಿದ್ದ ಗೆಲುವು ಈಗ ಇತಿಹಾಸ ಪುಟ ಸೇರಿದೆ. ಮತ್ತೊಂದು ವಿಶೇಷ ಏನೆಂದರೆ, 2017ರಲ್ಲಿ ಜಪಾನ್‌ ಇದೇ ಆಟಗಾರ್ತಿ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು. ಅದರ ಲೆಕ್ಕ 2019ರಲ್ಲಿ ಚುಕ್ತಾ ಆಗಿದೆ. ಇಂದು ಪಡೆದ ಈ ಚಿನ್ನದ ಪದಕ ಕೇವಲ ಒಂದು ಅಥವಾ ಎರಡನೇ ಪ್ರಯತ್ನವಲ್ಲ, ಬದಲಿಗೆ ಪಿ.ವಿ ಸಿಂಧು, ಸತತವಾದ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ ಕಿರೀಟವನ್ನು ಧರಿಸಿದ್ದಾರೆ. ಇಂಥ ವಿಶ್ವ ಚಾಂಪಿಯನ್‌ ಭಾನುವಾರ ಬೆಂಗಳೂರಿಗೆ ಬಂದಾಗ ಹೊಸ ದಿಗಂತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಸಾಧನೆಯ ಶಿಖರ ಹೇಗಿತ್ತು, ಇದಕ್ಕೆ ಕಾರಣ ಯಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ವಾವ್‌! ವಿಶ್ವ ಚಾಂಪಿಯನ್‌!?

ಹೌದು.. ನಿಮಗೆಷ್ಟು ವಾವ್‌ ಆಗಿದೆಯೋ ನನಗೂ ಹಾಗೇ. ಪದಗಳಲ್ಲಿ ವರ್ಣಿಸು, ಪ್ರಶ್ನೆಗಳಿಗೆ ಉತ್ತರಿಸು ಎಂದರೆ ಕಷ್ಟ. ಇಲ್ಲ ಹಾಗೆ ಮಾತಿನಲ್ಲಿ ಹೇಳುವುದಕ್ಕಾಗುವುದಿಲ್ಲ. ಯಾಕೆಂದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಸಲ ಕಂಚು, ಎರಡು ಸಲ ಬೆಳ್ಳಿಯನ್ನು ಪಡೆದ ಮೇಲೆ ಈಗ ಚಿನ್ನವನ್ನು ಪಡೆದರೆ ಆಗುವ ಆನಂದವೇ ಬೇರೆ. ನಾನು ಇಷ್ಟು ವರ್ಷದಿಂದ ತಪಸ್ಸು ಮಾಡಿ ಕಾಯುತ್ತಿದ್ದ ದಿನ ಈಗ ಬಂದಿದೆ. ಹೆಚ್ಚಿಗೆ ಇನ್ನೇನು ಹೇಳಲಿ?

ನಿಮ್ಮ ಕಾರಣದಿಂದ ಅಂದು ಅಲ್ಲಿ ರಾಷ್ಟ್ರಗೀತೆ ಪ್ರಸಾರ ಆಗಿತ್ತು. ನೀವು ಭಾವುಕರೂ ಆಗಿದ್ದಿರಿ. ಆ ಕ್ಷಣಕ್ಕೆ ನಿಮ್ಮಲ್ಲಿ ಮೂಡುತ್ತಿದ್ದ ಆಲೋಚನೆಗಳೇನು?

ಪಟ್ಟ ಕಷ್ಟಗಳೆಲ್ಲ ಕಣ್ಣು ಮುಂದೆ ಬಂದವು. ನಾನು ತಿಂಗಳುಗಟ್ಟಲೆ ಮೊಬೈಲ್‌ನ್ನೇ ಉಪಯೋಗಿಸುತ್ತಿರಲಿಲ್ಲ. ಎಲ್ಲೋ ಆಗಾಗ ನನ್ನ ಸಹ ಆಟಗಾರರು, ಅಭಿಮಾನಿಗಳ ಜತೆ ಸ್ವಲ್ಪ ಮಾತಾಡುವುದಕ್ಕೆ, ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಕ್ಕಷ್ಟೇ ಫೇಸ್ಬುಕ್‌, ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಿದ್ದೆ. ಇನ್ನು ನಿತ್ಯ ಬೆಳಗ್ಗೆ ಬೇಗ ಏಳುವುದು, ವ್ಯಾಯಾಮ, ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಅಭ್ಯಾಸ ಮಾಡುವುದು, ಮತ್ತೆ ಆಡಿದ್ದನ್ನೆಲ್ಲವೂ ರಾತ್ರಿ ಮೆಲುಕು ಹಾಕಿ ಮಲಗುವುದು. ಬೆಳಗ್ಗೆ ಎದ್ದು ಮತ್ತೆ ಅದೇ ಕೆಲಸ. ಇನ್ನೂ ಹೀಗೆ ಎಷ್ಟೆಲ್ಲ ಆಲೋಚನೆಗಳು ಬರುತ್ತಿದ್ದಾಗ, ರಾಷ್ಟ್ರಗೀತೆ ಪ್ರಸಾರವಾಗುತ್ತಿತ್ತು. ಅದು ನನಗೇ ಗೊತ್ತಿಲ್ಲದೇ ಕಣ್ಣೀರು ತರಿಸಿತ್ತು. ಆದರೆ, ರಾಷ್ಟ್ರಗೀತೆ ನನ್ನ ನೋವುಗಳನ್ನೆಲ್ಲ ಮರೆಸಿತು. ಹೆಮ್ಮೆಯೆನಿಸಿತು.

 

ನೀವು ಬಹಳವೇ ವಿವಿಧ ಖಾದ್ಯಗಳ ಪ್ರಿಯರು ಎಂಬುದು ತಿಳಿದಿದ್ದೆ. ಅಭ್ಯಾಸದ ಸಮಯದಲ್ಲೂ ತಿನ್ನುತ್ತಿದ್ದಿರಾ? ಅಥವಾ ಡಯಟ್‌ ಹೇಗಿತ್ತು? ಕಷ್ಟವಾಯಿತೇ?

ಹೌದು, ನನಗೆ ತಿಂಡಿಗಳೆಂದರೆ ಪ್ರೀತಿಯೇ. ಹಾಗಂತ ಅಷ್ಟೇ ಮಾಡಿಕೊಂಡಿದ್ದರೆ ಏನು ಪ್ರಯೋಜನ? ಅದನ್ನು ಬೇರೆ ಯಾವಾಗಲಾದರೂ ನಾನು ಮಾಡಬಹುದು. ಈಗಲ್ಲ. ಇನ್ನೂ ಅಭ್ಯಾಸದ ಸಮಯದಲ್ಲಿ ಎಷ್ಟೆಂದರಷ್ಟು ತಿನ್ನುವುದು ಬಿಡಿ, ಅದನ್ನು ಕನಸಿನಲ್ಲಿಯೂ ಕಾಣುವಂತಿರಲಿಲ್ಲ. ನಾನು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಅಥವಾ ಪಿಜ್ಜಾ ಬರ್ಗರ್‌ನಂಥ ಜಂಕ್‌ ಆಹಾರಗಳನ್ನು ಸೇವಿಸುತ್ತಿರಲಿಲ್ಲ. ಇದನ್ನು ಎಲ್ಲ ಆಟಗಾರರೂ ಮಾಡುತ್ತಾರೆ. ಏನಾದರೂ ಸಾಧಿಸಬೇಕಿದ್ದರೆ, ಇನ್ನು ಏನಾದರೊಂದನ್ನು ತ್ಯಜಿಸಲೇ ಬೇಕಾಗುತ್ತದೆ. ಅದು ಅನಿವಾರ್ಯ. ಕಷ್ಟ ಇಷ್ಟಗಳ ಪ್ರಶ್ನೆಯೇ ಏಳಬಾರದು. ಏಳುವುದಿಲ್ಲ.

ಭಾರತಕ್ಕೆ ಬಂದ ಮೇಲೆ ದೇವಸ್ಥಾನಗಳಿಗೆ ಹೋಗುತ್ತಿದ್ದೀರ. ಹರಕೆ ಇತ್ತಾ?

ಪ್ರಾರ್ಥನೆ ಅಂತೂ ಇತ್ತು. ತಿರುಪತಿಗೆ ಹೋಗಿದ್ದು ಈಗಾಗಲೇ ನಿಮಗೆಲ್ಲ ತಿಳಿದಿದೆ. ಆದರೆ ಮೊನ್ನೆ ಒಂದೇ ದಿನ ಅಂತಲ್ಲ. ಪಂದ್ಯ ಇರಲಿ ಬಿಡಲಿ, ತಿಂಗಳಿಗೆ ಒಂದೆರಡು ಬಾರಿಯಾದರೂ ತಿರುಪತಿಗೆ ಹೋಗುತ್ತಿರುತ್ತೇನೆ. ಅಲ್ಲದೇ, ಇನ್ನು ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇದ್ದೀನಿ. ನಾನು ದೇವರನ್ನು ಅತಿಯಾಗಿಯೇ ನಂಬುತ್ತೀನಿ. ಒಂದು ಶಕ್ತಿಯಿದೆ. ಯಾಕೆಂದರೆ ದೇವರು ಇಲ್ಲ ಎಂದರೆ ನಾವೆಲ್ಲ ಏನೂ ಸಾಧಿಸಲು ಸಾಧ್ಯವೇ ಇರುತ್ತಿರಲಿಲ್ಲ. ಅವನ ಆಶೀರ್ವಾದ ಸದಾ ನಮ್ಮ ಮೇಲಿದ್ದರೆ ಮಾತ್ರ ನಮ್ಮಿಂದ ಉತ್ತಮ ಕೆಲಸಗಳಾಗುವುದು. ಗೆಲುವು ಸಿಗುವುದಕ್ಕಿಂತ ಮುಂಚೆಯೂ ಹೋಗುತ್ತಿದ್ದೆ. ಸ್ವಾಮೀಜಿಗಳನ್ನು ಭೇಟಿಯಾಗಿದ್ದೇನೆ. ಗುರು ಸ್ಥಾನದಲ್ಲಿರುವ ಅವರು ಮತ್ತು ದೇವರ ಬಲ ಎಲ್ಲರಿಗೂ ಅವಶ್ಯ.

ಪ್ರಧಾನಿ ನರೇಂದ್ರ ಮೋದಿಯವರ ಜತೆಗಿನ ಭೇಟಿ ಹೇಗಿತ್ತು?

ಅವರು ಮೊದಲಿಂದಲೂ ನಮಗೆಲ್ಲ ಬೆಂಬಲ ಕೊಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಕ್ರೀಡೆಗೆ, ಕ್ರೀಡಾಪಟುಗಳಿಗೆ ನೀಡುತ್ತಿರುವ ಬೆಂಬಲ ದೇಶಕ್ಕೇ ತಿಳಿದಿದೆ. ಅವರನ್ನು ಭೇಟಿಯಾದಾಗ ಅವರು ಶುಭಾಶಯಗಳನ್ನು ತಿಳಿಸಿದರು. ದೇಶಕ್ಕೆ ಕೀರ್ತಿ ತಂದಿದ್ದೀಯ ಎಂದರು. ಮನಸಾರೆ ಖುಷಿಪಟ್ಟರು, ಹರಸಿದರು. ನಮ್ಮ ದೇಶದ ನಾಯಕರಿಂದ ಇಂಥ ಸೂಧಿರ್ತಿದಾಯಕ ಮಾತುಗಳು ಎಂಥ ಕ್ರೀಡಾಪಟುವನ್ನಾದರೂ ಹೆಚ್ಚೆಚ್ಚು ಪ್ರಯತ್ನಿಸುವಂತೆ, ಇನ್ನಷ್ಟು ಕಠಿಣ ಅಭ್ಯಾಸ ಮಾಡುವಂತೆ ಮಾಡುತ್ತದೆ. ಆ ಕ್ಷಣಗಳನ್ನು ಇನ್ನೂ ಮರೆತಿಲ್ಲ.

ಆಟ ಎಷ್ಟು ಕಷ್ಟ ಇತ್ತು? ಈ ಹಂತಕ್ಕೆ ಬರುತ್ತೀರಿ ಎಂಬ ಕಲ್ಪನೆಯಿತ್ತಾ?

ಕನಸಿತ್ತು. ಅದನ್ನು ನನಸು ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಇನ್ನು ಮಿಕ್ಕಿದ್ದೆಲ್ಲವೂ ನನ್ನ ಕೈಯಲ್ಲೇ ಇತ್ತು. ಕನಸನ್ನು ನನಸು ಮಾಡಿಕೊಳ್ಳುವುದಷ್ಟೇ ಬಾಕಿ ಇತ್ತು. ಕಷ್ಟವಾದರೂ ದೂರುವುದು ಹೇಗೆ? ಯಾರ ಮೇಲೆ? 2017ರಲ್ಲಿ ನಾನು ಸ್ವಲ್ಪದರಲ್ಲೇ ಸೋತಿದ್ದೆ. ನನ್ನ ಕೋಚ್‌ಗೆ ನಾನು ಎಲ್ಲೆಲ್ಲಿ ತಪ್ಪು ಮಾಡಿದ್ದೇನೆಂದು ಗೊತ್ತಿತ್ತು. ತಿದ್ದಿದರು. ನಿರಂತರ ತಿದ್ದುವಿಕೆಯಿಂದಲೇ ಎಲ್ಲವೂ ಸಾಧ್ಯವಾಯಿತು. ಕನಸೇ ಆಗಿದ್ದ ಚಿನ್ನದ ಪದಕ ನನಸಾಯಿತು.

ಬ್ಯಾಡ್ಮಿಂಟನ್‌ಗೆ ಬರದಿದ್ದರೆ ಇನ್ನೇನಾಗುತ್ತಿದ್ದಿರಿ? ಯುವ ಪೀಳಿಗೆಗೆ ನಿಮ್ಮ ಸಂದೇಶ?

ಮಜಕ್ಕೆಂದು ಚಿಕ್ಕಂದಿನಲ್ಲಿ ಶುರು ಮಾಡಿದ್ದ ಆಟ ನಿಲ್ಲಲಿಲ್ಲ. ಪೋಷಕರೂ ಬೆಂಬಲ ನೀಡಿದರು. ನನಗೆ ಅದನ್ನು ಬಿಟ್ಟು ಬೇರೆ ಇನ್ನೊಂದನ್ನು ಮಾಡಬೇಕು ಎಂದು ಅನಿಸಲೇ ಇಲ್ಲ. ನಾನು ಇದರಲ್ಲಷ್ಟೇ ಮುಂದೆ ಹೋಗುತ್ತೇನೆಂದುಕೊಂಡು ಹೋದೆ. ಈಗಲೂ ನನಗೆ ಬೇರೆ ಆಶಯಗಳಿಲ್ಲ. ಕೇವಲ ಬ್ಯಾಡ್ಮಿಂಟನ್‌ ಮಾತ್ರ. ನನ್ನಂಥ ಹಲವು ಯುವ ಜನತೆಗೂ ಇದನ್ನೇ ಹೇಳುತ್ತೇನೆ. ರಾತ್ರಿ ನಿದ್ದೆ ಮಾಡುವಾಗ, ಬೆಳಗ್ಗೆ ಕಣ್ಣು ಬಿಟ್ಟಿರುವಾಗಲೂ ಒಂದು ಕನಸು ಬೀಳಲಿ. ಅದನ್ನು ನನಸು ಮಾಡುವುದಕ್ಕೆ ಅಭ್ಯಾಸ ಮಾಡಲಿ. ಎಷ್ಟೇ ಕಠಿಣ ಇದ್ದರೂ ಆಗೇ ಆಗುತ್ತದೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya