ಸಿಬಿಐ ನಿರ್ದೇಶಕ ನಾಗೇಶ್ವರರನ್ನು ಕಂಡರೆ ನಡುಕವೇಕೆ ಗೊತ್ತಾ?

ಸಿಬಿಐನ ನಂಬರ್‌ 1 ಮತ್ತು ನಂಬರ್‌ 2 ಅಧಿಕಾರಿಗಳು ಮಕ್ಕಳ ಹಾಗೆ ಜಗಳ ಆಡಿಕೊಂಡಿದ್ದರಿಂದ ಹಂಗಾಮಿ ನಿರ್ದೇಶಕರನ್ನಾಗಿ ಎಂ. ನಾಗೇಶ್ವರ್‌ ರಾವ್‌ ಅವರನ್ನು ನೇಮಿಸಲಾಯಿತು. ನೇಮಕವಾಗುತ್ತಿದ್ದಂತೆ ಅವರ ಮೇಲೆ ಮಾಧ್ಯಮಗಳು, ರಾಜಕಾರಣಿಗಳು, ಸಾಹಿತಿಗಳು, ಹೋರಾಟಗಾರರು ಎಲ್ಲರೂ ಸೇರಿಕೊಂಡು ಇವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದೇ ಜನರು ಅಲೋಕ್‌ ವರ್ಮಾ ಮತ್ತು ರಾಜೇಶ್‌ ಅಸ್ತಾನನಾ ನೇಮಕವಾದಾಗಲೂ ಹುಯಿಲೆಬ್ಬಿಸಿದರು. ಮೋದಿ ಸರ್ಕಾರದಿಂದ ನೇಮಕವಾದವರು ಅಂದರೆ ಅವರನ್ನು ವಿರೋಧಿಸುವುದೇ ಇವರ ಕೆಲಸ.
ಆ ಉದಾಹರಣೆಗಳು ಮತ್ತು ಅದರ ಬಾಲಿಶತನವನ್ನು ಮತ್ತು ಜನರ ಆಶಾಡಭೂತಿತನವನ್ನು ನಿಮ್ಮ ಮುಂದಿಡುತ್ತೇನೆ.

ನಾಗೇಶ್ವರ್‌ ರಾವ್‌ ಸಿಬಿಐ ನಿರ್ದೇಶಕ ಹುದ್ದೆಗೆ ನಿಯೋಜನೆಗೊಂಡಾಗ ಮೊದಲು ಬುಡಕ್ಕೆ ಬೆಂಕಿ ಬಿದ್ದಿದ್ದು ಎನ್‌ಡಿಟಿವಿ ಎಂಬ ಸುದ್ದಿ ವಾಹಿನಿಗೆ. ನಾಗೇಶ್ವರ್‌ ರಾವ್‌ ಬಗ್ಗೆ ಅದೆಂಥದ್ದೋ ಹುಡುಕಿ, ಹೊಸತಾಗಿ ನಿಯೋಜನೆಗೊಂಡಿರುವ ಅಧಿಕಾರಿಯ ಪತ್ನಿ ಸಂಧ್ಯಾ ಅವರು ಅಮೆರಿಕದ ಫ್ಲೋರಿಡಾದಲ್ಲಿ 4 ಕೋಟಿ ರುಪಾಯಿ ವೆಚ್ಚದಲ್ಲಿ, 2015ರಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಬೊಬ್ಬಿರಿಯಿತು. ಅಲ್ಲದೇ ನೀವು ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡಿದ್ದೀರಿ ಎಂದೂ ಹೇಳಿ, ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳು ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿತು.

ಪತ್ರಿಕೋದ್ಯಮದಲ್ಲಿ ಒಂದು ಅಘೋಷಿತ ತಂತ್ರವಿದೆ. ಯಾವುದಾದರೂ ವ್ಯಕ್ತಿಯನ್ನು ಜನರ ಕಣ್ಣಿನಲ್ಲಿ ಕೆಟ್ಟದಾಗಿ ಕಾಣುವಂತೆ ಮಾಡಬೇಕು ಎಂದರೆ, ಒಂದೋ ಆ ವ್ಯಕ್ತಿ ಭ್ರಷ್ಟ ಎನ್ನುವುದು ಅಥವಾ ಆ ವ್ಯಕ್ತಿ ಒಬ್ಬ ಹೆಣ್ಣುಬಾಕ ಎಂದುಬಿಡುವುದು. ಹಾಗೆ ಹೇಳಿದರೆ, ಜನರಷ್ಟೇ ಏಕೆ, ಪತ್ರಕರ್ತರು ಹೌದಾ ಎಂದು ಹುಬ್ಬು ಏರಿಸುತ್ತಾರೆ. 10 ವರ್ಷದಿಂದ ಆ ವ್ಯಕ್ತಿಯ ಬಳಿ ಸೈಕಲ್‌ ಇತ್ತು ಈಗ ಕಾರ್‌ ಇದೆ. ಇದೆಲ್ಲ ಹೇಗೆ ಎಂದು ಕೇಳಿ ಸುಮ್ಮನಾದರೆ, ಮಾಧ್ಯಮದ ಕೆಲಸ ಮುಗಿಯಿತು. ಆದರೆ, ಅದೇ ಸೈಕಲ್‌ನಲ್ಲಿ ಪೇಪರ್‌ ಹಾಕಿ ಮೇಲೆ ಬಂದಿರುವ ವಿಚಾರ ಗೊತ್ತೇ ಆಗುವುದಿಲ್ಲ. ಬಾಕಿ ಪ್ರಕರಣಗಳಲ್ಲಿ ಪ್ರಕರಣ ಸಾಬೀತಾಗುವವರೆಗೆ ವ್ಯಕ್ತಿ ನಿರಪರಾಧಿಯಾಗಿರುತ್ತಾನೆ. ಆದರೆ ಇಂಥ ಆರೋಪಗಳು ಬಂದಾಗ, ಆರೋಪದ ಸುಳ್ಳು ಎಂದು ಸಾಬೀತಾಗುವವರೆಗೂ ಆತ ಅಪರಾಧಿಯಾಗಿರುತ್ತಾನೆ. ಈಗ ಎನ್‌ಡಿಟಿವಿ ಉಪಯೋಗಿಸಿರುವುದೂ ಅಂಥ ತಂತ್ರವೇ.
ಫ್ಲೋರಿಡಾದ ಮತದಾರರ ಪಟ್ಟಿಯಲ್ಲಿ ನಾನು ಹುಡುಕಿದಾಗ ನನಗೆ ಸಿಕ್ಕ ಮಾಹಿತಿ ಏನೆಂದರೆ, ಅಲ್ಲಿ ಸಂಧ್ಯಾ ಎಂಬ ಹೆಸರಿನವರು ಆಸ್ತಿ ಖರೀದಿ ಮಾಡಿದ್ದಾರೆ ನಿಜ. ಆದರೆ, ಆ ಮಹಿಳೆಗೆ ಅದಾಗಲೇ 62 ವರ್ಷ ಆಗಿದೆ. ಅಂದರೆ, ನಾಗೇಶ್ವರ ರಾವ್‌ ಅವರಿಗಿಂತ 5 ವರ್ಷ ಹಾಗೂ ನಾಗೇಶ್ವರ್‌ ರಾವ್‌ ನಿಜವಾದ ಪತ್ನಿ ಸಂಧ್ಯಾ ಅವರಿಗಿಂತ ಅಮೆರಿಕದಲ್ಲಿ ನೆಲೆಸಿರುವ ಸಂಧ್ಯಾ ಅವರು 11 ವರ್ಷ ಹಿರಿಯರು. ಅವರ ಸಂಬಂಧಿಗಳ ಪಟ್ಟಿಯಲ್ಲಿ ಗಂಡನ ಮತ್ತು ಮಕ್ಕಳ ಹೆಸರು ಬೇರೆಯೇ ಇದೆ. ನಾಗೇಶ್ವರ್‌ ರಾವ್‌ ಅವರ ಹೆಸರಿಲ್ಲ. ಆಸ್ತಿ ಕಥೆ ಹಾಳಾಗಲಿ ಮಾರಾಯ್ರೆ, ಸಂಧ್ಯಾರಿಗೆ ಅಮೆರಿಕದಲ್ಲಿ ಮತ್ತೊಂದು ಗಂಡ ಇದ್ದಾನೆ ಎಂಬ ವಿಷಯ ಕೇಳಿ, ಸುಖ ಸಂಸಾರ ಮಾಡುತ್ತಿರುವ ನಾಗೇಶ್ವರ್‌ ರಾವ್‌ ಅವರಿಗೆ ಹೇಗಾಗಬೇಡ?! ನಿಜವಾಗಿ ಅದು ಇನ್ನೂ ಹೆಚ್ಚು ಟಿಆರ್‌ಪಿ ತರುವ ಸುದ್ದಿಯಲ್ಲವೆ?

ಅಸಲಿ ಕಾರಣ ಇಷ್ಟೇ, ಎನ್‌ಡಿಟಿವಿ ವಿರುದ್ಧ ಸಿಬಿಐ ಮಡಿಲಲ್ಲಿ ಎರಡು ಪ್ರಕರಣಗಳಿವೆ. ಎನ್‌ಡಿಟಿವಿ ಸ್ಥಾಪಕ ಪ್ರಣಯ್‌ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ವಿರುದ್ಧವೂ ಸಿಬಿಐನಲ್ಲಿ ಪ್ರಕರಣಗಳಿದೆ. ಅವರ ಮನೆ ಮೇಲೆ ದಾಳಿ ಸಹ ಮಾಡಿದ್ದರು. ನಾಗೇಶ್ವರ್‌ ರಾವ್‌ ಬಂದರೆ, ತನಿಖೆ ಬೇಗ ಮುಗಿಸಿ ಒಂದು ಗತಿ ಕಾಣಿಸುತ್ತಾರೆಂದು ಅವರ ಪೊಲೀಸ್‌ ದಾಖಲೆಗಳು ಹೇಳುತ್ತವೆ.

ಇನ್ನು ಬಹುತೇಕ ಜನರು ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದಾರೆ. ಕೆಲವರಂತೂ ರಾತ್ರಿ ಬೆಚ್ಚಿಬಿದ್ದು ಎದ್ದು ಟ್ವೀಟ್‌ ಮಾಡುತ್ತಾ ತಮ್ಮ ಆತಂಕವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಯುಗ್‌ ಮೋಹಿತ್‌ ಚೌಧರಿ ಎಂಬ ವಕೀಲ, ಮೀನಲ್‌ ಬಘೇಲ್‌ ಎಂಬ ಪತ್ರಕರ್ತೆ, ಅನುಶಾ ರೊಝ್ವಿ, ಶಿವಂ ವಿಜಿ ಎಂಬ ಪ್ರಿಂಟ್‌ ಜಾಲತಾಣದ ಸಂಪಾದಕ, ಅನುಜ್‌ ಭಗವತಿ, ಮಯಾಂಕ್‌ ಮಿಶ್ರಾ ಎಂಬ ವಕೀಲ ಹೀಗೆ ಹಲವಾರು ಜನರು ನಾಗೇಶ್ವರ್‌ ರಾವ್‌ ಅವರನ್ನು ಟ್ವಿಟರ್‌ನಲ್ಲಿ ಟೀಕಿಸುತ್ತಿದ್ದಾರೆ. ಶಿವಂ ವಿಜಿ ವರಂತೂ ನಾಗೇಶ್ವರ್‌ ರಾವ್‌ ವಿರುದ್ಧ ಸುಮಾರು 95ಕ್ಕೂ ಅಧಿಕ ಟ್ವೀಟ್‌/ರೀಟ್ವೀಟ್‌ಗಳನ್ನು ಮಾಡಿದ್ದಾನೆ.

ಅವನ ಪ್ರಿಂಟ್‌ ಜಾಲತಾಣದಲ್ಲೂ ಲೇಖನಗಳ ಮೇಲೆ ಲೇಖನ ಬರೆದಿದ್ದಾನೆ. ಸಾಮಾನ್ಯವಾಗಿ ಜನರು ಏನೆಂದುಕೊಳ್ಳುತ್ತಾರೆ ಗೊತ್ತಾ? ಇಂಥ ವಿದ್ಯಾವಂತರು ಹೀಗೆಲ್ಲ ಟ್ವೀಟ್‌ ಮಾಡುತ್ತಿದ್ದಾರೆ ಎಂದರೆ, ಖಂಡಿತವಾಗಿಯೂ ಇದರಲ್ಲಿ ಸತ್ಯ ಇರುತ್ತದೆ ಎಂದು.
ಆದರೆ ಸತ್ಯ ಏನೆಂದರೆ, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿಬಿದ್ದ ಮಹಮ್ಮದ್‌ ಅಜ್ಮಲ್‌ ಕಸಬ್‌ನನ್ನು ದಯವಿಟ್ಟು ನೇಣಿಗೆ ಏರಿಸದೇ, ದಯೆ ತೋರಿ ಜೀವಂತವಿರಲು ಬಿಡಿ ಎಂದು ಪತ್ರ ಬರೆದವರು ಇದೇ ಬುದ್ಧಿಜೀವಿಗಳು. ಅಜ್ಮಲ್‌ ಕಸಬ್‌ನನ್ನು ಗಲ್ಲಿಗೇರಿಸಬೇಡಿ ಎಂದು 23 ಜನರು ಪತ್ರ ಬರೆದಿದ್ದು, ಅದರಲ್ಲಿ 5 ಜನರು ಬಹಿರಂಗವಾಗಿ ನಾಗೇಶ್ವರ್‌ ರಾವ್‌ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ನಮ್ಮ ದೇಶಕ್ಕೆ ಬಂದು ದಾಳಿ ಮಾಡಿದ ವ್ಯಕ್ತಿಯನ್ನು ಬೆಂಬಲಿಸುವವರು ನಾಗೇಶ್ವರ್‌ ರಾವ್‌ ಅವರನ್ನು ವಿರೋಧಿಸುತ್ತಿದ್ದಾರೆ ಎಂದರೆ, ಖಂಡಿತವಾಗಿಯೂ ನಾಗೇಶ್ವರ್‌ ರಾವ್‌ ಅವರು ಒಬ್ಬ ದೇಶಪ್ರೇಮಿಯಾಗಿರುತ್ತಾರೆ ಎಂಬುದರಲ್ಲಿ ನನಗಂತೂ ಅನುಮಾನವಿಲ್ಲ.
ಇನ್ನು ನಾಗೇಶ್ವರ್‌ ರಾವ್‌ ಅವರು ಯಾಕಾಗಿ ಟಾರ್ಗೆಟ್‌ ಆಗುತ್ತಿದ್ದಾರೆ ಮತ್ತು ಕಾಂಗ್ರೆಸ್‌ ಯಾಕೆ ಅವರ ಹಿಂದೆ ಬಿದ್ದಿದೆ ಎಂಬುದನ್ನು ಹುಡುಕುತ್ತಾ ಹೋದರೆ, ಕರ್ನಾಟಕಕ್ಕೆ ಬಂದು ನಿಲ್ಲುತ್ತದೆ.

ಡಿವೈಎಸ್‌ಪಿ ಗಣಪತಿಯವರು ಸಾಯುವ ಮುನ್ನ ಜಾರ್ಜ್‌ ಮತ್ತು ಇತರರ ಹೆಸರು ಹೇಳಿ ಸಾವನ್ನಪ್ಪಿದ್ದರು. ಆ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿತ್ತು. ಜನರ ಪ್ರತಿಭಟನೆಯ ನಂತರ ಅದನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಚೆನೈನಲ್ಲಿರುವ ಸಿಬಿಐಗೆ ಅದು ಬಂದಿತ್ತು. ಚೆನೈನಲ್ಲಿ ನಾಗೇಶ್ವರ ರಾವ್‌ ಇದ್ದರು. ಡಿವೈಎಸ್‌ಪಿ ಗಣಪತಿ ಪ್ರಕರಣಕ್ಕೆ ಮೆಲುಸ್ತುವಾರಿ ಅಧಿಕಾರಿಯಾಗಿದ್ದಿದ್ದೇ ನಾಗೇಶ್ವರ್‌ ರಾವ್‌. ಪ್ರಕರಣ ಹೊಸ ಹೊಸ ಟ್ವಿಸ್ಟ್‌ಗಳು ಪಡೆಯುತ್ತಿತ್ತು.

ಕೊಡಗಿನ ಮರಗಳ್ಳನಾಗಿರುವ ಕರ್ನಾಟಕ ಕಾಂಗ್ರೆಸ್‌ನ ರಾಜಕಾರಣಿಯೊಬ್ಬ ಪಾಂಡಿಚೆರಿಯ ಡಿಜಿಪಿ ಆಗಿದ್ದ ಅಲೋಕ್‌ ವರ್ಮಾ ಹಾಗೂ ಪಾಂಡಿಚೆರಿಯ ಮುಖ್ಯಮಂತ್ರಿ ನಾರಾಯಣ ಸ್ವಾಮಿಯವರ ದಯೆಯಿಂದ ರಾವ್‌ ಅವರನ್ನು ದೆಹಲಿಗೆ ಎತ್ತಂಗಡಿ ಮಾಡಿಸಿದರು.

ಈ ನಾಗೇಶ್ವರ್‌ ರಾವ್‌ ಅವರೇ ಈಗ ಸಿಬಿಐ ನಿರ್ದೇಶಕರ ಸ್ಥಾನದಲ್ಲಿ ಕುಳಿತಿರುವುದು ಯಾರಿಗೆ ತಾನೆ ಸಹಿಸಲು ಸಾಧ್ಯ ಹೇಳಿ? ಮರಗಳ್ಳನ ಹುಳುಕುಗಳು ಹೊರಬರುವುದಿಲ್ಲವೇ? ಸುಮಾರು ಶಾಸಕರಿಗೆ ಚುನಾವಣೆಯಲ್ಲಿ ಹಣ ಸಂದಾನ ಮಾಡುವವನ ಕೈಗೆ ಕೋಳ ಬೀಳುವುದು ಕಾಂಗ್ರೆಸ್‌ನಿಂದ ಊಹಿಸಲಿಕ್ಕೂ ಸಾಧ್ಯವಿಲ್ಲ.
ಭ್ರಷ್ಟಾಚಾರ ತಿಳಿಯಬೇಕಾದರೆ ಹಣದ ಮೂಲ ಹುಡುಕಬೇಕು. ಹಾಗೇ ನಾಗೇಶ್ವರ್‌ ರಾವ್‌ ಅವರನ್ನು ವಿರೋಧಿಸುವವರ ಇತಿಹಾಸ ಒಮ್ಮೆ ಕೆದಕಿ ನೋಡಿದರೆ, ಎಂಥೆಂಥವರು ಇದ್ದಾರೆ ಎಂದು ತಿಳಿಯುತ್ತದೆ. ಏಕೆಂದರೆ ಇವರ ಮೇಲೆ ಒಂದೋ ಸಿಬಿಐ ಪ್ರಕರಣಗಳಿವೆ ಅಥವಾ ದೇಶವಿರೋಧಿಗಳಾಗಿರುತ್ತಾರೆ.

ಇವರನ್ನು ಅಟ್ಯಾಕ್‌ ಮಾಡುವುದಕ್ಕೆ ಒಂದು ತಂಡವೇ ರಚನೆಯಾಗಿದೆ. ಸಿಬಿಐನಲ್ಲಿ ಯಾವಾಗ ಗಲಭೆ ಶುರುವಾಯಿತೋ ಆಗ ನಾಗೇಶ್ವರ್‌ ರಾವ್‌ ಅವರೇ ನಿರ್ದೇಶಕರಾಗುತ್ತಾರೆ ಎಂದು ಗ್ರಹಿಸಿ ಒಂದಷ್ಟು ಟ್ವಿಟರ್‌ ಖಾತೆಗಳು ತೆರೆದುಕೊಂಡು ರಾವ್‌ ವಿರುದ್ಧ ಬರೆಯಲಾರಂಭಿಸಿದರು. ಪ್ರಭು ಅದ್ವಿತೀಯ ಎಂಬ ಟ್ವಿಟರ್‌ ಖಾತೆಯು ಡಿವೈಎಸ್‌ಪಿ ಗಣಪತಿ ಹತ್ಯೆಯ ಪ್ರಕರಣ ಸಿಬಿಐಗೆ ವರ್ಗಾವಣೆಯಾದಾಗಿನಿಂದ ಅಂದರೆ, ಸೆಪ್ಟೆಂಬರ್‌ 2017ರಿಂದ ಶುರುವಾಗಿದ್ದು, ಬರೆಯಯುವುದೆಲ್ಲವೂ ನಾಗೇಶ್ವರ್‌ ರಾವ್‌ ವಿರುದ್ಧವೇ. ಇವರ ಟ್ವಿಟರ್‌ ಖಾತೆಯನ್ನು ಫಾಲೋ ಮಾಡುತ್ತಿರುವುದು ಸವುಕ್ಕು ಶಂಕರ್‌ ಎಂಬ ಪತ್ರಕರ್ತ. ಇವನು ಸವುಕ್ಕು ಎಂಬ ಜಾಲತಾಣ ತೆರೆಯುವುದಕ್ಕಿಂತ ಮುನ್ನ ಸ್ಟೇಟ್‌ ವಿಜಿಲೆನ್ಸ್‌ ಮತ್ತು ಆ್ಯಂಟಿ ಕರಪ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿದ್ದ. ಬಹಳ ಸೂಕ್ಷ್ಮ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರಿಂದ ಜೈಲಿಗೆ ಹೋಗಿದ್ದ. ಹೊರಗೆ ಬಂದು ತಾನು ಆರ್‌ಟಿಐ ಕಾರ್ಯಕರ್ತ ಎಂದು ಹೇಳಿದ್ದ. ಈಗ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದಾನೆ. ಇವನ ಜಾಲತಾಣದಲ್ಲಿ ಎಲ್‌ಟಿಟಿಇ ಉಗ್ರ ಪ್ರಭಾಕರನ್‌ ಚಿತ್ರವನ್ನು ಚಿಹ್ನೆ ರೀತಿ ಬಳಸಿದ್ದಕ್ಕೆ ಇವನ ಜಾಲತಾಣವನ್ನು ಕೋರ್ಟ್‌ ಮುಚ್ಚಿಸಿತ್ತು ಸಹ. ಇಂಥ ಶಂಕರನ ಪ್ರಕರಣ ಸಿಬಿಐನಲ್ಲಿದ್ದರೂ ತನಿಖೆ ಚುರುಕುಗೊಳ್ಳುತ್ತಿರಲಿಲ್ಲ. ನಾಗೇಶ್ವರ್‌ ರಾವ್‌ ಚೆನೈ ಸಿಬಿಐನಲ್ಲಿದ್ದಾಗ ತನಿಖೆಯನ್ನು ಚುರುಕುಗೊಳಿಸಿದ್ದರು. ಇದರಿಂದ ರಾವ್‌ ಬಗ್ಗೆ ಶಂಕರ್‌ ಬರೆಯುವುದಕ್ಕೆ ಶುರು ಮಾಡಿದ. ನಾಗೇಶ್ವರ್‌ ರಾವ್‌ ಬಹಳ ಘಾಟಿ. ಅದನ್ನು ತಡೆದುಕೊಳ್ಳುವುದಕ್ಕೆ ಇವರ ಬಳಿ ಆಗುತ್ತಿಲ್ಲವಷ್ಟೇ. ಅಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣ, ವಿಜಯ್‌ ಮಲ್ಯಾರನ್ನು ದೇಶಕ್ಕೆ ವಾಪಸ್‌ ತರುವ ಪ್ರಕರಣ ಸೇರಿದಂತೆ ಹಲವಾರು ಪ್ರಕರಣ ನಾಗೇಶ್ವರ್‌ ರಾವ್‌ ಅವರೇ ನೋಡಿಕೊಳ್ಳಬೇಕಿರುವುದರಿಂದ ಕಾಂಗ್ರೆಸ್‌ಗಂತೂ ರಾವ್‌ ತಲೆ ಬಿಸಿಯಾಗಿದ್ದಾರೆ.

ಹಾಗಾದರೆ ನಾಗೇಶ್ವರ್‌ ರಾವ್‌ ನಿಜಕ್ಕೂ ಯಾರು? ಅವರ ಸಾಮರ್ಥ್ಯ‌ವೇನು?
ಮೂಲತಃ ತೆಲಂಗಾಣದ ವಾರಂಗಲ್‌ನವರಾದ ರಾವ್‌, ಒಸ್ಮಾನಿಯಾ ವಿವಿಯಲ್ಲಿ ಪಿಜಿ ಮಾಡಿ, ಮದ್ರಾಸ್‌ ಐಐಟಿಯಲ್ಲಿ ಸಂಶೋಧನೆಯನ್ನೂ ಮಾಡಿದ್ದಾರೆ. ಇವೆಲ್ಲವೂ 1986ರಲ್ಲಿ ಐಪಿಎಸ್‌ ಆಗುವುದಕ್ಕಿಂತ ಮುಂಚಿನ ಮಾತು. ಓಡಿಶಾದಲ್ಲಿ ಎಸ್‌ಪಿ ಆಗಿದ್ದಾಗ 1996ರಲ್ಲಿ ಅತ್ಯಾಚಾರ ಪ್ರಕರಣವೊಂದರ ತನಿಖೆ ಮಾಡುತ್ತಿರುವಾಗ, ಬೆರಳಚ್ಚು ತಂತ್ರಜ್ಞಾನವನ್ನು ಮೊದಲು ಪರಿಚಯಿಸಿದ ಅಧಿಕಾರಿ ಅವರು. ಇದಾದ ಮೇಲೆ ಅಗ್ನಿಶಾಮಕ ದಳದಲ್ಲಿದ್ದಾಗ 2013 ಮತ್ತು 2014ರಲ್ಲಿ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಆಗ ಸಲ್ಲಿಸಿದ ಅಪ್ರತಿಮ ಸೇವೆಗೆ ಮುಖ್ಯಮಂತ್ರಿಗಳ ಪ್ರಶಸ್ತಿ, ವಿಶೇಷ ಕರ್ತವ್ಯ ಪದಕ, ಓಡಿಶಾ ರಜ್ಯಪಾಲರ ಪದಕ, ರಾಷ್ಟ್ರಪತಿಗಳ ಪೊಲೀಸ್‌ ಪದಕಗಳು ಸಿಕ್ಕಿದೆ.

2008ರಲ್ಲಿ ಸಿಆರ್‌ಪಿಎಫ್‌ ಐಜಿಪಿಯಾಗಿದ್ದಾಗ ನಕ್ಸಲರ ವಿರುದ್ಧ ಲಾಲ್‌ಘರ್‌ ಕಾರ್ಯಾಚರಣೆ ಮಾಡಿಸಿದ್ದು ಇವರೇ. ಮಣಿಪುರದಲ್ಲಿ ಸಿಆರ್‌ಪಿಎಫ್‌ನ ಡಿಐಜಿಯಾಗಿದ್ದಾಗ ಬಂಡಾಯಕೋರರಿಗೆ ಸಿಂಹಸ್ವಪ್ನವಾಗಿದ್ದವರು ರಾವ್‌. ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಕೇಳಿರುತ್ತೀರಿ. ಸಂಬಲ್‌ಪುರ್‌ ಎರಡನೇ ಬೆಟಾಲಿಯನ್‌ನ್ನು ಕೇಳಿ ಮಂಜೂರು ಮಾಡಿಸಿದ್ದು ಇವರೇ.

ಹೇಳುತ್ತಾ ಹೋದರೆ ಇನ್ನೂ ಸಾಕಷ್ಟಿದೆ. ಏಕೆಂದರೆ, ಇವರು ಹೋದಲ್ಲೆಲ್ಲ ಸುಮ್ಮನೆ ಕೂತು ಶಿಸ್ತಾಗಿ ಸಮವಸ್ತ್ರ ಧರಿಸಿಕೊಂಡು ಕಿರಿಯ ಅಧಿಕಾರಿಗಳಿಂದ ಸಲ್ಯೂಟ್‌ ಪಡೆದು ಬರುವವರಾಗಿರಲಿಲ್ಲ. ಜನರಿಂದ ಸಲ್ಯೂಟ್‌ ಪಡೆದವರು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya