ರಾಜಕಾರಣಿಗಳು ಹೊಡೆದಾಡಿ, ಶ್ರೀಲಂಕಾ ಸುಟ್ಟರು!

ಸಾರ್‌, ನಿಮ್ಮ ದೇಶದಲ್ಲಿ ಒಂದು ದೊಡ್ಡ ಬಾಂಬ್‌ ದಾಳಿಯಾಗೋಗಿದೆ. ಇಂಥವರೇ ಅಟ್ಯಾಕ್‌ ಮಾಡ್ತಾರೆ. ದಯವಿಟ್ಟು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಯನ್ನು ನಿಯೋಜಿಸಿ ಎಂದು ಹೇಳಿದರೆ ಒಂದು ರಾಷ್ಟ್ರ ಏನು ಮಾಡುತ್ತದೆ ಹೇಳಿ? ಆಗಿಂದಾಗಲೇ, ಪರಿಸ್ಥಿತಿ ಏನು ಎಂದು ತಿಳಿದುಕೊಂಡು ತಕ್ಷಣವೇ ತನ್ನ ಭದ್ರತಾ ಪಡೆಯನ್ನು ಅಲ್ಲಿ ಕಳಿಸಿಕೊಡುತ್ತದೆ. ಆದರೆ ಶ್ರೀಲಂಕಾ ಹಾಗೆ ಮಾಡಲಿಲ್ಲ. ಬಂದ ಎಲ್ಲ ಎಚ್ಚರಿಕೆಗಳನ್ನೂ ಅದು ತಿರಸ್ಕರಿಸುತ್ತಲೇ ಹೋಯಿತು. ಇದರ ಪರಿಣಾಮ ಇಂದು ಅನುಭವಿಸುತ್ತಿದೆ.
ಈಸ್ಟರ್‌ನ ಭಾನುವಾರದಂದು, ಶ್ರೀಲಂಕಾದ ಕೊಲಂಬೊದಲ್ಲಿರುವ ಚರ್ಚ್‌, ಶಾಂಗ್ರಿಲಾ ಹೋಟೆಲ್‌ ಸೇರಿದಂತೆ ಒಂದೇ ದಿನ 8 ಕಡೆಗಳಲ್ಲಿ ಬಾಂಬ್‌ ದಾಳಿ, ಆತ್ಮಹತ್ಯಾ ಬಾಂಬ್‌ ದಾಳಿ ಆಗಿ, ಸರ್ವನಾಶವಾಗಿತ್ತು. ನೋಡನೋಡುತ್ತಿದ್ದಂತೆ, 321 ಜನರ ಪ್ರಾಣ ಹೋಗಿ, 600ಕ್ಕೂ ಹೆಚ್ಚುಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಹೆಣಗಳ ಲೆಕ್ಕವೂ ಸಂಪೂರ್ಣವಾಗಿ ಸಿಕ್ಕಿಲ್ಲ. ಕೆಲವರಿಗೆ ಇದು ಅಚ್ಚರಿಯ ವಿಷಯವಾದರೆ, ಬಹುತೇಕ ಜನರಿಗೆ ಬಾಂಬ್‌ ದಾಳಿಯಾಗುತ್ತದೆ ಎಂದುಗೊತ್ತಿತ್ತು. ಬಹುತೇಕ ಜನರ ಪಟ್ಟಿಯಲ್ಲಿ, ಶ್ರೀಲಂಕಾದ ಅಧಿಕಾರಿಗಳು, ರಾಜಕಾರಣಿಗಳೂ ಇದ್ದರು. ಆದರೆ ಇವರೆಲ್ಲರ ಒಳಜಗಳ ಮತ್ತು ನಿರ್ಲಕ್ಷ್ಯವೇ ಈಗ ಇಂಥದ್ದೊಂದು ಅನಾಹುತಕ್ಕೆ ಕಾರಣವಾಗಿದೆ. ಹಾಗಾದರೆ, ತನ್ನ ದೇಶದಲ್ಲಿ ಆದ ಈ ದಾಳಿ ಶ್ರೀಲಂಕಾಗೆ ಗೊತ್ತಿತ್ತಾ? ಹೌದು.

ಶ್ರೀಲಂಕಾಗೆ ಹೀಗೆ ಮೊದಲ ಎಚ್ಚರಿಕೆ ಸಂದೇಶ ಬಂದಿದ್ದು ಏಪ್ರಿಲ್‌ 4ಕ್ಕೆ. ಶ್ರೀಲಂಕಾದ ಕೆಲ ಚರ್ಚ್‌ಗಳು ಮತ್ತು ಪ್ರವಾಸಿ ತಾಣಗಳಮೇಲೆ ಆತ್ಮಹತ್ಯಾ ದಾಳಿಗಳಾಗಲಿವೆ ಎಂದು ವಿದೇಶಿ ಗುಪ್ತದಳವು ಖಚಿತ ಮಾಹಿತಿ ನೀಡಿತ್ತು. ಇಂಥದ್ದೊಂದು ಮಾಹಿತಿ ಬಂದಿತ್ತು ಎಂದು ಸ್ವತಃ ಶ್ರೀಲಂಕಾ ಸರ್ಕಾರದ ವಕ್ತಾರೆ ರಜಿತಾಸೇನರತ್ನೆ ಅವರೇ ಮರ್ಯಾದೆ ಇಲ್ಲದೇ ಒಪ್ಪಿಕೊಂಡಿದ್ದಾರೆ.

ಇದಾದ ಐದು ದಿನಗಳ ನಂತರ, ಅಂದರೆ, ಏಪ್ರಿಲ್‌ 9ರಂದ ಶ್ರೀಲಂಕಾದ ರಕ್ಷಣಾ ಸಚಿವಾಲಯ, ಪೊಲೀಸ್‌ ಐಜಿಗೆ ಈ ಮಾಹಿತಿಯನ್ನು ನೀಡಿತ್ತು. ಸುಮ್ಮನೆ ಗಾಳಿ ಸುದ್ದಿಯನ್ನು ಹಂಚಿಲ್ಲ, ಬದಲಿಗೆ ಯಾರು ದಾಳಿ ಮಾಡುತ್ತಾರೆ, ಯಾರ ಮೇಲೆ ಅನುಮಾನ ಇದೆ ಎಂಬುದಷ್ಟೇ ಅಲ್ಲದೇ, ನೇಷನ್ಸ್‌ ತವಹಿದ್‌ ಜಮಾನ್‌(ಎನ್‌ಟಿಜೆ) ಸಂಘಟನೆಯ ಹೆಸರನ್ನೂ ಉಲ್ಲೇಖಿಸಿ, ಸಂಘಟನೆಯನಕೆಲಉಗ್ರಗಾಮಿಗಳ ದಿನಚರಿಯನ್ನೂ ನೀಡಿತ್ತು.

ಇದಾದ ಮೂರು ದಿನಗಳಲ್ಲಿ, ಅಂದರೆ, ಏಪ್ರಿಲ್‌ 11ರಂದು, ಪೊಲೀಸ್‌ ಡಿಐಜಿ ಪ್ರಿಯಾಲಾಲ್‌ ಡಿಸ್ಸನಯಕೆಅವರು ಸಹಿ ಮಾಡಿರುವ ಪತ್ರವು ಭದ್ರತಾ ಪಡೆಗಳಿಗೆ, ಅಧಿಕಾರಿಗಳಿಗೆಸಿಕ್ಕಿರುತ್ತದೆ. ಅದರಲ್ಲಂತೂಉಗ್ರಗಾಮಿಗಳಬಗ್ಗೆ ಇಲ್ಲದ ಮಾಹಿತಿಗಳಿಲ್ಲ. ಉಗ್ರಗಾಮಿಗಳಜಾತಕವೇಅಲ್ಲಿತ್ತು. ಆ ಪತ್ರದಲ್ಲಿರುವ ಮಾಹಿತಿ ನೋಡಿದರೆ, ಎಲ್ಲರೂ ಒಮ್ಮೆ ಬೆಚ್ಚಿ ಬೀಳುವುದು ಖಂಡಿತ. ಏಕೆಂದರೆ, ಐಸ್‌ಕ್ರೀಂ ಬಾಯಿಗೆಇಟ್ಟಂತೆ, ಎಲ್ಲ ಮಾಹಿತಿಯೂ ಇತ್ತು. ಪೊಲೀಸರು ಇನ್ನೇನೂ ಹುಡುಕದೇ, ಪತ್ರದಲ್ಲಿದ್ದ ಮಾಹಿತಿಯ ಪ್ರಕಾರ ಬಂಧಿಸುವುದಷ್ಟೇ ಮಾಡಬಹುದಿತ್ತು.

ಸಿಂಹಳ ಭಾಷೆಯ ಪತ್ರದಲ್ಲಿರುವ ಮುಖ್ಯಅಂಶಗಳು:

‘ಪುಟ 2-4ರಲ್ಲಿ ಉಲ್ಲೇಖಿಸಿರುವಂತೆ, ನ್ಯಾಷನಲ್‌ ತವಹಿತ್‌ ಜಮಾನ್‌ ಎಂಬ ಉಗ್ರ ಸಂಘಟನೆ ಹೆಸರಿನಲ್ಲಿ ಮಹಮ್ಮದ್‌ ಝಹರನ್‌ ಎಂಬುವವನು ಎಲ್ಲವನ್ನೂ ಪ್ಲಾನ್‌ ಮಾಡಿದ್ದಾನೆ. ನಿಮ್ಮ ಭದ್ರತಾಸಿಬ್ಬಂದಿ ಉಲ್ಲೇಖಿಸಿದ ಪ್ರದೇಶಗಳಲ್ಲಿಹೆಚ್ಚು ಗಮನಹರಿಸತಕ್ಕದ್ದು’

‘ವಿದೇಶಿ ಗುಪ್ತದಳದ ಮಾಹಿತಿಯ ಪ್ರಕಾರ, ಮಮ್ಮದ್‌ ಕಾಸಿಂ, ಮಹಮ್ಮದ್‌ ಜಹರನ್‌ ಅಲಿಯಾಸ್‌ ಮಹಮ್ಮದ್‌ ಹಷ್ಮಿ ಕೆಲ ಕ್ಯಾಥೋಲಿಕ್‌ ಚರ್ಚ್‌ಗಳು ಮತ್ತು ಕೊಲೊಂಬೊದಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ದಾಳಿ ಮಾಡಬಹುದು. ಈ ಬಗ್ಗೆ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಉಗ್ರಗಾಮಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಜಹರನ್‌ ಹಷ್ಮಿ ಮತ್ತು ಶಾಹಿದ್‌ ಎಂಬ ಇಬ್ಬರು ಉಗ್ರಗಾಮಿಗಳು ಡಿಸೆಂಬರ್‌ 26 2018ರಲ್ಲಿ ಮವನೆಲ್ಲಾದಲ್ಲಿ ಧಾರ್ಮಿಕ ವಿಗ್ರಹಗಳನ್ನು ಧ್ವಂಸ ಮಾಡಿದ ಮೇಲೆ ಅಕ್ಕರೈಪಟ್ಟುವಿನಲ್ಲಿರುವ ಒಲುವಿಲ್‌ನಲ್ಲಿ ಅಡಗಿದ್ದಾರೆ. ಇನ್ನೊಬ್ಬ ವ್ಯಕ್ತಿ ರಿಲ್ವಾನ್‌ ಎಂಬುವವನು ಜಹರನ್‌ ಸಹೋದರನಾಗಿದ್ದು, ಇವನು ಜನರನ್ನು ಸಂಘಟನೆಗೆ ಸೇರಿಸಿಕೊಳ್ಳುವುದರಲ್ಲಿ ನಿಸ್ಸೀಮ. ಇವನು ಕಟ್ಟನ್‌ಕುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿಇಂಥ ವಿಳಾಸದಲ್ಲಿ ವಾಸಿಸುತ್ತಾನೆ. ಇವನು ಇದೇವಿಳಾಸದಲ್ಲಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು ರಾತ್ರಿ 11 ಗಂಟೆಯಿಂದ 12.41ರವರೆಗೆ ಭೇಟಿ ಮಾಡಲು ಬರುತ್ತಾನೆ.

ಇನ್ನು ಮಿಲ್ಹಾನ್‌ ಎಂಬುವವನು ಸಾಮಾಜಿಕ ಜಾಲತಾಣದಲ್ಲಿ ಮಹಮ್ಮದ್‌ ಮಿಲ್ಹಾನ್‌ ಎಂಬ ಹೆಸರಿನಲ್ಲಿ ಸಕ್ರಿಯನಾಗಿದ್ದು, ಜನರನ್ನು ಭಯೋತ್ಪಾದನೆಗೆ ಸೆಳೆಯುತ್ತಿದ್ದಾನೆ. 2019 ಮಾರ್ಚ್‌ 15ರಂದು ನ್ಯೂಜಿಲೆಂಡ್‌ ಮೇಲೆ ದಾಳಿಯಾದಾಗಿನಿಂದಲೂ ಆತ, ತನ್ನ ಖಾತೆಯಲಿ ್ಲಮುಸ್ಲಿಮರಲ್ಲದವರ ವಿರುದ್ಧ ಆಕ್ರಮಣಕಾರಿಯಾಗಿ, ಅವಹೇಳನಕಾರಿಯಾಗಿ ಬರೆಯುತ್ತಲೇ ಇದ್ದ. ಇವನು ಜಹೀರಾ ಕಾಲೇಜಿನಲ್ಲಿಓದುತ್ತಿದ್ದು, ಜಹರನ್‌ನ ಕಟ್ಟಾ ಅಭಿಮಾನಿಯಾಗಿದ್ದಾನೆ. ಸಧ್ಯಕ್ಕೆ ಮಹಮ್ಮದ್‌ ಮಿಲ್ಹಾನ್‌ 0767788353 ಎಂಬ ನಂಬರನ್ನು ಉಪಯೋಗಿಸುತ್ತಿದ್ದಾನೆ.’

ಇದಕ್ಕಿಂತ ಇನ್ನೇನು ಹಿಂಟ್‌ ಕೊಡುವುದಕ್ಕಾಗುತ್ತದೆ? ಈ ಕುಕೃತ್ಯವನ್ನು ಮಾಡಿದ್ದು ಐಸಿಸ್‌ ಎಂದು ಒಪ್ಪಿಕೊಂಡಿದೆ. ಶ್ರೀಲಂಕಾದಲ್ಲಿರುವ ಮಂದಿಯನ್ನೇ ಈ ಕೆಲಸಕ್ಕೆ ನಿಯೋಜಿಸಿ ಹಣ ಪಾಕಿಸ್ತಾನದ ಮೂಲಕ ಹಣ ಒದಗಿಸಿದೆ.
ಈ ಎಲ್ಲ ಮಾಹಿತಿ ಇದ್ದರೂ ಶ್ರೀಲಂಕಾ ಯಾಕೆ ಏನೂ ಕ್ರಮ ಕೈಗೊಂಡಿಲ್ಲ ಗೊತ್ತೇ? ಸ್ವತಃ ಶ್ರೀಲಂಕಾದ ಪ್ರಧಾನಿಗೇ ಈ ವಿಚಾರಗಳು ಮುಟ್ಟಿಲ್ಲ. ಅವರೊಬ್ಬರನ್ನು ಬಿಟ್ಟು ಎಲ್ಲರಿಗೂ ಈ ವಿಷಯ ಗೊತ್ತಿದೆ. ಹೌದು, ಇವತ್ತಿನ ಅಲ್ಲಿನ ಆ ಘನಘೋರ ಸ್ಥಿತಿಗೆ, 321(ಲೆಕ್ಕ ಇನ್ನೂ ಹೆಚ್ಚಾಗಬಹುದು) ಜನರ ಮಾರಣಹೋಮಕ್ಕೆ ಅಲ್ಲಿನ ಕೆಟ್ಟ ರಾಜಕೀಯ ಒಳಜಗಳಗಳೇ ಕಾರಣವಾಯಿತು.

2018ರ ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ಸರ್ಕಾರದ ಒಳಗೇ ವೈಷಮ್ಯ ಉಂಟಾಗಿ ಎಲ್ಲವೂ ಒಡೆದು ಹೋಗಿತ್ತು. ಇಂಥ ಎಲ್ಲ ಎಚ್ಚರಿಕೆಗಳಿಂದ ಶ್ರೀಲಂಕಾ ಪ್ರಧಾನಿಯನ್ನು ದೂರವೇ ಇಡಲಾಗಿದೆ. ಹಾಗಾಗಿ ಅವರಿಗೆ ಏನೂ ಗೊತ್ತಾಗುವುದಿಲ್ಲ. ಈ ದೇಶದ ಇನ್ನೊಂದು ದುರಂತವೇನೆಂದರೆ,ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಿಂದ ಪ್ರಧಾನಿಯನ್ನೇ ತೆಗೆದು ಹಾಕಿದ್ದಾರೆ. ಹಾಗಾಗಿ ಶ್ರೀಲಂಕಾದ ಪ್ರಧಾನಿಯಾಗಿದ್ದರೂ, ತನ್ನ ದೇಶದ ಗೌಪ್ಯ ಮಾಹಿತಿಗಳೇ ಅವರಿಗೆ ಸಿಗುವುದಿಲ್ಲ.
ಹಳೇ ಕಥೆ ಬಿಡಿ, ಶ್ರೀಲಂಕಾ ಮೇಲೆ ಅಂಥ ಘೋರ ದಾಳಿಯಾದ ಮೇಲೆ ಪ್ರಧಾನಿ ರಾಷ್ಟ್ರೀಯ ಭದ್ರತಾ ದಳದ ಮೀಟಿಂಗ್‌ ಕರೆದರೆ, ಸದಸ್ಯರು ಒಬ್ಬರೂ ಬರಲಿಲ್ಲ. ನಿಮ್ಮ ಕರೆಗೆ ನಾವು ಬರುವುದಿಲ್ಲ ಎಂದೇ ಹೇಳಿದ್ದಾರೆ. ಪ್ರಧಾನಿಯೊಬ್ಬ ರಾಷ್ಟ್ರೀಯ ಭದ್ರತಾ ಮಂಡಳಿಯ ಮೀಟಿಂಗ್‌ ಕರೆದರೆ, ಸದಸ್ಯರು ಬರುವುದಿಲ್ಲ ಎಂದು ಮುಖದ ಮೇಲೆ ಹೇಳಿದ ಯಾವುದಾದರೂ ದೇಶ ಈ ಪ್ರಪಂಚದಲ್ಲಿ ಇದೆ ಎಂದರೆ, ಅದು ಶ್ರೀಲಂಕಾ ಎಂದು ಯೋಚಿಸದೇ ಥಟ್‌ ಎಂದು ಹೇಳಬಹುದು. ಅಷ್ಟು ಹದಗೆಟ್ಟಿದೆ ಅಲ್ಲಿನ ರಾಜಕೀಯ. ಈವರೆಗೆ ಶ್ರೀಲಂಕಾದ ಪ್ರಧಾನಿಗಳ ಕಚೇರಿಯಿಂದ ಯಾವ ಸುದ್ದಿಯೂ ಹೊರ ಬಂದಿಲ್ಲ. ಆದರೆ, ಅವರ ಆಪ್ತ ಡಿ ಸಿಲ್ವಾ ಅವರು ಇದು ಶ್ರೀಲಂಕಾದ ಭದ್ರತಾ ವೈಫಲ್ಯ ಎಂದು ಹೇಳುತ್ತಾರೆ.

ಯುಎನ್‌ನಿಂದ ಉಗ್ರನಿಗ್ರಹ ಮತ್ತು ಮಾನವ ಹಕ್ಕುಗಳ ಜವಾಬ್ದಾರಿ ಹೊತ್ತಿದ್ದ, ಬೆನ್‌ ಎಮರ್ಸನ್‌ ಹೇಳುವುದು ಹೀಗೆ, ‘ನಾನಲ್ಲಿ ಎರಡು ವರ್ಷಗಳ ಹಿಂದೆ ಹೋಗಿದ್ದೆ, ಅಲ್ಲಿನ ರಾಜಕೀಯ ಎಂಥ ಅವಸ್ಥೆಯಲ್ಲಿತ್ತು ಎಂದರೆ, ಮುಂಬರುವ ದಿನಗಳಲ್ಲಿ ಭಯಾನಕ ಘಟನೆಗಳು ಸಂಭವಿಸಬಹುದು ಎಂದು ಹೇಳಿದ್ದೆ. ಸರ್ಕಾರದ ವಿರುದ್ಧ ಇರುವ ಶಂಕಿತ ಪಂಗಡ ಏನಿದೆಯಲ್ಲ, ಅವರಿಗೆ ಹಿಂಸೆ ನೀಡುವುದೊಂದು ಬಿಟ್ಟರೆ ಅವರಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಯಾವುದೇ ತಂತ್ರಗಾರಿಕೆ, ಯೋಜನೆಗಳೇ ಇಲ್ಲ. ಅದನ್ನು ಅಳವಡಿಸಿಕೊಳ್ಳುವ ಇರಾದೆಯೂ ಅವರಲ್ಲಿಲ್ಲ. ಇದೇ ಅವರಿಗೆ ಮುಳುವಾಯಿತು.’

ಇಸ್ಲಾಮಿಕ್‌ ಉಗ್ರವಾದ ಅಲ್ಲಿ ಮೊದಲಿನಿಂದಲೂ ಬೇರು ಬಿಟ್ಟಿತ್ತು. ನಮ್ಮ ದೇಶಕ್ಕೆ ಐಸಿಸ್‌ನವರು ಒಬ್ಬರು ನುಗ್ಗಿದ್ದಾರೆ ಎಂದರೂ ಸುದ್ದಿ ಹಬ್ಬುತ್ತದೆ, ಪೊಲೀಸರು, ಸೇನೆ ಜಾಗ್ರತವಾಗುತ್ತದೆ. ಆದರೆ, ಶ್ರೀಲಂಕಾದಲ್ಲಿ ಐಸಿಸ್‌ನವರು ಕಾಲಿಟ್ಟು, ಸ್ಥಳೀಯ ಭಯೋತ್ಪಾದನಾ ಸಂಘಟನೆಗಳೊಂದಿಗೆ ವ್ಯವಹಾರ ಕುದುರಿಸಿ, ಇನ್ನಷ್ಟು ಜನರನ್ನು ತಮ್ಮ ಸಂಘಟನೆಗಳೊಂದಿಗೆ ಸೇರಿಸಿಕೊಂಡು ಬಾಂಬ್‌ ದಾಳಿ ಮಾಡುವ ಹಾಗೆ ಸಮಯ ಕೊಡುವಷ್ಟು ಶ್ರೀಲಂಕಾದ ಭದ್ರತಾ ವೈಫಲ್ಯವಿದೆ.

ಎಚ್ಚೆತ್ತುಕೊಳ್ಳಬೇಕಾದಾಗ ಎಚ್ಚೆತ್ತುಕೊಳ್ಳದ ಜನತೆ, ಈಗ ಸಾರ್ವಜನಿಕ ಸ್ಥಳಗಳಾದ ಹೊಟೆಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಹಣ್ಣಿನ ಅಂಗಡಿ ಇತ್ಯಾದಿಗಳಲ್ಲಿ ಬುರ್ಖಾ ಹಾಕಿದವರಿಗೆ ಪ್ರವೇಶವಿಲ್ಲ ಎಂದು ಬೋರ್ಡ್‌ಗಳಲ್ಲಿ ತೂಗುಹಾಕಿದ್ದಾರೆ. 320 ಜನರು ಧಾರುಣವಾಗಿ ಮೃತಪಟ್ಟ ಮೇಲೆ ಈಗ ಏನು ಹಾಕಿದರೆ ಏನು ಪ್ರಯೋಜನ? ಚೀನಾ ಸೇರಿದಂತೆ ಹಲವು ದೇಶಗಳು, ತನ್ನ ದೇಶದ ಪ್ರವಾಸಿಗರಿಗೆ ಶ್ರೀಲಂಕಾ ಪ್ರವಾಸ ಸಧ್ಯಕ್ಕೆ ಬಂದ್‌ ಮಾಡಿ ಎಂದು ಎಚ್ಚರಿಕೆ ನೀಡಿದೆ. ಒಂದು ಸರ್ಕಾರ ತಾನು ಒಳಗೊಳಗೇ ಜಗಳವಾಡಿಕೊಂಡಿದ್ದಕ್ಕೆ, ಜಿಹಾದಿ ಉಗ್ರರು ಬಂದು ದೇಶದ ಮರ್ಯಾದೆ ಮತ್ತು ಜನರ ಪ್ರಾಣ ಎರಡನ್ನೂ ತೆಗೆದು ಹೋದರು.

ಇದರಿಂದ ನಮ್ಮ ಭಾರತೀಯರೂ ಕಲಿಯುವುದು ಬಹಳಷ್ಟಿದೆ. ಒಂದು ಸದೃಢ ಸರ್ಕಾರ ಮತ್ತು ಸಮರ್ಥ ನಾಯಕ ಇಲ್ಲದಿದ್ದರೆ ದೇಶ ಎಂಥ ಅಧೋಗತಿಗೆ ಇಳಿಯುತ್ತದೆ ಎಂದು ನಾವಿಲ್ಲಿ ನೋಡಬಹುದು. ನನ್‌ ಹತ್ರ 37 ಸೀಟ್‌ ಇದೆ, ನಿನ್‌ ಹತ್ರ 78 ಸೀಟ್‌ ಇದೆ ಇಬ್ಬರೂ ಸರ್ಕಾರ ಮಾಡಿ, ದಿನನಿತ್ಯ ಕಿತ್ತಾಡುವುದನ್ನು ನೋಡುತ್ತಿದ್ದೇವೆ. ರೈತರ ಹೆಸರು ಹೇಳಿಕೊಂಡು ಬಂದ ಸರ್ಕಾರಕ್ಕೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಬ್ಯಾಂಕ್‌ನವರಿಂದ ಮಾನ ಹರಾಜು ಹಾಕಿಸಿಕೊಳ್ಳುತ್ತಿರುವ ರೈತರಿಗಿಂತ ಸರ್ಕಾರ ಉಳಿಸುವುದು, ಖಾತೆ ಹಂಚಿಕೆಯೇ ಮುಖ್ಯ. ನಮ್ಮ ಜನರೇ ಸರಿಯಾಗಿ ಮತ ಹಾಕದೇ, ಈಗ ಸರ್ಕಾರವನ್ನು ದೂರಿ ಉಪಯೋಗವೇನು ಹೇಳಿ? ಶ್ರೀಲಂಕಾ ಗತಿಯೂ ಹಾಗೇ. ಎಲ್ಲರೂ ಸತ್ತ ಮೇಲೆ ಉಳಿದವರು, ಬುರ್ಖಾ ನಿಷೇಧ ಮಾಡಿ ಎಂದು ಬೋರ್ಡ್‌ ತೂಗು ಹಾಕಿ ಪ್ರಯೋಜನವೇನು!? ಹನುಮಂತ ಲಂಕೆಗೆ ಬಂದಾಗ, ಸೀತೆಯ ರಕ್ಷಣೆಗಾಗಿ ಲಂಕೆಯನ್ನು ಸುಟ್ಟು ಹೋದ. ಈಗ, ಅಲ್ಲಿನ ರಾಜಕಾರಣಿಗಳೇ ಹೊಡೆದಾಡಿ ಲಂಕಾ ಸುಟ್ಟರು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya