ತಲೆ ತಗ್ಗಿಸುವಂತೆ ಮಾಡಿಬಿಟ್ರಲ್ಲ ಬೆಂಗಳೂರಿಗರೇ?

‘ಬೆಂಗಳೂರಿನಲ್ಲಿ ಮಳೆ ಬಂದಾಗ ಏನ್‌ ಮಳೆನಪ್ಪಾ, ನೋಡ್ರೀ.. ಈ ರಸ್ತೆ ನೋಡ್ರಿ.. ರಸ್ತೆಯಯಲ್ಲಿ ಹಳ್ಳ ಇದ್ಯೋ, ಹಳ್ಳದಲ್ಲೆ ರಸ್ತೆ ಇದ್ಯೋ ಅನ್ನೋದೇ ಗೊತ್ತಾಗ್ತಾ ಇಲ್ಲ.. ’ ‘ಬೆಂಗ್ಳೂರಲ್ಲಿ ಎಷ್ಟು ಜನ ಸತ್ರು ನೋಡಿದ್ರಾ? ಈ ಊರಲ್ಲಿ ಯಾರೂ ಸುರಕ್ಷಿತ ಅಲ್ಲ ಅಂತಾಯ್ತಲ್ಲ.. ’, ‘ಎಷ್ಟ್‌ ಭ್ರಷ್ಟಾಚಾರ ನೋಡಿ, ಇವ್ರನ್‌ ಯಾರಾದ್ರೂ ಹೇಳೋರ್‌ ಕೇಳೋರ್‌ ಇದಾರಾ?’

ಬೆಂಗಳೂರಿಗರು ಇಂಥ ಮಾತಾಡುವುದನ್ನು ನಿಲ್ಲಿಸಿ, ಶನಿವಾರ-ಭಾನುವಾರ ರಜೆ ಬಂದಾಗ ಪಾರ್ಟಿ ಮಾಡಿಕೊಂಡು, ಅದೇ ಸಾವನದುರ್ಗಕ್ಕೆ, ನಂದಿ ಬೆಟ್ಟಕ್ಕೆ ಚಾರಣ ಹೋಗುತ್ತಾ ಜೀವನ ಮಾಡಿದರೆ ಸಾಕು. ಅದನ್ನು ಬಿಟ್ಟು ಸಮಾಜದ ಉದ್ಧಾರದ ಬಗ್ಗೆ ಮಾತಾಡುವ ಹಕ್ಕೂ ಇಲ್ಲ, ಯೋಗ್ಯತೆಯೂ ಇಲ್ಲ. ಕಾರಣ, ಈ ಬಾರಿ ಬೆಂಗಳೂರಿನಲ್ಲಿ ಆಗಿರುವಂಥ ಅತಿ ಕಡಿಮೆ ಮತದಾನ.

ಯಾವ ನೈತಿಕತೆ ಇದೆ ಇಂಥವರಿಗೆಲ್ಲ ಬೆಂಗಳೂರು ಹದಗೆಟ್ಟಾಗ ಮಾತಾಡುವುದಕ್ಕೆ? ಒಬ್ಬರು ಫಾರಿನ್‌ಗೆ ಹೋದರೆ ಮತ್ತೊಬ್ಬರು ಊರಾಚೆ ಹೋಗಿಬಿಟ್ಟಿರುತ್ತಾರೆ. ಒಂದು ಮತ ಹಾಕುವುದಕ್ಕಿಂತ ವಿದೇಶಕ್ಕೆ ಹೋಗುವುದು, ರಜೆ ಸಿಕ್ಕಿತು ಎಂದು ಊರಾಚೆ ಹೋಗುವುದೇ ಹೆಚ್ಚಾದರೆ ಅಂಥವರು ಊರಾಚೆ ಇದ್ದುಬಿಡುವುದೇ ಲೇಸು. ಭಾರತಕ್ಕೆ ಬರದಿರುವುದೇ ಉತ್ತಮ.

ನಾನು ಮತ ಚಲಾಯಿಸಿ ಉಪಾಹಾರಕ್ಕೆಂದು ಹೋಟೆಲ್‌ಗೆ ಬಂದಾಗ 30-36 ವರ್ಷ ಆಸುಪಾಸಿರುವ ವ್ಯಕ್ತಿಗಳು, ‘ಯಾವನ್‌ ಆ ಲೈನಲ್ಲಿ ನಿಂತ್ಕೊಂಡು ಹೋಗಿ ಕಳ್ಳರಿಗೆ ವೋಟ್‌ ಮಾಡ್ತಾರೋ? ಆಮೇಲ್‌ ಯಾವಗಾದ್ರೂ ಫ್ರೀ ಆದಾಗ ವೋಟ್‌ ಮಾಡಣ’ ಎಂದು ಮಾತಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿ ಮೈ ಉರಿದು ಹೋದಾಗ ನನಗೆ ಅನಿಸಿದ್ದು, ಮಳೆಯಿಂದ ಅಥವಾ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗಿಲ್ಲ, ಬದಲಿಗೆ ಇಂಥ ನೀಚರಿಂದಲೇ ರಸ್ತೆಗಳಲ್ಲಿ ಗುಂಡಿ ಬೀಳುತ್ತಿದೆ.

ಇನ್ನು ಟೆಕ್ಕಿಗಳಾಡುವ ಮಾತೇನು ಗೊತ್ತಾ? ‘ಚುನಾವಣೆಯನ್ನು ವಾರದ ದಿನಗಳಲ್ಲಿ ಇಟ್ಟು ರಜೆ ಕೊಡಬೇಕಿತ್ತು. ಅದರ ಬದಲಿಗೆ ವಾರಾಂತ್ಯದಲ್ಲಿ ಇಟ್ಟು ಸಿಗುವ ಒಂದು ಶನಿವಾರವನ್ನೂ ಕಿತ್ತುಕೊಂಡ್ರು.. ಯಾವ್‌ ಸುಖಕ್ಕೆ ಹೋಗಿ, ಕ್ಯೂ ಅಲ್ಲಿ ನಿಂತ್ಕೊಂಡು ವೋಟ್‌ ಮಾಡೋಣ? ಮನೇಲೇ ಇರ್ತೀನಿ’ ಎಂದು ವಾಕಿಂಗ್‌ಗೆ ಪಾರ್ಕ್‌ಗೆ ಬಂದ ಟೆಕ್ಕಿಗಳು ಹೇಳುವ ಮಾತಿದು. ನಾಳೆ ಇದೇ ಟೆಕ್ಕಿಗಳು ಎಲೆಕ್ಟ್ರಾನಿಕ್‌ ಸಿಟಿ ಇಂದು ಮನೆಗೆ ಸಂಜೆ ನೈಸ್‌ ರಸ್ತೆಯಲ್ಲಿ ಬರುವಾಗ ಯಾರೋ ರೌಡಿಗಳು ನಮ್ಮನ್ನು ಅಡ್ಡಗಟ್ಟಿ ಹೊಡೆದರು ಎಂದು ಪೊಲೀಸ್‌ ಠಾಣೆಗೆ ಬಂದಾಗ, ವೋಟ್‌ ಮಾಡದ ಇಂಥ ನಾಲಾಯಕ್‌ಗಳಿಗೆ ಹೊಡೆದು ಹಣ ಕಿತ್ತುಕೊಂಡು ಹೋಗಿದ್ದು ಯೋಗ್ಯವಾಯಿತು ಎಂದು ಹೇಳಬೇಕು ತಾನೆ? ಎಲೆಕ್ಟ್ರಾನಿಕ್‌ ಸಿಟಿಯಿಂದ ಬರುವಾಗ ನೈಸ್‌ ರಸ್ತೆಯಲ್ಲಿ ಹಲ್ಲೆಗೊಳಗಾದವರ ಪೈಕಿ ಟೆಕ್ಕಿಗಳು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಬೇಕಾದರೆ ಠಾಣೆಗಳಿಗೆ ಹೋಗಿ ನೋಡಿ. ಅವತ್ತು ಶನಿವಾರ ಒಂದು ದಿನ ರಜೆಯನ್ನು ಲೆಕ್ಕಿಸದೇ ಸಾಲಿನಲ್ಲಿ ನಿಂತು ಸರಿಯಾದ ಅಭ್ಯರ್ಥಿಗೆ ಮತ ಹಾಕಿದ್ದಿದ್ದರೆ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾ? ಟೆಕ್ಕಿಗಳು ಬಹಳ ಸಾಫ್ಟು, ಸಾಲಿನಲ್ಲಿ ನಿಂತರೆ ಕುಸಿದು ಬಿಡುತ್ತಾರೆ ಎಂದೇನೂ ಇಲ್ಲ. ವಿದೇಶಕ್ಕೆ ಹೋಗುವುದಕ್ಕೆ ವೀಸಾ ಬೇಕು ಎಂದು ಭಾಷೆ ಬರದ ನಾಡು ಚೆನೈಗೆ ಹೋಗಿ, ಅಲ್ಲಿ ತಾಸುಗಟ್ಟಲೆ ಸಾಲಿನಲ್ಲಿ ನಿಂತು ಹಲ್ಲು ಕಿರಿದು ವೀಸಾಗೆ ಸೀಲ್‌ ಒತ್ತಿಸಿಕೊಂಡು ಬರುವವರಿಗೆ ಒಂದರ್ಧ ಗಂಟೆ ತಮ್ಮ ಮನೆಯ ಪಕ್ಕದಲ್ಲಿ ನಿಲ್ಲುವುದು ಕಷ್ಟವಾ? ಇಂಥವರು ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವಾಗ ಅದೇ ಗುಂಡಿಯಲ್ಲಿ ಇವರನ್ನು ಮುಳುಗಿಸಿ ಎತ್ತಬೇಕೋ ಬೇಡವೋ?

ಬೆಂಗಳೂರಿನ ಹಂಪಿನಗರದಲ್ಲಿ ಚುನಾವಣೆಯ ವೇಳೆ ಬಂದ ಬಿಜೆಪಿ ಕಾರ್ಪೊರೇಟರ್‌ ಬಂದಾಗ ಅವರ ಮೇಲೆ ಕಾಂಗ್ರೆಸಿಗರು ಹಲ್ಲೆ ಮಾಡುತ್ತಿದ್ದರು. ಹಾಗಾಗಿ ಅಲ್ಲಿನ ಜನರು ಮತ ಹಾಕುವುದಕ್ಕೇ ಬರಲಿಲ್ಲ. ಯಾರಾರ‍ಯರೋ ಜಗಳ ಆಡುತ್ತಿದ್ದರೆ ನಮಗೆ ಹೊಡೆತ ಬಿದ್ದರೆ ಕಷ್ಟ ಎಂದು ಮನೆಯಲ್ಲಿ ಟಿವಿ ನೋಡುತ್ತಾ ರಾಜಕಾರಣಿಯನ್ನು ಶಪಿಸಿದರೆ ಅವನು ಸೋತು ಹೋಗುತ್ತಾನಾ?

ಸಿಲಿಕಾನ್‌ ಸಿಟಿಯಲ್ಲಿ ಎಲ್ಲ ತಿಳಿದವರು ಬುದ್ಧಿವಂತರು ಎಂದೇ ಪೋಸು ಕೊಡುತ್ತಾರಲ್ಲ, ಇವರಿಗಿಂತ ಬೆಂಗಳೂರು ಗ್ರಾಮಾಂತರವೇ ವಾಸಿ. 78.25% ಜನರು ಮತದಾನ ಮಾಡಿದ್ದಾರೆ. ಆದರೆ ಬುದ್ಧಿವಂತರಿರುವ ಬೆಂಗಳೂರು ದಕ್ಷಿಣದಲ್ಲಿ ಆದದ್ದು 47.45% ಮತ್ತು ಬೆಂಗಳೂರು ಉತ್ತರದಲ್ಲಿ ಆದದ್ದು 49% ಮಾತ್ರ. ಮತ ಹಾಕುವುದಕ್ಕೆ ಯೋಗ್ಯತೆ ಇಲ್ಲದವರನ್ನು ಬುದ್ಧಿವಂತರು, ಶ್ರೀಮಂತರು ಎಂದು ಕರೆಯುವುದಾದರೆ, ಕಲಿತಿದ್ದು ಕಡಿಮೆಯೇ ಆದರೂ ಮತ ಹಾಕಬೇಕು ಎಂಬ ಪರಿಜ್ಞಾನವಿರುವ ಬೆಂಗಳೂರಿನ ಹೊರಗಿನವರನ್ನು ಏನೆಂದು ಕರೆಯೋಣ? ಹಳ್ಳಿಯವರ ಕಾಲ ಕೆಳಗೆ ನುಸುಳುವುದಕ್ಕೂ ಅಯೋಗ್ಯರು ಬೆಂಗಳೂರಿನವರು ಎಂದು ಸಾಬೀತು ಮಾಡಿದ್ದಾರೆ. ಇವರ ಮುಸುಡಿಗೆ ಮೆಟ್ರೊ ರೈಲು, ಟೆಕ್‌ ಪಾರ್ಕ್‌ ಬೇರೆ ಬೇಕಂತೆ.

ಇಷ್ಟು ದಿನ ಬೆಂಗಳೂರು ಸೇರಿದಂತೆ, ಬಸವನ ಹಾಗೆ ಊರು ಸುತ್ತಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ, ಪ್ರಶ್ನೆ ಕೇಳುತ್ತೇನೆ ಎಂದು ಬಾಯಿ ಹರಿದುಕೊಳ್ಳುತ್ತಿದ್ದ ಆ ಖಳನಟ ಪ್ರಕಾಶ ಎಲ್ಲಿ ಮತ ಹಾಕಿದ್ದಾನೆ ಎಂದು ಯಾರಾದರೂ ಕೇಳಿದ್ದೀರಾ? ತಮಿಳುನಾಡಿನಲ್ಲೊಂದು, ಆಂಧ್ರದಲ್ಲೊಂದು ಎಲೆಕ್ಷನ್‌ ಕಾರ್ಡ್‌ ಇಟ್ಟುಕೊಂಡು ಕರ್ನಾಟಕದಲ್ಲಿ ಆತ ಕಿತ್ತು ಗುಡ್ಡೆ ಹಾಕಿದ್ದೇನು?

ಇನ್ನು ಬೇರೆಯವರಿಗೆ ಟ್ವಿಟರ್‌ನಲ್ಲಿ, ಫೇಸ್ಬುಕ್‌ನಲ್ಲಿ ಹೇಗೆ ನಕಲಿ ಖಾತೆಗಳನ್ನು ತೆರೆಯಬೇಕು ಎಂದು ಗಂಟೆಗಟ್ಟಲೆ ಕ್ಲಾಸ್‌ ತೆಗೆದುಕೊಳ್ಳುವ ರಮ್ಯಾ ಮಂಡ್ಯದಲ್ಲಿ ಮತ ಹಾಕಿದ್ದಾರಾ ಇಲ್ಲವಾ ಎಂಬುದೇ ಮಾಧ್ಯಮಗಳಲ್ಲಿ ಸುದ್ದಿ ಇಲ್ಲ. ರಮ್ಯಾ ಈಗ್‌ ಬರ್ತಾರೆ, ಆಗ್‌ ಬರ್ತಾರೆ ಎಂದು ಕಾದು ಕಾದು ಕಾಂಗ್ರೆಸಿಗರು ಕೆಂಪು ಕೆಂಡವನ್ನು ಅಡಿಗಿಟ್ಟ ಹಾಗೆ ಮುಖ ಮಾಡಿಕೊಂಡು ಹೋದದ್ದೊಂದು ಗೊತ್ತು. ಸೀರಿಯಲ್‌ ನಂಬರ್‌ 420 ಕೊಟ್ಟದ್ದಕ್ಕೆ ರಮ್ಯಾ ಏನಾದರೂ ಮತ ಹಾಕದೇ ದೂರ ಉಳಿದರಾ? ಮತ ಹಾಕದವರನ್ನೆಲ್ಲ ತಮ್ಮನ್ನು ತಾವು ರಾಜಕಾರಣಿಗಳು ಎಂದು ಯಾಕಾಗಿ ಕರೆದುಕೊಳ್ಳುತ್ತಾರೆ?

ಇನ್ನು ನಮ್ಮ ಮಾಧ್ಯಮಗಳೇನೂ ಕಡಿಮೆಯಿಲ್ಲ. ಯಾವನಾದರೂ ರಸ್ತೆ ಗುಂಡಿಯಲ್ಲಿ ಬಿದ್ದಾಗ ಮುಖಕ್ಕೇ ಮೈಕ್‌ ಹಿಡಿದು ಏನಂತೀರಾ ಸಾರ್‌ ಎಂದು ಕೇಳುವ ಮಾಧ್ಯಮದ ಎಷ್ಟು ಮಂದಿ ಮತ ಹಾಕಿದ್ದಾರೆ ಕೇಳಿ ನೋಡೋಣ? ನಾವು ಸಮೀಕ್ಷೆ ಕೊಡ್ತೀವಿ, ನಾವು ಎಕ್ಸಿಟ್‌ ಪೋಲ್‌ ಹೇಳ್ತೀವಿ, ಚುನಾವಣೆಯ ಕ್ಷಣ ಕ್ಷಣದ ಸುದ್ದಿಯನ್ನು ನಾವು ನೀಡ್ತೀವಿ ಎಂದೆಲ್ಲ ಬೊಬ್ಬೆ ಹೊಡೆಯುವ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದವರು ಬಹಳಷ್ಟು ಮಂದಿ ಮತವನ್ನೇ ಹಾಕಿಲ್ಲ. ಒಂದು ಮತ ಚಲಾಯಿಸುವುದಕ್ಕೆ ಯೋಗ್ಯತೆ ಇಲ್ಲ, ಜನರಿಗೆ ಸಮೀಕ್ಷೆ ಇವರೇನು ಹೇಳುವುದು ಮಣ್ಣಾಂಗಟ್ಟಿ?

ನಾನು ವಿಚಾರಿಸಿದ ಬಹಳಷ್ಟು ಕಡೆ ಒಂದೊಂದು ಸಂಸ್ಥೆಯಿಂದ ಕನಿಷ್ಟ 35 ಪತ್ರಕರ್ತರು ಮತ ಹಾಕಲೇ ಇಲ್ಲ. ಕೇಳಿದರೆ, ಏನ್‌ ಮಾಡೋದು ಸಾರ್‌ ರಜೆನೇ ಕೊಡಲ್ಲ ಎನ್ನುತ್ತಾರೆ. ಊರಲ್ಲಿ ಇರುವವರನ್ನು ವಿಡಿಯೊ ಮಾಡಿ ಕೆಂಪು ವೃತ್ತ ಬರೆದು ಬಾಣ ಬಿಟ್ಟು ಅಪರಾಧಿಯನ್ನಾಗಿ ಮಾಡಲಾಗುತ್ತದೆ, ಮತ ಹಾಕುವುದಕ್ಕೆ ರಜೆ ಕೊಡದ ಬಾಸ್‌, ಸೀನಿಯರ್‌ನ ಬಗ್ಗೆ ನಾಲ್ಕು ವಾಕ್ಯ ಫೇಸ್ಬುಕ್‌ನಲ್ಲೂ ಬರೆಯದಕ್ಕಾಗದೇ ಇರುವುದೂ ಒಂದು ಪೌರುಷವಾ? ಒಂದು ದಿನ ರಜೆ ಹೋಗುತ್ತದೆಂದು ಮತ ಹಾಕದ ಪತ್ರಕರ್ತರಿಗೂ, ಆ ಕೆಲ ಸೋಂಬೇರಿ ಟೆಕ್ಕಿಗಳಿಗೂ ಏನು ವ್ಯತ್ಯಾಸ ಹೇಳಿ?

ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಸ ಹೆಚ್ಚಾದಾಗ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ?’, ಮಳೆಯಾಗಿ ಮರ ಬಿದ್ದಾಗ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ’, ರಾತ್ರಿ ಹೊತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾದಾಗ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ?’, ಭ್ರಷ್ಟಾಚಾರಿ ರಾಜಕಾರಣಿ ಸಿಕ್ಕಿಬಿದ್ದಾಗ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ?’, ರೈತರು ಆತ್ಮಹತ್ಯೆ ಮಾಡಿಕೊಂಡಾಗ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ?’. ಅಲ್ಲದೇ ನಿನ್ನೆ ಮಳೆ ಬಂದು ಕಾರ್‌ ಮೇಲೆ ಮರ ಬಿದ್ದದ್ದಕ್ಕೂ ‘ಏನ್‌ ಮಾಡ್ತಿದೀರ್ರೀ ಸಿದ್ದರಾಮಯ್ಯ?’… ಇಷ್ಟೆಲ್ಲ ಕೇಳುವ ಪತ್ರಕರ್ತರೇ, ಮೊನ್ನೆ ನೀವೇನು ಮಾಡ್ತಿದ್ರಿ ಹೇಳಿ? ದುರ್ಘಟನೆ ಸಂಭವಿಸಿದಾಗ ಬ್ಯಾಗ್‌ಪ್ಯಾಕ್‌ ಎತ್ತಿಕೊಂಡೋ, ಒಬಿ ವ್ಯಾನ್‌ ತೆಗೆದುಕೊಂಡೋ ಹೋಗಿ ‘ನಮ್ಮಲ್ಲೇ ಮೊದಲು’ ಎಂದು ಲೈವ್‌ ಕೊಡುವುದು ಹೆಮ್ಮೆಯೋ ಅಥವಾ ದುರ್ಘಟನೆ ನಡೆಯದಂತೆ ಒಂದು ಮತ ಹಾಕುವ ಮೂಲಕ ತಡೆಯದಂತೆ ಮಾಡುವುದು ಹೆಮ್ಮೆಯೋ? ಪತ್ರಕರ್ತನಿಗೆ ಸಾಮಾಜಿಕ ಕಾಳಜಿ ಇರಬೇಕು ಎಂಬುದನ್ನೇ ಮರೆತಿದ್ದಾರಾ? ನಾಳೆ ಯಾವುದೋ ಅಂಡರ್‌ ಪಾಸ್‌ ಕೆಳಗೆ ಮಳೆ ನೀರು ನುಗ್ಗಿ ರಸ್ತೆಯು, ಸ್ವಿಮ್ಮಿಂಗ್‌ ಪೂಲ್‌ ಆಗಿದೆ ಎಂದು ವರದಿ ಮಾಡುವಾಗ ‘ಅಯ್ಯೋ ನಾನ್‌ ವೋಟ್‌ ಮಾಡದೇ ಇದ್ದಿದ್ದಕ್ಕೇ ನಾಲಾಯಕ್‌ ಸರ್ಕಾರ ಆಯ್ಕೆಯಾಗಿ ಹೀಗಾಗಿದೆ’ ಅನಿಸುವುದಿಲ್ಲವಾ? ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದ್ದನ್ನು ವರದಿ ಮಾಡಲು ಹೋದಾಗ ಮತ ಹಾಕದ ಕೈಗಳಿಂದ ದೇವರಿಗೆ ನಮಸ್ಕರಿಸುತ್ತೀರಾ?

ಮತ ಹಾಕದ ದಂಡಪಿಂಡಗಳಿಗೆ ನೀನು ಹೊಳೆಯಲ್ಲಿ ಬಿಡುವ ಪಿಂಡಕ್ಕಿಂತಲೂ ಕಡೆ ಎಂದು ಅವಮಾನ ಮಾಡಿದರೆ ಮಾತ್ರ ಭಾರತೀಯರು ಸರಿ ಹೋಗಬಹುದು. ಅದನ್ನು ಮಾಡಲೇ ಬೇಕಿದೆ. ಹಾಗಂತ ಹೆರಿಗೆಯಲ್ಲಿರುವ ಮಹಿಳೆ, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ರೋಗಿಗಳು, ನಡೆಯಲಾಗದ ವೃದ್ಧರನ್ನೂ ಮತ ಹಾಕಿ ಎನ್ನುತ್ತಿಲ್ಲ. ಕೈ ಕಾಲು ಗಟ್ಟಿ ಇದ್ದೂ ಸೋಮಾರಿಗಳಂತೆ ಬಿದ್ದಿರುವವರಿಗೆ ಈ ಮಾತು ಅನ್ವಯ.

ಮತ ಹಾಕದ ಈ ಪತ್ರಕರ್ತರು, ಟೆಕ್ಕಿಗಳು, ಪುಕ್ಕಲುಗಳು, ಇತರೆ ಜನ ಸಾಮಾನ್ಯರು ಮೂಲಭೂತ ಹಕ್ಕನ್ನೇ ಚಲಾಯಿಸದೇ ಇನ್ನೂ ಅದು ಹೇಗೆ ಮರ್ಯಾದಸ್ಥರು ಎಂದುಕೊಂಡು ಜೀವಂತ ಇದ್ದಾರೆ ಎಂಬುದೇ ಅಚ್ಚರಿ. ಬೆಂಗಳೂರಿನವನು ನಾನು ಎಂದು ಅಪ್ಪಿ ತಪ್ಪಿಯೂ ಇನ್ನೈದು ವರ್ಷ ದಕ್ಷಿಣ ಕನ್ನಡ, ಹಾಸನ, ಮಂಡ್ಯ, ರಾಮನಗರದ ಜನತೆಗೆ ಹೇಳಿಕೊಳ್ಳಬೇಡಿ. ಬೆಂಗಳೂರಿನವರೇನ್ರೀ ಮತ ಹಾಕದಷ್ಟು ದಡ್ಡರಾ ಎಂದರೆ ನಿಮ್ಮ ಮರ್ಯಾದೆಯೇ ಹೋಗುವುದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya