ದಾದಾಗಿರಿಯ ಆ ಐದು ವರ್ಷಗಳು!

ಚುನಾವಣೆ ಮೇ 12ಕ್ಕೇ ಇದೆ. ನಮ್ಮ ಕನ್ನಡಿಗರು ಎಷ್ಟು ಹೃದಯ ವೈಶಾಲ್ಯರು ಎಂದರೆ, ಐದು ವರ್ಷದಲ್ಲಿ ಸರ್ಕಾರ ನಮ್ಮನ್ನೆಷ್ಟು ಗೋಳು ಹೊಯ್ದುಕೊಂಡಿದೆ ಎಂಬುದನ್ನೇ ಮರೆತುಬಿಡುತ್ತೇವೆ. ಆದರೆ ಒಂದೊಂದೂ ಹಿಂಸೆಯನ್ನು ನೆನೆಯುತ್ತಾ ವೋಟು ಹಾಕುವುದಕ್ಕೆ ನಾವೆಲ್ಲರೂ ತಯಾರಾಗಿರಬೇಕು . ಪ್ರತಿಯೊಂದರ ಲೆಕ್ಕ ಚುಕ್ತಾ ಮಾಡುವ ಸಮಯ ನಮಗೆ ಬಂದಿದೆ.

ಕಾಂಗ್ರೆಸ್‌ ಸರ್ಕಾರ ಈಗ ಜನಾಶೀರ್ವಾದ ಯಾತ್ರೆ ಮಾಡಿತು. ಇದು ಯಾವ ಕಾರಣಕ್ಕಾಗಿ ಎಂದು ಈಗಲೂ ತಿಳಿಯುತ್ತಿಲ್ಲ . ತಾವು ಮಾಡಿರುವ ಘನಂದಾರಿ ಕೆಲಸವು ಜನಾಶೀರ್ವಾದದಿಂದ ಆದದ್ದೋ ಅಥವಾ ಮಾಡಿರುವ ಕೆಲಸಕ್ಕೆ ಜನಾಶೀರ್ವಾದ ಬೇಡಲು ಹೊರಟಿದ್ದಾರೋ ಎಂಬುದೇ ಎಲ್ಲರಿಗೂ ವಿಸ್ಮಯವಾಗಿದೆ. ಬರುವ ಮೇ ತಿಂಗಳಿನಲ್ಲಿ ಚುನಾವಣೆ ಎಂದು ಈಗಾಗಲೇ ಘೋಷಣೆಯಾಗಿದೆ. ಆದರೆ ನಾವು ಯಾವುದೇ ಪಕ್ಷಕ್ಕೆ ವೋಟು ಹಾಕುವುದಕ್ಕೆ ಮುನ್ನ ಅವರು ಏನೇನೆಲ್ಲ ಘನಂದಾರಿ ಕೆಲಸ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಜರೂರತ್ತು ಖಂಡಿತ ಇರುತ್ತದೆ. ಆದರೆ ಕಾಂಗ್ರೆಸ್‌ ಏನು ಮಾಡಿದೆ ಎಂದು ನೋಡುತ್ತಾ ಹೋದರೆ ಲಾಟುಗಟ್ಟಲೆ ಗೂಂಡಾಗಿರಿ ಮಾಡಿದ್ದೇ ಸಿಗುತ್ತದೆಯೇ ವಿನಾ, ಗಾಂಧಿಗಿರಿಯ ಲವಲೇಶವೂ ಕಾಣುವುದಿಲ್ಲ. ಕೇವಲ ಗಾಂಧಿಜೀ ಹೆಸರನ್ನು ತಮ್ಮ ಹೆಸರಿನ ಹಿಂದೆ ಮರ್ಯಾದೆ ಬುಟ್ಟು ಕದ್ದು ಇಟ್ಟುಕೊಂಡವರ ಪಕ್ಷದ 5 ವರ್ಷದ ಗಾಂಧಿಗಿರಿ ಹೇಗಿದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಯಾರಾದರೂ ಕಾಂಗ್ರೆಸಿಗರು ಮನೆ ಬಾಗಿಲ ಮುಂದೆ ಬಂದು ವೋಟು ಕೇಳಿದರೆ, ಕಾಲರ್‌ಪಟ್ಟಿ ಹಿಡಿದು ಕೆಳಗಿರುವ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕಿದೆ. ಏಕೆಂದರೆ, 5 ವರ್ಷದ ಹಿಂದೆ ಮಾಡಿದ ತಪ್ಪಿಗೆ, ಕೇವಲ ಒಂದು ದಿನ ಆದರೂ ಪ್ರಜಾಪ್ರಭುತ್ವದಲ್ಲಿ ಬದುಕುವುದನ್ನು ಕಲಿಯೋಣ ಅಲ್ಲವೇ?
ಪಿಎಫ್‌ಐ ಮೇಲಿದ್ದ 175 ಪ್ರಕರಣಗಳ ತೆರವು
ಯಾವುದೇ ಸರ್ಕಾರವಾಗಲಿ ಅದು ಬಂದ ನಂತರ ರಾಜ್ಯದ ಜನತೆಗೆ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎಂದು ತಿಳಿಯುವುದು ತಮ್ಮ ಆರಂಭದ ಕೆಲಸಗಳಿಂದ. ಅಲ್ಲೇ ತಮ್ಮ ನೀಚ ಬುದ್ಧಿ ತೋರಿಸಿಬಿಟ್ಟರೆ, ಜನರಿಗೆ ಇವರು ಮುಂದೆ ಐದು ವರ್ಷದಲ್ಲಿ ಏನು ಮಾಡುತ್ತಾರೆ ಎಂಬುದು ತಿಳಿದುಬಿಡುತ್ತದೆ. ಈ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇ ಇಸ್ಲಾಮಿಕ್‌ ಮೂಲಭೂತವಾದಿಗಳ ಸಂಘಟನೆ ಪಿಎಫ್‌ಐ ಮೇಲಿದ್ದ 175 ಪ್ರಕರಣಗಳನ್ನು ಕೈಬಿಟ್ಟಿದ್ದು. ನಾಚಿಕೆಯಾಗುವುದಿಲ್ಲವೇ? ಹಿಂದೆ ಮುಂದೆ ನೋಡದೆ, ಜಿಹಾದಿಗಳ ಮೇಲಿದ್ದ ಕೊಲೆ ಪ್ರಕರಣಗಳನ್ನೆಲ್ಲ ತೆಗೆಸಿದ ಇವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಮುಸ್ಲಿಮರ ಮುಖ್ಯಮಂತ್ರಿಯೋ ಎಂದು ಕೇಳಬೇಕಿದೆ. ಇದು ಸಿದ್ದರಾಮಯ್ಯ ತಾನು ಮುಂದೆ ಐದು ವರ್ಷ ಎಂಥ ಭೀಕರ ಆಡಳಿತ ನೀಡುತ್ತೇನೆ ಎಂದು ನೀಡಿದ ಕುರುಹು ಅಥವಾ ದುರಾಡಳಿತ ನೀಡಲು ಮಾಡಿಕೊಳ್ಳುತ್ತಿರುವ ತಯಾರಿ. ಇದು ನಮ್ಮ ಜನಕ್ಕೆ ಆಗ ಅಂತೂ ತಿಳಿಯಲಿಲ್ಲ. ಈಗಲಾದರೂ ಇದನ್ನು ನೆನಪಿನಲ್ಲಿಟ್ಟುಕೊಂಡು ತಕ್ಕ ಪಾಠ ಕಲಿಸಬೇಕಿದೆ.

ಭೈರತಿ ಬಸವರಾಜ್‌ರಿಂದ ಟ್ರಾಫಿಕ್‌ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ
ಜೂನ್‌ 27ಕ್ಕೆ ರಂದು ಬೆಂಗಳೂರಿನ ಬಾಣಸವಾಡಿಯ ಜೀವನಹಳ್ಳಿ ಕ್ರಾಸ್‌ನಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಇದು ಬೆಂಗಳೂರಿನ ಹಣೆಬರಹ. ಎಲ್ಲಿ ಹೋದರೂ ಜಾಮ್‌ ತಪ್ಪಿದ್ದಲ್ಲ . ನಾವಾಗಿದ್ದರೆ ಏನು ಮಾಡುತ್ತಿದ್ದೆವು? ಸರ್ಕಾರಕ್ಕೆ ಬಯ್ಯುತ್ತಾ ಬಿಸಿಲಲ್ಲಿ ಬೇಯುತ್ತಿದ್ದೆವು ಆದರೆ ಕೆ.ಆರ್‌. ಪುರಂ ಶಾಸಕ ಭೈರತಿ ಬಸವರಾಜ್‌ ಮಾತ್ರ ಹಾಗಲ್ಲ. ಅವರು ಶಾಸಕ ಅಲ್ವೇ? ಅದಕ್ಕೆ ಕಾರಿಂದ ಎದ್ದು ಹೋಗಿ ಪೊಲೀಸ್‌ ಪೇದೆ ಭೀಮಪ್ಪ ನಾಯಕ್‌ ಅವರಿಗೆ ಸರಿಯಾಗಿ ಒಂದು ಕೆನ್ನೆಗೆ ಬಾರಿಸಿಯೇ ಬಿಟ್ಟರು. ಅಲ್ಲಿದ್ದ ಜನರು ಭೈರತಿ ಅವರ ಪೋಜು ನೋಡಿ ಚಪ್ಪಾಳೆ ತಟ್ಟಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಘಟನೆಯಿಂದ ಭೈರತಿ ಬಸವರಾಜ್‌ರ ಯೋಗ್ಯತೆ ಅಂತೂ ತಿಳಿಯಿತು. ಇವರ ಯೋಗ್ಯತೆಗೆ 20 ನಿಮಿಷ ತಾಳ್ಮೆಯಿಂದ ಕಾಯುವುದಕ್ಕಾಗುವುದಿಲ್ಲ ಎಂದರೆ ಇಂಥವರೆಲ್ಲ ಜನಪ್ರತಿನಿಧಿಗಳು ಎಂದು ಕರೆಯಿಸಿಕೊಳ್ಳುವುದಕ್ಕೆ ಇನ್ನೂ ಅರ್ಹರಾ ಎಂಬ ಪ್ರಶ್ನೆ ಮೂಡುತ್ತದೆ. ಈಗ ಆ ಭೀಮಪ್ಪ ಎಲ್ಲಿ ವರ್ಗಾವಣೆ ಭಾಗ್ಯ ಪಡೆದಿದ್ದಾರೋ ದೇವರನ್ನು ಬಿಟ್ಟರೆ ಭೈರತಿ ಬಸವರಾಜ್‌ಗೇ ಗೊತ್ತು.

ಇದೊಂದೇ ಅಲ್ಲ, ಬಸವರಾಜ್‌ ಅವರೇ ಹಿಂಗಾದರೆ ಅವರ ಚೇಲಾಗಳೂ ಹಾಗೇ ಇದ್ದಾರೆ. 2018ರ ಫೆಬ್ರವರಿ 21ರಂದು ಕೆ.ಆರ್‌. ಪುರಂನಲ್ಲಿ ಟ್ರಾಫಿಕ್‌ ಪೊಲೀಸ್‌ ಪೇದೆ ಭೈರತಿ ಬಸವರಾಜ್‌ ಬೆಂಬಲಿಗರನ್ನು ನಿಲ್ಲಿಸಿದ್ದಕ್ಕೆ, ಅವರ ಸಮವಸ್ತ್ರ ಹರಿದು ಹೊಡೆದಿದ್ದಾರೆ. ಯಥಾ ರಾಜ, ತಥಾ ಪ್ರಜಾ ಮತ್ತು ಚೇಲಾ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?

ಜಾರ್ಜ್‌ ಮಗ ರಾಣಾ, ಕಾಡಿನ ರಾಜ
ರಾಜ್ಯದ ಜನರಿಗೆ ಕೆ.ಜೆ. ಜಾರ್ಜ್‌ ಯಾರು ಎಂದು ಪರಿಚಯಿಸಬೇಕಿಲ್ಲ. ಅದರಲ್ಲೂ ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಎ1 ಆರೋಪಿಯಾಗಿರುವುದು ಸನ್ಮಾನ್ಯ ಜಾರ್ಜ್‌ ಅವರು. ಇವರ ಮಗ ರಾಣಾ ಜಾರ್ಜ್‌ ಅಪ್ಪನಿಗೇ ಸೆಡ್ಡು ಹೊಡೆಯುತ್ತಾನೆ. ಅರಣ್ಯಗಳಿಗೆ ತನ್ನ ಸ್ವಂತ ಕಾರು ತೆಗೆದುಕೊಂಡು ಸ್ನೇಹಿತರ ಜೊತೆ ಹೋಗುತ್ತಾನೆ, ಪಾರ್ಟಿ ಮಾಡುತ್ತಾನೆ. ರಾಣಾನನ್ನು ಯಾರೂ ತಡೆಯುವುದಕ್ಕೆ ಹೋಗುವುದಿಲ್ಲ . ಕಾರಣ, ಅಲ್ಲಿನ ಸಿಬ್ಬಂದಿಗಳನ್ನು ಬೇಕೆಂದ ಹಾಗೆ ನೇಮಕ ಮಾಡಿಕೊಳ್ಳುವವನೂ ಅವನೇ. ನೇಮಕಕ್ಕೆ ಅರ್ಜಿ ಕರೆಯುವುದು ಹಾಗೆಲ್ಲ ಏನೂ ಇಲ್ಲ. ಯಾವ ಕೆಲಸ ಖಾಲಿ ಇಲ್ಲದಿದ್ದರೂ ಹೊಸ ಹುದ್ದೆಯನ್ನಾದರೂ ಸೃಷ್ಟಿಸಿ ತನ್ನ ಪರಭಾವದಿಂದ ಕೆಲಸ ಕೊಡಿಸುತ್ತಾನೆ. ಈ ವಿಚಾರಕ್ಕೆ ಅಂದು ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಸಹ ಬರುತ್ತಿರಲಿಲ್ಲ. ಅಪ್ಪ ಸಚಿವನಾದ ಮಾತ್ರಕ್ಕೆ ಮಗ ದರ್ಪ ತೋರಿಸಬೇಕು ಎಂದೇನು ಯಾವ ಸಂವಿಧಾನದಲ್ಲೂ ಬರೆದಿಲ್ಲ. ಹಾಗಿದ್ದ ಮೇಲೆ ಈ ದರ್ಪವೇಕೆ? ರಾಣಾರೇ ಉತ್ತರಿಸಬೇಕು.

ಟಿಪ್ಪು ಜಯಂತಿ
ತಲೆ ಮೇಲೆ ತಲೆ ಬೀಳಲಿ, ನಾವು ಟಿಪ್ಪು ಜಯಂತಿ ಮಾಡೇ ಮಾಡ್ತೀವಿ. ಇದು ಸಿದ್ದರಾಮಯ್ಯ ಸರ್ಕಾರದ ನೀತಿ. ನುಡಿದಂತೇ ನಡೆದಿದ್ದಾರೆ. 2015ರಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭದಲ್ಲಿ ಕುಟ್ಟಪ್ಪರನ್ನು ಬಲಿ ಪಡೆಯುವ ಮೂಲಕ ತಮ್ಮ ಭಾಷೆಯನ್ನು ಪೂರೈಸಿದ್ದಾರೆ.

ಒಟ್ಟಾರೆ ಟಿಪ್ಪು ಜಯಂತಿ ಮಾಡಿ ಮುಸ್ಲಿಮರನ್ನು ಓಲೈಸುವ ಹುನ್ನಾರ. ಅದೆಷ್ಟರ ಮಟ್ಟಿಗೆ ಎಂದರೆ ಮೊದಲ ಬಾರಿ ಟಿಪ್ಪು ಸುಲ್ತಾನನ ಜಯಂತಿ ಆಚರಿಸಿದ್ದು ಅಲ್ಪಸಂಖ್ಯಾತರ ಡಿಪಾರ್ಟ್‌ಮೆಂಟ್‌ನಿಂದ. ಆಗಲೇ ಜಯಂತಿ ವಿರೋಧಿಸಿದ ಕೋಮುಗಲಭೆಯಲ್ಲಿ ಕುಟ್ಟಪ್ಪ ಮೃತಪಟ್ಟಿದ್ದರು. ಈಗ ಜಯಂತಿ ನಿಲ್ಲಿಸಿದರೆ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ, ನಿಲ್ಲಿಸದೇ ಮುಂದುವರಿಸಿದರೆ ಮುಸ್ಲಿಮರ ವಿರುದ್ಧ ಬರುವ ಆರೋಪಗಳು ಹೆಚ್ಚುತ್ತಲೇ ಇರುತ್ತವೆ. ಮುಸ್ಲಿಮರನ್ನು ಓಲೈಸಿದಂತೆಯೂ ಆಗಬೇಕು, ಅವರನ್ನು ಬಚಾವ್‌ ಮಾಡಲೂಬೇಕು ಎಂದು ಯೋಚಿಸಿದಾಗ ಹೊಳೆದದ್ದೇ ಜಯಂತಿ ಮಾಡುವ ಉಸ್ತುವಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜನರ ವಿರೋಧದ ನಡುವೆಯೂ ಹಿಂದೂ ಸಂಘಟನೆಗಳ ನಾಯಕರ ಬಳಿ ಬಾಂಡ್‌ ಬರೆಸಿಕೊಂಡು ಟಿಪ್ಪು ಜಯಂತಿ ಆಚರಣೆ.

ಕುಟ್ಟಪ್ಪನವರ ಸಾವು. ಪ್ರಿನ್ಸ್‌ ಮಹಮ್ಮದ್‌ ನಲಪಾಡ್‌ ಗೂಂಡಾಗಿರಿ
ಕೇರಳದಿಂದ ಓಡಿ ಬಂದು ಬೆಂಗಳೂರಿನ ವಸಂತ ನಗರದಲ್ಲಿರುವ ಕಂಟೋನ್ಮೆಂಟ್‌ ರೈಲ್ವೆ ಸ್ಟೇಷನ್‌ನಲ್ಲಿ ಮಜ್ಜಿಗೆ ಮಾಡುತ್ತಿದ್ದ ವ್ಯಕ್ತಿ ಎಂದು ನಮ್ಮ ನಿಮ್ಮನ್ನೆಲ್ಲ ಆಳುತ್ತಿರುವ ಶಾಸಕ. ಅವರು ಹೇಗೆ ಅಷ್ಟು ಬೇಗ ಶ್ರೀಮಂತರಾದರು ಎಂದು ಕೆದಕುವ ಇರಾದೆ ನನಗಿಲ್ಲ. ಯಾಕೆಂದರೆ, ಅವರು ಕುಟುಂಬ ಹೇಗೆ, ಎಂಥ ಸಂಸ್ಕೃತಿಯಿಂದ ಬೆಳೆದು ಬಂದಿದೆ ಎಂದು ಅವರ ಮಗನೇ ಸಾಬೀತು ಮಾಡಿದ್ದಾನೆ.

ಫೆ.19, 2018ರಂದು ಬೆಂಗಳೂರಿನ ಫರ್ಜೀ ಕೆಫೆಗೆ ಹೋಗಿ, ವಿದ್ವತ್‌ ಎಂಬ ಒಬ್ಬನೇ ಒಬ್ಬ ಹುಡುಗನಿಗೆ ತನ್ನ 15 ಜನರನ್ನು ಸೇರಿಸಿಕೊಂಡು ಸಾಯುವ ಹಾಗೆ ಹೊಡೆದ ಗಂಡಸು ಮಹಮ್ಮದ್‌ ಹಾರಿಸ್‌ ನಲಪಾಡ್‌. ಯಾವ ಕಾರಣಕ್ಕೆ ಹೊಡೆದಿದ್ದು? ಓಡಾಡುವಾಗ ವಿದ್ವತ್‌ನ ಕಾಲು ತಾಕಿತು ಎಂಬ ಒಂದೇ ಒಂದು ಕಾರಣಕ್ಕೆ. ಇಂಥ ಕೆಲಸ ಮಾಡಿದಾಗ ಬುದ್ಧಿ ಹೇಳಬೇಕಾದ ಅಪ್ಪ ಎನ್‌.ಎ. ಹಾರಿಸ್‌ ಮಾಡಿದ್ದೇನು? ಮಗನನ್ನು ಒಂದು ದಿನ ಮನೆಯಲ್ಲೇ ಇಟ್ಟುಕೊಂಡು, ಮಾರನೇ ದಿನ ಮಾಧ್ಯಮದ ಮುಂದೆ ಬಂದು ತನ್ನ ಮಗ ಬರುತ್ತಾನೆ ಎಂದು ಹೇಳಿದರು. ಇನ್ನು ಮಗ ಜೈಲಿಗೆ ಹೋದಾಗ ಅವನನ್ನು ಬಿಡಿಸಲು ಪ್ರಯತ್ನ ಮಾಡಿದ ಅಪ್ಪ ಹಾರಿಸ್‌, ಒತ್ತಾಯದಿಂದ ಐಸಿಯುದಲ್ಲಿದ್ದ ವಿದ್ವತ್‌ನನ್ನು ಜನರಲ್‌ ವಾರ್ಡ್‌ಗೆ ಶಿಫ್ಟ್‌ ಮಾಡಿ, ವಿದ್ವತ್‌ ಹುಶಾರಾಗಿದ್ದಾನೆ, ನನ್ನ ಮಗನಿಗೆ ಜಾಮೀನು ಕೊಡಿ ಎಂದು ಕೇಳಿದ ಅಪ್ಪ ಎಲ್ಲಾದರೂ ಇದ್ದರೆ ಅದು, ಕಾಂಗ್ರೆಸ್‌ನ ಈ ಶಾಸಕ ಮಾತ್ರ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೊರಿಸಿ ಎಂದ ಗಾಂಧೀಜಿ ಎಲ್ಲಿ? ಮುಖ ಮೂತಿ ನೋಡದೇ ಚಚ್ಚುವವರೆಲ್ಲಿ? ವೋಟು ಮಾಡುವ ಮುನ್ನ, ಹೊರಗೆ ಬರುವ ಮಹಮ್ಮದ್‌ ನಲಪಾಡ್‌ ಅಪ್ಪನಿಗೆ ಅಧಿಕಾರ ಬಂದರೆ ಇನ್ನು ಹೇಗೇಗೆ ವರ್ತಿಸಬಹುದು ಎಂದು ಆಲೋಚಿಸುವುದು ಉತ್ತಮ.

ಪೆಟ್ರೋಲ್‌ ನಾರಾಯಣಸ್ವಾಮಿ
ಫೆಬ್ರವರಿ 20, 2018ರಂದು ಪೀಣ್ಯದ ಹೊರಮಾವು ಬಿಬಿಎಂಪಿ ಕಚೇರಿಯ ಒಂದು ಕೋಣೆಯಲ್ಲಿ ಪೆಟ್ರೋಲ್‌ ಸುರಿಯಲಾಗಿತ್ತು. ಪೆಟ್ರೋಲ್‌ ಸುರಿದ ಮಹಾಶಯ ಬೇರೆ ಯಾರೂ ಅಲ್ಲ. ಬದಲಿಗೆ ಕೆ.ಆರ್‌.ಪುರದ ಇದೇ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣಸ್ವಮಿ. ಪೆಟೊ›ೕಲ್‌ ಹಿಡಿದು ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ ನಾರಾಯಣ ಸ್ವಾಮಿ ಅಲ್ಲಿದ್ದ ಅಧಿಕಾರಿಗೆ ಖಾತೆಯ ವಿಚಾರದಲ್ಲಿ ಕೆಲಸ ಧಮ್ಕಿ ಬೇರೆ ಹಾಕಿದ್ದಾರೆ. ಇವರ ಧಮ್ಕಿಗೆ ಹೆದರಿ ಅಧಿಕಾರಿ ದೂರನ್ನು ಸಹ ಕೊಡದೇ, ಇವರೇ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮಾಧ್ಯಮದಲ್ಲಿ ವಿಷಯ ಪ್ರಸ್ತಾಪವಾದಾಗ ಎಚ್ಚೆತ್ತ ಪೊಲೀಸರು ಹುಡುಕಿದರೆ ಹುಲಿಯಂತೆ ಘರ್ಜಿಸಿದ್ದ ನಾರಾಯಣಸ್ವಾಮಿ ಇಲಿಯಂತೆ ಬಚ್ಚಿಟ್ಟುಕೊಂಡಿದ್ದರು. ಪರಿಸ್ಥಿತಿ ತಿಳಿಯದಾಗ ವಾಪಸ್‌ ಬಂದಿದ್ದರು. ಈಗ ಪ್ರಶ್ನೆ ಏನೆಂದರೆ ಅಧಿಕಾರಿಗಳು ಕೆಲಸ ಮಾಡಲಿಲ್ಲ ಎಂದು ಸಾಮಾನ್ಯರೂ ಹೀಗೆ ವರ್ತಿಸಬಹುದೇ? ಅಥವಾ ಹಾಗೆ ಮಾಡಿದ್ದರೆ ಪೊಲೀಸರು ಸುಮ್ಮನಿರುತ್ತಿದ್ದರೇ?

ರಮಾನಾಥ ರೈ ಪುತ್ರ ದೀಪು ರೈ ಪುಂಡಾಟ
ಕೊಡಗು ಜಿಲ್ಲೆ ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿತ್ತು. 2016ರ ಜುಲೈ 25ರಂದು ತಡರಾತ್ರಿ ಮಧ್ಯ ರಸ್ತೆಯಲ್ಲಿಯೇ ಕೂಗಾಡುತ್ತಿದ್ದರು . ಇದನ್ನು ಪ್ರಶ್ನಿಸಿದ್ದಕ್ಕೆ ಸಾರ್ವಜನಿಕರಿಗೇ ಅವಾಜ್‌ ಹಾಕಿ, ಅನುಚಿತ ವರ್ತನೆ ಶುರು ಮಾಡಿಕೊಂಡಿದ್ದರು. ಕೊಡಗಿನ ಜನ ನೋಡುವಷ್ಟು ನೋಡುತ್ತಾರೆ. ಆಮೇಲೆ ಕೈ ಹಚ್ಚುತ್ತಾರೆ. ದುರಹಂಕಾರ ನೆತ್ತಿಗೇರಿದ್ದನ್ನು ಗೂಸಾ ಕೊಡುವುದರ ಮೂಲಕ ಇಳಿಸಿದ್ದಾರೆ. ಹೊಡೆತ ತಿಂದ ಕಾಂಗ್ರೆಸ್‌ ನಾಯಕರ ಪುತ್ರ ಬಾಲ ಮುದುರಿಕೊಂಡು ಜಾಗ ಖಾಲಿ ಮಾಡಿದ್ದಾರೆ.

ರಸ್ತೆಯಲ್ಲಿ ಅಟ್ಟಿಸಿ ಹೊಡೆದರು
ಯಶವಂತಪುರದಲ್ಲಿ ಇಬ್ಬರು ಜನರನ್ನು ರಸ್ತೆಯಲ್ಲೇ ಅಟ್ಟಿಸಿಕೊಂಡು ಹೋಗಿ ಸಾಯುವ ಹಾಗೆ ಹೊಡೆದರು. ಶಾಸಕ ಎಸ್‌.ಟಿ ಸೋಮಶೇಖರ್‌ ಕಡೆಯವರು. ಸಮಾವೇಶ ನಡೆಸುವುದಕ್ಕೆ ಇನ್ನೊಬ್ಬರ ಸ್ವಂತ ಜಾಗ ಕೇಳಿದರು. ತಮ್ಮ ಜಾಗದಲ್ಲಿ ಕಂಪೌಂಡ್‌ ಹಾಕಿದ್ದರಿಂದ ಸಮಾವೇಶಕ್ಕೆ ಅವಕಾಶ ನೀಡಲು ವ್ಯಕ್ತಿ ನಿರಾಕರಿಸಿದ್ದಕ್ಕೆ ಅವನ ಸೈಟಿಗೆ ನುಗ್ಗಿ ಅಲ್ಲಿದ್ದ ಕೆಲಸಗಾರರನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೊಡೆದರು.

ವೈದ್ಯರಿಗೆ ಹೊಡೆದ ವಿನಯ್‌
ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, 2013ರ ಜೂನ್‌ 8ರಂದು ಕಿಮ್ಸ್‌ನ ಡಾ. ದೇವರಾಜ್‌ ರಾಯಚೂರ್‌ಗೆ ರೌಡಿಯ ಹಾಗೆ ಹೊಟ್ಟೆಯ ಮೇಲೆ ಹೊಡೆದಿದ್ದರು. ಕೊನೆಗೆ ವೈದ್ಯರ ಸಂಘ ಒಟ್ಟಾಗಿ ದೂರು ದಾಖಲಿಸಿದ ಮೇಲೆ, ಕಮೀಷನರ್‌ ಕಚೇರಿಗೆ ಬಂದು ಕ್ಷಮೆಯಾಚಿಸಿದ್ದರು. ಇದಲ್ಲದೇ ವಿನಯ್‌ ಕುಲಕರ್ಣಿ ಮೇಲೆ ಮತ್ತೊಂದು ಕೊಲೆ ಆರೋಪವೂ ಇದೆ. ಆದರೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಅಷ್ಟೇ ಯಾಕೆ, ಬಹುತೇಕ ಸಮಯ ಮುಖ್ಯಮಂತ್ರಿಗಳ ಮನೆಯಲ್ಲೇ ಆರಾಮಾಗಿ ಕುಳಿತಿರುತ್ತಾರೆ. ಪೊಲೀಸ್‌, ಕಾನೂನಿನ ಭಯವೇ ಇಲ್ಲದ ವ್ಯಕ್ತಿ ನಮ್ಮ ನಾಯಕ ಎಂದು ಹೇಳಿಕೊಳ್ಳಲು ನಮಗೆಷ್ಟು ಹೆಮ್ಮೆ ಅಲ್ಲವೇ?

ಕವಿತಾ ಸನೀಲ್‌ ಕರಾಟೆ ಪ್ರಯೋಗ
ಖಾಸಗಿ ವಿಚಾರಕ್ಕೆ 2017ರ ಅಕ್ಟೋಬರ್‌ 27ರಂದು ಕವಿತಾ ಸನಿಲ್‌ ತನ್ನ ವಾಚ್‌ಮನ್‌ ಮನೆಗೆ ನುಗ್ಗಿ ಅವನ ಹೆಂಡತಿಗೆ ಕರಾಟೆ ಪಂಚ್‌ ಕೊಟ್ಟು ಬಂದಿದ್ದರು. ಇದಷ್ಟೇ ಅಲ್ಲದೇ ವಾಚ್‌ಮನ್‌ನ ಹಸುಗೂಸನ್ನು ಲೆಕ್ಕಿಸದೇ ನೆಲಕ್ಕೆ ಬಿಸಾಡಿ ಬಂದಿದ್ದಾರೆ.ಹೀಗಂತ ಸ್ವತಃ ವಾಚ್‌ಮನ್‌ನ ಹೆಂಡತಿಯೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆದರೆ ಕರಾಟೆ ಕವಿತಾ ಮಾತ್ರ ನಂಗೇನೂ ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂದು ಜಾರಿಕೊಂಡಿದ್ದಾರೆ. ಮತದಾರರಿಗೆ ಕರಾಟೆ ಪಂಚ್‌ ಕೊಡುವ ಕಾಂಗ್ರೆಸಿಗರು, ಯಾವ ಮುಖ ಇಟ್ಟುಕೊಂಡು ವೋಟು ಕೇಳುವುದಕ್ಕೆ ಹೋಗುತ್ತಾರೆ ಎಂಬುದೇ ಅಚ್ಚರಿ.

ಮೋಯಿಯುದ್ದೀನ್‌ ಬಾವಾ
ಮಂಗಳೂರಿನ ಮತ್ತೊಬ್ಬ ತುಂಡು ಮೊಯಿಯುದ್ದೀನ್‌ ಬಾವಾ ಬಗ್ಗೆ ಕೇಳಿರುತ್ತೀರಿ. ಬಹಳ ಸಾಧು ಸ್ವಭಾವದವರಂತೆ ಪೋಸು ಕೊಡುವ ಇವರು ಒಂದು ಆಸ್ತಿ ವ್ಯಾಜ್ಯದಲ್ಲಿ ಹಸ್ತಕ್ಷೇಪ ಮಾಡಿ, 82ರ ವೃದ್ಧರಿಗೆ ಪೊಲೀಸರಿಂದಲೇ ಬೆದರಿಕೆ ಹಾಕಿಸಿದ ಆರೋಪವನ್ನು ಹೊತ್ತಿದ್ದಾರೆ. ಇನ್ನು ಕೆಲ ಮೂಲಭೂತ ಮುಸ್ಲಿಂ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಇವರ ಫೋಟೊ ಬಹಳವೇ ಹರಿದಾಡುತ್ತಿದೆ.

ಗೌರಿ ಲಂಕೇಶ್‌ ಹತ್ಯೆ
ಗೌರಿ ಲಂಕೇಶ್‌ ಕಾಂಗ್ರೆಸ್‌ನ ಒಂದು ಬೃಹತ್‌ ಹಗರಣವನ್ನು ಪತ್ರಿಕೆಯಲ್ಲಿ ಬರೆಯುವವರಿದ್ದರು. ಅದಕ್ಕೆ ತಯಾರಿಯೂ ಮಾಡಿಕೊಂಡಿದ್ದರು. ಆದರೆ ಬರೆಯುವ ಸ್ವಲ್ಪ ದಿನದ ಮುಂಚೆ ಹತ್ಯೆಯಾಗುತ್ತಾರೆ. ಇದಕ್ಕೂ ಕಾಂಗ್ರೆಸ್‌ಗೂ ಏನು ಸಂಬಂಧವಿಲ್ಲ ಬಿಡಿ. ಇದೆಲ್ಲ ಹಿಂದೂ ಕೋಮುವಾದಿಗಳದ್ದೇ ಕೆಲಸ. ಪೊಲೀಸರಿಂದ ರಿಪೋರ್ಟ್‌ ಸಹ ಹಾಗೇ ಬರುತ್ತದೆ ಬಿಡಿ.

ಐಟಿ ಕಚೇರಿಗೆ ಕಲ್ಲೆಸೆದ ಕಾಂಗ್ರೆಸಿಗ
ಡಿಕೆಶಿ ಮನೆ ಮೇಲೆ ಐಟಿ ದಾಳಿಯಾದಾಗ, ಆದಾಯ ತೆರಿಗೆ ಇಲಾಖೆಯ ಆಫೀಸಿಗೆ ಕಲ್ಲೆಸೆದ ಮಂಗಳೂರಿನ ಕಾಂಗ್ರೆಸ್‌ ಕಾರ್ಪೊರೇಟರ್‌ ಎ. ಸಿ ವಿನಯ್‌ರಾಜ್‌ ಮೇಲೆ ಪ್ರಕರಣ ದಾಖಲಾಗಿದ್ದರೂ ಬಂಧಿಸಲಿಲ್ಲ. ಅಭಿಮಾನ ಏನು ಬೇಕಾದರೂ ಮಾಡಿಸುತ್ತದೆ ಎಂದು ಕೇಳಿದ್ದೆವು. ಆದರೆ ಐಟಿ ಕಚೇರಿಗೆ ಕಲ್ಲೂ ಎಸೆಯುವ ಹಾಗೆ ಮಾಡುತ್ತದೆ ಎಂದು ನೋಡಿದ್ದು ವಿನಯ್‌ರಾಜ್‌ ಪ್ರಕರಣದಿಂದಲೇ.

ರಾಜಾ ಕಾಲುವೆ
ಬೆಂಗಳೂರಿನ ರಾಜಾಕಾಲುವೆ ಮೇಲೆ ಕಟ್ಟಿದ್ದ ಬಡವರ ಮನೆಗಳನ್ನು ರಾತ್ರೋರಾತ್ರಿ ಉರುಳಿಸಿಬಿಟ್ಟ ಸರ್ಕಾರ, ಅದೇ ರಾಜಾ ಕಾಲುವೆ ಮೇಲೆ ನಿರ್ಮಿಸಿದ್ದ ಶ್ಯಾಮನೂರು ಶಿವಶಂಕರಪ್ಪನವರ ಆಸ್ಪತ್ರೆ, ಮಂತ್ರಿ ಡೆವಲಪರ್ಸ್‌, ನಟ ದರ್ಶನ್‌ ಮನೆಯನ್ನು ಮಾತ್ರ ತೆರವುಗೊಳಿಸಿಲ್ಲ. ಅಥವಾ ತೆರವುಗೊಳಿಸುವುದಕ್ಕೆ ಧಮ್‌ ಇಲ್ಲ. ನಿಜವಾಗಿ ಜನಪರ ಆಡಳಿತ ನೀಡಿದ್ದರೆ, ಜನರ ಮನೆಗಳನ್ನು ರಾತ್ರೋ ರಾತ್ರಿ ಕೆಡವಿ ಹಾಕುತ್ತಿತ್ತಾ? ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿ ನೋಡಿ. ಅವರಿಗೆ ಉತ್ತರಿಸುವ ಧಮ್‌ ಇದ್ದರೆ!

ಮೈಸೂರು ರಾಜರಿಗೆ ಏಕವಚನ
ಸಿದ್ದರಾಮಯ್ಯನವರ ದರ್ಪದ ಬಗ್ಗೆ ನಮಗೆ ಅರಿವಾಗುವುದು ಅವರಾಡುವ ಮತುಗಳಿಂದ. ದೇಶದ್ರೋಹ ಮಾಡಿ, ಮುಸ್ಲಿಮರ ಪಾಲಿಗೂ ಕಾಫಿರ್‌ ಆದ ನಾಲಾಯಕ್‌ ಯಾಸಿನ್‌ ಎಂಬ ಅಬ್ಬೇಪಾರಿ ಉಗ್ರನಿಗೆ ಅವರು, ಇವರು ಅಂತೆಲ್ಲ ಮರ್ಯಾದೆ ಕೊಟ್ಟರು. ಆದರೆ ಮೈಸೂರು ಮಹಾರಾಜರಿಗೆ ಮಾತ್ರ, ಜನರ ದುಡ್ಡಲ್ಲಿ ಮಾರ್ಕೆಟ್‌ ಕಟ್ಟಿಬಿಟ್ಟರೆ ಅವನೇನು ದೊಡ್ಡ ರಾಜನಾ? ಎಲ್ಲರೂ ಮಾಡ್ತಾರೆ ಎಂದು ಏಕವಚನದಲ್ಲಿ ಮಾತಾಡಿದರು. ಅದೇ ಪ್ರಶ್ನೆಯನ್ನು ಜನರೂ ಕೇಳಬಹುದಲ್ಲವೇ? ನಮ್ಮ ತೆರಿಗೆ ಹಣದಲ್ಲಿ ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಎಂದು ಬೀಗುವ ಸಿದ್ದರಾಮಯ್ಯ ಏನು ಅವರ ಪಿತ್ರಾರ್ಜಿತ ಆಸ್ತಿಯನ್ನೋ ಅಥವಾ ಇವರ ಜೇಬಿನಿಂದ ಹಣ ಕೊಟ್ಟು ಅಭಿವೃದ್ಧಿ ಮಾಡಿಸದವರೂ ಮುಖ್ಯಮಂತ್ರಿಗಳೇ? ಇದು ಸಿದ್ದರಾಮಯ್ಯ ಸಂಸ್ಕೃತಿಯನ್ನು ಸಾರುತ್ತದೆ.

ಕನ್ನಡ ಪರ ಸಂಘಟನೆಗಳಿಗೇ ಸಿದ್ದರಾಮಯ್ಯನವರೇ ಹೆಡ್‌
ಕನ್ನಡ ಸಂಘಟನೆಗಳು ಜನವರಿ 27ಕ್ಕೆ ಮಹದಾಯಿ ನೀರು ಬೇಕೆಂಬ ಆಗ್ರಹವನ್ನಿಟ್ಟು ಕರ್ನಾಟಕ ಬಂದ್‌ ಮಾಡಬೇಕೆಂದಿದ್ದರು. ಆದರೆ ಸಿದ್ದರಾಮಯ್ಯನವರು ತಮ್ಮ ಕುತಂತ್ರದಿಂದ ಬಂದನ್ನು ಅಮಿತ್‌ ಶಾ ಬರುವ ದಿನ ಅಂದರೆ, ಜನವರಿ 25ಕ್ಕೆ ಇಟ್ಟುಕೊಳ್ಳಿ ಎಂದು ಸಂಘಟನೆಗಳಿಗೆ ಹೇಳಿದ್ದರಂತೆ. ಹೀಗಂತ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದರು. ನಂತರ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಜಾರಿಕೊಂಡು ಬಿಟ್ಟರು.

ಇದಕ್ಕಿಂತ ಮುಂಚೆ ಕರ್ನಾಟಕ ರಕ್ಷಣಾ ವೇದಿಕೆಯವರು ಸನ್ನಿ ಲಿಯೋನ್‌ ಕಾರ್ಯಕ್ರಮಕ್ಕೆ ಮೂವತ್ತು ಲಕ್ಷ ಕೇಳಿ ಸಿಕ್ಕಿಹಾಕೊಂಡ ಮೇಲೆ ಇದು ಮೋದಿಯವರ ಷಡ್ಯಂತ್ರ ಎಂದಿತ್ತು. ಇದಾದ ಮೇಲೆ ರಕ್ಷಣಾ ವೇದಿಕೆ ಬಹಿರಂಗವಾಗೇ ಕಾಂಗ್ರೆಸ್‌ಗೆ ಬೆಂಬಲಿಸುತ್ತೇವೆ, ಮತ್ತು ಜನರೆಲ್ಲ ಕಾಂಗ್ರೆಸ್‌ಗೇ ವೋಟು ಹಾಕಬೇಕು ಎಂದು ಕೇಳಿಕೊಂಡಿತ್ತು. ಹೇಳಿ ಮುಖ್ಯಮಂತ್ರಿಗಳೇ ಕನ್ನಡಪರ ಸಂಘಟನೆಗಳು ಮಾಡುವ ಒಂದೊಂದು ಗಲಭೆಗೆ ನೀವು ಅವರಿಗೆ ಕೊಡುವ ಅನುದಾನವೆಷ್ಟು?

ಪ್ರತಿಭಾ ಕುಳಾಯಿಗೆ ಲೈಂಗಿಕ ಕಿರುಕುಳ
ಯಾರದ್ದೋ ಪಕ್ಷದ ಬಗ್ಗೆ ಮಾತನಾಡುವುದೇಕೆ? ಸ್ವತಃ ಪ್ರತಿಭಾ ಕುಳಾಯಿಯವರಿಗೇ ಪಕ್ಷದಲ್ಲಿ ರಕ್ಷಣೆಯಿಲ್ಲ ಎಂದು ಇತ್ತೀಚೆಗೆ ನಡೆದ ಘಟನೆಯಿಂದ ತಿಳಿಯುತ್ತದೆ. ಸುರತ್ಕಲ್‌ನ ಕಾಂಗ್ರೆಸ್‌ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿಯವರಿಗೆ ಕಾಂಗ್ರೆಸ್‌ ಪಕ್ಷದವರೇ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಸ್ವತಃ ಪ್ರತಿಭಾ ಅವರೇ ಹೇಳಿದ್ದಾರೆ. ಜಿಲ್ಲಾ ಕಾರ್ಯದರ್ಶಿಯಾಗಿರುವ ಅಬ್ದುಲ್‌ ಸತ್ತಾರ್‌ ಎಂಬಾತ ಪ್ರತಿಭಾ ಅವರ ಮೈ ಕೈ ಮುಟ್ಟಿದ್ದಾನೆ. ಇದಕ್ಕೆ ಪ್ರತಿಭಾ ಕಪಾಳಕ್ಕೆ ಬಾರಿಸಿದ್ದಾರೆ. ಮಾಧ್ಯಮಗಳಿಗೂ ತಿಳಿಸಿದ್ದಾರೆ. ಆದರೆ ತಾವು ಹೆಣ್ಣಿಗೆ ಮಹತ್ವ ಕೊಡುತ್ತೇವೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಪಕ್ಷ ಮಾಡಿದ್ದೇನು ಗೊತ್ತೇ? ನೀವು ಪಕ್ಷದ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ್ದೀರಿ. ಹಾಗಾಗಿ ಯಾಕಾಗಿ ನಿಮ್ಮನ್ನು ನಾವು ಪಕ್ಷದಿಂದ ಕೈಬಿಡಬಾರದು ಎಂದು ಕಾರಣ ಕೊಡಿ ಎಂದು ಕಾಂಗ್ರೆಸ್‌ ಪ್ರತಿಭಾ ಕುಳಾಯಿಗೇ ಶೋಕಾಸ್‌ ನೋಟಿಸ್‌ ನೀಡಿದೆ. ಅಂದರೆ, ತಮ್ಮ ಭ್ರಷ್ಟಾಚಾರ, ಅಕ್ರಮಗಳನ್ನು ಬೆಂಬಲಿಸದವರು ಸ್ವತಃ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದರೂ ಅವರ ವಿರುದ್ಧವೂ ಕಾಂಗ್ರೆಸ್‌ ನಿಲ್ಲುತ್ತದೆ ಎಂದಾಯಿತಲ್ಲ? ಇಂಥ ಪಕ್ಷ ರಾಜ್ಯದಲ್ಲಿ ಸಮರ್ಥ ಆಡಳಿತ ನೀಡುತ್ತದೆ ಎಂದು ನಂಬುವುದಾದರೂ ಹೇಗೆ?

ಇದು ಬಹಳ ಸಣ್ಣ ಪಟ್ಟಿಯಷ್ಟೇ. ಕಾಂಗ್ರೆಸ್‌ನ ಐದು ವರ್ಷಗಳ ದಬ್ಬಾಳಿಕೆಯ ಅದೂ ಕೇವಲ ಸಾರ್ವಜನಿಕರ ಮೇಲಿನ ಹಲ್ಲೆಯ ಬಗ್ಗೆ ಬರೆಯುತ್ತಾ ಹೋದರೆ ವೀರಪ್ಪ ಮೋಯ್ಲಿಯವರು ಅವರೇ ಬರೆದಿದ್ದಾರೆ ಎಂದು ಹೇಳಿಕೊಳ್ಳುವ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯಕ್ಕಿಂತಲೂ ದೊಡ್ಡ ಪುಸ್ತಕ ಆಗುತ್ತದೆ. ಆದರೆ, ಕಾಂಗ್ರೆಸ್‌ನ ನೀಚ ಬುದ್ಧಿ ಮತ್ತು ದುರಾಡಳಿತವನ್ನು ಸಾಬೀತು ಮಾಡುವುದಕ್ಕೆ ಇವಿಷ್ಟೂ ಪ್ರಕರಣಗಳು ಸಾಕು. ಸಿದ್ದರಾಮಯ್ಯ ರಾಜ್ಯಕ್ಕೆ ಕೊಡುವ ನಾಳೆ ಸಾಯುವ ಮುದುಕಿಗೂ ಪ್ರಯೋಜನವಿಲ್ಲದ ಭಾಗ್ಯಗಳಿಗಾಗಿ ಕಾಂಗ್ರೆಸಿಗರ ಕೈಯಲ್ಲಿ ಹೊಡೆತ ತಿನ್ನುವ ದರ್ದು ಕನ್ನಡಿಗರಿಗಿಲ್ಲ. ಚುನಾವಣೆಯ ಸಮಯದಲ್ಲಿ ತಲೆಗೆ ಒಂದೆರಡು ಸಾವಿರ ರುಪಾಯಿ ಜೊತೆಗೆ ಬಸ್‌ ಚಾರ್ಜ್‌ನ ಆಸೆಗೆ ಬಿದ್ದು ಐದು ವರ್ಷಗಳಲ್ಲಿ ತಲೆಯನ್ನೇ ಕಳೆದುಕೊಳ್ಳುವ ಸಂಭವವನ್ನು ಹೆಚ್ಚಿಸಿಕೊಳ್ಳದಿರಿ. ಅಥವಾ ವೋಟ್‌ ಮಾಡದೇ ಹೊರಗುಳಿಯದಿರಿ. ಐದು ವರ್ಷದ ನಿಮ್ಮ ಆಕ್ರೋಶ ಮತಗಳ ಮೂಲಕ ಹೊರಬರಲಿ. ನಿಜವಾದ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗೋಣ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya