ಸ್ಟ್ಯಾಂಡಪ್‌ ಕಮೀಡಿಯನ್‌ಗಳೆಂಬ ಹೊಸ ಬುದ್ಧಿಜೀವಿಗಳು!

ಈಗ ಸ್ಟ್ಯಾಂಡಪ್‌ ಕಾಮಿಡಿ ಎಂಬ ಹೊಸ ಟ್ರೆಂಡ್‌ ಶುರುವಾಗಿದೆ. ಹಾಗೆ ಒಂದೆರಡು ಹಾಸ್ಯಗಳನ್ನು ನಿಮ್ಮ ಮುಂದಿಡುತ್ತೇನೆ. ಅಭಿಜಿತ್‌ ಗಂಗೂಲಿ ಎಂಬ ಸ್ಟ್ಯಾಂಡಪ್‌ ಕಮೀಡಿಯನ್‌ ಮೋದಿಯವರು ತರುತ್ತಿರುವ ಹೊಸ ನೀತಿಗಳ ಬಗ್ಗೆ ಲೇವಡಿ ಮಾಡುತ್ತಾ, ‘ಒಂದು ದಿನ ಮೋದಿ ಬಂದ್ರು ಆಧಾರ್‌ ಕಾರ್ಡ್‌ ಮಾಡ್ಕೊಳಿ ಅಂದ್ರು.. ಮಾಡಿದ್ವಿ, ಅದನ್ನ ಬ್ಯಾಂಕ್‌ಗೆ ಕನೆಕ್ಟ್ ಮಾಡಿ ಅಂದ್ರು ಮಾಡಿದ್ವಿ, ಹೊಸ ಬ್ಯಾಂಕ್‌ ಅಕೌಂಟ್‌ ಓಪನ್‌ ಮಾಡಿ ಅಂದ್ರು ಮಾಡಿದ್ವಿ.. ಟ್ಯಾಕ್ಸ್‌ ಪದ್ಧತಿ ಬದಲು ಮಾಡ್ತೀನಿ ಅಂದ್ರು.. ಅರೇ ಏನ್‌ ನಡೀತಾ ಇದೆ ಇಲ್ಲಿ.. ನೀವ್‌ ಕೆಲಸ ಮಾಡಿ. ನಮ್ಮನ್ನ ಯಾಕೆ ಕೆಲಸ ಮಾಡಕ್ಕೆ ಹೇಳ್ತೀರಾ? ಮೋದಿಜಿ ನಿದ್ದೆ ಮಾಡಲ್ಲ ಅಂತಾರೆ. ಅರೇ ಮಲಗಿ. ಯಾರ್‌ ಬೇಡ ಅಂದ್ರು’ ಎನ್ನುತ್ತಾರೆ. ಇದರಲ್ಲಿ ನಗುವಂಥದ್ದೇನಿದೆ? ಇದೇನು ಬಹಳ ದೊಡ್ಡ ಕಾಮಿಡಿಯಾ? ಇದನ್ನು ಹಾಸ್ಯ ಎಂದು ಇವರು ಸೇಲ್‌ ಮಾಡುತ್ತಿದ್ದಾರೆಂದರೆ, ಇವರ ನಿಲುವು, ವ್ಯಕ್ತಿತ್ವ ಎಂಥದ್ದು ಎಂದು ಆರಾಮಾಗಿ ತಿಳಿಯುತ್ತದೆ.

ಮತ್ತೊಬ್ಬ ಇದ್ದಾನೆ, ವಿಪುಲ್‌ ಗೋಯಲ್‌. ಆತ ಮೋದಿ ಬಗ್ಗೆ ಮಾತನಾಡುವಾಗ ಶುರು ಮಾಡುವುದೇ ತಾನು ಮೋದಿ ಅಭಿಮಾನಿ ಎನ್ನುವುದರ ಮೂಲಕ. ಆದರೆ ಆತ ನಿಜವಾಗಿಯೂ ಹಾಗಿರುವುದಿಲ್ಲ. ಆತ ಮೋದಿ ಬಗ್ಗೆ ಹೇಳಿರುವುದು ಇಲ್ಲಿದೆ: ‘ಒಂದು ದಿನ ಮೋದಿ ಬರುತ್ತಾರೆ, ನಿಮಗೆ ದೇಶ ಸ್ವಚ್ಛ ಆಗಬೇಕೋ ಬೇಡವೋ ಎಂದು ಕೇಳುತ್ತಾರೆ. ನಾವು ಹೌದು ಎನ್ನುತ್ತೇವೆ. ತಕ್ಷಣ ಸ್ವಚ್ಛ ಭಾರತ್‌ ಸೆಸ್‌ ಎಂದು 0.5% ಟ್ಯಾಕ್ಸ್‌ ಹಾಕುತ್ತಾರೆ. ರೈತರು ಚೆನ್ನಾಗಿರಬೇಕೋ ಬೇಡವೋ ಎಂದು ಕೇಳುತ್ತಾರೆ. ನಾವು ಹೌದು ಎಂದ ತಕ್ಷಣ, ತಗೊ 0.5% ಕೃಷಿ ಕಲ್ಯಾಣ್‌ ಸೆಸ್‌ ಎಂದು ಟ್ಯಾಕ್ಸ್‌ ಹಾಕುತ್ತಾರೆ. ಮೋದಿ ಮತ್ತೆ ಬಂದರೆ ಮೇಕ್‌ ಇನ್‌ ಇಂಡಿಯಾ ಅಂತೆಲ್ಲ ಅಂದರೆ ನಮ್ಮನ್ನು ಚೂತ್ಯಾ ಮಾಡಬೇಡಿ, ಬೆವಕೂಫ್‌ ಮಾಡಬೇಡಿ ಎನ್ನಬೇಕು.’ ಎನ್ನುತ್ತಾನೆ. ಒಟ್ಟಾರೆ ಇವರ ಉದ್ದೇಶ ಇಷ್ಟೇ. ಜನರೂ ನಗಬೇಕು ಮತ್ತೆ ಅಜೆಂಡಾಗಳನ್ನು ಯುವ ಜನತೆಗೆ ತುರುಕಿದಂತೆಯೂ ಆಗಬೇಕು.

ಹೌದು, ಇವರೇ ನಮ್ಮ ದೇಶದ ಹೊಸ ಬುದ್ಧಿಜೀವಿಗಳು. ಇವರು ಯಾವ ವಿಷಯದ ಬಗ್ಗೆಯಾದರೂ ತೀರ ಕೊಳಕಾಗಿಯೂ, ರಾಜಕೀಯವಾಗಿಯೂ ಹಾಸ್ಯ ಮಾಡಬಲ್ಲರು. ಹಾಸ್ಯ ಮಾಡುತ್ತಲೇ ಉದ್ದೇಶ ಈಡೇರಿಸಿಕೊಳ್ಳಬಲ್ಲರು.

ಇವರೆಲ್ಲ ಯಾಕೆ ಹೀಗಾಡುತ್ತಿದ್ದಾರೆ ಎಂದು ನಮಗೆ ತಿಳಿಯಬೇಕೆಂದರೆ, ಸ್ವಲ್ಪ ನಾಟಕ, ಸಿನಿಮಾ, ನಟರು ಎಂಬಂಥ ಇತಿಹಾಸದ ಪುಟವನ್ನು ಒಮ್ಮೆ ತೆರೆದು ನೋಡಬೇಕು. ಮೊದಲೆಲ್ಲ ಜನರಿಗೆ ಮನರಂಜನೆ ಎಂದರೆ ನಾಟಕ ಮಾತ್ರ.

ಸ್ವಾತಂತ್ರ್ಯಪೂರ್ವದಲ್ಲೇ ಇಂಡಿಯನ್‌ ಪೀಪಲ್ಸ್‌ ಥಿಯೇಟರ್‌ ಅಸೋಸಿಯೇಷನ್‌ನ ಸಹಯೋಗದಲ್ಲಿ ಪ್ರಜಾನಾಟ್ಯ ಮಂಡಳಿ ಎಂದು ಅಂದಿನ ಆಂಧ್ರದಲ್ಲಿ ಎಡಪಂಥೀಯ ನಾಟಕ ಸಂಘವೊಂದು ಕಮ್ಯುನಿಸ್ಟ್‌ ಪಾರ್ಟಿಯವರ ಕೃಪಾಕಟಾಕ್ಷದಿಂದ ಶುರುವಾಯಿತು. ತಮ್ಮ ಸಿದ್ಧಾಂತವನ್ನು ಮಂಡಿಸುವುದಕ್ಕೆ ಹಾಗೂ ಕಮ್ಯುನಿಸ್ಟ್‌ ಪಕ್ಷವನ್ನು ಮತ್ತಷ್ಟು ಪ್ರಚಾರ ಮಾಡುವುದಕ್ಕೆ ಇವರು ಊರೂರು ತಿರುಗಿ ನಾಟಕ ಜನರನ್ನು ಇತ್ತ ಸೆಳೆಯುವ ನಾಟಕಗಳನ್ನು ಬರೆದು ನಟಿಸಿದರು. ಇಷ್ಟೇ ಅಲ್ಲ ಇವರ ಜತೆಗೆ ಜನ ನಾಟ್ಯ ಮಂಡಳಿ, ಅರುಣೋದಯ ಇತ್ಯಾದಿ ಎಡಪಂಥೀಯ ನಾಟಕಗಳು ಜನರನ್ನು ಸೆಳೆಯುವಲ್ಲಿ ಸಫಲವಾಗಿತ್ತು. ಇದಾದ ನಂತರ ಬೀದಿ ನಾಟಕಗಳ ಮೂಲಕವೂ ಕಮ್ಯುನಿಸ್ಟ್‌ ಹಾಗೂ ಎಡಪಂಥೀಯ ಪರ ನಾಟಕ ತಂಡಗಳು ನಟನೆ ಮಾಡಿ ಸಿದ್ಧಾಂತ ಪ್ರಚಾರಕ್ಕೆ ನಿಂತವು. ಈಗಲೂ ನೀವು ಬೀದಿ ನಾಟಕ, ನಾಟಕದ ಮೂಲಕ ಜನರನ್ನು ಸೆಳೆಯುವ ಛಾಯೆಯನ್ನು ಕಮ್ಯುನಿಸ್ಟರಲ್ಲಿ ಕಾಣಬಹುದು.

ಇದಾದ ನಂತರ ರಾಜಕೀಯಕ್ಕೆ ಬಳಕೆಯಾಗಿದ್ದು ಸಿನಿಮಾಗಳು. ರಾಜಕೀಯ ಪ್ರೇರಿತ ಸಿನಿಮಾಗಳು ಬಂದವು. ಇದರ ಕ್ರೇಜ್‌ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಯಿತೆಂದರೆ, ನಟ ನಟಿಯರು ರಾಜಕೀಯದ ಬಗ್ಗೆ ಮಾತನಾಡಲು ಶುರು ಮಾಡಿಕೊಂಡರು. ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವುದಕ್ಕೆ ಶುರು ಮಾಡಿಕೊಂಡರಷ್ಟೇ ಅಲ್ಲದೇ, ಸ್ವತಃ ರಾಜಕೀಯಕ್ಕೆ ಇಳಿದುಬಿಟ್ಟರು.

ಜನರಿಗೆ ರಾಜಕೀಯಕ್ಕೆ ಇಳಿದಿರುವ ನಟರು ಅದೇಕೋ ಅಷ್ಟಾಗಿ ಇಷ್ಟವಾಗದ ಕಾಲಘಟ್ಟವೂ ಬಂತು. ಆಗಲೇ ಸಕ್ರಿಯವಾಗಿ ಸಿನಿಮಾದಲ್ಲಿರುವ ಅಥವಾ ಖ್ಯಾತ ಸಿನಿಮಾ ನಟರು ನಿಧಾನವಾಗಿ ಸರ್ಕಾರವನ್ನು ತೆಗಳುವುದು, ಬಿಟ್ಟಿ ಉಪದೇಶಗಳನ್ನು ಜನರಿಗೆ, ಸರ್ಕಾರಕ್ಕೆ ಕೊಡುವುದಕ್ಕೆ ಶುರು ಮಾಡಿದರು. ಹೀಗೆ ಮಾಡಿದ್ದರಿಂದ ಇವರನ್ನು ಜನರು ಬುದ್ಧಿಜೀವಿಗಳೆಂದೂ, ಮಹಾನ್‌ ಪಂಡಿತರೆಂದೂ ಗುರುತಿಸಿದರು. ಆದರೆ ಇವರೆಲ್ಲ ಬರೆದು ಕೊಟ್ಟಿದ್ದನ್ನಷ್ಟೇ ಮಾತನಾಡುವ ರಾಜಕಾರಣಿಗಳ ರಿಮೋಟ್‌ ಬೊಂಬೆಗಳು ಎಂದು ಜನರಿಗೆ ತಿಳಿಯಲೇ ಇಲ್ಲ. ಯುವಕರಿಂದ ಹಿಡಿದು ಮುದುಕರವರೆಗೂ ಇವರ ಮಾತನ್ನು ಜನ ಬಹಳ ಗಮನವಿಟ್ಟು ಕೇಳುತ್ತಿದ್ದರು.
ಆದರೆ ಸಾಮಾಜಿಕ ಜಾಲತಾಣ, ಮಾಧ್ಯಮಗಳು ಅಪ್‌ಡೇಟ್‌ ಆದಂತೆ, ಜನರಿಗೆ ಈ ಸಿನಿಮಾ ನಟರ ಅಸಲಿಯತ್ತುಗಳು ಗೊತ್ತಾಗತೊಡಗಿತು. ಹೌದೋ ಇಲ್ಲವೋ ನೋಡಿ, ಮೊದಲೆಲ್ಲ ಆಮಿರ್‌ ಖಾನ್‌ ಭಾರತದ ಬಗ್ಗೆ ಏನಾದರೂ ಹೇಳಿದರೆ ಬಹಳ ದೊಡ್ಡ ವಿಷಯವೇ ಆಗಿಬಿಡುತ್ತಿತ್ತು. ಜನರು ಇವರನ್ನು ಒಪ್ಪುತ್ತಾರೋ ಬಿಡುತ್ತಾರೋ ಬೇರೆ ಪ್ರಶ್ನೆ. ವಿರೋಧಿಸುತ್ತಿರಲಿಲ್ಲ. ಆದರೆ ಈಗ ಆಮಿರ್‌ ಖಾನ್‌ ಮಾತಾಡಲಿ ನೋಡೋಣ? ಅರ್ಧ ಗಂಟೆಯಲ್ಲಿ ಆಮಿರ್‌ ಖಾನ್‌ ಜಾತಕವನ್ನೇ ಮುಂದಿಟ್ಟು ನೀನು ಯಾಕಾಗಿ ಇಂಥ ಮಾತಾಡಿದ್ದೀಯ ಹಾಗೂ ನೀನೆಷ್ಟು ಆಷಾಡಭೂತಿ ಎಂಬುದನ್ನೆಲ್ಲ ಮುಖದ ಮೇಲೆ ಸಾಕ್ಷಿ ಸಮೇತ ತಂದಿಡುತ್ತಾರೆ. ಒಂದೇ ವಾಕ್ಯದಲ್ಲಿ ಇವರ ಬಗ್ಗೆ ಹೇಳಬೇಕೆಂದರೆ, ಪ್ರಕಾಶ್‌ ರೈ ಮೊದಲು ಸರ್ಕಾರದ ಬಗ್ಗೆ, ಮೋದಿ ಬಗ್ಗೆ ಮಾತನಾಡಿದಾಗ ಅವರಿಗೆ ದೊರೆತ ಗೌರವವೆಷ್ಟು, ಈಗ ಮಾತನಾಡಿದರೆ ಅವರಿಗೆ ಸಿಗುವ ಮರ್ಯಾದೆ ಏನು ಎಷ್ಟು ಎಂಬುದು ನೋಡಿದರೆ ಸಾಕು.

ನಾಟಕರಂಗ, ಸಿನಿಮಾ ಅಥವಾ ನಟರು ದಿನ ನಿತ್ಯ ಬೆತ್ತಲಾಗುತ್ತಿರುವಾಗ ಅವರನ್ನು ಜನರು ಅಪ್ಪನಾಣೆ ನಂಬುವುದಿಲ್ಲ. ರಾಜಕಾರಣಿಗಳು ಅಥವಾ ರಾಜಕೀಯ ತಮ್ಮ ಅಜೆಂಡಾಗಳನ್ನು ತುರುಕಲು ಬೇರೆ ಕಿಟಕಿಯನ್ನು ತಾವೇ ತೆರೆದುಕೊಳ್ಳಬೇಕು. ಅದೇ ಈ ಸ್ಟ್ಯಾಂಡಪ್‌ ಕಾಮಿಡಿ. ಯಾಕೆಂದರೆ, ಸ್ಟ್ಯಾಂಡಪ್‌ ಕಾಮಿಡಿಗೆ ಯಾವುದೋ ಅಜ್ಜ, ಅಜ್ಜಿಯರು ಬರುವುದಿಲ್ಲ. ಆಂಟಿ ಅಂಕಲ್‌ಗಳು ಬರುವುದಿಲ್ಲ. ಕೇವಲ 35 ವರ್ಷದ ಒಳಗಿನ ಯುವ ಜನತೆಯೇ ಕಾರ್ಯಕ್ರಮದ ಬಂಡವಾಳ.

ಈ ಹಾಸ್ಯಗಾರರಿಂದಲೇ ಅಜೆಂಡಾ ತುರುಕಿದರೆ, ಯಾವ ನಾಟಕ, ಸಿನಿಮಾ, ನಟನ ಮಾತುಗಳಿಗಿಂತಲೂ ಗಾಢವಾಗಿ ಜನರ ಮನಸ್ಸಲ್ಲಿ ಉಳಿಯುತ್ತದೆ. ನಮ್ಮ ಭಾರತದಲ್ಲಿ ಹಾಸ್ಯವನ್ನು ಎಷ್ಟು ಸಲೀಸಾಗಿ ತೆಗೆದುಕೊಳ್ಳುತ್ತಾರೆಂದರೆ, ರಸ್ತೆಯಲ್ಲಿ ಹೋಗುವವರಿಗೆ ತಪರಾಕಿ ಕೊಟ್ಟು ಅವರು ಸಿಟ್ಟಿಗೆದ್ದಾಗ, ನೋಡಿ ಇದು ಕಾಮಿಡಿ ಷೋ, ಅಲ್ಲಿ ಕ್ಯಾಮೆರಾ ಇದೆ ಎಂದು ಹೇಳಿದರೆ ಸಾಕು, ತಪರಾಕಿ ತಿಂದಿದ್ದೇ ಮರೆತು ಹಲ್ಲು ಕಿರಿಯುತ್ತಾರೆ. ಇದನ್ನು ಪ್ರ್ಯಾಂಕ್‌ ಷೊ ಹೆಸರಿನಲ್ಲಿ ಅದಾಗಲೇ ಮಾಡುತ್ತಿರುವುದನ್ನು ನೋಡಿರಬಹುದು. ತಮಾಷೆಯ ರೂಪದಲ್ಲಿ ಈ ಕಮೀಡಿಯನ್‌ಗಳು ನಾಜೂಕಿನಿಂದ ತಮ್ಮ ರಾಜಕೀಯ ನಿಲುವುಗಳನ್ನು ಹೊರ ಹಾಕುತ್ತಿದ್ದಾರೆ. ಜನರು ವಿರೋಧಿಸಿದರೆ, ತಮಾಷೆ ಮಾಡಿದ್ದೇವೆ ಎಂದು ಹೇಳಿ ಜಾರಿಕೊಳ್ಳುವುದು ಅಥವಾ ಯಾರೂ ವಿರೋಧಿಸಲಿಲ್ಲವೆಂದರೆ, ಅಜೆಂಡಾ ಯಶಸ್ವಿಯಾಗಿ ಜನರ ತಲೆಯಲ್ಲಿ ನೆಟ್ಟ ಹಾಗೆ! ಹಾಗಾಗಿ ಈಗ ಇವರೇ ನಮ್ಮ ದೇಶದ ಹೊಸ ಪೀಳಿಗೆಯ ಬುದ್ಧಿಜೀವಿಗಳು.

ಮೊದಲು ಬೆಲೆಯೇ ಇಲ್ಲದೇ ಖಾಲಿ ಹೊಡೆಯುತ್ತಿದ್ದ ಸ್ಟ್ಯಾಂಡ್‌ ಅಪ್‌ ಕಮೀಡಿಯನ್‌ಗಳಿಗೆ ಇಂದು ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಈಗ ಅರ್ಧ ಗಂಟೆ ಮಾತನಾಡುವುದಕ್ಕೆ 25 ಸಾವಿರ ರು ಹಾಗೂ ಒಂದು ತಾಸಿನ ಕಾರ್ಯಕ್ರಮಕ್ಕೆ 50 ಸಾವಿರದಿಂದ 1 ಲಕ್ಷದವರೆಗೂ ಮಾಮೂಲಿ ಸ್ಟ್ಯಾಂಡಪ್‌ ಕಮೀಡಿಯನ್‌ಗಳು ಹಣ ತೆಗೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಇವರು ಹಾಗೇ ಸುಮ್ಮನೆ ಬಂದು ನಿಂತು ಮಾತನಾಡಿದಂತೆ ಕಂಡರೂ ಪ್ರತೀ ಬಾರಿಯೂ ಸಖತ್ತಾಗೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಅಭ್ಯಾಸ ಮಾಡಿಕೊಂಡೇ ಸ್ಟೇಜ್‌ ಹತ್ತುತ್ತಾರೆ.

ಇವರು ರಾಜಕೀಯದ ಬಗ್ಗೆ ಅಷ್ಟೇ ಮಾತಾಡಿದರೆ, ಇವರೆಲ್ಲ ಅಪ್ರಸ್ತುತರಾಗಿಬಿಡುತ್ತಿದ್ದರು. ಇಂಥ ರಾಜಕೀಯದ ಬಗ್ಗೆ ಕಾಮಿಡಿ ಮಾಡುವುದಕ್ಕಿಂತ ಮುಂಚೆ, ಎಲ್ಲರೂ ಸಾದಾ ಹಾಸ್ಯ ಮಾಡಿ ಯಶಸ್ವಿಯಾದವರು. ಮುಂದಿನ ಹಂತವೆಂಬಂತೆ, ಜನರ ಮುಂದೆ ಪುರುಷ ಸ್ತ್ರೀಯರ ಮರ್ಮಾಂಗದ ಬಗ್ಗೆ ಹಾಸ್ಯ ಮಾಡಿದರು. ಸೆಕ್ಸ್‌, ಕಾಂಡೋಮ್‌, ಸ್ತನ ಇತ್ಯಾದಿಗಳ ಬಗ್ಗೆ ಭಾರತದಲ್ಲಿ ಸಾರ್ವಜನಿಕವಾಗಿ ಮಾತನಾಡದೇ ಇದ್ದಿದ್ದರಿಂದ ಇಂಥದ್ದರ ಬಗ್ಗೆಯೇ ಹಾಸ್ಯ ಮಾಡುವವರು ಯುವ ಪೀಳಿಗೆಗೆ ಇಷ್ಟವಾಯಿತು.

ನೆನಪಿಡಿ, ಈ ಹಂತದವರೆಗೂ ಎಲ್ಲೂ ರಾಜಕೀಯ ನುಸುಳಿರಲಿಲ್ಲ. ಸೊಂಟದ ಕೆಳಗಿನ ಪದಗಳ ಬಗ್ಗೆಯೂ ಹಾಸ್ಯ ಮಾಡಿದಾಗ ಎಲ್ಲಿ ಜನರು ತಮ್ಮನ್ನು ಸ್ವೀಕರಿಸುತ್ತಿದ್ದಾರೆ ಎಂದು ತಿಳಿಯಿತೋ ಸ್ಟ್ಯಾಂಡಪ್‌ ಕಮೀಡಿಯನ್‌ಗಳು ರಾಜಕೀಯ ಹಾಸ್ಯವನ್ನು ಮಾಡುವುದಕ್ಕೆ ನಿಂತರು. ಇದು ಈಗ ರಾಜಕಾರಣಿಗಳಿಂದ ತನು,ಮನ,ಧನ ಪಡೆದು ಕಾರ್ಯಕ್ರಮ ಮಾಡುವ ಹಂತಕ್ಕೂ ಬಂದು ನಿಂತಿದೆ.

ಕುನಾಲ್‌ ಕಮ್ರಾ ಎಂಬ ವ್ಯಕ್ತಿ ಹಾಸ್ಯಗೋಷ್ಠಿಯಲ್ಲಿ ಮಾತನಾಡುತ್ತಾ ‘ನಾನು ನೋಟು ಅಪಮೌಲ್ಯೀಕರಣ ಆದಾಗ ಎಟಿಎಂ ಮುಂದೆ ನಿಂತಿದ್ದೆ. ಒಬ್ಬ ತಲೆ ಕೆಟ್ಟು ಎಂಥ ದರಿದ್ರ ದೇಶನಪ್ಪಾ ಇದು ಎಂದ. ನಾನು ತಕ್ಷಣವೇ ಅವನ ಪಕ್ಕ ನಿಂತು… ಬಾ ಗುರು ನಾನು ನೀನು ಒಂದೇ ನಿಲುವಿನವರು. ಇಬ್ಬರೂ ಸೇರಿ ಈ ದೇಶವನ್ನು ಬಯ್ಯೋಣ ಎಂದೆ’ ಎಂದು ಹೇಳಿದ ವಿಡಿಯೋ ಯೂಟ್ಯೂಬ್‌ನಲ್ಲಿದೆ.

ಹಾಸ್ಯದ ಮೂಲಕ ಯಾವ ಸಂದೇಶವನ್ನು ಈ ಕೆಟ್ಟ ಮನುಷ್ಯ ನೀಡುತ್ತಿದ್ದಾನೆ ಹೇಳಿ?! ಇದನ್ನೇ ಸಿನಿಮಾ ನಟ ಹೇಳಿದರೆ ದೊಡ್ಡ ಸುದ್ದಿ. ನಾಟಕದಲ್ಲಿ ಇದ್ದರೆ ನಾಟಕ ಬ್ಯಾನ್‌. ಆದರೆ ತಮಾಷೆಯ ಸ್ವರದಲ್ಲಿ ಹೇಳಿದ್ದಕ್ಕೆ ಯಾವ ನಿಷೇಧವೂ ಇಲ್ಲ. ಸಂದೇಶವೂ ಯುವ ಜನತೆಯನ್ನು ತಲುಪಿತು. ಕುನಾಲ್‌ ಕಮ್ರಾ ಹೇಗೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವರು ಮಾಡಿರುವ ಕೆಲ ಸಂದರ್ಶನಗಳನ್ನು ಯೂಟ್ಯೂಬ್‌ನಲ್ಲಿ ನೋಡಬೇಕು. ಅದರಲ್ಲಿ ಶೆಹ್ಲಾ ರಶೀದ್‌, ಉಮರ್‌ ಖಾಲಿದ್‌, ಜಿಗ್ನೇಶ್‌ ಮೆವಾನಿಯಂಥ ತುಕಡೆ ತುಕಡೆ ಗ್ಯಾಂಗ್‌ ಅನ್ನು ಕೂರಿಸಿಕೊಂಡು ಮೋದಿ ವಿರುದ್ಧ ವಿಷ ಕಾರಿಕೊಂಡಿದ್ದಾರೆ.

ಯಥಾವತ್‌ ಪಾಶ್ಚಾತ್ಯರಲ್ಲಿ ಹೇಗೆ ಸ್ಟ್ಯಾಂಡಪ್‌ ಕಾಮಿಡಿ ಬೆಳೆದ ಹಾದಿಯಲ್ಲೇ ಭಾರತದ ಸ್ಟ್ಯಾಂಡಪ್‌ ಕಾಮಿಡಿಗಳು ಬೆಳೆಯುತ್ತಿದೆ. ರಸ್ಸಲ್‌ ಪೀಟರ್ಸ್‌ ಎಂಬುವವನು ಸ್ಟ್ಯಾಂಡಪ್‌ ಕಾಮಿಡಿ ಲೋಕದಲ್ಲಿ ಚಿರಪರಿಚಿತ. ಇವನ ಕಾರ್ಯಕ್ರಮ ನೋಡುವುಕ್ಕೆ 10-15 ಸಾವಿರ ರುಪಾಯಿ ಕೊಟ್ಟು ನೋಡುವುದಕ್ಕೆ ಹೋಗಬೇಕು. ಆದರೆ ಆತ ಅಲ್ಲಿ ಮೊಲೆಯ ಅಳತೆ ಮತ್ತು ಪುರುಷರ ಜನನಾಂಗದ ಉದ್ದಳತೆಯ ಬಗ್ಗೆ ಕನಿಷ್ಟ 15 ನಿಮಿಷವಾದರೂ ಮಾತನಾಡುತ್ತಾನೆ. ಇನ್ನು ಪ್ರಖ್ಯಾತ ಕಮೀಡಿಯನ್‌ಗಳಾದ ಬಿಲ್‌ ಮೆಹೇರ್‌, ಸಾರಾ ಸಿಲ್ವರ್ಮೆನ್‌, ಅಲೆಕ್ಸಿ ಸಯ್ಲ್‌, ಜೆರೆಮಿ ಹಾರ್ಡಿಯಂಥ ಅನೇಕ ಹಾಸ್ಯಗಾರರು ಪೂರ್ಣಪ್ರಮಾಣದಲ್ಲಿ ರಾಜಕೀಯದ ಬಗ್ಗೆಯೇ ಹಾಸ್ಯ ಮಾಡುತ್ತಿದ್ದಾರೆ. ಹೀಗಾಗಿಯೇ ಏನೋ, ಇವರ ಮಾತಿಗೆ ಕಿಮ್ಮತ್ತು ಕಡಿಮೆಯಾಗಿದೆ. ಇನ್ನು ರಾಜಕೀಯ ಮಾತನಾಡದೇ ಮರ್ಯಾದೆ ಉಳಿಸಿಕೊಂಡಿರುವುದು ಎಲೆನ್‌ ಡಿ ಜೆನೆರೆಸ್‌, ಸ್ಟೀವ್‌ ಹಾರ್ವೆಯಂಥ ಕೆಲವರು ಮಾತ್ರ ಎನಿಸುತ್ತದೆ.

ಬಹಳ ದೂರದ ಉದಾಹರಣೆ ಏಕೆ? ಕರ್ನಾಟಕದ ಹಾಸ್ಯ ಕಲಾವಿದ ರಿಚರ್ಡ್‌ ಲೂಯಿಸ್‌ ನೋಡಿ ಸಾಕು. ಮೊದಲಿಗೆ ಇವರು ಸಭ್ಯ ಹಾಸ್ಯಗಳನ್ನು ಮಾಡಿದರು. ನಂತರ ನಿಧಾನವಾಗಿ ಗಂಡ ಹೆಂಡತಿಯ ಬಗ್ಗೆ ಹಾಸ್ಯ, ರೊಮಾನ್ಸ್‌ ಮೇಲೆ ತಿರುಗಿತು ಹಾಸ್ಯ. ಈಗ ಹರಟೆ ಕಾರ್ಯಕ್ರಮದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ರಿಚರ್ಡ್‌, ಫೇಸ್ಬುಕ್‌ನಲ್ಲಿ ಮೋದಿ ವಿರುದ್ಧ, ಆರ್‌ಎಸ್‌ಎಸ್‌ ವಿರುದ್ಧ ಯಾರೋ ಬರೆದಿದ್ದನ್ನು ಹಂಚುತ್ತಿದ್ದಾರೆ. ಇತ್ತೀಚೆಗೆ ‘ಭಾರತದ ಕ್ರಿಶ್ಚಿಯನ್‌ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಶೀರ್ಷಿಕೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕ್ರಿಶ್ಚಿಯನ್ನರನ್ನಷ್ಟೇ ಹೆಕ್ಕಿರುವ ಪೋಸ್ಟ್‌ನ್ನು ಶೇರ್‌ ಮಾಡಿದ್ದಾರೆ. ಇದು ವಿಕೃತ ಮನಸ್ಥಿತಿ ಅಲ್ಲವಾ? ಸಾಯುವಾಗ ಯಾವುದಾದರೂ ಹೋರಾಟಗಾರ ತಾನು ಕ್ರಿಶ್ಚಿಯನ್‌ ಎಂದು ಯೋಚನೆ ಮಾಡಿದ್ದಾನೆಯೇ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವರಲ್ಲೂ ಜಾತಿ ಹುಡುಕುವುದು ನೀಚ ಮನಸ್ಥಿತಿಯಲ್ಲವೇ? ಈಗಲೂ ಕಾಂಗ್ರೆಸ್‌,ಜೆಡಿಎಸ್‌ಗಳ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಂಡೇ ಇರುತ್ತಾರೆ. ಇವರನ್ನು ಜನ ಮೆಚ್ಚಿದ್ದು ಜೆಡಿಎಸ್‌, ಕಾಂಗ್ರೆಸ್‌ ಪೋಸ್ಟ್‌ ಶೇರ್‌ ಮಾಡಿದ್ದಕ್ಕೋ ಅಥವಾ ಹಾಸ್ಯ ಮಾಡುವುದಕ್ಕೋ?

ಇವರ ಹಾಗೇ ಕನ್ನಡದಲ್ಲಿ ಬೇರೆ ಹಾಸ್ಯ ಕಲಾವಿದರೂ ಇದ್ದಾರೆ. ಆದರೆ ಎಲ್ಲೂ ತಮ್ಮ ರಾಜಕೀಯ ನಿಲುವು ಸಾರುತ್ತಾ ಹೋಗಿಲ್ಲ.
ಜನರಿಗೆ ಸ್ಟ್ಯಾಂಡಪ್‌ ಕಾಮಿಡಿಗಳ ರಾಜಕೀಯ ಅಜೆಂಡಾಗಳು ಅರ್ಥವಾಗುವಷ್ಟರಲ್ಲಿ ಬಹಳಷ್ಟು ಹಾನಿಯಾಗಬಹುದು. ಆದರೆ ಇನ್ನೂ ಕಾಲ ಮಿಂಚಿಲ್ಲ. ರಾಜಕೀಯ, ಧರ್ಮ,ಜಾತಿ ಹಾಗೂ ಸೊಂಟದ ಕೆಳಗಿನ ಮಾತುಗಳಿಂದ ಹೊರತಾದ ಹಾಸ್ಯಗಳನ್ನು ಹೆಕ್ಕಿ ಉಳಿಸಿ, ಬೆಳೆಸುವುದು ನಮ್ಮ ಕೈಯಲ್ಲಿದೆ. ನಗುತ್ತಾ, ನಗಿಸುತ್ತಾ ಇರುವ ಹೊಸ ಬುದ್ಧಿಜೀವಿಗಳು ತೋಡಿರುವ ಹಳ್ಳಕ್ಕೆ ಬೀಳದಿರೋಣ

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya