ಒಟ್ಟಿಗೆ ಬಿರಿಯಾನಿ ತಿಂದವರು ಮನ್ಸೂರ್‌ನನ್ನು ಬಿಟ್ಟುಕೊಡುವರೇ?

2006ರಲ್ಲಿ ಗಲ್ಫ್‌ನಿಂದ ಮನ್ಸೂರ್‌ ಖಾನ್‌ ಎಂಬ ವ್ಯಕ್ತಿ ಬರುತ್ತಾನೆ. ಬಂದವನೇ ಇದು ಇಸ್ಲಾಮಿಕ್‌ ಹೂಡಿಕೆ ಮಾರುಕಟ್ಟೆ. ಇಲ್ಲಿ ಮುಸ್ಲಿಮರು ಹೂಡಿಕೆ ಮಾಡಿ ದುಪ್ಪಟ್ಟು ಹಣ ತೆಗೆದುಕೊಂಡು ಹೋಗಬಹುದು ಎಂದು ಹೇಳುತ್ತಾನೆ. ಇಸ್ಲಾಮ್‌ನ ಪ್ರಕಾರ ಬಡ್ಡಿ ವ್ಯವಹಾರ ಮಾಡುವುದಾಗಲಿ, ಹಾಗೆ ಮಾಡುವವರ ಬಳಿ ಹಣ ಇಟ್ಟು ಬಡ್ಡಿ ಪಡೆಯುವುದು ನಿಷಿದ್ಧ. ಹರಾಮ್‌. ಹಾಗಾಗಿಯೇ ಎಷ್ಟೋ ಮುಸ್ಲಿಮರು ಬಡ್ಡಿಗೆ ಹಣ ಬಿಡುವುದು, ತೆಗೆದುಕೊಳ್ಳುವುದಿರಲಿ ಬ್ಯಾಂಕ್‌ ಖಾತೆ ಸಹ ತೆರೆದಿಲ್ಲ. ಕೇಳಿದರೆ ನಮ್ಮ ಧರ್ಮದಲ್ಲಿ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಬಂದ ಬಡ್ಡಿ ಹಣ ಅಥವಾ ರಿಬಾ ತೆಗೆದುಕೊಳ್ಳುವುದು ಹರಾಮ್‌ ಎನುತ್ತಿದ್ದರು. ಇವೆಲ್ಲವನ್ನೂ ತಿಳಿದಿದ್ದ ಮನ್ಸೂರ್‌ ಖಾನ್‌, ವ್ಯವಹಾರಕ್ಕೆ ಇಳಿದವನೇ ಮೊದಲಿಗೆ ಮೌಲ್ವಿಗಳನ್ನು ಬುಕ್‌ ಮಾಡಿಕೊಂಡಿದ್ದ. ಮೌಲ್ವಿಗಳು ನಮಾಜ್‌ ಮಾಡುವುದಕ್ಕೆ ಬರುವವರನ್ನು ಹಾಗೇ ಕಳುಹಿಸದೇ, ಇಲ್ಲಸಲ್ಲದ್ದನ್ನು ಹೇಳಿ ಐಎಂಎ ಜ್ಯುವೆಲ್ಸ್‌ ಗ್ರೂಪ್‌ ಅಥವಾ ಐಎಂಎ ಗ್ರೂಪ್‌ಗೆ ಕಳುಹಿಸುತ್ತಿದ್ದರು. ಹೂಡಲೇಬೇಕು ಎಂದು ಜಾಮಿಯಾ ಮಸೀದಿಯ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಪಾಪದ ಮುಸ್ಲಿಮರು ಧರ್ಮ ಗುರುಗಳ ಮಾತನ್ನು ನಂಬಿ ಹೂಡಿಕೆ ಮಾಡಿದರು.

ಹೂಡಿಕೆದಾರರ ಹಣದ ಮೇಲೆ 7ರಿಂದ 8% ಬಡ್ಡಿ ಕೊಡುತ್ತಿದ್ದ ವ್ಯಕ್ತಿ ಅಲ್ಲಾಹುವಿನ ಹೆಸರನಲ್ಲಿ ಬರೋಬ್ಬರಿ 400 ಕೋಟಿ ರೂ. ಕಬಳಿಸಿ ಮಾಯವಾಗಿದ್ದಾನೆ. ಇನ್ನೂ ಕೆಲವರು 400 ಕೋಟಿ ಅಲ್ಲ 1000 ಕೋಟಿ ರೂ. ಎಂದೂ ಹೇಳುತ್ತಿದ್ದಾರೆ.
ಆದರೂ 400 ಕೋಟಿ ಎಂದರೆ ಕಡಿಮೆ ಮೊತ್ತವಲ್ಲ. ಈ ಹಣವನ್ನು ಎಲ್ಲಿ ಹೇಗೆ ಬೇಕಾದರೂ ಬಳಸಿಕೊಂಡಿರಬಹುದು. ಮೊಸಗಾರ ಮನ್ಸೂರ್‌ ಖಾನನೇ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರ ಆಗಿರುವ ರೆಕಾರ್ಡ್‌ನಲ್ಲಿ ಹೇಳುವಂತೆ, ರೋಷನ್‌ ಬೇಗ್‌ಗೆ 400 ಕೋಟಿ ರೂ.ಅನ್ನು ಚುನಾವಣೆ ಸಮಯದಲ್ಲಿ ನೀಡಿದ್ದಾನೆ. ತನಗೆ ಲೋಕಸಭಾ ಚುನಾವಣೆಗೆ ಟಿಕೆಟ್‌ ಸಿಗದಿದ್ದಕ್ಕೆ ರೋಷನ್‌ ಬೇಗ್‌ ವಾಪಸ್‌ ಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೊಡದೇ ರೌಡಿಗಳನ್ನು ಮನ್ಸೂರ್‌ ಖಾನನ ಅಂಗಡಿಗೆ ಕಳುಹಿಸಿದ್ದಾರೆ.(ರೋಷನ್‌ ಬೇಗ್‌ ಈ ಆರೋಪವನ್ನು ನಿರಾಕರಿಸಿದ್ದಾರೆ.)

ಈಗ ನಮ್ಮ ಪ್ರಶ್ನೆಯೇನೆಂದರೆ, ನೀಡಿದ್ದರೆನ್ನಲಾದ ಅದೇ ಹಣ ಕೇರಳದ ವಯನಾಡು ಕ್ಷೇತ್ರದಲ್ಲಿ ಯಾಕೆ ಬಳಕೆಯಾಗಿರಬಾರದು? ಇಲ್ಲದಿದ್ದರೆ, ದೇಶದಲ್ಲಿ ನಿರ್ನಾಮ ಹೊಂದುತ್ತಿದ್ದ ಪಕ್ಷವೊಂದಕ್ಕೆಅಷ್ಟೆಲ್ಲ ಪ್ರಚಾರಮಾಡುವುದಕ್ಕೆ ಎಲ್ಲಿಂದ ಹಣ ಬರಬೇಕು?
ರೋಷನ್‌ ಬೇಗ್‌ ದೊಡ್ಡೋರಿಗೆ ಹಣ ನೀಡಿದ ಅಹಂನಲ್ಲೇ ಏಕೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರಿಗೆ ಬಯ್ದಿರಬಾರದು? ಕಾಂಗ್ರೆಸ್‌ನಲ್ಲಿ ಎಲ್ಲರೂ ಒಬ್ಬರಿಗೆ ಒಬ್ಬರು ಜೀತದಾಳುಗಳೇ. ಭಾರತದಲ್ಲಿದ್ದ ಕಂಪನಿ ಸರ್ಕಾರ ಹೇಗೆ ಇಂಗ್ಲೆಂಡಿನ ರಾಣಿ ಮತ್ತು ಅವರ ಕುಟುಂಬಕ್ಕೆ ಕೆಲಸ ಮಾಡುತ್ತಿತ್ತೋ ಅದೇ ರೀತಿ ಭಾರತದಲ್ಲೂ ಕಾಂಗ್ರೆಸ್‌ನಲ್ಲಿ ರಾಣಿ ಮತ್ತು ಆಕೆಯ ಕುಟುಂಬಕ್ಕೇ ಕೆಲಸ ಮಾಡುತ್ತಾರೆ. ಒಬ್ಬರ ಹಿಂದೆ ಒಬ್ಬರು ಬಕೆಟ್‌ ಹಿಡಿಯುವುದು ಬಿಟ್ಟು ಸಿಂಟೆಕ್ಸ್‌ ಟ್ಯಾಂಕನ್ನೇ ಹಿಡಿದು ಬಾಳುತ್ತಿರುವ ಕಾಂಗಿ ರಾಜಕಾರಣಿಗಳಿಗೆ ಇಷ್ಟೆಲ್ಲ ಬಾಯಿ ಬಿಡುವುದಕ್ಕೆ ಅಲ್ಲಿ ಸ್ವಾತಂತ್ರ್ಯವೆಲ್ಲಿದೆ? ಶಕ್ತಿಯೆಲ್ಲಿದೆ?

ಒಂದು ಮಾತಾಡಿದರೆ ಕಾಂಗ್ರೆಸ್‌ನಿಂದ ಹೊರ ಹಾಕುವ ಪಕ್ಷ, ಸಿದ್ದರಾಮಯ್ಯ-ದಿನೇಶ್‌ ಗುಂಡೂರಾವ್‌ ಕಾಂಬಿನೇಷನ್‌ನನ್ನು ಬಯ್ದರೂ ಹಾಗೇ ಬಿಟ್ಟಿದೆ ಎಂದರೆ ಅರ್ಥವೇನು?ಅಲ್ಲದೇ ಬಿಜೆಪಿಯ ಮುಕ್ತಾರ್‌ ಅಬ್ಬಾಸ್‌ ನಖ್ವಿಯವರಿಂದ ರೋಷನ್‌ ಬೇಗ್‌ ಹಜ್‌ ಕಮಿಟಿಯ ಮುಖ್ಯಸ್ಥರೂ ಆಗಿದ್ದಾರೆ. ಯಾವುದಕ್ಕೂ ಸಂಬಂಧವಿಲ್ಲ ಎಂದು ನಂಬುವುದು ಹೇಗೆ?

ರಾಜಕೀಯ ಹಾಗಿರಲಿ, ಮನ್ಸೂರ್‌ ಖಾನ್‌ ಹೇಗೆ ತಪ್ಪಿಸಿಕೊಂಡ? ಬೆಂಗಳೂರಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾ?

ಮುಖ್ಯಮಂತ್ರಿ ಕುಮಾರಸ್ವಾಮಿ ಮನ್ಸೂರ್‌ ಖಾನನ ಜತೆಗೆ ಊಟ ಮಾಡುತ್ತಿರುವ ಫೋಟೊ ಸಹ ಹರಿದಾಡುತ್ತಿದೆ. ಸರಿ, ಇದೇನೋ ಇಫ್ತಾರ್‌ ಪಾರ್ಟಿಯ ಊಟ ಎಂದುಕೊಂಡರೂ, ಈ ಮನ್ಸೂರ್‌ಗೆ ಪರಿಚಯ ಇರುವ ಎಲ್ಲರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ರಾಜಕಾರಣಿಗಳೇ. ಗೃಹಸಚಿವ ಎಂ.ಬಿ. ಪಾಟೀಲ್‌, ಸಚಿವ ಜಮೀರ್‌ ಅಹ್ಮದ್‌, ಕಳೆದ ಬಾರಿ ಲೋಕಸಭಾ ಅಭ್ಯರ್ಥಿಯಾಗಿದ್ದ ರಿಜ್ವಾನ್‌ ಅರ್ಷದ್‌, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೀಗೆ ಹತ್ತಾರು ರಾಜಕಾರಣಿಗಳ ಜತೆ ನಿತ್ಯ‘ಊಟ ಆಯ್ತಾ?’ ‘ಕಾಫಿ ಆಯ್ತಾ?’ ಎಂದು ಕೇಳುವಷ್ಟು, ಜಮೀರ್‌ ಅಹ್ಮದ್‌ರಿಂದ ಬಾಯಿಗೆ ಬಿರಿಯಾನಿ ಹಾಕಿಸಿಕೊಳ್ಳುವಷ್ಟು ಆತ್ಮೀಯತೆ ಹೊಂದಿರುವಂಥ ಭಾವಗಳ ಚಿತ್ರಗಳಿವೆ. ಚಿತ್ರಗಳೇಕೆ, ನಿನ್ನೆ ಸ್ವತಃ ಜಮೀರ್‌ ಅಹ್ಮದ್‌ ಅವರೇ, ಓಡಿ ಹೋದ ಮನ್ಸೂರ್‌ ಖಾನ್‌ ಪರ ನಾವಿದ್ದೇವೆ, ಸರ್ಕಾರ ನಮ್ಮದೇ ಇದೆ ಎಂದೆಲ್ಲ ಮಾಧ್ಯಮಗಳ ಮೂಲಕ ಹೇಳಿದ್ದಾರೆ.

ಅಷ್ಟೇ ಯಾಕೆ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಅವರೊಟ್ಟಿಗೂ ಬಹಳ ಆರಾಮಾಗಿ ಕುಳಿತು ಮಾತನಾಡುತ್ತಿರುವ ಫೋಟೊ ಇದೆ. ಒಟ್ಟಾರೆಯಾಗಿ ಕಾಂಗ್ರೆಸ್‌ ಮತ್ತು ಈಗ ಜೆಡಿಎಸ್‌ನಲ್ಲಿ ಯಾರನ್ನು ಕೇಳಿದರೂ ಮನ್ಸೂರ್‌ ಖಾನ್‌ ಗೊತ್ತಿಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ.

ಇಷ್ಟರ ಮಟ್ಟಿಗೆ ಕೈ ಇಟ್ಟುಕೊಂಡಿರುವ ಮನುಷ್ಯ ತನ್ನ ಮೂರನೇ ಮತ್ತು ನಾಲ್ಕನೇ ಪತ್ನಿ, ಅಜ್ಜಿ, ಮಕ್ಕಳು ಸೇರಿದಂತೆ 11 ಮಂದಿ ಯಾರಿಗೂ ತಿಳಿಯದಂತೆ ಊರು ಬಿಡುವುದು ಅಂದರೆ ಏನು? ಜೂನ್‌ 8ರ ರಾತ್ರಿ 8.45 ಎಮಿರೆಟ್ಸ್‌ ವಿಮಾನದಲ್ಲಿ ಸೀಟ್‌ ನಂಬರ್‌ 1ಎ ನಲ್ಲಿ ಕುಳಿತು ದುಬೈಗೆ ಹೋಗಿದ್ದಾರೆ. ಇಷ್ಟೆಲ್ಲ ಮಾಹಿತಿ ನಮಗೇ ಗೊತ್ತಾಗಿರುವಾಗ, ಪೊಲೀಸರಿಗೆ ಗೊತ್ತಿಲ್ಲ ಎಂದರೆ ಹೇಗೆ?

ಅಲ್ಲ ಸ್ವಾಮಿ, ಯಾವನೋ ಫೇಸ್ಬುಕ್‌ನಲ್ಲಿ ಏನೋ ನಾಲ್ಕು ಸಾಲು ಬರೆದ ಎಂದ ಮಾತ್ರಕ್ಕೆ ಈ ಮಹಾಪುರುಷ ಎಂ.ಬಿ.ಪಾಟೀಲರು ಪೊಲೀಸರಿಗೆ ದೂರು ನೀಡಿ ರಾತ್ರೋ ರಾತ್ರಿ ಕಂಡವರ ಮನೆಗೆ ನುಗ್ಗಿ ಎಳೆದುಕೊಂಡು ಬರುತ್ತಾರೆ. ಇನ್ನು ಕೆಲವರ ಮೇಲೆ ಬೇಕಾಬಿಟ್ಟಿ ಪ್ರಕರಣ ದಾಖಲಿಸುವುದಕ್ಕಾಗುತ್ತೆ. ಕಾಂಗ್ರೆಸ್‌ನ ಜೇಬಿಗೆ ಹಣ ಇಡುತ್ತಾ ಪಕ್ಕದಲ್ಲೇ ಇದ್ದ ಆಸಾಮಿಯನ್ನು ಹಿಡಿಯುವುದಕ್ಕಾಗಲಿಲ್ಲ ಎಂಬುದು ಯಾವ ಸೀಮೆಯ ಲಾಜಿಕ್ಕು?

ಇಲ್ಲಿಂದ ಕೆಲ ಪ್ರಶ್ನೆಗಳು ಉದ್ಭವಿಸುತ್ತದೆ.
1. ರೋಷನ್‌ ಬೇಗ್‌ ಕಂಡರೆ ಈಗ ಕಾಂಗ್ರೆಸ್‌ಗೆ ಆಗುವುದಿಲ್ಲ ಎಂಬುದು ತಿಳಿಯದ ಸಂಗತಿಯೇನಲ್ಲ. ಮಾಧ್ಯಮಗಳ ಮುಂದೆಯೇ ಹೀನಾಯವಾಗಿ ಬಯ್ದಿರುವುದಿರಂದ ಕಾಂಗ್ರೆಸ್‌ನ ಆ ಒಂದು ಟೀಮ್‌ ಅವರೇ ಮನ್ಸೂರ್‌ ಖಾನನಿಗೆ ಓಡಿ ಹೋಗುವುದಕ್ಕೆ ಸಹಾಯ ಮಾಡಿಲ್ಲ ಎನ್ನುವುದನ್ನು ನಂಬುವುದು ಹೇಗೆ?

2. ನಮ್ಮ ಪೊಲೀಸರು ಆರೋಪಿಯನ್ನು ಹುಡುಕಿ ಬೇರೆ ರಾಜ್ಯಗಳಿಗೆ ಕ್ಷಣ ಮಾತ್ರದಲ್ಲಿ ಹೋಗುವವರು. ಇತ್ತೀಚೆಗೆ ಕೊಲೆಗಾರನ ಜಾಡನ್ನು ಹಿಡಿದು ಒಡಿಶಾ ತುದಿವರೆಗೂ ಹೋಗಿ ಬಂದಿದ್ದಾರೆ. ಇದು ಸಾಮಾನ್ಯ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಹಂತದಲ್ಲಿರುವವರ ಚಾಕಚಕ್ಯತೆ. ಇನ್ನು ಕಮಿಷನರ್‌ಗೆ ಇನ್ನೆಂಥ ಶಕ್ತಿ, ಯುಕ್ತಿ ಇರಬೇಕು? ಆದರೂ ಅವರು ಸುಮ್ಮನಿದ್ದದ್ದು ಏಕೆ? ಜೂನ್‌ 5ರಿಂದ 9ರವರೆಗೂ ರಜೆ ನೀಡುವಾಗ ಅಥವಾ ಅದಕ್ಕಿಂತ ಮುಂಚೆ ಕಂಪನಿ ಅಧೋಗತಿಗೆ ಹೋಗುತ್ತಿರುವುದು, ಜೂನ್‌ 8ರಂದು ರಾತ್ರಿ ವಿಮಾನ ಹತ್ತುತ್ತಿರುವ ಸುದ್ದಿ ಸುನೀಲ್‌ ಕುಮಾರ್‌ ಅವರ ಅಥವಾ ಇಲಾಖೆಯಲ್ಲಿರುವ ಒಂದು ಲಕ್ಷದ ಅರವತ್ತೆಂಟು ಸಾವಿರದ ನಲವತ್ತ ನಾಲ್ಕು ಪೊಲೀಸರ ಪೈಕಿ ಒಬ್ಬರಿಗೂ ವಿಷಯ ಗೊತ್ತಿಲ್ಲ ಎಂದು ಸತ್‌ಪ್ರಜೆಗಳು ನಂಬಬೇಕು! ನಂಬುತ್ತೇವೆ.
ಆದರೆ, ಕಾಂಗ್ರೆಸ್‌ ನಂಬದೇ ಇರುವುದು ಯಾವುದು ಗೊತ್ತಾ? ನೀರವ್‌ ಮೋದಿ, ವಿಜಯ್‌ ಮಲ್ಯ ಓಡಿ ಹೋಗುವುದಕ್ಕೂ ಮೋದಿ ಸರ್ಕಾರಕ್ಕೂ ಸಂಬಂಧ ಇಲ್ಲ ಎಂಬುದನ್ನು.

ಇದೊಂದೇ ವಿಷಯವನ್ನು ರಾಹುಲ್‌ ಇಂದ ಹಿಡಿದು ರಾಜ್ಯದಲ್ಲಿರುವ ಕಾಂಗ್ರೆಸ್‌ನ ರಾಹು ಕೇತುಗಳವರೆಗೂ ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿರಲ್ಲವೇ? ಯಾವತ್ತೋ ಓಡಿ ಹೋದ ಲಲಿತ್‌ ಮೋದಿಯನ್ನೂ ನರೇಂದ್ರ ಮೋದಿ ಸರ್ಕಾರವಿದ್ದಾಗಲೇ ಓಡಿ ಹೋದ ಎಂದು ಬಿಂಬಿಸಲಾಯಿತು. ಆ ಮೂಲಕ ಮೋದಿ ಎಂಬ ಹೆಸರಿನವರೆಲ್ಲರೂ ಕಳ್ಳರೇ ಎಂದು ರಾಹುಲ್‌ ಹೇಳಿದ್ದರು. ಆದರೆ ಈಗ ಕರ್ನಾಟಕದಲ್ಲಿ ಆಗುತ್ತಿರುವುದೇನು?

ಇದರ ಹೊಣೆಯನ್ನು ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಹೊರುತ್ತಾರೋ ಅಥವಾ ರಾಹುಲ್‌ ಗಾಂಧಿ ಹೊರುತ್ತಾರೋ? ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಓಡಿ ಹೋಗುವುದಕ್ಕೆ ನರೇಂದ್ರ ಮೋದಿಯೇ ಕಾರಣ ಎಂದು ಒಪ್ಪಿಕೊಳ್ಳಬೇಕು ಎಂದರೆ, ಈಗ ಮನ್ಸೂರ್‌ ಖಾನ್‌ ಓಡಿ ಹೋಗುವುದಕ್ಕೂ ಕುಮಾರಸ್ವಾಮಿಯೇ ಕಾರಣ ಎನ್ನಬಹುದಲ್ಲವೇ?

ನೀವೇ ಯೋಚನೆ ಮಾಡಿ, ಇಫ್ತಾರ್‌ ಪಾರ್ಟಿಯಲ್ಲಿ ಕುಮಾರಸ್ವಾಮಿ ಜತೆ ಬಿರಿಯಾನಿ ತಿಂದು ತೇಗಿದ ಆಸಾಮಿ ಮಾರನೇ ದಿನ ವಿಸರ್ಜನೆಯನ್ನು ದುಬೈನಲ್ಲಿ ಮಾಡುತ್ತಾರೆ ಎಂದರೆ, ಇವರ ಸಂಪರ್ಕವನ್ನು ಎಂಥದ್ದು ಎಂದು ಅರ್ಥ ಮಾಡಿಕೊಳ್ಳದಷ್ಟು ದಡ್ಡರಾ ನಮ್ಮ ಕರ್ನಾಟಕದ ಜನತೆ? ರಾಜ್ಯದಲ್ಲಿ ಈಗಿರುವ ಸ್ಥಿತಿಯಲ್ಲಿ ಇದನ್ನೆಲ್ಲ ಬಹಿರಂಗವಾಗಿ ಹೇಳಿದರೆ ಅಥವಾ ಫೇಸ್ಬುಕ್‌ನಲ್ಲಿ ಬರೆದುಕೊಂಡರೆ ಬೆಂಗಳೂರಿನ ಶ್ರೀರಾಮ್‌ ಪುರ ಪೊಲೀಸ್‌ ಠಾಣೆ ಅಥವಾ ಹೈಗ್ರೌಂಡ್ಸ್‌ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ರಾತ್ರಿ 12 ಗಂಟೆಗೆ ಮನೆ ಬಾಗಿಲಿಗೆ ಬಂದು ಬಂಧಿಸುತ್ತಾರೆ.

ಇನ್ನು ಈತನ ಕಂಪನಿಯಲ್ಲಿ ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳಿಂದಲೂ ಜನರು ಹೂಡಿಕೆ ಮಾಡಿದ್ದಾರೆ. ಈತ ದೇಶ ಬಿಟ್ಟು ದುಬೈಗೆ ಹೋಗಿದ್ದಾನೆ. ಅಂದರೆ ಇದು ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕಾದಂಥ ಪ್ರಕರಣ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಇದನ್ನು ಸಿಸಿಬಿಗೆ ನೀಡಿದೆ. ಜೆಡಿಎಸ್‌ ಅಥವಾ ಕಾಂಗ್ರೆಸ್‌ನಿಂದ ಯಾವನೋ ಒಬ್ಬ ಕಾರ್ಯಕರ್ತ ಫೇಸ್ಬುಕ್‌ನಲ್ಲಿ ಬರೆದಿರುವವರ ವಿರುದ್ಧ ದೂರು ನೀಡಿದರೆ, ಹಿಂದು ಮುಂದು ನೋಡದೇ ಬಂದು ಬಂಧಿಸುವಂಥ ಸ್ಥಿತಿಯಲ್ಲಿರುವ ಪೊಲೀಸ್‌ ವ್ಯವಸ್ಥೆ, ಮುಖ್ಯಮಂತ್ರಿಗಳನ್ನೊಳಗೊಂಡ ರಾಜ್ಯ ಸರ್ಕಾರದ ರಾಜಕಾರಣಿಗಳನ್ನೇ ತನಿಖೆ ಮಾಡುವ ತಾಕತ್ತು ಪ್ರದರ್ಶಿಸುತ್ತದೆಯೇ? ಹಾಗಂತ ರಾಜ್ಯದ ಜನತೆ ನಂಬಿಕೊಂಡಿರಬೇಕೇ?

ಇದೆಲ್ಲ ಉಸಾಬರಿ ಬೇಡವೆಂದೇ, ಪ್ರವಾದಿ ಮಹಮ್ಮದರು ಅಂದು ಮುಸ್ಲಿಮರು ಬಡ್ಡಿ ವ್ಯವಹಾರವೂ ಮಾಡಬಾರದು ಮತ್ತು ಅದಕ್ಕೆ ಹೂಡಿಕೆಯೂ ಮಾಡಬಾರದು ಎಂದು ಬರೆದಿಟ್ಟದ್ದು. ಅದನ್ನು ಕೇಳದ ಜನ ಬಡ್ಡಿ ಆಸೆಗೆ ಬ್ಯಾಂಕಿನಲ್ಲಿಡದೇ, ಎಲ್‌ಐಸಿ ಮಾಡಿಸದೇ, ಪೋಸ್ಟಲ್‌ನಲ್ಲಿ ಹೂಡಿಕೆ ಮಾಡದೇ ಮನ್ಸೂರನ ಕೈ ಮೇಲಿಟ್ಟರು.
ಇನ್‌ಶಾ ಅಲ್ಲಾಹ್‌! ಈಗ ಕಣ್ಣೀರಿಟ್ಟರೆ ಫಲವೇನು?ಅಲ್ಹಂದುಲ್ಲಿಲ್ಲಾಹ್‌!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya