ಕಳ್ಳ ಮಿಶೆಲ್‌ನನ್ನು ಭಾರತಕ್ಕೆ ತಂದ ಅಜಿತ್‌ ಧೋವಲ್‌ರ ರೋಚಕ ಕಥೆ

!

 

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಶೆಲ್‌ನನ್ನು ದುಬೈ ಸರ್ಕಾರ ಗಡಿಪಾರು ಮಾಡಿ ದೆಹಲಿಗೆ ವಿಶೇಷ ವಿಮಾನದಲ್ಲಿ ಡಿಸೆಂಬರ್‌ 5ಕ್ಕೆ ಬಂದು ಇಳಿದಿದ್ದಾನೆ. 3600 ಕೋಟಿ ರು.ಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಇವನೇ ಪ್ರಮುಖ ಹಾಗೂ ಜೀವಂತ ಸಾಕ್ಷಿ, ಆರೋಪಿ. ಇವನನ್ನು ಕರೆತರುವುದು ಭಾರತಕ್ಕೆ ದೊಡ್ಡ ಸಾಹಸವೇ. ಇದನ್ನು ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ಎಂದು ಬಣ್ಣಿಸಿದರೂ ಅತಿಶಯೋಕ್ತಿಯಲ್ಲ. 12 ವರ್ಷದ ಹಿಂದೆ ಶುರುವಾದ ಈ ಭ್ರಷ್ಟಾಚಾರ ವ್ಯವಹಾರವನ್ನು ಅಲ್ಪಾವಧಿಯಲ್ಲಿ ಅರ್ಥ ಮಾಡಿಕೊಂಡು ನಾಲ್ಕೇ ವರ್ಷದಲ್ಲಿ ಪ್ರಮುಖ ಆರೋಪಿಯನ್ನು ಕರೆತರುವ ಸಿಬಿಐಯ ಕೆಲಸ ಸುಲಭದ ಮಾತಲ್ಲ. ನಿಜವಾಗಿ ಹೇಳುವುದಾದರೆ, ಈ ಆಪರೇಷನ್‌ಗೂ ಸರ್ಜಿಕಲ್‌ ಸ್ಟ್ರೈಕ್‌ನ ಮಾಸ್ಟರ್‌ಮೈಂಡ್‌ ಅಜಿತ್‌ ಧೋವಲ್‌ ಅವರೇ ಸೂತ್ರಧಾರ. ಇವರಿಲ್ಲದಿದ್ದರೆ, ಇನ್ನಷ್ಟು ವರ್ಷ ಮಿಶೆಲ್‌ ಆಟವಾಡಿಸುತ್ತಿದ್ದನು ಅಥವಾ ಸಿಗುತ್ತಲೇ ಇರಲಿಲ್ಲ.
ಹಾಗಾದರೆ, ಈ ಪ್ರಕರಣ ಶುರುವಾಗಿದ್ದು ಹೇಗೆ? ಅಜಿತ್‌ ಧೋವಲ್‌ ಹೇಗೆ ಪ್ಲಾನ್‌ ಮಾಡಿದ್ದರು? ಮಿಶೆಲ್‌ ಸಿಬಿಐನವರನ್ನು ಹೇಗೆಲ್ಲಾ ಆಟ ಆಡಿಸಿದ್ದ? ಇವೆಲ್ಲ ಒಂದು ಸಿನಿಮಾ ಮಾಡಬಹುದಾದಷ್ಟು ಸಂಗತಿಗಳಿವೆ. ಇದನ್ನು ಸಿಬಿಐ ಮತ್ತು ಹಲವಾರು ಮೂಲಗಳಿಂದ ಮಾಹಿತಿ ಕಲೆ ಹಾಕಿ ನಿಮ್ಮ ಮುಂದಿಡುತ್ತಿದ್ದೇನೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌:
ಅಗಸ್ಟಾ ವೆಸ್ಟ್‌ಲ್ಯಾಂಡ್‌ ಮೇಲೆ ಇದೇ ಮೊದಲ ಪ್ರಕರಣವಲ್ಲ, ಬದಲಿಗೆ ಇನ್ನೂ ಎರಡು ದೊಡ್ಡ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕೊರಿಯಾ, ಭಾರತ ಮತ್ತು ಪನಾಮಾದಲ್ಲಿ ಇದರ ಭ್ರಷ್ಟಾಚಾರದ ಕೈಗಳು ಚಾಚಿವೆ. ದಕ್ಷಿಣ ಕೊರಿಯಾದಲ್ಲಿ ವೈಲ್ಡ್‌ಕ್ಯಾಟ್‌ ಹೆಲಿಕಾಪ್ಟರ್‌ಗಳನ್ನು ದಕ್ಷಿಣ ಕೊರಿಯಾ ಸೇನೆಗೆ ಮಾರಿತ್ತು. ಕಳಪೆ ಮಟ್ಟದ ಹೆಲಿಕಾಪ್ಟರ್‌ಗಳನ್ನು ಮಾರಲು ತಮ್ಮ ಕಂಪನಿಗೇ ಟೆಂಡರ್‌ ಬರುವಂತೆ, ಸೇನೆಯಲ್ಲಿದ್ದ ಮತ್ತು ಸೇನೆಗೆ ಆಪ್ತವಾಗಿರುವ ಕೆಲವರಿಗೆ ಕೋಟಿಗಟ್ಟಲೆ ಹಣ ಕೊಟ್ಟಿತ್ತು ಅಗಸ್ಟಾ ವೆಸ್ಟ್‌ಲ್ಯಾಂಡ್‌. ಆದರೆ ಈ ಪ್ರಕರಣ ಹೊರಬಂದು ಅಲ್ಲಿನ ಕೆಲ ಮಧ್ಯವರ್ತಿಗಳಿಗೆ ಶಿಕ್ಷೆ ಸಹ ಆಗಿದೆ.

ಇನ್ನು ಭಾರತದಲ್ಲಿ ಏನಾಗಿದೆ ಎಂಬುದು ಗೊತ್ತೇ ಇದೆ. ಭಾರತಕ್ಕೆ ವಿವಿಐಪಿಗಳು ಪ್ರಯಾಣ ಮಾಡುವುದಕ್ಕೆ ಬಳಸುವ ವಿಶೇಷ ಹೆಲಿಕಾಪ್ಟರ್‌ಗಳು ಭೂಮಿಯಿಂದ 6000 ಮೀಟರ್‌ಗಳ ಅಂತರದಲ್ಲಿ ಹಾರಾಟ ನಡೆಸುವಂಥದ್ದಾಗಿರಬೇಕು ಎಂದು ನಿಯಮವಿತ್ತು. ಆದರೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ಗಳಿಗೆ ಆ ಅಂತರದಲ್ಲಿ ಹಾರಾಟ ಮಾಡುವ ಸುರಕ್ಷತಾ ಪರವಾನಗಿ ಇರಲಿಲ್ಲ. ಹೀಗಾಗಿ ಟೆಂಡರ್‌ ತಮಗೇ ಸಿಗಬೇಕು ಎಂಬ ಕಾರಣಕ್ಕೆ ಈ ಅಂತರವನ್ನು 4500 ಮೀಟರ್‌ಗಳಿಗೆ ಇಳಿಸಿ ಮಾರಲು ಪ್ಲಾನ್‌ ಆಗಿತ್ತು. ಇದಕ್ಕೆ ಆಡಳಿತ ಹಂತದಲ್ಲಿರುವ ಕಾಂಗ್ರೆಸ್‌ ಕುಟುಂಬಕ್ಕೆ ಹಣ ನೀಡಿದ್ದ ವ್ಯಕ್ತಿ ಇದೇ ಕ್ರಿಶ್ಚಿಯನ್‌ ಮಿಶೆಲ್‌. ಇನ್ನು ಹಾರಾಟದಲ್ಲೂ ಕ್ಲಿಯರೆನ್ಸ್‌ ಪಡೆದುಕೊಳ್ಳಲು ಏರ್‌ಚೀಫ್‌ ಮಾರ್ಷಲ್‌ ಎಸ್‌ಪಿ ತ್ಯಾಗಿ ಅವರಿಗೆ ಅವರ ಸಹೋದರಿ ಜೂಲಿ ತ್ಯಾಗಿಯ ಮೂಲಕ ಹಣ ಕೊಟ್ಟಿದ್ದ ಇದೇ ಮಿಶೆಲ್‌.
ಇನ್ನು ಪನಾಮಾ ದೇಶದಲ್ಲೂ ಯುದ್ಧ ಪರಿಕರಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಮಾರಿದ್ದರು. ಆದರೆ ಅಲ್ಲಿನ ರಾಷ್ಟ್ರಾಧ್ಯಕ್ಷರ ವಿರುದ್ಧವೇ ಕಿಕ್‌ಬ್ಯಾಕ್‌ ಆರೋಪ ಕೇಳಿ ಬಂದು, ಒಪ್ಪಂದವನ್ನು ಅಂತ್ಯಗೊಳಿಸಲಾಗಿತ್ತು. ಇವೆಲ್ಲ ಸಂಗತಿಗಳು ಯುಕೆಯ ಕರಪ್ಷನ್‌ ವಾಚ್‌ ವರದಿಯಲ್ಲಿದೆ. ಸಿಬಿಐಗೆ ಇದು ಅಧಿಕೃತ ದಾಖಲೆಯಾಗದಿದ್ದರೂ, ಅಧಿಕಾರಿಗಳು ಇದನ್ನೇ ಆಧಾರವಾಗಿಟ್ಟುಕೊಂಡು ಮತ್ತಷ್ಟು ಭ್ರಷ್ಟಾಚಾರದ ಬೇಟೆ ಮುಂದುವರಿಸಿದ್ದರು.

ಕ್ರಿಶ್ಚಿಯನ್‌ ಮಿಶೆಲ್‌ ಎಂಟ್ರಿ ಹೇಗೆ?
ಈ ಡೀಲ್‌ನಲ್ಲಿ ಮೊದಲು ಕ್ರಿಶ್ಚಿಯನ್‌ ಮಿಶೆಲ್‌ ಇರಲಿಲ್ಲ. ಮಿಶೆಲ್‌ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿಚಾರದಲ್ಲಿ ಭಾರತಕ್ಕೆ ಬರುವುದಕ್ಕಿಂತ ಮುಂಚೆ, ಅಲ್ಲಿದ್ದಿದ್ದು ಗ್ಯುಸಿಪ್ಪಿ ಓರ್ಸಿ ಮತ್ತು ಬ್ರೂನೊ ಸ್ಪ್ಯಾಗ್ನೊಲಿನಿ. 2013ರಲ್ಲಿ ಸರಕುಪಟ್ಟಿಯ ವಂಚನೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಇಟಲಿಯಲ್ಲಿ ಇವರ ಬಂಧನವಾಗುತ್ತೆ. ಅಲ್ಲಿನ ಕೆಳ ಹಂತದ ಕೋರ್ಟ್‌, ಸರಕುಪಟ್ಟಿಯ ವಂಚನೆ ಆರೋಪವನ್ನು ಪರಿಗಣಿಸಿ ಎರಡು ವರ್ಷದ ಅಲ್ಪಾವಧಿಯ ಶಿಕ್ಷೆ ನೀಡುತ್ತದೆ. ಹಾಗೆ ಆಗುವುದಕ್ಕಿಂತ ಮುಂಚೆ ಇವರಿಬ್ಬರು ಭಾರತಕ್ಕೆ ಮೂರು ಮಧ್ಯವರ್ತಿಗಳನ್ನು ನೇಮಿಸಿರುತ್ತಾರೆ. ಗೈಡೊ ಹಾಷ್ಕೆ, ಕಾರ್ಲೊಸ್‌ ಗೆರೋಸಾ ಮತ್ತು ಕ್ರಿಶ್ಚಿಯನ್‌ ಮಿಶೆಲ್‌. ಮೊದಲಿಗೆ ಮುಖ್ಯವಾಗಿ ನೋಡಿಕೊಳ್ಳುತ್ತಿದ್ದದ್ದು ಗೈಡೊ ಹಾಷ್ಕೆ. ಆದರೆ, ಕ್ರಿಶ್ಚಿಯನ್‌ ಮಿಶೆಲ್‌ ದುಬೈಲೇ ಮನೆ ಮಾಡಿಕೊಂಡಿದ್ದು, ಭಾರತ ಮತ್ತು ಕಾಂಗ್ರೆಸ್‌ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾನೆ ಮತ್ತು ಭಾರತದ ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾನೆ ಎಂದು ಅವನನ್ನು ಮುನ್ನೆಲೆಗೆ ತಂದಿದ್ದ ಹಾಷ್ಕೆ.

ಅಕ್ಟೋಬರ್‌ 2014ರಲ್ಲಿ ಇಟಲಿಯ ಸುಪ್ರೀಂಕೋರ್ಟ್‌ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕೇವಲ ಸರಕುಪಟ್ಟಿಯ ವಂಚನೆಯಷ್ಟನ್ನೇ ಮಾಡಿಲ್ಲ, ಭ್ರಷ್ಟಾಚಾರವನ್ನೂ ಎಸಗಿದೆ ಎಂದು ಪರಿಗಣಿಸಿ, ಕೆಳ ಹಂತದ ಕೋರ್ಟ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಆ ವೇಳೆಗೆ ಆಗಲೇ ಓರ್ಸಿ ಮತ್ತು ಸ್ಪ್ಯಾಗ್ನೊಲಿನಿ ನೇಮಿಸಿರುವ ಮೂವರು ಬೇರೆ ಬೇರೆ ದೇಶಗಳಲ್ಲಿದ್ದರು. ಹಾಗಾಗಿ ಅವರೆಲ್ಲ ಬಚಾವ್‌ ಆದರು.

ಮಿಶೆಲ್‌ ಬಂಧನದ ಹಿಂದೆ ಪ್ಲಾನ್‌
ಇಟಲಿಯಲ್ಲಿ ತನ್ನ ಮೇಲೆ ಆರೋಪವಿದ್ದಿದ್ದರಿಂದ ದುಬೈಯನ್ನೇ ಮನೆ ಮಾಡಿಕೊಂಡಿರುವ ಈ ಯುಕೆ ಪ್ರಜೆ ಮಿಶೆಲ್‌ ಆಗಾಗ ಕಾಣೆಯಾಗುತ್ತಿದ್ದ. ಸಿಬಿಐ ಮತ್ತು ಸದ್ದಿಲ್ಲದೇ ಭಾರತೀಯ ಗುಪ್ತಚರ ಇಲಾಖೆ (ರಾ) ಸಹ ಇವನನ್ನು ಹುಡುಕುತ್ತಿರುವ ಮಾಹಿತಿ ಪಡೆದಿದ್ದ ಮಿಶೆಲ್‌, ಎಷ್ಟೋ ಬಾರಿ, ಮುಸ್ಲಿಮರಂತೆ ಉದ್ದನೆಯ ಜುಬ್ಬಾ, ಟೊಪ್ಪಿ ಧರಿಸಿ ಮರೆಯಾಗುತ್ತಿದ್ದ. ಒಮ್ಮೆಯಂತೂ ಸ್ತ್ರೀ ವೇಷದಲ್ಲಿ ಪರಾರಿಯಾಗಿದ್ದ.
ಆದರೆ, ಈ ಆಟ ಬಹಳ ದಿನ ನಡೆಯಲಿಲ್ಲ. ಜುಲೈ 18ಕ್ಕೆ ಅವನನ್ನು ದುಬೈ ಪೊಲೀಸರು ಬಂಧಿಸುತ್ತಾರೆ. ಆದರೆ ಹೇಗೆ? ಅದೂ ಹೇಗೆ? ಅಜಿತ್‌ ಧೋವಲ್‌ ಅವರ ಮಾಹಿತಿಯ ಆಧಾರದ ಮೇಲೆ ಅವನ ಬಂಧನವಾಗುತ್ತದೆ. ಇಂತಿಷ್ಟು ಗಂಟೆಗೆ, ಇಂಥ ದೇಶದಿಂದ ಎಮಿರೈಟ್ಸ್‌ ವಿಮಾನದಲ್ಲಿ ಕ್ರಿಶ್ಚಿಯನ್‌ ಮಿಶೆಲ್‌ ಬರುತ್ತಿದ್ದಾನೆ, ಅವನನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿ. ಇಲ್ಲವಾದರೆ ಅವನ ಪ್ಲಾನ್‌ ಬೇರೆ ಇದೆ ಎಂದು ಹೇಳಿದ ಮೇಲೇ ದುಬೈ ಪೊಲೀಸರು ಬಂಧಿಸಿದ್ದರು. ಇವನು ಕ್ರಿಶ್ಚಿಯನ್‌ ಮಿಶೆಲ್‌ ಅಲ್ಲದೇ ಬೇರೆ ಯಾವನೇ ಆಗಿದ್ದರೂ ದುಬೈ ಪೊಲೀಸರು ವಿಮಾನ ನಿಲ್ದಾಣದಿಂದಲೇ ಗಡಿಪಾರು ಮಾಡಿರುತ್ತಿದ್ದರು. ಇದು ಯುಎಇ ನಿಯಮ. ಆದರೆ ಬಂದಿರುವುದು ಪ್ರಪಂಚದ ಟಾಪ್‌ 10ರ ಒಳಗಿರುವ ಡಿಫೆನ್ಸ್‌ ಕಂಪನಿಯ ಮಧ್ಯವರ್ತಿಯಾಗಿದ್ದರಿಂದ, ಅಲ್ಲಿಂದ ಅವನನ್ನು ಜೈಲಿಗೆ ಕರೆದೊಯ್ದು, ನಂತರ ಆಗಸ್ಟ್‌ 26ಕ್ಕೆ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ಪಾಪದ ಕೊಡ ತುಂಬಿರಲಿಲ್ಲ, ಹಾಗಾಗಿ ಸೆಪ್ಟೆಂಬರ್‌ 2ಕ್ಕೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡಿಸಿದ್ದ!
ಮಿಶೆಲ್‌ ಏನು ಕಡಿಮೆ ಆಟದ ಆಸಾಮಿಯಲ್ಲ. ನೀವೆಲ್ಲ ಕೆಲ ದಿನಗಳ ಹಿಂದೆ ಅಥವಾ ದುಬೈ ಕೋರ್ಟ್‌ನಿಂದ ಜಾಮೀನು ಪಡೆದ ಮೇಲೆ ನಮ್ಮ ಭಾರತೀಯ ಮಾಧ್ಯಮಗಳು ಸುದ್ದಿ ಮಾಡಿದ್ದನ್ನು ನೋಡಿರುತ್ತೀರಿ. ಪ್ರತಿ ಹಂತದಲ್ಲೂ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಿನ್ನಡೆ, ಅಧಿಕಾರಿಗಳ ಬಳಿ ದುಬೈ ಕೋರ್ಟ್‌ ದಾಖಲೆ ಕೇಳಿದಾಗ, ಅಧಿಕಾರಿಗಳು ಕಾಲಾವಕಾಶ ಕೇಳಿದರು, ದಾಖಲೆ ಕೊಡುವುದಕ್ಕೆ ವಿಫಲರಾದರು ಇತ್ಯಾದಿಗಳನ್ನು ಕೇಳಿರುತ್ತೀರಿ, ಓದಿರುತ್ತೀರಿ. ಆದರೆ, ಇದೆಲ್ಲ ಶುದ್ಧ ಸುಳ್ಳು. ಮಿಶೆಲ್‌ನ ಬಗ್ಗೆ ಹೊರಗೆ ಏನೂ ತಿಳಿಯಬಾರದು ಮತ್ತು ವಂಶಾಡಳಿತ ಮಾಡುವ ಪಕ್ಷಕ್ಕೆ ಇದರಿಂದ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಿಶೆಲ್‌ ಮತ್ತು ಅವನ ವಕೀಲರು ಭಾರತೀಯ ಮಾಧ್ಯಮಗಳಿಗೆ ಸುಳ್ಳು ಸುದ್ದಿಗಳನ್ನು ನೀಡುತ್ತಾ ಬಂದಿದ್ದರು. ಕೆಲ ಭಾರತೀಯ ಮಾಧ್ಯಮಗಳು ಮಿಶೆಲ್‌ ಎಂಜಲು ತಿನ್ನುತ್ತಿದ್ದಿದ್ದರಿಂದ ಅವನ ಪರವಾಗೇ ವರದಿ ಮಾಡಿ, ಸಿಬಿಐ-ಇಡಿ ಅಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಮಾಡುತ್ತಿದ್ದರು.

ಹಗಲು ರಾತ್ರಿ ನಿದ್ದೆಗೆಟ್ಟಿದ್ದ ಅಧಿಕಾರಿಗಳು
12 ವರ್ಷದ ಭ್ರಷ್ಟಾಚಾರ ಪ್ರಕರಣವನ್ನು 4 ವರ್ಷದಲ್ಲಿ ಸಾಲ್ವ್‌ ಮಾಡುವುದಲ್ಲದೇ, ಹಿಡಿಯಲೂ ಬೇಕಿತ್ತು. ಇದು ಸುಲಭದಲ್ಲಿರಲಿಲ್ಲ. ಏಕೆಂದರೆ, ವಿಮಾನ, ಹೆಲಿಕಾಪ್ಟರ್‌ ಬಗ್ಗೆ ಸಿಬಿಐಗಾಗಲಿ ಅಥವಾ ಜಾರಿ ನಿರ್ದೇಶನಾಲಯಕ್ಕಾಗಲಿ ನಯಾ ಪೈಸೆ ಜ್ಞಾನವಿರಲಿಲ್ಲ. ಆದರೆ ಭ್ರಷ್ಟಾಚಾರ ಆಗಿದೆ ಎಂಬುದು ಮಾತ್ರ ಗೊತ್ತಿತ್ತು. ಹೆಲಿಕಾಪ್ಟರ್‌, ವಿಮಾನ, ಅಗಸ್ಟಾ ವೆಸ್ಟ್‌ಲ್ಯಾಂಡ್‌, ಮಿಶೆಲ್‌ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಸಾಕ್ಷಿಗಳನ್ನು ಒಟ್ಟು ಮಾಡುವುದಕ್ಕೆ ಒಟ್ಟು 2 ಲಕ್ಷ ಕಡತಗಳನ್ನು ಅಧಿಕಾರಿಗಳು ಓದಬೇಕಾಯ್ತು. ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಇದು ಲಿಂಕ್‌ ಆಗಿದೆ ಎಂಬುದನ್ನು ನಿರಂತರ ಅಧ್ಯಯನ ಮಾಡಿ ಸರಿಯಾಗಿ ದಾಖಲೆಗಳನ್ನು ಜೋಡಿಸಿದ್ದರ ಕೀರ್ತಿ ಸಿಬಿಐ ಮತ್ತು ಇಡಿ ಅಧಿಕಾರಿಗಳಿಗೆ ಸಲ್ಲಬೇಕು. ಇವರಿಗೆ ಬೇಕಾದ ಸಹಾಯ ಮಾಡುತ್ತಿದ್ದವರು ಮತ್ತದೇ ಅಜಿತ್‌ ಧೋವಲ್‌.

ದುಬೈ -ಯುಕೆ ಅತ್ಯಾಪ್ತ ಸಂಬಂಧ
ಎಲ್ಲರೂ ತಿಳಿದಿರಬಹುದು. ಈ ಕ್ರಿಶ್ಚಿಯನ್‌ ಮಿಶಲ್‌ರನ್ನು ಆರಾಮಾಗಿ ಕರೆದುಕೊಂಡು ಬಂದರು ಎಂದು. ಆದರೆ ದುಬೈ ಮಟ್ಟಿಗೆ ಅದು ಸಾಧ್ಯವಿರಲಿಲ್ಲ. ಇದು ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ಆಪರೇಷನ್‌ ಎಂದು ಏಕೆ ಹೇಳುತ್ತೇನೆಂದರೆ, ದುಬೈಗೆ ಮತ್ತು ಯುಕೆಗೆ ಅಂಥ ಸಂಬಂಧ ಇರುವುದರಿಂದ. ದುಬೈನ ಮೂಲಸೌಕರ್ಯಗಳ ಶಿಲ್ಪಿ ಅಂತ ಯಾರಾದರೂ ಇದ್ದರೆ ಅದು ಯುಕೆ. ಅಲ್ಲಿನ ಅನೇಕ ಯೋಜನೆಗಳನ್ನು ರೂಪಿಸಿಕೊಟ್ಟವರೇ ಯುಕೆ ದೇಶದವರು. ಅಂದರೆ, ದುಬೈಗೆ ಯುಕೆ ಅಷ್ಟರ ಮಟ್ಟಿಗೆ ಬೇಕಾದ ರಾಷ್ಟ್ರ. ಈ ವಿಷಯ ಗೊತ್ತಿದ್ದೇ, ಯುಕೆ ಪ್ರಜೆಯಾದ ಮಿಶೆಲ್‌, ದಶಕಗಳಿಂದಲೂ ದುಬೈ/ಯುಎಇ ಅನ್ನು ತನ್ನ ಮನೆಯನ್ನಾಗಿಸಿಕೊಂಡಿದ್ದ. ಅಲ್ಲೇ ಬಿಜಿನೆಸ್‌, ಅಲ್ಲೇ ಮನೆ. ಒಂದು ಸಮುದ್ರ ದಾಟಿದರೆ ಸಿಗುವ ಭಾರತ ಸಹ ತನ್ನನ್ನೇನೂ ಮಾಡಿಕೊಳ್ಳಲಾಗುವುದಿಲ್ಲ ಎಂಬ ಆತ್ಮವಿಶ್ವಾಸ ಇತ್ತು. ಆದರೆ ಸಿಬಿಐ ಮತ್ತು ಇ.ಡಿ.ಯವರು ದುಬೈ ಕೋರ್ಟ್‌ಗೆ ನೀಡಿದ ದಾಖಲೆ ಎಷ್ಟು ಶಕ್ತಿಶಾಲಿಯಾಗಿತ್ತು ಎಂದರೆ, ದುಬೈ ನ್ಯಾಯಾಲಯಕ್ಕೆ ಗಡಿಪಾರು ಮಾಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

ಮಿಶೆಲ್‌-ಸಿಬಿಐ ಸಂಭಾಷಣೆ ಹಾಗೂ ಕರೆತಂದದ್ದು ಹೇಗೆ?
ನವೆಂಬರ್‌ 20ಕ್ಕೆ ದುಬೈ ಕೋರ್ಟ್‌ನಲ್ಲಿ ಮಿಶೆಲ್‌ ಸೋತ. ಆದರೆ, ದುಬೈ ಪ್ರಜಾಪ್ರಭುತ್ವ ಅಲ್ಲದ ರಾಷ್ಟ್ರವಾಗಿದ್ದ ಅಲ್ಲಿನ ಕಾನೂನು ಸಚಿವ, ತಾನು ಮಿಶೆಲ್‌ನನ್ನು ಗಡಿಪಾರು ಮಾಡುವುದಿಲ್ಲ ಎಂದರೆ, ಮುಗಿದೇ ಹೋಯಿತು. ಬೇರೆ ದಾರಿ ಇರುತ್ತಿರಲಿಲ್ಲ ಸಿಬಿಐಗೆ. ಆದರೆ, ಕೋರ್ಟ್‌ನಲ್ಲಿ ಗ್ರೀನ್‌ ಸಿಗ್ನಲ್‌ ಸಿಕ್ಕರೂ ಸಹ ಹಿಗ್ಗದೇ ಸುಮ್ಮನೆ ಡಿಸೆಂಬರ್‌ 4ರವರೆಗೆ ತಾಳ್ಮೆಯಿಂದ ಭಾರತೀಯ ಅಧಿಕಾರಿಗಳು ಕಾದರು.

ಆದರೆ ಮಿಶೆಲ್‌ ಪಾಪದ ಕೊಡ ತುಂಬಿದ್ದಕ್ಕೋ ಅಥವಾ ಭಾರತದ ಪುಣ್ಯಕ್ಕೋ ಅಲ್ಲಿನ ಕಾನೂನು ಸಚಿವರೂ ಕೋರ್ಟ್‌ ತೀರ್ಪನ್ನೇ ಅಂತಿಮ ಎಂದುಬಿಟ್ಟರು. ಮಿಶೆಲ್‌ನನ್ನು ಭಾರತಕ್ಕೆ ಕಳುಹಿಸುವ ದಿನ ದುಬೈನ ಪೊಲೀಸರು ಎಲ್ಲ ತಯಾರಿ ಮಾಡಿಕೊಳ್ಳಿ ಎಂದು ಸಿಬಿಐ ಅಧಿಕಾರಿಗಳಿಗೆ ಹೇಳುವುದಿಲ್ಲ. ಅದಕ್ಕಿಂತಲೂ ಉನ್ನತ ಮಟ್ಟದಲ್ಲಿರುವವರಿಗೆ ಹೇಳುತ್ತಾರೆ. ಹಾಗೆ ಮೆಸೇಜ್‌ ಸಿಕ್ಕ ಮೇಲೆ ವಿಶೇಷ ವಿಮಾನ ತಯಾರಿ ಮಾಡಿಕೊಳ್ಳುವುದಕ್ಕೆ ಸಿಬಿಐಗೆ ಇದ್ದ ಕಾಲಾವಕಾಶ ಕೇವಲ 4 ಗಂಟೆಗಳು ಮಾತ್ರ. ಆ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ಮತ್ತದೇ ಅಜಿತ್‌ ಧೋವಲ್‌. ಅವರ ಸಹಾಯದಿಂದ ಸರಿಯಾದ ಸಮಯಕ್ಕೆ ವಿಮಾನ ವ್ಯವಸ್ಥೆಯಾಗಿತ್ತು.

ಕ್ರಿಶ್ಚಿಯನ್‌ ಮಿಶೆಲ್‌ ಬಂದ, ವಿಮಾನ ಹತ್ತಿದ. ಆದರೆ ಆಗ ಆತ ಬಹಳ ಕೋಪದಲ್ಲಂತೂ ಇದ್ದ. ಇದನ್ನು ಸಿಬಿಐ ಅಧಿಕಾರಿಗಳು ಕಂಡುಕೊಂಡರು. ಹೆಚ್ಚೂ-ಕಡಿಮೆ ಬೆಳಗಿನ ಜಾವ 2 ಗಂಟೆಯ ವೇಳೆಗೆ ಅವನೇ ಮಾತು ಆರಂಭಿಸಿ, ‘ಈ ಗಡಿಪಾರು ಪ್ರಕ್ರಿಯೆಯೇ ಮೋಸ. ನನ್ನನ್ನು ಹೈಜಾಕ್‌ ಮಾಡಲಾಗುತ್ತಿದೆ’ ಎಂದು ಹೇಳಿದ. ಆಗ ಅಲ್ಲಿದ್ದ ಅಧಿಕಾರಿಗಳು ಅಷ್ಟೇ ಖಾರವಾಗಿ ಉತ್ತರಿಸಿದ್ದು ಹೀಗೆ, ‘ನೀನು ಇಂದಲ್ಲ ನಾಳೆ ಬರಲೇಬೇಕಿತ್ತು. ನೀನು ಮಾಡಿರುವುದು ಕೆಟ್ಟ ದಂಧೆ ಎಂದು ಗೊತ್ತಾಗೇ ನೀನು ಅಷ್ಟು ಬಾರಿ ಪ್ರಯತ್ನ ಮಾಡಿದರೂ ದುಬೈ ನಿನ್ನನ್ನು ಇಟ್ಟುಕೊಳ್ಳಲಿಲ್ಲ. ನ್ಯಾಯ, ನೀತಿಯ ಬಗ್ಗೆ ನಮ್ಮ ಬಳಿ ಮಾತಾಡಕ್ಕೆ ಬರಬೇಡ. ನಿನ್ನ ಮಾತಿನ ಮೇಲೆ ನಿಗಾ ಇರಲಿ’ ಎಂದು ಚಾರ್ಜ್‌ ಮಾಡಿದ್ದಾರೆ. ಇದಕ್ಕೇ ಸುಸ್ತಾದ ಮಿಶೆಲ್‌ ಮತ್ತೊಂದು ಮಾತಾಡಿಲ್ಲ. ದೆಹಲಿಗೆ ಬಂದ ಮೇಲೆ ಆತನಿಗೆ ಇತರೆ ಸಿಬಿಐ ಅಧಿಕಾರಿಗಳು ವೆಲ್‌ಕಂ ಟು ದಿಲ್ಲಿ ಕ್ರಿಶ್ಚಿಯನ್‌ ಮಿಶೆಲ್‌ ಎಂದಾಗ, ಎದೆಯಲ್ಲಿ ನಡುಕ ಹುಟ್ಟಿ ಪೆಚ್ಚಾಗಿದ್ದ.

ದುಬೈ ಆತಿಥ್ಯ
ದುಬೈ ಪೊಲೀಸರು ಭಾರತೀಯ ಅಧಿಕಾರಿಗಳಿಗೆ ಉತ್ತಮ ಆತಿಥ್ಯ ನೀಡುತ್ತಿದ್ದರು. ಬಹಳ ಪ್ರೀತಿಯಿಂದಲೇ ನೋಡಿಕೊಂಡರು. ಇದಕ್ಕೆ ಕಾರಣ ಪ್ರಧಾನಿ ಮೋದಿಯ ರಾಜತಾಂತ್ರಿಕತೆ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ ಭಾರತದ ಅಧಿಕಾರಿಗಳು ಯಾವ ಆತಿಥ್ಯವನ್ನೂ ಪಡೆಯಲಿಲ್ಲ. ಅವರ ಬಳಿ ಚೆನ್ನಾಗಿಯೇ ಮಾತಾಡಿಕೊಂಡು, ತಮ್ಮ ಸರ್ಕಾರದ ಖರ್ಚಿನಲ್ಲಿ ಏನು ಬೇಕೋ ಅಂಥ ವ್ಯವಸ್ಥೆ ಮಾಡಿಕೊಂಡಿದ್ದರು. ಏಕೆಂದರೆ, ಅವರಿಗೆ ಇದ್ದದ್ದು ಒಂದೇ ಉದ್ದೇಶ: ಕ್ರಿಶ್ಚಿಯನ್‌ ಮಿಶೆಲ್‌ನನ್ನು ಭಾರತಕ್ಕೆ ಕರೆತರಬೇಕು. ಅಷ್ಟೇ.

ಭಾರತೀಯ ಪೊಲೀಸರು ಮೋರಾನ್‌ಗಳು!
ಭಾರತೀಯ ಪೊಲೀಸರು ಎಂದರೆ, ಹೊಟ್ಟೆ ಬಿಟ್ಟವರು, ಫಿಟ್‌ ಇಲ್ಲದವರು, ತಲೆ ಇಲ್ಲದವರು ನಮ್ಮ ದೇಶದ ಜನರು ಮಾತಾಡಿಕೊಳ್ಳುವುದಕ್ಕೋ ಏನೋ, ಅಗಸ್ಟಾ ವೆಸ್ಟ್‌ಲ್ಯಾಂಡ್‌ ಮಧ್ಯವರ್ತಿಗಳಿಗೂ ಹಾಗೇ ಎನಿಸಿದೆ. ಈ ಇಬ್ಬರು ಮಧ್ಯವರ್ತಿಗಳು ತಾವು ಮಾತಾಡಿಕೊಳ್ಳುವಾಗ, ಭಾರತೀಯ ಪೊಲೀಸರನ್ನು ಮೊರಾನ್‌ (ಪೆದ್ದ, ದಡ್ಡ, ಮೂರ್ಖ) ಎಂದು ಸಂಬೋಧಿಸುತ್ತಿದ್ದರು. ‘ಭಾರತೀಯ ಪೊಲೀಸರು ಮೊರಾನ್‌ಗಳು. ಒಮ್ಮೆ ಇದು ಸಿಕ್ಕಿಬಿದ್ದರೂ ಅವರಿಗೆ ಇದು ಏನು ಎಂಬುದೇ ಅರ್ಥವಾಗುವುದಿಲ್ಲ. ಭ್ರಷ್ಟಾಚಾರದ ಕುರುಹು ಸಹ ಇರುವುದಿಲ್ಲ ಏಕೆಂದರೆ, ನಾವು ಎಲ್ಲ ಹಣವನ್ನು ಕ್ಯಾಶ್‌ನಲ್ಲೇ ತ್ಯಾಗಿ ಕುಟುಂಬಕ್ಕೆ ಕೊಟ್ಟಿದ್ದೇವೆ. ಹಾಗಾಗಿ ಹುಡುಕುವುದಕ್ಕೆ ಆಗುವುದಿಲ್ಲ. ಹೆಚ್ಚೆಂದರೆ, ಇದು ತೆರಿಗೆ ಸಂಬಂಧ ಸಮಸ್ಯೆಗಳಾಗಬಹುದು. ಆ ಮೊರಾನ್‌ಗಳು ಅದರ ಬಗ್ಗೆ ದಾಖಲೆ ಜೋಡಿಸುವ ವೇಳೆಗೆ ದಶಕಗಳೇ ಆಗಿರುತ್ತದೆ’ ಎಂದು ಮಾತಾಡಿಕೊಂಡಿದ್ದರು. ಆದರೆ ದಡ್ಡ, ಪೆದ್ದ ಯಾರು ಎಂದು ಅರ್ಥವಾಗುವುದಕ್ಕೆ ಕೇವಲ 4 ವರ್ಷ ಸಾಕಿತ್ತು. ವಿಮಾನದಲ್ಲಿ ವಾಪಸ್‌ ಬರುವಾಗ ಆತನಿಗೆ ತನ್ನ ಮಾತು ನೆನಪಾಗಿರಲಿಕ್ಕೂ ಸಾಕು.

ಇಷ್ಟೆಲ್ಲ ಹೇಗೆ ಸಾಧ್ಯ ಆಯಿತು ಎಂದು ನಾನು ವ್ಯಕ್ತಿಯೊಬ್ಬರ ಬಳಿ ಕೇಳಿದಾಗ ಅವರಿಂದ ನನಗೆ ಬಂದ ಉತ್ತರ ಇಷ್ಟೇ: ಪ್ರಧಾನಿ ಮೋದಿಯವರು ನಮ್ಮ ಪಾಡಿಗೆ ನಾವು ಕೆಲಸ ಮಾಡುವುದಕ್ಕೆ ಬಿಟ್ಟರು. ಜತೆಗೆ ಅಜಿತ್‌ ಧೋವಲ್‌ ಎಂಬ ವಜ್ರಾಯುಧ ಕೊಟ್ಟಿದ್ದರು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya