ಕಾಂಗ್ರೆಸ್ ಕಪ್ಪ ಕಾಣಿಕೆಗೆ “ಎಜೆ‌ಎಲ್” ಖಾತೆ ಬಳಕೆ?

ಕಾಂಗ್ರೆಸ್‌ ಒಡೆತನದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌(ಎಜೆಎಲ್‌)ನ ಬಹುಕೋಟಿ ಹಗರಣದ ಕುರಿತು ಇಂದಿನಿಂದಲೇ ದಿಲ್ಲಿ ಕೋರ್ಟ್‌ ವಿಚಾರಣೆ ನಡೆಸಲಿದೆ. ಕಾಂಗ್ರೆಸ್‌ನ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯ ಕಂಪನಿಗಳ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ದೆಹಲಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದ ಪ್ರಕರಣವಿದು. ಕಾಂಗ್ರೆಸ್‌ ಪಕ್ಷದಿಂದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲಿಕ ಸಂಸ್ಥೆಯಾಗಿರುವ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ 90.25 ಕೋಟಿ ರು. ಬಡ್ಡಿ ರಹಿತ ಸಾಲ ನೀಡಲಾಗಿತ್ತು. ಅಲ್ಲದೇ, 2010ರಲ್ಲಿ ಸ್ಥಾಪನೆಯಾದ ಯಂಗ್‌ ಇಂಡಿಯಾ ಸಂಸ್ಥೆ ಎಜೆಲ್‌ನ 5,000 ಕೋಟಿ ರು. ಮೌಲ್ಯದ ಆಸ್ತಿಯ ಜತೆಗೆ ಅಷ್ಟೂ ಷೇರ್‌ಗಳನ್ನು ಖರೀದಿಸಿದೆ ಎಂಬುದು ಆರೋಪದ ಮೇಲೆ ವಿಚಾರಣೆ ನಡೆಯುತ್ತಿದೆ.

ಅಸೊಸಿಯೇಟೆಡ್‌ ಜರ್ನಲ್ಸ್‌ಗೆ ಕೇವಲ ಕಾಂಗ್ರೆಸ್‌ನಿಂದ ಅಷ್ಟೇ ಅಲ್ಲ, ಕರ್ನಾಟಕ ಕೆಲವರಿಂದಲೂ ಹಣ ವರ್ಗಾವಣೆಯಾಗಿದೆ ಎನ್ನುತ್ತಿವೆ ಹೊಸ ದಿಗಂತಕ್ಕೆ ಸಿಕ್ಕ ದಾಖಲೆಗಳು. ಯಾವುದೋ ರಾಜಕೀಯ ಲಾಭಕ್ಕೋ ಅಥವಾ ರಾಜಕಾರಣಿಗಳ ಒತ್ತಡಕ್ಕೋ ಎಜೆಎಲ್‌ ಕಂಪನಿಗೆ ಕರ್ನಾಟಕದಿಂದಲೂ ನಾಲ್ಕು ಕೋಟಿ ರೂ. ವರ್ಗಾವಣೆಗೊಂಡ ಮಾಹಿತಿ ಈಗ ಬಹಿರಂಗಗೊಂಡಿದೆ.

7ಎಜೆಎಲ್‌ಗೆ ಹಣ ನೀಡಿದವರಾರು?
ಆಬಿದ್‌ ಅಲಿ ಮುಲ್ಕಿ, ಇನಾಯತ್‌ ಅಲಿ ಮತ್ತು ಶರ್ಫುದ್ದೀನ್‌ ಅಲಿ ಎಂಬುವವರ ಒಡೆತನದಲ್ಲಿರುವ ಮಂಗಳೂರು ಮೂಲದ ಕಂಪನಿ ಓಶಿಯನ್‌ ಕನ್ಸ್‌ಟ್ರಕ್ಷನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನಿಂದ ಎಜೆಎಲ್‌ ಖಾತೆಗೆ ಬರೋಬ್ಬರಿ 2 ಕೋಟಿ ರೂ.ಅನ್ನು ವರ್ಗಾಯಿಸಲಾಗಿದೆ. ಇನ್ನು ಈ ಬಗ್ಗೆ ಸ್ವತಃ ಓಶಿಯನ್‌ ಕನ್ಸ್‌ಟ್ರಕ್ಷನ್ಸ್‌ ಇಂಡಿಯಾ ಪ್ರೈವೇಟ್‌ ಎಜೆಎಲ್‌ಗೆ ಬರೆದಿರುವ ಅಧಿಕೃತ ಮುದ್ರೆ ಇರುವ ಪತ್ರದಿಂದಲ್ಲೇ 2 ಕೋಟಿ ರೂ. ಹಾಕಿರುವುದನ್ನು ಬರೆದಿದೆ. ಈ ಪತ್ರಕ್ಕೆ 27.10.2015ರಂದು ಎಜೆಎಲ್‌ ಕಂಪನಿಯೂ ಅಧಿಕೃತ ಪತ್ರದಲ್ಲಿ 2 ಕೋಟಿ ಆರ್‌ಟಿಜಿಎಸ್‌ ಹಣ ಸ್ವೀಕರಿಸಿರುವುದಾಗಿ ಪತ್ರ ಬರೆದಿದೆ. ಈ ಪತ್ರವನ್ನು ಎಜೆಎಲ್‌ ಪರವಾಗಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಮೋತಿಲಾಲ್‌ ವೋರಾ ಬರೆದಿದ್ದು, ಅವರೇ ಸಹಿ ಹಾಕಿದ್ದಾರೆ.

 


ಎಜೆಎಲ್‌ಗೆ ಹಣ ವರ್ಗಾವಣೆ ಮಾಡಿದವರಲ್ಲಿ ಮತ್ತೊಂದು ಅಚ್ಚರಿಯ ಹೆಸರು ಬೆಂಗಳೂರಿನ ಪ್ರತಿಷ್ಠಿತ ಸಿ.ಎಂ.ಆರ್‌ ಟ್ರಸ್ಟ್‌. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆ. ಸಿ. ರಾಮಮೂರ್ತಿಯವರ ಪತ್ನಿ ಅಧ್ಯಕ್ಷೆಯಾಗಿರುವ ಈ ಟ್ರಸ್ಟ್‌ನಿಂದ 2015 ಅಕ್ಟೋಬರ್‌ನಲ್ಲೇ, 2 ಕೋಟಿ ರೂ. ವರ್ಗಾವಣೆಯಾಗಿರುವ ದಾಖಲೆಗಳು ಸಿಕ್ಕಿವೆ. ಇನ್ನು ಇದನ್ನು ಮತ್ತಷ್ಟು ಬಲಪಡಿಸುವಂತೆ 15.10.2015ರಲ್ಲಿ ಮೋತಿಲಾಲ್‌ ವೋರಾ ಅವರೇ ಸಹಿ ಮಾಡಿರುವ ಎಜೆಎಲ್‌ ಅಧಿಕೃತ ಪತ್ರದಲ್ಲಿ 2 ಕೋಟಿ ರೂ. ಚೆಕ್‌/ಆರ್‌ಟಿಜಿಎಸ್‌ ಮೂಲಕ ಹಣ ಸ್ವೀಕರಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ಎಜೆಎಲ್‌ನ ಬೊಕ್ಕಸಕ್ಕೆ ಕರ್ನಾಟಕದಿಂದಲೂ ಹಣ ಹೋಗಿರುವುದು ದಾಖಲೆಗಳಿಂದ ತಿಳಿಯುತ್ತದೆ.

ಹಣ ವರ್ಗಾವಣೆ ಯಾಕಾಗಿ?
2 ಕೋಟಿ ರೂ. ನೀಡಿರುವುದು ಸರಿ. ಆದರೆ ಯಾಕಾಗಿ ಎಂಬುದು ಪ್ರಶ್ನೆ. ಸಹಜವಾಗಿ ಒಂದು ಮನೆಗೆ 10 ಸಾವಿರ ಬಾಡಿಗೆಯೇ ಇದ್ದರೂ, ಅದಕ್ಕೆ ಹತ್ತಾರು ಷರತ್ತುಗಳಿರುವ ಬಾಂಡ್‌, ಸ್ಟಾಂಪ್‌ ಪೇಪರ್‌ಗಳಿರುತ್ತವೆ. ಕನಿಷ್ಠ ಎಂದರೂ ಅದು ಎರಡು ಪುಟ ಇರುತ್ತದೆ. ಆದರೆ 2 ಕೋಟಿ ರೂ. ವ್ಯವಹಾರಕ್ಕೆ ಇರುವುದು ಒಂದೇ ಹಾಳೆ, ಅದರಲ್ಲಿ ಎಂಟೇ ಸಾಲು ಎಂಬುದು ಅಚ್ಚರಿಯ ಸಂಗತಿ.
ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ ಕಂಪನಿಯ ಎಜೆಎಲ್‌ ಹೌಸ್‌ ಎಂಬ ಹೆಸರಿನ ಕಟ್ಟಡವನ್ನು ಇನ್ನೂ ನಿರ್ಮಾಣ ಮಾಡುತ್ತಿದ್ದು ಅದರಲ್ಲಿ ಮಾಡಬಹುದಾದ ಒಂದು ಕಚೇರಿಯ ಜಾಗವನ್ನು ನಮಗೆ ನೀಡಬೇಕು. ಅದಕ್ಕೆ ಮುಂಗಡ ಹಣವನ್ನಾಗಿ ನೀಡುತ್ತಿದ್ದೇವೆ ಎಂದಷ್ಟೇ ಹೇಳಿ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿರುವುದು ಅನುಮಾನಾಸ್ಪದವಾಗಿದೆ. ಓಶಿಯನ್‌ ಕನ್ಸ್‌ಟ್ರಕ್ಷನ್ಸ್‌ ಮತ್ತು ಸಿಎಂಆರ್‌ ಟ್ರಸ್ಟ್‌ ಹಣ ವರ್ಗಾವಣೆ ಮಾಡಿರುವುದು ಸಹ ಯಾವತ್ತೋ ಕಟ್ಟಲ್ಪಡುವ ಕಟ್ಟಡದಲ್ಲಿ, ಎಲ್ಲಾದರೂ ಸರಿಯೆಂಬಂತೆ ಕಚೇರಿ ನಡೆಸುವುದಕ್ಕೆ ಒಂದು ಜಾಗ ಬೇಕಿರುವುದರಿಂದ ಅದಕ್ಕೆ ಮುಂಗಡ ಹಣವನ್ನಾಗಿ 2 ಕೋಟಿ ರೂ. ಕೊಟ್ಟಿದೆ.
ಇನ್ನು ಸಿಎಂಆರ್‌ ಟ್ರಸ್ಟ್‌ ಸಹ ಒಂದೇ ಕಾರಣಕ್ಕೆ ಹಣ ವರ್ಗಾಯಿಸಿದೆ. ಮೋತಿಲಾಲ್‌ ವೋರಾ ಬರೆದ ಪತ್ರವು ಸಹ ತಲುಪಬೇಕಾದ ವಿಳಾಸದ ಹೆಸರನ್ನು ಬಿಟ್ಟು ಉಳಿದಿದ್ದೆಲ್ಲವೂ ರೀತಿಯ ಮಾಹಿತಿಯಿತ್ತು.

ಕಾಕತಾಳೀಯ?
ಮಂಗಳೂರಿನ ಕಂಪನಿ ಓಶಿಯನ್‌ ಕನ್ಸ್‌ಟ್ರಕ್ಷನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹಣ ನೀಡಿದ ಮೇಲೆ ಮುಸ್ಲಿಂ ನಾಯಕರೊಬ್ಬರಿಗೆ ಮಂತ್ರಿಗಿರಿಯೂ ಸಿಗುತ್ತದೆ. ಇದಕ್ಕೆ ಎಜೆಎಲ್‌ ಅಥವಾ ಕಾಂಗ್ರೆಸ್‌ ಮಾತ್ರ ಉತ್ತರಿಸಲು ಸಾಧ್ಯ.
ಮತ್ತೊಂದು ಅಚ್ಚರಿಯ ಸಂಗತಿಯೇನೆಂದರೆ 2015ರ ಅಕ್ಟೋಬರ್‌ನಲ್ಲಿ ಸಿಎಂಆರ್‌ ಕೆ.ಸಿ.ರಾಮಮೂರ್ತಿಯವರ ಪತ್ನಿ ಅಧ್ಯಕ್ಷರಾಗಿರುವ ಸಿಎಂಆರ್‌ ಟ್ರಸ್ಟ್‌ನಿಂದ ಹಣ ವರ್ಗಾವಣೆ ಆಗುತ್ತದೆ. 2016ರ ಜುಲೈನಲ್ಲಿ ಕೆ.ಸಿ.ರಾಮಮೂರ್ತಿಯವರು ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರಾದರೂ ಇದು ಕೇವಲ ಕಾಕತಾಳೀಯ.

 

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya