ಅಜಿತ್‌, ಮಹೇಶ್‌, ಸಂತೋಷ್‌, ಶಾರದಾ, ಇನ್ನೆಷ್ಟು ಜನರ ಬಾಯಿ ಮುಚ್ಚಿಸುತ್ತೀರಿ?

ಅಭಿವ್ಯಕ್ತಿ ಸ್ವಾತಂತ್ರ್ಯ. ಸಾರ್ವಜನಿಕರಿಗೂ ಮಾತಾಡುವ ಅವಕಾಶ ಸಿಗಲಿ ಎಂದು ಇದನ್ನು ಅಂಬೇಡ್ಕರ್‌ ಕೊಟ್ಟಿದ್ದು. ಆದರೆ, ತುರ್ತುಪರಿಸ್ಥಿತಿಯಿಂದ ಇವತ್ತಿನವರೆಗೂ ಅಂಬೇಡ್ಕರ್‌ ನಮ್ಮ ದೇವರು ಎಂದು ಪುಂಗಿ ಊದಿದ ಪಕ್ಷಗಳ ಜನರೇ ಕೇಸ್‌ ಹಾಕುವವರೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕೆ ಏನು ಬೇಕೋ ಅವೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಲಾಗುತಿದೆ.

ಅದಕ್ಕೆ ತಾಜಾ ಉದಾಹರಣೆಯೇ ಶಾರದಾ, ಪೋಸ್ಟ್‌ಕಾರ್ಡ್‌ನ ಮಹೇಶ್‌ ವಿಕ್ರಂ ಹೆಗ್ಡೆ ಮತ್ತು ಇತರರ ಮೇಲೆ ದಾಖಲಾಗಿರುವ ಪ್ರಕರಣಗಳು. ಹಾಗಾದರೆ ಇವರೆಲ್ಲ ಏನಾದರೂ ಗೃಹ ಸಚಿವ ಎಂ.ಬಿ. ಪಾಟೀಲರ ಮಾನಹಾನಿ ಮಾಡಿದ್ದಾರಾ? ಬೆದರಿಕೆಯೊಡ್ಡಿದ್ದರಾ? ಇಲ್ಲ ಯಾವುದೂ ಇಲ್ಲ. ಎಂ.ಬಿ. ಪಾಟೀಲರು ಸೋನಿಯಾ ಗಾಂಧಿಗೆ ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಅಷ್ಟೇ. ಮತ್ತೊಬ್ಬರು ಇದನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದು ಯಾವ ಸೀಮೆಯಲ್ಲಿ ಅಪರಾಧ? ಇಷ್ಟಕ್ಕೇ ಶಾರದಾ ವಿರುದ್ಧ ಸುಪ್ರೀಂ ಕೋರ್ಟ್‌ ಅಸಾಂವಿಧಾನಿಕ ಎಂದು ಹೇಳಿರುವ ಸೆಕ್ಷನ್‌ನ ಅನ್ವಯ ಪ್ರಕರಣವನ್ನು ದಾಖಲಿಸಿದ್ದಾರೆ. ಅದೂ ದಾಖಲಿಸಿದ್ದು ಪಾಟೀಲರಲ್ಲ. ಬದಲಿಗೆ, ಯಾರೋ ಸರವಣ ಎಂಬ ವ್ಯಕ್ತಿ. ಪಾಟೀಲರ ಬಗ್ಗೆ ಮಾತಾಡಿದರೆ, ಸರವಣರಿಗೇನು ತೊಂದರೆ? ಅದೆಲ್ಲ ಕೇಳುವ ಹಾಗಿಲ್ಲ. ಯಾಕೆಂದರೆ, ಪೊಲೀಸರೇ ಕೇಳಿಲ್ಲ. ನಾವು ನೀವೆಲ್ಲ ಯಾವ ಹುಳು?

ದುರಂತ ನೋಡಿ, ಒಂದು ಪತ್ರಿಕೆಯಲ್ಲಿ ಬಂದ ವರದಿಯನ್ನು ನೋಡಿ ಅಭಿಪ್ರಾಯ ರೂಪಿಸಿಕೊಳ್ಳುವುದಕ್ಕೂ ಎಂ.ಬಿ. ಪಾಟೀಲರ ಅಪ್ಪಣೆ ಬೇಕು ಎಂದರೆ, ಅಂಬೇಡ್ಕರ್‌ ಯಾಕೆ ಬೇಕಿತ್ತು? ಸಂವಿಧಾನ ಯಾಕೆ ಬರೆಯಬೇಕಿತ್ತು? ಅವರವರಿಗೆ ತೋಚಿದಂತೆ ಸ್ವೇಚ್ಛೆಯಿಂದಿರಬಹುದಿತ್ತಲ್ಲವೇ? ಕಾಂಗ್ರೆಸ್‌ ಬಗ್ಗೆ ಮಾತಾಡಿದ್ದಕ್ಕೆ ಅವರ ಕೆಂಗಣ್ಣಿಗೆ ಗುರಿಯಾಗಿರುವುದು ಶಾರದಾ ಅಥವಾ ಮಹೇಶ್‌ ಅಷ್ಟೇ ಅಲ್ಲ. ಬದಲಿಗೆ ಅಜಿತ್‌ ಹನಮಕ್ಕನವರ್‌, ಸಂತೋಷ್‌ ತಮ್ಮಯ್ಯ, ರಾಕೇಶ್‌ ಶೆಟ್ಟಿ, ಹೇಮಂತ್‌, ಶೃತಿ ಹೀಗೆ ಪಟ್ಟಿ ಸಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಬಗ್ಗೆ ಅಥವಾ ಕಾಂಗ್ರೆಸ್‌ ಬಗ್ಗೆ ಟೀಕಿಸಿದವರ ಮೇಲೆ ಕೇಸು ದಾಖಲಿಸುವ ನೀಚ ಪದ್ಧತಿ ಅನುಸರಿಸಲಾಗುತ್ತಿತ್ತು. ಅದು ಅವರು ಹೋದ ಮೇಲೂ ನಿಂತಿಲ್ಲ.

ಹಾಗೇ ಸಿಕ್ಕ ಸಿಕ್ಕಲ್ಲಿ ನಕಲಿ ಸುದ್ದಿ, ಚಿತ್ರವನ್ನು ಹಬ್ಬಿಸುವುದರಲ್ಲಿ, ಬೇರೆಯವರಿಗಿಂತ ಕಾಂಗ್ರೆಸ್‌ನವರ ಕೈಚಳಕವೇ ಹೆಚ್ಚಾಗಿದೆ. ಉದಾಹರಣೆಗೆ ಸಿನಿಮಾದಲ್ಲಿ ಮಾರ್ಕೆಟ್‌ ಕಳೆದುಕೊಂಡಿರುವ ಕಾಂಗ್ರೆಸ್‌ ನಾಯಕಿ ಮತ್ತು ಮಾಜಿ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅಲಿಯಾಸ್‌ ದಿವ್ಯಸ್ಪಂದನ ಅವರೇ ನಮ್ಮ ಮುಂದಿದ್ದಾರೆ. ಕಳೆದ ಮೂರ್ನಾಲ್ಕು ಚುನಾವಣೆಗಳಲ್ಲಿ ಮತ ಹಾಕದೇ ಇದ್ದರೂ ಟ್ವಿಟರ್‌ನಲ್ಲಿ ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕೆ ಮಾತ್ರ ಇವರು ಎತ್ತಿದ ಕೈ. ಇವರು ಮೊನ್ನೆ ಕೂಡ ಇಂಥದ್ದೇ ದಂಧೆ ಮಾಡಿ ಜನರಿಂದ ಸಿಕ್ಕಿಬಿದ್ದಿದ್ದಾರೆ. ಹಿಟ್ಲರ್‌ ಒಂದು ಪುಟ್ಟ ಮಗುವಿನ ಕಿವಿ ಹಿಡಿದುಕೊಂಡಿದ್ದಾರೆನ್ನಲಾದ ಫೋಟೊ ಜತೆಗೆ ಮೋದಿಯೂ ಮಕ್ಕಳ ಕಿವಿ ಹಿಡಿದುಕೊಂಡಿರುವ ಫೋಟೊ ಸೇರಿಸಿ ಟ್ವೀಟ್‌ ಮಾಡಿದ್ದರು. ಮೋದಿಗೂ ಹಿಟ್ಲರ್‌ಗೂ ಬಹಳ ವ್ಯತ್ಯಾಸವೇನಿಲ್ಲ ಎಂಬಂತೆ ಬಿಂಬಿಸುವ ಪ್ರಯತ್ನ ಅದಾಗಿತ್ತು. ಆದರೆ ಇದು ಫಾಸ್ಟ್‌ ಯುಗ. ಮಾಡಿದ ಪಾಪ ಮತ್ತೊಂದು ಜನ್ಮದವರೆಗೆ ನೆನಪಿಟ್ಟುಕೊಂಡು ಶಿಕ್ಷೆ ಕೊಡುವುದಕ್ಕೆ ದೇವರಿಗೆ ಪುರುಸೊತ್ತಿಲ್ಲ. ಜನರೆಲ್ಲ ಸೇರಿ ಹಿಟ್ಲರ್‌ನ ಅಸಲಿ ಫೋಟೊ ಹಾಕಿದರು. ಹಿಟ್ಲರ್‌ ಪುಟ್ಟ ಹುಡುಗಿಯ ಕೈಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಿರುಚಿ ಅದನ್ನೇ ಪೋಸ್ಟ್‌ ಮಾಡಿದ್ದರು ಎಂಬುದು ಸಾಬೀತಾಯಿತು. ಇದೂ ನಕಲಿಯೇ ಅಲ್ಲವೇ? ಇವರ ಮೇಲೆ ಕಾಂಗ್ರೆಸ್‌ ಏನು ಕ್ರಮ ಕೈಗೊಂಡಿದೆ? ಈ ಪ್ರಕರಣದ ಕುರಿತೂ ಸ್ವಲ್ಪ ಸ್ಪಂದನೆ ತೋರಬಹುದಿತ್ತಿಲ್ಲವೆ? ಪೊಲೀಸರು ಇವರ ಮೇಲೆ ಏನಾದರೂ ಪ್ರಕರಣ ದಾಖಲಿಸಿದ್ದಾರಾ? ದೊಡ್ಡವರು ಏನು ದರೋಡೆ ಮಾಡಿದರೂ ನಡೆಯುತ್ತೆ, ಚಿಕ್ಕವರಾದರೆ, ಚಕ್ಕುಲಿ ಕದ್ದಿದ್ದಕ್ಕೂ ಜೈಲು ಎಂಬ ಕಾನೂನಿದ್ದ ಕಾಲದಲ್ಲೇ ಇದ್ದೀವಾ ನಾವು? ಅವರ ಮೇಲೆ ಕ್ರಮ ತೆಗೆದುಕೊಳ್ಳುವ ತಾಕತ್ತಿಲ್ಲದ ಪೊಲೀಸರು ಸಣ್ಣ ಪುಟ್ಟವರನ್ನೇ ಹಿಡಿದು ಬಾಕಿಯವರಿಗೆ ಪರೋಕ್ಷವಾಗಿ ಹೆದರಿಸಲು ಯತ್ನಿಸುತ್ತಿರುವುದಲ್ಲದೆ ಇನ್ನೇನು?

ರಮ್ಯಾ ಬಿಡಿ, ಬಣ್ಣ ಹಚ್ಚುತ್ತಿದ್ದ ನಟಿ. ಹೆಚ್ಚು ಸಂಭಾವನೆ ಕೊಟ್ಟರೆ ಮತ್ತೊಂದು ಕಡೆ ಬಣ್ಣ ಹಚ್ಚುತ್ತಾರೆ. ಕೊಟ್ಟ ಡೈಲಾಗ್‌ ಹೇಳುತ್ತಾರೆ. ಇವರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯನ್ನೇ ನೋಡಿ. ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಇವರು ಹೇಳಿ ಮಾಡಿಸಿದ ವ್ಯಕ್ತಿ. ಒಂದೊಂದು ಭಾಷಣದಲ್ಲಿ ಒಂದೊಂದು ಕಥೆ. ಮೊನ್ನೆಯಂತೂ ಪೂರ ಮರ್ಯಾದೆ ಬಿಟ್ಟು ಒಂದಲ್ಲ, ಎರಡು ಸಲ ಸುಪ್ರೀಂ ಕೋರ್ಟ್‌ಗೆ ಹೋಗಿ, ಕ್ಷಮಿಸಿ ಕ್ಷಮಿಸಿ ಎಂದು ಕೇಳಿ ಬಂದಿದ್ದಾರೆ.

ಶಾರದಾ ವಿಷಯದಲ್ಲಿ ತೀರ ಸಾಚಾತನ ಪ್ರದರ್ಶಿಸುವ ಕಾಂಗ್ರೆಸ್‌ ನಾಯಕರಿಗೆ, ತಾವು ನಿತ್ಯ ಸಲಾಮು ಹೊಡೆಯುವ ನಾಯಕನೇ ಸುಳ್ಳುಬುರುಕ ಎಂದು ತಿಳಿದ ಮೇಲೂ, ನಾಚಿಕೆ ಅಂಥಕ್ಕಂಥದ್ದೇನಿದೆ. ಅದು ಆಗೋದೇ ಇಲ್ವಾ?ಆತ್ಮ ಸಾಕ್ಷಿಯಾದರೂ ಕಾಡಲ್ವೇನು? ಇಂಥ ಸುಳ್ಳು ಹೇಳುವವರ ಮುಂದೆ, ಪತ್ರಿಕೆಯ ವರದಿಯನ್ನಷ್ಟೇ ಹಂಚಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಶಾರದಾ ಏನೂ ಅಲ್ಲ. ಎಂಬಿ ಪಾಟೀಲರೇ, ನಿಮ್ಮ ಮನೆಯಲ್ಲೇ ಹೆಗ್ಗಣಗಳಿರುವಾಗ, ಬೀದಿಯಲ್ಲಿ ಹೋಗೋ ಇಲಿಯನ್ನು ಹಿಡಿಯುವ ಪ್ರಯತ್ನ ಬೇಕಾ?

ಯಾವಾಗಲೂ ಅಷ್ಟೇ, ಎಂಬಿ ಪಾಟೀಲರಿಗೆ ಸತ್ಯ ಹೇಳಿದರೆ ಉರಿದು ಹೋಗುತ್ತೆ. ಸುವರ್ಣ ನ್ಯೂಸ್‌ನಲ್ಲಿ ಅಜಿತ್‌ ಹನಮಕ್ಕನವರ್‌ ಪಾಟೀಲರಿಗೇ ಫೋನಾಯಿಸಿ, ‘ಅಮೆರಿಕದಲ್ಲಿ ಒಂದು ವ್ಯವಸ್ಥೆ ಇದೆ, ಅಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿ, ಅಲ್ಲಿನ ಜನರಿಗೆ ಕೆಲಸ ಕೊಟ್ಟರೆ, ಅಮೆರಿಕದ ಪೌರತ್ವ ದೊರೆಯುತ್ತದೆ. ಈ ಪಾಟೀಲರ ಮಗನೂ ಇಂಥದ್ದೇ ಕೋಟಾದಲ್ಲಿ, ಅಪಾರ ಪ್ರಮಾಣದ ಹೂಡಿಕೆ ಮಾಡಿದ್ದಾರೆ. ಅಷ್ಟು ಜನರಿಗೆ ಕೆಲಸ ಕೊಡುವ ಪ್ರೀತಿ ಇದ್ದರೆ, ಭಾರತೀಯರಿಗೆ ಕೆಲಸ ಕೊಡಲಿ. ಅದು ಬಿಟ್ಟು, ಅಮೆರಿಕದಲ್ಲಿ ಹೂಡಿಕೆ ಏಕೆ? ಭಾರತದ ಪೌರತ್ವಕ್ಕಿಂತ ಅಮೆರಿಕದ ಪೌರತ್ವ ಅಷ್ಟು ಪ್ರಮುಖವಾಗೋಯ್ತಾ?’ ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಪಾಟೀಲರು ಸಿಟ್ಟಾಗಿದ್ದನ್ನು ನೋಡಬೇಕು. ಇದಾದ ನಂತರ ಮುಸ್ಲಿಮರು ಅಜಿತ್‌ ವಿರುದ್ಧ ಎಗರಿಬಿದ್ದಾಗ, ಕ್ಷಣ ಮಾತ್ರದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅದೆಲ್ಲ ಬಿಡಿ, ಮೊನ್ನೆ ಶಾರದಾ ಮೇಲೆ ಪ್ರಕರಣ ದಾಖಲಾದಾಗ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಜಿತ್‌ ಹನುಮಕ್ಕನವರ್‌ ಮತ್ತು ಅವರಂಥವರು ಬಾಯಿಗೆ ಬಂದ ಹಾಗೆ ಮಾತನಾಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

ಪತ್ರಕರ್ತರನ್ನೇ ಬಿಡದ ಪಾಟೀಲರು, ಶಾರದಾರನ್ನು, ಮಹೇಶ್‌ ವಿಕ್ರಂ ಹೆಗ್ಡೆಯಂಥವರನ್ನು ಬಿಡುತ್ತಾರಾ? ಕೇಸ್‌ ಹಾಕುವ, ಹಾಕಿಸುವ ಮೂಲಕ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರಷ್ಟೇ.

ಪಾಟೀಲರಿಗೆ ಅಥವಾ ಕಾಂಗ್ರೆಸಿಗರಿಗೆ ಕೇಸ್‌ ಹಾಕುವ ಅಥವಾ ಹಾಕಿಸುವ ಇರಾದೆಯಿದ್ದರೆ, ಅವರದ್ದೇ ಪಕ್ಷದ ಬಹಳಷ್ಟು ಕುಳಗಳು ಸಿಗುತ್ತವೆ. ಅದರಲ್ಲೊಬ್ಬ ಬ್ರಿಜೇಶ್‌ ಕಾಳಪ್ಪ. ಒಂದು ದಿನದ ಹಿಂದೆ, ಟ್ವೀಟ್‌ ಮಾಡಿದ್ದಾರೆ. ಅವರು ಅಕ್ಷರಗಳನ್ನೇ ಬರೆದಿದ್ದಾರೋ ಅಥವಾ ಹೇಸಿಗೆಯನ್ನು ಮೆತ್ತಿದ್ದಾರೋ ಗೊತ್ತಾಗುವುದಿಲ್ಲ. ಅಷ್ಟು ಅಸಭ್ಯ. ಬಾಲಿವುಡ್‌ ತಾರೆ ಕಂಗನಾ ರಣಾವತ್‌ ಮತ ಚಲಾಯಿಸಿ ಬಂದ ಮೇಲೆ, ಇಷ್ಟು ದಿನ ನಾವು ಇಟಲಿ ಸರ್ಕಾರದ ಆಡಳಿತದಲ್ಲಿದ್ದೆವು. ಈಗ ಸ್ವತಂತ್ರರಾಗಿದ್ದೇವೆ ಎಂದು ಹೇಳಿದರು. ಇದಕ್ಕೆ ಬ್ರಿಜೇಶ್‌ ಕಾಳಪ್ಪಂಗೇ ಏನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ, ಈಕೆ ತನ್ನ ಮುಟ್ಟಿನ ಸಮಯದಲ್ಲಿ ಬರುವ ರಕ್ತವನ್ನು ಬಾಯ್‌ಫ್ರೆಂಡಿನ ಊಟದಲ್ಲಿ ಮಿಶ್ರಣ ಮಾಡಿ ಕೊಟ್ಟ ಆರೋಪವಿದೆ, ಇಂಥವಳು ಭಾರತೀಯ ಚುನಾವಣೆಯ ಬಗ್ಗೆ ಮಾತಾಡುವುದಕ್ಕೆ ಬರುತ್ತಾಳೆ ಎಂದು ಟ್ವೀಟ್‌ ಮಾಡಿದ್ದಾರೆ. ಮಹಿಳಾವಾದಿಗಳು ಬಿಡಿ, ಕಾಂಗ್ರೆಸ್‌ ಇಂಥ ನೀಚ ಮಾತುಗಳನ್ನಾಡಿದಾಗ ಬಾಯಲ್ಲಿ ಮಣ್ಣು ತುಂಬಿಕೊಂಡಿರುತ್ತಾರೆ. ಆದರೆ, ಕೇಸ್‌ ಹಾಕೋದ್‌ ಬಿಡಿ, ಇಂಥ ಹಲ್ಕಾ ಮಾತುಗಳನ್ನು ಆಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಬುದ್ಧಿವಾದ ಹೇಳುವುದಕ್ಕೂ ಆಗುವುದಿಲ್ಲವೇ? ಪ್ರಧಾನಿ ಮೋದಿ ಮತ್ತು ಸ್ಮೃತಿ ಇರಾನಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಡಬಲ್‌ ಮೀನಿಂಗ್‌ನಲ್ಲಿ ಬರೆದು ಪೋಸ್ಟ್‌ ಹಾಕಿದ್ದೂ ಇದೇ ಕಾಳಪ್ಪ. ಯಾವ ಕೇಸೂ ದಾಖಲಾಗಿಲ್ಲ. ಆಗುವುದೂ ಇಲ್ಲ. ಇವೆಲ್ಲ ನಮ್ಮಂಥವರ ಬಾಯನ್ನು ಮುಚ್ಚಿಸುವುದಕ್ಕಷ್ಟೇ.

ವಿಚಾರ ಅದಲ್ಲ. ನಮ್ಮ ಇತಿಹಾಸ, ಪರಂಪರೆಯನ್ನು ನೋಡಿ. ಹೆಣ್ಣು ಮಕ್ಕಳ ಮೇಲೆ ವಿನಾಕಾರಣ ಬಲಪ್ರದರ್ಶನ ಮಾಡಿದ್ದೇ ಇಲ್ಲ. ಹೆಣ್ಣು ಮಕ್ಕಳನ್ನು ಲಕ್ಷ್ಮೇ ಸ್ವರೂಪವಾಗಿ ನೋಡುವವರೇ ಭಾರತೀಯರು. ಆದರೆ, ಬಲ ಪ್ರದರ್ಶನ, ದರ್ಪ, ಕುತಂತ್ರ ಎಲ್ಲ ಮಾಡಿದ್ದು ಬ್ರಿಟಿಷರು. ಯಾಕಾಗಿ? ಅವರಿಗೆ ಒಂದು ಕ್ಷಣವೂ ಅಕ್ರಮ ಮಾಡದೇ ಇರುವ ಹಾಗೆ ನೋಡಿಕೊಂಡಿದ್ದಕ್ಕೆ, ನಿದ್ದೆ ಮಾಡದೇ ಇರುವಂತೆ ಮಾಡಿದ್ದಕ್ಕೆ, ಸಿಂಹಸ್ವಪ್ನವಾಗಿ ಕಾಡಿದ್ದಕ್ಕೆರಾಣಿ ಲಕ್ಷ್ಮೇಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಓಬವ್ವರಂಥ ರಾಷ್ಟ್ರವಾದಿಗಳು ಬ್ರಿಟಿಷರಿಗೆ ಇನ್ನಿಲ್ಲದಂತೆ ಕಾಟ ಕೊಟ್ಟರು.

ಹುಡುಗಿಯ ವಿರುದ್ಧ ಕೇಸ್‌ ಒಂದು ಕಡೆ ದಾಖಲಾಗಿದ್ದರೆ ಇನ್ನೊಂದು ಕಡೆ ಮಾಧ್ಯಮಗಳಲ್ಲಿ ಅವಳ ಬಗ್ಗೆ ಅವಹೇಳನ ಮಾಡುವ ಮಟ್ಟಕ್ಕೆ ಹೋಗಿದ್ದಾರೆ ಎಂದರೆ ಈಕೆಯ ಕಾಟದಿಂದ ಅವರಿಗೆಲ್ಲ ಅದೆಷ್ಟು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದಾರೆ ಎಂದು ಅಂದಾಜಿಸಬಹುದು.

ಶಾರದಾ ಒಂದು ಕ್ಷಣ ಸುಮ್ಮನೆ ಕುಂತವರಲ್ಲ. ಧರ್ಮ, ದೇಶ ಒಡೆಯುವ ಪ್ರಯತ್ನ ಆಗಿದೆ ಎಂದು ತಿಳಿಯುವ ಹೊತ್ತಿಗೇ ಇನ್ನೇನು ಮಾಡಬಹುದು ಎಂದು ಯೋಚನೆ ಮಾಡಿ ಧ್ವನಿ ಎತ್ತಿರುತ್ತಾರೆ. ಅಂಥ ವ್ಯಕ್ತಿತ್ವ ಅದು. ಕೆಲ ಮಾಧ್ಯಮಗಳಿಗೆ ಅದರಿಂದ ಉರಿ ಹತ್ತಿದರೆ ಯಾರೇನು ಮಾಡುವುದಕ್ಕಾಗುತ್ತದೆ?

ನಾವೆಲ್ಲರೂ ಶಾರದಾ, ಮಹೇಶ್‌ ಜತೆ ಇದ್ದೇವೆ. ಧರ್ಮ ಒಡೆಯುತ್ತೇನೆಂದು ಬಂದವರೆಲ್ಲ ಮಣ್ಣಾಗಿದ್ದಾರೆ. ಇನ್ನು ಈ ಕೇಸು ಗೀಸು ಎಲ್ಲ ಯಾವ ಲೆಕ್ಕ?

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya