ಪ್ರಣಾಳಿಕೆ ಓದಿ ನಮ್ಮಜ್ಜಿಯ ಮೇಲಿನ ನಂಬಿಕೆಯೇ ಹೋಯ್ತು

ಇತ್ತೀಚೆಗೆ ಒಂದು ವಿಡಿಯೊ ಹರಿದಾಡುತ್ತಿತ್ತು. ಅದರಲ್ಲಿರುವ ಖಳನಾಯಕ ಕಾಂಗ್ರೆಸ್‌ನ ವಿಧಾನಸಭಾ ಅಭ್ಯರ್ಥಿ ಆನಂದ್‌ ಸಿಂಗ್‌. ಹೀರೋ ನಾಗರಾಜ ಎಂದು. ಮತಯಾಚನೆಗೆ ತಮ್ಮ ಗ್ರಾಮಕ್ಕೇ ಬಂದಾಗ ‘ಅಲ್ಲ ಸ್ವಾಮಿ, ಮುಸ್ಲಿಮರು ಮಸೀದಿ ಮಾಡ್ಕೊಡಿ ಅಂತ ಹೇಳಿ ಒಂದು ವರ್ಷದೊಳಗೆ ಒಂದು ಮಸೀದಿ ನಿರ್ಮಿಸಿಕೊಟ್ರಿ. ಆದರೆ ನಾವು ದೇವಸ್ಥಾನ ನಿರ್ಮಿಸಿಕೊಡಿ ಎಂದು ಕೇಳಿ ಕಾಲಗಳೇ ಕಳೆದುಹೋಯ್ತು. ಯಾವಾಗ ದೇವಸ್ಥಾನ ಕಟ್ಟಿಸಿಕೊಡ್ತೀರಿ? ಹಿಂದೂಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯನಾ?’ ಎಂದು ಕೇಳಿದ್ದೇ ತಡ, ಆನಂದ್‌ ಸಿಂಗ್‌ ಸಿಂಹ ಆಗಿಬಿಟ್ಟರು. ‘ನಿನ್‌ ವಯಸ್ಸು ಇನ್ನೂ ಚಿಕ್ಕದು. ಇದೆಲ್ಲ ಮಾತಾಡೋ ವಯಸ್ಸಲ್ಲ. ನಿನ್‌ ವಯಸ್ಸಿಗೆ ತಕ್ಕನಾಗ್‌ ಮಾತಾಡು, ನೀನ್‌ ಮನವಿ ಕೊಟ್ಟಿದ್ಯೋ ಇಲ್ವೋ? ಕಟ್ಸಣ ಬಿಡು.. ನಾನ್‌ ಇಲ್ಲಿ ಮತ ಕೇಳಕ್‌ ಬಂದಿದೀನಿ.. ಹಾಕಂಗಿದ್ರೆ ಹಾಕು.. ಅವೆಲ್ಲ ಮಾತಾಡ್ಬೇಡ.. ನಿನ್‌ ಹೆಸ್ರು ನಾಗರಾಜ್‌ ಅಲ್ವಾ? ನೋಡ್ತೀಯಾ ನೀನು, ನಾವು ಮಾಡ್ತೀವಿ’ ಎಂದು ಆವಾಜ್‌ ಹಾಕಿ ತಾನು ಎಷ್ಟು ಮುಸ್ಲಿಮರ ಪರ ಇದ್ದೇನೆ ಎಂದು ಹೇಳಿದ ಜೈಲಿಗೆ ಹೋಗಿ ಬಂದ ಕುಖ್ಯಾತ ಪಡೆದ ಆನಂದ್‌ ಸಿಂಗ್‌ ಸಾಬೀತು ಮಾಡಿದರು.
ಇರಲಿ, ರಾಜಕಾರಣಿಗಳು ತಾವು ಗೆಲ್ಲಬೇಕು ಎಂದರೆ ಯಾರಿಗೆ ಬೇಕಾದರೂ ಆವಾಜ್‌ ಹಾಕುತ್ತಾರೆ, ಯಾರ ಕಾಲನ್ನು ಬೇಕಾದರೂ ಹಿಡಿಯುತ್ತಾರೆ. ಆದರೆ ಒಂದು ಪಕ್ಷ ಎಂದ ಮೇಲೆ ಅದು ಎಲ್ಲ ಜಾತಿಯವರಿಗೂ ಸಮನಾಗಿರಬೇಕಲ್ಲವೇ? ಇಲ್ಲ. ಕಾಂಗ್ರೆಸ್‌ಗೆ ಅದು ಅನ್ವಯಿಸುವುದೇ ಇಲ್ಲ. ಯಾಕೆಂದರೆ ಅದು ಮುಸ್ಲಿಮರ, ಕ್ರಿಶ್ಚಿಯನ್ನ ಪಕ್ಷ ಎಂದಾಗಿಬಿಟ್ಟಿದೆ. ಇದಕ್ಕೆ ಹೊಸ ಕಾರಣ, ಅವರ ಪ್ರಣಾಳಿಕೆ.
ನಾವು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಏನೇನೆಲ್ಲ ಮಾಡ್ತೀವಿ ನೋಡಿ ಎಂದು ಒಂದು ಪ್ರಣಾಳಿಕೆ ಬಿಟ್ಟಿದ್ದಾರೆ. ಆ ಪ್ರಣಾಳಿಕೆಯಲ್ಲಿರುವುದು ಎರಡೇ ಸಂಗತಿಗಳು, ಅಹಿಂದ ಓಲೈಕೆ ಮತ್ತು ಹಸಿ ಹಸಿ ಸುಳ್ಳುಗಳು. ಅಹಿಂದ ಓಲೈಕೆ ಹೇಗಿದೆಯೆಂದರೆ, ಉರ್ದುವನ್ನು ರಾಜ್ಯ ಭಾಷೆಯನ್ನಾಗಿ ಒಂದು ಮಾಡಿ, ಪ್ರಣಾಳಿಕೆಯನ್ನು ಉರ್ದುವಿನಲ್ಲೇ ಛಾಪಿಸಿಲ್ಲ ಎನ್ನುವುದು ಬಿಟ್ಟರೆ, ಮಿಕ್ಕ ಎಲ್ಲವೂ ಅದರಲ್ಲಿದೆ.
ಒಮ್ಮೆ ಅದರಲ್ಲಿರುವ ಕೆಲ ಅಂಶಗಳನ್ನು ನೋಡೋಣ:
ಅಲ್ಪಸಂಖ್ಯಾತ ಮುಸಲ್ಮಾನರಿಗೆ ಸರ್ಕಾರಿ ಉದ್ಯೋಗದಲ್ಲಿ 4% ಮೀಸಲು ನೀಡಲಾಗಿದೆ. ಮುಸ್ಲಿಮರಿಗೇ ಸರ್ವ ಸೌಲಭ್ಯ, ಭಾಗ್ಯ ಕೊಟ್ಟಿದ್ದನ್ನು ನಾವೇನು ಈಗ ನೋಡ್ತಾ ಇಲ್ಲ. ಪಿಎಫ್‌ಐ ಮೇಲಿನ 175 ಪ್ರಕರಣಗಳನ್ನು ತೆಗೆದು ಹಾಕಿದಾಗಲೇ ಇವರ ಹಣೆಬರಹ ಗೊತ್ತಾಗಿದೆ. ಆದರೆ ನಿಜವಾಗಿಯೂ ಇವರ ಹಣೆಬರಹ ಗೊತ್ತಾಗಬೇಕಿರುವುದು ಲಿಂಗಾಯತರಿಗೆ. ಪ್ರತ್ಯೇಕ ಧರ್ಮ ನೀಡಿ ಅಲ್ಪಸಂಖ್ಯಾತರ ವ್ಯಾಪ್ತಿಗೆ ಸೇರಿಸಿ ಎಂಬುದು ಲಿಂಗಾಯತರ ಮನವಿ. ಇವರಿಗೆ 4% ಮೀಸಲು ಬಿಡಿ, ಪ್ರಣಾಳಿಕೆಯಲ್ಲಿ ಲಿಂಗಾಯತರಿಗೆ ಮಣ್ಣಾಂಗಟ್ಟಿಯೂ ಕೊಡಲಿಲ್ಲ ಎಂಬುದು ಅಷ್ಟೇ ಸತ್ಯ. ಲಿಂಗಾಯತರನ್ನು ಒಡೆದು ವೋಟ್‌ಬ್ಯಾಂಕ್‌ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ಎಲ್ಲಿ ಅದು ಆಗಲಿಲ್ಲವೋ ಆಗ ಲಿಂಗಾಯತರನ್ನು ಕೂಡಲಸಂಗಮದಲ್ಲೇ ಬಿಟ್ಟು ಮುಂದಕ್ಕೆ ಹೋದರು.
ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗೂ ಇಂಥ ಅವಕಾಶ ಸಿಕ್ಕಿದೆಯೋ ಇಲ್ಲವೋ, ಭಾರತದ ಮುಸ್ಲಿಮರಿಗಂತೂ ಜ್ಯಾಕ್‌ಪಾಟ್‌ ಈ ಪ್ರಣಾಳಿಕೆ. 60,000 ಮುಸ್ಲಿಂ ಮಕ್ಕಳು ಶಾಲೆಗೆ ಬರುವುದನ್ನು ಪ್ರೋತ್ಸಾಹಿಸಲು ಅವರಿಗೇ ವಿಶೇಷ ಶಾಲೆ ಮೌಲಾನಾ ಆಜಾದ್‌ ಶಾಲೆಗಳನ್ನು ಆರಂಭಿಸುತ್ತಾರಂತೆ. ಯಾವುದೋ ಒಂದು ಎರಡು ಶಾಲೆಗಳಲ್ಲ, ಬದಲಿಗೆ ತಾಲೂಕಿಗೊಂದು ಮೌಲಾನಾ ಆಜಾದ್‌ ಶಾಲೆಯನ್ನು ನಿರ್ಮಿಸುವ ಯೋಜನೆಯಿದೆ. 1 ಕೋಟಿ ವಿದ್ಯಾರ್ಥಿಗಳಿರುವ ರಾಜ್ಯದಲ್ಲಿ 60 ಸಾವಿರ ಮುಸ್ಲಿಮ್‌ ವಿದ್ಯಾರ್ಥಿಗಳೇ ಹೆಚ್ಚಾದ ಕಾಂಗ್ರೆಸ್‌ ಸರ್ಕಾರ ಇನ್ನೂ ಮರ್ಯಾದೆ ಬಿಟ್ಟು ತಾನು ಜಾತ್ಯತೀತ ಎಂದು ಹೇಳಿಕೊಳ್ಳುತ್ತಿದೆಯಲ್ಲ ಎಂಬುದೇ ಅಚ್ಚರಿ.
ಲಿಂಗಾಯತರನ್ನು ಒಡೆದು ಆಳುವುದಕ್ಕೆ ವಿಫಲವಾದ ಕಾಂಗ್ರೆಸ್‌ ಯಥಾ ಪ್ರಕಾರ ಮುಸ್ಲಿಮರು ಹಿಂದೂಗಳ ಮಧ್ಯೆಯೇ ಒಡಕು ತಂದು ಹಾಕುವ ಯೋಜನೆಗೆ ಕೈ ಹಾಕಿದೆ ಎಂಬುದಕ್ಕೆ ತಾಜಾ ಉದಾಹರಣೆ, ಆರೋಗ್ಯ ವಿಮಾ ಯೋಜನೆ. ಹೌದು, ನೀವು ಆಲೋಚಿಸಿದಂತೆ ಇದು ಮುಸ್ಲಿಮರ ಮಕ್ಕಳಿಗಾಗೇ ಮಾಡಿರುವ ಯೋಜನೆ. ಆಟೋ, ಟ್ಯಾಕ್ಸಿ ಡ್ರೈವರ್‌ಗಳ ಮಕ್ಕಳಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಅವರಿಗೆ ಆರೋಗ್ಯ ವಿಮೆ ಮಾಡಿಸುತ್ತದಂತೆ. ಇವರ ಲಾಜಿಕ್‌ ನನಗೆ ಅರ್ಥವಾಗುತ್ತಿಲ್ಲ. ಬ್ರಿಟಿಷರ ಅವತಾರವಾದ ಕಾಂಗ್ರೆಸಿಗರೇ, ಹಿಂದೂ ಆಗಲಿ, ಕ್ರಿಶ್ಚಿಯನ್‌ ಆಗಲಿ, ಮುಸ್ಲಿಂ ಆಗಲಿ, ಕೂತಲ್ಲಿ ಲಕ್ಷ ಲಕ್ಷ ಬರುವುದಿಲ್ಲ ಎಂಬುದಕ್ಕಾಗಿಯೇ ಆಟೋ , ಟ್ಯಾಕ್ಸಿಗಳನ್ನು ಓಡಿಸುತ್ತಿರುವುದಲ್ಲವೇ? ಅವರಲ್ಲೂ ಮುಸ್ಲಿಮರನ್ನು ಹುಡುಕುವ ನೀವೆಷ್ಟು ಬರಗೆಟ್ಟಿರಬೇಡ!?
ಇಷ್ಟೇ ಅಲ್ಲ, ಜನರಿಗೆ ಕೌಶಲ್ಯ ಅಭಿವೃದ್ಧಿ, ಸ್ವಂತ ಉದ್ದಿಮೆ, ನಿರುದ್ಯೋಗ ನಮ್ಮ ರಾಜ್ಯಕ್ಕಿರುವ ಸವಾಲು. ಹಿಂದೂಗಳು ಹಾಳಾಗಿ ಹೋಗಲಿ, ಮುಸ್ಲಿಮರಿಗೆ ಮಾತ್ರ ಎಲ್ಲವೂ ಸಿಗಬೇಕು ಎಂದು ಕೌಶಲ್ಯ ಅಭಿವೃದ್ಧಿ, ಸ್ವಂತ ಉದ್ದಿಮೆ ತರಬೇತಿ ಮತ್ತು ನಿರುದ್ಯೋಗವನ್ನು ಹೋಗಲಾಡಿಸುವುದಕ್ಕೆ ಮದರಸಾ ಬೋರ್ಡ್‌ಗಳನ್ನು ಸ್ಥಾಪಿಸುತ್ತಾರಂತೆ.
ಇನ್ನು ಮುಸ್ಲಿಂ, ಬೌದ್ಧ, ಜೈನ, ಕ್ರಿಶ್ಚಿಯನ್‌, ಸಿಖ್ಖ್‌ ಮತ್ತು ಪಾರ್ಸಿಗಳಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತರಲಿದ್ದಾರೆ, ಆದರೆ, ಹಿಂದೂಗಳನ್ನು ಹೊರತುಪಡಿಸಿ. ಪ್ರಣಾಳಿಕೆಯ ಈ ಭಾಗದಲ್ಲಿ ಒಂದೇ ಒಂದು ಹಿಂದೂ ಎಂಬ ಪದ ಇಲ್ಲ. ಬೇರೆ ಯಾರಿಗೂ ಬೇಡ ಸ್ವಾಮಿ, ತಾನು ಜನಿವಾರ ಧಾರಿ ಬ್ರಾಹ್ಮಣ ಸುಳ್ಳು ಸುಳ್ಳೇ ತಮಟೆ ಬಾರಿಸಿದರಲ್ಲ, ರಾಹುಲ್‌… ಅವರನ್ನು ಮೆಚ್ಚಿಸುವುದಕ್ಕಾದರೂ ಒಂದೇ ಒಂದು ಯೋಜನೆ ಬೇಡವೇ? ಇಂಥವರೆಲ್ಲ ಜಾತ್ಯತೀತವಾದಿಗಳು ಎಂದು ಯಾವ ಕಿತ್ತು ಹೋದ ಬಾಯಲ್ಲಿ ಹೇಳಿಕೊಳ್ಳುತ್ತಾರೆ? ಚಿಕ್ಕವರಿರುವಾಗ ನಾವೆಲ್ಲ ಒಂದು ಸುಳ್ಳಾಡಿದರೆ, ಬಾಯಲ್ಲಿ ಹುಳ ಬೀಳುತ್ತದೆ ಎಂದು ನಮ್ಮಜ್ಜಿ ಹೇಳುತ್ತಿದ್ದರು. 70 ವರ್ಷ ಸುಳ್ಳನ್ನೇ ಹೇಳಿಕೊಂಡ ಇವರ ಬಾಯಿಗೆ ಇನ್ನೂ ಹುಳ ಬೀಳದೇ ಇದ್ದದ್ದು ನೋಡಿ, ನನಗೆ ನಮ್ಮಜ್ಜಿಯ ಮೇಲಿದ್ದ ನಂಬಿಕೆಯೇ ಹೊರಟು ಹೋಗಿದೆ.
ಅದೆಲ್ಲ ಬಿಡಿ, ಮಂಗಳೂರಿನಲ್ಲಿ ವೇದವ್ಯಾಸರ ಪತ್ನಿ, ಪತಿಯ ಪರವಾಗಿ ಮಹಿಳೆಯರ ಬಳಿಗೆ ಮತಯಾಚನೆಗೆ ಹೋದಾಗ, ಜಾತ್ಯತೀತ ಭಾರತದಲ್ಲಿ ಹಿಂದೂ ಧರ್ಮದ ಹೆಸರಲ್ಲಿ ಭಿಕ್ಷೆ ಬೇಡ್ತೀರಲ್ಲ, ನಾಚಿಕೆಯಾಗುವುದಿಲ್ಲವೇ ಎಂದು ಹೇಳುವ ನಿಜ ಜೀವನದ ನಟ ಪ್ರಕಾಶ ಕಾಂಗ್ರೆಸ್‌ ಇಂಥ ಥರ್ಡ್‌ ಕ್ಲಾಸ್‌ ಪ್ರಣಾಳಿಕೆ ಮಾಡಿರುವುದರ ಬಗ್ಗೆ ಈಗ ಬಾಯಿ ಬಿಡಲಿ ನೋಡೋಣ? ಬೇಕಾದರೆ ನೋಡಿ, ಅವರ ಬಾಯಲ್ಲೂ ಒಂದೇ ಒಂದೂ ಹುಳವಿಲ್ಲ. ಇಲ್ಲ, ನಮ್ಮಜ್ಜಿಯನ್ನು ನಂಬುವುದಕ್ಕೆ ನನ್ನಲ್ಲೀಗ ಒಂದೇ ಒಂದು ಕಾರಣವೂ ಉಳಿದಿಲ್ಲ.
ಕರ್ನಾಟಕದ ಒಟ್ಟು ಜಿಎಸ್‌ಡಿಪಿಯೇ 190 ಬಿಲಿಯನ್‌ ಡಾಲರ್‌ ಇದೆ.. ಆದರೆ ಐಟಿ ಸೆಕ್ಟರ್‌ ಒಂದರಲ್ಲೇ 300 ಬಿಲಿಯನ್‌ ಡಾಲರ್‌ ಹಣ ತರುತ್ತೇವೆ ಎನ್ನುತ್ತಿದ್ದಾರೆ. 300 ಬಿಲಿಯನ್‌ ಯುಸ್‌ ಡಾಲರ್‌ನ ಇಂದಿನ ರೂಪಾಯಿ ಮೊತ್ತ 1,99,50,00,00,00,000 ರೂಪಾಯಿ. ಪಾಪ ರಾಹುಲ್‌ ಗಾಂಧಿಗೂ ಸಡನ್‌ ಆಗಿ ಕೊಟ್ಟು ಇದನ್ನು ಓದು ಎಂದರೆ, ಬಿಡಿ, ಹತ್ತು, ನೂರು ಬಿಟ್ಟು ಮುಂದೆ ಹೋಗದೇ ರಾಜಕೀಯವೇ ತೊರೆಯವುಷ್ಟು ಜುಗುಪ್ಸೆ ತರುವಂಥ ನಂಬರ್‌ ಇದು. ಕರ್ನಾಟಕ ಜಿಎಸ್‌ಡಿಪಿಗಿಂತಲೂ ದೊಡ್ಡ ಮೊತ್ತವನ್ನು ಒಂದು ಸೆಕ್ಟರ್‌ನಲ್ಲೇ ತರುತ್ತಾರೆ ಎಂದರೆ ಸಿದ್ದರಾಮಯ್ಯ ಏನು ಪಂಚೆಯಿಂದ ಪಾರಿವಾಳ ಹಾರಿ ಬಿಡುವ ಜಾದೂಗಾರರೇ?
ಇವರ ಪ್ರಣಾಳಿಕೆಯಲ್ಲಿ ಯೋಧರನ್ನೂ ನೆನೆದಿದ್ದಾರೆ. ಹುತಾತ್ಮ ಯೋಧರ ಪತ್ನಿಯರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂದು ಹೇಳುತ್ತಾರೆ. ಕೇಳುವುದಕ್ಕೆ ಬಹಳ ಇಂಪಾಗಿದ್ದರೂ ವಾಸ್ತವ ಸ್ಥಿತಿಯೇ ಬೇರೆ ಇದೆ. 2017ರಲ್ಲಿ ಸಿಯಾಚಿನ್‌ನಲ್ಲಿ ಪ್ರಾಣ ಬಿಟ್ಟ ಹನುಮಂತಪ್ಪ ಕೊಪ್ಪದ್‌ ನೆನಪಿದೆಯಾ? ಅವರ ಪತ್ನಿಗೆ ನಯಾ ಪೈಸೆ ಹಣವನ್ನು ಕಾಂಗ್ರೆಸ್‌ ಕೊಡಲಿಲ್ಲ. ಬದಲಿಗೆ ಅವರಿಗೆ ನೌಕರಿ ಕೊಟ್ಟವರು ಸ್ಮೃತಿ ಇರಾನಿಯವರು. ಕಾಂಗ್ರೆಸ್‌ ಲಕ್ಷ ಲಕ್ಷ ಹಣವನ್ನು ಸತ್ತ ಮಾರನೇ ದಿನವೇ ಹೋಗಿ ಕೊಟ್ಟಿದ್ದು, ದನಗಳ್ಳ ಕಬೀರ್‌ ಎನ್‌ಕೌಂಟರ್‌ ಆದಾಗ ಮಾತ್ರ. ಅಷ್ಟೇ ಯಾಕೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎಂಬ ವ್ಯಕ್ತಿ ಗೌರವೇ ಇಲ್ಲದೇ ‘ಸೈನ್ಯಕ್ಕೆ ಸೇರುವವರೆಲ್ಲ ಬಡವರು’ ಎಂದು ವಾಕ್‌ ವಾಂತಿ ಮಾಡಿಕೊಂಡಿದ್ದರು.
ಸರ್ಜಿಕಲ್‌ ಸ್ಟ್ರೈಕ್‌ನಂಥ ಮಹತ್ಕಾರ್ಯವನ್ನೇ ವಿರೋಧಿಸಿದ, ಸುಳ್ಳು ಎಂದ ಇಂಥವರೆಲ್ಲ ಯೋಧರನ್ನು ನೆನೆಯುತ್ತಾರೆ ಎಂಬುದೇ ಶತಮಾನದ ಸುಳ್ಳು.
ಇನ್ನು ಈ ಪ್ರಣಾಳಿಕೆಯ ಒಂದು ಆಶ್ವಾಸನೆ ಅಂತೂ ಓದಿ ತಲೆ ತಿರುಗಿ ಹೋಯ್ತು. ಲೋಕಾಯುಕ್ತಕ್ಕೆ ಮತ್ತೊಮ್ಮೆ ಅಧಿಕಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರಿಗೆ ಚೂರಿ ಹಾಕಿದ ತೇಜರಾಜ ಶರ್ಮಾ ಇದನ್ನೇನಾದರೂ ಓದಿದರೆ ನಿಜವಾಗಿಯೂ ನಕ್ಕು ನಕ್ಕೇ ಹುಚ್ಚನಾಗುವ ಸಾಧ್ಯತೆಯೇ ಹೆಚ್ಚಿದೆ.
ಅಲ್ಲ ಇಂಥ ಯೋಜನೆ ಹಾಕುವಾಗ ಸಿದ್ದರಾಮಯ್ಯನವರ ಅಂತರಾತ್ಮ ಎನ್ನುವುದು, ‘ಅಲ್ಲ ಕಣಯ್ಯಾ, ಲೋಕಾಯುಕ್ತವನ್ನ ನೀನೇ ಬಲಿ ಹಾಕಿ ಎಸಿಬಿ ಮಾಡ್ಬುಟ್ಟು, ಈಗ ಲೋಕಾಯುಕ್ತ ಮಾಡ್ತೀನಿ ಅಂತ ಹೇಳ್ತಾ ಇದ್ಯಲ್ಲ. ನಿಂಗ್‌ ನಾಚಿಕೆ ಮಾನ ಮರ್ಯಾದೆಗಳಲ್ಲಿ ಒಂದಾದ್ರೂ ಐತೇನ್ಲಾ?’ ಎಂದು ಪ್ರಶ್ನಿಸಲಿಲ್ಲವಾ?!
ಸಿದ್ದರಾಮಯ್ಯ ಸರ್ಕಾರ 2013ರಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲೂ ಜಿಲ್ಲೆಗೊಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುವ ಭರವಸೆ ನೀಡಿತ್ತು. ಈ ಬಾರಿಯೂ ಅದೇ ರೀತಿಯಾದ ಸ್ವಲ್ಪ ಬೇರೆ ಭರವಸೆ ನೀಡಿದ್ದಾರೆ.
ಕರ್ನಾಟಕದ ಈ ಬಾರಿಯ ಒಟ್ಟು ಬಜೆಟ್‌ 2.1 ಲಕ್ಷ ಕೋಟಿ ರೂಪಾಯಿ. ಅದರಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರುಪಾಯಿಯನ್ನು ನೀರಾವರಿಗೇ ಮೀಸಲಿಡುತ್ತಾರಂತೆ. ಹಾಗಾದರೆ ಬಾಕಿ ಯೋಜನೆಗಳು ಮಣ್ಣು ಪಾಲೇ?
ಇಲ್ಲ, ಇದಕ್ಕೆಲ್ಲ ನಾವು ಉತ್ತರ ಕೇಳಲೇ ಬಾರದು, ಆನಂದ್‌ ಸಿಂಗ್‌ ಹೇಳಿದ ಹಾಗೆ ‘ವೋಟ್‌ ಕೇಳಕ್‌ ಬಂದಿದಾರೆ. ವೋಟ್‌ ಹಾಕ್ತೀಯಾ ಹಾಕು.. ಅವೆಲ್ಲ ಮಾತಾಡ್ಬಾರ್ದು. ’ ಮಾತಾಡಿದರೆ ಅವರ ಹೆಸರನ್ನು ನೋಟ್‌ ಮಾಡಿಟ್ಟುಕೊಂಡು ಮುಂದೆ ನೋಡಿಕೊಳ್ಳಲಾಗುತ್ತದೆ.
ಪ್ರಜೆಗಳೇ ಮತದಾನದ ದಿನ ಮೈ ಮರೆಯದಿರಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya