ಸಿಂಬುವಿನ ಹಾಗೆ ಮಾತನಾಡುವುದಕ್ಕೂ ಧೈರ್ಯ ಬೇಕು ಪ್ರಕಾಶ್‌ ರೈ!

 

ನಿನ್ನೆ ತಮಿಳು ಮತ್ತು ಕನ್ನಡಿಗರ ಫೇಸ್‌ಬುಕ್‌ ಪ್ರೊಫೈಲ್‌ ತುಂಬೆಲ್ಲ ಒಂದೇ ವಿಡಿಯೊ ಹರಿದಾಡುತ್ತಿತ್ತು . ಕಾವೇರಿ ನೀರಿನ ಬಗ್ಗೆ ತಮಿಳಿನ ಖ್ಯಾತ ನಟ ಸಿಂಬು ಆವೇಶದಿಂದ ಮಾತನಾಡುತ್ತಿರುವ ವಿಡಿಯೋ ಅದು. ತಮಿಳು ಅಷ್ಟಾಗಿ ಅರ್ಥವಾಗದ ಕಾರಣ ಮೊದಲಿಗೆ ಆತ ಕನ್ನಡಿಗರನ್ನು ಬಯ್ಯುತ್ತಿದ್ದಾನೆ ಎಂದುಕೊಂಡೆ. ಆದರೆ ಅರಾಡಿದ ಮಾತು ಕೇಳಿ ಒಮ್ಮೆ ಚ್ಚರಿ ಪಟ್ಟೆ.

ಸಿಂಬು ಅವರ ಮಾತಿನ ಒಂದು ಭಾಗ ಹೀಗಿತ್ತು: ನೀರು ಕರ್ನಾಟಕದಿಂದ ಹರ್ಕೊಂಡ್‌ ಬರ್ತಾ ಇದೆ. ನಾವು ಒಂದು ಮನೇಲಿದ್ದೀವಿ, ಒಂದು ಕುಟುಂಬದಲ್ಲಿದ್ದೀವಿ. ನಮ್ಮ ತಮ್ಮ ಜಾಸ್ತಿ ಊಟ ಮಾಡಿದ್ರೆ, ನಮ್‌ ತಾಯಿ ಜಾಸ್ತಿ ಊಟ ಮಾಡಿದ್ರೆ ಯಾಕ್‌ ಜಾಸ್ತಿ ಊಟ ಮಾಡಿದೀರಾ ಅಂತ ಕೇಳ್ತೀವಾ? ಯಾಕ್‌ ಕೇಳಲ್ಲ ಹೇಳಿ? (ಪತ್ರಕರ್ತರ ಉತ್ತರ: ನಮ್‌ ಮನೆಯವರು ಅಂತ) ಹಾಗೇನೇ ಕನ್ನಡಿಗರೂ ನಮ್ಮವರೇ ತಾನೇ.. ನಮಗಿಂತ ಮುಂಚಿನ ಸಾಲಿನಲ್ಲಿ ಅವರಿದ್ದಾರೆ ಅಲ್ವ? ಅವರು ತಗೊಂಡು-ಕೊಡ್ಲಿ ಅಂತ ಹೇಳ್ತಾ ಇದ್ದೀನಿ. ಅವ್ರು ಪ್ರೀತಿಯಿಂದ ಕೊಟ್ಟಿದ್ದನ್ನ ನಾವ್‌ ತಗೊಳೋಣ. ಅದನ್ನ ಯಾಕೆ ನಾವು ಭಿಕ್ಷೆ ಅಂತ ತಿಳ್ಕೋಬೇಕು? ಅಷ್ಟರ ಮಟ್ಟಿಗೆ ಮಾನವೀಯತೆ ಇರುವವನೇ ರೀ ತಮಿಳಿಗ..
ಇದನ್ನು ಕೇಳಿದ ಯಾರಿಗಾದೂ ಅಚ್ಚರಿಯಾಗದೇ ಇರುವುದಿಲ್ಲ. ಏಕೆಂದರೆ, ತಮಿಳು ನಾಡಿನಲ್ಲೇ ಹುಟ್ಟಿ, ಅಲ್ಲೇ ಬೆಳೆದು, ದೊಡ್ಡ ನಟನಾಗಿ ಅಲ್ಲೇ ಹಣ ಸಂಪಾದನೆ ಮಾಡುತ್ತಿರುವ ಸಿಂಬು ಕರ್ನಾಟಕದ ಪರ ಮಾತನಾಡುತ್ತಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ. ವಾಸ್ತವವನ್ನು ಅರಿತರೂ ಹೀಗೆ ತಮಿಳುನಾಡಿನಲ್ಲಿ ಮಾತನಾಡುವುದು ಕಷ್ಟ. ಅಲ್ಲಿನ ಪತ್ರಕರ್ತರೇ ರೊಚ್ಚಿಗೆದ್ದು ಪ್ರಶ್ನೆ ಕೇಳಿದಾಗ ಅವರಿಗಿಂತ ದೊಡ್ಡದಾಗಿ ಕೂಗಾಡಿ, ಮೊದಲು ಮನುಷ್ಯರಾಗ್ರೀ.., ಆಮೇಲೆ ನೀರು ಎಂದು ಹೇಳಿದ್ದ ಕೇಳಿ ನನ್ನ ಮೈ ರೋಮಗಳು ಎದ್ದು ನಿಂತಿತ್ತು.

ಆದರೆ ಇದೇ ಸಮಯದಲ್ಲಿ ಪ್ರಕಾಶ್‌ ರೈ ನೆನಪಾಗಿ ಬಹಳ ಬೇಸರವಾಯಿತು. ಇದಕ್ಕೆ ಕಾರಣವಿದೆ. ನಿಮಗೆ ನೆನಪಿದೆಯಾ? ಆಗ ಕಾವೇರಿ ಗಲಭೆ ಬಹಳ ಜೋರಾಗಿದ್ದ ಸಮಯ. 2016ರ ಸೆಪ್ಟೆಂಬರ್‌ 30ರಂದು ಜನಶ್ರೀ ವಾಹಿನಿಯಲ್ಲಿ ಪ್ರಕಾಶ್‌ ರೈ ಅವರ ಒಂದು ಸಂದರ್ಶನ ಪ್ರಸಾರವಾಗಿತ್ತು. ಅದರಲ್ಲಿ ನಿರೂಪಕಿ ಕಾವೇರಿ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಿದಾಗ ಪ್ರಕಾಶ್‌ ರೈಗೆ ಉರಿದು ಹೋಗಿತ್ತು. ಒಬ್ಬ ಕನ್ನಡಿಗನಾಗಿ ಕಾವೇರಿಯನ್ನೂ ಸಮರ್ಥಿಸಿಕೊಳ್ಳುವುದಕ್ಕಾಗದ ಪ್ರಕಾಶ್‌ ರೈ ಹೇಳುತ್ತಾರೆ: ನಾನ್‌ ಏನ್ರೀ ಪಾಪ ಮಾಡಿದೀನಿ ನಿಮಗೆ? ಏನ್‌ ಮಾಡಿದೀನಿ? ಇಂಥ ಪ್ರಶ್ನೆ ಎಲ್ಲ ಕೇಳಿ ನನ್ನನ್ನ ಯಾಕ್‌ ಸಿಕ್ಕಾಕಿಸ್ತಾ ಇದೀರಾ? ಹಾ? ನಾನೊಬ್ಬ ನಟ, ನಟನಾಗೇ ಇರ್ತೀನಿ.. ನಿಮ್‌ ಟಿವಿ ಇನ್ಮೇಲೆ ನನ್‌ ಹತ್ರ ಯಾವತ್ತೂ ಬರಬೇಡಿ ಎಂದು ಕೂಗಾಡಿದ್ದರು.

ತಮಿಳಿಗನಾಗಿ ಕರ್ನಾಟಕ ಕುಡಿದು ಉಳಿದ ಕಾವೇರಿಯನ್ನು ಕುಡಿಯಬೇಕು ಎನ್ನುವ ಸಿಂಬು ಅವರಿಗೂ ಕರ್ನಾಟಕದಲ್ಲಿ ಹುಟ್ಟು, ತಮಿಳುನಾಡಿಗೆ ದುಡಿಯಲು ಹೋದ ಪ್ರಕಾಶ್‌ ರೈಗೂ ಎಷ್ಟು ವ್ಯತ್ಯಾಸ ಇದೆ ಅಲ್ವಾ? ಎಲ್ಲಿ ತನಗೆ ಅವಕಾಶ ತಪ್ಪಿಹೋಗುತ್ತೆ ಎಂದು ಕನ್ನಡ ನಿರೂಪಕಿಯನ್ನೇ ಬಯ್ದ ಪ್ರಕಾಶ್‌ ರೈ ನಮಗೆ ಹೆಮ್ಮೆಯೆನಿಸುತ್ತಾರೋ ಅಥವಾ ವಾಸ್ತವತೆ ಅರಿತು, ತನ್ನ ಅವಕಾಶದ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಧೈರ್ಯದಿಂದ ಮಾತನಾಡಿದ ಸಿಂಬು ಹೆಮ್ಮೆಯೆನಿಸುತ್ತಾರೋ?

ಒಬ್ಬ ಕನ್ನಡಿಗರಾಗಿ ಅಂದು ತಮ್ಮ ತಾಯಿ ಕಾವೇರಿಯ ಪರ ಮಾತನಾಡದ ಪ್ರಕಾಶ್‌ ರೈ ಕಂಡು ಇಂದು ನನಗೆ ನಾಚಿಕೆಯಾಗುತ್ತಿದೆ. ಯಾಕೆ ಬೇಕು ಇಂಥ ಬಾಳು?
ಹಾಗಾದರೆ ಪ್ರಕಾಶ್‌ ರೈಗೆ ರಾಜಕೀಯವೇ ಇಷ್ಟ ಇಲ್ಲವಾ? ಹಾಗೆಂದೇನೂ ಅಲ್ಲ. ದೆಹಲಿಯಲ್ಲಿ ತಮಿಳುನಾಡಿನ ರೈತರು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆಗ ತಮಿಳುನಾಡಿನಿಂದ 2017ರ ಮಾರ್ಚ್‌ 24ಕ್ಕೆ ಓಡೋಡಿ ಬಂದ ಪ್ರಕಾಶ್‌ ರೈ ರೈತರ ಜೊತೆಗೇ ಕುಳಿತು ಪ್ರತಿಭಟನೆ ನಡೆಸಿ, ರೈತರಿಗೆ ನೀರು ಸಿಗಬೇಕು, ನ್ಯಾಯ ಸಿಗಬೇಕು ಎಂದು ಹೇಳಿ ಹೋಗಿದ್ದರು. ಪ್ರಶ್ನೆ ಕೇಳ್ತೀನಿ.. ಉತ್ತರಿಸದವರು ಓಡಿ ಹೋಗುತ್ತಾರೆ ಎನ್ನುವ ಪ್ರಕಾಶ್‌ ರೈ ಅವರೇ ನೀವು ಓಡಿ ಹೋಗದೇ ಉತ್ತರಿಸಿ ನೋಡೋಣ.

ರೈತ ಎಲ್ಲ ಕಡೆಯೂ ಒಂದೇ. ಬೆಂಬಲಿಸಬಾರದು ಎನ್ನುತ್ತಿಲ್ಲ. ಆದರೆ ಇಲ್ಲಿ ನಮ್ಮ ಪ್ರಕಾಶ್‌ ರೈ ನಾಡಿನ ರೈತರು ಸಾಯುತ್ತಿದ್ದರೂ ಪರವಾಗಿಲ್ಲ, ಕಾವೇರಿ ಪ್ರತಿಭಟನೆಯಲ್ಲಿ ಅವರು ಬರುವುದು ಬೇಡ, ಕಡೇ ಪಕ್ಷ ಕಾವೇರಿ ಕರ್ನಾಟಕದವರದ್ದು ಎಂದು ಹೇಳುವ ಯೋಗ್ಯತೆ ಇಲ್ಲದೇ ನಾನು ನಟ ಎಂದು ಅಲ್ಲಿ ತಮಿಳುನಾಡಿನ ರೈತರ ಜತೆ ಪ್ರತಿಭಟನೆ ಮಾಡುವುದಕ್ಕೆ ದೆಹಲಿಗೆ ಹೋಗುತ್ತಾರಲ್ಲ, ಪ್ರಕಾಶ್‌ ರೈ ನಿಮ್ಮನ್ನು ಹೇಗೆಂದು ಬಣ್ಣಿಸೋಣ? ಇಂಥ ಪ್ರಕಾಶ್‌ ರೈಗಿಂತ ನಿಜವಾದ ಗಂಡಸಿನ ಹಾಗೆ ಮಾತನಾಡಿದ ಸಿಂಬು ನಮಗೆ ಹೆಮ್ಮೆ ಅಲ್ಲವಾ?

ಪ್ರಕಾಶ್‌ ರೈ ನಿಮಗೆ ಪ್ರಶ್ನೆ ಕೇಳಿ ಅಷ್ಟೇ ಅಭ್ಯಾಸ ಅನಿಸುತ್ತದೆ. ನಾನು ಕೇಳುವ ಪ್ರಶ್ನೆಗೂ ತಾಕತ್ತು ಎನ್ನುವುದಿದ್ದರೆ ಉತ್ತರಿಸಿಬಿಡಿ.
ಕರ್ನಾಟಕದ ಕಡೆ ಪ್ರಕಾಶ್‌ ರೈ ಬರುವುದೇ ಇಲ್ಲ. ಅವರು ಸಂಪೂರ್ಣ ತಮಿಳಿಗರು ಎಂದೇ ಚರ್ಚೆ ಮಡಲು ಊಹಿಸಿಕೊಳ್ಳೋಣ. ಆದರೆ 2018ರ ಜನವರಿಯಲ್ಲಿ ಇದೇ ಪ್ರಕಾಶ್‌ ರೈ ಅವರನ್ನು ಯಾವನೂ ಮಾತನಾಡಿಸದೇ ಇದ್ದರೂ ಹೇಳುತ್ತಾರೆ ನಮ್ಮ ಕರ್ನಾಟಕದ ರೈತರಿಗೆ ನೀರು ಬೇಕು. ರಾಜಕೀಯವನ್ನೆಲ್ಲ ಬಿಟ್ಟು ಮಹದಾಯಿ ನೀರು ಕೊಡಿಸಿ ಎಂದರು. ಅಬಾಬಾ… ಏನ್‌ ಕಾಳಜಿ, ಏನ್‌ ಪ್ರೀತಿ.. 2016ರಲ್ಲಿ ಏನ್‌ ಪಾಪ ಮಾಡಿದ್ದೆ ನಾನು ಎಂದು ಕೇಳಿದ ಪ್ರಕಾಶ್‌ ರೈ ಇವರೇನಾ ಎನ್ನುವಷ್ಟು?

ಯಾಕ್‌ ಬೇಕು ಸ್ವಾಮಿ? ಇಂಥ ನಾಟಕ? ಇದಲ್ಲದೇ ಮೊನ್ನೆ ಭಾಷಣ ಬಿಗಿಯುತ್ತಾ ಹೇಳುತ್ತಾರೆ ಒಬ್ಬ ಗೌರಿಯನ್ನು ಕೊಂದರೆ ನನ್ನಂಥ ಪ್ರಕಾಶ್‌ ರೈ ಮತ್ತೆ ಹುಟ್ಟುತ್ತಾನೆ ಎಂದು. ಕಾವೇರಿ ಗಲಭೆ ಆದಾಗಲೂ ಹುಟ್ಟಿದ್ರಿ ಅಲ್ವಾ ಪ್ರಕಾಶ? ಆಗ ಮಾತಾಡಲಾಗದ ಅಸಮರ್ಥರು ಈಗ ಮಾತಾಡುತ್ತಿರುವುದೇಕೆ? ಊಟಕ್ಕಿಲ್ಲ ಉಪ್ಪಿನಕಾಯಿ ಅದೆಂಥಕ್ಕೂ ಸಮ ಎಂದ ಹಾಗೆ ಸರಿಯಾದ ಟೈಮಿಗೆ ಮಾತನಾಡದ ನೀವು ಸಹ ಅದೇ. ನಿಮಗೂ ಸಿಂಬುಗೂ ಇರುವ ವ್ಯತ್ಯಾಸ ತಿಳಿಯಿತಾ?

ನೀವ್ಯಾಕೆ ಕರ್ನಾಟಕದ ಪರ ಮಾತನಾಡ್ತಾ ಇದೀರ ಎಂದು ತಮಿಳು ಪತ್ರಕರ್ತರು ಅವಾಜ್‌ ಹಾಕಿ ಕೇಳುವ ಪ್ರಶ್ನೆಗೆ ಸಿಂಬು ಕೊಟ್ಟ ಉತ್ತರವೇನು ಗೊತ್ತಾ? ಕೇಳಿ: ನಾವು ರಂಪಾಟ ಮಾಡಿದ್ರೆ ಉಪಯೋಗ ಇಲ್ಲ . ನೀವು ಬಳಸಿ ಮಿಕ್ಕಿದ್ದನ್ನ ಮಾತ್ರ ನಮಗೆ ಕೊಡಿ ಎಂದಷ್ಟೇ ಕೇಳಬಹುದು. ಅಣೆಕಟ್ಟು ಕಟ್ಟಿ ನೀರನ್ನ ತಡೀಬಹುದು. ಆದ್ರೆ ಒಂದು ಅಳತೆ ಮೀರಿ ನೀರು ಬಂತು ಅಂದ್ರೆ, ನೀವು ಅದನ್ನ ಹೇಗೆ ತಡೆದು ನಿಲ್ಲಿಸೋದಿಕ್ಕೆ ಸಾಧ್ಯ? ಆ ನೀರನ್ನ ಕರ್ನಾಟಕ ಬಿಡ್ಲೇ ಬೇಕು. (ಪತ್ರಕರ್ತರಿಗೆ)ಆ ನೀರನ್ನ ಬಿಡೋದಿಲ್ಲ…ಹಿಡಿದಿಟ್ಕೊಂಡ್‌ ಬಿಡ್ತಾರೆ ಅಂತ ಅಂದ್ಕೋಬೇಡಿ. ಅಲ್ಲಿರೋ ಎಲ್ಲಾ ತಾಯಂದಿರೂ ಅಯ್ಯೋ, ನೀರು ಕೊಡೋದಕ್ಕಾಗ್ತಿಲ್ಲವಲ್ಲ ಅಂತ ನೊಂದು ಕಣ್ಣೀರು ಹಾಕಿದ್ರೆ, ಆ ಕಣ್ಣೀರೂ ನೀರೇ. ಆ ತಾಯಂದಿರ ಕಣ್ಣಲ್ಲಿ ನೀರು ಬಂತು ಅಂದ್ರೆ, ಆ ತಾಯಂದಿರ ಪ್ರೀತಿಯ ಅಣೆಕಟ್ಟು ಒಡೀತು ಅಂದ್ರೆ ತಮಿಳು ನಾಡಿನ ಜನರಿಗೆ ಆ ದೇವರು ನೀರು ಕೊಡ್ತಾನೋ ಇಲ್ವೋ ಅಂತ ನೀವೇ ನೋಡಿ ಬೇಕಾದ್ರೆ’

ನಟನಾಗಿರುವುದು ಹೇಗೆ ಎಂಬುದಕ್ಕೂ ನಿಮಗೆ ಸಿಂಬು ಪಾಠ ಹೇಳಿಕೊಡುತ್ತಾರೆ.. ಮತ್ತು ಸತ್ಯದ ಪರವಾಗಿ ನಿಲ್ಲುವುದು ಹೇಗೆ ಎಂಬುದಕ್ಕೂ ಸಿಂಬು ಪಾಠ ಹೇಳಿಕೊಡುತ್ತಾರೆ.
ಇಷ್ಟಾಗಿ ಕೊನೆಗೆ ಸಿಂಬು ಧೈರ್ಯವಾಗಿ ಹೇಳುವ ಮಾತೇನು ಗೊತ್ತಾ? : ಅಸಲಿಗೆ ನಿಜವಾಗಿಯೂ ಸಮಸ್ಯೆ ಇರೋದು ಕರ್ನಾಟಕ ಮತ್ತೆ ತಮಿಳುನಾಡಿನ ಮಧ್ಯೆ ಅಲ್ಲ. ಕೆಟ್ಟ ರಾಜಕಾರಣಿಗಳು ಕಾವೇರಿ ತಾಯಿಯನ್ನ ರಾಜಕೀಯಕ್ಕೆ ಬಳಸಿಕೊಂಡು ಮೇಲೆ ಬರುವುದಕ್ಕೆ ನಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ಸಿಂಬು ಈ ಮಾತು ತಮಿಳಿಗರಿಗೆ ಹೇಳಿದ್ದು ಎನ್ನುವುದಕ್ಕಿಂತ ಪ್ರಕಾಶ್‌ ರೈಗೆ ಹೇಳಿದಂತಿದೆ.

ಪ್ರಕಾಶ್‌ ರೈ ಅವರೇ, ಭಾಷೆ-ನಾಡು-ನದಿ-ನೀರಿನ ಮೇಲಿನ ಪ್ರೀತಿ ಒಳಗಿನಿಂದ ಬರಬೇಕಾಗಿದ್ದು. ಕಬ್ಬನ್‌ ಪಾರ್ಕ್‌ ಸ್ಟೇಷನ್ನಿಗೆ ಹೋಗಿ ಯಾರದ್ದೋ ಮೇಲೆ ದೂರು ಕೊಟ್ಟಂತಲ್ಲ ಅಥವಾ ನಿಮ್ಮ ಹಿಂದೆ ಬಂದ ಪೊಲೀಸರನ್ನು ನೋಡಿ, ದುಷ್ಟರು ಎಂದುಕೊಂಡು ನನ್ನನ್ನ ಯಾರೋ ಫಾಲೋ ಮಾಡ್ತಿದಾರೆ ಎಂದು ಸುದ್ದಿ ಮಾಡಿದಂತಲ್ಲ ನೀರಿನ ವಿಚಾರ. ಕಲಿಯಿರಿ, ಸಿಂಬು ಅವರಿಂದಾದರೂ ಒಂಚೂರು ಕಲಿಯಿರಿ. ಚಿಕ್ಕವರಿಂದ ಕಲಿಯುವುದಕ್ಕೆ ಮತ್ಸರವೇಕೆ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya