ಸಿದ್ದರಾಮಯ್ಯಗೂ, ಲಿಂಗಾಯತಕ್ಕೂ ಏನು ಸಂಬಂಧ?

ಕ್ಷಮಿಸಿ. ಜಾತಿ ಬಗ್ಗೆ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ. ಆದರೂ ಇದು ಜಾತಿಯ ವಿಷಯ ಆದ್ದರಿಂದ, ತನ್ನದಲ್ಲದ ಜಾತಿಯವರು ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮೂಗು ತೂರಿಸುತ್ತಿರುವುದರಿಂದ ಅನಿವಾರ್ಯವಾಗಿ ಸಿದ್ದರಾಮಯ್ಯನವರ ಜಾತಿಯ ಬಗ್ಗೆ ಹೇಳಬೇಕಾಗುತ್ತದೆ. ಕುರುಬ ಸಮುದಾಯದ ಸಿದ್ದರಾಮಯ್ಯಗೂ, ಲಿಂಗಾಯತಕ್ಕೂ ಏನು ಸಂಬಂಧ?
ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸ್ಥಾಪಿಸುವ ಬಗ್ಗೆæ ಎಲ್ಲ ಸ್ವಾಮೀಜಿಗಳ ಸಭೆ ಕರೆಯಲಾಯಿತು? ಯಾರು ಕರೆದದ್ದು? ಮಾತೆ ಮಹಾದೇವಿಯೋ ಅಥವಾ ವೀರಶೈವ/ಲಿಂಗಾಯತದ ಇನ್ಯಾವುದೋ ಸ್ವಾಮೀಜಿಯ ನೇತೃತ್ವದಲ್ಲಿ ಅಲ್ಲ. ಕುರುಬ ಜನಾಂಗಕ್ಕೆ ಸೇರಿದ ಸಿದ್ದರಾಮಯ್ಯ. ಲಿಂಗಾಯತ ಜಾತಿಯ ಬಗ್ಗೆ ಏನೆಂದರೆ ಏನೂ ತಿಳಿಯದ ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಏನೆಂದು ಮಾತನಾಡುತ್ತಾರೆ? ಹೇಳಿ, ಇಮಾಮ್‌ ಸಾಬಿಗೂ ಗೋಕುಲಾಷ್ಟಮಿಗೂ ಏನ್‌ ಸಂಬಂಧ?
ಹೌದು, ಒಡೆದು ಆಳುವ ಸಿದ್ದರಾಮಯ್ಯನವರ ನೀತಿ ಶುರುವಾಗುವುದು ಇಲ್ಲಿಂದಲೇ. ಇದು ಕೇವಲ ಸಿದ್ದರಾಮಯ್ಯನವರ ನೀತಿಯಾಗಿರದೇ ಕಾಂಗ್ರೆಸ್‌ನ ನೀತಿಯಾಗಿದೆ. ಇವರ ಒಡೆದು ಆಳುವ ನೀತಿ ನೋಡಿ ಹೇಗಿದೆ ಎಂದು ಹರ್ಯಾಣದಲ್ಲಿ ಜಾಟ್‌ ಜನಾಂಗಕ್ಕೆ ಮೀಸಲು ಬೇಕು ಎಂಬ ಹೋರಾಟ ಶುರುವಾಗುವಂತೆ ಮಾಡಿದ್ದೂ ಕಾಂಗ್ರೆಸ್‌. ಆ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ, ಸುಮಾರು 10 ದಿನಗಳು ಇಡೀ ರಾಜ್ಯವೇ ದಂಗುಬಡಿದದು ಹೋಗಿತ್ತು. ಅಕ್ಷರಶಃ ನರಕವಾಗಿತ್ತು. ಎಲ್ಲೆಲ್ಲೂ ಹಿಂಸೆ, ನಷ್ಟ. ಇಷ್ಟೆಲ್ಲ ಮಾಡಿದ್ದಕ್ಕೆ ಕಾರಣ: ಜಾಟ್‌ ಮೀಸಲಿಗಲ್ಲ. ಇವರ ಬಿಟ್ಟಿ ವೋಟಿಗೆ.
ಇದಾದ ಮೇಲೆ ಬಂದಿದ್ದೇ ಗುಜಾರತ್‌ಗೆ. ಅಲ್ಲಿ ಹಾರ್ದಿಕ್‌ ಪಟೇಲ್‌ ಎಂಬ ಅವಿವೇಕಿಯೊಬ್ಬನನ್ನು ಯಾರಿಗೂ ಗೊತ್ತಿಲ್ಲದಂತೆ ಎತ್ತಿ ಕಟ್ಟಿ, ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿಸಿತ್ತು. ಭಾನುವಾರ ಬಿಕನಾಸಿಯ ಹಾಗೆ ಅಲೆಯುತ್ತಿದ್ದವನೊಬ್ಬ ಸೋಮವಾರ ಸುದ್ದಿಯಾಗಿಬಿಟ್ಟ. ಯುವ ನಾಯಕ ಎಂದೆಲ್ಲ ಎನಿಸಿಕೊಂಡ. ಈ ಹಾರ್ದಿಕ್‌ ಪಟೇಲ್‌ ಬೇರೆ ಯಾರೂ ಅಲ್ಲ, ಕಾಂಗ್ರೆಸ್‌ನ ಬಿತ್ತಿರುವ ವೋಟು ಒಡಕ ಎಂದು ಗೊತ್ತಾಗುವುದಕ್ಕೆ ಬಹಳ ದಿನಗಳು ಬೇಕಿರಲಿಲ್ಲ. ರಾಹುಲ್‌ ಗಾಂಧಿ ಉಳಿದುಕೊಂಡಿರುವ ಹೋಟೆಲ್‌ಗೆ ಹೋಗಿ, ಗುಪ್ತವಾಗಿ ಭೇಟಿ ಮಾಡಿ ಸೂಟ್‌ಕೇಸ್‌ ಸಮೇತ ಹೊರ ಬರುತ್ತಿರುವ ವಿಡಿಯೊ ಬಹಿರಂಗವಾದ ಮೇಲೆ ಎಲ್ಲರಿಗೂ ಅವನ ಹಾರ್ದಿಕ್‌ನ ಮುಖ ಪರಿಚಯವಾಗಿದ್ದು. ಇಷ್ಟೆಲ್ಲ ಮಾಡಿದ್ದು ಯಾಕಾಗಿ? ಕೇವಲ ಪಟೇಲ್‌ ಸಮುದಾಯದ ವೋಟಿಗಾಗಿ.

ಇನ್ನು ಮಹಾರಾಷ್ಟ್ರ. ಮರಾಠರು ಮತ್ತು ದಲಿತರ ನಡುವೆ ತಂದಿಟ್ಟು ಮಜಾ ನೋಡುವುದರಲ್ಲಿ ಸಫಲರಾಗಿದ್ದೂ ಇದೇ ಕಾಂಗ್ರೆಸ್‌. ವರ್ಷಗಳ ಕಾಲ ಏನೂ ಸದ್ದು ಮಾಡದೇ ಜೀವನ ಸಾಗಿಸುತ್ತಿದ್ದ ದಲಿತರ ತಲೆಯಲ್ಲಿ, ಮರಾಠರು ನಮ್ಮನ್ನು ಶೋಷಸಿತ್ತಿದ್ದಾರೆಂಬ ಹುಳ ಬಿಟ್ಟು, ಹೋರಾಟ-ಗಲಭೆಗಳನ್ನು ಮಾಡುವುದಕ್ಕೆ ಬಿಟ್ಟರು. ಗಲಭೆಯಲ್ಲಿ ಗಾಯಗೊಂಡ ದಲಿತರು ಅಥವಾ ಕಾಲ್ತುಳಿತಕ್ಕೆ ಮೃತಪಟ್ಟ ದಲಿತರ ಹೆಣವನ್ನು ಮುಂದಿಟ್ಟುಕೊಂಡು ಮತ್ತಷ್ಟು ಆಕ್ರಂದನ, ಆಕ್ರೋಶ ವ್ಯಕ್ತಪಡಿಸಿ, ದಲಿತರಿಗೆ ಮರಾಠರೆಂದರೆ ಆಗಬಾರದು. ಮರಾಠರಿಗೆ ದಲಿತರೆಂದರೆ ಆಗಬಾರದು ಎಂಬಂತೆ ಮಾಡಿದರು. ಒಟ್ಟಾರೆ ಇದರ ಉದ್ದೇಶವೇನು? ಮತ್ತದೇ ದಲಿತರ ವೋಟು.

ತಾವು ಅಧಿಕಾರಕ್ಕೆ ಬರಲು, ಯಾರು ಬೇಕಾದರೂ ಹೊಡೆದಾಡಿಕೊಂಡು ಸಾಯಲಿ ಎಂಬುದರ ಕರ್ನಾಟಕದ ಆವೃತ್ತಿಯೇ ಈ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು.  ಸಿದ್ದರಾಮಯ್ಯ ಎಷ್ಟು ಚೆನ್ನಾಗಿ ಪ್ಲಾನ್‌ನು ಅನುಷ್ಠಾನಗೊಳಿಸಿದ್ದಾರೆ ನೋಡಿ. ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ಮಾಡಿದರು. ಅದನ್ನು ಯಾಕಾಗಿ ಮಾಡಿದರು ಎಂಬುದಕ್ಕೆ ಯಾರಿಗೂ ಉತ್ತರ ಗೊತ್ತಿಲ್ಲ. 2015ರಲ್ಲೇ ಸಿದ್ದರಾಮಯ್ಯನವರ ಕೈಯಲ್ಲಿ ಇದರ ವರದಿ ಇದ್ದರೂ ಇದನ್ನು ಎಲ್ಲಿಗೂ ಬಿಟ್ಟುಕೊಟ್ಟಿಲ್ಲ. ಆದರೆ ಯಾರಿಗೂ ತಿಳಿಯದಂತೆ ಏಳು ತಜ್ಞರ ಕಮಿಟಿ ಎಂದು ಮಾಡಿ ವರದಿ ಸಲ್ಲಿಸುವುದಕ್ಕೆ ಹೇಳಿತ್ತು. ದುರಂತ ಎಂದರೆ ಆ ಸೋ ಕಾಲ್ಡ್‌ ತಜ್ಞರ ಕಮಿಟಿಯಲ್ಲಿ ಒಬ್ಬನೇ ಒಬ್ಬ ಲಿಂಗಾಯತ ಅಥವಾ ವೀರಶೈವನಿಲ್ಲ. ಜಸ್ಟಿಸ್‌ ನಾಗಮೋಹನ್‌ ದಾಸ್‌ ಒಕ್ಕಲಿಗರು. ದ್ವಾರಕನಾಥ್‌ ಎಂಬುವವರು ಬಲಿಜ. ಮುಜಾಫರ್‌ ಅಸ್ಸಾದಿಯೆಂಬ ಆಸಾಮಿಯದ್ದು ಶಾಂತಿ ಧೂತರ ಧರ್ಮ, ರಾಮಕೃಷ್ಣ ಮರಾಠೆ ಒಬ್ಬ ಪಕ್ಕಾ ಎಡಪಂಥೀಯ. ಪುರುಶೋತ್ತಮ ಬಿಳಿಮಲೆ ಜೆಎನ್ಯು ವಿವಿಯಲ್ಲಿ ಕೆಲಸ ಮಾಡುತ್ತಿದ್ದು, ಬ್ರಾಹ್ಮಣರ ವಿರುದ್ಧ ಬಹಿರಂಗವಾಗೇ ಹೇಳಿಕೆ ನೀಡಿದ ಆಸಾಮಿ ಹಾಗೂ ಲಿಂಗಾಯತನಲ್ಲ. ಇನ್ನು ಎಸ್‌. ಜಿ. ಸಿದ್ದರಾಮಯ್ಯ ಕುರುಬ ಜನಾಂಗಕ್ಕೆ ಸೇರಿದವರು ಮತ್ತು ಪತ್ರಕರ್ತ ಸರಜೂ ಕಾಟ್ಕರ್‌ ಸಹ ಲಿಂಗಾಯತನಲ್ಲ.

ಧರ್ಮವೇ ಗೊತ್ತಿಲ್ಲದೇ, ಅದರ ಬಗ್ಗೆ ಅಧ್ಯಯನವೂ ಮಾಡದೇ, ಷರಾ ಬರೆಯುವವರಿಗೆ ತಜ್ಞರು ಎನ್ನುತ್ತೀರೋ ಅಥವಾ ಅಯೋಗ್ಯರು ಎನ್ನುತ್ತೀರೋ? ಸಿದ್ದರಾಮಯ್ಯನವರ ಭಾಷೆಯಲ್ಲೇ ಕೇಳುವುದಾದರೆ ಈ ಏಳು ಜನರನ್ನು ಬೀಗತನ ಮಾಡುವುದಕ್ಕೆ ಸಿದ್ದರಾಮಯ್ಯ ನಿಯೋಜಿಸಿದ್ದಾರಾ?

ಸಿದ್ದರಾಮಯ್ಯ ಅಲ್ಲ, ಬೇರೆ ಯಾರೇ ಬಂದರೂ ಮತ್ತೊಂದು ಧರ್ಮವನ್ನು ಹುಟ್ಟು ಹಾಕುವುದಕ್ಕೆ ಆಗುವುದೇ ಇಲ್ಲ. ಕಾನೂನಿನ ಭಾಷೆಯಲ್ಲಿ ಹೇಳುವುದಾದರೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ, 1992 ಅಧಿನಿಯಮದ ಪ್ರಕಾರ ಮತ್ತೊಂದು ಹೊಸ ಧರ್ಮವನ್ನು ಘೋಷಿಸುವುದಕ್ಕೇ ಆಗುವುದಿಲ್ಲ. ಇನ್ನು ಇದೇ ಅಧಿನಿಯಮದ ಮತ್ತೊಂದು ಸೆಕ್ಷನ್‌ನಲ್ಲಿ ಹೇಳಿರುವಂತೆ, ಮತ್ತೊಂದು ಜಾತಿಯನ್ನು ಬೇಕಾದರೆ ಅಲ್ಪಸಂಖ್ಯಾತ ಎಂದು ಘೋಷಿಸಿ, ಮಾನ್ಯತೆ ನೀಡಬಹುದು.

ಮಾತೆತ್ತಿದರೆ ಕಾನೂನು ಗೊತ್ತು ಎಂದು ಬದನೇಕಾಯಿ ಕೊಚ್ಚುವ ಸಿದ್ದರಾಮಯ್ಯ, ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಅಷ್ಟು ಲಿಂಗಾಯತರ ಬಗ್ಗೆ ಕಾಳಜಿಯಿದ್ದಿದ್ದೇ ಆದರೆ, ಅವರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬಹುದಲ್ಲ? ನೀಡುವುದಿಲ್ಲ. ಯಾಕೆಂದರೆ ಅವರಿಗೆ ಅದು ವರ್ಕೌಟ್‌ ಆಗುವುದಿಲ್ಲ.

ಅಸಲಿಗೆ ಪ್ರತ್ಯೇಕ ಧರ್ಮ ಮಾಡುವ ಪ್ಲಾನ್‌ ಸಿದ್ದರಾಮಯ್ಯನವರದ್ದೋ ಅಥವಾ ಕಾಂಗ್ರೆಸ್‌ನವರದ್ದೋ ಅಲ್ಲವೇ ಅಲ್ಲ. ಕಾಂಗ್ರೆಸ್‌ ಪ್ರತ್ಯೇಕ ಧರ್ಮದ ಕೂಗನ್ನು ತನ್ನ ಲಾಭಕ್ಕೆ ಈಗ ಉಪಯೋಗಿಸಿಕೊಳ್ಳುತ್ತಿದೆ ಅಷ್ಟೇ. ಲಿಂಗಾಯತ ಜಾತಿಯನ್ನು ಹಿಂದೂ ಧರ್ಮದಿಂದ ಬೇರ್ಪಡುವಂತೆ ಮೊದಲು ದನಿ ಎತ್ತಿದ್ದು ಕರ್ನಾಟಕದ ಚನ್ನಪ್ಪ ಉತ್ತಂಗಿ ಎಂಬ ಲೇಖಕ ಅಲಿಯಾಸ್‌ ಕ್ರಿಶ್ಚಿಯನ್‌ ಮಿಷನರಿಯಿಂದ. ಬಾಸಲ್‌ ಮಿಷನರಿಯಲ್ಲಿ ಓದಿ, ಮತಾಂತರ ಮಾಡುವ ವಿದ್ಯೆಯನ್ನು ಕರಗತ ಮಾಡಿಕೊಂಡ ಈ ಬುದ್ಧಿಜೀವಿ, ಬಸವ ವಚನಗಳನ್ನೆಲ್ಲ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿ ಇಂಗ್ಲಿಷ್‌ನಲ್ಲಿ ಬರೆದುಕೊಂಡ. ಹಾಗೆ ಬರೆದುಕೊಂಡಿದ್ದನ್ನು ಬಸವಣ್ಣರಂತೇ ಜೀಸಸ್‌ ಸಹ ಅದನ್ನೇ ಹೇಳುತ್ತಿದ್ದಾನೆ ಎಂದು ನಂಬಿಸಲು ಶುರು ಮಾಡಿಕೊಂಡ. ಬಸವಣ್ಣ ಅತ್ಯುತ್ತಮ ಕ್ರಿಶ್ಚಿಯನ್‌ ಮತ್ತು ಜೀಸಸ್‌ ಅಷ್ಟೇ ಅತ್ಯುತ್ತಮ ಲಿಂಗಾಯತ ಎಂದು ಹೇಳಿದ ಮೊದಲ ವ್ಯಕ್ತಿ ಚನ್ನಪ್ಪ ಉತ್ತಂಗಿ. ಇದೇ ಚನ್ನಪ್ಪ ಮತ್ತು ಬಾಸಲ್‌ ಮಿಷನ್‌ನ ನೇತೃತ್ವದಲ್ಲೇ 1940ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆದಿತ್ತು. ಅರ್ಥಾತ್‌ ಕ್ರಿಶ್ಚಿಯನ್‌ ಮಿಷನರಿಗಳ ನೇತೃತ್ವದಲ್ಲಿ ನಡೆದ ಹೋರಾಟವಿದು. ಈ ಚನ್ನಪ್ಪ ಉತ್ತಂಗಿಯ ಮನಸ್ಥಿತಿಯನ್ನು ತಿಳಿಯುವುದಕ್ಕೆ ಆತ ಬರೆದಿರುವ ಒಂದು ಪುಸ್ತಕದ ಹೆಸರು ಕೇಳಿದರೆ ಸಾಕು. ಆ ಪುಸ್ತಕವೇ ಬೆತ್ಲೆಹಮ್ಸ್‌ ಅಪೀಲ್‌ ಟು ಬನಾರಸ್‌. ಬನಾರಸ್‌ ಹಿಂದೂಗಳು ದಯಾಳುವಾದ ಜೀಸಸ್‌ನನ್ನು ಯಾಕಾಗಿ ಒಪ್ಪಿಕೊಳ್ಳಬೇಕು ಮತ್ತು ಅದರ ಅನಿವಾರ್ಯತೆಯೇನು ಎಂದು ಆಗಲೇ ಪುಸ್ತಕ ಬರೆದಿದ್ದ.

ಈ ಪರಿಪಾಠವನ್ನು ಮುಂದುವರಿಸಿಕೊಂಡು ಹೋದವರೇ ಹಿರೇಮಲ್ಲೂರು ಈಶ್ವರಣ್ಣ ಮತ್ತು ಹತ್ಯೆಗೀಡಾದ ಪ್ರೊ. ಎಂ. ಎಂ. ಕಲಬುರ್ಗಿ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಇವರಿಬ್ಬರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಲವಾರು ಪ್ರಬಂಧಗಳನ್ನು ಬರೆದು ಲಿಂಗಾಯತ ಪ್ರತ್ಯೇಕ ಧರ್ಮದ ಕೂಗನ್ನು ಇಂದಿನ ಪೀಳಿಗೆಗೂ ಒರೆಸಿಬಿಟ್ಟರು ಹಾಗೂ ಮತ್ತು ಗಟ್ಟಿಗೊಳಿಸಿದರು. ಜತೆಜತೆಗೆ ಕ್ರಿಶ್ಚಿಯನ್‌ ಮಿಷನರಿಗಳು ಸಹ ಇದಕ್ಕೆ ಬಹಳವೇ ಸಹಾಯ ಮಾಡುತ್ತಾ ಬಂತು. ಇವರೊಟ್ಟಿಗೆ ಬರವಣಿಗೆಯಲ್ಲಿ ಸಹಾಯ ಮಾಡಿದವರು ಡಾ. ಎನ್‌. ಐ. ಮಹದೇವಪ್ಪ, ಸಂಜಯ್‌ ಮಕಲ್‌, ಆಶಾ ಖೂಬ, ಮಂಜುನಾಥ್‌ ಕಾಳೆ, ಚಂದ್ರಶೇಖರ್‌ ಇತ್ಯಾದಿ. ಇವರಿಗೂ ಚರ್ಚ್‌ಗಳಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಸಿದರೆ ಎಲ್ಲವೂ ಬಯಲಾಗುತ್ತದೆ.

ಮೊದಲೆಲ್ಲ ಕಾಂಗ್ರೆಸ್‌ ಓಲೈಸುತ್ತಿದ್ದದ್ದೇಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು. ಅದ್ದರಿಂದಲೇ ಕಳೆದ ಚುನಾವಣೆಯನ್ನು ಗೆದ್ದರು. ಹಾಗಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗನ್ನು ಮೂಸಿಯೂ ನೋಡಿರಲಿಲ್ಲ. ಆದರೆ ಹೇಸಿಗೆ ಹುಟ್ಟಿಸುವಷ್ಟು ಓಲೈಕೆ ಮಾಡುತ್ತಿರುವುದು ಜಗಜ್ಜಾಹೀರಾದಾಗ ಕಾಂಗ್ರೆಸ್‌ ಅಧಃಪಥನ ಶುರುವಾಯಿತು. ಜತೆಗೆ ಮೋದಿ ಅಲೆ ಬೇರೆ ಇದೆ. ಇದರಿಂದ ಹೊರಬರುವುದಕ್ಕೆ ಕಾಂಗ್ರೆಸ್‌ ಬಳಿ ಯಾವುದೇ ಅಸ್ತ್ರವಿರಲಿಲ್ಲ. ಆಗ ಬಳಸಿದ್ದೇ ಪ್ರತ್ಯೇಕ ಧರ್ಮ ಎಂಬ ಲಿಂಗಾಸ್ತ್ರ! ಅದೂ ಇವರು ಮಾಡಿದ ರಾಜತಾಂತ್ರಿಕತೆಯಲ್ಲ ಇದು. ಅಷ್ಟೆಲ್ಲ ಬುದ್ಧಿ ದಡ್ಡರಿಗೆಲ್ಲಿ ಬರಬೇಕು? ಈ ಪ್ಲಾನ್‌ ಮಾಡುತ್ತಿರುವುದು ಪಕ್ಷ ನಿಯೋಜಿಸಿಕೊಂಡ ಬ್ರಿಟಿಷ್‌ ಸಂಸ್ಥೆ. ಡೊನಾಲ್ಡ್‌ ಟ್ರಂಪ್‌ರನ್ನು ಪ್ರಧಾನಿಯನ್ನಾಗಿ ಮಾಡುವುದಕ್ಕೆ ಈ ತಂಡದ್ದೇ ಪ್ರಮುಖ ಪಾತ್ರ. ಇವರೇ, ಕೇಂಬ್ರಿಡ್ಜ್‌ ಅನಾಲಿಟಿಕಾ. ಇವರು ನಿಯತ್ತಾಗಿ ಯಾವುದನ್ನೂ ಮಾಡುವುದಿಲ್ಲ. ಎಲ್ಲವೂ ವಾಮಮಾರ್ಗವೇ. ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಪ್ರಭಾವಿಗಳನ್ನು ಹನಿಟ್ರ್ಯಾಪ್‌ ಮೂಲಕ ಒಳಗೆ ಹಾಕಿಕೊಂಡು ಮಾಹಿತಿ ಅತಿಸೂಕ್ಷ್ಮ ಮಾಹಿತಿಗಳನ್ನು ಪಡೆದು ಅಥವಾ ಹಣಬಲದ ಮೂಲಕವಾದರೂ ಮಾಹಿತಿ ಪಡೆದು ಅದರ ಮೇಲೆ ಪ್ಲಾನ್‌ ಮಾಡುವುದೇ ಕೇಂಬ್ರಿಡ್ಜ್‌ ಅನಾಲಿಟಿಕಾದ ವೈಶಿಷ್ಟ್ಯತೆ. ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣೆಗಳಲ್ಲಿ ಗೆಲ್ಲುವುದು ಅನಿವಾರ್ಯ ಎಂದಿರುವ ಅನಾಲಿಟಿಕಾ. ಒಂದೊಂದೇ ಪ್ಲಾನ್‌ ಮಾಡುತ್ತಿದೆ.
ಅರ್ಥಾತ್‌, ನಮ್ಮನ್ನು ಒಡೆದು ಆಳುತ್ತಿದ್ದಾರೆ ಎಂದು ನಾವು ಯಾವ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಿದ್ದೆವೋ ಅವರನ್ನೇ ಕಾಂಗ್ರೆಸ್‌ ಹೈಕಮಾಂಡ್‌ ವೀಳ್ಯದ ಎಲೆ ಕೊಟ್ಟು, ಆಹ್ವಾನಿಸಿ ನಿಯೋಜಿಸಿಕೊಂಡು ದೇಶ ಒಡೆಯುವುದಕ್ಕೆ ಹೊರಟಿದೆ. ಯಾಕಾಗಿ? ಕೇವಲ ಮತ್ತೈದು ವರ್ಷಗಳ ದುರಾಡಳಿತಕ್ಕಾಗಿ?

ಯಾವಾಗಲೂ ಒಟ್ರಾಶಿ ಮಾತಾಡುವ ಸಿದ್ದರಾಮಯ್ಯ ಎಂಡ್‌ ಟೀಮ್‌ಗೆ ಇಂಥ ಐಡಿಯಾಗಳು ಹೇಗೆ? ಎಲ್ಲಿ ಬರಬೇಕು ಹೇಳಿ? ನಿಜಕ್ಕೂ ಕೇಳಲೇಬೇಕಿನಿಸಿದೆ: ನಾಚಿಕೆಯಾಗುವುದಿಲ್ಲವಾ ಕಾಂಗ್ರೆಸ್‌ಗೆ? ಅಣ್ಣ ತಮ್ಮರಂತೆ ವಸುದೈವ ಕುಟುಂಬಕಮ್‌ ಎಂದು ಜೀವನ ಮಾಡುತ್ತಿದ್ದವರ ಮನಸ್ಸನ್ನು ಹಾಳು ಮಾಡಿ ಗೆಲ್ಲಲು ಹೊರಟಿದ್ದೀರಲ್ಲ? ಇಷ್ಟು ವರ್ಷ ಮುಸ್ಲಿಮರಿಗೂ ಹಿಂದೂಗಳಿಗೂ ಆಗದಂತೆ ಮಾಡಿದರು. ಈಗ ಹಿಂದೂಗಳಲ್ಲೇ ಒಬ್ಬೊಬ್ಬರನ್ನಾಗಿ ಒಡೆಯುತ್ತಿದ್ದಾರೆ. ಕಾಲ ಎಷ್ಟು ಚೆನ್ನಾಗಿ ಕೂಡಿ ಬಂದಿದೆ ನೋಡಿ, ಕ್ರಿಶ್ಚಿಯನ್‌ ಮಿಷನರಿಗಳಿಗೆ ಲಿಂಗಾಯತ ಜಾತಿ ಹಿಂದೂ ಧರ್ಮದಿಂದ ಹೊರಬರಬೇಕು. ಕಾಂಗ್ರೆಸ್‌ಗೆ ಮುಸ್ಲಿಮ್‌ ಓಲೈಕೆಯನ್ನು ನಿಲ್ಲಿಸದಂತೆಯೇ ನಿಲ್ಲಿಸಿ ಚುನಾವಣೆಯನ್ನೂ ಗೆಲ್ಲಬೇಕು, ಯಡಿಯೂರಪ್ಪನವರ ಬಾಯನ್ನೂ ಮುಚ್ಚಿಸಬೇಕು. ಹೀಗಾಗೇ ಲಿಂಗಾಯತರನ್ನು ವೀರಶೈವರ ವಿರುದ್ಧ ಎತ್ತಿಕಟ್ಟಿದ್ದಾರೆ.

ಈ ಹೋರಾಟ ಯಾವಾಗಲೋ ಹಳಿ ತಪ್ಪಿದೆ ಎಂಬುದಕ್ಕೆ ತಾಜಾ ಉದಾಹರಣೆಯೇ ಮೊನ್ನೆ ಲಿಂಗಾಯತರು ವೀರಶೈವರಿಗೆ ಹೊಡೆದದ್ದು. ಬಸವ ತತ್ತ್ವ ಪರಿಪಾಲಕರು ಕೈ ಎತ್ತುವುದಕ್ಕೆ ಕಾರಣವೇನು? ಇಲ್ಲಿದೆ: ಪ್ರತ್ಯೇಕ ಧರ್ಮವಾದರೆ ಖುಷಿ ಲಿಂಗಾಯತರಿಗೆ. ಆದರೆ ಅಂದು ನಡೆದ ವಿಜಯೋತ್ಸವ ಯಾತ್ರೆಯಲ್ಲಿ ಗೌರಿ ಲಂಕೇಶ್‌ ಸಹಪಾಠಿ ಮತ್ತು ಕಮ್ಯುನಿಸ್ಟ್‌ ಕೆ. ನೀಲಾ ಯಾಕಾಗಿ ಹಾಜರಿದ್ದರು? ಮೀನಾಕ್ಷಿ ಬಾಳಿ ಕಾರ್ಯಕ್ರಮದಲ್ಲಿ ಏನು ಲಾಲ್‌ ಸಲಾಂ ಮಾಡುತ್ತಿದ್ದರಾ? ಜಾತಿ, ಧರ್ಮವನ್ನು ನಂಬದ ಕೆಂಪು ಬಾವುಟದವರಿಗೆ ಶಿವಲಿಂಗದ ಜೊತೆ ಏನ್ರೀ ವ್ಯವಹಾರ?

ಇನ್ನು ಬಸವಣ್ಣನವರ ವಚನವನ್ನೂ ಸರಿಯಾಗಿ ಹೇಳುವುದಕ್ಕೆ ಬಾರದ ಅಯೋಗ್ಯ ರಾಹುಲ್‌ ಈ ವಿಚಾರದಲ್ಲಿ ಯಾಕೆ ಮೂಗು ತೂರಿಸಬೇಕಿತ್ತು? ಸರಿಯಾಗಿ ಅವನ ಧರ್ಮ ಕ್ರಿಶ್ಚಿಯಾನಿಟಿಯನ್ನೇ ಪಾಲಿಸದೇ, ತಾನು ಜನಿವಾರ ಧಾರಿ ಬ್ರಾಹ್ಮಣ ಎಂದು ಬೊಗಳೆ ಬಿಡುವ ರಾಹುಲ್‌ ಅಲಿಯಾಸ್‌ ರಾವುಲ್‌ ವಿನ್ಸಿಗೆ ಬಸವಣ್ಣ ನವರ ಬಗ್ಗೆ ಮಣ್ಣಾಂಗಟ್ಟಿಯೂ ಗೊತ್ತಿಲ್ಲ. ಮಿಷನರಿಗಳು, ಕೇಂಬ್ರಿಡ್ಜ್‌ ಅನಾಲಿಟಿಕಾ ಏನು ಹೇಳುತ್ತದೆಯೋ ಅದನ್ನೇ ಪಾಲಿಸುತ್ತಿದ್ದಾರೆ.

ಅಲ್ಲಿಗೆ ಲಿಂಗಾಯತರನ್ನು ಬಿಟ್ಟು ಮಿಕ್ಕ ಎಲ್ಲ ಜಾತಿ, ಧರ್ಮದವರೂ ಪ್ರತ್ಯೇಕ ಧರ್ಮಕ್ಕೆ ಕಡ್ಡಿ ಅಲ್ಲಾಡಿಸುತ್ತಿದ್ದಾರೆ. ದೇಶವನ್ನು ಮಾರುತ್ತಿದ್ದಾರೆ. ಅದೂ ಕೇವಲ ಐದು ವರ್ಷದ ಆಡಳಿತಕ್ಕಾಗಿ. ಇಂಥವರನ್ನು ಬೆಂಬಲಿಸುತ್ತಿರುವ ಸತ್ತ್‌ ಪ್ರಜೆಗಳಿಗೆ ನಿಜವಾಗಿಯೂ ನಾಚಿಕೆಯಾಗಬೇಕು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya