ಹಾಸನ ಹುಡುಗರ ಬೌನ್ಸ್‌ ಬೈಕ್‌ ಸೇವೆಯನ್ನು ನಾವು ಬೆಂಬಲಿಸಿದ್ದೇವೆಯೇ?

ಎಲ್ಲವೂ ಕಣ್ಮರೆಯಾದಾಗ ಕಣ್ಣೀರಿಡುವುದೇ ಆಗಿದೆ. ಅವರು ಬಹಳ ದೊಡ್ಡ ಉದ್ಯಮಿ, ಕನ್ನಡಿಗರಿಗೆ ಕೆಲಸ ಕೊಟ್ಟ ಉದ್ಯಮ, ಕನ್ನಡಿಗರು ಮಾಡಿದ ಉದ್ಯಮ ಹೀಗೆ ಸತ್ತ ಮೇಲೆ ಹೊಗಳುವುದು ನಮಗೆ ಅಭ್ಯಾಸವಾದಂತಿದೆ. ಆದರೆ ನಮ್ಮ ಕನ್ನಡದ, ಹಾಸನದ ಮೂರು ಹುಡುಗರು ಶುರು ಮಾಡಿರುವ ಎಲ್ಲಿ ಬೇಕಾದರೂ ಬಿಡಬಹುದಾದ ಬಾಡಿಗೆ ಬೈಕ್‌ ಸೇವೆ ಬೌನ್ಸ್‌ ಅನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ.

ವಿಶಿಷ್ಟ ಸೇವೆಗಳಲ್ಲಿ ಒಂದಾದ ಬೌನ್ಸ್‌ ಬೈಕ್‌ಗಳು ಬೆಂಗಳೂರಿನ ರಸ್ತೆಯಲ್ಲಿ ಕೆಲವೊಮ್ಮೆ  ಚಕ್ರ ಇಲ್ಲದ ಸ್ಥಿತಿಯಲ್ಲೋ, ಬ್ಯಾಟರಿ ತೆಗೆದ ಸ್ಥಿತಿಯಲ್ಲೋ ಬಿದ್ದಿರುವುದನ್ನು  ಕಂಡು ಹೊಸ ದಿಗಂತವು ಬೌನ್ಸ್‌ನ ಸಹ-ಸಂಸ್ಥಾಪಕರಾದ ಅನಿಲ್‌ರನ್ನು ಸಂಪರ್ಕಿಸಿತು. ಅವರು ನೀಡಿದ ಸಂದರ್ಶನದಲ್ಲಿ ಜನಸಾಮಾನ್ಯರಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಾಗೇ, ಒಂದು ಮನವಿಯನ್ನೂ ಮಾಡಿದ್ದಾರೆ.

ಹೇಗೆ ಶುರುವಾಯಿತು?

ನಾವು ಬೈಕ್‌ ಬಾಡಿಗೆ ಎಂದು 2014ರಿಂದ ಮಾಡುತ್ತಿದ್ದೆವು. ವಿಕೆಡ್‌ ರೈಡ್‌ ಎಂಬುದು ಈಗಲೂ ನೀವು ಕೇಳಿರಬಹುದು. ಈಗಲೂ ಇದೆ. ಇದಾದ ಮೇಲೆ ಬೆಂಗಳೂರು ಮೆಟ್ರೊಗಳಿಂದ ಹೊರ ಬರುವ ಪ್ರಯಾಣಿಕರು ಅಲ್ಲಿಂದ ಮನೆಗೆ ಹೋಗುವುದಕ್ಕೆ, ಕಚೇರಿಗೆ ಹೋಗುವುದಕ್ಕೆ ಓಡಾಡಲು ಬೈಕ್‌ ವ್ಯವಸ್ಥೆ ಮಾಡುತ್ತೇವೆ ಎಂದಾಗ ಬಿಎಂಆರ್‌ಸಿಎಲ್‌ ಒಪ್ಪಿಗೆ ನೀಡಿತ್ತು. ನಿಮಗೆ ಮೆಟ್ರೊ ಬೈಕ್‌ ಎಂದು ಕೇಳಿದ್ದು ನೆನಪಿರಬಹುದು. ಆ ಸಮಯದಲ್ಲೇ ನಾವು ಕೀಲಿರಹಿತ ಬೈಕ್‌ ಶುರು ಮಾಡಿದ್ದು. ಮೂರು ಸ್ನೇಹಿತರು ಸೇರಿ ಶುರು ಮಾಡಿದ್ದು. ವರುಣ್‌, ವಿವೇಕಾನಂದ ಮತ್ತು ನಾನು. ವರುಣ್‌ ಅಮೆರಿಕದಲ್ಲಿ ಓದಿ ಬಂದಿದ್ದಾರೆ. ಅವರಿಗೆ ತಂತ್ರಜ್ಞಾನದ ಹಿನ್ನೆಲೆಯಿದ್ದು, ಅವರು ಇಲ್ಲಿಗೆ ಅದನ್ನು ಪರಿಚಯಿಸಿದ ಮೇಲೆ ನಾವು ಕೀಲಿರಹಿತ ವಾಹನ ಬಾಡಿಗೆ ಉದ್ಯಮ ಶುರು ಮಾಡಿದ್ದು. 2018ರಿಂದ  ನಾವು ಬೌನ್ಸ್‌ ಎಂಬ ಹೆಸರಿನಲ್ಲಿ ಸೇವೆ ಶುರು ಮಾಡಿದ್ದು.

ಎಷ್ಟು ಬೈಕ್‌ಗಳಿವೆ? ಎಷ್ಟು ಜನರು ಉಪಯೋಗಿಸುತ್ತಾರೆ? ಹೆಚ್ಚಾಗಿ ಉಪಯೋಗಿಸುವವರಾರು?

ದಿನಕ್ಕೆ 75,000 ರೈಡ್‌ಗಳಾಗುತ್ತವೆ. ಅಂದರೆ ಜನರು ಅಷ್ಟು ಸಲ ನಮ್ಮ ಗಾಡಿಯನ್ನು ದಿನಕ್ಕೆ ಓಡಿಸುತ್ತಿದ್ದಾರೆ. ನಮ್ಮ ಬಳಿ ಈವರೆಗೆ 10 ಸಾವಿರ ಗಾಡಿಗಳಿವೆ. ನಮ್ಮ ಬೈಕ್‌ನ್ನು ಉಪಯೋಗಿಸುವ ಜನರಲ್ಲಿ 40% ಮೆಟ್ರೊ ಸಂಬಂಧ ಓಡಾಟಕ್ಕೇ ಬಳಸುತ್ತಿದ್ದಾರೆ. ಮೆಟ್ರೊ ಜತೆಗೂ ನಮ್ಮ ಒಪ್ಪಂದವಿರುವುದರಿಂದ ಒಟ್ಟು 37 ಸ್ಟೇಷನ್‌ನಲ್ಲಿ ನಮ್ಮ ವಾಹನಗಳು ಲಭ್ಯವಿರುತ್ತದೆ. ಇನ್ನು ಗೇರ್‌ ಇಲ್ಲದ ಹಗುರ ಬೈಕ್‌ಗಳಿರುವುದರಿಂದ ನಮ್ಮ ಗಾಡಿಯನ್ನು ಶೇಕಡಾ 25ರಷ್ಟು ಮಹಿಳೆಯರು ಉಪಯೋಗಿಸುತ್ತಿದ್ದಾರೆ.

ಹೋಗುತ್ತಿರುವಾದ ಬೌನ್ಸ್‌ ಬೈಕ್‌ ಪೆಟ್ರೋಲ್‌ ಖಾಲಿಯಾದರೆ ಏನು ಮಾಡುವುದು? ಯಾರು ಹಾಕಿಸುವುದು?

ಸಹಜವಾಗಿ ಪೆಟ್ರೋಲ್‌ ಖಾಲಿ ಆಗಲ್ಲ ಏಕೆಂದರೆ, ಪೆಟ್ರೋಲ್‌ ಸೆನ್ಸರ್‌ಗಳಿರುವುದರಿಂದ ಎಷ್ಟು ಪೆಟ್ರೋಲ್‌ ಇದೆ ಎಂದು ನಮಗೆ ತಿಳಿದಿರುತ್ತದೆ. ಕಡಿಮೆ ಆದರೆ ಹತ್ತಿರದಲ್ಲಿರುವ ನಮ್ಮ ಏಜೆಂಟ್‌ಗಳೇ ಬಂದು ಹಾಕುತ್ತಾರೆ. ಗ್ರಾಹಕರೇ ಹಾಕಿಸಿದರೆ ಅವರಿಗೆ ಪೆಟ್ರೋಲ್‌ ಹಣ ವಾಪಸ್‌ ಕೊಡುವುದಲ್ಲದೇ, ಬಿಲ್‌ ಮೊತ್ತದಲ್ಲಿ 30% ಕ್ಯಾಶ್‌ಬ್ಯಾಕ್‌ ಕೊಡುತ್ತೇವೆ. ಅದನ್ನು ಅವರು ಮುಂದಿನ ರೈಡ್‌ಗೆ ಬಳಸಿಕೊಳ್ಳಬಹುದು.

ಬೈಕ್‌ನಲ್ಲಿ ಹೆಲ್ಮೆಟ್‌ ಇರುವುದೇ ವಿರಳ. ಅದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತೀರ?

ಯಾರು ಗಾಡಿ ಓಡಿಸಿದ ಮೇಲೆ ಹೆಲ್ಮೆಟ್‌ ಹೋಗಿದೆ ಎಂದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಗಾಡಿಯಲ್ಲಿ ಅದಕ್ಕೂ ಸೆನ್ಸರ್‌ಗಳಿವೆ. ಅವರ ಅಕೌಂಟ್‌ಗೆ ಬಿಲ್‌ ಹಾಕಿರುತ್ತೇವೆ. ಅದನ್ನು ಅವರು ತುಂಬುವವರೆಗೂ ಅವರಿಗೆ ಗಾಡಿ ಓಡಿಸುವುದಕ್ಕೆ ಬೌನ್ಸ್‌ ಆ್ಯಪ್‌ ಬಿಡುವುದಿಲ್ಲ.

ಇತ್ತೀಚೆಗೆ ಬೌನ್ಸ್‌ ಕಾಣುವುದೇ ಚಕ್ರ, ಬ್ಯಾಟರಿ ಇಲ್ಲದ, ಹಾಳಾದ, ನುಜ್ಜುನುಜ್ಜಾದ ಅವಸ್ಥೆಯಲ್ಲಿ. ಇದರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರ? ಇದೆಲ್ಲ ನಿಮಗೆ ತಿಳಿಯುತ್ತಲೇ ಇಲ್ಲವೇ?

ತಿಳಿಯುತ್ತಿದೆ. ಅವೆಲ್ಲವೂ ನಮಗೆ ಪಾಠವಾಗಿದೆ. ಹಾಗೆ ನಾವೂ ಅ್ಪಡೇಟ್‌ ಆಗಿದ್ದೇವೆ. ಒಬ್ಬ ಗ್ರಾಹಕ ತಾನು ಗಾಡಿ ಓಡಿಸಿ ನಿಲ್ಲಿಸಿದ ಮೇಲೆ ಅದರ ಫೋಟೊ ತೆಗೆಯಬೇಕು. ಆಗಲೇ ಬಿಲ್‌ ಬರುವಂತೆ ಆ್ಯಪ್‌ ತಯಾರಿಸಲಾಗಿದೆ. ಏನೇ ಮಾಡಿದರೂ ರೈಡರ್‌ ಖಾತೆಗೇ ದಂಡ ಬೀಳುತ್ತದೆ. ಎಲ್ಲವನ್ನೂ ನಮ್ಮ ತಂಡ 24/7 ಕಚೇರಿಯಿಂದಲೇ ಗಮನಿಸುತ್ತಿರುತ್ತದೆ. ಎಲ್ಲಾದರೂ ಅಪಘಾತವಾದರೆ, ಕ್ರಾಶ್‌ ಸೆನ್ಸರ್‌ಗಳು ಸಂದೇಶ ರವಾನಿಸುತ್ತದೆ. ಆಗ ಘಟನೆ ನಡೆದ ಸ್ಥಳದಲ್ಲೇ ಇರುವ ಏಜೆಂಟ್‌ರಿಗೆ ಅಲರ್ಟ್‌ ಹೋಗುತ್ತದೆ. ಆಗ ಗ್ರಾಹಕನಿಗೆ ತೊಂದರೆ ಆಗಿದ್ದರೆ ಪ್ರಥಮ ಚಿಕಿತ್ಸೆ ಮಾಡಿಸುವುದರ ಜತೆಗೆ ವಿಮೆಯ ಮೂಲಕ ಗಾಡಿ ಸರಿ ಮಾಡಿಸಿಕೊಳ್ಳುತ್ತೇವೆ. ಹಾಗೇ ಬೇಜವಾಬ್ದಾರಿಯಿಂದ ಆಗಿದ್ದಿದ್ದರೆ ಕೂಡಲೇ ಪೊಲೀಸರಿಗೂ ನಾವೇ ತಿಳಿಸುತ್ತೇವೆ.

ಬ್ಯಾಟರಿ, ಚಕ್ರವನ್ನೆಲ್ಲ ಗ್ರಾಹಕರೇ ತೆಗೆಯಬೇಕೆಂದಿಲ್ಲ, ಮತ್ತೊಬ್ಬ ಯಾರೋ ಬಂದು ತೆಗೆದರೆ? ನಷ್ಟವಂತೂ ಆಗೇ ಆಗುತ್ತಲ್ಲವೇ?

ಹೌದು. ಆಗುತ್ತದೆ. ಆದರೆ ನಾವು ಕೂಡಲೇ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ದೂರು ನೀಡುತ್ತವೆ. ನಷ್ಟ ಆಗುತ್ತದೆಂಬ ಕಾರಣಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಿ, ಮೆಕ್ಯಾನಿಕ್‌ ಅಥವಾ ಕಂಪನಿಯವರಿಂದಲೇ ತೆರೆಯುವುದಕ್ಕಾಗದ ಮಾದರಿಯ ನಟ್‌ ಬೋಲ್ಟ್‌ ಮತ್ತು ಲಾಕ್‌ಗಳನ್ನು ಪರಿಚಯಿಸಲಾಗಿದೆ. ಇದರಿಂದ ಗಾಡಿಯನ್ನು ರಕ್ಷಣೆ ಮಾಡಿಕೊಳ್ಳುವ ಉಪಾಯವನ್ನು ನಾವೂ ಹುಡುಕಿದ್ದೇವೆ.

ಬೇರೆಯವರ ಗಾಡಿ ಎಂದರೆ ಅದನ್ನು ಬೇಕಾಬಿಟ್ಟಿಯಾಗಿ, ಹೆಲ್ಮೆಟ್‌ ಇಲ್ಲದೇ, ಮೂವರು ಓಡಿಸುತ್ತಾ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸುವವರೇ ಹೆಚ್ಚು. ಇದರಿಂದ ಹೇಗೆ ಬೌನ್ಸ್‌ ತಪ್ಪಿಸಿಕೊಳ್ಳುತ್ತೆ? ಪೊಲೀಸರಿಗೆ ದಂಡ ಕಟ್ಟುವವರಾರು? ತಪ್ಪಿತಸ್ಥರನ್ನು ಹೇಗೆ ಕಂಡು ಹಿಡಿಯುತ್ತೀರಿ?

ಗಾಡಿಯ ಮೇಲೇ ಪ್ರಕರಣ ಆಗುವುದರಿಂದ, ಮೊದಲು ಪೊಲೀಸರಿಗೆ ನಮ್ಮಿಂದಲೇ ದಂಡ ಪಾವತಿಯಾಗುತ್ತದೆ. ಪೊಲೀಸರು ದಂಡ ಹಾಕುವಾಗ ಸಹಜವಾಗಿಯೇ ದಿನದ ಜತೆಗೆ ಸೆಕೆಂಡ್‌ನ ಸಮಯ ಸಹ ಬರುತ್ತದೆ. ಆ ಸಮಯದಲ್ಲಿ ಯಾರು ಗಾಡಿ ಓಡಿಸುತ್ತಿದ್ದರು, ಯಾರು ಪಾರ್ಕ್‌ ಮಾಡಿದ್ದರು ಎಂಬುದೆಲ್ಲ ತಿಳಿಯುತ್ತದೆ. ಆಗ ಅವರ ಮೇಲೇ ದಂಡ ಹಾಕುತ್ತೇವೆ. ತಪ್ಪಿತಸ್ಥನು ದಂಡ ಕಟ್ಟಿ ಕ್ಲಿಯರ್‌ ಮಾಡಿಕೊಳ್ಳುವವರೆಗೂ ಮುಂದಿನ ರೈಡ್‌ ಇಲ್ಲ.

ನಿಮ್ಮ ಸ್ಕೂಟರ್‌ ಇಲ್ಲದಿದ್ದರೆ ಮತ್ತೊಂದು, ಗಾಡಿಯನ್ನು ಹಾಳು ಮಾಡಿದವನಿಗೆ ನಿಮಗೆ ದಂಡ ಕೊಡುವುದಕ್ಕಿಂತ ವೊಗೊ, ಡ್ರೈವ್‌ಝಿ ಹಾಗೆ ಇತರ ಆ್ಯಪ್‌ಗಳನ್ನು ಇನ್ಸ್‌ಟಾಲ್‌ ಮಾಡಿ ತಪ್ಪಿಸಿಕೊಳ್ಳಬಹುದಲ್ಲವೇ?

ಅವರು ಎಲ್ಲೂ ಹೋಗುವುದಕ್ಕಾಗುವುದಿಲ್ಲ ಎಂಬುದೇ ನಂಬಿಕೆ. ಹೇಗೆ ಎನ್ನುತ್ತೀರಾ? ಎಲ್ಲ ಆ್ಯಪ್‌ಗಳಲ್ಲೂ ಡ್ರೈವಿಂಗ್‌ ಲೈಸೆನ್ಸ್‌ನ ಫೋಟೊ ಕಾಪಿ ಹಾಕಿದ ಮೇಲೆ ಗಾಡಿ ಓಡಿಸುವುದಕ್ಕೆ ಅನುಮತಿ ಸಿಗುವುದು. ನಮಗೆ ನಷ್ಟವಾಗುತ್ತದೆ ನಿಜ, ಆದರೆ, ಪದೆ ಪದೇ ಬೇಜವಾಬ್ದಾರಿಯಿಂದ ಓಡಿಸಿ ದಂಡ ಹಾಕಿಸಿಕೊಂಡವರ, ಗಂಭೀರ ಪ್ರಕರಣಗಳ ಗ್ರಾಹಕರನ್ನು ನಾವು ಬ್ಯಾನ್‌ ಮಾಡುವುದಲ್ಲದೇ, ಇತರ ಕಂಪನಿಗಳಿಗೂ ಅವರ ಮಾಹಿತಿ ಕೊಡುತ್ತೇವೆ. ಆಗ ಅವರೂ ಇಂಥವರನ್ನು ಬ್ಲಾಕ್‌ ಮಾಡುತ್ತಾರೆ. ಅಷ್ಟೇ ಅಲ್ಲ, ಪೊಲೀಸ್‌-ಆರ್‌ಟಿಒ ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೂ ತರುತ್ತೇವೆ. ಇದರಿಂದ ಅವರ ಡ್ರೈವಿಂಗ್‌ ಲೈಸೆನ್ಸ್‌ ನಿಷೇಧವಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇದುವರೆಗೂ ನಾವೇ ಎರಡುವರೆ ಸಾವಿರ ಜನರನ್ನು ಬ್ಲಾಕ್‌ ಮಾಡಿದ್ದೇವೆ. ಕೆಲವರ ಮೇಲೆ ಪ್ರಕರಣವೂ ದಾಖಲಾಗಿದೆ.

ಬೈಕ್‌ ಹಾಳು ಮಾಡುವಂಥ ಅಥವಾ ಇಂಥ ಬೇಜವಾಬ್ದಾರಿಯಿಂದ ಉಪಯೋಗಿಸುವ ಪ್ರಕರಣಗಳು ದಿನಕ್ಕೆಷ್ಟು ಸಿಗುತ್ತದೆ?

ಒಂದು ಬೈಕನ್ನು ದಿನಕ್ಕೆ ಸುಮಾರು 10 ಜನರು ಬಳಸುತ್ತಾರೆ ಎಂದು ನಮ್ಮ ಡೇಟಾ ಹೇಳುತ್ತದೆ. ಮೊದಲೆಲ್ಲ ನೀವು ಹೇಳಿದ ಪ್ರಕರಣಗಳು ಬಹಳವೇ ಹೆಚ್ಚಾಗಿತ್ತು. ಆದರೆ ನಾವೂ ತಂತ್ರಜ್ಞಾನ ಬಳಕೆಯನ್ನು ಹೆಚ್ಚು ಮಾಡುತ್ತಾ ಹೋದಂತೆ ಕ್ರಮೇಣ ಕಡಿಮೆಯಾಗುತ್ತಿದೆ. ಈಗಂತೂ 10 ಸಾವಿರ ಬೈಕ್‌ಗಳಲ್ಲಿ 1-2 ಬೈಕ್‌ಗಳು ಹೀಗೆ ಆಗುವುದುಂಟು. ಕೆಲವೊಮ್ಮೆ ಹಬ್ಬದ ದಿನಗಳಲ್ಲಿ, ಶನಿವಾರ ಭಾನುವಾರದಂಥ ದಿನಗಳಲ್ಲೂ ಹೆಚ್ಚು ಹಾನಿಯಾಗುತ್ತದೆ. ಆದರೆ ಈಗ ಅಷ್ಟೆಲ್ಲ ಇಲ್ಲ. ಜನರಿಗೂ ಈ ಬೈಕ್‌ ಬೇಕು ಎಂದೆನಿಸಿದೆ. ಸುಧಾಣೆಗೆ ಸಮಯ ಬೇಕು. ಆಗುತ್ತದೆ.

ಕನ್ನಡ ಮಾತಾಡುವ ನೀವು ಯಾವ ಊರಿನವರು? ನಿಮ್ಮ ಸಂಸ್ಥೆಯ ಪರವಾಗಿ ಜನರಿಗೆ ಏನು ಹೇಳುವುದಕ್ಕೆ ಬಯಸುತ್ತೀರಿ?

ನಾವು ಮೂವರೂ ಕನ್ನಡಿಗರೇ. ನಾನು ಬೆಂಗಳೂರಿನವನು. ವರುಣ್‌ ಮತ್ತು ವಿವೇಕಾನಂದ ಹಾಸನದ ಹುಡುಗರು. ನಾವು ಜನರಲ್ಲಿ ವಿನಂತಿ ಮಾಡಿಕೊಳ್ಳುವುದು ಇಷ್ಟೇ, ಒಂದೊಳ್ಳೆ ಸೇವೆಯನ್ನು ಒದಗಿಸುತ್ತಿದ್ದೇವೆ. ಒಮ್ಮೆ ಯಾವುದಾದರೂ ಖಾಸಗಿ ವಾಹನದವರು ಬೌನ್ಸ್‌ ಹೆಲ್ಮೆಟ್‌ ಹಾಕಿದ್ದನ್ನು ಕಂಡರೆ ಅವರಿಗೆ ತಿಳಿಹೇಳಿ. ಮನವಿ ಮಾಡಿ. ಹಾಗೇ ನಿಮ್ಮ ಗಾಡಿಯನ್ನು ಹೇಗೆ ಓಡಿಸುತ್ತೀರೋ ಹಾಗೇ ಬೌನ್ಸ್‌ ಗಾಡಿಯನ್ನೂ ಓಡಿಸಿ. ಮತ್ತೊಬ್ಬರಿಗೂ ಅನುಕೂಲ ಮಾಡಿಕೊಡಿ. ಇನ್ನಷ್ಟು ವರ್ಷ ನಿಮಗೆ ಸೇವೆ ಸಲ್ಲಿಸುವಂತಾಗಲಿ. ಏನಾದರೂ ಸರಿ ಮಾಡಿಕೊಳ್ಳಬೇಕಿದ್ದರೂ ನಮಗೆ ತಿಳಿಸಿ. ನಾವು ಸರಿ ಮಾಡಿಕೊಳ್ಳುತ್ತೇವೆ.

 

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya