ಬೋರ್ಡ್‌ ಹರಿಯುವಾಗ ಅಂಬೇಡ್ಕರ್‌ರನ್ನು ಮರೆತವರು…

ಭಾಷೆ ಹೆಸರಿನಲ್ಲಿ ಶಾಂತವಾಗಿದ್ದ ಧರ್ಮದವರ ಮೇಲೂ ದಾಳಿ ಮಾಡುವ ಕರ್ಮ ಕರ್ನಾಟಕ ನೋಡಬೇಕೆ ಎಂದು ಅನಿಸಿದ್ದು ಆಗಸ್ಟ್‌ 16ರಂದು ಒಂದಷ್ಟು ಜನರು ಪ್ರಾರ್ಥನೆ/ಜೈನ ಮುನಿಗಳ ಚಾತುರ್ಮಾಸ್ಯ ನಡೆಯುತ್ತಿದ್ದ ಜೈನ ಸಮುದಾದ ಭವನದಲ್ಲಿ ಮೇಲೆ ದಾಳಿ ಮಾಡಿದಾಗ. ಯಾಕಾಗಿ ದಾಳಿ ಮಾಡಿದ್ದರು? ಯಾರು ತಪ್ಪಿತಸ್ಥರು? ದಾಳಿ ಮಾಡುವಾಗ ಆಡಿದ್ದ ಮಾತುಗಳೇನು? ಇತ್ಯಾದಿಗಳನ್ನು ತಿಳಿದುಕೊಂಡ ಮೇಲೆ ಕೂಗಾಡುತ್ತಿರುವವರ ಸತ್ಯ ಅನಾವರಣ ಆಗುವುದು.

ಬಂಧನಕ್ಕೊಳಗಾದ ಕನ್ನಡಪರ ಕೆಲ ಸಂಘಟನೆಗಳ ಕಾರ್ಯಕರ್ತರು ಅಂದು ಜೈನ ಸಮುದಾಯ ಭವನಕ್ಕೆ ಬಂದು ‘ನೀವ್ಯಾರು? ಕನ್ನಡ ಮಾತಾಡ್ತೀರ ತಾನೆ? ಕನ್ನಡ ಬೋರ್ಡ್‌ ಹಾಕಕ್ಕೇನು? ನಿಮಗೆ ನಾವು ಜಾಗ ಕೊಟ್ಟಿಲ್ವಾ? ನಿಮ್ಮನೆಲ್ಲ ಒದ್ದು ಆಚೆ ಹಾಕಬೇಕು’ ಎಂಬೆಲ್ಲ ಕೇಳುತ್ತಿದ್ದ ಹಾಗೇ ಒಬ್ಬೊಬ್ಬರು ಒಂದೊಂದು ಕಡೆ ಹೋಗಿ ಬೋರ್ಡ್‌ ಹರಿದು ಹಾಕಿಬಿಟ್ಟರು. ಆ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಧಿಕ್ಕಾರ ಎಂದಿತ್ತಾ? ಇಲ್ಲ. ಕನ್ನಡಿಗರಿಗೆ ಅವಮಾನ ಮಾಡಿದ್ದರಾ? ಊಹೂಂ ಅದೂ ಇಲ್ಲ. ಜೈನ, ಮಾರ್ವಾಡಿ ಇತ್ಯಾದಿ ಸಮುದಾಯದವರು ತಮ್ಮವರಿಗೆ ಅರ್ಥವಾಗಲಿ ಎಂದು ತಮ್ಮ ಮುನಿಗಳ ಚಿತ್ರ ಹಾಕಿ ಚಾತುರ್ಮಾಸ್ಯಕ್ಕೆ ಸ್ವಾಗತ ಎಂದು ಹಿಂದಿಯಲ್ಲಿ ಬೋರ್ಡ್‌ ಹಾಕಿದ್ದರು. ಇದನ್ನೂ ಸಹಿಸಿಕೊಳ್ಳದಷ್ಟು ಅಸಹಿಷ್ಣುಗಳಾಗಿಬಿಟ್ಟರೆ ಕನ್ನಡಿಗರು?

ನಿಜವಾಗಿಯೂ ಅಲ್ಲಿ ಕನ್ನಡದ್ದೇ ವಿಷಯವನ್ನೆತ್ತಿದ್ದರೆ ಹೌದು, ಕೇಳಿದ ವಿಚಾರ ಸರಿ ಇತ್ತು ಎನ್ನಬಹುದಿತ್ತು. ಅದರ ಬದಲು ಕನ್ನಡ ಶಾಲು ಹೊದ್ದು ಮಾಡಿದ್ದೆಲ್ಲವೂ ಜಾತಿ ನಿಂದನೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅಥವಾ ಕೋಮು ಸಂಘರ್ಷಕ್ಕೆ ಪ್ರಚೋದನೆ. ಅಲ್ಲಿ ಹಿಂದಿ ಬೋರ್ಡ್‌ಗಳನ್ನು ಹರಿಯುವಾಗ ಒಬ್ಬ ಹೇಳುತ್ತಾನೆ, ‘ಅವನ್ಯಾವನೋ ಮುಚ್ಕೊಂಡ್‌ ಬಂದಿರೋ ಸ್ವಾಮಿ ಕರ್ನಾಟಕದಲ್ಲಿರೋದು. ಇಲ್ಲಿಗೆ ಬಂದಿರೋದು. ಬೇಕಾದ್ರೆ ನಿಮ್ಮ ಹಿಂದಿ ರಾಜ್ಯದಲ್ಲೇ ಇರಬೇಕು. ಇಲ್ಲೆಲ್ಲ ಬಂದು ಇಂಥ ಅವತಾರಗಳು ಮಾಡೋದು ಬೇಕಿಲ್ಲ’.

ಇದು ಧರ್ಮ ನಿಂದನೆ ಅಲ್ಲವೇ? ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಲ್ಲವೇ? ಈ ಹೋರಾಟಗಾರರಿಗೇನಾದರೂ ಅವರು ಯಾಕೆ ಹಾಗೆ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಗೊತ್ತಾ? ಸ್ಥಾನಕ್‌ ಸಾಧುಗಳು ಎಷ್ಟು ಅಹಿಂಸಾವಾದಿಗಳೆಂದರೆ, ತಾವು ತೆಗೆದುಕೊಳ್ಳುವ ಗಾಳಿಯಲ್ಲೂ ಸಣ್ಣ ಸಣ್ಣ ಕ್ರಿಮಿ ಕೀಟಗಳಿರುತ್ತವೆ, ಅದು ನಮ್ಮೊಳಗೆ ಹೋಗಿ ಸಾಯಬಾರದು ಮತ್ತು ತಾವು ಮಾತಾಡುವಾಗ ಅಥವಾ ಉಸಿರು ಹೊರ ಬಿಡುವಾಗ ಉಗುಳು ಸೇರಿದಂತೆ ಇತ್ಯಾದಿಗಳು ಹೊರ ಬಂದು ಇನ್ನೊಬ್ಬರಿಗೆ ಉಪದ್ರವ ಕೊಡಬಾರದು ಎಂಬ ಕಾರಣಕ್ಕೆ ಹಾಗೆ ಮುಸುಕನ್ನು ಧರಿಸಿರುತ್ತಾರೆ. ಅವರು ಬಾಯಿಗೆ ಬಟ್ಟೆ ಕಟ್ಟಿದ್ದು ಅಹಿಂಸಾ ತತ್ತ್ವಕ್ಕಾಗಿ, ನೀವು ಕನ್ನಡ ಬಾವುಟದ ಶಾಲು ಹಾಕಿ ಅವನ್ಯಾರೋ ‘ಶಾ’ ನೂ ನಮಗೇನು ಮಾಡಕ್ಕಾಗಲ್ಲ, ಒದ್ದು ಓಡಿಸ್ತೀವಿ ಎಂಬ ಇತ್ಯಾದಿ ಬಯ್ದದ್ದು, ದಾಂಧಲೆ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ಅಂಥ ಶಾಂತ ಸ್ವರೂಪರಿಗೆ ‘ಮುಚ್ಕೊಂಡ್‌ ಇರೋ ಸ್ವಾಮಿ’ ಎಂದು ಕರೆದದ್ದು ಕನ್ನಡಪರ ಹೋರಾಟವಾ? ಈಗ ಅದನ್ನು ಮುಚ್ಚಿ ಹಾಕುವುದಕ್ಕೆ ಜೋರಾಗಿ ಕೂಗಾಡಿ ನಾವು ಯಾವ ಧರ್ಮದ ವಿರೋಧಿಗಳೂ ಅಲ್ಲ ಅಂದರೆ ಸರಿಯಾಗಿಬಿಡುತ್ತಾ? ಯಾರದ್ದೋ ಜಾಗಕ್ಕೆ ಹೋಗಿ ಬೋರ್ಡ್‌ ಹರಿಯುವುದಕ್ಕೆ ನೀವ್ಯಾರ್ರೀ? ನಿಮಗೆ ಸಂವಿಧಾನದಲ್ಲೆಲ್ಲಿ ಇಂಥ ಹಕ್ಕನ್ನು ಕೊಟ್ಟಿದ್ದಾರೆ? ಅಂಬೇಡ್ಕರ್‌ ಹೇಳಿದ್ದಾರಾ? ಕಾನೂನು ಹೇಳಿದೆಯಾ? ಇಲ್ಲವೇ ಇಲ್ಲ.

ಕರ್ನಾಟಕ ಶಾಫ್ಸ್‌ ಎಂಡ್‌ ಕಮರ್ಷಿಯಲ್‌ ಎಸ್ಟಾಬ್ಲಿಶ್‌ಮೆಂಟ್ಸ್‌ ಆ್ಯಕ್ಟ್ 1961ರ ನಿಯಮ 24-ಎಗೆ ತಿದ್ದುಪಡಿ ತಂದು 22.7.2017ಕ್ಕೆ ನೀಡಿದ ಹಳೇಯ ಆದೇಶವನ್ನೇ ಪರಿಗಣಿಸಿದರೂ ವಾಣಿಜ್ಯ ಕಟ್ಟಡಗಳು ಮಾತ್ರ ತಮ್ಮ ಫಲಕದಲ್ಲಿ ಬರೆಯುವ ಅಕ್ಷರಗಳು 60% ಕನ್ನಡದಲ್ಲಿ, 40% ಇಂಗ್ಲಿಷ್‌ನಲ್ಲಿರಬೇಕು ಎಂದು ಆದೇಶ ನೀಡಿತ್ತು. ಆದರೆ, ಎಲ್ಲೂ ಧಾರ್ಮಿಕ ಸ್ಥಳಗಳಿಗೆ, ಕಾರ್ಯಕ್ರಮಗಳಿಗೆ ಎಂದು ಉಲ್ಲೇಖಿಸಿಲ್ಲ. ಈ ಆದೇಶ ಸಹ ಹೈಕೋರ್ಟ್‌ನಲ್ಲಿ ಬಿದ್ದು ಹೋಗಿದ್ದು, ಹೀಗೆಲ್ಲ ನಿಯಮ ರೂಪಿಸುವುದು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ ಸಹ ಹೈಕೋರ್ಟ್‌ನ ಆದೇಶವನ್ನೇ ಎತ್ತಿಹಿಡಿದೆ. ಅಲ್ಲಿಗೆ ಯಾವ ನಿಯಮವೂ ಇಲ್ಲವೆಂಬುದು ಸ್ಪಷ್ಟ.

ನಿಮಯವೇ ಇಲ್ಲದರುವಾಗ, ಸಂವಿಧಾನಕ್ಕೆ ವಿರೋಧಿಯಾಗಿರುವಾಗ ಕನ್ನಡ ಹಾಕಿ ಎಂದು ಆವಾಜ್‌ ಹಾಕುವುದು, ಬೋರ್ಡ್‌ ಹರಿಯುವುದು ಯಾವ ಲೆಕ್ಕದಲ್ಲಿ? ಯಾರ ಲೆಕ್ಕದಲ್ಲಿ? ಜೈನರು ಕನ್ನಡದ ವಿರುದ್ಧ ಕಾರ್ಯಕ್ರಮ ಮಾಡುತ್ತಿದ್ದರೆ ಅದನ್ನು ವಿರೋಧಿಸಿದ್ದರೆ, ಎಲ್ಲರೂ ಧ್ವನಿಗೂಡಿಸಬಹುದಿತ್ತು. ಯಾರೂ ಪ್ರಚೋದನೆಯನ್ನೇ ಕೊಡದೇ ಇವರೇ ಹೋಗಿ ದಾಳಿ ಮಾಡಿದರೆ, ಇವರ ಜತೆ ಯಾರು ಯಾಕಾಗಿ ನಿಲ್ಲಬೇಕು? ಇವರು ದಾಳಿ ಮಾಡಿದ್ದ ಅದೇ ಸಮುದಾಯ ಭವನದ ಒಳಗೆ ಹೋಗಿ ನೋಡಿದ್ದರೆ, ಎಲ್ಲ ಫಲಕಗಳೂ ಮೊದಲು ಕನ್ನಡದಲ್ಲೇ ಅಚ್ಚಾಗಿರುವುದನ್ನು ನೋಡಬಹುದು. ಕನ್ನಡದ ಕೆಳಗೆ ಹಿಂದಿ, ಇಂಗ್ಲಿಷ್‌ನಲ್ಲೂ ಬರೆಯಲಾಗಿದೆ. ನಮ್ಮ ಭಾಷೆ ಮೇಲು, ನಿಮ್ಮ ಭಾಷೆ ಕೀಳು-ಹೇರಿಕೆ ಇತ್ಯಾದಿ ಮಾತಾಡುವವರು ಈ ಫಲಕ ನೋಡಿಯಾದರೂ ಸುಮ್ಮನಿರಬಹುದಿತ್ತು.

ನೀವೇ ಹೇಳಿ, ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಕಾರ್ಯಕ್ರಮ ನಡೆದರೆ, ಅದಕ್ಕೆ ಕನ್ನಡದ ಬೋರ್ಡ್‌ ಹಾಕಬೇಕೋ ಹಿಂದಿಯದ್ದೋ? ಕನ್ನಡ ಬೋರ್ಡ್‌ ತಾನೆ? ಕನ್ನಡ ಬೋರ್ಡ್‌ ಹಾಕಿದರು ಎಂದು ಹಿಂದಿಯವರು ಬೋರ್ಡ್‌ ಕಿತ್ತು ಹಾಕಿದರೆ, ಮತ್ತದೇ ಕಾವೇರಿ ಗಲಾಟೆಯ ಹಾಗೆ ತಮಿಳುನಾಡಿನವರು ಕನ್ನಡದವರನ್ನು, ಕರ್ನಾಟಕದವರು ತಮಿಳಿಗರನ್ನು ಹಾದಿಯಲ್ಲಿ ಕೂರಿಸಿ, ಕಾವೇರಿ ಯಾರದ್ದು ಎಂದು ಹೇಳು ಎಂದು ಹೊಡೆದು ಕೋಮು ಸಂಘರ್ಷ ಮಾಡಿದಂತೇ ಆಗುವುದಿಲ್ಲವೇ?

ನೀವು ಮಾತಾಡುವುದು ಬೇಡ ಸ್ವಾಮಿ, ರಾಜ್ಯದ ಬಾವುಟಕ್ಕೆ ಮರ್ಯಾದೆ ಕೊಡುವುದಕ್ಕಾದರೂ ಧರ್ಮ, ಜಾತಿ, ಸಾಧುಗಳನ್ನು ಹೀಯಾಳಿಸಬಾರದಲ್ಲವೇ? ಹಾಗಾಗಿಲ್ಲ. ಇವರಾಡಿದ ಮಾತುಗಳು ಮೇಲೇ ತಿಳಿಸಿದ್ದೇನೆ, ಜತೆಗೆ ಇನ್ನೂ ಕೆಲ ಸ್ಯಾಂಪಲ್‌ಗಳನ್ನು ಕೊಡುವುದಾದರೆ..
· ‘ನೀವೆಲ್ಲ ಟಿಕೆಟ್‌ ಇಲ್ಲದೇ ರೈಲಿನಲ್ಲಿ ಬಂದವರು, ಇವತ್ತು ಕರ್ನಾಟಕದಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಟ್ಟಿದೀರ. ನಿಮಗೊಂದು ಗತಿ ಕಾಣಿಸ್ತೀವಿ’,
· ‘ಈ ರಾಜ್ಯದಲ್ಲಿ ಮಾರ್ವಾಡಿಗಳನ್ನು ಒಂದು ಸರಿಯಾದ ದಾರಿಗೆ ತರುವ ಪ್ರಯತ್ನವನ್ನು ನಾವು ಮಾಡ್ತೀವಿ.’
· ‘ಅವ್ನು ಯಾರು ಅಮಿತ್‌ ಶಾ? ಯಾವ್‌ ಶಾ ನೂ ಏನ್‌ ಮಾಡಕ್‌ ಆಗಲ್ಲ’
ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಮೇಲೆ
· ‘ಮುಂದೈತೆ ಮಾರಿ ಹಬ್ಬ’, ‘ಪೊಲೀಸ್‌ ನಮ್ಮನ್ನು ಮುಟ್ಟಲಿ ಆಮೇಲೆ ತೋರಿಸ್ತೀನಿ’, ‘ಕನ್ನಡಿಗರಾ ಅಥವಾ ಮಾರ್ವಾಡಿಗಳಾ ನೋಡೇಬಿಡೋಣ’ ಎಂದು ಸ್ಟೇಟಸ್‌ ಹಾಕಿಕೊಳ್ಳುತ್ತಿದ್ದರು.

ಕನ್ನಡ ಭಾಷೆಯ ರಕ್ಷಣೆ ಯಾವಾಗ, ಹಿಂದಿ-ಸಂಸ್ಕೃತ ಭಾಷೆಯ ವಿರೋಧವಾಯ್ತೊ ಆಗಲೇ ಹಾದಿ ತಪ್ಪಿ ಹೋಯಿತು. ಈಗ ಹಿಂದಿ ಭಾಷಿಕರ ವಿರೋಧ ಮಾರ್ವಾಡಿಗಳ ವಿರೋಧ ಅಂತ ಯಾವಾಗಾಯ್ತೋ, ಹೋರಾಟ ಹಳ್ಳ ಹಿಡಿಯಿತು ಅಂತಲೇ ಅರ್ಥ.ಭಾರತದಲ್ಲಿ ಕಮ್ಯುನಿಸಮ್‌ ಹುಟ್ಟಿದ್ದು ಹೇಗೆಂದು ನೋಡಿದರೆ, ಈಗಿನ ಹೋರಾಟಗಳ ಹಣೆಯಬರಹ ಗೊತ್ತಾಗುತ್ತದೆ.

ಜೆಡಿಎಸ್‌, ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳೂ ಮೊನ್ನೆ ಆದ ಬಕ್ರೀದ್‌ ಹಬ್ಬದವರೆಗೂ ಪೂರ ಉರ್ದುವಿನಲ್ಲೇ ಶುಭ ಹಾರೈಸಿ ಕಟ್ಟಿದ್ದ ಎಷ್ಟು ಬ್ಯಾನರ್‌ನ್ನು ಹರಿದು ಬಿಸಾಕಿದ್ದಾರೆ ನೋಡೋಣ? ಇಂಥ ಬ್ಯಾನರ್‌ಗಳ ವಿರುದ್ಧ ಒಂದೇ ಒಂದು ಪ್ರತಿಭಟನೆ ಮಾಡಿದ್ದನ್ನು ರಾಜ್ಯದ ಜನತೆ ನೋಡಿಲ್ಲ. ಬಹುಶಃ ನೋಡುವುದೂ ಇಲ್ಲವೇನೋ.

ಇಷ್ಟೆಲ್ಲ ಬರೆದ ಮೇಲೆ ವಿರೋಧಿಸಲೇ ಬೇಕು ಕೂರುವ ಮಂದಿ ಮೊದಲು ಹೇಳುವುದೇ, ನಾನು ಕನ್ನಡ ವಿರೋಧಿ, ಸಂಘಟನೆಗಳ ವಿರೋಧಿ, ಕಾರ್ಯಕರ್ತರ ವಿರೋಧಿ ಎಂದು. ನೆನಪಿರಲಿ ನಾನು ಈ ಕನ್ನಡಪರ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರನ್ನು ರೌಡಿಗಳು ಎಂದು ಕರೆದಿಲ್ಲ ಅಥವಾ ಕರೆಯುವುದೂ ಇಲ್ಲ ಅಥವಾ ಕರೆದವರನ್ನು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಹೋರಾಟಗಾರರಲ್ಲೂ ನಿಸ್ವಾರ್ಥ ಸೇವೆ ಮಾಡುವವರಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಳಗದ ಕೆಲ ಕಾರ್ಯಕರ್ತರು ಕಳೆದ ತಿಂಗಳಷ್ಟೇ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಣೆ ಮಾಡುತ್ತಿದ್ದವರನ್ನು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈ ಶ್ಲಾಘನೀಯ ಕಾರ್ಯವನ್ನು ಖುದ್ದು ನೋಡಿ ಪತ್ರಿಕೆಗೆ ವರದಿ ಮಾಡುವುದಲ್ಲದೇ ಫೇಸ್ಬುಕ್‌ನಂಥ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದೆ. ಕನ್ನಡ ಮಾತಾಡುವುದಿಲ್ಲ ಏನ್‌ ಮಾಡ್ಕೊತ್ತೀರೋ ಮಾಡ್ಕೊಳ್ರಿ ಎಂದು ಆವಾಜ್‌ ಹಾಕಿದವರನ್ನು ಬಗ್ಗಿಸಿದ, ಕೆಲಸ ಕಳೆದುಕೊಂಡು ಉತ್ತರ ಭಾರತಕ್ಕೇ ವಾಪಸ್‌ ಹೋಗುವಂತೆ ಮಾಡಿದ ಹಲವಾರು ಹೋರಾಟಗಾರರಿಗೆ ಬೆಂಬಲ ಕೊಡುತ್ತಲೇ ಇದೆ ಈ ರಾಜ್ಯ.

ನಿಜವಾಗಿ ಕನ್ನಡಪರ ಹೋರಾಟ ಮಾಡುವವರಿಗೆ ಬೆಂಬಲ ಇದ್ದೇ ಇದೆ. ಆದರೆ, ಕನ್ನಡ ಹೆಸರಿನಲ್ಲಿ ಧರ್ಮದ ವಿರುದ್ಧ, ಜಾತಿಯ ವಿರುದ್ಧ ಮಾತಾಡಿದರೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದರೆ, ಅಂಬೇಡ್ಕರ್‌ ಕನಸಿನ ಭಾರತದ ವಿರುದ್ಧವಾಗಿದ್ದರೆ ಕಟುವಾಗಿಯೇ ಪ್ರತಿಕ್ರಿಯಿಸಿ ಪ್ರತಿಭಟಿಸಬೇಕಾಗುತ್ತದೆ. ಯಾರ ಸಂಘಟನೆಗಳಲ್ಲಿ ಯಾವ ಜಾತಿಯವರು ಪ್ರಾಬಲ್ಯದಲ್ಲಿದ್ದಾರೋ ಗೊತ್ತಿಲ್ಲ. ಆದರೆ ಎಲ್ಲ ಸಂಘಟನೆಗಳು ಇರುವುದೂ ಭಾರತದಲ್ಲೇ. ಹಾಗಾಗಿ ಭಾಷೆ, ಧರ್ಮ, ಜಾತಿ, ಸಂಘಟನೆ ಎಲ್ಲಕ್ಕಿಂತಲೂ ಮೇಲೆ ಸಂವಿಧಾನವೇ ನಮ್ಮ ಗ್ರಂಥ. ವಿಷಯಕ್ಕೆ ಸರಿಯಾಗಿ ಸಂವಿಧಾನ ಪುಸ್ತಕದ ಧೂಳು ಕೊಡವಿ ಹೊರ ತೆಗೆದು ಪ್ರತಿಭಟನೆಗೆ ಬರುವವರು, ಈಗಲೂ ಸಂವಿಧಾನಬದ್ಧವಾಗೇ ನಡೆದುಕೊಳ್ಳಲಿ. ಯಾವುದೂ ಬೇಡ, ಬೋರ್ಡ್‌ ಹರಿಯುವಾಗ ಅಂಬೇಡ್ಕರ್‌ರನ್ನು ನೆನಪು ಮಾಡಿಕೊಂಡಿದ್ದಿದ್ದರೆ ಅಂಬೇಡ್ಕರ್‌ ಆತ್ಮಕ್ಕೆ, ಸಂವಿಧಾನಕ್ಕೆ ಶಾಂತಿ ದೊರೆಯುತ್ತಿತ್ತು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya