ಕಳ್ಳರ ರಕ್ಷಣೆಗೆ ಲಂಡನ್ನೋ? ಲಂಡನ್‌ ರಕ್ಷಣೆಗೆ ಕಳ್ಳರೋ?

ನಿರವ್‌ ಮೋದಿ ಓಡಿ ಹೋದ, ವಿಜಯ್‌ ಮಲ್ಯ ಓಡಿ ಹೋದ.ಭಾರತ ಮಾತ್ರ ಇವರನ್ನು ಕರೆತರುವುದಕ್ಕೆ ಹರಸಾಹಸ ಮಾಡುತ್ತಲೇ ಇದೆ. ಹೀಗೆ ಭಾರತ ಬಿಟ್ಟು ಓಡಿ ಹೋದ ಬಹುತೇಕರೆಲ್ಲರೂ ಲಂಡನ್ನಿನಲ್ಲೇ ಬಚ್ಚಿಟ್ಟುಕೊಂಡಿದ್ದಾರೆ. ಜಪ್ಪಯ್ಯ ಎಂದರೂ ಹೊರಗೆ ಬರುತ್ತಿಲ್ಲ . ಭಾರತ ಎಷ್ಟೇ ಪ್ರಯತ್ನ ಪಟ್ಟರೂ ಅದಕ್ಕೆ ಪ್ರತಿಫಲವೇ ಇಲ್ಲದಂತಾಗಿದೆ. ಏನೇ ಮಾಡಿದರೂ ಭಾರತಕ್ಕೆ ಸಿಗುತ್ತಿರುವುದು ಏನೂ ಇಲ್ಲ. ಮೋದಿಯಂಥ ಮೋದಿಯೇ ಲಂಡನ್ನಿಗೆ ಹೋಗಿ ಬಂದರೂ ಇನ್ನೂ ಇಂಥ ಕಳ್ಳರನ್ನು ಲಂಡನ್ನಿನಿಂದ ತರಲಾಗುತ್ತಿಲ್ಲ ಎಂದರೆ ಅದು ಮೋದಿ ವೈಫಲ್ಯವೋ? ಅಥವಾ ಲಂಡನ್‌ ನಮ್ಮ ಬಳಿಯೇ ರಾಜಕೀಯ ಮಾಡುತ್ತಿದೆಯೋ?

ಅಪರಾಧಿಗಳನ್ನು ಒಪ್ಪಿಸಬೇಕು ಎಂದು ಒಪ್ಪಂದದಲ್ಲೇ ಇದೆ. 1992ರ ಸೆಪ್ಟೆಂಬರ್‌ 22ರಲ್ಲಿ ಹಸ್ತಾಂತರ ಒಪ್ಪಂದಕ್ಕೆ ಯುಕೆ ಮತ್ತು ಭಾರತ ಸಹಿ ಹಾಕಿದೆ. ಅದರಂತೆ ಎರಡೂ ದೇಶಗಳಲ್ಲಿ ಅಪರಾಧ ಎನಿಸುವಂಥ ಪ್ರಕರಣಗಳಲ್ಲಿ ಅಪರಾಧಿಯಾಗಿರುವವರನ್ನು ಹಸ್ತಾಂತರ ಮಾಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಷರತ್ತು ಇದೆ. ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಾದರೆ ಅಂಥವರು ಯುಕೆಗೆ ಬಂದರೆ ಅವರನ್ನು ಹಸ್ತಾಂತರಿಸಲು ಒಪ್ಪಂದ ಇರುವುದಿಲ್ಲ. ಆದರೆ ಇಂಥ ಒಪ್ಪಂದವನ್ನು ಭಾರತ ಮಾತ್ರ ಚಾಚೂ ತಪ್ಪದೇ ಪಾಲಿಸಿದೆ ಎನಿಸುತ್ತಿದೆ. ಇದುವರೆಗೂ ಭಾರತವು ಮೂರು ಅರೋಪಿಗಳನ್ನು ಯುಕೆಗೆ ಕಳುಹಿಸಿಕೊಟ್ಟಿದೆ. ಆದರೆ ಭಾರತಕ್ಕೆ ಯುಕೆ ಕಳಿಸಿಕೊಟ್ಟಿದ್ದು ಮಾತ್ರ ಒಬ್ಬನನ್ನೇ. ಅದೂ ಆತನೇ ಯಾವ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಹಾಗಾಗಿ ಭಾರತಕ್ಕೆ ಸಿಕ್ಕ. ಇಲ್ಲವಾದರೆ ಅದೂ ಇಲ್ಲ.

ಲಂಡನ್‌ ಇಂಥ ನೀತಿ ಅನುಸರಿಸುತ್ತಿರುವುದಕ್ಕೆ ಕಾರಣಗಳು ಹಲವಾರಿದೆ. ಅದಕ್ಕೇ, ಜಿಹಾದಿಗಳು ಮತ್ತು ಉಗ್ರಗಾಮಿಗಳ ಕಾಟ ಈಗಲೂ ಅಲ್ಲಿದೆ. ಅಲ್ಲಿನ ಕಾನೂನೇ ಅವರನ್ನು ಹಾಳು ಮಾಡುತ್ತಿದೆ. ಕೇವಲ ಆ ದೇಶದಲ್ಲಿ ಹೂಡಿಕೆ ಮಾಡುತ್ತಾರೆ ಎಂಬ ಮಾತ್ರಕ್ಕೆ ಕಂಡ ಕಂಡವರಿಗೆ ಪೌರತ್ವ ನೀಡುತ್ತಿರುವುದರಿಂದಲೇ ಹಣವಿರುವ ಎಲ್ಲ ಕಳ್ಳರೂ ಅಲ್ಲಿಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ.

ಸರಿ, ಕಾರಣ ಗೊತ್ತಾಯಿತು. ಈಗ ನಾವು, ಹಾಗಾದರೆ ಇದನ್ನೆಲ್ಲ ಲಂಡನ್‌ನ ಕೋರ್ಟ್‌ ಮುಂದಿಟ್ಟು ವಿಜಯ್‌ ಮಲ್ಯನನ್ನು ಕರೆದುಕೊಂಡು ಬರಬಹುದಲ್ಲವೇ ಎಂದು ನೀವು ಕೇಳಬಹುದು. ಆದರೆ ಇದನ್ನು ಹುಡುಕುತ್ತಾ ಹೋದರೆ ಲಂಡನ್‌ ಮಲ್ಯನನ್ನು ಬಚಾವ್‌ ಮಾಡುತ್ತಿದೆಯಾ? ಅಥವಾ ವಿಜಯ್‌ ಮಲ್ಯ, ನಿರವ್‌ ಮೋದಿಯಂಥವರು ದಿನಕ್ಕೊಂದು ನಾಟಕ ಆಡುತ್ತಿದ್ದಾರಾ ಎಂಬ ಅನುಮಾನ ಬರದೇ ಇರುವುದಿಲ್ಲ.

ಬ್ರಿಟನ್‌ ಕಾನೂನು ಪ್ರಕಾರ ಅಲ್ಲಿ 6,76,35,908 ರುಪಾಯಿ ಹೂಡಿಕೆಯನ್ನು ಮಾಡಿದರೆ ಸಾಕು ಯಾರಿಗಾದರೂ ಯುಕೆ ದೇಶದ ಪೌರತ್ವ ಸಿಗುತ್ತದೆ. ವಿಜಯ್‌ ಮಲ್ಯಗೆ 6 ಕೋಟಿ ಯಾವ ಲೆಕ್ಕವೂ ಅಲ್ಲ. ಒಂದೆರಡು ಹೂಡಿಕೆಗಳನ್ನು ಮಾಡಿ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಅವರೇ ಹೇಳಿಕೊಳ್ಳುವ ಹಾಗೆ, ಅವರು ಯುಕೆ ಪ್ರಜೆ.

ಆದರೆ ಇಲ್ಲಿಂದ ಇನ್ನೊಂದು ಹೊಸ ಸಮಸ್ಯೆ ಶುರುವಾಗುತ್ತದೆ. ಯುಕೆ ದೇಶದ ಪ್ರಜೆಯ ಮೇಲೆ ಇಂಥದ್ದೊಂದು ಪ್ರಕರಣ ದಾಖಲಾಗಿರುವಾಗ ಯುಕೆ ನೀತಿಗಳೇ ವಿಜಯ್‌ ಮಲ್ಯರಿಗೂ ಅನ್ವಯವಾಗುತ್ತದೆ. ಒಮ್ಮೆ ವಿಜಯ್‌ ಮಲ್ಯ ತಪ್ಪಿತಸ್ಥ ಎಂದು ಅಲ್ಲಿ ಸಾಬೀತಾದರೆ ಅಲ್ಲಿನ ಜೈಲಿನಲ್ಲಿ ಸಿಗುವ ಸೌಕರ್ಯವೇ ಭಾರತದಲ್ಲಿಯೂ ಸಿಗಬೇಕು ಎಂಬುದಾಗಿಯೂ ವಾದಿಸಬಹುದು. ಹಾಗಾಗಿಯೇ, ಭಾರತದ ಜೈಲುಗಳಲ್ಲಿ ಖೈದಿಗಳಿಗೆ ವ್ಯವಸ್ಥೆ ಸರಿ ಇರುವುದಿಲ್ಲ ಎಂಬ ವಾದವನ್ನೂ ವಿಜಯ್‌ ಮಲ್ಯನ ವಕೀಲರು ಮಂಡಿಸಿದ್ದರು.

ಭಾರತ ಖಂಡಿತವಾಗಿಯೂ ಲಂಡನ್‌ ಜೈಲುಗಳ ಗುಣಮಟ್ಟವನ್ನು ಸಾಬೀತು ಮಾಡುವುದಕ್ಕಾಗುವುದಿಲ್ಲ. ವಿಜಯ್‌ ಮಲ್ಯ ಭಾರತಕ್ಕೆ ಹೋಗುವುದಿಲ್ಲ ಅಂತಲೇ ಆಗಿತ್ತು. ಆದರೆ ಪಟ್ಟು ಬಿಡದ ಭಾರತ, ನಮ್ಮ ಜೈಲಿನ ಗುಣಮಟ್ಟದ ಬಗ್ಗೆ ಮಾತಾಡೋದು ಬೇಡ ಎಂದಾಗ ಎಲ್ಲರ ವಾದವೂ ತಣ್ಣಗಾಗಿತ್ತು.

ಈ ವಾದ ಬರುತ್ತದೆ ಎಂಬುದಕ್ಕೆ ಸಾಕ್ಷಿಯೇ 1993ರ ಸೂರತ್‌ ಸರಣಿ ಸೊಧೀಟದಲ್ಲಿ ಪ್ರಮುಖ ಆರೋಪಿ ಟೈಗರ್‌ ಹನೀಫ್‌ ಪ್ರಕರಣ. ಮಾಡುವುದೆಲ್ಲ ಮಾಡಿದ ದಾವೂದ್‌ ಬಂಟ ಟೈಗರ್‌ ಹನೀಫ್‌ ಅಲಿಯಾಸ್‌ ಮಹಮ್ಮದ್‌ ಉಮಾರ್ಜಿ ಪಟೇಲ್‌, ಯುಕೆಗೆ ಹಾರಿಬಿಟ್ಟಿದ್ದ. ಭಾರತದ ಅಧಿಕಾರಿಗಳು ಅಲ್ಲಿಗೇ ಹೋಗಿ ಈತನ ವಿವರಗಳನ್ನೆಲ್ಲ ನೀಡಿದಾಗ, ಟೈಗರ್‌ ಹನೀಫ್‌ನನ್ನು ಯುಕೆ ಪೊಲೀಸರು 2010ರ ಮಾರ್ಚ್‌ನಲ್ಲಿ ಗ್ರೇಟರ್‌ಮ್ಯಾಂಚೆಸ್ಟರ್‌ನ ಬೋಲ್ಟನ್‌ನಲ್ಲಿ ಬಂಧಿಸಿದ್ದರು. ಆಗ ಭಾರತಕ್ಕೆ ಹಸ್ತಾಂತರಿಸದಿರುವುದಕ್ಕೆ ಹನೀಫ್‌ ಕೊಟ್ಟ ಕಾರಣವೇನು ಗೊತ್ತಾ? ‘ಭಾರತದ ಜೈಲುಗಳಲ್ಲಿ ನನ್ನನ್ನು ತೀವ್ರವಾಗಿ ಹಿಂಸಿಸುತ್ತಾರೆ ಮತ್ತು ಜೈಲುಗಳಲ್ಲಿ ವ್ಯವಸ್ಥೆ ಚೆನ್ನಾಗಿರುವುದಿಲ್ಲ’ ಎಂದು ಹೇಳಿದ್ದ. ಅದಕ್ಕೆ 2012ರ ಮೇ ತಿಂಗಳಿನಲ್ಲಿ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನ ನ್ಯಾಯಾಧೀಶರು ಗುಜರಾತ್‌ನ ಜೈಲಿಗೆ ಒಂದು ತಂಡವನ್ನು ಕಳುಹಿಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ವರದಿ ನೀಡಲು ಹೇಳಿದ್ದರು. ಕಡೆಗೆ ನ್ಯಾಯಾಧೀಶರು ಹನೀಫ್‌ ವಾದವನ್ನು ತಳ್ಳಿ ಹಾಕಿ, ಅವನೊಬ್ಬ  ದೇಶಭ್ರಷ್ಟ ಎಂದಿದ್ದರು ಎಂಬುದು ಬೇರೆ ವಿಷಯ ಬಿಡಿ. ಆದರೂ ಇದುವರೆಗೂ ಭಾರತಕ್ಕೆ ಹನೀಫ್‌ನನ್ನು ಕರೆದುಕೊಂಡು ಬರುವುದಕ್ಕೆ ಆಗಲಿಲ್ಲ. ಈಗಲೂ ಹನೀಫ್‌ನನ್ನು ಹಸ್ತಾಂತರಿಸುವ ಬಗ್ಗೆ ಯಾವುದೇ ಅಂತಿಮ ತೀರ್ಪು ಬಂದಿಲ್ಲ ಎಂದೇ ಹೇಳುತ್ತಿದ್ದಾರೆ. ಅಲ್ಲಿಗೆ ಟೈಗರ್‌ ಹನೀಫ್‌ ತಪ್ಪಿಸಿಕೊಂಡಂತೆಯೇ.

 ಇವನೊಬ್ಬನೇ ಅಲ್ಲ, ಭಾರತಕ್ಕೆ ಬೇಕಿರುವ 131 ಆರೋಪಿಗಳ ಪಟ್ಟಿಯನ್ನು ಯುಕೆ ನೀಡಿದೆ. ಅದರಲ್ಲಿ ಬಹುತೇಕರು ನೀಡುವ ಕಾರಣವೇ ಭಾರತೀಯ ಜೈಲಿನ ಗುಣಮಟ್ಟ ಹಾಗೂ ಅಮಾನವೀಯ ಹಿಂಸೆ. ಹೀಗೆನ್ನುತ್ತಲೇ ತಪ್ಪಿಸಿಕೊಂಡು ಬಂದಿದ್ದಾರೆ.

ಇದು ಒಂದು ಬಗೆಯ ಬಚಾವ್‌ ಆಗುವ ದಾರಿಯಾದರೆ, ಮತ್ತೊಂದು ದಾರಿಯನ್ನು ಕೋರ್ಟ್‌ಗಳೇ ಮಾಡಿಕೊಟ್ಟಿದೆ. ಬ್ರಿಟಿಷರು ಎಲ್ಲೆಲ್ಲಿ ಆಳಿದ್ದಾರೋ ಅಲ್ಲೆಲ್ಲ ತಮ್ಮ ಕಾನೂನನ್ನೇ ಬಿಟ್ಟು ಹೋಗಿದ್ದಾರೆ. ಕಾಮನ್ವೆಲ್ತ್‌ ದೇಶಗಳಲ್ಲಿ ಇರುವುದೆಲ್ಲ ಒಂದೇ ರೀತಿಯ ಕಾನೂನು. ಇದಕ್ಕೆ ‘ಕಾಮನ್‌ ಲಾ’ ಎನ್ನುತ್ತಾರೆ. ಇದನ್ನೇ ಬಳಸಿಕೊಂಡು ಈಗ ಮತ್ತೊಮ್ಮೆ ಮೋಸ ಮಾಡುತ್ತಿದ್ದಾರೆ.

ಅಂದರೆ ಮೊದಲಿಗೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾದರೂ, ಆಗದಿದ್ದರೂ ಮೇಲಿನ ಕೋರ್ಟ್‌ಗಳಿಗೆ ಹೋಗಬಹುದು. ಅಲ್ಲಿಂದ ಮತ್ತೆ ಸುಪ್ರೀಂ ಕೋರ್ಟ್‌. ಹೀಗೆ ಒಂದಾದ ಮೇಲೊಂದು ಕೋರ್ಟ್‌ನಲ್ಲಿ ಭಾರತೀಯ ಅಧಿಕಾರಿಗಳು ಅಲೆಯುತ್ತಲೇ ಇರಬೇಕು. ಅಷ್ಟೇ ಅಲ್ಲದೇ ಸಾಕ್ಷಿಗಳನ್ನು ಬಿಟ್ಟಿಯಾಗಿ ಲಂಡನ್‌ಗೆ ಕರೆತರಬೇಕು.ಇವೆಲ್ಲವೂ ಭಾರತಕ್ಕೆ ಬಹಳ ನಷ್ಟವನ್ನುಂಟು ಮಾಡುತ್ತದೆ.

ಈಗ ನಿರವ್‌ ಮೋದಿ, ವಿಜಯ್‌ ಮಲ್ಯ, ನೌಕಾ ದಳದ ಗುಟ್ಟನ್ನು ಬೇರೆ ದೇಶಕ್ಕೆ ಬಿಟ್ಟುಕೊಟ್ಟ ರವಿ ಶಂಕರನ್‌, ಗುಲ್ಷನ್‌ ಕುಮಾರ್‌ ಹತ್ಯೆ ಪ್ರಕರಣದಲ್ಲಿ  ನದೀಮ್‌ ಶೈಫಿ, ಗೋವಾದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬ್ರಿಟನ್‌ ಪ್ರಜೆ ರೇಮಂಡ್‌ ವರ್ಲೆನಂಥವರನ್ನು ತರುವುದಕ್ಕೆ ಭಾರತ ಇನ್ನೂ ಪ್ರಯತ್ನ ನಡೆಸುತ್ತಲೇ ಇದೆ.

ಭಾರತವೂ ಯುಕೆ ಯಿಂದ ಒಬ್ಬನನ್ನು ಕರೆತಂದಿದೆ. ಅದು ಹೇಗೆ ಗೊತ್ತೇನು? 2002ರ ಗುಜರಾತ್‌ ಗಲಭೆಯಲ್ಲಿ ಸಮೀರ್‌ಭಾಯ್‌ ವಿನುಭಾಯ್‌ ಪಟೇಲ್‌ ಆರೋಪಿಯಾಗಿದ್ದ. ಆತ ಲಂಡನ್‌ಗೆ ಹಾರಿದ್ದ. ಆದರೆ ಅವನನ್ನು ಅಲ್ಲಿನ ಪೊಲೀಸರು ಹಿಡಿದ ಮೇಲೆ ಮತ್ತು ಕೆಳ ಹಂತದ ನ್ಯಾಯಾಲಯ ಆತನ ಹಸ್ತಾಂತರಕ್ಕೆ ಒಪ್ಪಿದ ಮೇಲೆ ಆತ ಮಾತಿಗೂ ವಿರೋಧಿಸಲಿಲ್ಲ. ಹಾಗಾಗಿಯೇ ಭಾರತವು ಆತನನ್ನು ಕರೆದುಕೊಂಡು ಬಂದಿತ್ತು. ಬಹುಶಃ ಅವನ ಬಳಿ ಹೆಚ್ಚು ಹಣ ಇರಲಿಲ್ಲವೋ ಏನೋ. ಶರಣಾಗಲೇ ಬೇಕಾಯಿತು.

ನಿಮಗೆ ನೆನಪಿರಲಿ, ಲಂಡನ್‌ನಲ್ಲಿ ವಕೀಲರು ಬಹಳ ದುಬಾರಿ. ಅದೆಷ್ಟು ದುಬಾರಿ ಎಂದರೆ, ಯಾವುದೋ ಸಣ್ಣ ಪುಟ್ಟ, ಹೆಸರು ಮಾಡಿರದ, ಆರಾಮಾಗಿ ಪ್ರಕರಣಗಳಿಲ್ಲ ಎಂದು ಕುಳಿತಿರುವ ವಕೀಲ ಒಂದು ತಾಸಿಗೆ ಭಾರತದ ಕರೆನ್ಸಿ ಪ್ರಕಾರ 25 ಸಾವಿರ ರುಪಾಯಿ ಹಣ ಕೇಳುತ್ತಾನೆ. ಇನ್ನು ಮಧ್ಯಮವರ್ಗದ ವಕೀಲರ ಸಂಭಾವನೆ 1,25,000 ರುಪಾಯಿವರೆಗೂ ಇರುತ್ತದೆ. ಸ್ವಲ್ಪ ಮೆಲ್ವರ್ಗದ ವಕೀಲರು 15ಲಕ್ಷದ ವರೆಗೂ ಸಂಭಾವನೆ ಪಡೆಯುತ್ತಾರೆ. ಇದು ನಮ್ಮ ದೇಶದ ವಕೀಲರಾದ ರಾಮ್‌ಜೆಠ್ಮಲಾನಿ ಅಥವಾ ಫಾಲಿ ನಾರಿಮನ್‌ ಭಾರತದ ಕೋರ್ಟ್‌ಗೆ ಹಾಜರಾಗುವುದಕ್ಕೆ ತೆಗೆದುಕೊಳ್ಳುವ ಸಂಭಾವನೆ. ಇನ್ನೇನಾದರೂ ಹೆಸರಾಂತ ವಕೀಲರು ಪ್ರಕರಣ ತೆಗೆದುಕೊಂಡರೆಂದರೆ, ಮನೆ-ಮಠ ಮಾರಿ ಕೊನೆಗೆ ನಮ್ಮನ್ನೇ ಮಾರಿಕೊಂಡರೂ ಹುಟ್ಟದಷ್ಟು ಕಾಸು ಕೇಳುತ್ತಾರೆ. ಇದು ಪಟೇಲ್‌ಗೆ ಕೊಡುವುದಕ್ಕಾಗಲಿಲ್ಲ. ಭಾರತಕ್ಕೆ ಮರಳಿದ.

9 ಸಾವಿರ ಕೋಟಿಯನ್ನೇ ತಿಂದು ತೇಗಿರುವ ವಿಜಯ್‌ ಮಲ್ಯನಿಗೆ ಹೋಲಿಸಿದರೆ ತಮ್ಮ ವಕೀಲನಿಗೆ ಕೊಡುವುದು ಸಣ್ಣ ಮೊತ್ತ ಅಷ್ಟೇ. ಮಲ್ಯನ ಹಾಲಿ ವಕೀಲೆ ಕ್ಲೇರ್‌ ಮಾಂಟ್ಗೊಮರಿ ಎಂಬುವವರು. ಬ್ರಿಟನ್‌ನ ಅತ್ಯಂತ ದುಬಾರಿ ವಕೀಲರ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಬ್ರಿಟನ್‌ನಲ್ಲಿರುವ ಕ್ರಿಮಿನಲ್‌ ಲಾಯರ್‌ಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಮಾಂಟ್ಗೊಮರಿ. ಹಾಗಾಗಿ ವಿಜಯ್‌ ಮಲ್ಯ ಪ್ರಕರಣದಲ್ಲಿ ಏನಾದರೊಂದು ಕಥೆಯನ್ನು ಹೇಳಿ ಮುಂದಕ್ಕೆ ತಳ್ಳುತ್ತಲೇ ಇದ್ದಾರೆ. ಇದನ್ನೇ ನಿರವ್‌ ಮೋದಿ, ಚೋಕ್ಸಿ ಅನುಸರಿಸುತ್ತಿರುವುದು. ಹಾಗಾಗಿಯೇ ಭಾರತಕ್ಕೆ ಇವರನ್ನು ಕರೆತರುವುದಕ್ಕೆ ಕಷ್ಟವಾಗಿದೆ.

ಇವೆಲ್ಲದಕ್ಕೆ ಮತ್ತೊಂದು ದುರಂತ ಏನೆಂದರೆ, ಭಾರತದ ತಂಡ ದಾಖಲೆಗಳನ್ನು ಹುಡುಕಿ ಲಂಡನ್‌ ಕೋರ್ಟ್‌ನ ಮುಂದಿಡುವುದಕ್ಕೆ ತಡ ಮಾಡುತ್ತಿದೆ. ಹಾಗಾಗಿ ಇವರ ಕಾರಣದಿಂದಲೂ ಕೋರ್ಟ್‌ ಮುಂದಕ್ಕೆ ಹೋಗುತ್ತಿದೆ. ವಿಜಯ್‌ ಮಲ್ಯ  ಬಚಾವ್‌ ಆಗುತ್ತಿದ್ದಾನೆ.

ಆದರೆ ಇವೆಲ್ಲದರ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದವರು ಮಾತ್ರ ವಿಜಯ್‌ ಮಲ್ಯನನ್ನು ಯಾಕಾಗಿ ಭಾರತಕ್ಕೆ ತರಲಿಲ್ಲ ಎಂದು ಸಂತೆಯಿಂದ ಮಿಠಾಯಿ ಯಾಕೆ ತರಲಿಲ್ಲ ಎಂದು ಕೇಳುವಷ್ಟು  ಸುಲಭವಾಗಿ ಕೇಳಿಬಿಡುತ್ತಾರೆ.

ಭಾರತದ ಬಳಿ ಆಗುವುದೇ ಇಲ್ಲವೆಂದಲ್ಲ. ಭಾರತದಲ್ಲೂ ಹರೀಶ್‌ ಸಾಳ್ವೆಯಂಥ ಅಂತಾರಾಷ್ಟ್ರೀಯ ಕಾನೂನು ಪರಿಣತಿ ಹೊಂದಿರುವ ದಿಗ್ಗಜರಿದ್ದಾರೆ. ಇನ್ನು ಮೋದಿ ಸರ್ಕಾರವೂ ಯಾರ ಪೊಳ್ಳು ಮಾತಿಗೂ ಬಗ್ಗದೇ ದಗಲ್ಬಾಜಿಗಳನ್ನು ಕರೆತರಲು ಹಗಲಿರುಳು ಶ್ರಮಿಸುತ್ತಿದೆ. 62 ತುಂಬಿರುವ ವಿಜಯ್‌ ಮಲ್ಯ, 48 ವರ್ಷದ ನಿರವ್‌ ಮೋದಿ, 59 ವರ್ಷದ ಮೇಹುಲ್‌ ಚೋಕ್ಸಿ ಸಾಯುವ ಮೊದಲೇ ಭಾರತಕ್ಕೆ ಕರೆತಂದರೆ ಅದು ನಿಜವಾದ ಸಾಧನೆ. ಅವರು ಸತ್ತ ಮೇಲೆ ಹೆಣ ತರುವುದಕ್ಕಾದರೆ, ಭಾರತೀಯ ಅಧಿಕಾರಿಗಳು ಪ್ರಯತ್ನವನ್ನೇ ನಿಲ್ಲಿಸುವುದೊಳಿತು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya