ಬೆಚ್ಚಿ ಬೀಳಿಸುವ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇತಿಹಾಸ!

 

ಜಾರಿ ನಿರ್ದೇಶನಾಲಯವು ಬೆಂಗಳೂರಿನ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಮೇಲೆ ದಾಳಿ ಮಾಡಿದೆ. ಇದನ್ನು ತಮ್ಮ ಸ್ವಾತಂತ್ರ್ಯ ಹರಣ ಎಂದು ಆಮ್ನೆಸ್ಟಿಹೇಳಿದರೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಅನ್ವಯ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇಂಡಿಯಾ ಫೌಂಡೇಷನ್‌, ಎಫ್‌ಸಿಆರ್‌ಎನ ಎಲ್ಲ ನೀತಿಗಳನ್ನು ಗಾಳಿಗೆ ತೂರಿ, ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈ. ಲಿ ಹೆಸರಿನಲ್ಲಿ ಸ್ವತಂತ್ರ ಸಂಘಟನೆಯ ಹೆಸರಿನಲ್ಲಿ 36 ಕೋಟಿ ರುಪಾಯಿ ವಿದೇಶಿ ದೇಣಿಗೆಯನ್ನು ಪಡೆಯುವುದಲ್ಲದೇ ಅದನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬುದಕ್ಕೆ ದಾಳಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಈ ದಾಳಿ ಮಾಡುವುದಕ್ಕೆ 36 ಕೋಟಿ ರುಪಾಯಿಯ ಅವ್ಯವಹಾರ ಒಂದು ನೆಪ ಮಾತ್ರ. ಏಕೆಂದರೆ, ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇದನ್ನೆಲ್ಲ ಮೀರಿ ನಿಂತಿರುವ ಒಂದು ಬೃಹತ್‌ ಸಂಸ್ಥೆ. 36 ಕೋಟಿ ಎಂಬುದೆಲ್ಲ ಅದಕ್ಕೆ ಚಿಕ್ಕಾಸಿನ ಸಮ ಎಂಬುದು ಸಾರ್ವಕಾಲಿಕ ಸತ್ಯ.
ಇನ್ನು ನಮ್ಮ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇವಲ 36 ಕೋಟಿ ಅವ್ಯವಹಾರಕ್ಕೆ ಒಂದು ದೊಡ್ಡ ಸಂಸ್ಥೆಯ ಮೇಲೆ ದಾಳಿ ಮಾಡುವಷ್ಟು ದಡ್ಡರಲ್ಲ ಎಂಬುದು ನೆನಪಿರಲಿ.
ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆ ಬಹಳಷ್ಟು ಕಡೆಗಳಲ್ಲಿ ಉಗ್ರವಾದದ ನಂಟು ಹೊಂದಿರುವುದಲ್ಲದೇ ಅಪಾರ ಪ್ರಮಾಣ ಅವ್ಯವಹಾರದಲ್ಲೂ ಮುಖ್ಯ ಕಚೇರಿ ಮತ್ತು ಅಮೆರಿಕದ ಕಚೇರಿ ಸಿಲುಕಿದೆ. ಇವೆಲ್ಲದರ ಕರಾಳ ಹಿನ್ನೆಲೆಯುಳ್ಳ ಅಮ್ನೆಸ್ಟಿಯ ದಾಳಿ ನಡೆದರೆ ಅದು ಯಾಕಿಷ್ಟು ತಡವಾಗಿಯಾಯ್ತು ಎಂದು ಕೇಳಬೇಕೆ ವಿನಾ? ಯಾಕೆ ದಾಳಿಯಾಯ್ತು ಎಂದು ಕೇಳುವುದು ಮೂರ್ಖತನವಾಗುತ್ತದೆ.

ಮಾನವ ಹಕ್ಕುಗಳ ಹೆಸರಿನಲ್ಲಿ ದೋಖಾ!
ಈಗ ಬೆಂಗಳೂರಿನಲ್ಲಿ ದಾಳಿಯಾಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇಂಡಿಯಾ, ಮಾನವ ಹಕ್ಕು ಪರ ಹೋರಾಟ ಮಾಡುವವರನ್ನು ಕೇಂದ್ರ ಸರ್ಕಾರ ಅಪರಾಧಿಗಳಂತೆ ಕಾಣುತ್ತಿದೆ ಎಂದಿದ್ದಾರೆ. ಇವರು ನಿಜವಾಗಿಯೂ ಮಾನವರ, ಸಜ್ಜನರ ಪರ ಹೋರಾಟ ಮಾಡಿದ್ದಿದ್ದರೆ, ಇವತ್ತು ದಾಳಿಯಾಗುತ್ತಿರಲಿಲ್ಲ. ಆದರೆ ಪ್ರಪಂಚಾದ್ಯಂತ ಮಾನವ ಹಕ್ಕುಗಳ ಹೆಸರಿನಲ್ಲಿ ಉಗ್ರರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರಿಂದ ಬೆಂಗಳೂರಿನಲ್ಲಿ ಇವರ ಮೇಲೆ ದಾಳಿ ಮಾಡಿದ್ದಾರೆ.

ದೇಶವಿರೋಧಿ ಘೋಷಣೆಗಳು
ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಸಂಸ್ಥೆಯು ಬಹಳ ವರ್ಷಗಳಿಂದಲೇ ಬೆಂಗಳೂರಿನಲ್ಲಿ ಬೇರೂರಬೇಕು ಎಂದು ಹಪಹಪಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. 2016ರ ಆಗಸ್ಟ್‌ 15ರಂದು ಉನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ಬ್ರೋಕನ್‌ ಫ್ಯಾಮಿಲೀಸ್‌ ಎಂಬ ಕಾರ್ಯಕ್ರಮ ಮಾಡಿ, ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ನೋವನ್ನು ಅನುಭವಿಸಿರುವ ಕುಟುಂಬವನ್ನು ಕರೆಸಿದ್ದರು. ಅವರೆಲ್ಲರೂ ಮಾತನಾಡುತ್ತಿರುವಾಗ, ಭಾರತದ ವಿರುದ್ಧ ಘೋಷಣೆಯನ್ನೂ ಅಲ್ಲಿದ್ದವರು ಕೂಗಿದ್ದರು ಎಂದು ಎಬಿವಿಪಿಯು ಜೆಸಿ ನಗರ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ಹೋರಾಟಗಳೂ ನಡೆದಿತ್ತು. ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ಚರ್ಚ್‌ಗಳಿಂದ ದೇಣಿಗೆ
ಇಲ್ಲೊಂದು ವಿಶೇಷ ಸಂಗತಿ ಇದೆ. ಆಮ್ನೆಸ್ಟಿಇಂಟರ್‌ನ್‌ಯಾಷನಲ್‌ನ ಅಧಿಕೃತ ನೀತಿಯಲ್ಲಿ ಯಾವುದೇ ಕಾರಣವಾಗಿರಲಿ, ಗರ್ಭಪಾರತಕ್ಕೆ ನಮ್ಮ ಬೆಂಬಲವಿಲ್ಲ ಎಂದು ಬರೆದುಕೊಂಡಿತ್ತು. ಆದರೆ, 2007ರ ಏಪ್ರಿಲ್‌ನಲ್ಲಿ ಸದ್ದಿಲ್ಲದೇ ತನ್ನ ನೀತಿಯನ್ನು ಬದಲಿಸಿಕೊಂಡ ಅಮ್ನೆಸ್ಟಿಇಂಟರ್‌ನ್ಯಾಷನಲ್‌, ಅತ್ಯಾಚಾರಮತ್ತು ತಾಯಿ ಜೀವಕ್ಕೆ ಕಂಟಕವಿರುವ ಸಮಯದಲ್ಲಿ ಗರ್ಭಪಾತ ಮಾಡಿಸುವುದಕ್ಕೆ ಬೆಂಬಲವಿದೆ ಎಂದು ಬದಲಿಸಿಕೊಂಡಿತ್ತು.
ಇದು ಒಳ್ಳೆಯ ನಡೆಯಾದರೂ, ಚರ್ಚ್‌ಗಳ ಕಣ್ಣು ಕೆಂಪುಮಾಡಿತ್ತು. ಕ್ಯಾಥೋಲಿಕ್‌ ಚರ್ಚ್‌ ಅಮ್ನೆಸ್ಟಿಯ ಪರಮ ಬೆಂಬಲಿಗಎಂಬಂತಿತ್ತು. ಅದು ನೀಡಿದ ಒಂದು ಕರೆಗೆ ನೂರಾರು ಜನರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಇಷ್ಟಕ್ಕೇ ಸುಮ್ಮನಾಗದ ಕ್ಯಾಥೋಲಿಕ್‌ ಚರ್ಚ್‌ನ ಪಾಂಟಿಫಿಕಲ್‌ ಕೌನ್ಸಿಲ್‌ ಫಾರ್‌ ಜಸ್ಟಿಸ್‌ ಆ್ಯಂಡ್‌ ಪೀಸ್‌ನವರು, 2007ರ ಜೂನ್‌ನಲ್ಲಿ, ಯಾವ ಕ್ಯಾಥೋಲಿಕ್ಕರೂ ಅಮ್ನೆಸ್ಟಿಗೆ ಹಣ ಸಹಾಯ ಮಾಡಬಾರದು ಎಂದು ಘೋಷಿಸಿತು. ರೆನಾಟೊ ಮಾರ್ಟಿನೊ ಚರ್ಚ್‌ನಕಾರ್ಡಿನಲ್‌(ಬಿಷಪ್‌) ನ್ಯಾಷನಲ್‌ ಕ್ಯಾಥೋಲಿಕ್‌ ರೆಜಿಸ್ಟರ್‌ಗೆ ನೀಡಿದ ಸಂದರ್ಶನದಲ್ಲಿ, ‘ಆಮ್ನೆಸ್ಟಿಹೀಗೆಯೇ ಮುಂದುವರಿದರೆ, ಕ್ಯಾಥೋಲಿಕ್‌ ಸಂಘ ಸಂಸ್ಥೆಗಳೆಲ್ಲವೂ ತಮ್ಮ ಬೆಂಬಲವನ್ನು ಹಿಂಪಡೆಯುತ್ತದೆ. ಏಕೆಂದರೆ, ಅವರು ನಮ್ಮ ಗುರಿಯ ಅನುಸಾರ ಕೆಲಸಮಾಡುತ್ತಿಲ್ಲವೆಂದ ಮೇಲೆ ನಾವೇಕೆ ಅವರನ್ನು ಬೆಂಬಲಿಸಬೇಕು?’ಎಂದಿದ್ದರು. ಇದರಿಂದ ತಿಳಿಯುವುದೇನೆಂದರೆ, ಕ್ಯಾಥೋಲಿಕ್‌ ಚರ್ಚ್‌ಗಳ ಗುರಿಯ ಅನುಸಾರ ಆಮ್ನೆಸ್ಟಿಕೆಲಸ ಮಾಡುತ್ತಿದೆ ಎಂಬುದು.

ಅಪಾರ ಪ್ರಮಾಣದ ಆಸ್ತಿ
1961ರ ಜುಲೈನಲ್ಲಿ ಪೀಟರ್‌ ಬೆನೆನ್ಸನ್‌ ಎಂಬುವವರು ಈ ಸಂಸ್ಥೆಯನ್ನು ಯುಕೆಯಲ್ಲಿ ಹುಟ್ಟು ಹಾಕಿದರು. ಇದರ ಮುಖ್ಯಕಚೇರಿಯು ಲಂಡನ್‌ನಲ್ಲಿದೆ.
ಇನ್ನು ಈ ಸಂಸ್ಥೆಯು ಪ್ರಮುಖವಾಗಿ ಕೆಲಸ ಮಾಡುತ್ತಿರುವುದು ಮಾನವ ಹಕ್ಕಿನ ವಿಚಾರದ ಬಗ್ಗೆ. ಈ ಸಂಸ್ಥೆಗೆ 1977ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿಯೂ ಬಂದಿದೆ. ಪ್ರಪಂಚಾದ್ಯಂತ ಈ ಸಂಸ್ಥೆಗೆ 7 ಮಿಲಿಯನ್‌ ಸದಸ್ಯರು, ಬೆಂಬಲಿಗರಿದ್ದಾರೆ. ಅದರಲ್ಲಿ ಭಾರತವೂ ಸೇರಿಕೊಂಡಿದೆ. ಆದರೆ ಇದೆಲ್ಲ ಅಮ್ನೆಸ್ಟಿಯ ಮುಖವಾಡಗಳಷ್ಟೇ.
2017 ಒಂದು ವರ್ಷದಲ್ಲೇ ಆಮ್ನೆಸ್ಟಿಇಂಟರ್‌ನ್ಯಾಷನಲ್‌ಗೆ ಬಂದಿರುವ ಒಟ್ಟು ಹಣ 24.60 ಸಾವಿರ ಕೊಟಿ ರುಪಾಯಿಗಳು. ಇದರಲ್ಲಿ 24 ಸಾವಿರ ಕೊಟಿ ರುಪಾಯಿಯನ್ನು ಅದಾಗಲೇ ಖರ್ಚುಮಾಡಿದೆ.
ಆಮ್ನೆಸ್ಟಿತನ್ನ ಅಧಿಕೃತ ಜಾಲತಾಣದಲ್ಲೇ ಘೊಷಿಸಿಕೊಂಡಿರುವ ಪ್ರಕಾರ ಅದು ಯಾವುದೇ ರಾಜಕೀಯ ಪಕ್ಷಗಳಿಂದ ಅಥವಾ ಸರ್ಕಾರಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಅಮ್ನೆಸ್ಟಿಯು ಯುಕೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ, ಯುರೋಪಿಯನ್‌ ಕಮಿಷನ್‌, ನೆದರ್ಲೆಂಡ್‌, ಅಮೆರಿಕಮತ್ತು ನಾರ್ವೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಂದ ದೇಣಿಗೆಯನ್ನು ಪಡೆದಿದೆ.

ಕಾರ್ಯತಂತ್ರ
ಅಮ್ನೆಸ್ಟಿಯು ತನ್ನ ಅಧಿಕೃತ ಜಾಲತಾಣದಲ್ಲಿ ತಾನು ಎಲ್ಲ ಸರ್ಕಾರದಿಂದ, ರಾಜಕೀಯ ಸಿದ್ಧಾಂತದಿಂದ, ಧರ್ಮ ಅಥವಾ ಆರ್ಥಿಕ ಆಸಕ್ತಿಯಿಂದ ದೂರ ಉಳಿದಿದ್ದು, ಇಂಥವುಗಳಿಂದ ತನ್ನನ್ನು ತಾನು ಸ್ವತಂತ್ರ ಎಂದು ಹೇಳಿಕೊಂಡಿದೆ.
ಆದರೆ, ಆಮ್ನೆಸ್ಟಿಮಾಡಿಕೊಂಡು ಬಂದಿರುವುದೇ ರಾಜಕೀಯ ಹಿತಾಸಕ್ತಿಯ ಕೆಲಸಗಳು ಎಂಬುದಕ್ಕೆ ಸಾಕ್ಷಿ ಇಲ್ಲಿದೆ:
*ಪ್ಯಾಲೆಸ್ತೀನಿಯರು ತಮ್ಮ ಕಾರ್ಯಸಾಧನೆಗೆ ಮತ್ತು ಉಗ್ರ ಚಟುವಟಿಕೆಗಳಿಗೆ ಅವರ ಮಕ್ಕಳನ್ನು ಮುಂದು ಮಾಡಿ ಅವರಿಂದ ಕಲ್ಲು ತೂರಾಟ, ಆತ್ಮಹತ್ಯಾ ಬಾಂಬ್‌ ದಾಳಿಗಳನ್ನು ಮಾಡಿಸುತ್ತಿರುತ್ತಾರೆ. ಇದನ್ನು ಪತ್ತೆ ಹಚ್ಚುವ ಇಸ್ರೇಲ್‌, ಪ್ಯಾಲೆಸ್ತೀನಿ ಮಕ್ಕಳನ್ನು ಬಂಧಿಸುತ್ತದೆ. ‘ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ’ಎಂಬ ಆಂದೋಲನದಲ್ಲಿ ರಾಷ್ಟ್ರೀಯ ಪ್ರಚಾರ ಪಾಲುದಾರರಾಗಿ ಆಮ್ನೆಸ್ಟಿಯುಎಸ್‌ಎ ಸಂಸ್ಥೆಯಿದೆ.
ರಾಜಕೀಯ ಶುರುವಾಗುವುದೇ ಇಲ್ಲಿಂದ. ಈ ಆಂದೋಲನದಲ್ಲಿ ‘ಅಮೆರಿಕನ್‌ ಮುಸ್ಲಿಂ ಫಾರ್‌ ಪ್ಯಾಲೆಸ್ಟೀನ್‌’, ‘ಕ್ರಿಶ್ಚಿಯನ್‌ ಪೀಸ್‌ ಮೇಕರ್‌ ಟೀಂ’, ಉತ್ತರ ಅಮೆರಿಕದ ಸಬೀಲ್‌ ಸ್ನೇಹಿತರು, ಅಮೆರಿಕದ ಮೆನ್ನೊನೈಟ್‌ ಸೆಂಟ್ರಲ್‌ ಕಮಿಟಿ ಹಾಗೂ ಅಮೆರಿಕದ ಪ್ಯಾಲೆಸ್ಟೀನಿ ಹಕ್ಕುಗಳ ಪ್ರಚಾರಸಮಿತಿಯು ರಾಷ್ಟ್ರೀಯ ಪ್ರಚಾರ ಪಾಲುದಾರರಾಗಿದೆ. ಅಮೆರಿಕಕ್ಕೂ ಇಸ್ರೇಲ್‌ಗೂ ಆಗುವುದಿಲ್ಲ ಎಂಬುದು ಜಗತ್ತಿಗೇ ಗೊತ್ತಿರುವ ವಿಚಾರ. ರಾಜಕೀಯ ಸಿದ್ಧಾಂತ ಇಲ್ಲ ಎನ್ನುವ ಅಮ್ನೆಸ್ಟಿಯ ಇಸ್ರೇಲ್‌ ವಿರೋ ಪ್ರಚಾರದಲ್ಲಿರುವವರೆಲ್ಲ ಅಮೆರಿಕನ್ನರೇ ಆಗಿರುವುದು ದುರಂತ. 2017ರ ಫೆಬ್ರವರಿ 20ರಂದು ಜೆರುಸಲೇಂ ಪೋಸ್ಟ್‌ ಎಂಬ ಪತ್ರಿಕೆ ಇವೆಲ್ಲವನ್ನೂ ಬಹಿರಂಗಮಾಡಿತ್ತು. ಆಗಲೇ ಅಮ್ನೆಸ್ಟಿಯ ಆಟ ಜನಕ್ಕೆ ತಿಳಿದದ್ದು.
· ಅಮೆರಿಕದ ಕಾಂಗ್ರೆಸ್‌ವುಮೆನ್‌ ಮೆಕ್ಕಲಮ್ಸ್‌ ಅವರ ಪ್ರಸ್ತಾವಿತ ಶಾಸನದಲ್ಲಿ ಇಸ್ರೇಲಿಗಳು ಪ್ಯಾಲೆಸ್ಟೀನಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಬಗ್ಗೆ ಅಮೆರಿಕ ಕ್ರಮ ಕೈಗೊಳ್ಳಬೇಕು ಎಂದು ನವೆಂಬರ್‌ 2017ರಲ್ಲಿ ಹೇಳಿದ್ದರು. ಇದನ್ನು ಆಮ್ನೆಸ್ಟಿಬೆಂಬಲಿಸಿತ್ತು.
· 2017ರ ನವೆಂಬರ್‌ನಲ್ಲಿ ಅಮ್ನೆಸ್ಟಿಯು ಇಸ್ರೇಲ್‌ ಪ್ರಧಾನ ಮಂತ್ರಿಯ ವಿರುದ್ಧ ‘ಪ್ರಪಂಚದ ಅತಿದೊಡ್ಡ ಮಾನವ ಹಕ್ಕುಗಳಪ್ರಚಾರ’ವನ್ನು ಪ್ರಾರಂಭಿಸಿತು. ಪ್ಯಾಲೇಸ್ಟಿನಿಯನ್‌ ಮಾನವ ಹಕ್ಕುಗಳ ರಕ್ಷ ಕರೆಂದು ಬಿಂಬಿಸಲ್ಪಟ್ಟ ಉಗ್ರರಾದ ಫರೀದ್‌ ಅಲ್‌ ಅತಾಶ್‌ ಮತ್ತು ಇಸ್ಸಾ ಅಮ್ರೊ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡುವಂತೆ ಮತ್ತು ಪ್ಯಾಲೆಸ್ಟೀನ್‌ ಭೂಮಿಯನ್ನು ಆಕ್ರಮಿಸಿಕೊಂಡಿರುವುದನ್ನು ವಿರೋಧಿಸಿ ಹೋರಾಟ ಮಾಡಿತ್ತು ಅಮ್ನೆಸ್ಟಿ. ರಾಜಕೀಯ ಸಿದ್ಧಾಂತಗಳಿಂದ ದೂರ ಇರುವುದಾದರೆ ಈ ಉಸಾಬರಿ ಏಕೆ?
· ಸೆಪ್ಟೆಂಬರ್‌ 2015ರ ವೇಳೆ, ಬಸ್ಸೆಂ ತಮೀಮಿ ಎಂಬುವವನು ಅಮೆರಿಕದಲ್ಲಿ ಭಾಷಣ ಮಾಡುವ ಯೋಜನೆಗೆ ಸಹ-ಪ್ರಾಯೋಜಕರಾಗಿದ್ದು ಇದೇಅಮ್ನೆಸ್ಟಿ. ಬಸ್ಸೆಂ ತಮೀಮಿ ಎಂಬುವವನು ಸಂನ್ಯಾಸಿಯಲ್ಲ ಅಥವಾ ಧರ್ಮಪ್ರಚಾರಕನಲ್ಲ. ಬದಲಿಗೆ ಪ್ಯಾಲೆಸ್ಟೀನಿ ಯುವಕರು ಇಸ್ರೇಲಿ ಸೇನೆ, ಪೊಲೀಸರ ಮೇಲೆ ಕಲ್ಲು ಎಸೆಯುವುದಕ್ಕೆ ಪ್ರಚೋದನೆ ಕೊಟ್ಟಿದ್ದಕ್ಕೆ 2012ರಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ ಭೂಪ ಈತ.

ಉಗ್ರವಾದದ ನಂಟು
· ಆಗಸ್ವ್‌ 17, 2015ರಂದು, ಟೈಮ್ಸ… ಲಂಡನ್‌ನಲ್ಲಿ ಪ್ರಕಟವಾದ ಲೇಖನಗಳ ಸರಣಿಯಲ್ಲಿ, ಆಮ್ನೆಸ್ಟಿಇಂಟರ್‌ನ್ಯಾಷನಲ್‌ನ ನಂಬಿಕೆ ಮತ್ತು ಮಾನವ ಹಕ್ಕುಗಳ ನಿರ್ದೇಶಕಿ ಮತ್ತು ಮಾಜಿ ಅಂತಾರಾಷ್ಟ್ರೀಯ ಸಲಹಾ ನಿರ್ದೇಶಕಿ ಯಾಸ್ಮಿನ್‌ ಹುಸೇನ್‌ಗೆ ಮುಸ್ಲಿಂ ಬ್ರದರ್‌ಹುಡ್‌ ಮತ್ತು ಹಮಾಸ್‌ ಜತೆ ಸಂಪರ್ಕ ಹೊಂದಿದ್ದಳು ಎಂದು ಬಹಿರಂಗ ಪಡಿಸಿದೆ.
· 2011ರ ಜನವರಿ 30ರಂದು ಇಸ್ರೇಲಿ -ಅರಬ್‌ ಎನ್‌ಜಿಒ ಇತ್ತಿಜಾದ ಮುಖ್ಯಸ್ಥ ಅಮೀರ್‌ ಮಖೌಲ್‌ ಎಂಬುವವನು ಲೆಬನಾನ್‌ನ ಇಸ್ಲಾಮಿಕ್‌ ಉಗ್ರ ಸಂಘಟನೆ ಹಿಜ್ಬುಲ್ಲಾಹ್‌ಗೆ ಗೂಢಚಾರಿಯಾಗಿ ಇಸ್ರೇಲ್‌ನ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತಿದ್ದ ಎಂಬ ಕಾರಣಕ್ಕೆ ಅವನಿಗೆ ಇಸ್ರೇಲ್‌ 9ವರ್ಷ ಜೈಲು ಶಿಕ್ಷೆ ನೀಡಿತ್ತು. ಆದರೆ ಈ ಸಮಯದಲ್ಲಿ ಆಮ್ನೆಸ್ಟಿಇಂಟರ್‌ನ್ಯಾಷನಲ್‌ನ ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳ ಉಪನಿರ್ದೇಶಕರಾಗಿರುವ ಫಿಲಿಪ್‌ ಲೂತರ್‌ ಅವರು ಅಮೀಲ್‌ ಪರ ವಹಿಸಿ ಆತನಿಗೆ ಹಲ್ಲೆ ಮಾಡಿ ಒಪ್ಪಿಸಲಾಗಿದೆ ಎಂದು ಸಾರಿದ್ದರು. ಅಮ್ನೆಸ್ಟಿಯು ಈ ದೇಶದ್ರೋಹಿಯ ಪರ ನಿಂತಿತ್ತು.
· 2013ರ ಡಿಸೆಂಬರ್‌ನಲ್ಲಿ ಜಿನಿವಾ ಮೂಲದ ಮಾನವ ಹಕ್ಕುಗಳಿಗೆ ಕೆಲಸ ಮಾಡುತ್ತೇವೆಂದು ಹೇಳಿಕೊಳ್ಳುವ ಅಲ್ಕಾಮಾ ಫೌಂಡೇಶನ್‌ಗೆ ಬೆಂಬಲ ನೀಡುತ್ತಿರುವುದನ್ನು ಅಮ್ನೆಸ್ಟಿಯೇ ಸ್ವತಃ ಒಪ್ಪಿಕೊಂಡಿದೆ. ಈ ಅಲ್ಕಾಮಾ ಪ್ರತಿಷ್ಟಾನದ ಕತಾರ್‌ ದೇಶದ ಸಹ-ಸಂಸ್ಥಾಪಕ ಅಬ್ದ… ಅಲ್‌-ರಹಮಾನ್‌ ಬಿನ್‌ ಉಮಾಯರ್‌ ಅಲ್‌-ನುಯಿಮಿ (ನುಯಿಮಿ) ಎಂಬುವವನು ಅಲ್‌ ಖೈದಾಮತ್ತು ಸಿರಿಯಾ, ಇರಾಕ್‌, ಸೊಮಾಲಿಯಾ ಮತ್ತು ಯೆಮೆನ್‌ ದೇಶಗಳ ಅಂಗ ಸಂಸ್ಥೆಗಳಿಗೆ ಹಣಕಾಸು ನೆರವು ನೀಡುತ್ತದ್ದ ಎಂಬುದು ಬಹಿರಂಗವಾಗಿತ್ತು.
· 2015ರಲ್ಲಿ ಎಲ್ಡರ್‌ ಆಫ್‌ ಜಯೋನ್‌ ಎಂಬ ಬರಹಗಾರರೊಬ್ಬರು, ಅಮ್ನೆಸ್ಟಿಯಲ್ಲಿ ಪ್ರಚಾರಕ ಹಾಗೂ ಸಂಶೋಧಕನಾಗಿರುವ ಸಲೇಹ್‌ ಹಿಜಾಝಿ ಎಂಬುವವನು ಪಿಎಲ್‌ಎಫ್‌ಪಿ ಉಗ್ರ ಲೀಲಾ ಖಾಲಿದ್‌ನ ಫೋಟೊ ಮತ್ತು 2012ರಲ್ಲಿ ಇಸ್ಲಾಮಿಕ್‌ ಜಿಹಾದಿ ಉಗ್ರಸಂಘಟನೆಯ ಖಾದಿರ್‌ ಅದ್ನಾನ್‌ ಎಂಬುವವನ ಫೊಟೊವನ್ನು ಫೇಸ್ಬುಕ್‌ನಲ್ಲಿ ತನ್ನ ಪ್ರೊಫೈಲ್‌ ಫೋಟೊವನ್ನಾಗಿ ಹಾಕಿಕೊಂಡು ಅವರ ಬಗ್ಗೆ ಹೊಗಳಿ ಬರೆದಿದ್ದ ಎಂಬುದನ್ನು ಬಹಿರಂಗಮಾಡಿದ್ದರು.
· ಎಡಪಂಥೀಯೆ, ಮಹಿಳಾವಾದಿ, ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹಾಗೂ ಮುಂಬೈ ನಿವಾಸಿ ಗೀತಾ ಸಾಘಲ್‌ ಅವರು ಆಮ್ನೆಸ್ಟಿಇಂಟರ್‌ನ್ಯಾಷನಲ್‌ನಲ್ಲಿ ಇದ್ದರು. ಮೊಜ್ಜಾಂ ಬೆಗ್‌ ಎಂಬ ತಾಲಿಬಾನಿ ಬೆಂಬಲಿಗನ ಜತೆಗೆ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಕೆಲಸ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದರು. ಈ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಮತ್ತು ಪ್ರಶ್ನಿಸಿದ್ದಕ್ಕೆ ಗೀತಾ ಅವರನ್ನು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿತ್ತು ಅಮ್ನೆಸ್ಟಿ.

ಸಿಕ್ಕಿಬಿದ್ದ ಅಕೌಂಟೆಂಟ್‌
ಆಮ್ನೆಸ್ಟಿಇಂಟರ್‌ನ್ಯಾಷನಲ್‌ನಲ್ಲಿ ಎಷ್ಟು ಕಳ್ಳರು ತುಂಬಿದ್ದಾರೆ ಎಂಬುದಕ್ಕೆ 2018 ಜುಲೈ 30ರಂದು ಲಂಡನ್‌ನ ಸೌತ್‌ವಾರ್ಕ್‌ ಕ್ರೌನ್‌ ನ್ಯಾಯಾಲಯ ನೀಡಿದ ಈ ತೀರ್ಪೇ ಸಾಕು.
ಆಮ್ನೆಸ್ಟಿಇಂಟರ್‌ನ್ಯಾಷನಲ್‌ನಲ್ಲೇ ಅಕೌಂಟೆಂಟ್‌ ಆಗಿ ಮಾಡುತ್ತಿದ್ದ ಸೆಬಾಸ್ಟಿಯನ್‌ ಸೆರ್ಮಿಂಟೊ ಒರೊಜ್ಕೊ ಎಂಬ ವ್ಯಕ್ತಿ, ಸರಿಸುಮಾರು 35 ಲಕ್ಷ ರುಪಾಯಿಯನ್ನು ಎಗರಿಸಿ ಐಷಾರಾಮಿ ಜೀವನ ಮಾಡುತ್ತಿದ್ದ. ಜೂನ್‌ 2015ರಿಂದ ಡಿಸೆಂಬರ್‌ 2016ರವರೆಗೆ ಲಂಡನ್‌ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಸೆಬಾಸ್ಟಿಯನ್‌, ಹಣವನ್ನು ಕದ್ದು ಬಿಂದಾಸ್‌ ಜೀವನ ಸಾಗಿಸುತ್ತಿದ್ದ.
ಈ ಪ್ರಕರಣವೆಲ್ಲ ಬಹಿರಂಗಗೊಂಡು 21 ತಿಂಗಳ ಜೈಲು ಶಿಕ್ಷೆಗೊಳಪಟ್ಟಿದ್ದಾನೆ.

ಶ್ರೀಲಂಕಾದಲ್ಲೂ ಕಿರಿಕಿರಿ
ಸರಿಯಾಗಿ 2007ರ ವಿಶ್ವಕಪ್‌ ಪಂದ್ಯ ನಡೆಯುವ ವೇಳೆಗೆ ‘ಶ್ರೀಲಂಕಾ, ಪ್ಲೇ ಬೈ ರೂಲ್ಸ್‌’ ಎಂಬ ಆಂದೋಲನ ಶುರು ಮಾಡಿತ್ತು. ಶ್ರೀಲಂಕಾ ದೇಶವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಈ ಪ್ರಚಾರ ಶುರು ಮಾಡಿತ್ತು. ಅದು ಯಾವ ಸಮಯದಲ್ಲಿ? ಆಗ ಶ್ರೀಲಂಕಾ ತಂಡ ಸೂಪರ್‌ 8ನಲ್ಲಿ ಆಡುತ್ತಿದ್ದ ಸಮಯ.
ಆಗ ಶ್ರೀಲಂಕಾ ಸರ್ಕಾರವು ಆಮ್ನೆಸ್ಟಿಬಗ್ಗೆ ತನಿಖೆಗೆ ಆದೇಶಿಸಿತ್ತು. ಈ ತನಿಖೆಯಿಂದ ತಿಳಿದಿದ್ದೇನೆಂದರೆ, ಅಮ್ನೆಸ್ಟಿಯು ಎಲ್‌ಟಿಟಿಇ ಉಗ್ರರಿಗೆ ಪರೋಕ್ಷವಾಗಿ ಬೆಂಬಲ ನೀಡಿ, ತನ್ನ ಕಾರ್ಯಸಾಧನೆ ಮಾಡುತ್ತಿದೆ ಎಂಬುದು ಬಹಿರಂಗಗೊಂಡಿತು. ಇದನ್ನು ಶ್ರೀಲಂಕಾ ಸರ್ಕಾರವೇ ಹೇಳಿದ್ದರಿಂದ, ಅಮ್ನೆಸ್ಟಿಯ ನ್ಯಾಸ್ಟಿ ಕೆಲಸಗಳ ಬಗ್ಗೆ ದೊಡ್ಡ ಸಾಕ್ಷಿಗಳು ಬೇಕಾಗುವುದಿಲ್ಲ.

 

ಸರಿ ಇವರ ಕಥೆಯಂತೂ ಹೀಗಾಯ್ತು… ಇನ್ನು ಅಮ್ನೆಸ್ಟಿಯಲ್ಲಿ ಉನ್ನತ ಹುದ್ದೆಯಲ್ಲಿರುವವರಾದರೂ ನಿಯತ್ತಾಗಿರುವವರಾ? ಅದೂ ಇಲ್ಲ. ಎಲ್ಲರೂ ಇಸ್ರೇಲ್‌ನ ವಿರೋಧಿಗಳು ಅಥವಾ ಉಗ್ರವಾದದ ಒಲವಿರುವವರು ಅಥವಾ ಉಗ್ರವಾದಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವವರು.
ಅವರೆಲ್ಲ ಮಾಹಿತಿ ಇಲ್ಲಿದೆ:

ರಯೀದ್‌ ಜರ್ರಾರ್‌
ರಯೀದ್‌ ಜರ್ರಾರ್‌ ಎಂಬುವವನು ಅಮ್ನೆಸ್ಟಿ-ಉಎಸ್‌ಎ ಅಂಗದ ಉತ್ತರ ಆಫ್ರಿಕಾದ ಸಲಹಾ ನಿರ್ದೇಶಕನಾಗಿದ್ದ. ಈತ 2017ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ ವಿರುದ್ಧ ಒಂದು ಭಾಷಣಕ್ಕೆ ಇಸ್ರೇಲ್‌ಗೆ ಬಂದಾಗ, ಆತನ ಮೇಲೆ ನಿಷೇಧ ಹೇರಿ ವಾಪಸ್‌ ಕಳುಹಿಸಲಾಗಿತ್ತು.
ಈ ಮನುಷ್ಯನ ವಿಕೃತಿ ಹೇಗಿದೆ ನೋಡಿ: ಈಜಿಪ್ಟ್‌ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಮೇಲೆ ದಾಳಿಯಾದಾಗ ಅದರ ಸಂಭ್ರಮಾಚರಣೆಯ ವ್ಯಂಗ್ಯ ಚಿತ್ರವನ್ನು ಆತ 2011ರ ಸೆಪ್ಟೆಂಬರ್‌ 9ಕ್ಕೆ ಟ್ವೀಟ್‌ ಮಾಡಿಕೊಂಡಿದ್ದ.
ಅಷ್ಟೇ ಅಲ್ಲದೇ ಈತನಿಗೆ ಐಪಿಎಲ್‌ಎಫ್‌ ಸಂಘಟನೆಯೊಂದಿಗೂ ಬಹಳ ಸಂಪರ್ಕವಿತ್ತು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಆ್ಯಲಿ ಮೆಕ್ರಾಕೆನ್‌
ಆ್ಯಲಿ ಮೆಕ್ರಾಕೆನ್‌ ಅಮ್ನೆಸ್ಟಿ-ಯುಎಸ್‌ಎ ವಿಭಾಗದ ಉತ್ತರ ಅಮೆರಿಕದ ಪ್ರಚಾರಕಿಯಾಗಿದ್ದಾಳೆ.
ಈಕೆ ಅಕ್ಟೋಬರ್‌ 2014ರಲ್ಲಿ ಅಮೆರಿಕವು ಇಸ್ರೇಲ್‌ಗೆ ನೀಡುವ ಮಿಲಿಟರಿ ನೆರವನ್ನು ನಿಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಳು. ಇವಳ ಹೇಳಿಕೆ ಹೀಗಿದೆ, ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಇಸ್ರೇಲ್‌ಗೆ 3.8 ಬಿಲಿಯನ್‌ನಷ್ಟು ಮಿಲಿಟರಿ ನೆರವನ್ನು ಹೆಚ್ಚಿಸಿದ್ದರು. ಇದರಿಂದ ಇಸ್ರೇಲಿಗಳು ಬೇಕಾಬಿಟ್ಟಿ ಶಸ್ತ್ರಾಸ್ತ್ರಗಳನ್ನು ಗಾಜಾ ಜನರನನ್ನು ಕೊಲ್ಲುವುದಕ್ಕೆ ಬಳಸುತ್ತಿದ್ದಾರೆ ಎಂದಿದ್ದಳು.
ಅಂದರೆ, ಅಲ್ಲಿನ ಗಾಜಾಪಟ್ಟಿ ಮತ್ತು ಇತರ ಉಗ್ರಗಾಮಿ ಸಂಘಟನೆಗಳ ಪರ ಪರೋಕ್ಷವಾಗಿ ಬ್ಯಾಟಿಂಗ್‌ ಮಾಡಿದಾಕೆಗೆ ಅಮ್ನೆಸ್ಟಿಯಲ್ಲಿ ಏನು ಕೆಲಸ ಎಂಬುದಕ್ಕೆ ಉತ್ತರವಿಲ್ಲ.

ಈಡಿತ್‌ ಗಾರ್ವುಡ್‌
ಈಡಿತ್‌ ಎಂಬ ಈಕೆ ಅಮ್ನೆಸ್ಟಿ-ಯುಎಸ್‌ಎ ವಿಭಾಗದಲ್ಲಿ ಇಸ್ರೇಲ್‌ ದೇಶ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಳು. ಈಗ ಈಕೆ ಮೃತಪಟ್ಟಿದ್ದಾಳಾದರೂ ಈಕೆ ಮಾಡಿರುವ ಕೆಲಸಗಳು ಮಾತ್ರ ಆಮ್ನೆಸ್ಟಿಯಾವಾಗಲೂ ಸ್ಮರಿಸುತ್ತದೆ.
ಇಂಟರ್‌ನ್ಯಾಷನಲ್‌ ಸಾಲಿಡಾರಿಟಿ ಮೂಮೆಂಟ್‌(ಐಎಸ್‌ಎಂ) ಎಂಬ ಸದಾ ಇಸ್ರೇಲಿ ಸೇನೆಗೆ ಒಂದಲ್ಲ ಒಂದು ಉಪದ್ರವ ಕೊಡುವ, ಪ್ಯಾಲೆಸ್ಟೀನಿಯರನ್ನು ಕೆಣಕುವ ಗುಂಪಿಗೆ ಸ್ವಯಂ ಸೇವಕಿಯಾಗಿ ಇದ್ದವಳು ಈಡಿತ್‌.
2008ರಲ್ಲಿ ಶಾರ್ಲಾಟ್‌ ಅಬ್ಸರ್ವರ್‌ ಎಂಬ ಪತ್ರಿಕೆಯಲ್ಲಿ ಈಕೆ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಇಸ್ರೇಲಿಗಳು ನಿರಾಶ್ರಿತರನ್ನು ಒಳಗೆ ಏಕೆ ಬಿಟ್ಟುಕೊಳ್ಳಬೇಕು ಎಂದು ಬರೆದಿದ್ದಳು.
ಇಷ್ಟೇ ಅಲ್ಲದೇ ಇನ್ನೂ ಸುಮಾರು ನೌಕರರದ್ದು ಇಂಥ ಮನಸ್ಥಿತಿ ಉಳ್ಳವರೇ ಆಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು
2016ರ ಸೆಪ್ಟೆಂಬರ್‌ 9ರಂದು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ(ಐಸಿಸಿ)ದಲ್ಲಿ ಆಮ್ನೆಸ್ಟಿವಿರುದ್ಧ ಒಂದು ಒಟಿಪಿ-ಸಿಆರ್‌+265/16 ಎಂಬ ನಂಬರ್‌ನಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಈಗ ಸಹ ಐಸಿಸಿಯ ಅಧಿಕೃತ ಜಾಲತಾಣದಲ್ಲಿ ನೋಡಬಹುದಾಗಿದೆ. ನೈಜೀರಿಯಾದಲ್ಲಿ ಮಾನವ ಹಕ್ಕು ಎಂಬ ಹೆಸರಿನಲ್ಲಿ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಸಂಸ್ಥೆಯ ಸಾಕಷ್ಟು ಜನರಿಗೆ ಹಿಂಸೆ ಮತ್ತು ಇತರೆ ಅಕ್ರಮಗಳ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸುವಂತೆ ನೈಜೀರಿಯಾ ಕೇಳಿಕೊಂಡಿದೆ.

ರಷ್ಯಾದಲ್ಲಿ ತೋಪೆದ್ದ ಅಮ್ನೆಸ್ಟಿ
ಮಾಸ್ಕೋದಲ್ಲಿ ಆಮ್ನೆಸ್ಟಿಇಂಟರ್‌ನ್ಯಾಷನಲ್‌ನ ಕಚೇರಿಗೆ ಎಂದಿನಂತೆ ನೌಕರರು ಬೆಳಗ್ಗೆ ಬರುತ್ತಿದ್ದಂತೆಯೇ ಅವರಿಗೆ ಬಾಗಿಲಿನ ಮೇಲೆ ಒಂದು ನೋಟ್‌ ಕಾಣುತ್ತದೆ. ‘ಈ ಕಚೇರಿಯು ನಮ್ಮ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ, ಕಚೇರಿಯನ್ನು ಮುಚ್ಚಲಾಗಿದೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಾಲಿಕೆ ಕಚೇರಿಯನ್ನು ಸಂಪರ್ಕಿಸ ತಕ್ಕದ್ದು’ ಎಂದು ಬರೆದಿತ್ತು.
ಇದನ್ನು ನೋಡಿ ಎಲ್ಲರೂ ಹೌಹಾರಿ ಹೋಗಿದ್ದಾರೆ. ಇದರ ಹಿಂದಿನ ಕಾರಣವೇನೆಂದರೆ, ಎಷ್ಟು ಸಲ ವಾರ್ನಿಂಗ್‌ ನೀಡಿದರೂ ಕ್ಯಾರೆ ಎನ್ನದ ಆಮ್ನೆಸ್ಟಿಬಾಡಿಗೆಯನ್ನೇ ಕಟ್ಟಿರಲಿಲ್ಲ ಹಾಗೂ ರಷ್ಯಾದಲ್ಲಿ ಮಾನವ ಹಕ್ಕು ಹೋರಾಟದ ಹೆಸರಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳೂ ಕೇಳಿಬಂದಿದ್ದರಿಂದ ಕಚೇರಿಗೆ ಬೀಗ ಜಡಿದು ಹೋಗಿದ್ದಾರೆ ಅಧಿಕಾರಿಗಳು. ಇದು ದೇಶಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ಆಗ ವ್ಲಾಡಿಮಿರ್‌ ಪುತಿನ್‌ ಅವರ ವಕ್ತಾರ ಮಾತಾಡಿ, ನಮಗೆ ಇದರ ಬಗ್ಗೆ ಏನೂ ಗೊತ್ತೇ ಇಲ್ಲ, ಏನೆಂದು ತಿಳಿದುಕೊಳ್ಳುತ್ತೇವೆ ಎಂದು ಹೇಳಿ ಕೈ ತೊಳೆದುಕೊಂಡಿದ್ದರು.
ಅಲ್ಲಿಗೆ ಮಾನವ ಹಕ್ಕಿನ ಹೆಸರಿನಲ್ಲಿ ರಷ್ಯಾದಲ್ಲಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಆಗಲೇ ಇಲ್ಲ.

ನಾನೇಕೆ ಆಮ್ನೆಸ್ಟಿಯನ್ನು ತೊರೆದೆ
ಆಮ್ನೆಸ್ಟಿಹೋರಾಟ ಮಾಡುವುದು ಸಮಾನ ಹಕ್ಕಿಗಾಗಿ, ತಾರತಮ್ಯದ ವಿರುದ್ಧ ಹಾಗೂ ಮಾನವ ಹಕ್ಕಿನ ಪರ. ಆದರೆ ಆಮ್ನೆಸ್ಟಿಇಂಟರ್‌ನ್ಯಾಷನಲ್‌ ಇಂಡಿಯಾದ ಕಚೇರಿಯಲ್ಲೇ ತಾರತಮ್ಯ, ಜಾತಿ ಬೇಧ, ದಲಿತರ ಶೋಷಣೆ ನಡೆಯುತ್ತಿದೆ ಎಂಬುದು ಮಾತ್ರ ಆಶ್ವರ್ಯ. ಮರಿಯಾ ಸಲೀಮ್‌ ಎಂಬುವವಳು ನಾನೇಕೆ ಅಮ್ನೆಸ್ಟಿಯನ್ನು ತೊರೆದೆ ಎಂದು ಸಂಸ್ಥೆಗೆ ರಾಜೀನಾಮೆ ನೀಡಿದ ಮೇಲೆ ವಿವರವಾಗಿ, ದಾಖಲೆಯ ಸಮೇತ ಅಮ್ನೆಸ್ಟಿಯ ಕೆಟ್ಟ ನಡವಳಿಕೆಯ ಬಗ್ಗೆ ಬರೆದುಕೊಂಡಿದ್ದಾಳೆ. ಆಕೆ ತನ್ನ ರಾಜೀನಾಮೆ ಪತ್ರದಲ್ಲಿ ಹೀಗೆಂದು ಬರೆದುಕೊಂಡಿದ್ದಾಳೆ.
‘ನಾನು ಈ ಕಚೇರಿಯಲ್ಲಿ ತಾರತಮ್ಯ, ಅವಮಾನ, ಅವಕಾಶ ವಂಚನೆ ಎಲ್ಲವನ್ನೂ ಅನುಭವಿಸುತ್ತಿದ್ದೇನೆ. ಒಬ್ಬ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿ ನನಗೆ ಸಮುದಾಯ ಮತ್ತು ಇತರ ನಟರ ಜೊತೆ, ರಸ್ತೆಗಿಳಿದು ಕೆಲಸ ಮಾಡಿದ ಅನುಭವವನ್ನು ಹೊಂದಿದ್ದೇನೆ. ಇಂಥ ನನ್ನನ್ನು ತಪ್ಪು ಮಾಹಿತಿಯನ್ನಾಧರಿಸಿ ಪಕ್ಷಪಾತದಿಂದ ನಿರ್ಧರಿಸುವ ಸಂಸ್ಥೆಯ ನಡವಳಿಕೆಯನ್ನು ವಿರೋಧಿಸುತ್ತೇನೆ’ಎಂದು ಹೇಳಿಕೊಂಡಿದ್ದಾಳೆ.
ಇದರ ಜತೆಗೆ ಆಮ್ನೆಸ್ಟಿಒಳೆಗೆ ಎಂತೆಂಥ ನೀಚ ಕೆಲಸಗಳು ನಡೆಯುತ್ತಿತ್ತು ಎಂದು ವಿವರವಾಗಿ ಹೇಳಿದ್ದಾರೆ.
‘ಆಮ್ನೆಸ್ಟಿಇಂಡಿಯಾ ಪರವಾಗಿ ಲಿಂಗ ತಾರತಮ್ಯ ಮತ್ತು ಹಿಂಸಾಚಾರ ಸಂಬಂಧ ಎರಡು ವರ್ಷಗಳ ಕಾಲ ಸಾಕಷ್ಟು ಹೋರಾಟದ ನೇತೃತ್ವ ವಹಿಸಿದ್ದ ಕೇರಳದ ಹಿರಿಯ ದಲಿತ ಕಾರ್ಯಕರ್ತೆ, 2018ರ ಮಾರ್ಚ್‌ ತಿಂಗಳಲ್ಲಿ ರಾಜೀನಾಮೆ ನೀಡುವ ಮೊದಲು ನಾನು ಆಕೆಯ ತಂಡಕ್ಕೆ ಸೇರಿದ್ದೆ. ಆಗ ನನಗೆ ಅವರು ಮೂರು ತಿಂಗಳುಗಳ ಕಾಲ ಮ್ಯಾನೇಜರ್‌ ಆಗಿದ್ದರು. ಅವರು ರಾಜೀನಾಮೆ ಸಲ್ಲಿಸುವುದಕ್ಕಿಂತ ಮೊದಲು ನನಗೆ ಇಲ್ಲಿ ತೀವ್ರ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ಕೊಡಿತ್ತಿದ್ದಾರೆ ಮತ್ತು ನಮ್ಮನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ಬಿಸಾಡುತ್ತಿದ್ದಾರೆ ಎಂದು ಹೇಳಿದ್ದರು.
ಇದಷ್ಟೇ ಅಲ್ಲ, ಕರ್ನಾಟಕದ 60 ವರ್ಷ ವಯಸ್ಸಾದ ಒಬ್ಬ ದೊಡ್ಡ ಕಾರ್ಯಕರ್ತರನ್ನು ಇದೇ ಆಮ್ನೆಸ್ಟಿಕೆಲಸದಿಂದ ಸಣ್ಣ ಸಣ್ಣ ಕಾರಣ ಕೊಟ್ಟು ಅಮಾನುಷವಾಗಿ ಕಿತ್ತು ಹಾಕಿತ್ತು. ಆ ದಿನ ಹೋಗುವಾಗ ಅವರು ಕಣ್ಣೀರು ಹಾಕಿಕೊಂಡು ಹೋದರು.’
ಸ್ವತಃ ನೌಕರರೇ ಇಂಥ ಆರೋಪ ಮಾಡುತ್ತಿರುವಾಗ, ಈ ಸಂಸ್ಥೆ ಹೊರಗೆ ಸಮಾಜ ಸೇವೆ, ಮಾನವ ಹಕ್ಕುಗಳ ಹೆಸರಿನಲ್ಲಿ ಏನೆಲ್ಲ ಕುಕೃತ್ಯಗಳನ್ನು ಮಾಡುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya