ಚೆನ್ನಾಗಿದ್ದರೆ ಮಟ್ಟು, ವಿರೋಧಿಸಿದರೆ ಪೆಟ್ಟು. ಇದೇ ಪ್ರಗತಿಪರರ ಗುಟ್ಟು!

ದಲಿತ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಭಾಸ್ಕರ್‌ ಪ್ರಸಾದ್‌ ಮನೆಗೆ ಮೂರು ದಿನಗಳ ಹಿಂದೆ ಬೆಳಗಿನ ಜಾವ 5.30ಕ್ಕೇ ಪೊಲೀಸರು ಬಂದು ಭಾಸ್ಕರ್‌ ಪ್ರಸಾದ್‌ ಬೇಕು, ಎಲ್ಲಿದಾರೆ ಎಂದೆಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಮನೆಯವರಿಗೆ ಹಿಂಸೆ ನೀಡಿದ್ದರು. ನಿನ್ನೆ ಬೆಳಗಿನ ಜಾವ 2.10ಕ್ಕೆ ಭಾಸ್ಕರ್‌ ಪ್ರಸಾದ್‌ ಮನೆ ಬಳಿ ಬಂದ ಡಿಜೆ ಹಳ್ಳಿ ಪೊಲೀಸ್‌ ಠಾಣೆಯ ಎಸ್‌ಐ, ಮನೆ ಬಾಗಿಲು ತೆಗೆಯಿರಿ ಎಂದಿದ್ದಾರೆ. ಇವರು ತೆಗೆಯದ ಕಾರಣ, ಮುಂಜಾನೆ ಅವರ ಬಂಧನವಾಗಿದೆ. ಜಗತ್ತೇ ಮಲಗಿರುವ ಹೊತ್ತಲ್ಲಿ ಬಂದು ಬಂಧಿಸಲು ಭಾಸ್ಕರ್‌ ಪ್ರಸಾದ್‌ ಭಯೋತ್ಪಾದಕರಾ ಎಂದು ನೋಡಿದರೆ ಹಾಗೇನೂ ಕಂಡುಬಂದಿಲ್ಲ. ಪ್ರಕರಣ ದಾಖಲಾಗಿರುವುದು ಯಾವುದೋ ವ್ಯಕ್ತಿಯ ತೇಜೋವಧೆ ಪ್ರಕರಣ. ಅಷ್ಟಕ್ಕೇ ಬೆಳಗಿನ ಜಾವ ಎಲ್ಲ ಮನೆಗೆ ಹುಡುಕಿಕೊಂಡು ಬರುತ್ತಾರಾ? ಹೌದು. ದೂರು ನೀಡಿದವರು ದಿನೇಶ್‌ ಅಮೀನ್‌ ಮಟ್ಟು ಆದರೆ ಮಾತ್ರ ಹುಡುಕಿಕೊಂಡು ಬರುತ್ತಾರೆ.

ಲೇಖಕ ರೋಹಿತ್‌ ಚಕ್ರತೀರ್ಥ ಅವರ ಹತ್ಯೆಗೆ ಮುಖ್ಯಮಂತ್ರಿಯವರ ಮಾಜಿ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಆಸಕ್ತಿ ತೋರಿದ್ದರು ಎಂದು ಮೊದಲು ಜಗತ್ತಿಗೆ ತಿಳಿಸಿದ ವ್ಯಕ್ತಿಯೇ ಈ ಭಾಸ್ಕರ್‌ ಪ್ರಸಾದ್‌. ದಿನೇಶ್‌ ಅಮೀನ್‌ ಮಟ್ಟುವಿನ ಮತ್ತೊಂದು ಮುಖವನ್ನು ಪರಿಚಯ ಮಾಡಿಕೊಟ್ಟರು. ಅದೇ ಕಾರಣಕ್ಕೆ ಈಗ ದಲಿತ ಸಮುದಾಯದ ಭಾಸ್ಕರ್‌ ಪ್ರಸಾದ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಳ್ಳಂಬೆಳಗ್ಗೆ ಎಳೆದೊಯ್ದಿದ್ದಾರೆ.

ದಲಿತ ಎಂಬ ಪದಪ್ರಯೋಗ ಮಾಡಲು ನನಗೆ ಇಷ್ಟವಿಲ್ಲ. ಆದರೆ ಭಾಸ್ಕರ್‌ ಪ್ರಸಾದ್‌ ಯಾರೋ ಬೇರೆ ಅಲ್ಲ ನೋಡಿ. ದಲಿತರ ಮೇಲೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ ಎಂದು ಬಿಂಬಿತವಾಗಿರುವ ಮಟ್ಟು ಜತೆಗೇ ಇದ್ದ ವ್ಯಕ್ತಿ. ಆದರೆ ದಿನೇಶ್‌ ಅಮೀನ್‌ ಮಟ್ಟು ಬಣ್ಣ ತಿಳಿದು ಅದನ್ನು ಬಯಲು ಮಾಡಲು ಹೊರಟಾಗ ಅದೇ ದಲಿತನ ಮೇಲೆ ಕಾನೂನಿನ ಹೆಸರಿನಲ್ಲಿ ದೌರ್ಜನ್ಯ ಎಸಗಲು ಶುರು ಮಾಡುತ್ತಾರೆ.

ಕಾಂಗ್ರೆಸ್‌ ಗುಲಾಮಗಿರಿ ಪದ್ಧತಿಯನ್ನೇ ಮಟ್ಟು ಸಹ ಅನುಸರಿಸುತ್ತಿದ್ದಾರೆ. ಪ್ರಗತಿಪರರು, ದಲಿತರು ಎಲ್ಲರೂ ಇವರ ಮಾತು ಕೇಳಿಕೊಂಡು ಇರಬೇಕು. ಆಂತರ್ಯದ ಹುಳುಕುಗಳನ್ನು ಹೊರಗೆ ಹೇಳಿದರೋ ಅವರ ವಿರುದ್ಧ ಬಹಿಷ್ಕಾರ.

ದಿನೇಶ್‌ ಹೇಳಿದ್ದನ್ನು ಕೇಳಿಕೊಂಡು ಇದ್ದರೆ ಜೀವನ ಹೇಗಿರುತ್ತದೆ ಎಂಬುದುಕ್ಕೆ ಸಾಕ್ಷಿ ಇಲ್ಲಿದೆ: ನಮ್ಮ ಮಟ್ಟು ಅವರ ಅಭಿಮಾನಿ ಎಂದು ನಾವು ಸದ್ಯಕ್ಕೆ ಊಹಿಸಿಕೊಳ್ಳಬಹುದಾದ (ಸತ್ಯ ಏನೇ ಇರಲಿ) ಅನಂತ್‌ ನಾಯ್ಕ್‌ ಫೇಸ್ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗೆ: ಅವತ್ತು ನೆಲಮಂಗಲ ಪೊಲೀಸರು ಆತನನ್ನು ನಾಲ್ಕು ತದಕಿ ಮೂಲೆಗೆ ಕೂರಿಸಿದ್ದರು. ನನಗೆ ಫೋನ್‌ ಮಾಡಿ, ‘ದಿನೇಶ್‌ ಅವರಿಗೆ ಹೇಳಿ ಬಿಡಿಸಿ ಅಂತ ಗೋಗರೆದ.’ ಇನ್ಸ್‌ಪೆಕ್ಟರ್‌ಗೆ ಮಾತಾಡಿ, ‘ದಲಿತ ಹುಡುಗ, ಮುಂದೆ ಇಂಥ ತಪ್ಪು ಮಾಡ್ಲಿಕ್ಕಿಲ್ಲ. ನೋಡಿ, ಬುಟ್ಬುಡಿ’ ಅಂತ ಹೇಳಿದ್ವಿ. ಈತನನ್ನು ಬಿಡಿಸೋಕೆ ನಾನು, ಅವರಿವರ ಜತೆ ಮಾತಾಡೋಕೆ ಸುತ್ತಾಡಿದ್ದೆ. ಜೈಲಿಗೆ ಹೋಗೋದನ್ನು ತಪ್ಪಿಸಿದ್ದೆ.

ಫೀಸ್‌ ಇನ್ನು ತಗೊಂಡಿಲ್ಲ. ಯಾವಾಗಾದ್ರೂ ವಸೂಲಿ ಮಾಡ್ಕೊತ್ತೀನಿ ಬಿಡಿ. ವಕೀಲ್ರು ಎಲ್ರಿಗೂ ಫ್ರೀಯಾಗಿ ಕೆಲಸ ಮಾಡಕ್ಕಾಗುತ್ತಾ? ಇದನ್ನು ಯಾರಿಗೆ ಬರೆದಿದ್ದಾರೆ ಎಂದು ಹೆಸರು ಹೇಳುವುದೇನು ಬೇಕಾಗಿಲ್ಲ. ಇವರು ಎಷ್ಟು ಬಲಶಾಲಿಗಳು ಎಂದು ನೀವೇ ನೋಡಿ. ಈ ನಾಯಕರು ಯಾರನ್ನು ಬೇಕಾದರೂ ಜೈಲಿನಿಂದ ಹೊರಗೆ ತರುತ್ತಾರೆ ಹಾಗೂ ಇವರಿಗೆಲ್ಲ ಯಾವ ಕಾನೂನೂ ಲೆಕ್ಕಕ್ಕೆ ಇಲ್ಲ ಎಂದಲ್ಲದೇ ಇದರ ಅರ್ಥ? ಆ ಸಮಯದಲ್ಲೂ ಈ ಪ್ರಗತಿಪರರು ಹೇಗೆ ದಲಿತ್‌ ಕಾರ್ಡ್‌ ಉಪಯೋಗಿಸುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ದಲಿತ ಎಂಬುದಕ್ಕಾಗಿ ಬಿಡುಗಡೆ ಮಾಡಬೇಕಂತೆ! ದಲಿತರು ಎಂಬುದಕ್ಕೆ ಬಿಡಬೇಕಾದರೆ ಕಾನೂನನ್ನು ಕೇವಲ ಬ್ರಾಹ್ಮಣರು, ಗೌಡರು, ಇತರೆ ಜಾತಿಗಳು ಮತ್ತು ಮಧ್ಯಮವರ್ಗದವರನ್ನು ಹೆದರಿಸುವುದಕ್ಕೇ ಉಪಯೋಗಿಸಿಬಿಡಿ ಅಲ್ಲವೇ? ಯಾಕಾಗಿ ಇವರಿಗೆಲ್ಲ ಕಾನೂನು?

ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು, ಈ ವಕೀಲ ಮಹಾಶಯರಿಗೆ ಆಗ ಫೀಸ್‌ ತೆಗೆದುಕೊಳ್ಳಬೇಕೆನಿಸಲಿಲ್ಲ. ಆದರೆ ತಮ್ಮ ಧಣಿಗಳ ಮಾನ ಮರ್ಯಾದೆ ಮೂರಾಬಟ್ಟೆಯಾಗುವ ಸಂಭವ ಬಂದಾಗ ಮಾತ್ರ ಫೀಸ್‌ ಅನ್ನು  ‘ವಸೂಲಿ’ ಮಾಡಬೇಕೆನಿಸುತ್ತದೆ. ಇದೇ ಈ ದಿನೇಶ್‌ ಅಮೀನ್‌ ಮಟ್ಟು ಮತ್ತು ಗ್ಯಾಂಗ್‌ನ ಬುದ್ಧಿ.  ಪ್ರಗತಿಪರರ ಹಣೆಬರಹ.

ಇಂಥ ಕೇಸುಗಳಿಂದ ಇವರನ್ನು ಬಿಡಿಸುವ ಏಕೈಕ ಉದ್ದೇಶ ಕಾಂಗ್ರೆಸ್‌ಗೆ ನಿಯತ್ತಿನ ನಾಯಿಗಳಂತೆ ಇರಬೇಕು. ಇಲ್ಲವಾ? ಒಂದು ಅಪಸ್ವರ ಬಂತೋ, ಅಂಥವನು ದಲಿತನೇ ಇರಲಿ, ಪರಿಶಿಷ್ಟ ಜಾತಿಯವನೇ ಇರಲಿ. ಹಳೆಯದನ್ನೆಲ್ಲ ಕೆದಕುವುದು, ಹತ್ತಾರು ಪ್ರಕರಣ ದಾಖಲಿಸಿ ಮನೆಗೆ ಬೆಳಗಿನ ಜಾವ 2-3 ಗಂಟೆಗೆ ಅಥವಾ 5 ಗಂಟೆಗೆ ಪೊಲೀಸರನ್ನು ಮನೆ ಬಾಗಿಲಿಗೆ ಕಳುಹಿಸಿ ಬಂಧಿಸುವುದು.

ಈಗ ದಿನೇಶ್‌ ಪರ ಇರುವ ಪ್ರಗತಿಪರರೆಲ್ಲರೂ ಸಭೆ ನಡೆಸಿ ಭಾಸ್ಕರ್‌ ಪ್ರಸಾದ್‌ರನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಭಾಸ್ಕರ್‌ ಪ್ರಸಾದ್‌ರೇ ಹೇಳಿಕೊಂಡಿದ್ದಾರೆ. ಯಾವ ದಲಿತರನ್ನು ಬ್ರಾಹ್ಮಣರು ಬಹಿಷ್ಕರಿಸುತ್ತಿದ್ದಾರೆ, ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದಾರೆ ಎಂದು ಪ್ರಗತಿಪರರು ಹೋರಾಟ ಮಾಡುತ್ತಿದ್ದರೋ ಈಗ ಅದೇ ದಲಿತನನ್ನು ಅವರೇ ಬಹಿಷ್ಕರಿಸುತ್ತಿದ್ದಾರೆ. ಎಲ್ಲಿ ಅಡಗಿ ಕುಳಿತಿದೆ ಇವರ ಅಂಬೇಡ್ಕರ್‌ ವಾದ ಈಗ? ಒಂದೊಮ್ಮೆ ಅಂಬೇಡ್ಕರ್‌ ಕಾಂಗ್ರೆಸ್‌ ವಿರುದ್ಧ ಮಾತಾಡಿದ್ದರೂ, ಅವರ ಮನೆಗೂ ಮಧ್ಯ ರಾತ್ರಿ 2 ಗಂಟೆಗೆ ಪೊಲೀಸರನ್ನು ನುಗ್ಗಿಸಿ, ಬಂಧಿಸುವುದಕ್ಕೆ ಹೇಸದ ಜನ ಇವರು.

ಪ್ರಗತಿಪರರಿಗೆ ಹಣ ಬೇಕು. ಕಾಂಗ್ರೆಸ್‌ಗೆ ಅಧಿಕಾರ ಬೇಕು. ಇಷ್ಟೇ ಇವರ ಅಜೆಂಡಾ.

ಇದಕ್ಕೆ ಸ್ಪಷ್ಟ ಉದಾಹರಣೆಯೇ ಮಟ್ಟು ಫೇಸ್ಬುಕ್‌ ಪೋಸ್ಟ್‌. ದಿನೇಶ್‌ ಅಮೀನ್‌ ಮಟ್ಟು  ವಿಧಾನಸಭಾ ಚುನಾವಣೆಗೂ ಮುನ್ನ ಒಮ್ಮೆ ‘ಕೆಲವರು ತಮ್ಮ ಪ್ರಶಸ್ತಿಗಾಗಿ, ಅಧ್ಯಕ್ಷ ಸ್ಥಾನಕ್ಕಾಗಿ ನಮ್ಮ ಬಳಿ ಬರುತ್ತಿದ್ದರು. ಆದರೆ ಅವರೆಲ್ಲ ಈಗ ಪ್ರಚಾರಕ್ಕೆ ಕೇಳಿದರೆ ಬರುತ್ತಿಲ್ಲ’ ಎಂದು ದುಃಖ ತೋಡಿಕೊಂಡಿದ್ದರು. ನಾವು ನಿಮಗೆ ಹಣ/ಅಧಿಕಾರ ಕೊಡುತ್ತೇವೆ. ನೀವು ನಮಗೆ ಪ್ರಚಾರ ಮಾಡಿ ಎಂದು ಇದರ ಅಘೋಷಿತ ಉದ್ದೇಶ.

ಇದು ಕೇವಲ ನಿಗಮ ಅಧ್ಯಕ್ಷರೋ, ಸದಸ್ಯರೋ ಆಗುವುದಕ್ಕಷ್ಟೇ ಸೀಮಿತ ಅಲ್ಲ. ಬದಲಿಗೆ ಇದು ಎಲ್ಲ ಕ್ಷೇತ್ರಗಳಲ್ಲೂ ಇದೆ. ಮೌಢ್ಯ ನಿಷೇಧ ಕಾಯ್ದೆಯಲ್ಲೇ ನೋಡಿ ಒಬ್ಬನೇ ಒಬ್ಬ ವಿಜ್ಞಾನಿ ಇಲ್ಲ ಅಥವಾ ಶಾಸ್ತ್ರಗಳನ್ನು ತಿಳಿದುಕೊಂಡವನಿಲ್ಲ. ಆ ಸೂರಿನಲ್ಲಿ ಸೋಗಲಾಡಿಗಳೇ ಹೆಚ್ಚು.

ಸಿನಿಮಾ ಕ್ಷೇತ್ರದಲ್ಲಿ ಪ್ರಶಸ್ತಿ ಕೊಡುವುದು ಮೋದಿ ವಿರುದ್ಧ ಮಾಡುವ ಸಿನಿಮಾಗಳಿಗೆ ಹಾಗೂ ಎಡಪಂಥೀಯರಿಗೆ. ಕಾಂಗ್ರೆಸ್‌ ಸರ್ಕಾರ ಇರುವ ಅನುದಿನವೂ, ಅನುಕ್ಷಣವೂ ಪ್ರಗತಿಪರರಿಗಾಗಿ ಎಲ್ಲವನ್ನೂ ಮಾಡುತ್ತಾರೆ. ಆ ನಿಯತ್ತಿಗೆ ಸರಿಯಾಗಿ ಅವರಿರಬೇಕು.  ಇದು ಬಹಳ ಸಿಂಪಲ್‌. ಈ ಅಷ್ಟೂ ಪ್ರಗತಿಪರರು, ದಲಿತರು, ಬುದ್ಧಿಜೀವಿಗಳು ನಮ್ಮ ಅಂಕುಶದಲ್ಲೇ ಇರಬೇಕು. ನಾವು ಹಾಕಿದ ಗೆರೆ ದಾಟಬಾರದು. ದಾಟಿದರೆ ಗುಮ್ಮುತ್ತೇವೆ ಎಂಬ ಸಂದೇಶವೇ ಭಾಸ್ಕರ್‌ ಪ್ರಸಾದ್‌ ಮೇಲೆ ದಾಖಲಾಗಿರುವ ಪ್ರಕರಣ.

ಪ್ರಗತಿಪರರನ್ನು ಕಾಂಗ್ರೆಸ್‌ ಒಂದು ದಿನಕ್ಕೂ ಆಚೀಚೆ ಆಗಲು ಬಿಡುವುದಿಲ್ಲ. ತಮ್ಮ ಮತ್ತು ಅವರ ನಡುವೆ, ಹಾಗೂ ಪ್ರಗತಿಪರರ ನಡುವೆ ಸಂಬಂಧ ಚೆನ್ನಾಗಿರಬೇಕು, ತಮ್ಮ ಗುಂಪಿನಲ್ಲಿ ಯಾರೂ ಹೊರಗೆ ಹೋಗಬಾರದು ಅಂತಲೂ ಇರುತ್ತದೆ. ಅದಕ್ಕೆ ಆಗಾಗ ಪುಟಗೋಸಿ ಹೋರಾಟಗಳನ್ನು ಮಾಡುತ್ತಿರುತ್ತಾರೆ. ಗೌರಿ ಲಂಕೇಶ್‌ ಭಾಷೆಯಲ್ಲೇ ಹೇಳಬೇಕೆಂದರೆ, ಈ ಹೋರಾಟಕ್ಕೆ ಅಪ್ಪ ಇಲ್ಲ, ಅಮ್ಮ ಇಲ್ಲ. ಸುಮ್ಮನೆ ಟೌನ್‌ ಹಾಲ್‌ ಮುಂದೆ ಹೋಗಿ ಕತ್ತೆಯ ಹಾಗೆ ಒದರುವುದು, ದನದ ಮಾಂಸ ಎಂದು ಚಿಕನ್‌ ತಿಂದು ಬರೋದು.

ಇಂಥ ಬಿಕನಾಸಿ ಹೋರಾಟ ಹೇಗೆ ಆಯೋಜನೆಗೊಳ್ಳುತ್ತದೆ ಎಂಬುದಕ್ಕೆ ಹುಚ್ಚಂಗಿ ಪ್ರಸಾದ್‌ ಹಲ್ಲೆ ಖಂಡಿಸಿ ನಡೆದ ಹೋರಾಟವೇ ಸಾಕ್ಷಿ. ಮೊದಲು ಹುಚ್ಚಂಗಿ ಪ್ರಸಾದ್‌ ಮೇಲೆ ಹಲ್ಲೆಯಾಗಿದೆ, ಹಿಂದೂಗಳೇ ಮಾಡಿದ್ದಾರೆ ಎಂದು ಎಲ್ಲ ಪ್ರಗತಿಪರರೂ ಜಾಗೃತರಾದರು. ಆದರೆ ತನಿಖೆಯ ನಂತರ ತಿಳಿದಿದ್ದೇನೆಂದರೆ, ಹುಚ್ಚಂಗಿ ಪ್ರಸಾದ್‌ ಕೇವಲ ಪ್ರಚಾರಕ್ಕಾಗಿ ಸುಳ್ಳು ಕಥೆಗಳನ್ನು ಸಿನಿಮಾ ರೇಂಜಿನಲ್ಲಿ ಕಟ್ಟಿದ್ದಾನೆ ಎಂಬುದು. ಆಗ ಬುದ್ಧಿ ಜೀವಿ, ಪ್ರಗತಿಪರರ ವಲಯದಲ್ಲಿ ಕೇಳಿಬಂದ ಮಾತುಗಳೇನು ಗೊತ್ತೇನು? ಅನಂತ್‌ ನಾಯ್ಕ್‌ ಸರ್‌ ಹೇಳಿದ್ರು ಎಂದು ಬಂದ್ವಿ, ದಿನೇಶ್‌ ಸರ್‌ಗಾಗಿ ಬಂದ್ವಿ. ನಮ್ಮ ಹೋರಾಟ ಎಲ್ಲ ವ್ಯರ್ಥವಾಯಿತು ಎಂದು. ತಮಗೆ ಬೇಕಾದಂತೆ ಕೆಲಸವಿಲ್ಲದ ಪ್ರಗತಿಪರರು ಬಂದು ಹೋರಾಟ ಮಾಡಿ ರಾಡಿ ಎಬ್ಬಿಸುವುದಕ್ಕಷ್ಟೇ ಇವರು ಬೇಕಾಗಿದ್ದಾರೆ. ಒಂದು ಹೆಚ್ಚು ಮಾತನಾಡಿದರೂ ಭಾಸ್ಕರ್‌ ಪ್ರಸಾದ್‌ಗೆ ಆದ ಸ್ಥಿತಿಯೇ ಎಲ್ಲರಿಗೂ ಆಗುತ್ತದೆ. ಇಲ್ಲಿ ದಲಿತ, ಸಂವಿಧಾನ ಇವೆಲ್ಲಕ್ಕೂ ಕೊನೆಯ ಬೆಂಚು. ಮೊದಲು ಕಾಂಗ್ರೆಸ್‌ ಆಶಯ.

ತಮ್ಮ ಪರ ನಿಂತು ಸಾಮಾಜಿಕ ಜಾಲತಾಣದಲ್ಲಿ ತೀರಾ ಅವಾಚ್ಯ ಶಬ್ದ ಬಳಸುವವರ ಪರವೇ ಕಾಂಗ್ರೆಸ್‌ ನಿಂತ ನೀಚ ಉದಾಹರಣೆಯೂ ಇದೆ. ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಸಮಿತಿಯ ಸದಸ್ಯ ಆನಂದ್‌ ರಾಮಣ್ಣಎಂಬುವವ ಶಾರದಾ ಎಂಬುವವರ ಬಗ್ಗೆ ತುಚ್ಛವಾಗಿ ಫೇಸ್ಬುಕ್‌ನಲ್ಲಿ ಮಾತನಾಡಿದ್ದಕ್ಕೆ ಬಂಧನವಾಗಿದ್ದರು. ಆಗ ಕೆಪಿಸಿಸಿ ಇಂದಲೇ ಬರೋಬ್ಬರಿ 20 ಜನರು ಬಂದು ಶಾರದಾ ಅವರ ಬಳಿ ದೂರನ್ನು ಹಿಂಪಡೆಯುವಂತೆ ಒತ್ತಾಯ ಮಾಡಿದ್ದರು. ಅದು ಸಫಲವಾಗದ್ದಕ್ಕೆ, ನೇರವಾಗಿ ನ್ಯಾಯಾಧೀಶರ ಮೆನೆಗೇ 20 ಜನರೂ ಹೋಗಿದ್ದರು.

ಪ್ರಗತಿಪರರ ಮೇಲೆ ಇವರ ದರ್ಪ ಹೀಗಾದರೆ, ಸಾಮಾನ್ಯರ ಮೇಲೂ ಇವರ ಹಾವಳಿ ಹೆಚ್ಚು . ಕೆಲ ವರ್ಷದ ಹಿಂದೆ ಲೇಖಕ ಪ್ರೇಮಶೇಖರರಿಗೂ ದಿನೇಶ್‌ ಅಮೀನ್‌ ಮಟ್ಟುವಿಗೂ ಫೇಸ್ಬುಕ್‌ ಸ್ಟೇಟಸ್‌ ಭಿನ್ನಾಭಿಪ್ರಯ ಉಂಟಾಗಿತ್ತು. ಆಗ ಒಮ್ಮೆ ದಿನೇಶ್‌, ನೀವು ಮುಂಬೈನಲ್ಲಿ ಇದ್ದೀರ ಎಂದು ತಿಳಿಯಿತು. ನನಗೂ ಮುಂಬೈನಲ್ಲಿ ಸ್ನೇಹಿತರಿದ್ದಾರೆ, ಏನಾದರೂ ಸಹಾಯ ಬೇಕಿದ್ದರೆ ಕೇಳಿ ಪರೋಕ್ಷವಾಗಿ ಎಚ್ಚರಿಸಿದ್ದರು.

ಈಗ ಭಾಸ್ಕರ್‌ ಪ್ರಸಾದ್‌ ಆರೋಪವನ್ನು ಇಟ್ಟುಕೊಂಡು ನೋಡಿದರೆ, ಮಟ್ಟುಗೆ ಮುಂಬೈನಲ್ಲಿ ಎಂಥೆಂಥ ಕೈ ಇರಬಹುದು? ಪ್ರೇಮಶೇಖರರಿಗೂ ಅದೇ ಧಾಟಿಯಲ್ಲೇ ಎಚ್ಚರಿಕೆ ನೀಡಿದ್ದರಾ? ಎಂದು ನೀವು ಊಹಿಸಬಹುದು.

ವಿ. ಆರ್‌. ಭಟ್‌ ಪ್ರಕರಣದಲ್ಲಿ ಪೊಲೀಸರು ನಾಲ್ಕು ತಂಡ ಮಾಡಿಕೊಂಡು ಉಗ್ರನನ್ನು ಹುಡುಕಿದ ಹಾಗೆ ಹುಡುಕಿದರು. ಆದರೆ ಭಾಸ್ಕರ್‌ ಪ್ರಸಾದ್‌ ಇಂಥದ್ದೊಂದು ಸೊಧೀಟಕ ಮಾಹಿತಿ ನೀಡಿದ ಮೇಲೂ, ದಿನೇಶ್‌ ವಿರುದ್ಧ ಯಾವ ಪ್ರಕರಣಗಳೂ ಇಲ್ಲ. ಬದಲಿಗೆ ಭಾಸ್ಕರ್‌ ಪ್ರಸಾದ್‌ರನ್ನು ಬಂಧಿಸುವುದಕ್ಕೇ ಬೆಳಗಿನ ಜಾವ ಅವರ ಮೆನೆಗೆ ನುಗ್ಗುತ್ತಾರೆ.

ಯಾವುದೇ ದೇಶಗಳಲ್ಲಿ ನೋಡಿ, ಒಂದು ಜಾಲವನ್ನು ಬಯಲು ಮಾಡುವ Whistle-blowerಗೆ ಪೊಲೀಸರು ಅಥವಾ ವ್ಯವಸ್ಥೆ ಭದ್ರತೆ ನೀಡುತ್ತದೆ ಮತ್ತು ನೀಡಬೇಕು. ಆದರೆ ನಮ್ಮ ರಾಜ್ಯದಲ್ಲಿ ಆರೋಪಿ ದೂರು ನೀಡುವ ತನಕ ಕಾದು, Whistle-blowerನ್ನೇ ಬಂಧಿಸಿ ಜೈಲಿಗಟ್ಟುತ್ತಾರೆ.

ಕಡೆಯದಾಗಿ ಕಾಡುವ ಪ್ರಶ್ನೆ ಒಂದೇ. ಅಧಿಕಾರದ ಪೃಷ್ಠದಲ್ಲಿ ಪ್ರಗತಿಪರರೋ, ಪ್ರಗತಿಪರರ ಪೃಷ್ಠದಲ್ಲಿ ಅಧಿಕಾರವೊ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya