ರಾಜಕಾರಣಿಗಳ ಸ್ವಾರ್ಥ ಜನ್ಮಕ್ಕಿಂತ ಸ್ವಯಂಸೇವಕ ಜನ್ಮವೇ ಲೇಸು!

 

ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಒಂದೇ ಸಮನೆ ಮಳೆ ಹೊಯ್ಯುತ್ತಿದೆ. ಅದು ಹೊಯ್ಯುವ ಆರ್ಭಟಕ್ಕೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ಕೆಲವೆಡೆಯಂತೂ ಜನರು ಮನೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ. ಇಂಥವರಲ್ಲಿ ಅದೆಷ್ಟು ಜನರ ಕನಸುಗಳು ಭಗ್ನವಾಗಿದೆಯೋ? ಅದೆಷ್ಟು ಜನರ ಜೀವ ಹೋಗಿದೆಯೋ? ಮಗಳ ಮದುವೆಗೆಂದು ಜೋಳ, ಮಾವು ಮಾರಿ ಕೂಡಿಟ್ಟ ಹಣ, ಆಸ್ಪತ್ರೆ ಖರ್ಚಿಗೆಂದು ಮಗ ಬೆಂಗಳೂರಿನಿಂದ ಕಳಿಸಿದ್ದ ಹಣ ನೀರು ಪಾಲಾಗುವಾಗ, ಅಥವಾ ಜೀವ ಉಳಿಸಿಕೊಳ್ಳುವುದಕ್ಕಾಗಿ ಅವೆಲ್ಲವನ್ನೂ ಬಿಟ್ಟು ಬರುವಾಗ ಆಗುವ ನೋವು ಹೇಳಲಸಾಧ್ಯ. ಅಷ್ಟೇ ಅಲ್ಲ, ತಾವು ತಿನ್ನುವ ಅನ್ನದಲ್ಲೇ ಒಂದು ಪಾಲನ್ನು ಗೋವಿಗೂ ಇಟ್ಟು, ಅದು ತಿಂದ ನಂತರವಷ್ಟೇ ಮನೆಯವರು ಊಟ ಮಾಡುವ ಪದ್ಧತಿ ಈಗಲೂ ಇದೆ. ಮನುಷ್ಯ ತಾನು ತಿನ್ನುವ ಅನ್ನದಲ್ಲಿ ಪಾಲು ಕೊಡುವುದು ಕುಟುಂಬಕ್ಕೆ, ಹೃದಯಕ್ಕೆ ಹತ್ತಿರವಾದವರಿಗೆ ಮಾತ್ರ. ಆದರೆ, ಪ್ರವಾಹದಲ್ಲಿ ತನ್ನ ಜೀವ ಉಳಿಸಿಕೊಳ್ಳುದಕ್ಕಾಗಿ ಕಟ್ಟಿದ ಗೋವನ್ನು ಹಾಗೇ ಬಿಟ್ಟು ಓಡುವಾಗ ಆಗುವ ನೋವು ಸಾಯುವ ತನಕವೂ ಮಾಲೀಕನನ್ನು ಕಾಡುತ್ತಿರುತ್ತದೆ.

ರಾಜ್ಯದ ಜನತೆ ಅನುಭವಿಸಿದ್ದು ಹೇಳುತ್ತಾ ಹೋದರೆ, ಅದು ಮುಗಿಯುವುದಿಲ್ಲ. ಇಂಥ ಉದಾಹರಣೆಗಳು ನೂರಾರು. ಪ್ರವಾಹದಲ್ಲಿ ಸಿಲುಕಿಕೊಂಡಿರುವ ಪ್ರತಿಯೊಬ್ಬನನ್ನು ಮಾತಾಡಿಸಿ ನೋಡಿ, ಒಂದೊಂದು ಘಟನೆಯನ್ನು ನೆನೆದು ಕಣ್ಣೀರಿಡುತ್ತಾನೆ. ನಾಲ್ಕು ಜನಕ್ಕೆ ಅನ್ನ ಹಾಕಿದ ಮಾಲೀಕ, ಅದೇ ನಾಲ್ಕು ಜನರ ಸಾಲಿನಲ್ಲಿ ನಿಂತು ಎರಡಕ್ಕಿಂತ ಹೆಚ್ಚು ಕೊಡದ ರೊಟ್ಟಿಗಾಗಿ ನೂಕುನುಗ್ಗಲಿನಲ್ಲಿ ನಿಂತು ಕಾಯುವಾಗ ಹುಟ್ಟುವ ಆ ವೈರಾಗ್ಯಇನ್ನೆಂದೂ ಲೌಕಿಕ ಪ್ರಪಂಚಕ್ಕೆ ಸೆಳೆಯದೇ ಇರಬಹುದು. ಇನ್ನು ಊರಲ್ಲಿರುವ ಅಪ್ಪ ಅಮ್ಮನ ಸಂಪರ್ಕವೇ ಇಲ್ಲದೆ, ಬೆಂಗಳೂರಿನಲ್ಲಿ ಒಬ್ಬರೇ ಅಪ್ಪ ಅಮ್ಮನ ನಗುವನ್ನು ನೆನೆಯುತ್ತಾ ಕಣ್ಣೀರಿಡುತ್ತಾ, ಅವರೇ ಸಮಾಧಾನ ಮಾಡಿಕೊಳ್ಳುತ್ತಾ ಇರುವ ಮಕ್ಕಳೆಷ್ಟೋ! ಭೂಲೋಕದಲ್ಲಿ ನರಕದರ್ಶನ ಅಂದ್ರೆ ಇದೇ.
ರಾಜ್ಯದ ಅವಸ್ಥೆ ಹೀಗಿರುವಾಗ, ಈ ವೇಳೆಯೂ ರಾಜಕಾರಣ ಮಾಡುವ ರಾಜಕಾರಣಿಗಳು ನಮ್ಮಂತೆಯೇ ಹೊಟ್ಟೆಗೆ ಅನ್ನವನ್ನೇ ತಿನ್ನುತ್ತಾರೋ ಇಲ್ಲವೋ ಎಂಬುದು ಖಾತ್ರಿಯಾಗಬೇಕಿದೆ.

ಕಳೆದ ಕೆಲ ದಿನಗಳಿಂದ ರಾಜಕಾರಣಿಗಳ ಚೇಲಾಗಳು ಫೇಸ್ಬುಕ್‌ನಲ್ಲಿ ಬರೆಯುತ್ತಿರುವುದನ್ನು ಓದುವಾಗ, ರಾಜಾರಣಿಗಳು ಪ್ರವಾಹದ ಸಂದರ್ಭದಲ್ಲೂ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿರುವುದನ್ನು ನೋಡಿದರೆ, ಉಪ್ಪು ಖಾರ ತಿನ್ನುವ ಯಾವನಿಗೇ ರಕ್ತ ಕುದಿಯುತ್ತದೆ. ಪ್ರವಾಹಕ್ಕೂ ಮುನ್ನ ಸುಮಾರು ತಿಂಗಳುಗಟ್ಟಲೆ ಜನರ ಮುಂದೆ ಬೆತ್ತಲಾದರೂ ಒಬ್ಬನೂ ಮಾತಾಡಲಿಲ್ಲ. ಆದರೆ, ಈಗಲೂ ರಾಜಕೀಯ ಅಗತ್ಯ ಇದೆಯಾ? ಥೂ.

ಮಾಜಿ ಮುಖ್ಯಮಂತ್ರಿಗಳ ಅಭಿಮಾನಿಯೊಬ್ಬರು ಮೊನ್ನೆ ಫೇಸ್ಬುಕ್‌ನಲ್ಲಿ ಯಡಿಯೂರಪ್ಪ ಏನ್ರೀ ಮಾಡ್ತಾ ಇದಾರೆ? ನಮ್ಮ ಅಣ್ಣ ಆಗಿದ್ರ ಇಷ್ಟೊತ್ತಿಗೆ ಎಲ್ಲವನ್ನೂ ಕಂಟ್ರೋಲ್‌ ಮಾಡ್ತಿದ್ರು, ಅನ್ಯಾಯವಾಗಿ ಇಂಥ ಮುಖ್ಯಮಂತ್ರಿಯನ್ನು ಕಳೆದುಕೊಂಡ್ರಲ್ಲೋ ಎಂಬಂತೆ ಬರೆದುಕೊಂಡಿದ್ದಾರೆ. ಹೀಗೆ ಸ್ಟೇಟಸ್‌ ಜಪ್ಪುವುದನ್ನು ಬಿಟ್ಟರೆ ಈ ನಿರುದ್ಯೋಗಿ ಮಾಡಿದ್ದೇನು? ಪ್ರವಾಹದ ಈ ಸಮಯದಲ್ಲೂ ಅಣ್ಣನಿಗೆ ಬಕೆಟ್‌ ಹಿಡಿಯುವ ಬದಲು, ಅದೇ ಬಕೆಟ್‌ನಲ್ಲಿ ನೀರು ನುಗ್ಗಿರುವ ಮನೆಗೆ ಹೋಗಿ ನೀರು ಹೊರ ಹಾಕಬಹುದಿತ್ತಲ್ಲವೇ? ಅಂಬಾನಿಯ ಉಚಿತ ಡೇಟಾ ಇದೆ ಎಂದು ಫೇಸ್ಬುಕ್‌ನಲ್ಲಿ ಬರೆಯುವ ತೆವಲು ತೀರಿಸಿಕೊಳ್ಳುವುದಕ್ಕೆ ಈ ಸಂದರ್ಭವೇ ಬೇಕಿತ್ತೆ?

ಇನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಹೋಗಿ ಕಾಲವಾದರೂ ಬಿಟ್ಟಿ ಉಪದೇಶ ಕೊಡುವುದಕ್ಕೇನೂ ಕಡಿಮೆ ಇಲ್ಲ. ‘ಕೆಎಂಎಫ್‌ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಂಪುಟ ಪುನಾರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ ಏಕಚಕ್ರಾಧಿಪತಿಗಳೇ?’ ಎಂದು ಬಿಎಸ್‌ವೈರನ್ನು ವ್ಯಂಗ್ಯವಾಡಿದ್ದಾರೆ. ರೋಮ್‌ ಹೊತ್ತಿ ಉರಿಯುತ್ತಿದ್ದರೆ ನೀರೊ ಪಿಟೀಲು ನುಡಿಸುತ್ತಿದ್ದ ಎಂಬಂತಿಲ್ಲವೇ ಇದು? ಸಂಪುಟ ಪುನಾರಚನೆ ಮಾಡಿದರೆ ಒಂದಷ್ಟು ಅತೃಪ್ತರು ಹುಟ್ಟಿಕೊಳ್ಳುತ್ತಾರೆ. ಅಥವಾ, ಸರ್ಕಾರ ಬೀಳಿಸುವುದಕ್ಕೆ ಮುಂದಾದ ರಾಜಕಾರಣಿಗಳೇ ವಾಪಸ್‌ ಬರಬಹುದು ಎಂಬ ಲೆಕ್ಕಾಚಾರದಲ್ಲಿರುವ ಸಿದ್ದರಾಮಯ್ಯನವರ ಮನಸ್ಥಿತಿ ನೋಡಿ, ರಾಜ್ಯದ ಜನತೆಗೆ ಏನೆನ್ನಿಸುತ್ತದೆ ಹೇಳಿ? ಇಷ್ಟೇ ಅಲ್ಲದೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಟ್ಟಿರುವುದೇ ಉತ್ತರ ಕರ್ನಾಟಕದಲ್ಲಾಗುತ್ತಿರುವ ಪ್ರವಾಹಕ್ಕೆ ಕಾರಣ ಎಂದೂ ಹೇಳಿದ್ದಾರೆ. ಯಾವುದೋ ಜಲಾಶಯದ ನೀರು ಬಂದರೆ ಪ್ರವಾಹ ಆಗುತ್ತದೆ ಎನ್ನುವ ಇಂಥವರಿಗೆಲ್ಲ ನಮ್ಮ ಐಪಿಎಸ್‌ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸರು ಸೆಲ್ಯೂಟ್‌ ಹೊಡೆಯಬೇಕು ಎಂಬುದಕ್ಕಿಂತ ಮತ್ತೊಂದು ದುರಂತವಿದೆಯೇ?

ಇಷ್ಟೆಲ್ಲ ಆಗಿ, ಸಾರ್‌ ನೀವೇ ಬನ್ನಿ ಜನರ ಸೇವೆ ಮಾಡಿ ಎಂದರೆ, ‘ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ವಿಶ್ರಾಂತಿ ಪಡೆಯಬೇಕಿದೆ’ ಎಂದು ವೈದ್ಯರ ತಲೆ ಮೇಲೆ ಇಟ್ಟು ಕುಳಿತುಬಿಟ್ಟರು. ಅಲ್ಲಿಗೆ ಈ ಹಿರಿಯ ರಾಜಕಾರಣಿ ಟ್ವೀಟ್‌ ಮಾಡಿದ್ದು, ಮನೆಯಲ್ಲೇ ಕೆಂಡದ ಮುಂದೆ ಚಳಿ ಕಾಯಿಸುತ್ತಾ ಕುಳಿತು, ಸಂತ್ರಸ್ತರ ಮಧ್ಯೆಯಿರುವ ಯಡಿಯೂರಪ್ಪನವರನ್ನು ಟೀಕಿಸುವುದನ್ನು ಬಿಟ್ಟು ಮಾಡಿದ ಘನಂದಾರಿ ಕೆಲಸವಾದರೂ ಏನು? ಶೂನ್ಯ.

ಮತ್ತೊಬ್ಬ ರಾಜಕಾರಣಿ, ‘ನನ್ನ ಮಗನನ್ನು ಎಲ್ಲಿದ್ಯಪ್ಪ ಎಂದು ಕೇಳಿದ್ದೀರಿ, ಈಗ ಯಡಿಯೂರಪ್ಪ ಎಲ್ಲಿದ್ಯಪ್ಪ’ ಎಂದು ಕೇಳಿ ಜನರೇ ಎಂದು ಕಹಳೆ ಊದಿ, ಮನೆಗೆ ಹೋದರು. ಅವರ ಕಥೆ ಬಿಡಿ ಸಾರ್‌, ನೀವು ಬನ್ನಿ ಎಂದು ಕರೆದರೆ, ‘ಜ್ವರ ಬಂದಿರುವುದರಿಂದ ಪ್ರವಾಹ ಪೀಡಿತ ಜನರನ್ನು ಭೇಟಿಯಾಗುವುದಕ್ಕೆ ಆಗುತ್ತಿಲ್ಲ’ ಎಂದು ವಿಕ್ಸ್‌ ಹಚ್ಚಿ ಕುಂತರು.

ಜೆಡಿಎಸ್‌ನ ಶರವಣ ಅವರಂತೂ ಜಗದ್ಕಿಲಾಡಿಯ ಹಾಗೆ ‘ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದವರು ಸಾಯುತ್ತಿರುವ ಜನರಿಗೆ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಿಲ್ಲ. 5 ಸ್ಟಾರ್‌ ಹೊಟೇಲ್‌ನಲ್ಲಿ ಉಳಿಸಿದವರು ಬಡಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಲಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ಶರವಣ ಅಪ್ಪಾಜಿ ಕ್ಯಾಂಟೀನ್‌ನಿಂದ ಎಷ್ಟು ಇಡ್ಲಿ, ಮುದ್ದೆಗಳನ್ನು ಸಂತ್ರಸ್ತರಿಗೆ ಸಾಗಿಸಿದ್ದಾರೆ ಎಂದು ಕೇಳಿದರೆ ಉತ್ತರ ಬರುವುದಿಲ್ಲ. ಎಲ್ಲ ಶಾಸಕರನ್ನು ಇವರೂ ಪಂಚತಾರಾ ಹೊಟೇಲ್‌ನಲ್ಲೇ ಕೂಡಿ ಹಾಕಿದಾಗಲೇ ಅಲ್ಲವೇ ಬಾಟ್ಲಿ ಗಣೇಶ ಹೊಡೆದದ್ದು? ಬಡವರ ಬಗ್ಗೆ ಕಾಳಜಿ ಇರುವವರು ಎಷ್ಟು ಗಂಜಿ ಕೇಂದ್ರಗಳನ್ನು ಕಟ್ಟಿಸಿದ್ದಾರೆ? ಒಂದೂ ಇಲ್ಲ. ಅಪ್ಪಾಜಿ ಕ್ಯಾಂಟೀನ್‌ ಕಟ್ಟಿಸಿದ್ದೇ ಇವರ ಸಾಧನೆ.

ಆಯ್ಕೆ ಮಾಡಿ ಕಳುಹಿಸಿದ ಜನರ ಕಷ್ಟವನ್ನು ಪರಿಹರಿಸಿರಯ್ಯಾ ಎಂದು ಕೇಳಿದರೆ ಬಗೆಬಗೆಯ ಕಾರಣ ಹೇಳುವ ಅಷ್ಟೂ ರಾಜಕಾರಣಿಗಳಿಗೆ ಒಮ್ಮೆ ನಾಳೆಯೇ ಚುನಾವಣೆ ಅಂತ ಘೋಷಣೆ ಮಾಡಲಿ. ಅಯ್ಯೋ, ಚುನಾವಣೆ ಬಹಳ ದೊಡ್ಡ ಮಾತಾಯಿತು. ಉಪಚುನಾವಣೆ ಎಂದು ಘೋಷಣೆ ಮಾಡಲಿ ಸಾಕು. ಜಾಗಟೆ ಶಬ್ದಕ್ಕೆ ಹೆದರಿ ಓಡುವ ಹಂದಿಗಳಿಗಿಂತಲೂ ವೇಗವಾಗಿ ಓಡಿಬರುತ್ತಾರೆ. ತೊಡೆ ತಟ್ಟಿ ನಿಲ್ಲುತ್ತಾರೆ.

ಪತ್ರಿಕೆಗಳಲ್ಲಿ ಅವಾಚ್ಯ ಶಬ್ಧ ಬಳಕೆ ಮಾಡುವುದಕ್ಕೆ ಅನುಮತಿ ಇಲ್ಲದಿರುವುದಕ್ಕೆ ಸುಮ್ಮನಿರಬೇಕೆ ವಿನಾ, ಇವರ ಹುಚ್ಚಾಟಗಳನ್ನು ಉತ್ತರ ಕರ್ನಾಟಕ, ಮಂಡ್ಯ ಶೈಲಿಯಲ್ಲೇ ವರ್ಣಿಸಬೇಕು ಎಂದು ಅನ್ನಿಸದೇ ಇರುವವನು ಮನುಷ್ಯನೇ ಅಲ್ಲ.
ಪ್ರವಾಹದ ಇಂಥ ಸಂದರ್ಭದಲ್ಲಿ ರಾಜಕಾರಣಿಗಳು, ಅವರ ಚೇಲಾಗಳು ಸೇರಿದಂತೆ ನಾವೆಲ್ಲರೂ ಕೈ ಮುಗಿಯಬೇಕಾದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸ್ರಾರು ಕಾರ್ಯಕರ್ತರಿಗೆ. ಆ ತಾಯಿ ಸುಧಾ ಮೂರ್ತಿಯಂಥವರಿಗೆ.

ಹೃದಯ ಚಿಕಿತ್ಸೆ ಆಗಿದೆ, ವೈದ್ಯರು ವಿಶ್ರಾಂತಿ ಪಡೆಯುವುದಕ್ಕೆ ಚುನಾವಣಾ ಸಮಯದಲ್ಲೂ ಹೇಳಿದ್ದರು. ಆದರೆ ಆಗ ಎದ್ದು ಬರುವಾಗ ಬೇಡದ ವಿಶ್ರಾಂತಿ ಈಗ ಬೇಕಿದೆಯೇ?

ಆದರೆ ಆರೆಸ್ಸೆಸ್‌ ಹಾಗಲ್ಲ ಸ್ವಾಮಿ. ಅವರು ಕಾರಣ ಹೇಳುತ್ತಾ ಮನೆಯಲ್ಲಿ ಕುಂತು ಟಿವಿ ನೋಡ್ದಿದ್ದನ್ನು ನಾನು ಕೇಳಿಯೇ ಇಲ್ಲ. ದೇಶದಲ್ಲಿ ಮುನ್ನೂರರವತ್ತೈದು ದಿನವು ದೇಶ ಮುಳುಗುತ್ತಿದ್ದರೂ, ಸಾವಿನ ಬಾಗಿಲಿನಲ್ಲೇ ನಿಂತ ಜನರ ರಕ್ಷಣೆ ಮಾಡುತ್ತಾರೆ. ಎಷ್ಟೋ ಜನರಿಗೆ ಇವರು ಯಾರು ಏನು ಎಂಬುದೇ ತಿಳಿಯುವುದಿಲ್ಲ. ಆದರೆ ರಾಜಕಾರಣಿಗಳು ಅಪ್ಪಿ ತಪ್ಪಿ ಕಳುಹಿಸುವ ನಾಲ್ಕು ಬಿಸ್ಕತ್‌ ಬಂಡಲ್ಲಿಗೆ ಪಕ್ಷದ ಬಾವುಟ ನೆಟ್ಟಿರುತ್ತಾರೆ. ಸಂಘ ಪರಿವಾರದವರು ಒಂದು ಖಾಕಿ ಚಡ್ಡಿ ಹಾಕಿ ಹೊರಟರೆ ಎಲ್ಲರೂ ಒಂದೇ ರೀತಿ ಕಾಣುವುದರಿಂದ, ಸ್ವತಃ ನರೇಂದ್ರ ಮೋದಿಯೇ ಬಂದು ನಿಂತರೂ ತಿಳಿಯುವುದಿಲ್ಲ. ಇಷ್ಟು ಮಾಡಿ, ಪರಿಸ್ಥಿತಿ ಶಾಂತವಾದ ನಂತರ ಮನೆಗೆ ಹೋಗುತ್ತಾರೆ ಈ ಕರ್ಮಯೋಗಿಗಳು. ರಾಜಕಾರಣಿಗಳು, ಅವರ ಚೇಲಾಗಳೆಲ್ಲರೂ ಸಂಘದಿಂದ ಕಲೀರ್ರೀ… ಅದನ್ನು ಬಿಟ್ಟು ಯಾರನ್ನೂ ವಿರೋಧಿಸುವುದೇ ಜೀವನ ಎನ್ನುವುದಾದರೆ, ಆ ಜೀವನ ಬಾಳುವುದಕ್ಕಿಂತ ಪ್ರವಾಹ ಪಾಲಾಗುವುದೇ ಉತ್ತಮ ಅಲ್ಲವೇ?

ಬೆಳಗಾವಿಯೊಂದರಲ್ಲೇ ಸ್ವಯಂ ಸೇವಕರು ಮಾಡಿದ ಕೆಲಸವೆಷ್ಟು ಗೊತ್ತೇನು?
ಆಗಸ್ಟ್‌ 7ರಂದು 125 ಜನರು ಕಾರ‍್ಯಕರ್ತರು ಸೇವೆಯಲ್ಲಿ ಭಾಗವಹಿಸಿದ್ದು 40 ಜನರನ್ನು ದೋಣಿಯಲ್ಲಿ ರಕ್ಷಣೆ ಮಾಡಿದ್ದಾರೆ. 2326 ಊಟದ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಅಲ್ಲದೇ ಅವತ್ತೇ ಅಪಾಟ್ರ್ಮೆಂಟ್‌ ಒಂದರಲ್ಲಿ ಹತ್ತಾರು ಜನರನ್ನು ಹೊರ ತೆಗೆದಿದ್ದಾರೆ. ವಿದ್ಯುತ್‌ ಸಂಪರ್ಕ ಇನ್ನೂ ಇದ್ದಿದ್ದರಿಂದ ಯಾರೂ ನೀರಿಗೆ ಇಳಿಯುವುದಕ್ಕೆ ಆಗುತ್ತಿರಲಿಲ್ಲ. ಆಗ ಕರೆ ಮಾಡಿ ವಿದ್ಯುತ್‌ ಕಡಿತಗೊಳಿಸಿ, ಎಲ್ಲರನ್ನೂ ಬಚಾವ್‌ ಮಾಡಿದ್ದಾರೆ.

ಮಾರನೇ ದಿನ ಆಗಸ್ಟ್‌ 8ಕ್ಕೆ ಸೇವೆಗೆ ಹಾಜರಾದವರು 300 ಕಾರ‍್ಯಕರ್ತರು. ದಿನವೆಲ್ಲ ಮಳೆಯಲ್ಲಿದ್ದರೂ ಒಬ್ಬರಿಗೂ ಆ ದೇವರು ಜ್ವರ ಕೊಡಲಿಲ್ಲ. ಬದಲಿಗೆ ಇನ್ನಷ್ಟು ಶಕ್ತಿ ಕೊಟ್ಟ. ಅವತ್ತು 3512 ಊಟದ ಪ್ಯಾಕೆಟ್‌ ವಿತರಣೆ ಮಾಡಿದ್ದಾರೆ. ದೋಣಿಯಲ್ಲಿ 22 ಜನರನ್ನು ರಕ್ಷಿಸಿದ್ದಾರೆ. 100 ಜನರಿಗೆ ವೈದ್ಯಕೀಯ ತಂಡದ ವ್ಯವಸ್ಥೆ. ಅಷ್ಟೇ ಅಲ್ಲ, ನಾಲೆಯಲ್ಲಿ ಬಿದ್ದಿರುವ ಹಸುವನ್ನು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ರಕ್ಷಣೆ ಮಾಡಿದರು. ಆದರೆ ಆ ತಾಯಿ ಇವರ ಮಡಿಲಲ್ಲೇ ಕೊನೆಯುಸಿರೆಳೆದಳು. ಅಲ್ಲೇ ಮಹಾದ್ವಾರ ರೂಢದ ನಾಲ್ಕು ಮನೆಯಲ್ಲಿ ಸಿಕ್ಕಿಕೊಂಡಿದ್ದ 16ಜನರನ್ನು ರಕ್ಷಣೆ ಮಾಡಿದ್ದಾರೆ. ಕೇವಲ ಒಂದೇ ದಿನದಲ್ಲಿ 3512 ಆಹಾರ ಪೊಟ್ಟಣ, 382 ಪೊಟ್ಟಣ ಹಾಲು, 1275 ಒಂದು ಲೀಟರ್‌ ಬಾಟಲಿಯ ನೀರು, 141 ಇಪ್ಪತ್ತು ಲೀಟರ್‌ ಬಾಟಲಿಯ ನೀರು, 154 ಹೊದಿಕೆಗಳು, 830 ಮೇಣದಬತ್ತಿ, 120 ಉಪ್ಪಿನಕಾಯಿ, 5 ಬಾಕ್ಸ್‌ ಔಷಧಿಗಳು, 3500 ಚಪಾತಿ ಮತ್ತು ಬಾಜಿ, 60 ಟವೆಲ್‌, 10 ಬಾಕ್ಸ್‌ ಬಿಸ್ಕತ್ತು. ಆಗಸ್ಟ್‌ 9ರ ರಿಪೋರ್ಟ್‌ ಇನ್ನೂ ಬರಬೇಕಷ್ಟೇ.

ಯೋಚನೆ ಮಾಡಿ, ನಾವು ಮನೆಯಿಂದ ಆಫೀಸಿಗೆ ಹೋಗುವಾಗಲೇ, ರೈನ್‌ ಕೋಟ್‌ ತಗೊಂಡ್ಯಾ? ಜರ್ಕಿನ್‌ ಹಾಕ್ಕೊ, ಬೇಗ ಮನೆಗೆ ಬಾ, ಗಾಡಿ ತಗೊಂಡ್ಹೋಗ್ಬೇಡ, ಕರೆಂಟ್‌ ವೈರ್‌ ಇರುತ್ತೆ ಹುಷಾರು ಎಂಬ ಹತ್ತಾರು ಬಗೆಯ ವಾರ್ನಿಂಗ್‌ ಅನ್ನು 8 ತಾಸಿನಲ್ಲಿ ವಾಪಸ್‌ ಬರುವ ನಮಗೆ ಕೊಟ್ಟು ಕಳುಹಿಸುತ್ತಾರೆ. ಆದರೆ, ಅದೆಷ್ಟೋ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ‍್ಯಕರ್ತರು ಮನೆಗೇ ಬರುವುದಿಲ್ಲ! ಫೋನ್‌ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಅದ್ಯಾವ ನಂಬಿಕೆಯ ಮೇಲೆ ಕಾರ‍್ಯಕರ್ತರನ್ನು ಕಳುಹಿಸಿಕೊಟ್ಟಿರಬಹುದು?

ಇದು ಕರ್ನಾಟಕದ ಮಾತಷ್ಟೇ ಅಲ್ಲ, ಇಡೀ ಭಾರತದಲ್ಲೇ ಸಂಘ ಪರಿವಾರ ಕಾರ್ಯನಿರ್ವಹಿಸುವ ವೈಖರಿ ಇದು. ಇಂಥ ಸೇವಕರನ್ನು ಚಡ್ಡಿ, ಕೋಮುವಾದಿ ಎಂದೆಲ್ಲ ಇದೇ ರಾಜಕಾರಣಿಗಳು ಅಣಕಿಸಿದರಲ್ಲ. ಹೇಗೆ ಮನಸ್ಸು ಬರುತ್ತೆ ಇಂಥವರಿಗೆಲ್ಲ? ಮಾಧ್ಯಮ ಹೋಗಬೇಕಾಗಿರುವುದು ಇವರ ಹಿಂದೆಯೇ ವಿನಾ, ಬಿಳಿ ಅಂಗಿಯ ಮೇಲೆ ಚೂರೂ ಕೊಳೆ ಬೀಳದಂತೆ ಕಾಳಜಿ ವಹಿಸುವ ಹೇತ್ಲಾಂಡಿ ರಾಜಕಾರಣಿಗಳ ಹಿಂದಲ್ಲ. ಈ ಸಂಘಕ್ಕೆ ಕೈ ಮುಗಿಯಿರಿ, ರಾಜಕಾರಣಿಗಳಿಗಲ್ಲ. ಪ್ರವಾಹ ಅಂದ ತಕ್ಷಣ 10 ಕೋಟಿ ರು. ತೆಗೆದುಕೊಡುವುದಲ್ಲದೇ, ಆಹಾರ ಪೊಟ್ಟಣ ಇತ್ಯಾದಿಗಳನ್ನು ಸ್ವತಃ ಪ್ಯಾಕ್‌ ಮಾಡುತ್ತಿರುವ ಸುಧಾ ಮೂರ್ತಿಗೆ ಕೈ ಮುಗಿಯಿರಿ.

ರಾಜಕಾರಣಿಗಳು ಇಷ್ಟೇ, ಮತ-ಅಧಿಕಾರ ಅಷ್ಟೇ ಅವರಿಗೆ. ನಾವು ನಮಗಾಗಿ ಎದ್ದು ನಿಲ್ಲೋಣ. ಸಹಾಯ ಬೇಕಿದ್ದರೆ ಅಥವಾ ಇನ್ನಷ್ಟು ಜೀವಗಳನ್ನು ಉಳಿಸಬೇಕೆಂದಿದ್ದರೆ ಈ ಕೆಳಗಿನ ನಂಬರ್‌ಗಳಿಗೆ ಕರೆ ಮಾಡಿ. ಇಲ್ಲ ನನ್ನ ದೇಹಕ್ಕೆ ಅಷ್ಟು ಶಕ್ತಿ ಇಲ್ಲ ಆದರೆ ಹಣ ಸಹಾಯ ಮಾಡುತ್ತೇನೆ ಎಂದರೂ ಅದಕ್ಕೂ ಕೆಳಗಿನ ಮಾಹಿತಿ ನೋಡಿ.
ಧಾರವಾಡ: ಕಲ್ಲನಗೌಡ- 9448862248, ಅಶ್ವಿನ್‌- 9482311518. ಗದಗ: ನರಸಿಂಹ- 9036552058, ವಿಠ್ಠಲ- 7026245708, ಹಾವೇರಿ : ಶಿವಾನಂದ- 9448888117, ಗುರುರಾಜ – 9986202706, ಹುಬ್ಬಳ್ಳಿ ನಗರ: ವಿಶ್ವನಾಥ- 9739899259, ಸುಧಾಕರ- 9535353553, ಬಸವರಾಜ-9449762322. ಉತ್ತರ ಕನ್ನಡ: ನಿತೀಶ್‌ ಅಂಕೋಲೆಕರ್‌- 9480072204. ಕೊಡಗು: ಚಂದ್ರ ಉಡೋತ್‌-8277780537
ಆರ್‌.ಎಸ್‌ ಎಸ್‌ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ: ಕೆನರಾ ಬ್ಯಾಂಕ್‌ ಸ್ಟೇಶನ್‌ ರೋಡ್‌, ಹುಬ್ಬಳ್ಳಿ. a/c: 0514101052880, IFSC: CNRB0000514

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya