ಕೆಫೆ ಕಾಫಿ ಡೇ ಬಗ್ಗೆ ‘ಸತ್ಯಂ’ ಬಲ್ಲವರೆಷ್ಟು?

 

 

ಹೀಗಾಗಬಾರದಿತ್ತು. ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕಾಫಿ ಶಾಪ್‌ ತೆರೆದ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಕಾಣೆಯಾಗಿದ್ದಾರೆ. ಇವತ್ತು, ನಾಳೆಯಷ್ಟರಲ್ಲಿ ಪೂರ್ಣ ಮಾಹಿತಿ ಸಿಗಬಹುದು. ಏನೇ ಆಗಲಿ, ಒಂದು ದೊಡ್ಡ ಬಿಜಿನೆಸ್‌ಮನ್‌ ಸೋತರೆ, ದೇಶಕ್ಕೂ ನಷ್ಟವೇ. ಕೆಫೆ ಕಾಫಿ ಡೇ ಎಂಬ ಕಾಫಿ ಶಾಪ್‌ ಇತ್ತು ಎಂದು ಹೇಳುವ ಪರಿಸ್ಥಿತಿಯೂ ಬರಬಹುದು.

ದೇಶಕ್ಕೆ ಒಬ್ಬ ಬಿಜಿನೆಸ್‌ಮನ್‌ ಸೋತರೆ ಎಷ್ಟು ನಷ್ಟವಾಗುತ್ತದೆಯೋ, ಅಷ್ಟೇ ನಷ್ಟ ಆತ ಮೋಸ ಮಾಡಿ ಓಡಿದರೂ ಆಗುತ್ತದೆ ಎಂಬುದು ವಿಜಯ್‌ ಮಲ್ಯ ಆದಿಯಾಗಿ ಸಾಕಷ್ಟು ಪ್ರಕರಣಗಳಲ್ಲಿ ನಾವು ನೋಡಿದ್ದೇವೆ. ಕಾಣೆಯಾಗಿರುವ ಸಿದ್ಧಾರ್ಥ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳು ಈಗ ಕೇಳಿ ಬರುತ್ತಿವೆ. ಕೆಲವರು ಅವರೆಷ್ಟು ಸಜ್ಜನ ಎಂದು ಬರೆಯುತ್ತಿದ್ದಾರೆ. ಇನ್ನಷ್ಟು ಜನರು ಅವರು ಈಗೀಗ ಅಧ್ಯಾತ್ಮದತ್ತ ವಾಲುತ್ತಿದ್ದಾರೆ ಎಂಬುದನ್ನೂ ಬರೆಯುತ್ತಿದ್ದಾರೆ. ಇನ್ನಷ್ಟು ಜನ ಅವರನ್ನು 40 ಸಾವಿರ ಜನರಿಗೆ ಉದ್ಯೋಗ ಕೊಟ್ಟ ಹೃದಯವಂತ ಎಂಬ ಉಪಾದಿಗಳಿಂದ ಕರೆಯುತ್ತಿದ್ದಾರೆ. ಅವರು ದೊಡ್ಡ ಉದ್ಯಮಿಯಾಗಿಯೂ ಎಲೆಮರೆ ಕಾಯಿಯಂತೆ ಇದ್ದರು ಮತ್ತು ವಿನಯವಂತರಾಗಿದ್ದರು ಎಂಬುದು ಸತ್ಯ.

ಇದರ ಬಗ್ಗೆ ನಂತರ ಮಾತಾಡೋಣ, ಅದಕ್ಕಿಂತ ಮೊದಲು ವಿ.ಜಿ. ಸಿದ್ಧಾರ್ಥ ಒಟ್ಟು ಆಸ್ತಿ ಪಾಸ್ತಿ ಎಷ್ಟು ಮತ್ತು ಅವರ ಕಂಪನಿಗಳ ಬಗ್ಗೆ ಬೇರೆಲ್ಲ ಮಾಹಿತಿ ತಿಳಿದುಕೊಳ್ಳೋಣ.
140 ವರ್ಷಗಳಿಂದ ಸಿದ್ಧಾರ್ಥ ಕುಟುಂಬಸ್ಥರು ಕಾಫಿ ಪ್ಲಾಂಟೇಷನ್‌ ಉದ್ಯಮದಲ್ಲ್ಲಿದ್ದಾರೆ. ಇವರೇ ಒಂದು ಕಡೆ ಹೇಳಿಕೊಳ್ಳುತ್ತಾರೆ, 90ರ ದಶಕದಲ್ಲಿ ಕಾಫಿ ಪ್ಲಾಂಟೇಷನ್‌ ಮೇಲೆ ಹೂಡಿಕೆ ಮಾಡಿದ್ದ ಒಂದೇ ವರ್ಷದಲ್ಲಿ ದುಪ್ಪಟ್ಟು ಹಣ ಗಳಿಸಿದ್ದೆ ಎಂದು. ಅಷ್ಟೇ ಅಲ್ಲ, ಇವರ ಬಳಿ ಈಗಲೂ 12 ಸಾವಿರ ಎಕರೆ ಕಾಫಿ ಪ್ಲಾಂಟೇಷನ್‌ ಇದೆ. ದೇಶದಲ್ಲಿ ಒಟ್ಟಾರೆ 1,700 ಕೆಫೆ ಕಾಫಿ ಡೇ(ಸಿಸಿಡಿ) ಕೆಫೆಗಳು, 48 ಸಾವಿರ ಮಷೀನ್‌ಗಳಿವೆ. ಇದರ ವಾರ್ಷಿಕ ಟರ್ನೋವರ್‌ 4,264 ಕೋಟಿ ರು. ನೆನಪಿರಲಿ 2015ರ ಫೋರ್ಬ್ಸ್‌ ಪಟ್ಟಿಯಲ್ಲಿ ವಿ.ಜಿ. ಸಿದ್ಧಾರ್ಥರ ಹೆಸರು ಶ್ರೀಮಂತರ ಪಟ್ಟಿಯಲ್ಲಿದ್ದು, ಅವರ ಆಸ್ತಿ 8,200 ಕೋಟಿ ರೂ. ಎಂದು ಪ್ರಕಟವಾಗಿದೆ. ಇನ್ನು ಕೋಕಾಕೋಲಾ ಕಂಪನಿಗೆ ಸಿಸಿಡಿಯನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು ಮತ್ತು ಆಗ ಸಿಸಿಡಿಯನ್ನು 8 ಸಾವಿರದಿಂದ 10 ಸಾವಿರ ಕೋಟಿಗೆ ಬೆಲೆ ಬಾಳುತ್ತಿತ್ತು ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಸಿದ್ಧಾರ್ಥ ಅವರು ಜಿಟಿವಿ- ಮೈಂಡ್‌ಟ್ರಿ, ಲಿಕ್ವಿಡ್‌ ಕ್ರಿಸ್ಟಲ್‌, ವೆ2ವೆಲ್ತ್‌ ಮತ್ತು ಇಟ್ಟಿಯಮ್‌ನಲ್ಲಿ ನಿರ್ದೇಶಕರೂ ಆಗಿದ್ದಾರೆ.

ಇವರು ಏನು ಮಾಡಿದ್ದಾರೆ, ಇವರ ಸಮಸ್ಯೆ ಏನಿತ್ತು ಎಂಬುದನ್ನು ಬಿಟ್ಟು ಕಂಪನಿಗಳಲ್ಲಿ ಮೋಸ ಹೇಗೆ ನಡೆಯುತ್ತದೆ ಅಥವಾ ಉದ್ಯಮಿಗಳು ಹೇಗೆಲ್ಲ ಮೋಸ ಮಾಡುತ್ತಾರೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ ಕೇಳಿ.

ಸಹಜವಾಗಿ ಉದ್ಯಮಿಗಳು ಒಂದು ಕಂಪನಿಯ ಹೆಸರಿನಲ್ಲಿ ಸಾಲ ತೆಗೆದು ಅದನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ಮಾತ್ರಲೆಕ್ಕಾಚಾರಗಳೆಲ್ಲ ಉಲ್ಟಾ ಆಗುವುದು. ಕೆಲವರು ಹಾಗೆ ಮಾಡಿಯೂ ಲಾಭ ಮಾಡಿ ಗೆದ್ದವರಿದ್ದಾರೆ, ಇನ್ನು ಕೆಲವರು ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ತಲುಪಿದ್ದಾರೆ. ಸಾಯಲು ಧೈರ್ಯವಿಲ್ಲದವರು ವಿಜಯ್‌ ಮಲ್ಯನ ಹಾಗೆ ವಿದೇಶದಲ್ಲಿದ್ದಾರೆ. ಇದು ಎಲ್ಲ ಕಂಪನಿಗಳ ಹಣೆಬರಹ.
ಕಾಫಿ ಡೇ ಕಂಪನಿಯು ಲಾಭವನ್ನೇ ಮಾಡುತ್ತಿದೆ. ಗೂಗಲ್‌ ಮಾಡಿದರೆ, ಈ ಕಂಪನಿಯ ಬ್ಯಾಲೆನ್ಸ್‌ಶೀಟ್‌ ಸಮೇತ ಸಿಗುತ್ತದೆ. ಲಾಭ ಅಷ್ಟಿರಬೇಕಾದರೆ, ನಷ್ಟ ಆಗಿದ್ದೆಲ್ಲಿ?

ಒಂದು ಕಾಲಕ್ಕೆ ಸತ್ಯಂ ಕಂಪ್ಯೂಟರ್ಸ್‌ ಎಂದರೆ ಬಹಳ ದೊಡ್ಡ ಹೆಸರಿದ್ದ ಕಂಪನಿ. ಅವರು ತಮ್ಮ ಬ್ಯಾಲೆನ್ಸ್‌ ಶೀಟ್‌ನಲ್ಲಿ ಸುಳ್ಳು ಆಸ್ತಿಯನ್ನು ತೋರಿಸಿದರು. ಉದಾಹರಣೆಗೆ ಸ್ಟಾಕ್‌ ಕೇವಲ 10 ಕೋಟಿ ರೂ. ಅಷ್ಟಿರುತ್ತದೆ. ಆದರೆ 200 ಕೋಟಿ ರೂ. ಷೇರ್‌ ಸ್ಟಾಕ್‌ ಇದೆ ಎಂದು ಹೇಳಿ ಸಾಲ ತೆಗೆದುಕೊಂಡು ಬಿಡುತ್ತಾರೆ. ಆಗ ಸಿಕ್ಕ ಸಾಲವನ್ನು ಬೇರೆ ಇನ್ನೊಂದು ಉದ್ಯಮಕ್ಕೋ ಅಥವಾ ಇನ್ಯಾವುದಕ್ಕೋ ಹಾಕಿಬಿಡುವುದು. ಸತ್ಯಂ ಕಂಪನಿಯವನು ಸುಳ್ಳು ಹೇಳಿ ಸಾಲ ತೆಗೆದುಕೊಂಡ. ಅದನ್ನು ರಿಯಲ್‌ ಎಸ್ಟೇಟ್‌ ಮೇಲೆ ಹಾಕಿದ. ಬ್ಯಾಂಕ್‌ 10-11% ಬಡ್ಡಿ ಹಾಕುತ್ತದೆ. ರಿಯಲ್‌ ಎಸ್ಟೇಟ್‌ ಉದ್ಯಮ 30% ಕೊಡುತ್ತದೆ. ರಾತ್ರೋ ರಾತ್ರಿ ಶ್ರೀಮಂತ ಆಗಿ ಎಲ್ಲವನ್ನೂ ಬ್ಯಾಂಕ್‌ಗೆ ವಾಪಸ್‌ ಕೊಟ್ಟು, ರಿಯಲ್‌ ಎಸ್ಟೇಟ್‌ ಮುಂದುವರಿಸಬಹುದು ಎಂಬುದು ಸತ್ಯಂ ಕಂಪನಿಯ ಲೆಕ್ಕಾಚಾರ. ಆದರೆ, ದಿಢೀರ್‌ ಎಂದು ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಬಿತ್ತು. ಆದಾಯವೂ ಕಡಿಮೆಯಾಯಿತು. ಆಗ ಬ್ಯಾಂಕ್‌ ಸಾಲದ ಬಡ್ಡಿ ಬೆಳೆಯುತ್ತಲೇ ಹೋಯಿತು. ಸಾಲ ಕೊಟ್ಟವನು ಸುಮ್ಮನೆ ಕೂರುತ್ತಾನಾ? ಬಂದು ಕುತ್ತಿಗೆ ಮೇಲೆ ಕುಂತ. ಸಾಲ ಪಡೆದವನು ಎಲ್ಲ ಮಾರಿ ಬೆತ್ತಲಾಗಿ ಜೈಲಿಗೆ ಹೋದ.

ಇನ್ನೊಂದು ಥರವೂ ಕಂಪನಿಗಳಲ್ಲಿ ಮೋಸ ಆಗುತ್ತದೆ. ಹೇಗೆ? ಒಬ್ಬ ಉದ್ಯಮಿ ತಾನು ಸ್ಥಾಪಿಸಿದ ಕಂಪನಿ ಅಥವಾ ‘ಪ್ರೈವೇಟ್‌’ ಕಂಪನಿಯನ್ನು ‘ಪಬ್ಲಿಕ್‌ ಸೆಕ್ಟರ್‌’ನ್ನಾಗಿ ಮಾಡಿ, ಸಾರ್ವಜನಿಕರಿಗೂ ಅದರಲ್ಲಿ ಪಾಲು ನೀಡುವುದೇಕೆ? ಏಕೆಂದರೆ, ಅವನಿಗೆ ಆ ಕಂಪನಿ ಬಿಟ್ಟು ಜಾರಿಕೊಳ್ಳಬೇಕು ಎಂದಾಗಿದೆ ಅಥವಾ ಇನ್ನೇನೋ ಹೊಸ ಯೋಜನೆ ಇದೆ ಎಂದರ್ಥ. ಇಲ್ಲವಾದರೆ, ಲಾಭದಲ್ಲಿರುವ ಕಂಪನಿಯ ಸ್ವರೂಪವನ್ನು ಬದಲಾಯಿಸಿ ಷೇರ್‌ ಕೊಡುವುದೇಕೆ? ಕಾಫಿ ಡೇ ಎಂಟರ್‌ಪ್ರೈಸಸ್‌ ಎಂಬುದು ಕೂಡ ‘ಪ್ರೈವೇಟ್‌’ ಕಂಪನಿಯೇ ಆಗಿತ್ತು. ಅದನ್ನು ಪಬ್ಲಿಕ್‌ ಸೆಕ್ಟರ್‌ ಮಾಡಿದ್ದೇಕೆ? ಹೊರ ಹೋಗುವುದಕ್ಕೇ ಮಾಡಿದ್ದಾ?

ಸಿದ್ದಾರ್ಥ ಹಾಗೂ ಕೆಫೆ ಕಾಫಿ ಡೇ ಕಂಪನಿಯ ಲೆಕ್ಕ ಪರಿಶೋಧಕರನ್ನು ನಾನು ಮಾತಾಡಿಸಿದಾಗ, ‘ಮೈಯೆಲ್ಲ ಸಾಲ ಮಾಡಿಕೊಂಡು ದಿವಾಳಿ ಆಗುವ ಲಕ್ಷಣ ಇದೆ ಎಂದು ನಾನು 8 ವರ್ಷಗಳ ಹಿಂದೆಯೇ ಕೆಲವರ ಗಮನಕ್ಕೆ ತಂದಿದ್ದೆ’ ಎನ್ನುತ್ತಾರೆ.
ಒಬ್ಬ ಉದ್ಯಮಿ ಕಂಪನಿಗಳಲ್ಲಿ ತಾನು ಹೊಂದಿರುವ ಆಯಾ ಕಂಪನಿಗಳ ಷೇರ್‌ ಮೇಲೆ ಸಾಲ ತೆಗೆದುಕೊಳ್ಳಬಹುದು. ಉದಾಹರಣೆಗೆ ಕಾಫಿ ಡೇಯನ್ನೇ ತೆಗೆದುಕೊಳ್ಳೋಣ. ಸಿದ್ದಾರ್ಥರ ಬಳಿ ಅವರದ್ದೇ ಸಿಸಿಡಿ ಕಂಪನಿಯ ಶೇ.32.75ರಷ್ಟು ಷೇರ್‌ಗಳಿತ್ತು. ಅದರಲ್ಲಿ 71.4% ಷೇರ್‌ಗಳನ್ನು ಈಗಾಗಲೇ ಸಾಲ ಮಾಡುವುದಕ್ಕೆ ಒತ್ತೆಯಿಟ್ಟಿದ್ದಾರೆ. ಸಿಸಿಡಿಯ ಇವತ್ತಿನ ಒಂದು ಷೇರ್‌ನ ಬೆಲೆ 153 ರು. ಇದ್ದು, 38ರು. ಇಳಿಕೆ ಕಂಡಿದೆ. ಷೇರ್‌ನಲ್ಲಿ ಸಾಲ ತೆಗೆದುಕೊಂಡರೆ ಏನಾಗುತ್ತದೆಂದರೆ, ಷೇರ್‌ ಬೆಲೆ ಬಿದ್ದಾಗ, ಸಾಲ ಕೊಟ್ಟವರು, ಬಾಕಿ ಮೊತ್ತವನ್ನು ತುಂಬು ಎನ್ನುತ್ತಾರೆ. ಅಂದರೆ, 153+38=191 ಆಗಿದ್ದಾಗ ಈತ ಸಾಲ ತೆಗೆದುಕೊಂಡಿದ್ದಿದ್ದರೆ, ಇವತ್ತು 38 ರೂ ಇಳಿಕೆಯಾದರೆ, ಆ ಬಾಕಿ 38 ರೂ. ಅನ್ನು ಕಟ್ಟು ಎಂದು ಸಾಲ ಕೊಟ್ಟವನು ಪಟ್ಟು ಹಿಡಿಯುತ್ತಾರೆ. ಸಿದ್ದಾರ್ಥ ಅಥವಾ ಯಾವುದೇ ಉದ್ಯಮಿ ಅನುಭವಿಸುವ ಸ್ಥಿತಿ ಇದು. ಅಲ್ಲದೇ, ಸಾಲವನ್ನು ಉದ್ಯಮಕ್ಕೆ ಎಂದು ಪಡೆದು ಚಿಕ್ಕಮಗಳೂರಲ್ಲಿ ಕಾಫಿ ಪ್ಲಾಂಟೇಷನ್‌ ಖರೀದಿಸಿದರೆ, ವಾಪಸ್‌ ಕೊಡುವುದಾದರೂ ಎಲ್ಲಿಂದ? ಒಮ್ಮೆ ಎಸ್ಟೇಟ್‌ ಮಾರುತ್ತೇನೆಂದರೂ, ಅಷ್ಟೆಲ್ಲ ಕೋಟಿ ಕೊಟ್ಟು ತೆಗೆದುಕೊಳ್ಳುವವರಾರು?

ಭಾರತದಲ್ಲಿ ಇಂಥ ವ್ಯವಹಾರಗಳು ನಿತ್ಯ ನಡೆಯುತ್ತಲೇ ಇತ್ತು. ಎಲ್ಲಿಯವರೆಗೆ? ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿದ್ದಾಗ. ಆದರೆ, ಈಗ ಮೋದಿ ಸರ್ಕಾರದಲ್ಲಿ ಕಾಲ ಬದಲಾಗಿದೆ. ಯಾರೇ ಸಾಲ ಮಾಡಿದರೂ, ಅಷ್ಟು ಸುಲಭವಾಗಿ ಬಚಾವ್‌ ಆಗುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದ್ದರೆ ದಂಡ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕು. ಇದೇ ಸ್ಥಿತಿ ಇರುವುದರಿಂದ, ಯುಪಿಎ ಕಾಲದಲ್ಲಿ ಜಾಗ್ವಾರ್‌ನಲ್ಲಿ ಊರು ಸುತ್ತಿದವರೆಲ್ಲ, ಈಗ ಇನ್ನೋವಾ ಕಾರ್‌ನಲ್ಲಿ ಅಡ್ಡಾಡುತ್ತಿದ್ದಾರೆ.

ಒಬ್ಬ ಉದ್ಯಮಿ ಸರ್ಕಸ್‌ ಕಂಪನಿಯಲ್ಲಿ ಹಗ್ಗದ ಮೇಲೆ ನಡೆಯುವವನಿದ್ದಂತೆ. ಆತ ಬ್ಯಾಲೆನ್ಸ್‌ ಮಾಡುತ್ತಾ ಮುಂದೆ ಸಾಗುವಾಗ ಎಲ್ಲರೂ ಚಪ್ಪಾಳೆ ಹೊಡೆಯುತ್ತಿರುತ್ತಾರೆ, ಕೇಕೆ ಹಾಕುತ್ತಿರುತ್ತಾರೆ. ಆದರೆ ಯಾವಾಗಾದರೊಮ್ಮೆ ತೆರಿಗೆ ಇಲಾಖೆ ಅಧಿಕಾರಿಗಳು ಬಂದು ಹಗ್ಗವನ್ನು ಸ್ವಲ್ಪ ಅಲುಗಾಡಿಸುತ್ತಾರೆ ನೋಡಿ, ಆಗ ಇವನು ಅಲ್ಲೋಲ ಕಲ್ಲೋಲ. ಸುಧಾರಿಸಿಕೊಂಡು ಬ್ಯಾಲೆನ್ಸ್‌ ಕಾದುಕೊಂಡವನು ಬಚಾವು. ಸರಿಯಾದ ಮಾರ್ಗದಲ್ಲಿ ಹೋಗುವ ಬದಲು, ಹಗ್ಗದ ಮೇಲೆ ನಡೆದುಕೊಂಡು ಹೋಗುವುದನ್ನು ಆಯ್ಕೆ ಮಾಡಿಕೊಂಡವನು ಉದ್ಯಮಿ. ಅದರ ಪ್ರತಿಫಲವನ್ನು ಅನುಭವಿಸಲೇ ಬೇಕು. ಅದನ್ನು ಬಿಟ್ಟು ಐಟಿ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರೆ ಏನು ಪ್ರಯೋಜನ?

ಐಟಿ ಅಧಿಕಾರಿಗಳು ಸಿದ್ಧಾರ್ಥರನ್ನು ರೇಡ್‌ ಮಾಡಿದಾಗ ಅವರಿಗೆ 480 ಕೋಟಿ ರೂ. ಆಸ್ತಿಗೆ ಲೆಕ್ಕ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೇ ಕೇವಲ 35 ಕೋಟಿ ರೂ. ಆಸ್ತಿಗೆ ಮಾತ್ರ ರಿಟರ್ನ್ಸ್‌ ಫೈಲ್‌ ಮಾಡಲಾಗಿತ್ತು ಎಂದು ಐಟಿ ಇಲಾಖೆಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಹೀಗಿರುವಾಗ ಆತ 40 ಸಾವಿರ ಜನರಿಗೆ ಕೆಲಸ ಕೊಟ್ಟ ಧೀಮಂತ ನಾಯಕ ಎಂದು ಕರೆಯುವುದಾದರೆ, ವಿಜಯ್‌ ಮಲ್ಯನ ಕಿಂಗ್‌ಫಿಷರ್‌ ಒಂದರಲ್ಲೇ 3,000 ಜನ ಕೆಲಸ ಮಾಡುತ್ತಿದ್ದರು, ಮೆಹುಲ್‌ ಚೋಕ್ಸಿ 2,300 ಜನರಿಗೆ ಕೆಲಸ ಕೊಟ್ಟಿದ್ದ. 2008ರಲ್ಲಿ ದಿವಾಳಿಯಾದ ಅಮೆರಿಕದ ‘ಲೆಹ್ಮನ್‌ ಬ್ರದರ್ಸ್‌’ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು 26,200. 2003ರಲ್ಲಿ ‘ಹೆಲ್ತ್‌ಸೌತ್‌’ ಕಂಪನಿಯ ಸಿಇಒ ಇರುವುದಕ್ಕಿಂತ ಜಾಸ್ತಿ ಷೇರ್‌ಗಳನ್ನು ತೋರಿಸಿ ಸಾಲ ಪಡೆದಿದ್ದರಿಂದ 40,000 ಜನರ ಕೆಲಸ ಹೋಗಿತ್ತು. ಹಾಗಂತ ಎಲ್ಲರಿಗೂ ಈ ಆಧಾರದ ಮೇಲೇ ರಿಯಾಯಿತಿ ಕೊಡಲು ಸಾಧ್ಯವೇ?

ಭಾರತೀಯ ಸಂಸ್ಕೃತಿಯೇ ಹಾಗೆ. ಸತ್ತಮೇಲೆ ಪ್ರಶಸ್ತಿ ಕೊಡುವುದೇ ಅಧಿಕ. ಯಾರಾದರೂ ಕಾಣೆಯಾದರೆ, ಸತ್ತರೆ ಅವರ ಬಗ್ಗೆ ಅನುಕಂಪ ಹೆಚ್ಚು. ಮನ್ಸೂರ್‌ ಖಾನ್‌ನಿಗೇನು ಅಭಿಮಾನಿಗಳು ಕಡಿಮೆಯಿದ್ದರಾ? ಬಹುಶಃ ಕಟ್ಟು ನಿಟ್ಟಾಗಿ ಕೆಲಸ ಮಾಡಿಯೂ ಶಪಿಸಿಕೊಳ್ಳುತ್ತಿರುವುದು ಮೋದಿ ಸರ್ಕಾರವೇ ಮೊದಲು ಎನ್ನಿಸುತ್ತದೆ. ಆ ಲೆಕ್ಕದಲ್ಲಿ ಕಾಂಗ್ರೆಸ್‌ ಆಡಳಿತವೇ ಚೆನ್ನಾಗಿತ್ತು!

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya