ಸಂಧ್ಯಾವಂದನೆಗಷ್ಟೇ ಬ್ರಾಹ್ಮಣ ಸೀಮಿತವಲ್ಲ!


ಬ್ರಾಹ್ಮಣ ಎಂದರೆ ಯಾರು? ಇಂಥದ್ದೊಂದು ಪ್ರಶ್ನೆಗೆ ಮೊದಲೆಲ್ಲ ಇದ್ದ ಉತ್ತರ, ಬ್ರಹ್ಮಜ್ಞಾನ ಇತಿ ಬ್ರಾಹ್ಮಣಃ ಎಂದು. ಅಥವಾ ಬ್ರಹ್ಮಣಿ ಚರತಿ ಇತಿ ಬ್ರಾಹ್ಮಣಃ ಎಂದೂ ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಯಾರು ವೇದಾಧ್ಯನ ಮಾಡಿಕೊಂಡು ಅದನ್ನು ಬೇರೆಯವರಿಗೆ ಬೋಧಿಸುತ್ತಾನೋ ಅವನೇ ಬ್ರಾಹ್ಮಣ ಎಂದು. ಆದರೆ ಈಗ ಬ್ರಾಹ್ಮಣ ಎಂಬುದಕ್ಕೆ ಅರ್ಥವೇ ಬದಲಾಗಿದೆ. ಯಾವನು ದೇವಸ್ಥಾನದಲ್ಲಿ ಕೆಲಸವಿಲ್ಲದೇ ಕಲ್ಲು ವಿಗ್ರಹದ ಮುಂದೆ ಮಂತ್ರ ಹೇಳಿಕೊಂಡು, ಗಂಟೆ ಅಲ್ಲಾಡಿಸಿ, ಆರತಿ ಮಾಡುತ್ತಾನೋ ಅವನೇ ಬ್ರಾಹ್ಮಣ. ಇಲ್ಲವಾ ಎಲ್ಲ ಸರಕಾರಿ ಸೌಲಭ್ಯಗಳಿಂದಲೂ ವಂಚಿತನಾಗುವ, ಮೀಸಲಿನಿಂದ ಹೊರಗೆ ಉಳಿಯುವ, ಎಲ್ಲರಿಂದಲೂ ದೂಷಣೆಗೊಳಗಾಗಿಯೂ ಸಮಾಜ ದಲ್ಲಿ ತಗ್ಗಿ ಬಗ್ಗಿ ನಡೆಯುತ್ತಿರುವವನು ಬ್ರಾಹ್ಮಣ ಎಂದರೆ ಸರಿಯಾಗುತ್ತದೆಯೇನೋ.

ಅದೇ ಕಾರಣಕ್ಕಿರಬ ಹುದು ಬ್ರಾಹ್ಮಣ ಎಲ್ಲರಿಗೂ ಕಾಮಿಡಿ ಪೀಸ್ ಆಗಿ ಹೋಗಿದ್ದಾನೆ. ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮತ್ತು ಮಾಧ್ಯಮಗಳಲ್ಲೂ ಬ್ರಾಹ್ಮಣ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದರಲ್ಲಿ ಏನೂ ತಕರಾರಿಲ್ಲ. ಅದು ಯಾವುದೇ ಜಾತಿಯಿರಲಿ, ಅದರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದು. ನಮಗೆ ಹೇಗೆ ಈ ಸಮಾಜದಲ್ಲಿ ಬದುಕುವ ಹಕ್ಕಿದೆಯೋ ಹಾಗೇ ಮತ್ತೊಬ್ಬರಿಗೂ ಇದೆ. ಆದರೆ ಒಂದು ಚಾನೆಲ್ ಬಳಿ ಕ್ಷಮೆ ಕೇಳಿಸಿದರೆ ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳು ನಿಂತು ಹೋಗುತ್ತದೆ ಎಂಬುದಾದರೆ ಅದಕ್ಕೆ ನನ್ನ ಸಮ್ಮತಿಯಿದೆ. ಈಗ ಇಷ್ಟು ಓದಿದ ಮೇಲೆ ಕೆಲವು ಬ್ರಾಹ್ಮಣರು ನಾನು ಬ್ರಾಹ್ಮಣ ವಿರೋಧಿ ಎನ್ನಲಿಕ್ಕೂ ಸಾಕು. ಆದರೆ ನಾವು ಶಾಶ್ವತ ಪರಿಹಾರಕ್ಕೆ ಯೋಚಿಸಬೇಕೆ ಹೊರತು, ಕ್ಷಣಿಕಕ್ಕೆ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ತಮ್ಮ ಸಮುದಾಯವನ್ನು ತುಚ್ಛವಾಗಿ ಕಂಡರು ಎಂಬುದರ ಬಗ್ಗೆ ಬ್ರಾಹ್ಮಣರು ಒಟ್ಟಾಗಿ ಬಂದರು ಎಂಬುದು ಒಂದು ಕಡೆಯಾದರೆ, ಇಷ್ಟು ದಿನ ಎಲ್ಲಿದ್ದರು ಎಂಬುದನ್ನೂ ಕೇಳಬೇಕಾಗುತ್ತದೆ. ಈಗ ಜನರೆಲ್ಲ ಖಾಸಗಿ ಚಾನೆಲ್‌ನ ಮುಖ್ಯಸ್ಥರು ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಆದರೆ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬುದ್ಧಿ ಜೀವಿಗಳು ಬ್ರಾಹ್ಮಣರನ್ನು, ಪುರೋಹಿತಶಾಹಿ ಕ್ರಿಮಿಗಳು… ಇವರನ್ನೆಲ್ಲ ನಿರ್ನಾಮ ಮಾಡಬೇಕು ಎಂದು ಪೋಸ್ಟ್‌‌ಗಳನ್ನು ಹಾಕಿದ್ದಾಗ ಎಷ್ಟು ಜನ ಅದನ್ನು ವಿರೋಧಿಸಿದ್ದರು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಕಾಂಗ್ರೆಸ್‌ನ ಬ್ರಿಜೇಶ್ ಕಾಳಪ್ಪ ಫೇಸ್ಬುಕ್‌ನಲ್ಲಿ ತಮ್ಮದೇ ಪೋಸ್ಟ್‌‌ಗೆ ಬಂದ ಕಾಮೆಂಟ್ಸ್‌‌ಗಳಿಗೆ ಉತ್ತರ ನೀಡುವ ಭರದಲ್ಲಿ ‘ಎಲ್ಲರೂ ದೇವಸ್ಥಾನಗಳಲ್ಲಿ ಶ್ಲೋಕ ಹೇಳುವುದನ್ನೇ ಜೀವನೋಪಾಯವನ್ನಾಗಿ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ’ ಎಂದು ಬ್ರಾಹ್ಮಣ ವರ್ಗಕ್ಕೆ ಮಂತ್ರ ಹೇಳಿ ಕಾಸು ಮಾಡುವುದಷ್ಟೇ ಕೆಲಸ ಎಂಬ ನಿಟ್ಟಿನಲ್ಲಿ ಬರೆದಿದ್ದರು. ಆಗ ಅವರನ್ನು ಪ್ರಶ್ನಿಸಿದ್ದು ಒಂದೆರಡು ಬ್ರಾಹ್ಮಣರು ಬಿಟ್ಟರೆ ಬೇರೆ ಯಾರೂ ಇಲ್ಲ. ನನ್ನ ಉದ್ದೇಶ ಇಷ್ಟೇ.

ಒಂದು ಅವಹೇಳನಕಾರಿ ನಾಟಕವನ್ನು ಪ್ರಕಟಿಸಿರುವುದು ಚಾನೆಲ್ ಸಮಸ್ಯೆಯ ಮೂಲ ಅಲ್ಲವೇ ಅಲ್ಲ. ಅದು ‘ಪರಿಣಾಮ’ ಅಷ್ಟೇ. ಆ ಪರಿಣಾಮಕ್ಕೆ ಕಾರಣ ಬ್ರಾಹ್ಮಣರು, ಕ್ರಿಶ್ಚಿಯನ್ ಮಿಷನರಿಗಳು ಹಾಗೂ ಎಡಪಂಥೀಯ ಬುದ್ಧಿಜೀವಿಗಳು, ಮತ್ತು ಉದ್ಯೋಗವಿಲ್ಲದೇ ಸರಕಾರಿ ಗಂಜಿ ನೆಕ್ಕುತ್ತಾ ಬಿದ್ದಿರುವ ಚಿಂತಕರು. ಬ್ರಾಹ್ಮಣರು ಹೇಗೆ ಕಾರಣವೆಂಬುದನ್ನು ಮುಂದೆ ಹೇಳುತ್ತೇನೆ. ಅದಕ್ಕಿಂತ ಮುನ್ನ ಪುರೋಹಿತರನ್ನು, ವೇದ ಉಪನಿಷತ್ತುಗಳನ್ನು ತುಳಿಯಲು ಪ್ರಯತ್ನಿಸುತ್ತಿರುವ ಇನ್ನೆರಡು ವರ್ಗದ ಬಗ್ಗೆ ತಿಳಿಸುತ್ತೇನೆ. ಮೊದಲನೆಯವರು: ಕ್ರಿಶ್ಚಿಯನ್ ಮಿಷನರಿಗಳು. ನಮ್ಮ ದೇಶಕ್ಕೆ ಇವರು ಬರುವುದಕ್ಕೆ ತೊಡಕಾಗಿದ್ದು ಇಲ್ಲಿದ್ದ ಅಪಾರ ವಿದ್ಯಾಸಂಪತ್ತು, ವೇದಾಧ್ಯಯನ, ವೇದಾಪ್ಯಯನ, ಸಂಸ್ಕೃತ ಮತ್ತು ಅಫ್‌ಕೋರ್ಸ್ ಇದನ್ನೆಲ್ಲ ಕಾಪಾಡಿಕೊಂಡು ಬಂದದ್ದು ಬ್ರಾಹ್ಮಣರು. ದೇವರ ನಾಡು ಎಂದು ಕರೆಯುವ ಕೇರಳದಲ್ಲಿ ಬ್ರಾಹ್ಮಣರು, ವೇದ, ಉಪನಿಷತ್ತುಗಳೆಲ್ಲ ಸೊಂಪಾಗಿದ್ದವು. ಅದಕ್ಕೆ ಸಿರಿಯಾದ ವ್ಯಾಪಾರಿ ಥಾಮಸ್ ಎಂಬುವವನು ಕೇರಳದ ತಿರುವಾಂಕೂರಿನಲ್ಲೇ ಕ್ರಿಶ್ಚಿಯನ್ ಕಾಲೋನಿಯನ್ನು ಸ್ಥಾಪಿಸಿದ ಎಂದೂ ಹೇಳುತ್ತಾರೆ ಮತ್ತು ಕೆಲವರು ಕ್ರಿ. ಶ. 52ರಲ್ಲಿ ಸಂತ ಥಾಮಸ್ ಎಂಬುವವನು ಭಾರತಕ್ಕೆ ಕ್ರೈಸ್ತ ಧರ್ಮವನ್ನು ತಂದ ಎಂದೂ ಹೇಳುತ್ತಾರೆ. ಅವರು ಟಾರ್ಗೆಟ್ ಮಾಡಿದ್ದೇ ಬ್ರಾಹ್ಮಣರ ಬಗ್ಗೆ ಇಲ್ಲಸಲ್ಲದ ಕತೆಗಳನ್ನು ಹೇಳಿ.

ಅವರು ಜುಟ್ಟು ಬಿಡುತ್ತಾರೆ, ದಪ್ಪ ಹೊಟ್ಟೆ, ಪುರೋಹಿತರೆಲ್ಲ ತಿಂಡಿಪೋತರು, ತುಪ್ಪ ಇಲ್ಲದೇ ಊಟವೇ ಮಾಡುವುದಿಲ್ಲ ಎನ್ನುತ್ತಾ ಬಂದರು. ಇವರು ಹೇಳುವುದೆಲ್ಲ ಸುಳ್ಳು, ನಿಮ್ಮನ್ನು ಮೋಸ ಮಾಡುತ್ತಿದ್ದಾರೆ… ‘ಮುಕ್ಕೋಟಿ ದೇವರನ್ನು ಯಾಕೆ ಪೂಜೆ ಮಾಡುತ್ತೀರ, ಒಬ್ಬನೇ ದೇವರು ಕ್ರಿಸ್ತನನ್ನು ಪೂಜಿಸಿ’ ಎಂದು ಬಂದರು. ಸಂಸ್ಕೃತದಲ್ಲೇ ವೇದ ಶಾಸ್ತ್ರಗಳೆಲ್ಲವೂ ಇರುವುದರಿಂದ, ಸಂಸ್ಕೃತ ನಾಶಕ್ಕೆ ಒಂದು ವರ್ಗ ಇಳಿದರೆ, ಬ್ರಾಹ್ಮಣರನ್ನು ಗೇಲಿ ಮಾಡಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಮತ್ತೊಂದು ವರ್ಗ ಹುಟ್ಟಿಕೊಂಡಿತ್ತು. ಇದಕ್ಕಾಗಿ ಆಗಲೇ ಕೋಟಿಗಟ್ಟಲೆ ಹಣ ವಿದೇಶದಿಂದ ಬರುತ್ತಿತ್ತು, ಈಗಲೂ ಬರುತ್ತಿದೆ ಎಂಬುದನ್ನು ಸಂಶೋಧಕ, ಲೇಖಕ ರಾಜೀವ್ ಮಲ್ಹೋತ್ರಾ ತಮ್ಮ ‘ಬ್ರೇಕಿಂಗ್ ಇಂಡಿಯಾ’ ಎಂಬ ಕೃತಿಯಲ್ಲಿ ಸಾಕ್ಷಿ ಸಮೇತ ವಿವರಿಸಿದ್ದಾರೆ. ಇವರ ಎಂಜಲನ್ನು ತಿಂದುಕೊಂಡು ಬಿದ್ದಿರುವವರೇ ಬುದ್ಧಿಜೀವಿಗಳು, ಎಡಪಂಥೀಯ ಚಿಂತಕರು, ಪ್ರಗತಿಪರರು. ಇವರೂ ಬ್ರಾಹ್ಮಣರನ್ನು ಹಳಿಯುವುದಕ್ಕೆ ಶುರು ಮಾಡಿದರು.

ಅಲ್ಲಿಂದ ಶುರುವಾದ ಬ್ರಾಹ್ಮಣರ ಮೇಲಿನ ದಾಳಿ, ಇಲ್ಲಿಯವರೆಗೂ ನಿಂತಿಲ್ಲ. ಪುಟಗಟ್ಟಲೆ ಲೇಖನ ಬರೆಯುವ ಒಬ್ಬ ಎಡಪಂಥೀಯ ಬುದ್ಧಿಜೀವಿಯನ್ನು ವಿರೋಧಿಸದ ನಾವು ಈಗ ಖಾಸಗಿ ಚಾನೆಲ್ ಅನ್ನು ದೂರಿ ಫಲವೇನು? ಹೆಚ್ಚೆಂದರೆ, ಚಾನೆಲ್‌ನ ಮುಖ್ಯಸ್ಥ ಮತ್ತೊಂದು ಸಂಚಿಕೆಯಲ್ಲಿ ಕ್ಷಮೆ ಕೇಳಬಹುದು. ಅವರು ಕ್ಷಮೆ ಕೇಳಿದರೆ ಬ್ರಾಹ್ಮಣರ ಮೇಲಿನ ದಬ್ಬಾಳಿಕೆ, ಮೂದಲಿಕೆ ನಿಲ್ಲುತ್ತದೆಯೇ ಎಂಬುದನ್ನೂ ನಾವು ಪ್ರಶ್ನಿಸಿಕೊಳ್ಳಬೇಕು. ಐಸಿಸ್ ಮತ್ತು ಒಬ್ಬ ಬ್ರಾಹ್ಮಣನನ್ನು ಒಟ್ಟಿಗೆ ನಿಲ್ಲಿಸಿದರೆ ಬುದ್ಧಿಜೀವಿಗಳು ಜನಿವಾರ ಧರಿಸಿರುವವನಿಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆಯೇ ವಿನಾ, ಐಸಿಸ್ ಉಗ್ರನಿಗೆ ಏನೂ ಮಾಡುವುದಿಲ್ಲ. ಐಸಿಸ್ ಉಗ್ರನಲ್ಲಾದರೂ ಇವರು ಒಳ್ಳೇ ಮನಸ್ಸನ್ನು ಕಾಣುತ್ತಾರೆ. ಆದರೆ ಬ್ರಾಹ್ಮಣರಲ್ಲಿ ಮಾತ್ರ ಸುತಾರಾಂ ಸಾಧ್ಯವಿಲ್ಲ. ಅಂದರೆ ಬ್ರಾಹ್ಮಣ, ಐಸಿಸ್ ಉಗ್ರರಿಗಿಂತಲೂ ಕ್ರೂರಿ ಎಂಬುದು ಬುದ್ಧಿಜೀವಿಗಳ ತಲೆಯಲ್ಲಿ ಅಚ್ಚಾಗಿ ಕುಳಿತಿದೆ. ಬೇಕಾದರೆ ಹೌದೋ ಇಲ್ಲವೋ ನೀವೇ ಪರೀಕ್ಷೆ ಮಾಡಿ. ಐಸಿಸ್‌ನವರನ್ನೂ ಬೆಂಬಲಿಸುವ ಬುದ್ಧಿಜೀವಿ, ಚಿಂತಕ, ಪ್ರಗತಿಪರ, ಸಮಾನತಾವದಿ ಸಿಕ್ಕಿಬಿಡುತ್ತಾನೆ. ಆದರೆ ಇಂಥವರಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣರನ್ನು ಬೆಂಬಲಿಸುವವನು ಹುಟ್ಟಿಕೊಂಡಿದ್ದರೆ ತೋರಿಸಿಬಿಡಿ ನೋಡೋಣ?! ಮೊನ್ನೆಯಷ್ಟೇ ಚೆನ್ನೈನಲ್ಲಿ ಕೆಲ ಕಿಡಿಗೇಡಿಗಳು ಎಐಎಡಿಎಂಕೆ ಕಚೇರಿಯ ಮುಂದೆಯೇ ಹಂದಿಗೆ ಜನಿವಾರ ಹಾಕಿ, ಹಂದಿಯನ್ನು ಎಳೆದುಕೊಂಡು ಮೆರವಣಿಗೆ ಹೋಗುತ್ತಿದ್ದುದನ್ನು ಅಲ್ಲಿರುವ ಬ್ರಾಹ್ಮಣರೇ ವಿರೋಧಿಸಿದ್ದಾರಾ? ಇಲ್ಲ

. ಈ ಎಡಪಂಥೀಯರಿಗೆ ನೇರವಾಗಿ ಬೌದ್ಧಿಕವಾಗಿ ದಾಳಿ ಮಾಡುವುದಕ್ಕಾಗದೇ ಬ್ರಾಹ್ಮಣರ ಮೇಲೆ ಕೆಟ್ಟ ಜೋಕುಗಳು, ಕಲ್ಲಲ್ಲಿ ಹೊಡೆಯುವುದು, ಬ್ರಾಹ್ಮಣರ ವಿರುದ್ಧ ಕೇಸ್ ಹಾಕಿಸುವುದು, ಮೆರವಣಿಗೆ ಇತ್ಯಾದಿಗಳೆಲ್ಲವನ್ನೂ ಮಾಡುತ್ತಾ ಬಂದರು. ಇಂಥದ್ದನ್ನು ಎಷ್ಟು ಬ್ರಾಹ್ಮಣರು ಪ್ರಶ್ನಿಸಿದ್ದೇವೆ, ವಿರೋಧಿಸಿದ್ದೇವೆ ಹೇಳಿ? ಅಥವಾ ಅವರಿಗೆಲ್ಲ ಬ್ರಾಹ್ಮಣರ ಒಕ್ಕೂಟಗಳಿಂದ ಎಚ್ಚರಿಕೆ ಹೋಗಿದೆಯೇ? ಅದೂ ಆದಂತಿಲ್ಲ. ಕೆಲವೊಂದು ವಾಡಿಕೆಯ ಪದಗಳನ್ನು ಬಳಸಿದರೆ ಸಾಕು ಸವಿತಾ ಸಮಾಜದವರು ಹೋರಾಟ ಮಾಡಿ, ಹಾಗೆ ಪದಪ್ರಯೋಗ ಮಾಡಿದವರ ಹೆಡೆಮುರಿಕಟ್ಟುತ್ತಾರೆ. ಎರಡ್ಮೂರು ದಿನಗಳ ಹಿಂದೆ ನಾನು ಖಾಸಗಿ ಚಾನೆಲ್‌ನಲ್ಲಿ ನಡೆದ ಚರ್ಚೆ ನೋಡುತ್ತಿದ್ದೆ. ದೊಂಬರಾಟ ಎನ್ನುವ ಪದವನ್ನೂ ಬಳಸಕೂಡದು ಎಂಬ ಆಗ್ರಹ ಕೇಳಿಬರುತ್ತಿದೆ ಎಂದು ತಿಳಿಯಿತು. ಇವರಿಗೆ ಬೆಂಬಲ ನೀಡುತ್ತಿರುವುದು ಕೇವಲ ಅವರ ಜಾತಿಯವರಷ್ಟೇ ಅಲ್ಲ, ಬದಲಿಗೆ, ಬೇರೆ ಜಾತಿಯವರು ಮತ್ತು ಬುದ್ಧಿ ಜೀವಿಗಳೂ ಬೆಂಬಲ ನೀಡುತ್ತಾರೆ. ಆದರೆ ಬ್ರಾಹ್ಮಣನನ್ನು ಮಾತ್ರ ಯಾರು ಬೇಕಾದರೂ, ಹೇಗೆ ಬೇಕಾದರೂ ನಿಂದಿಸಬಹುದು.

ಇದನ್ನು ಬೇರೆ ಜಾತಿಯವರು ವಿರೋಧಿಸುವುದು ಪಕ್ಕಕ್ಕಿಡಿ, ಸ್ವತಃ ಬ್ರಾಹ್ಮಣರೇ ಅದನ್ನು ವಿರೋಧಿಸುವುದಿಲ್ಲ. ಬ್ರಾಹ್ಮಣರು ಇಂದು ಸಮಾಜದಲ್ಲಿ ಹಾಸ್ಯ ನಾಟಕದ ವಸ್ತುವಾಗಿರುವುದಕ್ಕೆ ಕಾರಣ ಬ್ರಾಹ್ಮಣರೇ ಎಂಬ ವಾದ ಇಲ್ಲಿಂದ ಶುರುವಾಗುತ್ತದೆ. ಹೇಳಿ, ಎಷ್ಟು ಬ್ರಾಹ್ಮಣರು ಇದನ್ನು ವಿರೋಧಿಸಿದ್ದೀರಿ? ಅಥವಾ ಪ್ರಶ್ನಿಸಿದ್ದೀರಿ?: ದೇವಸ್ಥಾನದಲ್ಲಿ ಗರ್ಭಗುಡಿಯ ಪಕ್ಕದಲ್ಲೇ ಮುಜರಾಯಿ ಇಲಾಖೆಯವರು ಒಂದು ಬೋರ್ಡ್ ನೇತು ಹಾಕಿರುತ್ತಾರೆ. ‘ಹುಂಡಿಗೆ ಹಾಕಿದ ಹಣ ದೇವರಿಗೆ, ತಟ್ಟೆಗೆ ಹಾಕಿದ್ದು ಪೂಜಾರಿಗೆ’ ಎಂದು. ದುರಂತ ಏನು ಎಂದರೆ, ಅದೇ ಬೋರ್ಡ್ ಪಕ್ಕದಲ್ಲೇ ನಿಂತು ಪುರೋಹಿತ ಮಂತ್ರ ಹೇಳುತ್ತಿರುತ್ತಾನೆ. ಅವನನ್ನು ನೋಡುವ ನಮಗೆ ಪೂಜ್ಯ ಭಾವನೆ ಬರುತ್ತಾ ಅಥವಾ ನಿಯತ್ತಾಗಿ ದುಡಿಯುತ್ತಿರುವವನಿಗೆ ಅಂಥ ಬೋರ್ಡ್‌ನ್ನು ಪಕ್ಕದಲ್ಲೇ ಇಟ್ಟುಕೊಂಡು ಬದುಕುವುದಕ್ಕೆ ಆಗುತ್ತಾ? ಜನರು ಅವನನ್ನು, ಆ ಬೋರ್ಡ್‌ನ್ನು ನೋಡುತ್ತಾ ಹುಂಡಿಗೆ ಕಾಸು ಹಾಕಿದರೆ ಆ ಪುರೋಹಿತನ ಸ್ವಾಭಿಮಾನಕ್ಕೆ ಎಷ್ಟು ಧಕ್ಕೆಯಾಗಬೇಡ?

ಈ ರೀತಿ ಮಸೀದಿಯಲ್ಲಿ, ಹುಂಡಿಗೆ ಹಾಕುವ ಹಣ ಅಲ್ಲಾಹುವಿಗೆ, ತಟ್ಟೆಗೆ ಹಾಕುವ ಹಣ ಮೌಲ್ವಿಗೆ ಎಂದೋ ಅಥವಾ ಚರ್ಚ್‌ಗಳಲ್ಲೂ ದೇಣಿಗೆ ಕೊಡುವವರ ಕಣ್ಣು ಕುಕ್ಕುವ ಹಾಗೆ ಫಾದರ್‌ಗೆ ದುಡ್ಡು ಕೊಡಬೇಡಿ ಎನ್ನುವ ರೀತಿಯಲ್ಲಿ ಬೋರ್ಡ್ ನೇತು ಹಾಕುವುದಕ್ಕೆ ಇದೇ ಮುಜರಾಯಿ ಇಲಾಖೆಯವರಿಗೆ ಧಮ್ ಇದೆಯಾ ಎಂದು ಕೇಳುವುದಕ್ಕೆ ರೋಹಿತ್ ಚಕ್ರತೀರ್ಥ ಸೇರಿದಂತೆ ಬೆರಳೆಣಿಕೆಯಷ್ಟು ಲೇಖಕರು ಪ್ರಶ್ನಿಸಿದರೇ ಹೊರತು, ಬಹುತೇಕ ಬ್ರಾಹ್ಮಣರು ತಲೆಯೇ ಕೆಡಿಸಿಕೊಳ್ಳಲಿಲ್ಲ ಎನ್ನುವುದೇ ದುರಂತ. ಈ ರೀತಿ ಲೇಖಕರು ಧ್ವನಿ ಎತ್ತಿದ್ದರಿಂದ ಬೋರ್ಡ್ ತೆರವುಗೊಳಿಸಲಾಯಿತಾ? ಇಲ್ಲ. ಬ್ರಾಹ್ಮಣರು ಅಲ್ಲೂ ಸೋತರು. ಇಷ್ಟಕ್ಕೆಲ್ಲ ಕಾರಣವೇನು ಎಂದು ಹುಡುಕಿದರೆ ಉತ್ತರ ನಮ್ಮ ಕೈಯಲ್ಲೇ ಇದೆ. ಬ್ರಾಹ್ಮಣರಿಗೆ ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳುವುದೇ ಒಂದು ಪಾಪಪ್ರಜ್ಞೆಯೆಂಬಂತೆ ವರ್ತಿಸುತ್ತಾರೆ.

ಬ್ರಾಹ್ಮಣನ ಕೆಲಸ ಕೇವಲ ಟೈಮಿಗೆ ಸರಿಯಾಗಿ ಸಂಧ್ಯಾವಂದನೆ ಮಾಡುವುದು, ಗಾಯತ್ರಿ ಮಂತ್ರ, ಅಷ್ಟಾಕ್ಷರಿ, ಪಂಚಾಕ್ಷರಿ ಮಾಡುವುಕ್ಕಷ್ಟೇ ಸೀಮಿತ ಎಂದು ಪುರೋಹಿತ ವರ್ಗ ಭಾವಿಸಿದರೆ, ಮತ್ತೊಂದು ವರ್ಗ, ತಮ್ಮ ಕೆಲಸ ಚೆನ್ನಾಗಿ ಓದಿ, ಬುದ್ಧಿವಂತರಾಗಿ, ಯಾವುದಾದರೂ ಪ್ರೈವೇಟ್ ಕಂಪನಿಯಲ್ಲಿ ಒಳ್ಳೆಯ ಸಂಬಳಕ್ಕೆ ಹೋಗುವುದಷ್ಟೇ ಬ್ರಾಹ್ಮಣನ ಕೆಲಸ ಎಂದುಕೊಂಡಂತಿದೆ. ಸ್ವಾಮೀ, ಬ್ರಾಹ್ಮಣರು ನಾಳೆ ರಸ್ತೆಯ ಮೇಲೆ ಬಿದ್ದರೆ, ಎತ್ತುವುದಕ್ಕೂ ಜನ ಬರುವುದಿಲ್ಲ. ಮಂತ್ರ ಹೇಳಿ ನಮ್ಮನ್ನು ಮೋಸ ಮಾಡಿದರು ಎಂದು ಅದೇ ಕ್ರಿಶ್ಚಿಯನ್ ಮಿಷನರಿಗಳು ಬಿಟ್ಟ ಕ್ರಿಮಿಯನ್ನು ತಲೆಯಲ್ಲಿಟ್ಟುಕೊಂಡಿರುವವರೇ ಸುತ್ತ ಇದ್ದಾರೆ. ಇದರ ಜತೆ ಬುದ್ಧಿಜೀವಿಯೊಬ್ಬ ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದರೋ ಮುಗಿದೇ ಹೋಯ್ತು. ಆತ ಬಿಳಿ ಗಡ್ಡ ನೀವಿಕೊಳ್ಳುತ್ತಾ ಗಹಗಹಿಸಿ ನಗುತ್ತಾ ಇರುತ್ತಾನೆ. ಇಂಥವರನ್ನು ಬ್ರಾಹ್ಮಣರು ಧೈರ್ಯವಾಗಿ ಪ್ರಶ್ನಿಸಿದರೆ ಮಾತ್ರ ಬ್ರಾಹ್ಮಣರನ್ನು ತುಚ್ಛವಾಗಿ ಕಾಣುವುದು ನಿಲ್ಲುತ್ತದೆ. ಇನ್ನು ಬ್ರಾಹ್ಮಣರ ಮನೆಯಲ್ಲಿ ಪೋಷಕರೂ ಅದೇ ರೀತಿಯಲ್ಲೇ ಬೆಳೆಸಿರುತ್ತಾರೆ. ಉದಾಹರಣೆಗೆ ನಮ್ಮ ಮನೆಯಲ್ಲೇ ‘ನಾವು ಬ್ರಾಹ್ಮಣರು, ನಮಗ್ಯಾಕೆ ಬೇರೆ ಜನರ ಉಸಾಬರಿ… ಒಮ್ಮೆ ನಮ್ಮ ಬಗ್ಗೆ ಯಾರಾದ್ರೂ ಬಯ್ದರೂ ಸುಮ್ಮನೆ ಬಂದುಬಿಡಬೇಕು. ತಲೆ ಬಗ್ಗಿಸಿಕೊಂಡು ಶಾಲೆಗೆ ಹೋಗಬೇಕು… ಹಾಗೇ ವಾಪಸ್ ಬರಬೇಕು.

ಓದುವುದರತ್ತ ಮಾತ್ರ ನಮ್ಮ ಗಮನವಿರಬೇಕು’. ಹೀಗಾದರೆ, ಮುಂದೆ ಅಂವ ಒಬ್ಬ ಯಶಸ್ವೀ ಸಾಫ್ಟ್ ಆದ ಸಾಫ್ಟ್‌‌ವೇರ್ ಎಂಜಿನಿಯರ್ ಆಗುತ್ತಾನೆಯೇ ಹೊರತು ಬ್ರಾಹ್ಮಣರನ್ನು ಬಯ್ಯುವವನಿಗೆ ಉತ್ತರ ಕೊಡುವ ಅಥವಾ ಪ್ರತಿಪ್ರಶ್ನೆ ಮಾಡುವ ಮನಸ್ಥಿತಿಯೇ ಇರುವುದಿಲ್ಲ. ಯಾವನಾದರೂ ಒಬ್ಬ, ಬ್ರಾಹ್ಮಣ ವಿರೋಧಿಯನ್ನು ಪ್ರಶ್ನಿಸಿದರೆ, ಅವನೇ ಪ್ರಶ್ನಿಸಿಬಿಟ್ಟನಲ್ಲ ನಾವ್ಯಾಕೆ ಸುದ್ದಿಗೆ ಹೋಗಿ ಮೈ ಮೇಲೆ ಹಾಕಿಕೊಳ್ಳಬೇಕು ಎಂಬ ಉಡಾಫೆ. ಇದು ಬ್ರಾಹ್ಮಣರ ಅವನತಿಗೆ ಅವರೇ ಹಾಡಿಕೊಳ್ಳುತ್ತಿರುವ ನಾಂದಿ. ನೀವೇ ಆಲೋಚನೆ ಮಾಡಿ, ರಸ್ತೆಯಲ್ಲಿ ಓಡಾಡುವ ಗಾಡಿಗಳ ಮೇಲೆ ಗೌಡಾಸ್, ಕುರುಬಾಸ್ ಎಂದು ತಂತಮ್ಮ ಜಾತಿ ಹೆಸರು ಹಾಕಿಕೊಳ್ಳುತ್ತಾರೆ. ಆದರೆ ಯಾರಾದರೂ ಒಬ್ಬ ಬ್ರಾಹ್ಮಣ ಗಾಡಿಯ ಮೇಲೆ ‘ಬ್ರಾಹ್ಮಣಾಸ್’ ಎಂದು ಹಾಕಿಕೊಂಡಿದ್ದು ನೋಡಿದ್ದೀರಾ?

‘ಹರಿ ಸರ್ವೋತ್ತಮ, ವಾಯು ಜೀವೋತ್ತಮ’ ಎಂದು ಕಾರ್ ಹಿಂದೆ ಬರೆಸಿದವನೇ ಧೈರ್ಯವಂತ ಎಂಬಂತಾಗಿದೆ. ಅದಕ್ಕೇ ಫ್ಯಾಮಿಲಿ ಮೀಟಿಂಗ್ ಮಾಡಿ ನೆಂಟರಿಷ್ಟರ ಬಳಿ ಅಭಿಪ್ರಾಯ ಕೇಳಿ, ‘ನಮ್ಮ ಮೈದುನನೂ ಕಾರ್ ಮೇಲೆ ಬರೆಸಿದಾನೆ. ಏನ್ ಆಗಲ್ಲ ಬರೆಸೋ’ ಎಂದು ಹೇಳಿದಾಗ ಮಾತ್ರ ಇವರಿಗೆ ಸಮಾಧಾನ. ಖಾಸಗಿ ಚಾನೆಲ್ ತಪ್ಪು ಮಾಡಿದೆ ನಿಜ. ಆದರೆ ನಾಳೆ ಇನ್ನೊಂದು ಚಾನೆಲ್ ಇಂಥದ್ದೇ ತಪ್ಪು ಮಾಡಿದರೆ ಅದನ್ನು ವಿರೋಧಿಸುತ್ತಾ ಕೂರುವುದಕ್ಕಾಗುವುದಿಲ್ಲ. ಬದಲಿಗೆ ಬ್ರಾಹ್ಮಣರನ್ನು ಬಯ್ಯುವ ಚಟವಿರುವ ಬುದ್ಧಿಜೀವಿಗಳು, ಮಿಷನರಿಗಳಿಗೆ ಸರಿಯಾಗಿ ಎಚ್ಚರಿಕೆ ನೀಡಿದರೆ ಅಥವಾ ಕಾನೂನು ಕ್ರಮ ಕೈಗೊಂಡರೆ, ಬಾಕಿಯವರೆಲ್ಲ ಬಾಯಿ ಮುಚ್ಚಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya