ದೇವಸ್ಥಾನ ನುಂಗುವುದಕ್ಕೆ ಪುಳಿಯೋಗರೆ ನೆಪ!

 

 

ಯಾವುದಾದರೂ ಪ್ರಕೃತಿ ವೈಪರಿತ್ಯ ಸಂಭವಿಸಿದಾಗ ಅಥವಾ ಮಾರ್ಕೆಟ್‌ನಲ್ಲಿ ಎಲ್ಲದರ ಬೆಲೆ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಕಂಪನಿಯೊಂದು ವಿಶೇಷ ಆಫರ್‌ ತೆಗೆದುಕೊಂಡು ಬರುವ ಹಾಗೆ, ಚಾಮರಾಜನಗರದ ಸುಳ್ಯಾಡಿ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ವಿಷ ಪ್ರಾಶನವಾಗಿ 14 ಮಂದಿ ಮೃತಪಟ್ಟಿರುವ ಈ ಸಮಯದಲ್ಲೇಧಾರ್ಮಿಕ ದತ್ತಿ ಇಲಾಖೆ, ಇನ್ನಷ್ಟು ದೇವಸ್ಥಾನಗಳು- ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿ ಹಾಕುವುದಕ್ಕೆ ಎಂದಿನಂತೆ ಅಪ್ರಾಯೋಗಿಕ ನೀತಿಗಳನ್ನು ಹೇರಿದೆ. ಆ ನೀತಿಗಳು ಮತ್ತು ಅದರ ಅಪ್ರಾಯೋಗಿಕತೆ ಬಗ್ಗೆ ಮಾಹಿತಿ ಇಲ್ಲಿದೆ.

ದೇವರ ನೈವೇದ್ಯಕ್ಕಾಗಿ ಮತ್ತು ದಾಸೋಹಕ್ಕಾಗಿ ಇರುವ ಅಡುಗೆ ಕೋಣೆಗೆ ಕಡ್ಡಾಯವಾಗಿ ಸಿ.ಸಿ.ಟಿವಿಯನ್ನು ಅಳವಡಿಸುವುದು.

ಇದು ಹೇಗೆ ಸಮಸ್ಯೆಗೆ ಪರಿಹಾರ ತಿಳಿಯುತ್ತಿಲ್ಲ. ಸಿ ಸಿ ಕ್ಯಾಮೆರಾ ಇದ್ದ ಮಾತ್ರಕ್ಕೆ ಅವಘಢಗಳನ್ನು ತಡೆಯಬಹುದು ಅಥವಾ ನಿಯಂತ್ರಿಸಬಹುದು ಎಂಬುದೇ ಒಂದು ಭ್ರಮೆ. ಒಂದು ವೇಳೆ ತಡೆಯಬಹುದು ಎಂದಾಗಿದ್ದರೆ, ಪಾರ್ಲಿಮೆಂಟ್‌ನಲ್ಲಿ ದಾಳಿ ಆಗುತ್ತಲೇ ಇರುತ್ತಿರಲಿಲ್ಲ. ಮುಂಬೈನ ತಾಜ್‌ ಹೊಟೆಲ್‌ಗೆ ಉಗ್ರರು ಬರುತ್ತಲೇ ಇರುತ್ತಿರಲಿಲ್ಲ. ಸಿಸಿ ಟಿವಿ ಪೋಸ್ಟ್‌ ಮಾರ್ಟಂ ಇದ್ದಹಾಗೆ. ಯಾರು ಹಾಕಿದ್ದರು ಎಂದು ಕಂಡುಹಿಡಿಯಬಹುದು ಅಷ್ಟೇ. ದೇವಸ್ಥಾನಗಳ ಮಟ್ಟಿಗೆ ಇದೂ ಅಸಾಧ್ಯವೇ. ಏಕೆಂದರೆ, ಧಾರ್ಮಿಕ ದತ್ತಿ ಇಲಾಖೆಯ ವಶದಲ್ಲಿರುವ ಎಷ್ಟೋ ದೇವಸ್ಥಾನಗಳಿಗೆ ಸಿಲೆಂಡರ್‌ ಸಂಪರ್ಕವೇ ಇರುವುದಿಲ್ಲ. ಕಟ್ಟಿಗೆ ಒಲೆಯೇ ಗಟ್ಟಿ. ಇನ್ನು ಕೆಲ ದೇವಸ್ಥಾನಗಳಲ್ಲಿ ಕಟ್ಟಿಗೆ ಒಲೆಯಲ್ಲೇ ಮಾಡುವ ಪದ್ಧತಿ ಇರುತ್ತದೆ. ಒಂದು ಕೋಣೆಯಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಇಟ್ಟರೂ ಎಲ್ಲವಕ್ಕೂ ಮಸಿ ಹಿಡಿಯುತ್ತದೆ. ಟಿವಿಯಲ್ಲಿ ಮಸಿ ಬಿಟ್ಟು ಬೇರೇನೂ ಕಾಣುವುದಿಲ್ಲ. ಸಹಜವಾಗಿ ಎಲ್ಲ ದೇವಸ್ಥಾನದ ಹೊರಗೆ ಅಥವಾ ಒಳಗೆ ಸಿಸಿ ಕ್ಯಾಮೆರಾ ಇರುತ್ತದೆ. ಆದರೆ, ಅಡುಗೆ ಮನೆಯೊಳಗೂ ಸಿಸಿ ಕ್ಯಾಮೆರಾ ಹಾಕಬೇಕು ಎನ್ನುವುದು ಮತ್ತೊಂದು ಲಾಬಿಗೆ ಒಂದು ದಾರಿ ಅಷ್ಟೇ.

2. ಅಡುಗೆಮನೆಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿರಬಾರದು:

ಸುಮ್ಮನೆ ಸುತ್ತೋಲೆ ಹೊರಡಿಸಿದರೆ ಸಾಲದು, ಅದನ್ನು ಪಾಲಿಸುವುದಕ್ಕೂ ಬರಬೇಕು. ಹಳ್ಳಿ ಕಡೆಗಳಲ್ಲಿ ಅಡುಗೆ ಮನೆಗೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಬರುತ್ತಾರೆ. ಒಂದಷ್ಟು ಸಣ್ಣ ಪುಟ್ಟ ಅಡುಗೆ ಪದಾರ್ಥಗಳನ್ನು ತರುತ್ತಿರುತ್ತಾರೆ. ಅವರನ್ನೆಲ್ಲ ಅನಧಿಕೃತರು ಎಂದು ಪರಿಗಣಿಸಬಹುದೇ? ಅಡುಗೆ ಕೋಣೆಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಫಿಂಗರ್‌ಪ್ರಿಂಟ್‌ನಂಥ ವ್ಯವಸ್ಥೆ ಏನಾದರೂ ಇದೆಯಾ? ಐಡಿ ಕಾರ್ಡ್‌ ಕೊಟ್ಟಿದ್ದಾರಾ? ಇಲ್ಲ. ಹಾಗಾದರೆ ಯಾರು ಅನಧಿಕೃತರು. ಸುತ್ತೋಲೆಯಲ್ಲಿ ಎಲ್ಲೂ ಅನಧಿಕೃತ ಎಂಬ ಪದದ ಇಲ್ಲಿನ ಅರ್ಥವೇನು ಎಂಬ ಬಗ್ಗೆ ಉಲ್ಲೇಖವೇ ಇಲ್ಲ. ಸರಿ ಈಗ ಅನಧಿಕೃತರು ಬಂದರೆ, ಹೇಗೆ-ಏನು-ಎಲ್ಲಿ-ಯಾವುದರ ಅನ್ವಯ ಶಿಕ್ಷೆ ಇರುತ್ತದೆ ಎಂಬ ಉಲ್ಲೇಖವಿಲ್ಲ. ಒಟ್ಟು ನೀತಿ ಮಾಡಿ ಇಡುವುದೇ ಉದ್ದೇಶವಾದರೆ, ಹೀಗೇ ಆಗುತ್ತದೆ.

3. ತಯಾರಿಸಿರುವ ನೈವೇದ್ಯ/ಅಡುಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಲು ಕ್ರಮ

ಇದರಲ್ಲಿ ಹೇಗೆ ಕ್ರಮ ತೆಗೆದುಕೊಳ್ಳುತ್ತಾರೆ? ಸ್ವೀಕರಿಸಲು ಅರ್ಹವೋ ಇಲ್ಲವೋ ಎಂದು ಅಳೆಯುವ ಮಾಪನ ಯಾವುದು? ಖಚಿತ ಪಡಿಸುವ ಅಧಿಕಾರಿ ಯಾರು? ಯಾರು ನೇಮಿಸುತ್ತಾರೆ? ಇಂಥ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ನೀಡಿರುವ ಗೊತ್ತು-ಗುರಿಯಿಲ್ಲದಿರುವ ಈ ಸುತ್ತೋಲೆಯಲ್ಲಿ ಯಾವುದನ್ನೂ ವಿವರಿಸಿಲ್ಲ. ಅಲ್ಲಿಗೆ ಇದೂ ಜಾರಿಯಾಗುವುದು ಅನುಮಾನ.

4. ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತಾದಿಗಳಿಗೆ ವಿತರಿಸುವ ವಿಚಾರದಲ್ಲಿ ಪೂರ್ವಭಾವಿ ಅನುಮತಿ ಪಡೆಯುವುದು ಹಾಗೂ ಭಕ್ತಾದಿಗಳಿಗೆ ವಿತರಿಸುವ ಮುನ್ನ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆಗೆ ಒಳಪಡಿಸಿ ಪ್ರಸಾದವು ಸ್ವೀಕರಿಸಲು ಆರೋಗ್ಯವಾಗಿರುವ ಬಗ್ಗೆ ದೃಢೀಕರಣ ಪಡೆದುಕೊಳ್ಳತಕ್ಕದ್ದು.

ಧಾರ್ಮಿಕ ದತ್ತಿ ಇಲಾಖೆ ನೀಡಿರುವ ಅಪ್ರಾಯೋಗಿಕಗಳ ಪಟ್ಟಿಯಲ್ಲಿ, ಮೊದಲನೇ ಸ್ಥಾನಲ್ಲಿ ನಿಲ್ಲುವುದು ಇದೇ ಇರಬೇಕು. ಉದಾಹರಣೆಗೆ ಭಕ್ತರು ಪ್ರಸಾದವನ್ನು ಸೋಮವಾರ ಹಂಚಬೇಕು ಎಂದು ಸಂಕಲ್ಪ ಮಾಡಿಕೊಂಡಿರುತ್ತಾರೆಂದು ಊಹಿಸಿಕೊಳ್ಳೋಣ. ಅವನು ಅರ್ಜಿ ಹಾಕಬೇಕು. ಸೂಪರ್‌ ಫಾಸ್ಟ್‌ ಇರುವ ನಮ್ಮ ಸರ್ಕಾರಿ ಇಲಾಖೆಗಳು ಎಂಥ ವೇಗದಲ್ಲಿ ಒಪ್ಪಿಗೆ ಕೊಡಬಹುದು ಎಂದು ಎಲ್ಲರಿಗೂ ಗೊತ್ತಿದೆ. ಸೋಮವಾರ ಸಂಕಲ್ಪ, ಇನ್ನೂ ನಾಲ್ಕು ಸೋಮವಾರ ಮುಂದೆ ಹೋಗಬಹುದು. ಧಾರ್ಮಿಕ ದತ್ತಿ ಇಲಾಖೆಯಲ್ಲೇ ಅಧಿಕಾರಿಗಳು ಕಡಿಮೆ ಇದ್ದಾರೆ. ಹೀಗಿರುವಾಗ ಈ ಹೊಸ ಉದ್ಯೋಗಕ್ಕೆ ಎಲ್ಲಿಂದ ಅಧಿಕಾರಿಗಳನ್ನು ಪೂರೈಸಲಾಗುತ್ತದೆ? ಗೊತ್ತಿಲ್ಲ.

ಇನ್ನು ಎಷ್ಟೋ ಊರುಗಳಲ್ಲಿ ಬರುತ್ತಿರುವ ಖಾಯಿಲೆಗಳನ್ನು ವಾಸಿ ಮಾಡುವುದಕ್ಕೇ ಸರ್ಕಾರಿ ವೈದ್ಯರಿಲ್ಲ, ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದೇ ಜೂಜು ಅಡ್ಡೆಗಳಾಗಿವೆ ಎಂಬ ದೂರು ಹಳ್ಳಿಗರದ್ದು. ಹೀಗಿರುವ ವೈದ್ಯರು, ಪರಿಣಿತರನ್ನು ಹೊಸತಾಗಿ ನೇಮಿಸುವುದಕ್ಕೆ ಸಾಧ್ಯವೇ? ಆಹಾರ ಪರೀಕ್ಷೆಗೆ ಲ್ಯಾಬ್‌ ಅಥವಾ ಸಾಧನಗಳೇನು? ಅದಕ್ಕಿರುವ ಮಾನದಂಡಗಳೇನು? ಯಾವುದೂ ಹೇಳಿಲ್ಲ. ಏಕೆಂದರೆ, ಅವರಿಗೇ ಗೊತ್ತಿಲ್ಲ.

ಇಂಥ ಗೊತ್ತಿಲ್ಲಗಳೇ ಇರುವ ಸುತ್ತೋಲೆ ತೀರ ಅಪ್ರಾಯೋಗಿಕವಾಗಿರುವುದು ಮೊದಲ ಹಂತದಲ್ಲೇ ಕಂಡು ಬಡುತ್ತಿದೆ. ದೇವಸ್ಥಾನಗಳನ್ನು, ಧಾರ್ಮಿಕ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ದಿನಕ್ಕೊಂದು ನೀತಿಗಳನ್ನು ರೂಪಿಸುವುದರಲ್ಲಿ ಪರಿಣಿತರಾಗಿರುವ ಇವರು, ತಟ್ಟೆಗೆ ಹಾಕಿದ ಹಣ ಪೂಜಾರಿಗೆ, ಹುಂಡಿಗೆ ಹಾಕಿದ ಹಣ ದೇವರಿಗೆ ಎಂಬ ನಾಮಫಲಕಗಳನ್ನು ಗರ್ಭಗುಡಿಯ ಪಕ್ಕದಲ್ಲೇ ಅಳವಡಿಸಿದ್ದರು. ಈಗ ಈ ಘಟನೆಯಲ್ಲಿ ಪರಿಹಾರ ಕಂಡು ಹಿಡಿಯುವ ಬದಲು, ನೀತಿಗಳನ್ನು ಹೇರಿ, ಅದು ಪಾಲನೆಯಾಗುತ್ತಿಲ್ಲವೆಂಬ ನೂರು ಕಾರಣ ನೀಡಿ ಮತ್ತಷ್ಟು ದೇವಸ್ಥಾನಗಳನ್ನು ಕಬಳಿಸುವ ತಂತ್ರವೇ ಹೆಚ್ಚಾಗಿ ಕಾಣುತ್ತಿದೆ. ಅಥವಾ ಮುಂದೆಂದಾದರೂ ಇಂಥ ಪ್ರಕರಣಗಳು ಮತ್ತೆ ಸಂಭವಿಸಿದರೆ, ಇಲಾಖೆಯಿಂದ ಯಾವುದೇ ತಪ್ಪು ಇರಬಾರದೆಂದು, ನೋಡಿ ನಾವು ಇಂಥ ನೀತಿಯನ್ನು ಆಗಲೇ ತಂದಿದ್ದೇವೆ ಎಂದು ಕೈ ತೊಳೆದುಕೊಳ್ಳುವುದಕ್ಕಾಗಿಯೂ ಇಂಥ ನೀತಿಗಳನ್ನು ಪರಿಚಯಿಸಿರಲಿಕ್ಕೂ ಸಾಕು.
ಕೇವಲ ಒಂದು ಪ್ರಕರಣಕ್ಕೆ ಇಡೀ ವ್ಯವಸ್ಥೆ, ಪದ್ಧತಿ, ಆಚಾರ, ವಿಚಾರಗಳನ್ನೇ ಬದಲಿಸುತ್ತಾರೆಂದರೆ, ಸರ್ಕಾದಲ್ಲಿ ನಡೆಯುವ ಅನ್ಯಾಯ ಅಕ್ರಮವನ್ನು ತಡೆಯುವುದಕ್ಕೆ ನೇರ ಜನರಿಗೇ ಹೇಳುತ್ತಾರಾ? ಅಥವಾ ಇನ್ಯಾವ ಸಮಿತಿ ರಚಿಸುತ್ತಾರೆ? ಇಂದಿರಾ ಕ್ಯಾಂಟೀನ್‌ನಲ್ಲಿ ರುಚಿ ಶುಚಿ ಇಲ್ಲದಿದ್ದರೂ ಪರವಾಗಿಲ್ಲ. ಸರ್ಕಾರವೇ ಮಕ್ಕಳಿಗೆ ಕೊಡುವ ಬಿಸಿ ಊಟದಲ್ಲಿ ಎಷ್ಟೋ ಮಕ್ಕಳು ಅಸ್ವಸ್ಥರಾದರೂ ಅಡ್ಡಿಯಿಲ್ಲ. ಆದರೆ, ದೇವಸ್ಥಾನದ ಪುಳಿಯೋಗರೆಗೆ ಮಾತ್ರ ಪರ್ಮಿಟ್‌ ಬೇಕು! ಇದೇ ಈ ನೆಲದ ಕಾನೂನು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya