ಅಮೆರಿಕದಲ್ಲಿ ಹೆಚ್ಚುತ್ತಿದೆ ಹಿಂದೂಗಳ ಮೇಲಿನ ದಾಳಿ

 

ದೀಪಾವಳಿ ಮತ್ತಿತರ ಹಿಂದೂಗಳ ಹಬ್ಬಗಳನ್ನು ಡೊನಾಲ್ಡ್‌ ಟ್ರಂಪ್‌ ವೈಟ್‌ ಹೌಸ್‌ನಲ್ಲಿ ಆಚರಿಸುವುದು ಅಮೆರಿಕದ ಒಂದು ಮುಖವಾದರೆ, ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತೊಂದು ಮುಖವಾಗಿದೆ ಎಂಬುದು ಅಮೆರಿಕದ ಎಫ್‌ಬಿಐಯಿಂದಲೇ ಮತ್ತೊಮ್ಮೆ ಸಾಬೀತಾಗಿದೆ.

ಫೆಡೆರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ ಸಂಸ್ಥೆಯು ಎಂದಿನಂತೆಯೇ 2017ರ ಅಪರಾಧ ಪ್ರಕರಣಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. 2017ರಲ್ಲಿ ಒಟ್ಟು 7,175 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಧರ್ಮ ಆಧಾರಿತ ಹಿಂಸಾಚಾರಗಳು 1,749. ಇದರಲ್ಲಿ ಹುಡುಕಿದರೆ, ಹಿಂದೂ, ಸಿಖ್‌ ಮತ್ತು ಬೌದ್ಧ ಧರ್ಮೀಯರ ಮೇಲಿನ ಹಿಂಸಾಚಾರ ಪ್ರಕರಣಗಳು ಶೇ. 53ರಷ್ಟಿದೆ. ಶೇ. 58ರಷ್ಟು ಹಿಂಸಾಚಾರ ಯಹೂದಿಗಳ ಮೇಲೆ ನಡೆಯುತ್ತಿದೆ.
2015ಕ್ಕೆ ಹೋಲಿಕೆ ಮಾಡಿ ನೋಡಿದರೆ, 2017ರಲ್ಲಿ ಪ್ರತ್ಯೇಕವಾಗಿ ಹಿಂದೂಗಳ ಮೇಲಿನ ಹಿಂಸಾಚಾರವು ಶೇ.200ರಷ್ಟು ಹೆಚ್ಚಳವಾಗಿದೆ. 2013ಕ್ಕೂ ಮುಂಚೆ ಹಿಂದೂಗಳ ಮೇಲೆ ಹಿಂಸಾಚಾರವಾಗುತ್ತಿರುವುದು ದಾಖಲಾಗುತ್ತಲೇ ಇರಲಿಲ್ಲ. ಆದರೆ ಹಿಂದೂ ಅಮೆರಿಕನ್‌ ಪ್ರತಿಷ್ಠಾನದ(ಎಚ್‌ಎಎಫ್‌) ಹೋರಾಟದ ಮೇರೆಗೆ 2013ರಿಂದ ಎಫ್‌ಬಿಐ ಕೋಮು ಹಿಂಸಾಚಾರದ ಪಟ್ಟಿಗೆ ಹಿಂದೂವನ್ನೂ ಸೇರಿಸಿದೆ. ಹಾಗಾದರೆ ಹೆಚ್ಚುತ್ತಿರುವ ಈ ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಒಂದಷ್ಟು ಮಾಹಿತಿ.
ಈ ಬಗ್ಗೆ ಎಚ್‌ಎಎಫ್‌ ನೀಡಿರುವ ಅಂಕಿ ಅಂಶ ಇಲ್ಲಿದೆ.
· ಸಮೀಕ್ಷೆಯಲ್ಲಿ 5ರಲ್ಲಿ 3 ಜನರು ತಮ್ಮ ಶಾಲೆಗಳಲ್ಲಿ ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
· 3ರಲ್ಲಿ ಒಬ್ಬರಿಗೆ ತಮ್ಮ ಧಾರ್ಮಿಕ ನಂಬಿಕೆಗಳು ಟೀಕೆಗೊಳಗಾದ ಅನುಭವವಿದೆ.
· 8ರಲ್ಲಿ ಒಬ್ಬರಿಗೆ ತಮ್ಮ ತರಗತಿಯಲ್ಲಿ ಎಲ್ಲ ಮಕ್ಕಳ ಮುಂದೆ ಹಿಂದೂ ಧರ್ಮ ಮತ್ತು ಆಚರಣೆಗಳನ್ನು ಸ್ವತಃ ಶಿಕ್ಷಕರೇ ಲೇವಡಿ ಮಾಡಿದಂಥ ಅನುಭವವಿದೆ.
· ಒಟ್ಟು ಸಮೀಕ್ಷೆಯಲ್ಲಿ ಅರ್ಧದಷ್ಟು ಜನರು ತಾವು ಹಿಂದೂ ಎಂಬ ಕಾರಣಕ್ಕೆ ಅಮೆರಿಕನ್‌ ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರು ದೂರ ತಳ್ಳಿದ ಅನುಭವವಾಗಿದೆ.

ನನ್ನನ್ನು ಮತಾಂತರ ಮಾಡುವುದಕ್ಕೆ ಅಥವಾ ನನ್ನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದಕ್ಕೆ ಪ್ರಯತ್ನಿಸಿದ ಉದಾಹರಣೆಗಳು ಶಾಲಾ ದಿನಗಳಿಂದಲೇ ಸಿಗುತ್ತದೆ. ಇದನ್ನು ಸಹಿಸಿಕೊಂಡಿರುವುದಕ್ಕೆ ಬಹಳ ಕಷ್ಟವಾಗುತ್ತದೆ. ನನ್ನ ಮನಸ್ಥಿತಿ ಹೇಗೆಂದರೆ, ಅವರು ನನ್ನ ಧರ್ಮವನ್ನು ಹೀಯಾಳಿಸಿದಷ್ಟೂ ನನಗೆ ಧರ್ಮದ ಮೇಲೆ ಪ್ರೀತಿ, ಅಭಿಮಾನ ಹೆಚ್ಚಾಗುತ್ತದೆ. ಆದರೆ ನನ್ನ ಸ್ನೇಹಿತರು ತಾವು ಹಿಂದೂಗಳು ಎಂದು ಗೊತ್ತಾದರೆ ಎಲ್ಲಿ ಸ್ನೇಹಿತರು ಕೀಳಾಗಿ ನೋಡುತ್ತಾರೆ ಎಂದು ಹೆಸರು ಬದಲಿಸಿಕೊಂಡೋ ಅಥವಾ ಹಿಂದೂ ಎಂಬುದನ್ನು ತೋರಿಸಿಕೊಳ್ಳದೇ ಓಡಾಡುತ್ತಿದ್ದಾರೆ.
12ನೇ ತರಗತಿ ವಿದ್ಯಾರ್ಥಿ, ಡೆಂಟನ್‌, ಟೆಕ್ಸಾಸ್‌

ಅಂಕಿ ಅಂಶ
63%
– ಗೋವನ್ನು ಪೂಜಿಸುವುದಕ್ಕಾಗಿ ನಮ್ಮ ಧರ್ಮವನ್ನು ಹೀಯಾಳಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಮೀಕ್ಷೆಗೆ ಒಳಪಡಿಸಿದ ಮಂದಿ.

53%
– ವಿಗ್ರಹ ಆರಾಧನೆ ಮಾಡುವುದನ್ನು ಕಂಡು ಟೀಕಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿಂದೂಗಳ ಸಂಖ್ಯೆ.

25%
– ‘ಬಹುತೇಕ ಹಿಂದೂಗಳು ಡೇಟಿಂಗ್‌ ಮಾಡದೇ ಪೋಷಕರು ನಿಶ್ಚಯಿಸುವ ವಧು/ವರನನ್ನು ಮದುವೆಯಾಗುತ್ತಾರೆ’ ಎಂಬುದನ್ನು ಶಿಕ್ಷಕರು ತರಗತಿಯಲ್ಲಿ ಹೇಳಿಕೊಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಂಖ್ಯೆ.

20%
– ‘ಇವತ್ತಿಗೂ ಜಾತಿಪದ್ಧತಿ ಇರುವುದೇ ಹಿಂದೂ ಧರ್ಮದಿಂದ’ ಎಂದು ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿಂದೂಗಳ ಸಂಖ್ಯೆ.

60%
– ಜಾತಿಪದ್ಧತಿಗಾಗಿ ಹಿಂದೂ ಧರ್ಮವನ್ನು ದ್ವೇಷಿಸಲಾಗುತ್ತಿದೆ ಎಂಬ ಅನುಭವವನ್ನು ಹಂಚಿಕೊಂಡ ಹಿಂದೂಗಳ ಸಂಖ್ಯೆ ಇದಾದರೆ, ಇದರಲ್ಲಿ 47%ನಷ್ಟು ಜನರು ‘ಮೇಲ್ಜಾತಿಗಳು ಕೆಲಜಾತಿಗಳ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ಶಾಲೆಗಳಲ್ಲಿ ಹೇಳಿಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಾಲಾ ಪುಸ್ತಕಗಳು ಹಿಂದೂ ವಿರೋಧಿ


1. ಕ್ಯಾಲಿಫೋರ್ನಿಯಾದ ಶಾಲೆಯೊಂದರ ಇತಿಹಾಸ ಪಠ್ಯಪುಸ್ತಕದಲ್ಲಿ ಕ್ರೈಸ್ತ, ಇಸ್ಲಾಂ ಮತ್ತು ಯಹೂದಿ ಮತಗಳ ಬಗ್ಗೆ ಹೇಳುವಾಗ ಶ್ರೀಮಂತಿಕೆಯ ಚಿತ್ರ ಬಳಸಿ, ಹಿಂದೂ ಧರ್ಮದ ಬಗ್ಗೆ ವಿವರಿಸುವಾಗ ಗೋವುಗಳು ಯಾವುದೋ ತಿಪ್ಪೆಯಲ್ಲಿರುವ ಚಿತ್ರ ಹಾಕಿ, ಇದೇ ಹಿಂದೂ ಧರ್ಮ ಎಂದು ಹೇಳುತ್ತಿದೆ. ಇದರ ಚಿತ್ರ ಇಲ್ಲಿದೆ.


2. ಮೌರ್ಯ ಸಾಮ್ರಾಜ್ಯವು ಅತ್ಯಂತ ವಿಶಾಲ ಹಾಗೂ ಯಶಸ್ವಿ ಸಾಮ್ರಾಜ್ಯಗಳಲ್ಲಿ ಒಂದು. ಆದರೆ, ಇದರ ಬಗ್ಗೆ ಪಠ್ಯಪುಸ್ತಕದಲ್ಲಿ ವಿವರಿಸುವಾಗ, ಅಂಗಿ ಧರಿಸದ ವ್ಯಕ್ತಿಯೊಬ್ಬ ನೆಲ ಅಗೆಯುತ್ತಿರುವ ಮತ್ತು ಅದನ್ನು ಕೋತಿ ನೋಡುತ್ತಿರುವ ಚಿತ್ರ ಬಳಸಿದ್ದಾರೆ. ಅಂದರೆ, ಇವು ಮೌರ್ಯ ಸಾಮ್ರಾಜ್ಯ ಪ್ರತಿನಿಧಿಸುತ್ತಿರುವುದು ಎಂಬರ್ಥ ಬರುವಂತೆ. ಚಿತ್ರ ಇಲ್ಲಿದೆ.

ಮಾಧ್ಯಮಗಳೂ ಹಿಂದೂ ವಿರೋಧಿ
ವಾಶಿಂಗ್ಟನ್‌ ಪೋಸ್ಟ್‌, ನ್ಯೂಯಾರ್ಕ್‌ ಟೈಮ್ಸ್‌, ಹಫಿಧಿಂಗ್ಟನ್‌ ಪೋಸ್ಟ್‌ನಂಥ ಪತ್ರಿಕೆಗಳು 2014ರಿಂದಲೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆಯುತ್ತಿದೆ. ಇವೆಲ್ಲದರ ಪರಿಣಾಮ, ವಿವೇಕಾನಂದರ 150ನೇ ಜಯಂತಿಯಂದು ಶಿಕಾಗೋದಲ್ಲಿ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ ನಡೆಯುವ ವೇಳೆ ಕೆಲ ಗುಂಪುಗಳು ಹಿಂದೂ ಧರ್ಮದ ವಿರುದ್ಧ ಘೋಷಣೆ ಕೂಗಿದೆ. ವಿಶ್ವ ಹಿಂದೂ ಕಾಂಗ್ರೆಸ್‌ಗೆ 60 ದೇಶಗಳಿಂದ 3000 ಹಿಂದೂ ಅತಿಥಿಗಳು ಬಂದಿದ್ದರು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya