ಮತ್ತೊಂದು ನಿರ್ಭಯಾ! ರಾಯಚೂರಿನ ಮಂದಿಗೆ ಹುಟ್ಟಿಸಿತು ಭಯ!

ರಾತ್ರಿಯಿಂದ ಒಂದೇ ಸಮನೆ ಮೆಸೆಜ್‌ಗಳು. ಏನು ಎಂದು ನೋಡಿದರೆ, ನಿದ್ದೆಗೆಡಿಸುವಂಥ ಚಿತ್ರಪಟವದು. ಹುಡುಗಿಯೊಬ್ಬಳ ದೇಹ, ಕೊಳೆತ ಸ್ಥಿತಿಯಲ್ಲಿ, ಅರ್ಧ ಸುಟ್ಟಿರುವ ಹಾಗೆ, ಉಟ್ಟಿರುವ ಬಟ್ಟೆ ಹರಿದು ಹಾಕಿರುವ ಹಾಗೆ ನೇಣು ಬಿಗಿದಿರುವ ಅವಸ್ಥೆಯಲ್ಲಿ ಮೃತಪಟ್ಟಿರುವ ಚಿತ್ರ ನೋಡಿದರೆ, ನಿದ್ದೆ ಬರುವ ಮಾತೆಲ್ಲಿ?
ಇದು ಮತ್ತೊಂದು ನಿರ್ಭಯಾದಂಥ ಪ್ರಕರಣವನ್ನು ನೆನಪಿಸುವಂತಿತ್ತು. ಪ್ರಕರಣ ಏನು? ರಾಯಚೂರಿನ ನವೋದಯ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್‌ ಓದುತ್ತಿದ್ದ ಮಧು ಪತ್ತಾರ್‌ ಎಂಬ ಹುಡುಗಿ ಮಾಣಿಕ್‌ ಪ್ರಭು ದೇವಸ್ಥಾನದ ಬೆಟ್ಟದಲ್ಲಿ ನೇಣು ಬಿಗಿದಿರುವ ಸ್ಥಿತಿಯಲ್ಲಿ ಸಿಕ್ಕಿದ್ದಳು. ಆಕೆಯ ಮೃತ ದೇಹದ ಬಳಿ ಡೆತ್‌ನೋಟ್‌ ಸಿಕ್ಕಿದ್ದು, ‘ನಾನು ಪರೀಕ್ಷೆಯಲ್ಲಿ ಫೇಲ್‌ ಆಗಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಹೊಣೆಯಲ್ಲ’ ಎಂದು ಬರೆದಿದೆ ಎಂದು ಇಡೀ ಪ್ರಕರಣ ಆತ್ಮಹತ್ಯೆಯೆಂದು ಪೊಲೀಸರು ಪರಿಗಣಿಸಿಬಿಟ್ಟಿದ್ದರು.
ಪೊಲೀಸರಿಗೆ ಟ್ರೈನಿಂಗ್‌ ಕೊಟ್ಟಿರುವುದು ಇದಕ್ಕೇನಾ? ಹೆಣದ ಪಕ್ಕ ಒಂದು ಡೆತ್‌ ನೋಟ್‌ ಸಿಕ್ಕ ಮಾತ್ರಕ್ಕೆ ಅದು ಆತ್ಮಹತ್ಯೆ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವವರು ಅವರೇ ಬಟ್ಟೆ ಹರಿದುಕೊಂಡು, ಮೈಗೆ ಸೀಮೆಎಣ್ಣೆ ಸುರಿದುಕೊಂಡು, ಅರ್ಧ ಬೆಂದ ಮೇಲೆ ಅದನ್ನು ಆರಿಸಿಕೊಂಡು, ಕಾಲು ಸಿಗುವಷ್ಟು ಎತ್ತರವಿರುವ ಮರಕ್ಕೆ ನೇಣು ಬಿಗಿದುಕೊಳ್ಳುತ್ತಾರಾ? ಕಾಮನ್‌ ಸೆನ್ಸ್‌ ಅಲ್ಲವಾ ಇದು? ನಂತರ ಈ ಪ್ರಕರಣ ಅಸ್ವಾಭಾವಿಕ ಪ್ರಕರಣದ ಅನ್ವಯ ದಾಖಲಿಸುತ್ತಾರೆ.

ಇವರ ಕಾನೂನು ಪುಸ್ತಕ ನೋಡಿ ಏನಾದರೂ ಆಟ ಆಡಿಕೊಳ್ಳಲಿ, ಆದರೆ ಹೆತ್ತವರ ಕರುಳು ಕೇಳಬೇಕಲ್ಲ?! ಪ್ರಕರಣ ದಾಖಲಾದ ಒಂದೆರಡು ದಿನಗಳಲ್ಲಿ ಮಧು ಪತ್ತಾರ್‌ ಅವರ ತಂದೆ, ಠಾಣೆಗೆ ಬಂದು ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಹಾಗೆ ಮಾಡಿಕೊಳ್ಳುವಷ್ಟು ದುರ್ಬಲಳೂ ಅವಳಲ್ಲ, ಆಕೆಯ ಸಾವಿಗೆ ಆಕೆಗೆ ಆಗಾಗ ಹಿಂಸಿಸುತ್ತಿದ್ದ ಹುಡುಗನೇ ಕಾರಣ ಎಂದು ದೂರು ನೀಡುತ್ತಾರೆ. ನಂತರ ಸುದರ್ಶನ್‌ ಯಾದವ್‌ನ ಬಂಧನವಾಗುತ್ತದೆ. ಆತನ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 302 ಮತ್ತು 376ರಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗೂ ಕಳುಹಿಸಿಬಿಟ್ಟಿದ್ದಾರೆ.
ಇಷ್ಟೇನಾ? ಇಷ್ಟಕ್ಕೇ ಎಲ್ಲ ಮುಗಿದು ಹೋಯಿತೇ? ಒಂದು ಬೆಟ್ಟದಲ್ಲಿ ಒಬ್ಬ ಹುಡುಗಿಯ ಅತ್ಯಾಚಾರ ಮಾಡಿ, ಸುಟ್ಟು, ಅದೂ ಸಫಲವಾಗದೇ ನೇಣು ಹಾಕುವ ಕೆಲಸ ಒಂದೇ ಅಪರಾಧಿಯಿಂದ ಹೇಗೆ ಆಗಲು ಸಾಧ್ಯ? ಇಲ್ಲಿಂದಲೇ ಇದು ನಿರ್ಭಯಾ ಪ್ರಕರಣದ ಹಾಗೆ ಇದೆ ಎಂಬ ಅನುಮಾನ ಬರುವುದಕ್ಕೆ ಶುರುವಾಗಿದ್ದು.

ಈ ಬಗ್ಗೆ ಪ್ರಕರಣ ದಾಖಲಾಗಿರುವ ನೇತಾಜಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಿಸಿದರೆ ಒಂದು ಹೇಳುತ್ತಾರೆ, ಸ್ಥಳೀಯರನ್ನು ವಿಚಾರಿಸಿದರೆ ಒಂದು ಹೇಳುತ್ತಾರೆ. ಹಾಗಾದರೆ, ಯಾರಾರ‍ಯರ ಕಣ್ಣಲ್ಲಿ ಪ್ರಕರಣ ಹೇಗೆ ಕಾಣಿಸಿದೆ? ಸುದರ್ಶನ್‌ ಒಬ್ಬನೇ ಅತ್ಯಾಚಾರ ಮಾಡಿ ಕೊಂದದ್ದಾ? ಅವರವರು ಕಂಡಂತೆ:

ಪೊಲೀಸ್‌ ದೃಷ್ಟಿಯಲ್ಲಿ: ಮೊದಲೇ ಹೇಳಿದಂತೆ, ಇವರಿಗೆ ಇದು ಮೊದಲ ನೋಟದಲ್ಲೇ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಏಪ್ರಿಲ್‌ 13ನೇ ತಾರೀಖು ಕಾಲೇಜಿಗೆ ಹೋಗಿದ್ದಾಳೆ. ಆಕೆ 14, 15 ಮನೆಗೆ ಬರದ ಹುಡುಗಿ, 16ನೇ ತಾರೀಖು ಹೆಣವಾಗಿ ಸಿಕ್ಕಿದ್ದಾಳೆ. ನಂತರ ಪೋಷಕರು ದೂರು ನೀಡಿದ ಮೇಲೆ ಸುದರ್ಶನ್‌ ಯಾದವ್‌ನನ್ನು ಬಂಧಿಸಿದ್ದಾರೆ. ಇಲ್ಲವಾದರೆ, ಇದು ಆತ್ಮಹತ್ಯೆ ಪ್ರಕರಣ ಅಥವಾ ಅಸ್ವಾಭಾವಿಕ ಸಾವು ಎಂದೇ ಪರಿಗಣಿಸಿ ಮುಚ್ಚಿ ಹೋಗುತ್ತಿತ್ತು. ಹೇಗೆ ಅದು? ಅದಕ್ಕೂ ಪೊಲೀಸರ ಬಳಿ ಸಮಜಾಯಿಷಿಗಳಿವೆ. ಆಕೆ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರ ಬಗ್ಗೆ ಮಾಹಿತಿಗಳು ಪೊಲೀಸರಿಗೆ ಸಿಕ್ಕಿದೆಯಂತೆ.

ಅಷ್ಟೇ ಅಲ್ಲ, ಪೊಲೀಸರು ಇನ್ನಷ್ಟು ತನಿಖೆ ಮಾಡಿದಾಗ, ಅವರಿಗೆ ಸುದರ್ಶನ್‌ ಮತ್ತು ಮಧು ಪತ್ತಾರ್‌ ಮಾತಾಡಿಕೊಂಡಿರುವ ಕರೆ ವಿವರಗಳು, ಮೆಸೆಜ್‌ ಸ್ಕ್ರೀನ್‌ಶಾಟ್‌ ಇತ್ಯಾದಿಗಳು ಸಿಕ್ಕಿವೆ. ಅಷ್ಟೇ ಅಲ್ಲ, ಸುದರ್ಶನ್‌ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದರ ಸಿಸಿಟಿವಿ ಫುಟೇಜ್‌ಗಳು ನಮಗೆ ಸಿಕ್ಕಿವೆ. ಇದನ್ನೆಲ್ಲ ನೋಡಿದ ಮೇಲೇ, ನಾವು ಅವನನ್ನು ವಶಕ್ಕೆ ಪಡೆದು ವಿಚಾರಿಸಿದ್ದೆವು. ಆಗ ಆತನೇ, ತಾನು ಮತ್ತು ಮಧು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು ಹಾಗೂ ಒಂದು ವರ್ಷದಿಂದ ಆಕೆ ನನ್ನನ್ನು ದೂರ ತಳ್ಳಿದ್ದಳು. ನನಗೂ ಅದಕ್ಕೂ ಏನೂ ಸಂಬಂಧವಿಲ್ಲ ಎಂದಿದ್ದಾನೆ. ಪೊಲೀಸರು ಇವನ ವಿರುದ್ಧ 376 ಮತ್ತು 302 ಅನ್ವಯ ಪ್ರಕರಣ ದಾಖಲಿಸಿ ಎಫ್‌ಐಆರ್‌ ಮಾಡಿದ್ದಾರೆ.
ಇಲ್ಲಿ ವಿಚಿತ್ರ ನೋಡಿ, ಪೊಲೀಸರು ಮೊದಲಿಗೆ ಇದನ್ನು ಆತ್ಮಹತ್ಯೆಯ ಪ್ರಕರಣ ಎಂದವರು, ಎಫ್‌ಐಆರ್‌ ಹಾಕುವ ಹೊತ್ತಿಗೆ ಮಧು ಮತ್ತು ಸುದರ್ಶನ್‌ ವಿಷಯದವರೆಗೂ ಇದನ್ನು ತಂದಿದ್ದಾರೆ. ಈ ಬಗ್ಗೆ ಅಲ್ಲಿನ ಜನರನ್ನು ವಿಚಾರಿಸಿದಾಗ ಇದರಲ್ಲಿ ಬೇರೆ ಸಂಗತಿಗಳೂ ಅಡಗಿರುವುದು ತಿಳಿಯಿತು.

ಸಾರ್ವಜನಿಕರ ದೃಷ್ಟಿಯಲ್ಲಿ: ಯಾವುದೇ ಅಪರಾಧ ಘಟನೆಯಿರಲಿ, ಅಲ್ಲಿ ಅಪರಾಧಿಗೆ ತನ್ನ ಕೆಲಸ ಮುಗಿಸಿ ಬೇಗ ಪರಾರಿಯಾಗುವುದನ್ನೇ ನೋಡುತ್ತಿರುವುದು ಸಹಜ. ಆದರೆ ಮಹಿಳೆಯನ್ನು ಅಪರಾಧಿಯೊಬ್ಬನೇ ಅತ್ಯಾಚಾರ ಮಾಡಿ, ಸುಟ್ಟು, ವಿಚಿತ್ರವಾಗಿ ನೇಣು ಹಾಕಿ ಹೋಗುವಷ್ಟು ಪುರುಸೊತ್ತಿನಲ್ಲಿರುತ್ತಾನೆಯೇ? ಇಲ್ಲ ಸುದರ್ಶನ್‌ ಜತೆಗೆ ಮತ್ತೊಬ್ಬ ವ್ಯಕ್ತಿ ಇದ್ದ. ಅವನ ಹೆಸರು ಮಹೇಶ್‌ ರೆಡ್ಡಿ(ಹೆಸರು ಬದಲಾಯಿಸಲಾಗಿದೆ). ಈತ ಅಲ್ಲಿನ ಶ್ರೀಮಂತ ಕುಟುಂಬಕ್ಕೆ ಸೇರಿದವನು. ಸುದರ್ಶನ್‌ನಂತೆ, ಮಹೇಶ್‌ ರೆಡ್ಡಿಯೂ ಆಕೆಯನ್ನು ಪ್ರೀತಿಸುತ್ತಿದ್ದ. ಆಕೆಗೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದ ಸಹ. ಆದರೆ, ಆಕೆ ಅದನ್ನು ತಿರಸ್ಕರಿಸಿದ್ದಳು. ಇನ್ನು ಪೊಲೀಸರ ಮಾಹಿತಿಯ ಪ್ರಕಾರ ಆಕೆಗೆ ಕಳೆದ ಐದು ವರ್ಷಗಳಿಂದ ಸುದರ್ಶನ್‌ ಯಾದವ್‌ ಜತೆ ಪ್ರೀತಿ ಇತ್ತು, ಆದರೆ ಒಂದು ವರ್ಷದಿಂದ ಅವನನ್ನು ದೂರ ತಳ್ಳಿದ್ದಳು. ಇದೇ ಕೋಪಕ್ಕೆ, ನಿನ್ನ ಜತೆ ಮಾತಾಡಬೇಕು ಬಾ ಎಂದು ಆಕೆಯನ್ನು ಬೆಟ್ಟಕ್ಕೆ ಕರೆಯಿಸಿಕೊಂಡಿದ್ದಾರೆ. ಆದರೆ ಕರೆದಿದ್ದು ಒಬ್ಬನಾಗಿರದೇ ಇಬ್ಬರಾಗಿದ್ದರು. ಇವರು ಕುಡಿದ ಅಮಲಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಬೆಂಕಿ ಹೊತ್ತಿ ಉರಿದರೆ, ಊರಿನ ಜನರಿಗೆ ತಿಳಿಯುತ್ತದೆ ಎಂದು. ಅರ್ಧ ಸುಟ್ಟು ಆಕೆಯನ್ನು ನೇಣಿಗೆ ಹಾಕಿದ್ದಾರೆ. ಇನ್ನೊಂದು ವಿಷಯವೇನೆಂದರೆ, ಸುದರ್ಶನ್‌ ಯಾದವ್‌, ಮಧು ಸಹಪಾಠಿಯೂ ಅಲ್ಲ. ಆಕೆ ಓದುತ್ತಿದ್ದ ಕಾಲೇಜಿಗೆ ನೀರು ಸರಬರಾಜು ಮಾಡುವ ಮಾಮೂಲಿ ಹುಡುಗ ಅಷ್ಟೇ. ಆದರೆ, ಮಹೇಶ್‌ ರೆಡ್ಡಿ ಆಗರ್ಭ ಶ್ರೀಮಂತ. ಹಾಗಾಗಿ ಈ ಪ್ರಕರಣದಲ್ಲಿ ಮಹೇಶ್‌ ರೆಡ್ಡಿಯನ್ನು ಬೇಕಂತಲೇ ಕೈಬಿಡಲಾಗಿದೆ.

ಆದರೆ, ಆಕೆಯ ಕಾಲೇಜು ಮೂಲಗಳು ಮತ್ತೊಂದು ಸತ್ಯವನ್ನು ಹೇಳುತ್ತಿದೆ.
ಕಾಲೇಜು ಮೂಲಗಳು: ಆಕೆ ಧೈರ್ಯಶಾಲಿ. ಯಾವುದಕ್ಕೂ ಅಂಜುತ್ತಿರಲಿಲ್ಲ. ಮಾಧ್ಯಮಗಳು ಮತ್ತು ಪೊಲೀಸರು ಹೇಳುವ ಹಾಗೆ ಆಕೆ ತಾನು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಅಥವಾ ಅಂಕ ಕಡಿಮೆ ಬಂತು ಎಂದೋ ಅಥವಾ ಫೇಲ್‌ ಆದೆ ಎಂದೋ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯೂ ಆಕೆಯಲ್ಲ. ಇನ್ನು ಪೊಲೀಸರು ಕೇವಲ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ. ಅವನ ಮೇಲೇ ಎಲ್ಲ ಪ್ರಕರಣಗಳೂ ದಾಖಲಾಗಿವೆ. ಆದರೆ, ಅವನ ಜತೆಗೆ ಇನ್ನೂ ಮೂವರು ಬೆಟ್ಟಕ್ಕೆ ಹೋಗಿದ್ದರು. ಅವರೆಲ್ಲರೂ ಸೇರಿ ಮಧುಗಳನ್ನು ಅತ್ಯಾಚಾರ ಮಾಡಿದ್ದಾರೆ. ಆ ದೇಹ ನೋಡಿದರೆ, ಕೇವಲ ಒಬ್ಬನಿಂದ ಆ ಕೃತ್ಯ ಮಾಡಿರುವುದಕ್ಕೆ ಸಾಧ್ಯವಿಲ್ಲ ಎಂದೆನಿಸುತ್ತದೆ. ಆಕೆ ಬೆಟ್ಟ ಹತ್ತಿದ ಮೇಲಿಂದ, ಸಾಯುವವರೆಗೆ ಕನಿಷ್ಟ ಒಂದು ತಾಸಾದರೂ ಆಕೆ ಅಲ್ಲಿದ್ದಾಳೆ ಎಂದೂ ಕಾಲೇಜಿನ ಕೆಲ ಮೂಲಗಳು ತಿಳಿಸಿವೆ.

ಇನ್ನು ಆಕೆ ಅಕ್ಕ, ಮೇಘನಾ ಪತ್ತಾರ್‌ ಸಹ ಫೇಸ್ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಬೇರೆಯವರು ಆರೋಪಿಸುವ ಹಾಗೆ ಅವಳು ಫೇಲ್‌ ಆಗಿಲ್ಲ. ಏಪ್ರಿಲ್‌ 12ನೇ ತಾರೀಖಿನಂದು ಬಂದ ಫಲಿತಾಂಶವೇ ಹೇಳುತ್ತೆ ಆಕೆ ಚೆನ್ನಾಗಿಯೇ ಪಾಸ್‌ ಆಗಿದ್ದಾಳೆ ಅಂತ. ಆದರೆ, ಆಕೆಯ ಸಾವನ್ನು ಅತ್ಯಾಚಾರ, ಕೊಲೆ ಅಲ್ಲ ಆತ್ಮಹತ್ಯೆ ಎಂದು ಸಾಬೀತು ಮಾಡುವ ಉದ್ದೇಶದಿಂದ ಈ ರೀತಿ ಫೇಲ್‌ ಆಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದಿದ್ದಾರೆ. ಪೊಲೀಸರು ಹೇಳುವುದಕ್ಕೂ, ಈಕೆ ಹೇಳುವುದಕ್ಕೂ ಇಲ್ಲೇ ಕ್ಲಾಶ್‌ ಆಗುವುದು. ಪೊಲೀಸರ ಬಳಿಯೂ ದಾಖಲೆಯಿದೆ, ಈಕೆಯ ಬಳಿಯೂ ಇದೆ. ಹಾಗಾದರೆ ಸತ್ಯ ಯಾವುದು? ಆರೋಪಿ ಸಿಗುವವರೆಗೂ ಆಕೆ ಫೇಲ್‌ ಆಗಿದ್ದ ಸಾಕ್ಷಿಯಿತ್ತು ಆದರೆ, ಅವನು ಸಿಕ್ಕ ಮೇಲೆ, ಇಬ್ಬರಿಗೂ ಪ್ರೀತಿಯಿತ್ತು ಎನ್ನುವ ಪೊಲೀಸರ ತನಿಖೆಯಲ್ಲಿ ಹುರುಳಿದೆಯೇ? ಜನರು ಹೇಳುವ ಆ ಮತ್ತೊಂದು ಹುಡುಗ ಮಹೇಶ್‌ ರೆಡ್ಡಿ ಯಾರು? ಇನ್ನು ಇಂಥ ಹಲವಾರು ಸಂಗತಿಗಳು ನಮಗೆ ಸಿಗುತ್ತದೆ.

ಇವೆಲ್ಲದರ ಮೇಲೆ ಬೇಸರ ತಂದ ಸಂಗತಿಯೇನು ಗೊತ್ತಾ? ರಾಯಚೂರಿನ ಮಂದಿಗೆ ಕರೆ ಮಾಡಿ ಇದರ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದರೆ, ಬಹಳಷ್ಟು ಮಂದಿ ಒಂದಕ್ಷರವನ್ನೂ ಹೇಳುವುದಕ್ಕೆ ತಯಾರಿರಲಿಲ್ಲ. ವಿಷಯ ಗೊತ್ತಿದ್ದರೂ, ‘ಸರ, ಅದು ನಮಗೆ ಬೇಡ ಸರ.. ನಮಗೆ ಏನಾಗಿದೆ ಎಂದೇ ಗೊತ್ತಿಲ್ಲ ಸರ.. ನಮಗ್ಯಾಕ್ರೀ ಸರ.. ಅದೇನೋ ಅವಳ ಕೊಲೆಯಾಗಿದೆ ಅಂತ ಮಾತ್ರ ಗೊತ್ರೀ.. ನಿಮ್ಮಷ್ಟೇ ಗೊತ್ತು, ಮಿಕ್ಕಿದ್ದೇನೂ ಗೊತ್ತಿಲ್ಲ..’ ಹೀಗೆ ನೂರೈವತ್ತು ಸಬೂಬು ಕೊಡುತ್ತಾರೆಯೇ ವಿನಾ ಮಾಹಿತಿಯೇ ಮಾತ್ರ ಕೊಡುವುದಿಲ್ಲ. ಇದನ್ನು ನೋಡಿ ಮತ್ತಷ್ಟು ಅಚ್ಚರಿಯಾಗಿತ್ತು. ಇವರೆಷ್ಟು ಹೆದರಿದ್ದಾರೆ ಎಂದು ಇವರ ಮಾತುಗಳಲ್ಲೇ ತಿಳಿಯುತ್ತದೆ. ಎಲ್ಲೋ ಒಂದಿಬ್ಬರನ್ನು ಗೊತ್ತಿರುವವರ ಮೂಲಕ ಕೇಳಿಸಿದ ಮೇಲೆ,ಅವರೂ ಅಂಜಿಕೆಯಿಂದಲೇ ಈ ಮೇಲಿನ ಮಾಹಿತಿಯನ್ನು ಹಂಚಿಕೊಂಡರು. ಸಂಪೂರ್ಣವಾಗಿ ವಿಷಯ ಗೊತ್ತಿದ್ದರೂ, ಎಲ್ಲಿ ಇದನ್ನು ಹೇಳಿದರೆ ನಮಗೇ ಸಮಸ್ಯೆಯಾಗುತ್ತದೆಯೋ ಎಂದು ಹೆದರಿ ಸುಮ್ಮನಿದ್ದಾರೆ. ಸುಮ್ಮನಿರುವುದು ಎಂದರೆ, ಇವರ ಹಿಂಸೆಗಳನ್ನು ಸಹಿಸಿಕೊಳ್ಳುವುದು ಎಂದೇ ಅರ್ಥ.
ಉತ್ತರ ಕರ್ನಾಟಕದ ಮಂದಿಗೆ ಇದು ರಕ್ತದಲ್ಲೇ ಇದೆಯಾ? ನಿಜಾಮರು, ಶಾಹಿಗಳಿಂದ ಅತ್ಯಂತ ಹೆಚ್ಚು ದಬ್ಬಾಳಿಕೆಗೆ ಒಳಗಾದವರು ಉತ್ತರ ಕರ್ನಾಟಕದ ಮಂದಿ. ಅಂದು ತಲೆ ಬಗ್ಗಿಸಿ, ಹಿಂದಿ, ಉರ್ದು ಕಲಿತು ಬದುಕಬೇಕಿತ್ತು ನಿಜ. ಆದರೆ ಈಗಲೂ ಹಾಗೇ ಬದುಕಬೇಕು ಎಂದೇನೂ ಇಲ್ಲವಲ್ಲ? ಹೇಗೆ ಮಧು ಕಾಲೇಜಿನ ಆಕೆಯ ಸ್ನೇಹಿತರು ಮತ್ತು ಕೆಲ ಮಂದಿ ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೋ ಹಾಗೇ ಬಾಕಿಯವರೂ ಮಾಡಬಹುದು. ಅವರ ಊರಲ್ಲಿ ಏನು ನಡೆಯಿತು ಎಂದು ಹೇಳುವ ಹಕ್ಕೂ ಅವರಿಗಿಲ್ಲ ಎಂದರೆ, ಉತ್ತರ ಕರ್ನಾಟಕದ ಪರಿಸ್ಥಿತಿ ನಿಜಕ್ಕೂ ಹೇಗಿದೆ ಎಂದು ಈ ಪ್ರಕರಣದಿಂದ ತಿಳಿಯುತ್ತದೆ.

ನಿಮ್ಮ ಮುಂದೆ ಒಂದು ಕ್ರೈಮ್‌ನ ಮೂರು ದೃಷ್ಟಿಕೋನಗಳನ್ನು ಇಟ್ಟಿದ್ದೇನೆ. ಯಾರು ಸರಿ, ಯಾರು ತಪ್ಪು? ನಿರ್ಧಾರ ನಿಮಗೆ ಬಿಟ್ಟಿದ್ದು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya