ಅಯ್ಯಪ್ಪನ ಭವಿಷ್ಯವನ್ನು ಕೋರ್ಟ್‌ ನಿರ್ಧರಿಸಿತು!

 

ಅಂತೂ ಇಂತು ಶಬರಿಮಲೆ ಪ್ರಕರಣ ಇತ್ಯರ್ಥವಾಗಿ ಮಹಿಳೆಯರು ದೇವಸ್ಥಾನಕ್ಕೆ ಹೋಗಬಹುದು. ಏಕೆಂದರೆ, ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ ಎಲ್ಲರಿಗೂ ಅವರ ಧರ್ಮ, ಧಾರ್ಮಿಕ ಆಚರಣೆಯನ್ನು ಅನುಸರಿಸುವ ಹಕ್ಕಿದೆ ಹಾಗೂ ಸಂವಿಧಾನದ ಆರ್ಟಿಕಲ್‌ 14-15ರ ಪ್ರಕಾರ ಎಲ್ಲರೂ ಸಮಾನರು ಹಾಗೂ ಸಮಾನ ಹಕ್ಕು ಸಿಗಬೇಕು ಎಂದು ಸುಪ್ರೀಂ ಕೋರ್ಟ್‌ನ ಐದು ಸದಸ್ಯ ಪೀಠ ಹೇಳಿದೆ. ಈ ತೀರ್ಪು 4:1 ಆಧಾರದಲ್ಲಿ ಬಂದಿದೆ. ಅಂದರೆ, ನಾಲ್ಕು ನ್ಯಾಯಮೂರ್ತಿಗಳು ಶಬರಿಮಲೆಗೆ ಮಹಿಳಾ ಪ್ರವೇಶ ಇರಬೇಕು ಎಂದರೆ ಒಬ್ಬ ನ್ಯಾಯಮೂರ್ತಿ ಶಬರಿಮಲೆಯ ಧಾರ್ಮಿಕತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸಬೇಕು ಎಂದಿದ್ದಾರೆ.

ನ್ಯಾ. ಇಂದು ಮಲ್ಹೋತ್ರಾ ಅವರು ಸಹ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ತೀರ್ಪು ಹೇಳುವ ಸಮಯ ಬಂದಾಗ ಈ ಅರ್ಜಿಯನ್ನು ಮೊದಲನೇಯದಾಗಿ ಪರಿಗಣಿಸಿದ್ದೇ ತಪ್ಪು ಎಂಬುದರಿಂದ ಶುರು ಮಾಡಿದ್ದಾರೆ. ಅವರು ತೀರ್ಪು ನೀಡುತ್ತಾ, ಒಂದು ಧಾರ್ಮಿಕ ಆಚರಣೆಯನ್ನು, ಆ ಧಾರ್ಮಿಕ ಸಮುದಾಯವು ನಿರ್ಣಯಿಸಬೇಕೇ ವಿನಾ ಕೋರ್ಟ್‌ ಅಲ್ಲ. ಭಾರತವು ವಿವಿಧ ಧರ್ಮದವರು ಇರುವ ದೇಶ. ಸಾಂವಿಧಾನಿಕ ನೈತಿಕತೆಯು ಅವರವರಿಗೆ ಅವರ ನಂಬಿಕೆಗಳನ್ನು ಪಾಲಿಸುವ ಹಕ್ಕನ್ನು ಇಲ್ಲಿ ನೀಡಿರುತ್ತದೆ. ಆಯಾ ಧರ್ಮದ ಅಥವಾ ಸಮುದಾಯದ ಜನರು ಸಮಸ್ಯೆಯನ್ನು ಹೊತ್ತು ಬರುವವರೆಗೂ ಕೋರ್ಟ್‌ ಇದರಲ್ಲಿ ಮಧ್ಯಪ್ರವೇಶ ಮಾಡಬಾರದು.’ ಎಂದಿದ್ದಾರೆ.
ಅಲ್ಲದೇ, ‘ಶಬರಿಮಲೆ ದೇವಸ್ಥಾನವು ಸಂವಿಧಾನದ ಆರ್ಟಿಕಲ್‌ 25ಕ್ಕೆ ಬದ್ಧವಾಗಿದೆ. ಆದರೆ ಈ ಧಾರ್ಮಿಕ ವಿಚಾರವನ್ನು ಕೇವಲ ಸಂವಿಧಾನದ ಆರ್ಟಿಕಲ್‌ 14 ಒಂದರಲ್ಲೇ ಪರೀಕ್ಷಿಸಲು ಸಾಧ್ಯವಿಲ್ಲ’ ಎಂಬುದನ್ನೂ ಸ್ಪಷ್ಟ ಪಡಿಸಿದ್ದಾರೆ ನ್ಯಾ. ಇಂದು ಮಲ್ಹೋತ್ರಾ.

ಆದರೆ ಶಬರಿಮಲೆಗೆ ಮಹಿಳಾ ಪ್ರವೇಶದ ಪರ ಇರುವ ನ್ಯಾಯಮೂರ್ತಿಗಳದ್ದೇ ಬಹುಮತ ಇದ್ದಿದ್ದರಿಂದ 4:1ರಲ್ಲಿ ತೀರ್ಪು ಹೊರಬಿದ್ದಿದೆ. ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಮರು ಮಾತನಾಡದೇ ಒಪ್ಪಿಕೊಂಡು ಅದರಿಂದ ಆಗುವ ಪರಿಣಾಮಗಳ ಬಗ್ಗೆ ಸ್ವಲ್ಪ ಗಮನಹರಿಸೋಣ.

ನಾವು ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ದೇವಸ್ಥಾನಕ್ಕೆ ಮಹಿಳಾ ಪ್ರವೇಶ ಕಲ್ಪಿಸಿದ ನಾಲ್ಕು ನ್ಯಾಯಮೂರ್ತಿಗಳು ಪುರುಷರು. ಆದರೆ, ದೇವಸ್ಥಾನಕ್ಕೆ ಮಹಿಳಾ ಪ್ರವೇಶವನ್ನು ನಿರಾಕರಿಸಿದವರು ಒಬ್ಬ ಮಹಿಳೆ. ಮಾನನೀಯ ನ್ಯಾ. ಇಂದು ಮಲ್ಹೋತ್ರಾ ಅವರು ಅಂಥ ತೀರ್ಪು ಕೊಡುವುದಕ್ಕೆ ಕಾರಣವೂ ಇದೆ.

ನ್ಯಾ. ಚಂದ್ರಚೂಡ್‌ ನೀಡಿರುವ ತೀರ್ಪಿನ ಪ್ರಕಾರ ‘ದೈಹಿಕ ಲಕ್ಷಣಗಳು ಒಬ್ಬರ ಹಕ್ಕನ್ನು ಕಸಿಯಬಾರದು ’ ಎಂದಿದೆ. ಅಂದರೆ ಮಹಿಳೆಯರಷ್ಟೇ ಅಲ್ಲ. ಯಾರು ಬೇಕಾದರೂ ಹೋಗಬಹುದು. ಮಹಿಳೆಯರು ಮುಟ್ಟಿನ ಸಮಯದಲ್ಲೂ ಹೋಗಬಹುದು ಎಂದು ಅರ್ಥ.
ಯಾರು ಬೇಕಾದರೂ ಹೋಗಬಹುದು ಎಂದಾರೆ, ಶಬರಿಮಲೆ ದೇವಸ್ಥಾನವು ಮಸೀದಿ, ಚರ್ಚ್‌ ರೀತಿಯೇ ಆದಂತಾಯಿತು. ಈಗ ಜನರು, ‘ಎಲ್ಲರೂ ಸಮಾನರು ಎಂದಾಯಿತಲ್ಲ’ ಎಂಬ ರೊಮ್ಯಾಂಟಿಕ್‌ ವಾದಕ್ಕೆ ಬರುತ್ತಾರೆ. ಆದರೆ ದೇವಸ್ಥಾನವು ಮಸೀದಿ, ಚರ್ಚ್‌ಗಳಂತೆ ಅಲ್ಲ ಹಾಗೂ ಅದಕ್ಕೆ ಹೋಲಿಸುವುದಕ್ಕೂ ಆಗುವುದಿಲ್ಲ.

ಏಕೆ ಎಂಬುದಕ್ಕೆ ಕಾರಣಗಳು ಇಲ್ಲಿವೆ: ಚರ್ಚ್‌ ಒಂದು ಪ್ರಾರ್ಥನಾ ಮಂದಿರ ಅಥವಾ ಜನರೆಲ್ಲ ಸೇರಿ ಪ್ರಾರ್ಥನೆ ಮಾಡುವ ಜಾಗ. ಹಾಗಾಗಿ ಅಲ್ಲಿ ಯಾರಾದರೂ ಯಾವ ನಿಯಮವನ್ನೂ ಪಾಲಿಸದೇ ಹೋಗಬಹುದು. ನಿಮಗೇ ತಿಳಿದಿರುವಂತೆ ಅಲ್ಲಿ ವೈನ್‌ ಎಂಬ ಮದ್ಯ ಸಹ ಕೊಡುತ್ತಾರೆ.

ಇನ್ನು ಮಸೀದಿ. ರಾಮ ಮಂದಿರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವೇ ಅಲ್ಲ. ಅಲ್ಲದೇ, ಇಸ್ಲಾಮಿಕ್‌ ರಾಷ್ಟ್ರಗಳಲ್ಲೇ ಇವತ್ತು ಮಸೀದಿ ಕಟ್ಟುತ್ತಾರೆ, ರಸ್ತೆ ಅಗಲಿಕರಣಕ್ಕೆ ಮಸೀದಿಯನ್ನು ಕೆಡವುತ್ತಾರೆ. ಅಂದರೆ, ಮಸೀದಿಯು ಮುಸಲ್ಮಾನರೆಲ್ಲ ಸೇರಿ ನಮಾಜ್‌ ಮಾಡುವ ಜಾಗವೇ ವಿನಾ ಬೇರೆ ಏನೂ ಅಲ್ಲ.

ಭಾರತದಲ್ಲಿರುವ ದೇವಸ್ಥಾನಗಳು ಹಾಗಲ್ಲ. ಅದರಲ್ಲೂ ದಕ್ಷಿಣ ಭಾರತದ ದೇವಸ್ಥಾನಗಳಂತೂ ಇನ್ನೂ ವಿಶೇಷ. ಇಲ್ಲಿ ಮಸೀದಿ ಕಟ್ಟಿದಂತೆ ಅಥವಾ ಚರ್ಚ್‌ ಕಟ್ಟಿದಂತೆ ರಾತ್ರಿ ಬೆಳಗಾಗುವುದರೊಳಗೆ ಸುಮ್ಮನೆ ಒಂದು ದೇವಸ್ಥಾನ ಕಟ್ಟಿಬಿಡುವುದಿಲ್ಲ. ದಕ್ಷಿಣದಲ್ಲಿರುವ ಅನೇಕ/ಬಹುತೇಕ ದೇವಸ್ಥಾನಗಳಿಗೆ ಪುರಾಣದ ಹಿನ್ನೆಲೆಯಿದೆ. ಉದ್ಭವ ಮೂರ್ತಿಗಳು ದೇವಸ್ಥಾನವಾಗಿವೆ, ಐತಿಹಾಸಿಕ ಹಿನ್ನೆಲೆಯಿದೆ, ಆಗಮ ಶಾಸ್ತ್ರದ ಪ್ರಕಾರ ಇವೆ. ಅಲ್ಲಿ ನೇರವಾಗಿ ಒಂದು ಬರ್ಮುಡಾ ಚಡ್ಡಿ ಪ್ಯಾಂಟು ಇಂಥದ್ದನ್ನೆಲ್ಲ ಧರಿಸಿ ಹೋಗುವಂತಿಲ್ಲ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ಪದ್ಧತಿ ಇರುತ್ತದೆ.

ಶಬರಿಮಲೆಗೆ ಈಗ ಯಾರು ಬೇಕಾದರೂ ಹೋಗಬಹುದು ಎಂದಾರೆ, ಅದನ್ನು ಶಬರಿಮಲೆ ಎಂದೇ ಏಕೆ ಕರೆಯಬೇಕು? ಸಂತ ಮೇರಿಯ ಚರ್ಚ್‌ ಎಂದೇಕೆ ಕರೆಯಬಾರದು? ಶಬರಿಮಲೆಯ ಪಾವಿತ್ರ್ಯತೆ ಇರುವುದೇ 41 ದಿನಗಳ ಕಾಲ ವ್ರತ ಮಾಡಿ ಹೋಗಬೇಕು ಎಂಬುದು. ಆದರೆ ಅದನ್ನೇ ಮಾಡದೇ ಹೋದರೆ ಅಶೌಚ ಆಗುವುದಿಲ್ಲವೇ? ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ ಎಲ್ಲರಿಗೂ ಧಾರ್ಮಿಕ ಹಕ್ಕು, ದೇವರನ್ನು ಪೂಜಿಸುವ ಹಕ್ಕಿದೆ ಎಂಬುದೇ ಈ ತೀರ್ಪಿನ ಜೀವಾಳ. ಆದರೆ ಹಾಗೆಂದ ಮಾತ್ರಕ್ಕೆ ನಾಳೆ ಮತ್ತೊಬ್ಬ ಬಂದು, ನಮ್ಮ ಮನೆಯಲ್ಲಿ ಸಾವಾಗಿದೆ. 11 ದಿನ ಸೂತಕ ಇರುವುದರಿಂದ ಯಾವ ದೇವಸ್ಥಾನಕ್ಕೂ ಹೋಗಬಾರದು ನಿಜ. ಆದರೆ ನನಗೆ ದೇವರನ್ನು ಪೂಜಿಸುವ ಹಕ್ಕಿದೆ ಎಂದು ಕೇಳಿದರೆ ಅವರಿಗೂ ಬಿಡುತ್ತೀರಾ?

ನನಗೆ ಉಸಿರಾಟದ ತೊಂದರೆ, ಇದೆ.. ಹಾಗಾಗಿ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡುವ 45 ದಿನಗಳ ವ್ರತ ಮಾಡುವುದಕ್ಕೆ ಆಗುವುದಿಲ್ಲ, ಇರುಮುಡಿಯೂ ಮಾಡುವುದಕ್ಕಾಗುವುದಿಲ್ಲ. ಆದರೆ ನಾನು 18 ಮೆಟ್ಟಿಲುಗಳನ್ನೂ ಹತ್ತಿ ದೇವರನ್ನು ನೋಡಬೇಕು ಎಂದ ಕೇಳಿದರೆ ಅವರಿಗೂ ಬಿಡಬೇಕಾಗುತ್ತೆ ಹಾಗೂ ಮುಟ್ಟಾದ ಹೆಂಗಸರು ನನಗೂ ದೇವರನ್ನು ಕಾಣಬೇಕು ಎಂದರೂ ಸಂವಿಧಾನದ ಪ್ರಕಾರ ಸರಿಯಾಗಿಯೇ ಇದೆ.

ಆದರೆ ಪಾವಿತ್ರ್ಯತೆಯ ಕಥೆಯೇನು ಸ್ವಾಮಿ? ಅಯ್ಯಪ್ಪನಿಗೇ ಅಯ್ಯಯ್ಯಪ್ಪಾ ನಾನೇಕೆ ಇಲ್ಲಿ ಕೂತೆ ಎಂದು ಯೋಚನೆ ಬರುವುದಿಲ್ಲವಾ?

ಇತಿಹಾಸದಲ್ಲಿ ನಮಗೆ ಇಂಥ ಉದಾಹರಣೆ ಸಿಗುವುದು ಟಿಪ್ಪು ಕಾಲದಲ್ಲಿ. ವಿಕೃತ ರಾಜ ಟಿಪ್ಪು ಆಗಿನ ಕಾಲದಲ್ಲಿ ದೇವಸ್ಥಾನಗಳ ಪಾವಿತ್ರ್ಯತೆಯನ್ನು ಹಾಳು ಮಾಡುವುದಕ್ಕೆ ಎಲ್ಲ ದೇವಸ್ಥಾನಗಳಲ್ಲೂ ಗೋ ಮಾಂಸದ ಹತ್ತಾರು ತುಂಡುಗಳನ್ನು ಎಸೆಯಲು ಹೇಳುತ್ತಿದ್ದ. ಹೀಗೆ ಮಾಡುವುದರಿಂದ ದೇವಸ್ಥಾನಗಳಿಗೆ ಜನ ಬರದೇ, ಪೂಜೆಯೂ ನಡೆಯದೇ ಅದು ಪಾಳು ಬೀಳುತ್ತದೆ ಎಂಬುದು ಅವನ ಆಲೋಚನೆ. ಆದರೆ ಈಗ ಅದೇ ಸ್ವಲ್ಪ ನವೀಕೃತ ಆವೃತ್ತಿಯಲ್ಲಿ ಬಂದಿದೆಯಷ್ಟೇ. ಯಾವುದೇ ರೀತಿಯಾದ ರಕ್ತ ದೇವಸ್ಥಾನಕ್ಕೆ ಅಶೌಚ. ಮುಟ್ಟಾದ ಮಹಿಳೆಯರೇ ಬಂದರೆ ಪಾವಿತ್ರ್ಯತೆ ಉಳಿಯುತ್ತದಾ ಎಂಬ ಪ್ರಶ್ನೆಗೆ ತಳ್ಳುತ್ತದೆ ಈ ತೀರ್ಪು.

ಕೇರಳದಲ್ಲಿ ದೊಡ್ಡ ಪ್ರವಾಹ ಆಯ್ತಲ್ಲ. ಅದರಿಂದ ನೂರಾರು ಜನರು ಸತ್ತರು, ಕೆಲವರು ಕಾಣೆಯಾಗಿದ್ದಾರೆ ಇನ್ನು ಸಾವಿರಾರು ಜನರ ಮನೆಯೇ ಇಲ್ಲ. ಬಿಕಾರಿಗಳಾಗಿದ್ದಾರೆ. ಏನೆಂದರೆ ಏನೂ ಇಲ್ಲ. ಪ್ರವಾಹವಾಗಿ ಉಕ್ಕಿ ಹರಿದು ಜನಜೀವನ ಹಾಳುಮಾಡಿದ್ದು ಪಂಪಾ ನದಿ ಮತ್ತು ಪೆರಿಯಾರ್‌ ನದಿ.

ಇದು ತರ್ಕಕ್ಕೆ ನಿಲುಕದ್ದು ಮತ್ತು ಕೆಲವರಿಗೆ ಹಾಸ್ಯಾಸ್ಪದವಾಗಿಯೂ ಅನಿಸಬಹುದು. ಇದನ್ನು ಕಾಕತಾಳೀಯ ಎನ್ನುತ್ತೀರೋ, ದೈವೀ ಶಕ್ತಿ ಎನ್ನುತ್ತೀರೊ ನಿಮಗೆ ಬಿಟ್ಟಿದ್ದು. ಪ್ರವಾಹವಾಗಿ ಬಂದ ಪೆರಿಯಾರ್‌ ಮತ್ತು ಪಂಪಾ ನದಿ ಹುಟ್ಟುವುದು ಶಬರಿಮಲೆಯ ಬೆಟ್ಟಗಳಲ್ಲೇ. ಅಲ್ಲಿ ಹುಟ್ಟಿ ಕೇರಳಕ್ಕೆ ಹರಿಯುತ್ತದೆ. ದೇವಸ್ಥಾನಕ್ಕೆ ಮಹಿಳಾ ಪ್ರವೇಶ ಬೇಕು ಎಂಬ ಕೂಗಿಗೂ ಪ್ರವಾಹಕ್ಕೂ ಏನೂ ಸಂಬಂಧವಿಲ್ಲ ಎನುತ್ತೀರಾ?

ಅಷ್ಟೇ ಅಲ್ಲ. ಮಹಿಳೆಯರಿಗೆ ನೀಡಿರುವ ತೀರ್ಪನ್ನು ಒಪ್ಪಿಕೊಂಡರಷ್ಟೇ ಸಾಲಲ್ಲ. ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ಉಳಿಯುವ ವ್ಯವಸ್ಥೆಯನ್ನೂ ಮಾಡಬೇಕು. Travancore Devaswom Board vs State Of Kerala ಪ್ರಕರಣದಲ್ಲಿ ಕೇರಳ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ‘ಇನ್ನು ಮುಂದೆ ಶಬರಿಮಲೆಯಲ್ಲಿ ಯಾವುದೇ ಮರ ಕಡಿಯಬಾರದು, ಹೊಸ ಬಿಲ್ಡಿಂಗ್‌ಗಳನ್ನು ಕಟ್ಟುವಂತಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿರುವುದಕ್ಕೆ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ. ಅಲ್ಲಿ ಕಾಡು ಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗಬಾರದು ಎಂಬುದು ಇದರ ಉದ್ದೇಶ.ಅಷ್ಟೇ ಅಲ್ಲದೇ, ಈಗಾಗಲೇ ಕಟ್ಟಿರುವ ಕಟ್ಟಡಗಳನ್ನೂ ಉರುಳಿಸುವಂತೆ ಅದೇಶ ನೀಡಿದ್ದಾರೆ.
ಹಾಗಾದರೆ ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ವಸತಿಗ್ರಹ, ಶೌಚಾಲಯ ಕಟ್ಟುವುದಕ್ಕೆ ಅನುಮತಿಯೇ ಇಲ್ಲದಿರುವಾಗ ಮಹಿಳೆಯರಿಗೆ ಹೇಗೆ ವ್ಯವಸ್ಥೆ ಮಾಡುತ್ತೀರಿ? ಅದಕ್ಕೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ವರ್ಷಗಟ್ಟಲೆ ಕಾಯಬೇಕಾ?
ಕರ್ನಾಟಕ ಹಾಗೂ ಭಾರತದ ಇತರ ಭಾಗದಲ್ಲಿರುವವರಿಗೆ ಗೊತ್ತಿರಲಿಕ್ಕಿಲ್ಲ, ಕೇರಳದಲ್ಲಿ ಐದು ಅಯ್ಯಪ್ಪನ ದೇವಸ್ಥಾನಗಳಿವೆ. ಐದನ್ನೂ ಋುಷಿ ಪರಶುರಾಮ ಕಟ್ಟಿರುವುದು ಎಂದೂ ಹೇಳುತ್ತಾರೆ.
ಕುಳತ್ತುಪುಳದಲ್ಲಿ ಬಾಲ ಅಯ್ಯಪ್ಪ, ಆರ್ಯಂಗಾವುದಲ್ಲಿ ಯುವಕ ಅಯ್ಯಪ್ಪ, ಅಚ್ಚನ್‌ಕೋವಿಲ್‌ನಲ್ಲಿ ಗ್ರಹಸ್ಥ ಅಯ್ಯಪ್ಪ, ಶಬರಿಮಲೆಯಲ್ಲಿ ವಾನಪ್ರಸ್ತಿ ಅಯ್ಯಪ್ಪ ಹಾಗೂ ಪೊನ್ನಂಬಲಮೇಡುನಲ್ಲಿ ಯೋಗಿ ಅಯ್ಯಪ್ಪ. ಇದು ಕೇವಲ ದೇವಸ್ಥಾನ ಮಾತ್ರ ಅಲ್ಲದೇ, ಜೀವನದ ಐದು ಹಂತಗಳನ್ನು ಪ್ರತಿಬಿಂಬಿಸುವ ಸಂಕೇತ. ಇಲ್ಲಿ ಎಲ್ಲ ಕಡೆಯೂ ಮಹಿಳೆಯರಿಗೆ ಪ್ರವೇಶ ಉಂಟು. ಆದರೆ ಶಬರಿಮಲೆಯಲ್ಲಿ ಮಾತ್ರ ಮಹಿಳಾಪ್ರವೇಶ ಇಲ್ಲ. ಇದು ಬಹಳ ಪ್ರಮುಖ ಹಂತವಾಗಿರುವುದರಿಂದ ಇಲ್ಲಿ ಸಾಕಷ್ಟು ನಿಯಮಗಳಿವೆ.
ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿರುವ ಮುಸ್ಲಿಮರಿಗೆ ಈ ಎಲ್ಲ ದೇವಸ್ಥಾನಗಳನ್ನು ಬಿಟ್ಟು ಶಬರಿಮಲೆಯಲ್ಲಿರುವ ದೇವಸ್ಥಾನವೇ ಏಕೆ ಬೇಕಿತ್ತು?
ಬಹುಶಃ ಇದಕ್ಕೇ ಇರಬಹುದು, ‘ಆಯಾ ಧರ್ಮದ ಅಥವಾ ಸಮುದಾಯದ ಜನರು ಸಮಸ್ಯೆಯನ್ನು ಹೊತ್ತು ಬರುವವರೆಗೂ ಕೋರ್ಟ್‌ ಇದರಲ್ಲಿ ಮಧ್ಯಪ್ರವೇಶ ಮಾಡಬಾರದು.’ ಎಂದು ನ್ಯಾ. ಇಂದು ಮಲ್ಹೋತ್ರಾ ಹೇಳಿದ್ದು. ಅಂದರೆ ಈ ಅರ್ಜಿ ಸಲ್ಲಿಕೆಯಲ್ಲಿರುವ ದೂರಾಲೋಚನೆಯನ್ನು ಅವರು ಆಗಲೇ ಅರಿತಿದ್ದರು ಎಂಬುದಕ್ಕೆ ಅವರು ನೀಡಿರುವ ತೀರ್ಪೇ ಸಾಕ್ಷಿ.

ಶನಿ ಶಿಂಗನಾಪುರದಲ್ಲೂ ವಿಗ್ರಹವನ್ನು ಮುಟ್ಟಬಹುದು ಎಂಬ ತೀರ್ಪು ಬಂದಿತ್ತು. ಆದರೆ ತೃಪ್ತಿ ದೇಸಾಯಿ ಬಿಟ್ಟರೆ ಅಲ್ಲಿಗೆ ಯಾರು ಹೋಗಿದ್ದಾರೆಂದು ನೋಡಿದರೆ, ಯಾರೂ ಹೋಗಿಲ್ಲ. ನಿತ್ಯ ದೇವಸ್ಥಾನ ಸುತ್ತುವ ನನ್ನ ತಾಯಿಯ ಬಳಿ, ಶಬರಿಮಲೆಗೆ ಯಾವಾಗ ಹೋಗ್ತೀಯಾ ಎಂದು ಕೇಳಿದಾಗ ‘ಆಚರಣೆಯಲ್ಲಿ ಇಲ್ಲದಿರುವ ಪದ್ಧತಿಯನ್ನು ಮುರಿದು ಶಬರಿಮಲೆಗೇ ಹೋಗಿ ಇಷ್ಟು ದಿನ ದೇವಸ್ಥಾನ ಸುತ್ತಿದ ಪಾಪ ಕಟ್ಟಿಕೊಳ್ಳೋದ್‌ ಯಾಕಪ್ಪಾ? ಬೇಕಾದಷ್ಟು ದೇವರಿದೆ.. ನಾನ್‌ ಅದಕ್ಕೇ ಹೋಗ್ತೀನಿ’ ಎಂದರು.
ಈಗ ಶಬರಿಮಲೆ ಪ್ರಕರಣದಲ್ಲೂ ಅಷ್ಟೇ, ನಿಜವಾಗಿ ಭಕ್ತಿ ಇರುವವರು ಕಾಯುತ್ತಾರೆ. ಇಲ್ಲದವರು ಕೋರ್ಟ್‌ನಲ್ಲಿ ಗೆದ್ದೆ ಎಂದು ಬೀಗುತ್ತಾರೆ.
ಕೊನೇಯದಾಗಿ ಒಂದು ಮಾತು: ಶಬರಿಮಲೆ ಯಾವಾಗ ‘ಶಬರಿಮಲೆ ಪ್ರಕರಣ’ ಅಂತ ಆಯ್ತೋ ಆಗಲೇ ಸ್ವಾಮಿಗೆ ಅಪಚಾರವಾಗಿದೆ. ಉಳಿದದ್ದು ಮಹಿಳೆಯರಿಗೆ ಬಿಟ್ಟಿದ್ದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya