ವಿಜ್ಞಾನಿ ನಂಬಿ ನಾರಾಯಣನ್‌ರನ್ನು ಸಿಲುಕಿಸಿದ್ದೇ ಅನ್ಸಾರಿ ಆಪ್ತ!

ಮಾಜಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಇರಾನ್‌ನಲ್ಲಿದ್ದ ಭಾರತೀಯ ಗುಪ್ತಚರ ಸಂಸ್ಥೆಯ  ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ(ರಾ)ಅಧಿಕಾರಿಗಳನ್ನು ನಡೆಸಿಕೊಂಡಿರುವ ಪರಿ ಹಾಗೂ ಅಧಿಕಾರಿಗಳ ರಕ್ಷಿಸುವಲ್ಲಿ ತಾಳಿದ ಧೋರಣೆಗಳ ಬಗ್ಗೆ ಹೊಸ ದಿಗಂತಕ್ಕೆ ನೀಡಿದ ಸಂದರ್ಶನದಲ್ಲಿ ರಾ ಮಾಜಿ ಅಧಿಕಾರಿ ಎನ್‌.ಕೆ. ಸೂದ್‌ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ನಡೆದ ಇನ್ನಷ್ಟು ದೇಶ ವಿರೋಧಿ ಸಂಗತಿಗಳನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಅವರು ಏನೇನು ಹೇಳಿದ್ದಾರೆ? ಸಂಪೂರ್ಣ ಸಂದರ್ಶನ ಇಲ್ಲಿದೆ.

ನಿಮಗೆ ಮೊದಲು ಅನ್ಸಾರಿ ದೇಶವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸಿದ್ದು ಯಾವಾಗ?

ಒಬ್ಬ ರಾಯಭಾರಿಯ ಕೆಲಸ ಏನು ಎಂದರೆ, ಆತ ನಮ್ಮ ದೇಶದ ಪರವಾಗಿ ಇರಬೇಕು. ಆಯಾ ದೇಶದಲ್ಲಿ ಸ್ವದೇಶಿ ಅಧಿಕಾರಿಗಳು ಯಾವುದಾದರೂ ಕಾರ್ಯಾಚರಣೆಯಲ್ಲಿದ್ದರೆ ಅವರನ್ನು ರಕ್ಷಿಸಬೇಕು. ಅವರನ್ನು ಕಾಯಬೇಕು. ನೀವೇ ಆಲೋಚನೆ ಮಾಡಿ, ಭಾರತದ ಅಧಿಕಾರಿಗಳನ್ನು ಅದು ಹೇಗೆ ಅಪಹರಣ ಮಾಡಿಬಿಡುತ್ತಾರೆ? ಹೇಗೆ ಜೈಲಿಗೆ ಹಾಕುತ್ತಾರೆ? ಮಾಡಿದಾಗ ಎಲ್ಲೆಲ್ಲಿ ದೂರು ನೀಡಬೇಕಿತ್ತು? ಅದು ಯಾರ ಕರ್ತವ್ಯ? ಅದನ್ನು ಮಾಡದ ಅನ್ಸಾರಿಯನ್ನು ಏನಂತ ಪರಿಗಣಿಸುತ್ತೀರಿ?

ಅಪಹರಣ ಆದಾಗ ಅನ್ಸಾರಿ ಪ್ರತಿಕ್ರಿಯೆ ಹೇಗಿತ್ತು?

ಮೊದಲನೇ ಪ್ರಕರಣದಲ್ಲಿ ಸಂದೀಪ್‌ ಕಪೂರ್‌ನ್ನು ಏರ್‌ಪೋರ್ಟ್‌ನಿಂದ ಅಪಹರಣ ಮಾಡಿದಾಗ, ಅನ್ಸಾರಿ ಮೂರು ದಿನಗಳ ಕಾಲ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಅವನು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಸುಳ್ಳನ್ನು ಬರೆದು ವಿದೇಶಾಂಗ ಇಲಾಖೆಗೆ ಪತ್ರ ಬರೆದು ಕೈ ತೊಳೆದುಕೊಂಡಿದ್ದರು.

ಎರಡನೇ ವ್ಯಕ್ತಿ ಅಪಹರಣವಾದಾಗಲೂ ಅನ್ಸಾರಿ ಸುಮ್ಮನೇ ಇದ್ದರು. ಇಲಾಖೆಗೆ ಒಂದು ನಾಪತ್ತೆ ಪತ್ರ ಬರೆದು ಸುಮ್ಮನಾದರು. ಕೊನೆಗೆ ನಾನು ಭಾರತದಲ್ಲಿರುವ ನನ್ನ ಸ್ನೇಹಿತ ಆರ್‌.ಕೆ. ಯಾದವ್‌ ಅವರಿಗೆ ವಿಷಯ ತಿಳಿಸಿದೆ. ಆಗ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರ ಬಳಿ ವಿಷಯ ಹೇಳಿ, ಅವರು ನರಸಿಂಹರಾವ್‌ ಅವರಿಗೆ ವಿಷಯ ತಿಳಿಸಿ, ಭಾರತದಿಂದ ಕರೆ ಬಂದಾಗ, ನಮ್ಮವರು ಬಿಡುಗಡೆಯಾಗಿದ್ದು.

ಕಾಂಗ್ರೆಸ್‌ ಈ ಅಕ್ರಮದಲ್ಲಿ ಭಾಗಿಯಾಗಿತ್ತೇ?

ಅದು ಹೇಳುವ ಮುನ್ನ ನಿಮಗೊಂದು ಕುತೂಹಲಕಾರಿ ಸಂಗತಿಯನ್ನು ಹೇಳುತ್ತೇನೆ ಕೇಳಿ. ಈ ಅನ್ಸಾರಿಗೆ ಇರಾನ್‌ ಅಷ್ಟೇ ಅಲ್ಲದೇ, ಭಾರತದಲ್ಲೂ ರಾಜಕಾರಣಿಗಳ ಸಂಪರ್ಕ ಚೆನ್ನಾಗಿಯೇ ಇತ್ತು.

ಪಿ. ಚಿದಂಬರಂ ಅವರ ಆಪ್ತ ಕಾರ್ಯದರ್ಶಿ ಕೆ.ಸಿ. ವರ್ಮಾ ಅವರನ್ನು ಜನವರಿ 2009ರಲ್ಲಿ ಗುಪ್ತಚರ ಸಂಸ್ಥೆಯ  ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ(ರಾ) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಸರ್‌, ರಾ ಎನ್ನುವುದು ಬಹಳ ಗಂಭೀರವಾದ ಇಲಾಖೆ. ರಾ ಮುಖ್ಯಸ್ಥರಾಗುವುದಕ್ಕೆ ಅದರದ್ದೇ ಆದ ಅರ್ಹತೆಗಳಿವೆ. ಯೋಗ್ಯತೆಗಳಿವೆ. ಯಾರೋ ಪಿ.ಎ., ಪಿ.ಎಸ್‌.,ಗಳು ಒಂದು ಬೆಳಗಾಗುವುದರೊಳಗೆ ಮುಖ್ಯಸ್ಥ ಆಗುವುದಕ್ಕೆ ಇದು ಸಿನಿಮಾ ಅಲ್ಲ.

ಮಾಜಿ ಉಪರಾಷ್ಟ್ರಪತಿ ಬಗ್ಗೆ ಆರೋಪ ಮಾಡುತ್ತಿದ್ದೀರಿ. ಇದರ ಅರಿವಿದೆಯೇ?

ವೈ ಶುಡ್‌ ಐ ಕೇರ್‌? ಸತ್ಯ ಹೇಳುವುದಕ್ಕೆ ಯಾರಪ್ಪನ ಅಪ್ಪಣೆ ಬೇಕು? ಅವರು ತಪ್ಪು ಮಾಡಿದ್ದಾರೆ. ಅದನ್ನು ನೇರವಾಗಿ ಪ್ರಪಂಚದ ಮುಂದಿಟ್ಟಿದ್ದೇನೆ.

ಆಗ ಇದನ್ನೆಲ್ಲ ಹೇಳಬಹುದಿತ್ತಲ್ಲ? ಈಗೇಕೆ ಹೇಳುತ್ತಿದ್ದೀರಿ?

ಆಗಲೂ ಹೇಳಿದ್ದೆ. ಒಬ್ಬ ಸರ್ಕಾರಿ ಅಧಿಕಾರಿ, ಸೇವೆಯಲ್ಲಿರುವಾಗ ಹೇಗೆಲ್ಲ ವಿಷಯ ತಿಳಿಸಬೇಕೋ ಹಾಗೆ ಎಲ್ಲ ಮಾದರಿಯಲ್ಲೂ ತಿಳಿಸಿದ್ದೇನೆ. ಕಾಂಗ್ರೆಸ್‌ ಆಗ ನನ್ನ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ವಿಷಯ ಹೇಳಲೇಬೇಕಿತ್ತು, ಈಗ ಹೇಳಿದೆ ತಪ್ಪೇನು?

ತಪ್ಪೇನೂ ಇಲ್ಲ. ಆದರೆ, ನೀವು ಮೋದಿಪರ, ಹಾಗಾಗಿ ಹೇಳುತ್ತಿರಬಹುದು ಎಂಬುದು ಜನರ ವಾದ?

ನಾನು ಇಂದಿರಾ ಗಾಂಧಿಯನ್ನೂ ಅಷ್ಟೇ ಗೌರವಿಸುತ್ತೇನೆ. ಆಕೆಯ ಹಾಗೆ ಯಾರೂ ಅಧಿಕಾರ ಮಾಡಲಿಲ್ಲ. ಮೋದಿ ಈಗ ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಅವರಿಗೆ ಗೌರವಿಸುತ್ತೇನೆ. ಎಷ್ಟು ದಿನ ಅಂತ ಅನ್ಸಾರಿ ಬಹಳ ಉತ್ತಮ ಮನುಷ್ಯ ಎಂದುಕೊಂಡಿರಬೇಕು? ಅಮೆರಿಕ ದೇಶದ ಅಧ್ಯಕ್ಷನ ಮುಂದೆ, ನಮ್ಮ ರಾಷ್ಟ್ರಗೀತೆಗೆ ಅವಮಾನ ಮಾಡಿದರೆ ಹೇಗೆ ಸಹಿಸಿಕೊಳ್ಳುವುದು? ನಮ್ಮ ದೇಶಕ್ಕೆ ಶರಿಯಾ ಕಾನೂನು ಬೇಕು ಎಂಬುದು ಎರಡೆರಡು ಬಾರಿ ಉಪರಾಷ್ಟ್ರಪತಿ ಆಡುವ ಮಾತೇ? ಪಿಎಫ್‌ಐ ಜೊತೆ ಕೈಜೋಡಿಸಿ, ಭಾರತೀಯ ಎನ್ನುವುದಕ್ಕೆ ಅವಮಾನ ಆಗುತ್ತೆ ಎಂಬುದು ಯಾವುದಾದರೂ ಉಪರಾಷ್ಟ್ರಪತಿ ಹೇಳಿದ್ದನ್ನು ಕೇಳಿದ್ದೀರಾ? ಅದಕ್ಕೆ ನನಗೂ ಇವರ ಅಸಲಿಯತ್ತನ್ನು ಹೇಳಬೇಕು ಎನಿಸಿತು ಹೇಳಿದೆ.

ಈ ಒಂದು ಕಾರಣಕ್ಕೆ ನೀವು ಅವರ ಬಗ್ಗೆ ಹೇಳುತ್ತಿದ್ದೀರೆಂದರೆ, ಜನರು ನಿಮ್ಮನ್ನು ಕೋಮುವಾದಿ ಎನ್ನಬಹುದು?

ಏನಾದ್ರೂ ಹೇಳಿಕೊಳ್ಳಲಿ. ಅನ್ಸಾರಿಯನ್ನು ನಾನು ಕ್ಷಮಿಸುತ್ತಿದ್ದೆ. ಆದರೆ, ಜೀವನಪರ್ಯಂತ ಭಾರತದ ಅನ್ನ ತಿಂದು, ವಾಪಸ್‌ ನನ್ನ ದೇಶಕ್ಕೆ ಬಂದು, ಈ ದೇಶದವನಾಗಿರುವುದಕ್ಕೆ ಹೆಮ್ಮೆ ಇಲ್ಲ ಎಂಬ ನಾನ್‌ಸೆನ್ಸ್‌ಗಳನ್ನು ಹೇಳುತ್ತಿರುವ ಕಾರಣಕ್ಕೇ ಎಕ್ಸ್‌ಪೋಸ್‌ ಮಾಡುತ್ತಿದ್ದೇನೆ. ನೀವೂ ಹೀಗೇ ಬರೆಯಬೇಕು. ಐ ಡೋಂಟ್‌ ಕೇರ್‌. ಏನೇ ಬಂದರೂ ನಾನು ಉತ್ತರ ಕೊಡುತ್ತೇನೆ.

ಅವರು ಹಿಂದೂ ವಿರೋಧಿಗಳಾ?

ಅದು ನನಗೆ ಗೊತ್ತಿಲ್ಲ. ಆದರೆ ಅವರು ಕೆಲಸ ಮಾಡಿದ ಕಡೆಯೆಲ್ಲ ಭಾರತೀಯರಿಗೆ, ಭಾರತೀಯ ಮುಸ್ಲಿಮರಿಗೂ ಹಾನಿಯಾಗುವ ಕೆಲಸ ಮಾಡಿದ್ದಾರೆ. ಅವರ ನಿಯತ್ತು ಇನ್ನೆಲ್ಲೋ ಇದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದೆಲ್ಲಿ ಅಂತ ನಾನು ಹೇಳಕ್ಕೆ ಇಷ್ಟಪಡುವುದಿಲ್ಲ.

ಇನ್ನು ಯಾರ್ಯಾರಿದ್ದಾರೆ ಅನ್ಸಾರಿ ಜತೆ?

ರತನ್‌ ಸೆಹಗಲ್‌. ಇಂಟಲಿಜೆನ್ಸ್‌ ಬ್ಯೂರೊ(ನಿನ್ನೆಯ ವರದಿಯಲ್ಲಿ ಈತನ ಬಗ್ಗೆ ಸಂಪೂರ್ಣ ವಿವರವಿದೆ.) ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ವಿಜ್ಞಾನಿ ನಂಬಿ ನಾರಾಯಣನ್‌ ಕೇಳಿದ್ದೀರಲ್ಲ. ಅವರ ವಿರುದ್ಧ ಬೇಹುಗಾರಿಕೆಯ ಆರೋಪ ಇತ್ತು, ಈಗ ಸುಪ್ರೀಂ ಕೋರ್ಟ್‌ ಅವರನ್ನು ನಿರಪರಾಧಿ ಎಂದಿತಲ್ಲ. ಭಾರತದ ಹೆಸರು ಹಾಳು ಮಾಡುವುದಕ್ಕೆ ಆ ವಿಜ್ಞಾನಿಯನ್ನು ಬೇಹುಗಾರಿಕೆಯ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದ್ದೇ ರತನ್‌ ಸೆಹಗಲ್‌. ಅಸಲಿಗೆ ಇವನೇ ನಮ್ಮ ದೇಶದ ವಿರುದ್ಧ ಬೇಹುಗಾರಿಕೆ ಮಾಡಿ, ಸಿಕ್ಕಿ ಬಿದ್ದು ಅಮೆರಿಕದಲ್ಲಿದ್ದಾನೆ. ಇವನು ಅನ್ಸಾರಿಗೆ ಬಹಳ ಆತ್ಮೀಯ. ಅವನು ನಮಗೂ ಹೆದರಿಸುತ್ತಿದ್ದ.

ಇರಾನಿಗಳಿಗೆ ಭಾರತದ ಬಗ್ಗೆ ಇರುವ ಅಭಿಪ್ರಾಯವೇನು? ಅವರ ಆಪರೇಷನ್‌ ಹೇಗೆ?

ಇರಾನಿಗಳಿಗೆ ಭಾರತೀಯರು ಅಂದ್ರೆ ಬಹಳ ಪ್ರೀತಿ. ಹಿಂದೂಗಳು ಅಂದರಂತೂ ಇನ್ನೂ ಇಷ್ಟ. ಈಗಲೂ ನಮ್ಮ ಹಾಗೇ ಉಡುಪು ಧರಿಸಿ, ಭಾರತೀಯ ನೃತ್ಯಗಳನ್ನು ಮನೆಯೊಳಗೇ ಮಾಡುತ್ತಾರೆ. ಈ ಅನ್ಸಾರಿ ಬರುವ ಮುನ್ನ ಮತ್ತು ಹೋದ ನಂತರ ಭಾರತೀಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದಾಗಲಿ, ಅಪಹರಣ ಮಾಡುವುದಾಗಲಿ ಯಾವುದೂ ನಡೆದಿಲ್ಲ. ಈಗಲೂ ಒಂದೇ ಒಂದು ಉದಾಹರಣೆ ತೋರಿಸಿಬಿಡಿ. ಈಗಂತೂ ಮೋದಿ ಬಂದ ಮೇಲೆ ಭಾರತ-ಇರಾನ್‌ ಅಣ್ಣ ತಮ್ಮಂದಿರ ಹಾಗೆ ಇದೆ.

ಇನ್ನು ಅವರ ಆಪರೇಶನ್‌ ವಿಚಿತ್ರ. ಯಾರನ್ನೇ ಅಪಹರಣ, ದಾಳಿ ಮಾಡುವುದಾದರೂ ಒಬ್ಬನೇ ಇದ್ದಾಗ ಮಾತ್ರ ಮಾಡುತ್ತಾರೆ. ಜತೆಗೆ ಮಹಿಳೆಯರಿದ್ದರೆ, ಸ್ನೇಹಿತರಿದ್ದರೆ ಅಥವಾ ಇನ್ನೊಬ್ಬ ಯಾರೇ ಇದ್ದರೂ ದಾಳಿ ಮಾಡುವುದಿಲ್ಲ. ಆದರೆ, ರಸ್ತೆಯಲ್ಲಿ ಅಧಿಕಾರಿಗಳ ಮೇಲೆ ಕಾರು ಹತ್ತಿಸುವುದೆಲ್ಲ ಇದೆ.

ನಿಮ್ಮ ವಿರುದ್ಧ ಅನ್ಸಾರಿ ಏನಾದರೂ ಪಿತೂರಿ ಮಾಡಿದ್ದರೇ?

ನಮಗೆಲ್ಲ ಇವರ ಹಣೆಬರಹ ಗೊತ್ತಿತ್ತು. ಯಾವ ಅಧಿಕಾರಿ ಕಾಣೆಯಾದರೂ ಕೇರ್‌ ಮಾಡದ ಈತನ ವರ್ತನೆಗೆ ಬೇಸತ್ತು, ಅಧಿಕಾರಿಗಳ ಹೆಂಡತಿಯರು, ನನ್ನ ಹೆಂಡತಿ ಎಲ್ಲರೂ ಬಂದಿದ್ದರು. ಇವರ ಭೇಟಿಗೆ ಅವಕಾಶ ಕೋರಿ ಕೊಠಡಿಯ ಹೊರಗೆ ಕುಳಿತಿದ್ದರು. ಎಷ್ಟು ಹೊತ್ತಾದರೂ ಒಳಗೇ ಬಿಟ್ಟುಕೊಡಲಿಲ್ಲ. ಒಂದೆರಡು ಅಧಿಕಾರಿಗಳ ಹೆಂಡತಿಯರು ಕೊಠಡಿಯ ಒಳಕ್ಕೆ ಹೋದರು. ಆಗ ಈ ಮನುಷ್ಯ ಪೇಪರ್‌ ಓದುತ್ತಾ ಕುಳಿತಿದ್ದ. ನ್ಯಾಯ ಕೇಳಿದ್ದಾರೆ. ಅದೆಲ್ಲ ನೋಡ್ತೀನಿ ಎಂದು ಸಾಗಹಾಕಿದ್ದಾರೆ. ಆಮೇಲೆ, ಎಲ್ಲ ಅಧಿಕಾರಿಗಳಿಗೂ ನಿಮ್ಮ ಹೆಂಡತಿಯರು ನನ್ನ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ನೋಟಿಸ್‌ ಕಳುಹಿಸಿದ್ದರು. ನಾನು ನೇರ ಅವರ ಜತೆ ಹೋಗಿ, ನನ್ನ ಹೆಂಡತಿ ಬಂದಿದ್ದರೂ ನಿಮ್ಮನ್ನು ಭೇಟಿಯಾಗಲೇ ಇಲ್ಲ. ಏನು? ಹೇಗೆ? ಯಾವಾಗ? ಏನು ಮಾಡಿದ್ದರು ಎಂದು ವಿವರವಾಗಿ ತಿಳಿಸಿ, ನಿಮಗೆ ಉತ್ತರಿಸುತ್ತೇನೆ ಎಂದು ಕೇಳಿದಾಗ, ಅನ್ಸಾರಿ ಬಾಯಿ ಮುಚ್ಚಿಕೊಂಡಿದ್ದರು. ಇಷ್ಟೇ ಅಲ್ಲ, ಈ ಮನುಷ್ಯ ಇದ್ದ ಪ್ರತಿಯೊಂದು ನಿಮಿಷವೂ ಎಲ್ಲ ಅಧಿಕಾರಿಗಳಿಗೆ ಹಿಂಸೆಯೇ ಆಗಿತ್ತು.

ಗಲ್ಫ್‌ ರಾಷ್ಟ್ರಗಳಲ್ಲಿ ರಾ ಮುಗಿಸಲು ಹೊರಟಿದ್ದರು ಎಂದು ಹೇಗೆ ಹೇಳುತ್ತೀರಿ?

ಅನ್ಸಾರಿ ಮತ್ತು ರತನ್‌ ಸೆಹಗಲ್‌ ಸೇರಿಕೊಂಡು ಮುಸ್ಲಿಂ ರಾಷ್ಟ್ರಗಳಲ್ಲಿದ್ದ ನಮ್ಮ ದೇಶದ ರಾಯಭಾರಿಗಳ ಜತೆ ಸಭೆ ನಡೆಸಿ, ನಮ್ಮನ್ನು ಬೇರೆ ಕಡೆ ವರ್ಗಾವಣೆ ಮಾಡಿಸುವುದು, ಆಪರೇಷನ್‌ ಫೇಲ್‌ ಮಾಡಿಸುವುದು ಇತ್ಯಾದಿ. ಉತ್ತಮ ತನಿಖೆ ಮಾಡುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಹೇಗಾಗುತ್ತೋ ಹಾಗೇ ಆಗಿತ್ತು. ಅಲ್ಲದೇ ಅಪಹರಣ, ಹಿಂಸೆ, ಡ್ರಗ್ಸ್‌ ಚುಚ್ಚಿಸಿ ಬಾಯಿ ಬಿಡಿಸುವುದನ್ನೆಲ್ಲ ಇರಾನಿಗಳು ಮಾಡಿದ್ದರೂ ಇವರು ಕ್ರಮ ಕೈಗೊಳ್ಳಲಿಲ್ಲ ಎಂದರೆ ಇನ್ನೇನು ಅರ್ಥ?

ಅನ್ಸಾರಿ ಹೇಳಿದ ಮಾತನ್ನು ಭಾರತದ ರಾಜಕಾರಣಿಗಳು, ಅಧಿಕಾರಿಗಳು, ರಾಯಭಾರಿಗಳು ಪಾಲಿಸುತ್ತಿದ್ದುದ್ದಾದರೂ ಹೇಗೆ?

ಈ ವ್ಯಕ್ತಿಗೆ ಭಾವನೆಗಳಲ್ಲಿ ಆಟ ಆಡುವುದು ಗೊತ್ತಿತ್ತು. ಅನ್ಸಾರಿ ಭಾರತಕ್ಕೆ ಬರುವಾಗ ಪ್ರಧಾನಿ ಕಚೇರಿಯ ಸಿಬ್ಬಂದಿಯಿಂದ ಎಲ್ಲ ಅಧಿಕಾರಿಗಳಿಗೂ ಇರಾನ್‌ನಲ್ಲಿ ಪ್ರಖ್ಯಾತವಾಗಿರುವ ವಸ್ತುಗಳನ್ನು ಉಡುಗೊರೆ ಎಂದು ತಂದು ಕೊಡುತ್ತಿದ್ದರು. ಸಹಜವಾಗಿ ಯಾರೇ ಉಡುಗೊರೆ ನೀಡಿದರೂ ಒಂದೊಳ್ಳೇ ಅಭಿಪ್ರಾಯ ಮೂಡುತ್ತದೆ. ಇನ್ನು ಯಾವಾಗಲೂ ಕಣ್ಣೆದುರಿಗೆ ಇಲ್ಲದಿರುವುದರಿಂದ, ಈತ ಒಳ್ಳೆಯವನು ಎಂಬ ಭಾವವವೂ ಇತ್ತು. ಅದನ್ನೇ ಉಪಯೋಗ, ದುರುಪಯೋಗ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದರು.

ಸ್ವಲ್ಪ ದಿನ ಅನ್ಸಾರಿ ಕಾಣೆಯಾಗಿದ್ದರು ಎಂಬ ಸುದ್ದಿಯಿತ್ತು? ನಿಜವೇ?

ಹೌದು. ಆದರೆ ಯಾರೋ ನನಗೆ ಹೀಗೆ ಹೇಳಿದಾಗ ನಾನು ಅವರಿಗೆ ಹೇಳಿದ್ದೆ, ನೋಡಿ ಅವ್ರು ಎಲ್ಲೂ ಹೋಗಲ್ಲ. ಭಾರತಕ್ಕೆ ಬರ್ತಾರೆ. ಯಾಕಂದ್ರೆ ಇರಾನ್‌ ದೇಶವು ಭಾರತೀಯ ಮುಸ್ಲಿಮರನ್ನು ಮೂರನೇ ದರ್ಜೆಯ ನಾಗರಿಕರನ್ನಾಗಿ ನೋಡುತ್ತದೆ, ಸೌದಿ ಅರೇಬಿಯಾವು ಭಾರತೀಯ ಮುಸ್ಲಿಮರನ್ನು ನಾಲ್ಕನೇ ದರ್ಜೆಯವರು ಎಂದು ಕೀಳಾಗಿ ಕಾಣುತ್ತದೆ. ಮರ್ಯಾದೆ ಸಿಗುವುದು ಭಾರತದಲ್ಲಿ ಮಾತ್ರ. ಅದಕ್ಕೆ ವಾಪಸ್‌ ಇಲ್ಲೇ ಬರಬೇಕು ಎಂದಿದ್ದೆ. ಆದರೆ ಇಲ್ಲಿಗೆ ಬಂದು ಈ ರೀತಿ ಭಾರತದ ವಿರುದ್ಧವೇ ನಾಲಗೆ ಹರಿಬಿಡಬಾರದಿತ್ತು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya