ಅಣ್ಣಾವ್ರ ಅಭಿಮಾನಿಯೆಂದರೆ ತಮಿಳು ಚಿತ್ರದಲ್ಲಿಲ್ಲ ಅವಕಾಶ!

 

1975ರಲ್ಲಿ ಬಿಡುಗಡೆಯಾದ ಮಯೂರ ಸಿನಿಮಾ ಯಾರಿಗೆ ಗೊತ್ತಿಲ್ಲ. ಅದರಲ್ಲಿ ಅಣ್ಣಾವ್ರು ಒಂದು ಡೈಲಾಗ್‌ ಹೇಳುತ್ತಾರೆ. ‘ಹೆದರಬೇಡಿ. ನಾವು ಕದಂಬರು, ಕನ್ನಡ ತಾಯಿಯ ಮಕ್ಕಳು. ಕನ್ನಡಿಗರ ಧರ್ಮ, ಕನ್ನಡಿಗರ ನೀತಿ, ಕನ್ನಡಿಗರ ಸಂಸ್ಕೃತಿ, ನಮ್ಮ ನರನಾಡಿಗಳಲ್ಲಿ ಹರಿದಾಡುತ್ತಿದೆ. ದುಷ್ಟನೇ ಆಗಿರಲಿ, ದ್ರೋಹಿಯೇ ಆಗಿರಲಿ, ಅವನೆಂಥ ಅನ್ಯಾಯ, ಅಕೃತ್ಯ ಮಾಡಿರಲಿ. ಅಸಹಾಯಕರಾದವರಿಗೆ ಕರುಣೆ ತೋರಿಸುವುದೇ ನಮ್ಮ ಹುಟ್ಟು ಗುಣ.’

ಹೀಗೆ ಮಾತಾಡುವ ಮೂಲಕ ಕನ್ನಡಿಗರು ಎಂಥ ಸಂಸ್ಕಾರವಂತರು, ಎಂಥ ಸಹೃದಯಿಗಳು ಎಂದು ವರನಟ ಡಾ. ರಾಜಕುಮಾರ ಅವರು ಸಾರಿದರು. ಅಷ್ಟು ಪ್ರೀತಿ-ಸ್ನೇಹದಿಂದ ಬದುಕಿದ ಆ ವರನಟನ ಅಭಿಮಾನಿ ನಾನು ಹಾಗೂ ನನ್ನ ತಾಯಿ ಕಾವೇರಿ ಎಂದ ಒಂದೇ ಒಂದು ಕಾರಣಕ್ಕೆ ಕನ್ನಡದ ನಟನನ್ನು ತಮಿಳು ಚಿತ್ರದಿಂದ ಹೊರ ಹಾಕಿದ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಒಂದು ವಿಡಿಯೊ ಹರಿದಾಡಿತ್ತು. ಅದರಲ್ಲಿ ಯೋಗಿ ಎಂಬ ಕನ್ನಡ ನಟ ತಮಿಳು ಚಿತ್ರ ‘ಪಾರ್ತಿಬನ್‌ ಕಾದಲ್‌’ಗೆ ನಾಯಕನಾಗಿ ಆಯ್ಕೆಯಾಗಿದ್ದರು. ಇದರ ಮೋಷನ್‌ ಪೋಸ್ಟರ್‌ ಬಿಡುಗಡೆಯ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗೇ ನಡೆಯಿತು. ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಯೋಗಿಯವರನ್ನು ಸುತ್ತುವರಿದರು. ಆದರೆ ಅವತ್ತು ಅವರು ಬೆಂಗಳೂರಿಗೆ ಹೋಗಬೇಕಿದ್ದರಿಂದಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ಆದರೆ ಮತ್ತೊಮ್ಮೆ ಚೆನ್ನೈಗೆ ಬಂದಾಗ ಸಂಚು ಮಾಡಿ ಗಾಳ ಹಾಕಿದ ಅಲ್ಲಿನ ಪತ್ರಕರ್ತರು ಮೊದಲಿಗೆ ‘ಪಾರ್ತಿಬನ್‌ ಕಾದಲ್‌’ ಸಿನಿಮಾದ ಬಗ್ಗೆಯೇ ಕೇಳಿದ್ದಾರೆ. ನಂತರ ಉದ್ದೇಶಪೂರ್ವಕವಾಗಿಯೇ ಕಾವೇರಿ ನಮಗೆ ಸಿಗಬೇಕೋ? ನಿಮಗೆ ಸಿಗಬೇಕೋ ಎಂದು ಕೆಲಸವಿಲ್ಲದ ಪೊಲಿಗಳು ಕೇಳಿದಂತೆ ಕೇಳಿದ್ದಾರೆ. ಅದಕ್ಕೆ ಅಂಜದೇ ವಿನಯದಿಂದಲೇ ಉತ್ತರಿಸಿದ ಯೋಗಿ, ‘ಸಾರ್‌, ನಮಗೇ ನೀರಿಲ್ಲ. ನಿಮಗೆ ಬೇಕು ಅಂದರೆ ಹೇಗೆ ಸಾರ್‌ ಕೊಡೋದು? ಅಲ್ಲಿ ಮಂಡ್ಯ ಅಂತ ಊರಿದೆ. ಬಂದು ನೋಡಿ ಸಾರ್‌ ಜನರು ತೊಟ್ಟು ನೀರಿಗಾಗಿ ಎಷ್ಟು ಕಷ್ಟ ಪಡ್ತಾ ಇದಾರೆ ಅಂತ. ಮಳೆ ಬಂದಾಗ, ಡ್ಯಾಂ ತುಂಬುತ್ತದೆ. ಆಗ ನೀರು ಬಿಡದೇ ಇದ್ದರೂ ಡ್ಯಾಂ ಒಡೆದುಕೊಂಡು ಯಾರ ಮಾತೂ ಕೇಳದೇ ಹರಿಯುತ್ತದೆ. ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೊಳ್ಳಿ. ಇದು ನಾನು ಮಾತಾಡಿ ನಿರ್ಧರಿಸುವ ವಿಷಯವಲ್ಲ. ಇದರ ಬಗ್ಗೆ ತಮಿಳಿನ ನಾಯಕನಟ ಸಿಂಬು ಸಹ ಮಾತನಾಡಿದ್ದಾರೆ. ಕರ್ನಾಟಕದ ಜಾಗದಲ್ಲಿ ತಮಿಳು ನಾಡು ಇದ್ದರೂ ತಮಿಳು ಜನತೆಯೂ ಇದೇ ರೀತಿ ಮಾತಾಡ್ತಿದ್ರು’ ಎಂದಿದ್ದಾರೆ.

ಆದರೆ ಇಷ್ಟಕ್ಕೇ ಸುಮ್ಮನಾಗದ ಪತ್ರಕರ್ತರು, ‘ನಿನಗೆ ರಾಜಕುಮಾರರು ಇಷ್ಟನೋ ಅಥವಾ ರಜನಿಕಾಂತರೋ?’ ಎಂದು ಕೇಳಿದ್ದಾರೆ. ಅಲ್ಲೂ ಯೋಗಿ ಅವರು, ‘ಕಲಾವಿದರು ಎಂದರೆ ಒಂದೇ. ನನಗೆ ಇಬ್ಬರೂ ಇಷ್ಟ ’ಎಂದಿದ್ದಾರೆ. ವಿವಾದವನ್ನೇ ಹುಡುಕುವ ಪತ್ರಕರ್ತರಿಗೆ ಇಷ್ಟಕ್ಕೇ ಸಮಾಧಾನ ಆಗಲಿಲ್ಲ, ಮತ್ತೆ ಕೆದಕಿ,ಚಿಕ್ಕ ಮಕ್ಕಳಿಗೆ ಅಪ್ಪ ಅಮ್ಮರಲ್ಲಿ ಯಾರು ಜಾಸ್ತಿ ಇಷ್ಟ ಎಂದು ಕೇಳುವಂತೆ ಇಬ್ಬರು ನಟರಲ್ಲಿ ಯಾರು ಜಾಸ್ತಿ ಇಷ್ಟ ಎಂದು ಕೇಳಿದ್ದಾರೆ. ಆ ಸಮಯಕ್ಕೆ ತನಗೆ ಮೊದಲ ಬಾರಿಗೆ ತಮಿಳಿನ ಚಿತ್ರದಲ್ಲಿ ನಾಯನಾಗಿ ನಟಿಸುವ ಅವಕಾಶ ಸಿಕ್ಕಿದೆ ಎಂಬುದನ್ನೂ ಮರೆತ ಯೋಗಿ, ‘ನಾನು ಕರ್ನಾಟಕದವನಾಗಿದ್ದರಿಂದ ನನಗೆ ಅಣ್ಣಾವ್ರೇ ಇಷ್ಟ.’ ಎಂದರು. ಹೀಗೆ ಒಂದೆರಡು ಇಂಥದ್ದೇ ಪ್ರಶ್ನೆಗಳ ನಂತರ ಪತ್ರಕರ್ತರಿಗೆ ಏನು ಬೇಕೋ ಅವೆಲ್ಲವೂ ಸಿಕ್ಕಿ ಆಗಿತ್ತು. ಟಿವಿ, ಪತ್ರಿಕೆಗಳಲ್ಲಿ ಯೋಗಿಯ ಮಾತುಗಳನ್ನೇ ಇಟ್ಟುಕೊಂಡು ಚೆನ್ನಾಗಿ ಚಚ್ಚಿದರು.

ಪರಿಣಾಮ ಏನು ಗೊತ್ತಾ? ಕರೆಕ್ಟ್, ‘ಪಾರ್ತಿಬನ್‌ ಕಾದಲ್‌’ ಸಿನಿಮಾದ ನಾಯಕನಾಗಿದ್ದರೂ ಯೋಗಿಯನ್ನು ಸಿನಿಮಾದಿಂದ ಹೊರದಬ್ಬಿದರು. ಇಂಥದ್ದನ್ನೆಲ್ಲ ಮಾತಾಡಬಾರದಿತ್ತು ಎಂದು ಹೇಳಿಯೇ ನಿರ್ಮಾಪಕರು ಸಿನಿಮಾದಿಂದ ಹೊರ ಹಾಕಿದ್ದಾರೆ.

ಇದೆಂಥ ಅಸಹಿಷ್ಣುತೆ? ಎಲ್ಲರನ್ನೂ ಪ್ರೀತಿಸುತ್ತಿದ್ದ ಅಣ್ಣಾವ್ರ ಹೆಸರು ಹೇಳಿದರೆ, ಕೈ ಮುಗಿದು ಒಳಗೆ ಕರೆದುಕೊಳ್ಳುವ ಬದಲಿಗೆ ಹೊರ ಹಾಕುತ್ತಿದ್ದಾರೆ ಇವರೆಲ್ಲ ಮನುಷ್ಯರಿಗೇ ಹುಟ್ಟಿದವರೋ? ಅಥವಾ ಭಾಷೆಗಳಿಗೋ?

ಹಾಗಾದರೆ ರಜನಿಕಾಂತ ಆದರೂ ತಮಿಳಿಗನಾ? ಅದೂ ಇಲ್ಲ. ಅವರೂ ಕನ್ನಡಿಗರೇ. ಊರೆಲ್ಲ ಆರಾಧಿಸುವ ಜಯಲಲಿತಾ? ಅವರಿಗೂ ಕನ್ನಡ ನಾಡೇ ಮೂಲ. ಯಾರೂ ಇಲ್ಲದಿದ್ದಾಗ ಬಂದವರು ಕನ್ನಡಿಗರು. ಆದರೆ ಈಗ ಕನ್ನಡಿಗರಿಗೆ ನಯಾ ಪೈಸೆ ಬೆಲೆಯಿಲ್ಲ.

ಮಯೂರ ಚಿತ್ರದಲ್ಲಿ ಡಾ.ರಾಜಕುಮಾರ ಹೇಳಿದಂತೆ, ನಾವು ಕನ್ನಡಿಗರು ದುಷ್ಟರು ದುರುಳರು ಯಾರೇ ಆಗಿದ್ದರೂ ಸಹಿಸಿಕೊಳ್ಳುತ್ತಿರುವ ಪರಿಣಾಮವೇ ಇಂದು ಕನ್ನಡ ನಟರನ್ನು ಓಡಿಸುತ್ತಿರುವುದನ್ನು ನೋಡುತ್ತಿದ್ದೇವೆ.
ಬೇರೆ ರಾಜ್ಯದವರು ನಮ್ಮ ಜತೆ ಈ ರೀತಿ ನಡೆದುಕೊಳ್ಳುವುದಕ್ಕೆ ನಾವೇ ಹೊಣೆ ಎಂಬಂತೆ ತೋರುತ್ತಿದೆ.

ವಲಸೆಗೆ ಕಾರಣ ಏನು?
ಸುಮಾರು ಕನ್ನಡದ ನಟರು ತಮಿಳಿಗೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡದಲ್ಲಿ ಉತ್ತಮ ನಟರಿಗೆ ಬೆಲೆ ಸಿಗದೆ ಇರುವುದು. ಅಥವಾ ಚಿತ್ರ ಸೋತರೂ ಪರವಾಗಿಲ್ಲ, ಸ್ಟಾರ್‌ ಆದ ನಟರನ್ನು ಹಾಕಿಕೊಂಡು ಮಾತ್ರ ಸಿನಿಮಾ ಮಾಡುತ್ತಿರುವುದು. ನಿಜವಾಗಿ ಕಲೆ ಉಳ್ಳವರು ಮಲಯಾಳಂ, ತೆಲುಗು, ಮತ್ತು ಹೆಚ್ಚಾಗಿ ತಮಿಳಿನ ಕಡೆ ಮುಖ ಮಾಡಿದ್ದಾರೆ. ಇನ್ನು ನಮ್ಮ ಕನ್ನಡಿಗರೆಂದರೆ ಕನ್ನಡಿಗರಿಗೇ ಅದೇನೋ ಉಪೇಕ್ಷೆ. ಹಾಗಾಗಿ ಪ್ರತಿಭಾವಂತ ನಟರು ಬೇರೆ ಭಾಷೆಗೆ ಅವಕಾಶಗಳನ್ನು ಹುಡುಕಿ ಹೋಗುವಂತಾಗಿದೆ. ಅಲ್ಲಿ ಕನ್ನಡಿಗರು ಸ್ವಾಭಿಮಾನವನ್ನು ಕಿಸೆಯಲ್ಲಿಟ್ಟುಕೊಂಡು ಬದುಕಬೇಕು ಇಲ್ಲವಾದರೆ ಯೋಗಿಯವರಿಗೆ ಬಂದ ಸ್ಥಿತಿಯೇ ಎಂಥ ಪ್ರಖ್ಯಾತ ನಟನಿಗೂ ಬರುತ್ತದೆ.

ಕನ್ನಡಿಗರಲ್ಲಿ ಹೆಚ್ಚುತ್ತಿರುವ ತಮಿಳು ಮೋಹ
ಕನ್ನಡ ಸಿನಿಮದಲ್ಲಿ ಒಂದು ನಂಬಿಕೆ ಮೊದಲಿನಿಂದಲೂ ಇದೆ. ಅದೇನೆಂದರೆ, ಸಿನಿಮಾಗೆ ತಮಿಳಿನ ಸಂಗೀತ ನಿರ್ದೇಶಕರಿದ್ದರೆ, ಹಾಡು ಸಖತ್‌ ಬರುತ್ತದೆ. ಸಿನಿಮಾಗೆ ಸಂಪೂರ್ಣ ಸ್ಕೋರಿಂಗ್‌ ತಮಿಳುನಾಡಿನ ಸ್ಟುಡಿಯೋಗಳಲ್ಲಿ ಮಾಡಿದರೆ, ಸಿನಿಮಾದ ಫಿನಿಶಿಂಗ್‌ ಚೆನ್ನಾಗಿ ಬರುತ್ತದೆ. ತಮಿಳಿನಲ್ಲಿ ಅಗ್ರಜ ಗಾಯಕರಿದ್ದಾರೆ. ಅವರು ಬಂದರೆ, ನಮ್ಮ ಸಿನಿಮಾ ಹಿಟ್‌. ತಮಿಳಿನ ಕ್ಯಾಮರಾಮನ್‌ ಕನ್ನಡಕ್ಕೆ ಬಂದರೆ ಸಿನಿಮಾ ಟಾಪ್‌ ಕ್ಲಾಸ್‌ ಆಗುತ್ತದೆ. ಹೀಗೆ ಒಂದಲ್ಲ, ಎರಡಲ್ಲ. ಆದರೆ ಈ ನಂಬಿಕೆಗೆ ಬಲಿಯಾಗುತ್ತಿರುವವರು ಮಾತ್ರ ನಮ್ಮ ಕನ್ನಡಿಗರು.
ನಮಗೆ ಇಲ್ಲಿ ಆಗುತ್ತಿರುವ ಅವಮಾನವನ್ನೂ ಲೆಕ್ಕಿಸದೇ ತಮಿಳಿಗರನ್ನು ತಂದು ಬೆಳೆಸುತ್ತಲೇ ಇದ್ದಾರೆ. ತಮಿಳಿಗರನ್ನು ಬೆಳೆಸಬಾರದು ಅಂತಲ್ಲ. ಆದರೆ, ನಮಗೆ ಆಗುತ್ತಿರುವ ಅವಮಾನವನ್ನೂ ಲೆಕ್ಕಿಸದೇ ಇರುವಷ್ಟು ಕುರುಡರಾಗಬಾರದು.

ಎಚ್ಚೆತ್ತುಕೊಳ್ಳದ ವಾಣಿಜ್ಯ ಮಂಡಳಿ
ಪದೇ ಪದೆ ಕನ್ನಡಕ್ಕೆ, ಕನ್ನಡ ಸಿನಿಮಾಗಳಿಗೆ, ಕನ್ನಡದ ನಟರಿಗೆ ಅವಮಾನವಾಗುತ್ತಲೇ ಇದೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಾತ್ರ ಇದಕ್ಕೆಲ್ಲ ಕ್ಯಾರೇ ಎನ್ನುತ್ತಿಲ್ಲ. ನಿನ್ನೆಯಷ್ಟೇ ‘ಅಯೋಗ್ಯ’ ಚಿತ್ರದ ನಾಯಕ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಹೈದರಾಬಾದ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಯೋಗ್ಯ ಎಂಬ ಕನ್ನಡ ಚಿತ್ರದ ಎರಡು ಪ್ರದರ್ಶನ ಹಾಕಬೇಕು ಎಂದರೆ, ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿಯ ಪರವಾನಗಿ ತರಬೇಕೆಂದು ಮಲ್ಟಿಪ್ಲೆಕ್ಸ್‌ ಮಾಲೀಕರು ಹೇಳುತ್ತಿದ್ದಾರೆ ಎಂದು ಅಯೋಗ್ಯ ಚಿತ್ರದ ನಾಯಕ ಸತೀಶ್‌ ನೀನಾಸಂ ಹೇಳಿದ್ದಾರೆ. ಆದರೆ ದುರಂತೆ ಏನು ಎಂದರೆ, ಇದೇ ತೆಲುಗಿನ ಚಿತ್ರ ಗೀತ ಗೋವಿಂದಂ ಎಂಬ ಚಿತ್ರ ಕರ್ನಾಟಕದಲ್ಲಿ ಎಲ್ಲ ಕಡೆ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಆಗಿಬಿಟ್ಟಿದೆ. ಅಷ್ಟೇ ಅಲ್ಲದೇ ಕನ್ನಡ ಚಿತ್ರಗಳಿಗೇ ಜಾಗ ಇಲ್ಲದಷ್ಟು ತಮಿಳು, ತೆಲುಗು ಭಾಷೆಯ ಚಿತ್ರಗಳು ಕರ್ನಾಟಕದ ಮಲ್ಟಿಪ್ಲೆಕ್ಸ್‌ ಅನ್ನು ತುಂಬಿಕೊಂಡಿದೆ. ಆದರೆ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಾತ್ರ ಯಾವ ತಲೆ ಬಿಸಿ ಇಲ್ಲ. ಕನ್ನಡ ಚಿತ್ರ ಮತ್ತು ಚಿತ್ರ ನಟರ ಪರಿಸ್ಥಿತಿ ಅಧೋಗತಿಯತ್ತ ಸಾಗುತ್ತಿದ್ದರೂ ಚಲನಚಿತ್ರ ಮಂಡಳಿ ಆರಾಮಾಗಿದೆ.

ತಮಿಳೆಂದರೆ ಭಯ, ಕನ್ನಡ ತಾತ್ಸಾರ
ಕರ್ನಾಟಕದಿಂದ ತಮಿಳಿಗೆ ಹೋದ ಯಾವುದೇ ನಟರನ್ನು ನೋಡಿ. ಅಲ್ಲಿ ತಗ್ಗಿ ಬಗ್ಗಿ ನಡೆಯುತ್ತಾರೆ. ಒಂದೇ ಒಂದು ಮಾತೂ ಆಡುವುದಿಲ್ಲ. ಆದರೆ ಕನ್ನಡ ನಾಡಿಗೆ ಬಂದಾಗ ಮಾತ್ರ ಎಲ್ಲಿಲ್ಲದ ತಾತ್ಸಾರ. ಇದೇ ಪ್ರಕಾಶ್‌ ರೈಗೆ ಕಾವೇರಿ ಬಗ್ಗೆ ಕೇಳಿದ್ದಕ್ಕೆ ಕನ್ನಡ ಸುದ್ದಿ ಮಾಧ್ಯಮವೊಂದರ ನಿರೂಪಕಿಯರ ಮೇಲೆ ಎಗರಾಡಿ ಎದ್ದು ಹೋಗಿದ್ದರು. ಆದರೆ ತಮಿಳು ನಾಡಿನಲ್ಲಿದ್ದಾಗ ಎಂದಿಗೂ ಕಾವೇರಿ ಕರ್ನಾಟಕದ್ದು, ಕರ್ನಾಟಕದ ಜನರು ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಲಿಲ್ಲ. ಒಮ್ಮೆ ಹೇಳಿದರೆ, ಯೋಗಿಗೆ ಆದ ಪರಿಣಾಮವೇ ಆಗುತ್ತಿತ್ತು. ಕನ್ನಡದ ಸ್ಥಿತಿ ಹೊರಗೆ ಹೀಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ತಮಿಳು ಚಿತ್ರಗಳೇ ತಾಂಡವವಾಡುತ್ತಿದೆ. ತಮಿಳು ಚಿತ್ರಗಳನ್ನು ಸಹಿಸಿಕೊಂಡಿದ್ದಕ್ಕೆ ಈ ಬಹುಮಾನವಾ? ಕನ್ನಡಿಗರೇ ಹೇಳಬೇಕು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya