ದೇವರನ್ನು ಬಯ್ಯುವುದೇ ನಿಮ್ಮ ‘ನಿಜಗುಣ’ವೇ ಸ್ವಾಮೀಜಿ?

 

ಸದ್ಯಕ್ಕೆ ಇರುವ ಟ್ರೆಂಡ್ ಏನೆಂದರೆ, ಎಡಪಂಥೀಯರು ತಾವೇನಾದರೂ ಬಲಪಂಥೀಯರ ಬಗ್ಗೆ ಅಥವಾ ಮೇಲ್ಜಾತಿ ಎಂದು ಅವರೇ ಸಂಬೋಧಿಸುವ ವರ್ಗಕ್ಕೆ ವಿವಾದಾತ್ಮಕವಾಗಿ ಬಯ್ಯಬೇಕೆಂದರೆ, ನೇರವಾಗಿ ಬಯ್ಯುವುದಿಲ್ಲ. ಬದಲಿಗೆ ಅಂಬೇಡ್ಕರ್ ಹೀಗೆ ಹೇಳಿದ್ದರು, ಹಾಗೆ ಹೇಳಿದ್ದರು ಎಂದು ಹೇಳಿ ಬಿಡುತ್ತಾರೆ. ಕಾರ್ಯಕ್ರಮವೊಂದರಲ್ಲಿ ಅಪ್ಪನ ಆಲದ ಮರದಲ್ಲೇ ಬೇತಾಳದಂತೆ ಜೋತು ಬಿದ್ದಿರುವ ಬಿಳಿ ಮಂಡೆ ಪತ್ರಕರ್ತೆಯೊಬ್ಬಳು ಹೇಳಿದ ಮಾತು – ‘ಅಂಬೇಡ್ಕರ್ ಮೇಲ್ಜಾತಿಯವರನ್ನು ವಿರೋಧಿಸಿದ್ದರು. ಪುರೋಹಿತಶಾಹಿಗಳು ಅಂದ್ರೆ ಅವ್ರಿಗೆ ಆಗ್ತಿರ್ಲಿಲ್ಲ. ಬ್ರಾಹ್ಮಣ್ರು ಅಂದ್ರೆ ತಿರುಗಿ ಬೀಳ್ತಿದ್ರು’ ಎಂದಿದ್ದರು. ಇಂಥ ಮಾತನ್ನು ಆ ಬಿಳಿ ಮಂಡೆ ಪತ್ರಕರ್ತೆಯೇ ಆಡಿದ್ದಿದ್ದರೆ, ಜನರೆಲ್ಲ ಪ್ರಶ್ನಿಸುತ್ತಿದ್ದರು. ಆದರೆ ಅಂಬೇಡ್ಕರ್ ಹೇಳಿದ್ದು ಅಂದ್ರೆ, ಅದನ್ನು ವಿರೋಧಿಸುವುದಕ್ಕೆ ಯಾರು ಬರುತ್ತಾರೆ ಹೇಳಿ? ಅಂಬೇಡ್ಕರ್ ಎಂದ ಕೂಡಲೇ, ಅವರು ಹೇಳಿದ್ದು, ಹೇಳದಿರುವುದನ್ನೆಲ್ಲ ಸಂವಿಧಾನಕ್ಕೆ ನೇತುಹಾಕಿ, ದಲಿತ ವಿರೋಧಿ ಪಟ್ಟ ಕಟ್ಟಿ ಬಿಡುತ್ತಾರೆ ಅಥವಾ ಜೈಲಿಗಟ್ಟುತ್ತಾರೆಂಬ ಭಯದಿಂದ ಯಾರೂ ಮಾತೇ ಆಡುವುದಿಲ್ಲ.

ಇನ್ನು ವಿರೋಧಿಸುವುದಂತೂ ದೂರದ ಮಾತು. ಹೀಗಾಗುವುದಕ್ಕೆ ಇನ್ನೊಂದು ಕಾರಣ, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವುದೊಂದು ಬಿಟ್ಟರೆ, ಅದರ ಬಗ್ಗೆ ನಯಾ ಪೈಸೆ ಓದಿಕೊಂಡಿರುವುದಿಲ್ಲ. ದಶಕಗಳಿಂದಲೂ ಇದೇ ನಡೆಯುತ್ತಿರುವುದು, ಅಂಬೇಡ್ಕರ್ ಹೆಸರು ಹೇಳುವುದು, ತಮಗೆ ಬೇಕಾದ ಸಿದ್ಧಾಂತ ಮಂಡನೆ ಮಾಡುವುದು. ಆದರೆ, ಇಷ್ಟು ದಿನ ಒಂಟಿಯಾಗಿದ್ದ ಈ ಪದ್ಧತಿಗೆ ಹೊಸದೊಂದು ಪದ್ಧತಿ ಸೇರಿಕೊಂಡಿದೆ. ಅಸ್ಪಶ್ಯತೆ ನಿವಾರಣೆಗಾಗಿ ಜನರಲ್ಲಿ ಅರಿವು ಮೂಡಿಸಿದ ಬಸವಣ್ಣನವರ ಹೆಸರನ್ನು ಹೇಳಿ, ತಮ್ಮ ಹಿಂದೂ ವಿರೋಧಿ, ಬ್ರಾಹ್ಮಣ ವಿರೋಧಿ ಸಿದ್ಧಾಂತವನ್ನು ಕಕ್ಕುವುದು. ಹೆಚ್ಚಿನವರು ಕಳಬೇಡ, ಕೊಲಬೇಡ ಎಂಬ ವಚನ ಬಿಟ್ಟು ಬಸವಣ್ಣನವರ ಬೇರೆ ವಚನಗಳನ್ನು ಓದಿಕೊಂಡಿಲ್ಲ. ಹೀಗಾಗಿ, ಬಸವಣ್ಣನವರ ಹೆಸರು ಹೇಳಿ, ಬಿಗಿದವರದ್ದೇ ಭಾಷಣ. ನಾನು ಇತ್ತೀಚೆಗೆ ಬೆಳಗಾವಿಯ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿಗಳ ಭಾಷಣ ಕೇಳುತ್ತಿದ್ದೆ.

ಅವರು ಹೇಳಿದ ಈ ಮಾತು ನನ್ನನ್ನು ಆಲೋಚನೆಗೆ ತಳ್ಳಿತು. ಅವರ ಮಾತು – ‘ಈ ದೇಶ ಮಾಂಸ ತಿಂದವರಿಂದ ಹಾಳಾಯ್ತೇನು ಎಂದು ಯಾರೋ ನನಗೆ ಕೇಳಿದರು. ಅದಕ್ಕೆ ನಾನು ಹೇಳಿದೆ ಈ ದೇಶ ಮಾಂಸ ತಿಂದವರಿಂದ ಹಾಳಾಗಿಲ್ಲ, ತುಪ್ಪ ತಿಂದವರಿಂದ ಹಾಳಾಗಿದೆ ಅಂತ ಹೇಳಿದೆ’ ಎಂದು ಮೈಕ್ ಮುಂದೆ ಬಂದು ಹೇಳಿದರು. ಈ ಸ್ವಾಮೀಜಿಯನ್ನು ಜನರಲ್ಲಿ ಅರಿವು ಮೂಡಿಸಿ ಎಂದು ಕರೆದಿದ್ದಾರೋ ಅಥವಾ ದೇಶ ಯಾವುದರಿಂದ, ಯಾರಿಂದ ಹಾಳಾಗಿದೆ ಎಂದು ಸಮೀಕ್ಷೆ ಮಾಡಿ ವರದಿ ಸಲ್ಲಿಸುವುದಕ್ಕೆ ಕರೆದಿದ್ದಾರೋ? ತುಪ್ಪ ತಿಂದವರಿಂದ ದೇಶ ಹಾಳಾಗುತ್ತಿದೆ ಎಂದು ಬಸವಣ್ಣ ಯಾವಾಗ ಇವರಿಗೆ ಹೇಳಿದ್ದಾರಂತೆ? ದೇಶದಲ್ಲಿ 99% ಮಾಂಸಹಾರಿಗಳಿದ್ದಾರೆ ಎಂದು ಹೇಳುವ ನೀವು ಯಾವಾಗ ಸಮೀಕ್ಷೆ ಮಾಡಿ ಬಂದಿದ್ದೀರಿ. ಸುಮ್ಮನೆ ಬಕ್ವಾಸ್ ಮಾತಾಡುವುದಕ್ಕಲ್ಲ ಸ್ವಾಮಿಗಳೇ ನಿಮ್ಮನ್ನು ಕರೆಸಿದ್ದು! ಬಸವಣ್ಣನವರ ವಚನ ಹೇಳಿ ಜನರನ್ನು ಒಂದು ಮಾಡಿ ಎಂದರೆ, ಮಾಂಸಹಾರಿ ಮತ್ತು ಸಸ್ಯಹಾರಿಗಳ ನಡುವೆ ತಂದಿಟ್ಟು ಮಜಾ ನೋಡುತ್ತೀರಲ್ಲ, ಇದೇನಾ ಸ್ವಾಮಿಗಳ ಕರ್ತವ್ಯ? ಇದಕ್ಕಾ ಕಾವಿ ತೊಟ್ಟಿದ್ದು?

‘ನೀವು ಮಾಡಿಕೊಂಡಿರುವ ದೇವರು ಸುಖದ ದೇವರುಗಳು. ಇವರಿಗೆ ಏನು ಇಷ್ಟವೋ ಅದನ್ನು ದೇವರ ಹೆಸರಲ್ಲಿ ಬಲಿ ಕೊಡುತ್ತಾರೆ’ ಎಂದಿದ್ದಾರೆ. ಸರಿ ಅದನ್ನು ಒಪ್ಪೋಣ. ಬಲಿ ಕೊಡುವುದನ್ನು ನಿಲ್ಲಿಸಿಬಿಡೋಣ. ಆದರೆ ಜೀಸಸ್ ಹೆಸರಿನಲ್ಲಿ ಚರ್ಚ್‌ನಲ್ಲಿ ಪಾದ್ರಿ ತನ್ನ ವೀರ್ಯವನ್ನು ಪವಿತ್ರ ಹಾಲು ಎಂದು ಹೇಳಿ ಭಕ್ತರಿಗೆ ಕುಡಿಸಿದ ಪ್ರಕರಣ ಮಹಾನ್ ಸ್ವಾಮಿಗಳ ಗಮನಕ್ಕೆ ಇನ್ನೂ ಬಂದಿಲ್ಲವೋ ಅಥವಾ ಇನ್ನೂ ಹಿಂದೂಗಳನ್ನು ಬಯ್ಯುವುದರಲ್ಲೇ ಮಗ್ನರಾಗಿದ್ದೀರೋ? ಕೇರಳದ ಕಣ್ಣೂರಿನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಪಾದ್ರಿ ರಾಬಿನ್, ‘ಜೀಸಸ್ ಲವ್ಸ್ ಯು’ ಎನ್ನುತ್ತಾ ಒಬ್ಬ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದರ ಬಗ್ಗೆಯೂ ಸ್ವಲ್ಪ ಹೇಳಿ ಸ್ವಾಮಿಗಳೇ? ಇನ್ನು ಅಹ್ಮದಾಬಾದ್‌ನ ಮಸೀದಿಯೊಂದರಲ್ಲಿ, ಇದೇ ಏಪ್ರಿಲ್‌ನಲ್ಲಿ, ಒಬ್ಬ ಹುಡುಗಿಗೆ ಮೌಲ್ವಿ ದೆವ್ವ ಬಿಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ರೂಮ್ ಬಾಗಿಲು ಹಾಕಿಕೊಂಡು ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪ್ರಕರಣದ ಬಗ್ಗೆಯೂ ಸ್ವಾಮೀಜಿಗಳು ಹೇಳಿ ಜನರನ್ನು ಎಚ್ಚರಿಸಿ ಉದ್ಧರಿಸಬೇಕಲ್ಲವೇ? ಯಾಕೆ ಇಸ್ಲಾಂ ತಂಟೆಗೆ ಹೋಗುವುದಿಲ್ಲ? ಹಿಂದೂಗಳ ಮೇಲೆ ಮಾತ್ರ ಏಕೆ ನಿಮ್ಮ ಟಾರ್ಗೆಟ್ ಅಥವಾ ಹಿಂದೂ ಸಂಪ್ರದಾಯಗಳ ವಿರುದ್ಧ ಮಾತ್ರ ಏಕೆ ನಿಮ್ಮ ಮಾರುದ್ದ ಭಾಷಣ? ಏಕೆಂದರೆ, ಈ ಸ್ವಾಮೀಜಿಗೆ ಹಿಂದೂ ದೇವತೆಗಳೆಂದರೆ, ದೆವ್ವಗಳಿದ್ದ ಹಾಗೆ.

ಇವರ ವಾದ ಎಷ್ಟು ಟೊಳ್ಳು ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ ಕೇಳಿ: ಇವರ ವಾದದ ಪ್ರಕಾರ ಯಾರಿಗೆ ಅಪ್ಪ ಅಮ್ಮ ಇರುತ್ತಾರೋ ಅವರೆಲ್ಲ ದೇವರಲ್ಲವಂತೆ. ಹಾಗಾದರೆ, ಲಕ್ಷಾಂತರ ಲಿಂಗಾಯತರು ದೇವರೆಂದು ನಂಬಿರುವ ಹಾಗೂ ಇವರೇ ಉಲ್ಲೇಖಿಸುವ ವಚನಗಳ ಕರ್ತೃ ಬಸವಣ್ಣ ದೇವರಲ್ಲವೇ? ದೇವರಲ್ಲದಿದ್ದ ಮೇಲೆ ಯಾಕಾಗಿ ಲಿಂಗಾಯತರು ಬಸವಣ್ಣನವರಿಗೆ ಆರತಿ ಎತ್ತಿ ಪೂಜಿಸುತ್ತಾರೆ? ಚಾತುರ್ವರ್ಣದ, ಜಾತಿಗಳ ಬಗ್ಗೆ ಕಿಲೋಮೀಟರ್ ಉದ್ದ ಮಾತಾಡುವ ನೀವು, ಬಸವಣ್ಣ ಲಿಂಗಾಯತ ಮತ ಹುಟ್ಟು ಹಾಕಿದ್ದರ ಬಗ್ಗೆ ಮಾತಾಡಿ ಎಲ್ಲರನ್ನು ಜಾತಿ ಬಿಟ್ಟು ಹೊರಬರುವುದಕ್ಕೆ ಹೇಳಬಹುದಿತ್ತಲ್ಲ? ಯಾಕೆ ಸುಮ್ಮನಿದ್ದೀರಿ?  ಇವರು ಬೇಕು ಎಂದೇ, ಹಿಂದೂ ಧರ್ಮಗಳನ್ನು ಹಳಿಯುತ್ತಿದ್ದಾರೆ ಎಂಬುದಕ್ಕೆ ಅವರ ಭಾಷಣದಲ್ಲಿ ಕಾರಿಕೊಳ್ಳುವ ವಿಷವೇ ಸಾಕ್ಷಿ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘ಲಕ್ಷ್ಮೀ ಪೂಜೆ ಮಾಡಿದರೆ ದುಡ್ಡು ಬರುತ್ತಂತೆ. ಹಾಗೆಲ್ಲ ಬರೋ ಹಾಗಿದ್ರೆ ಜಪಾನ್‌ನಲ್ಲಿ ಲಕ್ಷ್ಮೀ ಅಂದ್ರೆ ಯಾರು ಅಂತ ಗೊತ್ತಿರಬೇಕಿತ್ತಲ್ಲ. ಅವರ ಹತ್ರ ಹೋಗ್ ಕೇಳಿ ಲಕ್ಷ್ಮೀ ಯಾರು ಅಂತ ಕೇಳಿ, ‘ಲಕ್ಷ್ಮೀ ಅಂದ್ರೆ ಜೂಲಿ ಲಕ್ಷ್ಮೀನಾ?’ ಅಂತ ಕೇಳ್ತಾರೆ’ ಎಂದಿದ್ದಾರೆ.

ಜಪಾನ್‌ನಲ್ಲಿರುವವರೆಲ್ಲ ಶ್ರೀಮಂತರು ಎಂದು ನಿಮಗೆ ಯಾವ ಮೂರ್ಖ ಹೇಳಿದ್ದು ಸ್ವಾಮೀಜಿ? ಮೌಢ್ಯ ಹೋಗಲಾಡಿಸುವ ನೀವು, ಅಮೆರಿಕ- ಜಪಾನ್‌ನಲ್ಲೆಲ್ಲ ಬಡವರೇ ಇಲ್ಲ ಎಂದು ನಂಬಿರುವುದೇ ದೊಡ್ಡ ಮೌಢ್ಯವಲ್ಲವೇ? ಈ ಸನ್ಯಾಸಿಗೆ ಇಲ್ಲಿ ಜೂಲಿ ಲಕ್ಷ್ಮಿ ವಿಚಾರ ತರುವ ಅಗತ್ಯವೇನಿತ್ತು? ಯೌವನದಲ್ಲಿ ಟೆಂಟ್‌ನಲ್ಲಿ ಜೂಲಿ ಲಕ್ಷ್ಮೀಯನ್ನು ನೋಡಿದ ನೆನಪಾಯಿತೇ ಸ್ವಾಮಿಗಳಿಗೆ? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಲಕ್ಷ್ಮೀ ಪೂಜೆ ಮಾಡಿದರೂ ನಮ್ಮ ದೇಶದ ದಾರಿದ್ರ್ಯ ಹೋಗಿಲ್ಲ ಎಂದಿರಲ್ಲ, ನಿಮ್ಮ ತಲೆಯಲ್ಲಿ ನಿಜವಾಗಿಯೂ ತತ್ತ್ವಗಳೇ ಇವೆಯಾ ಅಥವಾ ಇರುವುದ ಇಂಥ ಅಸಂಬದ್ಧವೆಯಾ? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಿಂದೂಗಳೇ ಇದ್ದಾರೆ ಎಂದು ಇವರಿಗೆ ಹೇಳಿದವರ್ಯಾರು? ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿಗಳು, ಜೈನರು, ಸಿಖ್ಖರು ಎಲ್ಲರೂ ಇದ್ದಾರೆ. ಅವರೆಲ್ಲ ಬೇರೆ ಬೇರೆ ದೇವರ ಪೂಜೆ ಮಾಡುತ್ತಾರೆ. ಮಸೀದಿಯ ಮುಂದೆ, ಚರ್ಚ್‌ಗಳ ಮುಂದೆ, ಗುರುದ್ವಾರದ ಮುಂದೆ ಭಿಕ್ಷೆ ಬೇಡುವವರೆಲ್ಲ ಲಕ್ಷ್ಮೀ ಪೂಜೆ ಮಾಡಿಲ್ಲವಾದ್ದರಿಂದ ಅವರೆಲ್ಲ ಬಡವರಾದರು ಎಂದರ್ಥವೇ? ನಿಜಗುಣಾನಂದರೇ, ಲಕ್ಷ್ಮೀ ಪೂಜೆ ಮಾಡುವುದು ನಮ್ಮ ನಂಬಿಕೆ ಸ್ವಾಮಿ, ನಿಮಗ್ಯಾಕೆ ಆ ಉಸಾಬರಿ ಅಥವಾ ಬೇರೆ ಧರ್ಮದವರು ಪೂಜೆ ಮಾಡುತ್ತಿರುವುದನ್ನೇಕೆ ಮರೆತಿರಿ? ಲಕ್ಷ್ಮೀ ಪೂಜೆ ಮಾಡಿದರೆ ಹಣ ಬರಲ್ಲ, ದುಡಿದರೆ ಬರುತ್ತೆ ಎಂದರೂ ಜನರಿಗೆ ಅರ್ಥವಾಗುತ್ತಿತ್ತು. ಅದನ್ನು ಹೀಯಾಳಿಸಿಯೇ ಹೇಳುವ ತುರಿಕೆ ನಿಮಗೇಕೆ ಸ್ವಾಮೀಜಿ?

ಕೊಲ್ಲೂರು ಮೂಕಾಂಬಿಕೆಯ ವಿರುದ್ಧವೂ ಇವರ ಆಕ್ರೋಶವಿದೆ. ಈ ಸ್ವಾಮಿಯ ಭಾಷಣವನ್ನು ಹಾಗೇ ನಿಮ್ಮ ಮುಂದಿಡುತ್ತೇನೆ ಕೇಳಿ ‘ಕೊಲ್ಲೂರು ಮೂಕಾಂಬಿಕೆಗೆ ಸೀರೆ ಉಡಿಸಿದರೆ ದೇವ್ರು ತೃಪ್ತಿಯಾಗ್ತಾಳಂತೆ… ಥೂ!!’ ಎಂದು ತಮ್ಮ ಎದೆಯಲ್ಲಿದ್ದ ವಿಷ ಕಾರಿಕೊಂಡಿದ್ದಾರೆ. ಈಗ ಇದೇ ಸ್ವಾಮೀಜಿಗೆ ಕೇಳಬೇಕೆನಿಸಿದೆ, ಹಿಂದೂ ಧರ್ಮದ ದೇವರಿಗೆ ಬಯ್ದ ಹಾಗೆ ಅಲ್ಲಾ, ಪ್ರವಾದಿ ಮಹಮ್ಮದ ಅಥವಾ ಜೀಸಸ್‌ಗೆ ಬಯ್ಯುವ ತಾಕತ್ತು ನಿಮಗಿದೆಯೇ? ಭಾಷಣ ಮುಂದುವರಿಸುತ್ತಾ ಹೇಳುತ್ತಾರೆ, ತಾನು ಇಸ್ಲಾಂ ಬಗ್ಗೆ ಮಾತಾಡಲ್ಲ ಎಂದು. ಅಂದ್ರೆ ಈ ಸ್ವಾಮಿಯ ತಾಕತ್ತು, ಹಾರಾಟ ಚೀರಾಟವೆಲ್ಲ ಕೇವಲ ಶಾಂತಿಪ್ರಿಯ ಹಿಂದೂಗಳ ದೇವರನ್ನು ಬಯ್ಯುವುದಕ್ಕೆ ಮಾತ್ರ ಎಂದಾಯಿತಲ್ಲ? ಅಲ್ಲ ಸ್ವಾಮಿಗಳೇ, ಎಲ್ಲ ಧರ್ಮದ ಜನರನ್ನು ಒಂದು ಮಾಡಿ ಎಂದು ನಿಮ್ಮನ್ನು ಸ್ಟೇಜ್ ಹತ್ತಿಸಿ ಮೈಕ್ ಕೊಟ್ಟರೆ, ಹಿಂದೂಗಳೇ ಹೊಡೆದು ಕಿತ್ತಾಡುವಂತೆ ಮಾತಾಡುವ ನಿಮ್ಮನ್ನು ಇನ್ನೂ ಸ್ವಾಮೀಜಿ ಎಂದು ಏಕೆ ಕರೆಯಬೇಕು? ಹಿಂದೂ ಧರ್ಮ, ದೇವರ ನಿಂದಕ ಎಂದರೆ ಸರಿಯಾಗಬಹುದಲ್ಲವೇ?

‘ಹೆಣ್ಣು ದೇವರಿಗೆ ಸೀರೆ ಕೊಟ್ಟು ಬರ್ತೀರಿ, ಮಾರನೇ ದಿನ ಪೂಜಾರಿ ಹೆಂಡ್ತಿ ಅದನ್ನು ಉಟ್ಕೊಂಡು ಹೋಗ್ತಾಾ ಇರ್ತಾಳೆ’ ಎನ್ನುತ್ತೀರಿ. ಇದನ್ನು ಸ್ವಾಮೀಜಿಗಳು ಸ್ವತಃ ನೋಡಿದಂತೆಯೇ ಹೇಳಿದ್ದರು. ಆದರೆ ಕಾವಿಧಾರಿಗಳೇ, ಎಲ್ಲ ಬಿಟ್ಟು ಸನ್ಯಾಾಸಿಯಾಗಿರುವ ನೀವು ಏಕೆ ಒಬ್ಬ ಭಕ್ತ ದೇವರಿಗೆ ಸೀರೆ ಕೊಡುವವರೆಗೆ ಕಾದು, ಮಾರನೇ ದಿನ ಪೂಜಾರಿ ಹೆಂಡತಿ ಅದೇ ಸೀರೆ ಉಟ್ಟು ಬರುವುದನ್ನೇಕೆ ನೋಡಲು ಹೋಗಿದ್ದಿರಿ? ಪರಸ್ತ್ರೀಯನ್ನು ನೋಡುವುದಲ್ಲದೇ, ಅವಳು ಧರಿಸಿದ್ದು ಅದೇ ಬಟ್ಟೆಯಾ ಎಂದು ಪರೀಕ್ಷಿಸುವುದು ತಪ್ಪಲ್ಲವೇ? ಹೆಣ್ಣು ದೇವರಿಗೆ ಸೀರೆ, ಅರಿಶಿಣ, ಕುಂಕುಮ, ಬಾಗಿನಗಳನ್ನು ಕೊಡುವುದು ನಮ್ಮ ನಂಬಿಕೆ ಸ್ವಾಮಿ, ಅದನ್ನು ಹಳಿಯುವುದಕ್ಕೆ ಬಸವಣ್ಣ ನಿಮಗೆ ಹೇಳಿಕೊಟ್ಟಿಲ್ಲವೆಂದ ಮೇಲೆ, ನಿಮ್ಮ ಸಿದ್ಧಾಂತಗಳನ್ನೆಲ್ಲ ಜನರ ಮೇಲೆ ಯಾಕೆ ಹೇರುತ್ತಿದ್ದೀರಿ? ಬಸವಣ್ಣನವರ ವಚನ ಹೇಳಿ ಎಂದರೆ ನಿಮ್ಮ ತುತ್ತೂರಿ ಊದುತ್ತೀರಲ್ಲ ನಿಜಗುಣರೇ? ಒಬ್ಬರ ಮನವ ನೋಯಿಸಬೇಡ, ಒಬ್ಬರ ಮನೆ ಹಾಳು ಮಾಡಬೇಡ ಇಷ್ಟೇ ಧರ್ಮ ಎನ್ನುತ್ತಾರೆ ಇವರು. ಆದರೆ ಈ ಸ್ವಾಮೀಜಿಯೇ ದೇವಸ್ಥಾನಕ್ಕೆ ಹೋಗುವವರನ್ನು ಪ್ರಶ್ನಿಸುತ್ತಾ, ದೇವರ ಬಗ್ಗೆ ನಿಂದನೆಯ ಮಾತುಗಳನ್ನಾಡುತ್ತಾರೆ.

ಸ್ವಲ್ಪ ಹೊತ್ತು ಬಿಟ್ಟು ಅದೇ ಭಾಷಣದಲ್ಲಿ ಮಂದಿರಕ್ಕೆ, ಮಸೀದಿಗೆ, ಚರ್ಚ್‌ಗೆ ಹೋಗುವುದು ನಂಬಿಕೆಯಂತೆ. ಆದರೆ ತಿರುಪತಿಗೆ ಹೋಗಿ ತಲೆ ಬೋಳಿಸಿ ಕೊಳ್ಳುವುದು ಮೂಢನಂಬಿಕೆಯಂತೆ. ಹಾಗಾದರೆ, ಮಸೀದಿಯಲ್ಲಿ ಕಲ್ಲಿನ ಮೇಲೆ ಹೊದಿಸುವ ಚಾದರ್, ಚರ್ಚ್‌ನಲ್ಲಿ ಹಚ್ಚುವ ಕ್ಯಾಂಡಲ್ ಮೂಢನಂಬಿಕೆಯಲ್ಲವೇ? ಇಷ್ಟೆಲ್ಲ ಹೇಳಿ ದೇವರನ್ನು ನಂಬುವವರು ಮುಟ್ಠಾಳರು ಎಂದು ಭಾಷಣ ಮುಗಿಸುವ ಇವರು ಅಸಲಿಗೆ ಮೈಕ್ ಮುಂದೆ ಏನು ಹೇಳುವುದಕ್ಕೆ ಹೊರಟಿದ್ದಾರೆ? ಇವರಲ್ಲೇ ಗೊಂದಲವಿರುವಾಗ, ಜನರಿಗೆ ಅದ್ಯಾವ ಉಪದೇಶ ಕೊಟ್ಟಾರು? ಭಾಷಣ ತೀರ ಹಾದಿ ತಪ್ಪುತ್ತಿರುವಾಗ ಬಸವಣ್ಣನವರ ವಚನ ಹೇಳಿ ಮತ್ತೆ ಟ್ರ್ಯಾಕ್‌ಗೆ ತಂದು ಇವರಾಡುವ ಮಾತಿಗೂ ಬಸವಣ್ಣನವರ ವಚನಗಳಿಗೂ ಸಂಬಂಧವೇ ಇಲ್ಲದಂತಿತ್ತು. ಬಸವಣ್ಣನವರು ದುಡಿ, ಕೆಲಸ ಮಾಡು ಎಂದು ಹೇಳುವುದಕ್ಕೂ ಈ ಸ್ವಾಮೀಜಿ, ದೇವರನ್ನು ಜೂಲಿ ಲಕ್ಷ್ಮೀ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ.

ಇವರ ಭಾಷಣದಲ್ಲಿ ಬಸವಣ್ಣನವರ ಅಷ್ಟೂ ವಚನಗಳು ಹಾಗೂ ಅದರ ಅರ್ಥವನ್ನು ಇದ್ದ ಹಾಗೇ ಹೇಳಿದರೆ ಅದನ್ನು ಮೀರಿ ಬೇರೆ ಏನೂ ಬೇಕಾಗುವುದಿಲ್ಲ. ಏಕೆಂದರೆ, ಬಸವಣ್ಣನವರು ಎಲ್ಲವನ್ನೂ ಅಷ್ಟು ಮನ ಮುಟ್ಟುವಂತೆ ಹೇಳಿದ್ದಾರೆ. ದೇಶದಲ್ಲಿದ್ದ ಸಮಸ್ಯೆಗಳ ಬಗ್ಗೆ ದನಿಯೆತ್ತಿದ್ದಾರೆ. ಆದರೆ ಈ ಸ್ವಾಮೀಜಿ ಮಾತ್ರ ಒಂದೆರಡು ವಚನಗಳನ್ನು ಹೇಳಿ, ಹಿಂದೂ ದೇವರ ಮೇಲೆ ಮಾತ್ರ ವಿಷ ಕಾರುತ್ತಿದ್ದಾರೆ. ಸ್ವಾಮೀಜಿಗಳೇ, ಒಂದೋ ನೀವು ಎಲ್ಲ ಧರ್ಮದ ದೇವರನ್ನೂ ನಿಂದಿಸಿ ನಾಸ್ತಿಕರಾಗಿ ಅಥವಾ ನಾನು ಕೇವಲ ಹಿಂದೂ ಧರ್ಮದ ಮತ್ತು ದೇವರ ನ್ಯೂನತೆಗಳನ್ನು ಮಾತ್ರ ಎತ್ತಿ ತೋರಿಸುತ್ತೇನೆ ಎಂದು ಘೋಷಣೆ ಮಾಡಿಕೊಂಡು ಬಿಡಿ ಅಥವಾ ನಿಮ್ಮ ಮಾತನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಉತ್ತರಿಸಿ ಚರ್ಚೆ ಮಾಡಿ. ಇದ್ಯಾವುದೂ ಆಗಲಿಲ್ಲವಾ ಇನ್ನು ಮುಂದೆ ಮೈಕ್ ಮೂತಿಯ ಮುಂದಿದೆ ಎಂದು ಹಿಂದೂ ದೇವರ ಬಗ್ಗೆ ಅಸಂಬದ್ಧ ಮಾತುಗಳನ್ನಾಡಬೇಡಿ. ನೀವೇ ಕಾವಿ ಧರಿಸಿ, ಭಸ್ಮ ಬಳಿದು, ರುದ್ರಾಕ್ಷಿ ಮಾಲೆ ಹಾಕಿಕೊಂಡು ಮೌಢ್ಯದ ಪಾಠ ಮಾಡುವುದಕ್ಕೆ ಬರಬೇಡಿ.

ಚಿರಂಜೀವಿ ಭಟ್

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya