ಹಿಂದೂಗಳೇ ಹೆದರಿ ಕುಳಿತಿರುವಾಗ ಯಾರೇನು ಮಾಡಕ್ಕಾಗುತ್ತೆ?

 

ಸಂದರ್ಶನ: ಚಿರಂಜೀವಿ ಭಟ್‌

 

ದೇಶದ ಮಟ್ಟದಲ್ಲಿ ಎಲ್ಲೂ ಮಾತನಾಡದೇ ತಮ್ಮ ಕೃತಿಯಿಂದಲೇ ಯುವಜನತೆಯನ್ನು ಬಡಿದೆಬ್ಬಿಸುವುದರ ಜತೆಗೆ ಸೋಗಲಾಡಿಗಳನ್ನು ದಾಖಲೆ ಸಮೇತ ನೆಲಸಮಗೊಳಿಸುವ ವ್ಯಕ್ತಿ ಎಂದರೆ ಸರಸ್ವತಿ ಸಮ್ಮಾನ್‌ ಪುರಸ್ಕೃತ ಕಾದಂಬರಿಕಾರರಾದ ಎಸ್‌.ಎಲ್‌.ಭೈರಪ್ಪನವರು. ಆವರಣ ಕಾದಂಬರಿಯಲ್ಲಿ ಲಕ್ಷ್ಮೇ ಎಂಬ ಹುಡುಗಿ ಆಮಿರ್‌ ಎಂಬುವವನನ್ನು ಮದುವೆಯಾಗಿ ರಾಜಿಯಾ ಆಗಿ ಮತಾಂತರಗೊಂಡು, ತೊಳಲಾಡಿದ್ದನ್ನು ಚಿತ್ರಿಸಿದ್ದಾರೆ. ಸಾಕ್ಷ್ಯಚಿತ್ರ ಮಾಡುವುದಕ್ಕೆ ಲಕ್ಷ್ಮೇ/ರಜಿಯಾ ಹಂಪಿಗೆ ಹೋದಾಗ ಹೇಗೆ ಅಜ್ಞಾನದ ಪೊರೆ ಕಳಚುತ್ತದೆ ಎಂದು ವಿವರಿಸುವಾಗ ಮೊಘಲ್‌ ರಾಜರ ಅಟ್ಟಹಾಸ, ದೇವಸ್ಥಾನಗಳ ಧ್ವಂಸ, ಹಿಂದೂಗಳಿಗೆ ಹೆಚ್ಚು ತೆರಿಗೆ ಹೇರುತ್ತಿರುವುದರ ಬಗ್ಗೆ ನಿರ್ಭೀತಿಯಿಂದ ಬರೆದಿದ್ದಾರೆ. ಅಂಥ ಭೈರಪ್ಪನವರು ಹೊಸದಿಗಂತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಷ್ಟೇ ನಿರ್ದಾಕ್ಷಿಣ್ಯದಿಂದ ಮಾತಾಡಿದ್ದಾರೆ.

 

1. ಸುಪ್ರೀಂ ಕೋರ್ಟ್‌ ಹಿಂದೂ  ಧಾರ್ಮಿಕ ವಿಚಾರಗಳಲ್ಲಿ ದಿನಕ್ಕೊಂದರಂತೆ ತೀರ್ಪು ನೀಡುತ್ತಿದೆ. ದೇವಸ್ಥಾನಕ್ಕೆ ಹೋಗುವ ಬಗ್ಗೆ, ಸಂಪ್ರದಾಯಗಳನ್ನು ಅನುಸರಿಸುತ್ತಿರುವ ಬಗ್ಗೆಯೂ ನ್ಯಾಯಾಲಯ ತೀರ್ಪು ಕೊಡುತ್ತಿದೆಯಲ್ಲ?

ನೋಡಿ, ಈ ಪಾಶ್ಚಾತ್ಯ ದೇಶಗಳಲ್ಲಿ ಸರ್ಕಾರ ಬಹಳ ನಿಯತ್ತಿನಿಂದ, ಪಾರದರ್ಶಕವಾಗಿ, ಪ್ರಜಾಪ್ರಭುತ್ವದ ಅನ್ವಯ ಕೆಲಸ ಮಾಡುತ್ತದೆ. ಅಲ್ಲೆಲ್ಲ ಸಾರ್ವಜನಿಕರ ಅಭಿಪ್ರಾಯಕ್ಕೆ ಬಹಳವೇ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಇಲ್ಲಿ ಅದೆಲ್ಲ ಎಲ್ಲಿದೆ? ಇದು ಕೋರ್ಟ್‌ಗೆ ಹೋಗಲೇಬಾರದ ಪ್ರಕರಣ. ನಮ್ಮ ಪುರೋಹಿತರು, ಶಾಸ್ತ್ರಜ್ಞರು ಪರಿಹರಿಸಬಹುದಿತ್ತು. ಹೊರದೇಶದಲ್ಲೆಲ್ಲ ಕೋರ್ಟ್‌ಗಳು ಧಾರ್ಮಿಕ ವಿಚಾರಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಅದನ್ನು ನೀವು ನೀವುಗಳೇ ಬಗೆಹರಿಸಿಕೊಳ್ಳಿ ಎನ್ನುತ್ತದೆ. ಆದರೆ ನಮ್ಮ ದೇಶದಲ್ಲಿ ಹಿಂದೂಗಳ ಹಲವು ನಂಬಿಕೆಗಳನ್ನು ಕೋರ್ಟ್‌ ನಿರ್ಧರಿಸುತ್ತಿರುವುದು ವಿಪರ್ಯಾಸ.

2. ಅಯೋಧ್ಯೆಯ ರಾಮಜನ್ಮ ಭೂಮಿ ಹಲವಾರು ವರ್ಷಗಳಿಂದ ವಿವಾದಿತ ಜಾಗವಾಗಿದೆ. ಈಗ ಪ್ರಕರಣ ಕೋರ್ಟ್‌ನಲ್ಲಿ ಒಂದು ಹಂತಕ್ಕೆ ಬಂದಿರುವಾಗ ಹೊಸ ವರಾತ ಎದ್ದಿದೆ. ರಾಮ ಜನ್ಮ ಭೂಮಿಯಲ್ಲಿ ರಾಮನ ದೇವಸ್ಥಾನವೂ ಬೇಡ, ಮಸೀದಿಯೂ ಬೇಡ. ಒಂದು ದೊಡ್ಡ ಆಸ್ಪತ್ರೆ ಕಟ್ಟಿಬಿಡಿ. ಜನರಿಗೆ ಸಹಾಯವಾಗುತ್ತದೆ ಎನ್ನುತ್ತಿದ್ದಾರೆ. ಇದು ನಿಮಗೆ ಸಮಂಜಸ ಎನಿಸುತ್ತದೆಯಾ?

ಬಹಳ ಉತ್ತಮ. ಒಂದು ಆಸ್ಪತ್ರೆ ಬಂದು ಬಡವರಿಗೆ ಸಹಾಯವಾಗುತ್ತದೆ ಎಂದರೆ ಯಾರು ತಾನೆ ವಿರೋಧಿಸುವುದಕ್ಕೆ ಸಾಧ್ಯ? ಅದೆಲ್ಲ ಸರಿ. ಆದರೆ, ಈ ಮಾತು ಎಲ್ಲ ಕಡೆಯೂ ಅನ್ವಯವಾಗುವಂತೆ ಇದ್ದರೆ ಸರಿಯಾಗುತ್ತದೆ. ಗೋವಾದಲ್ಲಿ ನೂರಾರು ದೇವಸ್ಥಾನಗಳನ್ನು ಒಡೆದು ಚರ್ಚ್‌ಗಳನ್ನು ಕಟ್ಟಿದ್ದಾರೆ. ಈಗ ಅವರದ್ದೇ ಥಿಯರಿಯನ್ನು ಅನ್ವಯ ಮಾಡುವುದಾದರೆ, ಅವೆಲ್ಲ ಚರ್ಚ್‌ಗಳನ್ನು ಒಡೆದು ಆಸ್ಪತ್ರೆಗಳನ್ನು ಕಟ್ಟಿ. ಆಸ್ಪತ್ರೆ ಗೋವಾದಲ್ಲಿದ್ದರೂ ಆಸ್ಪತ್ರೆಯೇ, ರಾಮ ಮಂದಿರದ ಜಾಗದಲ್ಲಿದ್ದರೂ ಆಸ್ಪತ್ರೆಯೇ ಅಲ್ವಾ? ಮುಸಲ್ಮಾನ ರಾಜರು ಭಾರತದಲ್ಲಿ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರಲ್ಲ, ಅವನ್ನೂ ಒಡೆದು ಆಸ್ಪತ್ರೆ ಕಟ್ಟಿ. ಇದರ ಬಗ್ಗೆ ಎಡಪಂಥೀಯರು, ಬುದ್ಧಿಜೀವಿಗಳು, ಟೊಳ್ಳು ಜಾತ್ಯತೀತವಾದಿಗಳು ಏನೆನ್ನುತ್ತಾರೆ? ಸೊಲ್ಲೆತ್ತುವುದಿಲ್ಲ.

3. ಪಟೇಲ್‌ ಸ್ಟ್ಯಾಚು ನಿರ್ಮಿಸಿದ್ದರಿಂದ ಹಣ ಪೋಲಾಗಿದೆ ಎಂದು ಕಾಂಗ್ರೆಸ್‌ ಮತ್ತು ಎಡಪಂಥೀಯರು ದೂರುತ್ತಿದ್ದಾರೆ. ಪಟೇಲರು ಕಾಂಗ್ರೆಸ್‌ನವರೇ ಅಲ್ಲವಾ? ಮತ್ಯಾಕೆ ತಗಾದೆ?

ಪಟೇಲರು ಕಾಂಗ್ರೆಸ್‌ನವರೇ ಆಗಿದ್ದರೂ ಸಹ, ನೆಹರೂ ಹೇಗೆ ತನ್ನ ತಂತ್ರಗಾರಿಕೆಯಿಂದ ಪಟೇಲರನ್ನು ಹೆಜ್ಜೆ ಹೆಜ್ಜೆಯಲ್ಲೂ ವಿರೋಧಿಸುತ್ತಿದ್ದರು, ದೂರ ತಳ್ಳುತ್ತಿದ್ದರು. ಕಾಂಗ್ರೆಸ್‌ನಲ್ಲಿದ್ದೂ ಕಾಂಗ್ರೆಸ್ಸಿಗರಾಗದೇ ಉಳಿದ ವ್ಯಕ್ತಿ ಎಂದರೆ ಅದು ಪಟೇಲರು. ಮಂಡ್ಯದಲ್ಲಿ ಕೃಷ್ಣಮೂರ್ತಿ ಎಂಬ ಮುಖ್ಯೋಪಾಧ್ಯರು ಪಟೇಲರ ಬಗ್ಗೆ 800 ಪುಟದ ಪುಸ್ತಕ ಬರೆದಿದ್ದಾರೆ. ಅದನ್ನು ಓದಿದರೆ ಪಟೇಲರು ಎಂಥ ಶಕ್ತಿ ಎಂಬುದು ತಿಳಿಯುತ್ತದೆ. ಕಾಂಗ್ರೆಸ್‌ ಮತ್ತು ಎಡಪಂಥೀಯರು ವಿರೋಧಿಸುತ್ತಿದ್ದಾರೆ ಎಂಬುದಕ್ಕಿಂತಲೂ ಉತ್ತರ ಬೇಕಾ? ನಮ್ಮ ದೇಶದ ದುರಂತ ಏನು ಎಂದರೆ, ಒಂದು ಶಿಸ್ತಿಲ್ಲದೇ ಸ್ವಾತಂತ್ರ್ಯ ಸಿಕ್ಕಿರುವುದು. ಇವೆಲ್ಲದರ ಪರಿಣಾಮ ಒಬ್ಬ ಮಹಾನ್‌ ವ್ಯಕ್ತಿಯ ಸ್ಟ್ಯಾಚು ನಿರ್ಮಿಸುವುದಕ್ಕೂ ವಿರೋಧಿಸುತ್ತಿರುವುದು.

4. ಮಹಿಷಾಸುರನೇ ರಾಜ ಎಂದು ಹೇಳುತ್ತಿರೋ ಸಾಹಿತಿಗಳ ಸಂಖ್ಯೆ, ಬುದ್ಧಿಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿ, ಮೈಸೂರಿನವರಾಗಿ ತಮ್ಮ ಅಭಿಪ್ರಾಯವೇನು?

ಮದ್ರಾಸ್‌ನಲ್ಲಿ ಡಿಎಂಕೆ ಅವರು ರಾಮನ ಚಿತ್ರಕ್ಕೆ ಚಪ್ಪಲಿ ಹಾರ ಹಾಕುತ್ತೇವೆ. ರಾವಣನಿಗೇ ನಾವು ಪೂಜೆ ಮಾಡುವುದು ಎಂದು ಹೇಳಿದ್ದರು. ಇನ್ನು ಕರ್ನಾಟಕದಲ್ಲಿ ಲಂಕೇಶ ಎಂದರೇನು, ರಾವಣ ಅಂತಲೇ ಅರ್ಥ. ಮೊದಲಿಂದಲೂ ಅಷ್ಟೇ, ಏತಿ ಅಂದರೆ ಪ್ರೇತಿ ಎನ್ನುವುದು ಇದ್ದೇ ಇದೆ. ಲಂಕೇಶ್‌ ಒಂದು ನಾಟಕ ಬರೆದಿದ್ದಾರೆ, ಅದರಲ್ಲಿ ರಾಮ ಷಂಡ. 14 ವರ್ಷ ಆದರೂ ಮಕ್ಕಳನ್ನು ಹುಟ್ಟಿಸಲಿಲ್ಲ. ಆದರೆ ರಾವಣ ಮಾತ್ರ ನಿಜವಾದ ಗಂಡಸು. ಅವನಿಗೆ ಎಷ್ಟೆಲ್ಲ ಸಖಿಯರ ಜತೆ ಸೇರಿ ತುಂಬಾ ಮಕ್ಕಳನ್ನು ಹುಟ್ಟಿಸಿದ್ದಾನೆ ಎಂದು ಸ್ವತಃ ಸೀತೆಯ ಬಾಯಲ್ಲಿ ಲಂಕೇಶ್‌ ಹೇಳಿಸಿದ್ದಾರೆ.

ಡಾ. ಪೋಲಂಕಿ ರಾಮಮೂರ್ತಿಯವರು ಸೀತಾಯಣದಲ್ಲಿ ಸೀತೆ ತನ್ನ ಮನಸ್ಸಿನಲ್ಲೇ ಬೇರೆ ಪುರುಷರನ್ನು ಕಾಮಿಸುವಂತೆ ತೋರಿಸಿದ್ದಾರೆ. ಆದರೆ ಮೂಲತಃ ವಾಲ್ಮೀಕಿ ರಾಮಾಯಣದಲ್ಲಿ ಆಕೆ ಕನಸ್ಸು ಮನಸ್ಸಿನಲ್ಲಿಯೂ ಮತ್ತೊಬ್ಬ ಪುರುಷನನ್ನು ನೆನೆಯಲಿಲ್ಲ. ರಾವಣನ ನೆರಳನ್ನೂ ಹತ್ತಿರ ಬರುವುದಕ್ಕೆ ಬಿಡದ ಪತಿವ್ರತೆ ಎಂಬುದನ್ನು ತಿಳಿಸಿದ್ದಾರೆ. ಹಿಂದೂ ಧರ್ಮವನ್ನು ವಿರೋಧಿಸುವವರು ಇಂಥದ್ದನ್ನೇ ಹೇಳಿಕೊಂಡು ಬರುತ್ತಿರುವುದು. ಏಕೆಂದರೆ, ಈ ಕ್ರಿಶ್ಚಿಯನ್‌ ಮಿಷನರಿಗಳು ನಮ್ಮ ದೇವರಗಳ ಕಲ್ಪನೆಗೆ ವಿರುದ್ಧವಾಗಿರುವುದನ್ನೇ ಮಾಡಿಕೊಂಡು ಬಂದಿರುವುದು.  ಈ ವಿಚಾರದಲ್ಲೂ ಹಾಗೆಯೇ.. ಇತಿಹಾಸವನ್ನು ತಿರುಚುವ ಇವರ ಹಳೇ ಆಟ ಮುಂದುವರಿದಿದೆ ಅಷ್ಟೇ.

5. ನಮ್ಮ ಮೈಸೂರು ದಸರಾ ಯಾವಾಗಲೂ ಸರಳ ದಸರಾ ಆಗುವುದಕ್ಕೆ ಪೈಪೋಟಿ ನಡೆಸುತ್ತಿದೆ. ನಿಮ್ಮ ಪ್ರಕಾರ ಇದರ ಹಿಂದಿನ ಉದ್ದೇಶವೇನು?

· ದಸರಾ ಎಂಬುದು ಈಗ ಆಚರಣೆ ಎಂಬುದಕ್ಕಿಂತ ಹೆಚ್ಚಾಗಿ ದುಡ್ಡು ತಿನ್ನುವ ಸಂದರ್ಭ ಆಗಿದೆ. ಮೈಸೂರು ನಗರದ ನಾಗರಿಕರಾಗಿದ್ದರೆ ಇವೆಲ್ಲ ಅರ್ಥವಾಗುತ್ತದೆ. ದಸರಾಗೆ ಎಂಟು ದಿನ ಇರುವಾಗ ಇವರ ಹಾರಾಟ ಶುರುವಾಗುತ್ತದೆ. ನಮ್ಮ ರಸ್ತೆಗಳು ಗುಂಡಿ ಬಿದ್ದಿದೆ, ಅದು ಸರಿ ಇಲ್ಲ, ಇದು ಸರಿ ಇಲ್ಲ.. ಇತ್ಯಾದಿಗಳನ್ನು ಹೇಳುತ್ತಾ, ನಾವು ಹೀಗೇ ಮಾಡಿದರೆ ನಮ್ಮ ಮೈಸೂರಿಗೆ ಪ್ರವಾಸಿಗರು ಬರುವುದೇ ಇಲ್ಲ ಎಂದು ಗಾಬರಿ ಹುಟ್ಟಿಸಿ, ಫೈಲುಗಳನ್ನು ತೆಗೆದುಕೊಂಡು ಹೋಗಿ ಒಂದಷ್ಟು ಹಣ ಬಾಚಿಕೊಂಡು ಬರುತ್ತಾರೆ. ಯಾವುದೋ ಹಳ್ಳಕ್ಕೆ ಮಣ್ಣು ಹಾಕಿ ಮುಚ್ಚಿಸಿ 9 ದಿನ ಬಾಳಿಕೆ ಬಂದರೆ ಸಾಕು ಎಂದಿರುತ್ತಾರೆ. ಆಮೇಲೆ ಏನಾಯ್ತು ಎಂದು ಕೇಳಿದರೆ, ಹಣ ಬಂದಿಲ್ಲ ಎಂದು ಕೈ ಎತ್ತುತ್ತಾರೆ. ಇದನ್ನಾದರೂ ಕೇಳಲಿಕ್ಕಾಗುತ್ತಾ ಅದೂ ಇಲ್ಲ. ಯಾವ ಪ್ರಜೆ ಏನನ್ನೂ ಪ್ರಶ್ನೆ ಮಾಡುವುದಕ್ಕಾಗುವುದಿಲ್ಲವೋ ಅದೇ ಪ್ರಜಾಪ್ರಭುತ್ವ ಎಂಬಂತಾಗಿದೆ ಈಗ. ಯಾಕೆಂದರೆ ಅವರ ಜಾತಿಯ ನಾಯಕನಿಗೇ ಮತ್ತೊಬ್ಬ ಹಣ ತಿನ್ನಿಸಿರುತ್ತಾನೆ. ಇವನು ಮಾತಾಡಿದರೆ, ಏನಯ್ಯಾ, ನಾನೂ ತೆರಿಗೆ ಕಟ್ಟುತ್ತಾ ಇದೀನಿ.. ನಾನೂ ನಿನ್ನ ಜಾತಿನೇ.. ನನಗೇನೂ ತೊಂದರೆ ಇಲ್ಲ, ನಿನ್ನದೇನಯ್ಯಾ ಸಮಸ್ಯೆ ಅಂತ ಕೇಳ್ತಾನೆ. ಹಾಗಾಗಿ ದಸರಾ ಹಾಳು ಮಾಡುವುದಕ್ಕೆ ಹೊರಗಿನವರು ಬೇಡ. ನಮ್ಮವರೇ ಸಾಕು.

6. ಟಿಪ್ಪು ಜಯಂತಿಯನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸುವುದು ಅವಶ್ಯವೊ? ಅನಿವಾರ್ಯವೋ? ಹೌದಾದರೆ ಯಾರಿಗೆ?

· ಇದು  ವೋಟ್‌ ಬ್ಯಾಂಕ್‌ ಗಿಮಿಕ್‌ಗಳಲ್ಲಿ ಒಂದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಪೌರುಷ ಮತ್ತು ಕ್ಷಾತ್ರ ಗುಣ ಎಂಬುದು ಈ ಹಿಂದೂಗಳಿಗೆ ಬಹಳ ಕಡಿಮೆ. ಬೌದ್ಧರು, ಜೈನರು ಇವರೆಲ್ಲ ಅಹಿಂಸೆ ಎಂದು ಹೇಳಿ ಹೇಳಿ ವೇದ ಕಾಲದಲ್ಲಿದ್ದ ಕ್ಷಾತ್ರ ಗುಣ ಈಗಿಲ್ಲ. ಮುಸಲ್ಮಾನರು ನಮ್ಮ ದೇಶಕ್ಕೆ ನುಗ್ಗಿದ ಮೇಲೆ ಅವರ ಹೊಡೆತಕ್ಕೆ ಹಿಂದೂಗಳು ತಣ್ಣಗಾಗಿಬಿಟ್ಟರು. ಏಕೆಂದರೆ, ಇವರೆಲ್ಲ ಅಷ್ಟೊತ್ತಿಗಾಗಲೇ ಅತಿಯಾದ ಅಹಿಂಸೆಗೆ ಒಳಗಾಗಿದ್ದರು. ಜೈನರಂತೂ ಕೈಯಲ್ಲಿ ನವಿಲುಗರಿ ಹಿಡಿದಿರುತ್ತಾರೆ, ನಾನು ಓಡಾಡುವಾಗ ಇರುವೆ ಇದ್ದರೆ ತುಳಿಯಬಾರದು ಎಂದು ಕಾಳಜಿವಹಿಸುತ್ತಾರೆ. ಇನ್ನು ಆಮೇಲೆ ಬಂದ ಗಾಂಧಿಯವರದ್ದಂತೂ ಪುಕ್ಕಲ ರಾಜಕೀಯ.
ಹೀಗಾದರೆ ಕ್ಷಾತ್ರ ಗುಣ ಎಲ್ಲಿಂದ ಬರಬೇಕು? ಹಾಗೆ ನೋಡಿದರೆ, ಭಗವದ್ಗೀತೆಯೇ ಎಲ್ಲವನ್ನೂ ಸರಿದೂಗಿಸಿಕೊಂಡು ಬಂದಿರುವುದು. ಗಾಂಧಿ ಹೇಳುವ ಪ್ರಕಾರ ಭಗವದ್ಗೀತೆಯಲ್ಲಿ ಪೂರ್ತಿ ಅಹಿಂಸೆಯನ್ನೇ ಹೇಳಿಕೊಟ್ಟಿದೆ ಎಂದು. ಆದರೆ ಅಲ್ಲಿ ಹಾಗೆಲ್ಲಿದೆ?
ನಾನು ನಮ್ಮವರ ವಿರುದ್ಧವೇ ಯಾಕಾಗಿ ಹೋರಾಡಬೇಕು? ಹೋರಾಡಿ ಏನು ಸಾಧಿಸಬೇಕು.. ನಾನು ಹೋರಾಡದೇ ಸಂನ್ಯಾಸಿಯಾಗುತ್ತೇನೆ ಎಂದು ಅರ್ಜುನ ಹೇಳಿದಾಗ ಕೃಷ್ಣ ಅವನನ್ನು ಹೇಡಿ ನೀನು. ಒಬ್ಬ ಕ್ಷತ್ರಿಯನಾಗಿ ನಿನ್ನ ಕರ್ತವ್ಯ ಹೋರಾಡುವುದು. ಇಲ್ಲವಾದರೆ ನರಕಕ್ಕೆ ಹೋಗುತ್ತೀಯ ನೀನು ಎಂದು ಹುರಿದುಂಬಿಸುತ್ತಾನೆ. ಇದನ್ನು ಒಪ್ಪಿಕೊಳ್ಳುವ ಅರ್ಜುನ, ನಾನು ನಿನಗೆ ಶರಣಾಗತನಾಗಿದ್ದೇನೆ, ನಿನ್ನ ಮಾತು ಕೇಳುತ್ತೇನೆ ಎಂದು ಯುದ್ಧ ಮಾಡುತ್ತಾನೆ. ಅಂದರೆ ಭಗವದ್ಗೀತೆಯ ಸಾರಾಂಶ ಅಹಿಂಸೆ ಅಂತ ಆಯ್ತೋ ಅಥವಾ ಸರಿಯಾದ ಸಮಯದಲ್ಲಿ ಕ್ಷಾತ್ರ ಗುಣ ಬಳಸಿಕೊಳ್ಳಬೇಕು ಎಂದೊ? ಗಾಂಧೀಜಿ ಅದನ್ನು ಹೇಳಿಬಿಟ್ಟರು, ಇವರೆಲ್ಲ ಅಯ್ಯೋ ಮಹಾತ್ಮರು ಹೇಳಿದ್ದಾರೆ ಎಂದು ಒಪ್ಪಿಕೊಂಡುಬಿಟ್ಟರು.
ಭಗವದ್ಗೀತೆ ಕೈಯಲ್ಲಿರುವಾಗ ತಾವೇ ಓದಿ ಅರ್ಥಮಾಡಿಕೊಳ್ಳುವ ಬದಲಿಗೆ ಮಹಾತ್ಮರ ಮಾತನ್ನು ಉಲ್ಲೇಖಿಸೋದ್ಯಾಕೆ? ನಮ್ಮ ಜನರು ಬೌದ್ಧಿಕವಾಗಿ ಅಷ್ಟು ಸೋಮಾರಿಗಳಾಗಿದ್ದಾರೆ. ತಾವೇ ಓದಿ ಸ್ವಂತ ಬುದ್ಧಿಯಿಂದ ತಿಳಿದುಕೊಳ್ಳುತ್ತೇನೆ ಎಂಬ ಮನಸ್ಥಿತಿಯೇ ಹೊರಟು ಹೋಗಿದೆ. ಅದರಿಂದಲೇ ಇಂಥ ಜಯಂತಿಗಳು ರಾಜಕಾರಣಿಗಳ ಅವಶ್ಯ ಮತ್ತು ಅನಿವಾರ್ಯವಾಗಿದೆ. ಹಿಂದೂಗಳು ಗಟ್ಟಿ ಇದ್ದಿದ್ದರೆ ಇಂಥ ಜಯಂತಿಗಳೇ ಆಗುತ್ತಿರಲಿಲ್ಲ.

7. ಶಾರದಾ ಪೀಠ ಮರುಸ್ಥಾಪನೆ ಮಾಡಬೇಕು ಎಂಬ ಧ್ವನಿ ಎದ್ದಿದೆ. 

· ಶಾರದಾ ಪೀಠ ಮರುಸ್ಥಾಪನೆ ಆಗಬೇಕು ಎಂಬುದು ನ್ಯಾಯಬದ್ಧವಾಗಿದೆ. ಆದರೆ ಇದನ್ನು ರಾಜಕೀಯವಾಗಿ ಮಾಡಬೇಕು ಎಂದರೆ, ಅದರಿಂದಾಗುವ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಶಾರದಾ ಪೀಠ ಇರುವುದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಎಂಬುದನ್ನು ಕೇಳಿದ್ದೇನೆ. ಎಡಕ್ಕೆ ತಿರುಗಿದರೆ ಪಾಕಿಸ್ತಾನ, ಬಲಕ್ಕೆ ತಿರುಗಿದರೆ ಪಾಕಿಸ್ತಾನ ಇರುವಾಗ ಅಲ್ಲಿಗೆ ನುಗ್ಗಿ ಪೀಠ ಸ್ಥಾಪಿಸಬೇಕು ಎಂದರೆ, ಸುರಕ್ಷಿತ ಮಾರ್ಗವನ್ನು ನಿರ್ಮಿಸಲಾಗುತ್ತಾ ಅನ್ನೋದೂ ಆಲೋಚಿಸಬೇಕಾದ ಸಂಗತಿ. ಅವರು ನಾವು ಬಂದರೆ ಬಾಂಬ್‌ ಹಾಕುತ್ತೇವೆ ಎನ್ನುತ್ತಾರೆ. ನಾವು ನಿನಗಿಂತ ದೊಡ್ಡ ಬಾಂಬ್‌ ಹಾಕುತ್ತೇನೆ ಎಂದು ಜಯಿಸಿಕೊಂಡು ಬರುವ ಧೈರ್ಯ ನಮ್ಮಲ್ಲಿ ಇದೆಯಾ?

ಒಮ್ಮೆ ಹಾಗೆ ಮಾಡಿದರು ಎಂದೇ ತಿಳಿದರೂ, ಜನರಿಂದಲೇ ಯಾವುದೇ ರೀತಿಯ ಬೆಂಬಲವೂ ಸಿಗುವುದಿಲ್ಲ. ರಾಜ್ಯ ಆಳುವಾಗ ಹಲವಾರು ತಪ್ಪುಗಳಾಗುತ್ತವೆ. ಆದರೆ ತಪ್ಪನ್ನು ಎಷ್ಟು ಶೇಕಡ ಮಾಡಿದ್ದಾರೆ, ಉತ್ತಮ ಕೆಲಸವನ್ನು ಎಷ್ಟು ಶೇಕಡ ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ ನಮ್ಮವರು ಬಯ್ಯಬೇಕು. ಆದರೆ ಸರ್ಕಾರ ಏನಾದರೂ ಮಾಡುವುದಕ್ಕೆ ಹೊರಟರೆ ಎಲ್ಲದಕ್ಕೂ ಗೊಣಗುತ್ತಾ ಇದ್ದರೆ ಗತಿಯೇನು? ಸೋನಿಯಾ ಗಾಂಧಿ ಸರ್ಕಾರ ಇದ್ದಾಗ ಯಾವುದಕ್ಕೂ ವಿರೋಧ ಇರುತ್ತಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಏನೇ ಮಾಡಿದರೂ ಅದಕ್ಕೆ ವಿರೋಧ ಇದ್ದೇ ಇದೆ.

ಹಾಗಾಗಿ ನಮ್ಮವರು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಕೆಲಸ ಮೊದಲಾಗಬೇಕು. ಹಾಗಾದಾಗ, ಅವರಿಗೂ ಮುಂದುವರಿಯುವ ಧೈರ್ಯ ಬರುತ್ತದೆ. ನಮ್ಮವರೇ ಅವರನ್ನು ಮುಂದೆ ಕಳುಹಿಸಿ, ಹಿಂದಿನಿಂದ ಕಲ್ಲೆಸೆದರೆ, ಮುಂದಿನಿಂದ ಬರುವ ಶತ್ರುಗಳ ಗುಂಡಿನ ದಾಳಿ ಎದುರಿಸುತ್ತಾರೋ ಹಿಂದಿನಿಂದ ತಾಯ್ನಾಡಿನಿಂದ ಬರುವ ಕಲ್ಲೇಟನ್ನು ಎದುರಿಸುತ್ತಾರೋ?

8. ಯಕ್ಷಗಾನದಲ್ಲಿ ಕ್ರಿಸ್ತನ ಪ್ರಸಂಗವನ್ನು ಪ್ರದರ್ಶಿಸುವುದರಿಂದ ಯಕ್ಷಗಾನ ಹಾಳಾಯಿತೇ ಅಥವಾ ಈ ಪ್ರಸಂಗವನ್ನು ಅಳವಡಿಸಿಕೊಂಡಿದ್ದು ಯಕ್ಷಗಾನಕ್ಕೆ ಒಳ್ಳೆಯದಾಯಿತೇ?

· ಯಕ್ಷಗಾನದ ಕಲಾವಿದರು ಅನೇಕರಿಗೆ ಕ್ರಿಸ್ತ ಮಿಷನರಿಗಳ ಹುನ್ನಾರ ಗೊತ್ತಾಗುವುದೇ ಇಲ್ಲ. ಅವರಿಗೆ ತಾವು ಹೇಗೆ ರಾಗದಿಂದ ಹಾಡಬೇಕು, ಪಾತ್ರ ನಿರ್ವಹಿಸಬೇಕು ಎಂಬುದು ಗೊತ್ತೇ ವಿನಾ ಇದರ ಬಗ್ಗೆ ಕಲ್ಪನೆ ಇರುವುದಿಲ್ಲ. ಗೋವಿಂದ ಪೈ ಸೇರಿದಂತೆ ಕೆಲವು ಕವಿಗಳು ಕ್ರಿಸ್ತನ ಬಗ್ಗೆ ಪದ್ಯ ಬರೆದಿರುವುದನ್ನು ಓದಿದರೆ ತಿಳಿಯುತ್ತದೆ. ನಮ್ಮನ್ನು ಕ್ರಿಸ್ತ ಮಿಷನರಿಗಳು ಹೇಗೆ, ಯಾಕಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದು. ರಿಲಿಜನ್‌ ಇರುವುದೇ ಹಾಗೆ. ಕ್ರಿಶ್ಚಿಯಾನಿಟಿಯಲ್ಲಿ ಎಲ್ಲ ಚರ್ಚ್‌ಗಳ ಮೇಲೂ ಕಣ್ಣಿಟ್ಟಿರುತ್ತಾರೆ. ಇಂಥದ್ದನ್ನು ನಂಬಬೇಕು, ಇಂಥದ್ದನ್ನು ನಂಬಬಾರದು ಎನ್ನುವುದನ್ನು ಹೇಳುತ್ತಿರುತ್ತಾರೆ. ಇದರ ಮೇಲ್ವಿಚಾರಣೆಗೆ ಸಂಘ ಸಂಸ್ಥೆಗಳಿರುತ್ತವೆ. ಆದರೆ ಹಿಂದೂ ಧರ್ಮದಲ್ಲಿ ಯಾವತ್ತಿಗೂ ಈ ಪದ್ಧತಿ ಇಲ್ಲ. ಎಲ್ಲವೂ ಅಸಂಘಟಿತ. ಹತ್ತಾರು ಮಠ, ಜಾತಿಗಳು ಇರುವುದರಿಂದ, ನಮ್ಮ ಜಾತಿಗಳನ್ನು ನೋಡಿಕೊಂಡರೆ ಸಾಕು ಎಂಬಂತಾಗಿದೆ. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಒಂದು ಜಾತಿಯ ಹಾಸ್ಟೆಲ್‌ನಲ್ಲಿ ಓದುತ್ತಿರುತ್ತಾನೆ. ಅವನಿಗೆ ಒಂದು ಮಠ ವಿದ್ಯಾಭ್ಯಾಸ ವೆಚ್ಚ ನೋಡಿಕೊಳ್ಳುತ್ತಿರುತ್ತದೆ. ಆತನಿಗೆ ಕೆಲಸ ಸಿಕ್ಕಾಗ ಆ ಮಠ, ಜಾತಿಗಷ್ಟೇ ಸಹಾಯ ಮಾಡುತ್ತಾನೆ. ಅದು ಋುಣಸಂದಾಯ ಎಂದು ಭಾವಿಸುತ್ತಾನೆ. ಆದರೆ ವಿಸ್ತೃತವಾಗಿ ನೋಡಿ ನಮ್ಮದು ಹಿಂದೂ ಧರ್ಮ, ಅದನ್ನು ನಾವು ಉಳಿಸಿಕೊಳ್ಳಬೇಕು ಎಂಬ ಭಾವನೆ ನಮ್ಮಲ್ಲಿ ಇನ್ನೂ ಬೆಳೆದಿಲ್ಲ. ಚುನಾವಣೆಯಲ್ಲಿ ಜಾತಿ ನೋಡಿ ಮತ ಹಾಕುತ್ತಾರೆಯೇ ವಿನಾ ದೇಶದ ಪರಿಕಲ್ಪನೆ ಇಲ್ಲವೇ ಇಲ್ಲ.

9. ಮುಸ್ಲಿಂ ರಾಜರಿಂದ ಹಲವಾರು ದೇವಸ್ಥಾನಗಳು ನಾಶವಾಗಿದೆ. ಅದಕ್ಕೆ ಇತಿಹಾಸದಲ್ಲೂ ಪುರಾವೆಗಳಿವೆ. ಆದರೆ ಇದನ್ನು ಈಗ ತಿರುಚುತ್ತಿದ್ದಾರೆ. ಅಲ್ಲದೇ, ಎಂದೋ ನಡೆದಿದ್ದನ್ನು ಈಗ್ಯಾಕೆ ಎಂದೂ ಹೇಳುತ್ತಾರಲ್ಲ?

· ಇದೊಂದು ಖಯಾಲಿಯಾಗಿಬಿಟ್ಟಿದೆ. ಇತಿಹಾಸವನ್ನು ತಿರುಚುವುದಕ್ಕೆ ಎಡಪಂಥೀಯರು ಬಹಳ ನಿಪುಣರು. ಇವರು ಮಾಡಿದ ಉಪಟಳ ಒಂದೆರಡಲ್ಲ. ವಿಜಯನಗರ ಸಾಮ್ರಾಜ್ಯ ನಮಗೆಲ್ಲ ಗೊತ್ತೇ ಇದೆ. ಅಲ್ಲಿ ಆಗಿನ ವಿಜಯನಗರ ಅರಸರು ಕೆಲಸಗಾರರಿಗೆ ಸರಿಯಾಗಿ ಸಂಬಳ ಕೊಡದ ಕಾರಣ ಹಿಂದೂ ಕೆಲಸಗಾರರೇ ವಿಜಯನಗರವನ್ನು ಹಾಳು ಮಾಡಿದರು ಎಂದು ಎಡಪಂಥೀಯರು ಹೇಳುತ್ತಾರೆ. ನಾವು ಸತ್ಯವನ್ನು ಸರಿಯಾದ ಸಮಯದಲ್ಲಿ ತಿಳಿಸಲಿಲ್ಲ ಎಂದರೆ, ಖಂಡಿತವಾಗಿಯೂ ಅವರು ಅದನ್ನೇ ಸತ್ಯ ಮಾಡುತ್ತಿದ್ದಾರೆ, ಮಾಡುತ್ತಾರೆ. ಹೇಗೆಂದರೆ, ದೊಡ್ಡ ದೊಡ್ಡ ಹುದ್ದೆಗಳಲ್ಲಿ  ಕುಳಿತಿರುವುದು ಬಹುತೇಕರು ಎಡ ಚಿಂತನೆಯವರು. ಅವರು ಮಕ್ಕಳಿಗೆ ತಯಾರಿಸುವ ಇತಿಹಾಸ ಪುಸ್ತಕದಲ್ಲಿ ಇಂಥದ್ದೊಂದು ಸಂಗತಿ ಪ್ರಕಟಿಸಿಬಿಟ್ಟರೆ ಆಗೇ ಹೋಯ್ತಲ್ಲ. ಅದನ್ನೇ ಮಕ್ಕಳು ಓದಿಕೊಳ್ಳುತ್ವೆ. ನಮ್ಮ ಮಕ್ಕಳು ಓದಿ ಅಂಕ ತೆಗೆದರೆ ಸಾಕು ಎನ್ನುವ ಪೋಷಕರಿಗೆ ಅಂಕಗಳೇ ಪ್ರಮುಖವಾಗಿ, ನಿಜವಾದ ಇತಿಹಾಸ ಮರೆತುಬಿಡುತ್ತಾರೆ. ಹಾಗಾದಾಗ, ನಾಳೆ ದಿನ ಅದೇ ಹಾವಾಗಿ ಪೋಷಕರನ್ನು ಕಚ್ಚುತ್ತದೆ ಎಂಬುದನ್ನೇ ಮರೆತೇ ಬಿಟ್ಟಿರುತ್ತಾರೆ. ಮೊದಲು ಪಠ್ಯ ಪುಸ್ತಕ ಬದಲಾಗಬೇಕು. ಸರ್ಕಾರದ ಪಠ್ಯಪುಸ್ತಕದಲ್ಲಿರುವ ನಾನ್‌ಸೆನ್ಸ್‌ಗಳಿಗೆ ಉತ್ತರವಾಗಿ ಖಾಸಗಿ ಶಾಲೆಗಳ ಪುಸ್ತಕದಲ್ಲಿ ಸರಿಯಾದ ದಾಖಲೆಗಳನ್ನು ಕೊಟ್ಟು ಇತಿಹಾಸದ ನಿಜವಾದ ಪಾಠ ಕಲಿಸಿಕೊಡುವ ಪ್ರಯತ್ನವಾಗಬೇಕು. ಆದರೆ ಅದನ್ನು ಮಾಡುವವರಾರು ಹೇಳಿ? ನಮ್ಮವರೇ ಅಲ್ಪಸಂಖ್ಯಾತರನ್ನು ಪ್ರಶ್ನಿಸುವುದಕ್ಕೆ ಬಿಡುವುದಿಲ್ಲ, ಕೇಸ್‌ ಹಾಕುತ್ತಾರೆ. ಸರಿ ಮಾಡುವುದಾದರೂ ಹೇಗೆ?

ನಾನು ಜೈಪುರ ಲಿಟ್‌ ಫೆಸ್ಟ್‌ಗೆ ಹೋದಾಗ ಅಲ್ಲಿ ಪತ್ರಕರ್ತರು ಕೇಳಿದ್ರು, ಸೆಕ್ಯುಲರ್‌ವಾದಿಗಳ ಬಗ್ಗೆ ಏನ್‌ ಹೇಳ್ತೀರ ಅಂತ. ಅದಕ್ಕೆ ಹೇಳಿದೆ, ಅವ್ರಷ್ಟು ಕಪಟವೇಷಧಾರಿಗಳು ಯಾರೂ ಇಲ್ಲ ಎಂದು.

ಔರಂಗ್‌ಜೇಬ್‌ ಏನು ಮೂನಾಲ್ಕು ದೇವಸ್ಥಾನಗಳನ್ನಾ ನಾಶ ಮಾಡಿರೋದು? ಸೀತಾ ರಾಮ್‌ ಗೋಯಲ್‌ ಬರೆದಿರುವ ಹಿಂದೂ ಟೆಂಪಲ್ಸ್‌ ವಾಟ್‌ ಹ್ಯಾಪಂಡ್‌ ಟು ದೆಮ್‌ ಎಂಬ ಪುಸ್ತಕದಲ್ಲಿ ದೇವಸ್ಥಾನಗಳನ್ನು ಯಾರು ಹೇಗೆ ನಾಶ ಮಾಡಿದ್ದಾರೆ ಎಂಬುದನ್ನು ವಿವರವಾಗಿ ಎಲ್ಲವನ್ನೂ ಹೇಳಿದ್ದಾರೆ. ಎಡಪಂಥೀಯರ ಉಪಟಳ ಹೇಳುತ್ತಾ ಹೋದರೆ, ಮುಗಿಯಲ್ಲ.

10. ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮಗಳು ಸುಧಾರಣೆವಾಗಬಹುದಾ? ಆಗಿದೆಯಾ?

ಕ್ರಿಶ್ಚಿಯಾನಿಟಿ ಬಹಳ ಸುಧಾರಣೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲೆಲ್ಲ ಅವರೇ ಅಲ್ಲವಾ ಇರೋದು? ಎಷ್ಟೊಂದು ಮುಂದೆ ಹೋಗಿದ್ದಾರೆ ನೋಡಿ. ಅಲ್ಲಿನ ಸಮಸ್ಯೆ ಏನೆಂದರೆ, ನಮ್ಮ ರಿಲಿಜನ್‌ ಬಿಟ್ಟು ಬೇರೆ ಯಾವುದು ನೋಡಿರದ ಕಾರಣ ಅವರು ಇತರೆ ಧರ್ಮಗಳನ್ನು ಒಪ್ಪಿಕೊಳ್ಳುವುದಕ್ಕೇ ತಯಾರಿರುವುದಿಲ್ಲ. ಆದರೆ ಈಗ ಡೇವಿಡ್‌ ಫ್ರಾಲಿಯವರು ವಾಮದೇವ ಶಾಸ್ತ್ರಿಯಾಗಿ ಎಷ್ಟು ಸಾಧನೆ ಮಾಡಿದ್ದಾರೆ ನೋಡಿ. ಆದರೆ ಇಸ್ಲಾಂನಲ್ಲಿ ಹಾಗಲ್ಲ. ಅಲ್ಲಿ ಈಗಿನ ಕಾಲಕ್ಕೆ ತಕ್ಕಂತೆ ವಿದ್ಯಾಭ್ಯಾಸ ಇಲ್ಲ. ವಿದ್ಯಾಭ್ಯಾಸ ಮಾಡಬೇಕಾ? ಕುರಾನ್‌ ಓದು ಎನ್ನುತ್ತಾರೆ. ಆ ರಿಲಿಜನ್‌ನಲ್ಲಿ ಒಂದು ಬೇಲಿಯನ್ನು ಹಾಕಿಕೊಂಡಿದ್ದಾರೆ. ಅವರು ಅದರ ಒಳಗೇ ಇರುತ್ತಾರೆ. ಸುಧಾರಣೆ ಆಗುವುದಿಲ್ಲ.

11. ಬಹಳ ರಾಜರಿಂದ ಆಳಿಸಿಕೊಂಡವರು ನಾವು. ನಮ್ಮ ಸಂಸ್ಕೃತಿಯಲ್ಲಿ ಬೇರೆ ಧರ್ಮಗಳ ಸಂಸ್ಕೃತಿಯ ಕುರುಹು ಏನಾದರೂ ಇದೆಯಾ? ಅದನ್ನು ಪತ್ತೆ ಹಚ್ಚಿ ಸರಿಪಡಿಸುವುದು ಹೇಗೆ?

· ಯಾಕಿಲ್ಲ ಬಹಳ ಇದೆಯಲ್ಲ. ನೀವೆಲ್ಲ ರಾಜಸ್ಥಾನದ ರಾಜರ ಬಗ್ಗೆ ಕೇಳಿರುತ್ತೀರಿ ಇಲ್ಲ ಓದಿರುತ್ತೀರಿ. ಆ ರಜಪೂತರು ಬಹಳ ಪರಾಕ್ರಮಿಗಳು ಎಂದೂ ಕೇಳಿದ್ದೇವೆ. ಆದರೆ ಅದು ಒಂದು ಮುಖ ಆಯ್ತು. ಮತ್ತೊಂದು ಮುಖ ಏನೆಂದರೆ, ರಜಪೂತರು ಯಾಕೆ ಸುಮ್ಮನೆ ಇಸ್ಲಾಮಿಕ್‌ ರಾಜರ ಜತೆ ಹೊಡೆದಾಡೋದು ಎಂದು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಇಸ್ಲಾಮಿಕ್‌ ರಾಜರಿಗೆ ಕೊಟ್ಟು ಮದುವೆ ಮಾಡಿ ಕೊಟ್ಟರು. ಪರಿಣಾಮ ಸಂಸ್ಕೃತಿಯೂ ಎರವಲಾಗಿ ಬಂತು. ರಜಪೂತರ ಅರಮನೆ ಕಟ್ಟುವಾಗ ಜನಾನಾ ಮತ್ತು ಮರ್ದಾನಾ ಎಂಬ ಎರಡು ವಿಭಾಗಗಳನ್ನು ಮಾಡಿ ಕಟ್ಟಿದ್ದಾರೆ. ಜನಾನಾ ಎಂದರೆ ಹಿಂಭಾಗದಲ್ಲಿರುವ ಮಹಲ್ಲು. ಅಲ್ಲಿ ಹೆಂಗಸರಿಗೆ ಮಾತ್ರ ಪ್ರವೇಶ. ಮರ್ದಾನಾ ಎಂದರೆ ಗಂಡಸರಿರುವ ಮಹಲ್ಲು. ಇದೆಲ್ಲ ಹಿಂದೂ ರಾಜರು ಕಟ್ಟಿದ ಅರಮನೆಯಲ್ಲಿ ಇರಲಿಲ್ಲವಲ್ಲ. ದುರಂತ ಏನಾಯ್ತು ಎಂದರೆ, ಹಿಂದೂ ರಾಜರ ಮನೆಯಲ್ಲೂ ಇಂಥ ಪದ್ಧತಿ ಬಂದಿತ್ತು.

ನಿಜವಾಗಿಯೂ ಹೇಳಬೇಕೆಂದರೆ, ಇದು ಸರಿಯಾಗುವುದಕ್ಕೆ ನಮ್ಮಲ್ಲೇ ಜಾಗೃತಿ ಮೂಡಬೇಕು. ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ ಬಹಳ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಆದರೆ ಈ ದೇಶದ ಜನಸಂಖ್ಯೆಗೆ ಹೋಲಿಸಿಕೊಂಡರೆ, ಆರೆಸ್ಸೆಸ್‌ ಮಾಡಿದ್ದು ಸಹ ಕಡಿಮೆಯೇ. ಇನ್ನೂ ದೊಡ್ಡ ತಪಸ್ಸು ಮಾಡಬೇಕಿದೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya