ವಿಶ್ವೇಶ್ವರಯ್ಯ ಕಟ್ಟಿದ್ದು ಕನ್ನಂಬಾಡಿ, ಇದನ್ನು ಒಪ್ಪಿಕೊಳ್ಳಲೇನು ಧಾಡಿ?

2002ರಲ್ಲಿ ನಡೆದ ಘಟನೆ ಇದು. ಆಗಷ್ಟೇ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಅದು ನಮ್ಮ ದೇಶದ ಹೆಮ್ಮೆ ಎಂದೇ ಎಲ್ಲ ಮಾಧ್ಯಮಗಳು ವರದಿ ಮಾಡಿದ್ದವು. ಆ ಒಂದು ಕನಸು ಸಾಕಾರಗೊಳ್ಳುವುದಕ್ಕೆ ಕಾರಣ ಡಾ. ಎ.ಪಿ.ಜೆ ಅಬ್ದುಲ್ ಕಲಾಂ. ನಮಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಪಾಕಿಸ್ತಾನವೂ 2003ರಲ್ಲೇ ಘೋರಿ ಎಂಬ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಿತ್ತು. ಆಗ ಒಬ್ಬ ಮೂರ್ಖ ಲೇಖಕ ಬರೆದಿದ್ದನ್ನು ಓದಿದ್ದೆ. ಅದರಲ್ಲಿ ಅವನ ವಾದವೇನೆಂದರೆ, ಅಗ್ನಿ ಮತ್ತು ಘೋರಿ ಎರಡೂ ಕ್ಷಿಪಣಿಗಳು ಒಂದೇ ತಂತ್ರಜ್ಞಾನದ್ದಾಾಗಿದ್ದು, ಅದನ್ನು ಹೇಗೆ ನಿರ್ಮಿಸಬಹುದು ಎಂಬ ಮಾಹಿತಿಯನ್ನು ಸ್ವತಃ ಅಬ್ದುಲ್ ಕಲಾಮ್‌ರೇ ಪಾಕ್‌ಗೆ ಬಿಟ್ಟುಕೊಟ್ಟಿದ್ದಾರೆ ಎಂದು ಬರೆದಿದ್ದ. ಆ ಲೇಖನ ಓದಿ ನಾನೂ ಮೂರ್ಖನಾಗಿದ್ದೆ.

ಅಬ್ದುಲ್ ಕಲಾಂ ಮೇಲಿದ್ದ ನಂಬಿಕೆ, ವಿಶ್ವಾಸ, ಗೌರವ ಎಲ್ಲವೂ ಬುಡಮೇಲಾಗಿತ್ತು. ನಂತರ ಹಲವರನ್ನು ಸಂದರ್ಶಿಸಿದಾಗ ತಿಳಿದಿದ್ದೇನೆಂದರೆ, ಪಾಕ್ ನಮ್ಮ ಮೇಲಿನ ಸ್ಪರ್ಧೆಗೆ ಮತ್ತು ಕ್ಷಿಪಣಿ ಉಡಾಯಿಸಿದ ಭಯಕ್ಕೆ ತಾನೂ ಕ್ಷಿಪಣಿ ಉಡಾಯಿಸಬಲ್ಲೆ ಎಂದು ತೋರಿಸಿಕೊಳ್ಳುವುದಕ್ಕಾಗಿಯಷ್ಟೇ ಘೋರಿಯನ್ನು ನಿರ್ಮಿಸಿದ್ದು ಎಂದು. ಆದರೆ ಅಷ್ಟರಲ್ಲಾಗಲೇ ಅಬ್ದುಲ್ ಕಲಾಮ್‌ರ ಹೆಸರಿಗೆ ಎಷ್ಟು ಮಸಿ ಬಳಿಯಬೇಕೋ ಅಷ್ಟು ಬಳಿದಾಗಿತ್ತು. ನಂಬುವವರು ನಂಬಿದರು, ಇನ್ನುಳಿದವರು ತಲೆಯೇ ಕೆಡಿಸಿಕೊಳ್ಳಲಿಲ್ಲ. ಈಗ ಇಂಥದ್ದೇ ಘಟನೆ ಮತ್ತೊಮ್ಮೆ ನಡೆದಿದೆ. ಈ ಬಾರಿ ಹೆಸರು ಕೆಡಿಸಿಕೊಳ್ಳುತ್ತಿರುವುದು ಮತ್ತೊಬ್ಬ ಭಾರತರತ್ನ, ದೇಶ ಕಂಡ ಮಹಾನ್ ಎಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ. ಈಗ ಕೇಳಿ ಬರುತ್ತಿರುವ ವಾದವೇನೆಂದರೆ, ಮೈಸೂರು-ಬೆಂಗಳೂರು-ಮಂಡ್ಯ ಇತರ ಕಡೆಗೆ ನೀರು ಒದಗಿಸುತ್ತಿರುವ ಕೆಆರ್‌ಎಸ್ ಡ್ಯಾಮ್ ಕಟ್ಟಿದ್ದು ವಿಶ್ವೇಶ್ವರಯ್ಯನವರು ಎಂದು ತಿಳಿದುಕೊಂಡಿದ್ದರೆ ಅದು ತಪ್ಪಂತೆ.

ಅದನ್ನು ಕಟ್ಟಿದ್ದು ಡೆಪ್ಯುಟಿ ಚೀಫ್ ಎಂಜಿನಿಯರ್ ಆಗಿದ್ದ ಕ್ಯಾಪ್ಟನ್ ಡಾಸ್ ಅಂತೆ! ವಿಶ್ವೇಶ್ವರಯ್ಯನವರು ಕೆಆರ್‌ಎಸ್ ಡ್ಯಾಮ್ ಕಟ್ಟುವುದಕ್ಕೆ ಸಹಾಯ ಮಾಡಿರಬಹುದು ಅಥವಾ ಮಾಡಿಲ್ಲದೇ ಇರಬಹುದಂತೆ. ನಾವು ಇಷ್ಟು ವರ್ಷ ನಂಬಿದ್ದು ವಿಶ್ವೇಶ್ವರಯ್ಯನವರೇ ಕೆಆರ್‌ಎಸ್ ಕಟ್ಟಿದ್ದಾರೆಂದು. ಇವತ್ತಿಗೂ ಮುದ್ದೇನಹಳ್ಳಿ ಎಂದು ಹೇಳಿದರೆ, ವಿಶ್ವೇಶ್ವರಯ್ಯನವರ ಊರಾ ಎಂದು ಕೇಳುವವರಿದ್ದಾರೆ. ಅವರು ಕೇವಲ ಮುದ್ದೇಳನಹಳ್ಳಿಗಷ್ಟೇ ಹೆಮ್ಮೆಯಾಗಿರದೇ, ದೇಶವೇ ಹೆಮ್ಮೆ ಪಡುವಂಥವರು. ನಾವೆಲ್ಲ ಚಿಕ್ಕವರಿದ್ದಾಗ ಅವರ ಕತೆಗಳನ್ನು ಕೇಳಿಯೇ ಬೆಳೆದಿದ್ದು. ಆದರೆ ಇವೆಲ್ಲ ಸುಳ್ಳು ಎಂದು ಗೊತ್ತಾದರೆ ಹೇಗಾಗಬೇಡ? ಈ ಸಲ ಲೇಖನ ಬರೆದಿದ್ದು ಯಾವುದೋ ಒಬ್ಬ ಮೂರ್ಖನಲ್ಲ. ಬದಲಿಗೆ ‘ಇತಿಹಾಸ ತಜ್ಞ’ ನಂಜರಾಜೇ ಅರಸ್ ಅವರು.

ಇವರ ಹಲವು ವರ್ಷಗಳ ಸಂಶೋಧನೆಗಳು ನಮ್ಮನ್ನು ಆಲೋಚನೆಗೆ ದೂಡಿದೆ. ಆದರೆ ಇಂಥ ಸರಕಾರಿ ಕೃಪಾಪೋಷಿತ ಸಂಶೋಧನೆಗೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬುದನ್ನು ಎಡಪಂಥೀಯ ಸಂಶೋಧಕರು ಮರೆತಂತಿದೆ. ಇವರು ಮಾಡಿರುವ ಒಂದು ವಾದದಲ್ಲೂ ಹುರುಳೇ ಇಲ್ಲ. ಕೇವಲ ಸಾಂದರ್ಭಿಕ ದಾಖಲೆಗಳ ಮೂಲಕ ಮಾತಾಡುವ, ಒಂದೆರಡು ಪೇಪರ್ ಚೀಟಿ ಇಟ್ಟುಕೊಂಡು ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುತ್ತೇನೆ ಎಂದಿರುವ ಭಾವತೀವ್ರತೆ, ಪ್ರಚಾರಪ್ರಿಯ ಮನೋಭಾವವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಇರಲಿ, ಇಷ್ಟು ವರ್ಷ ಯಾರಿಗೂ ಗೊತ್ತಿರದ, ಅಜ್ಞಾತವಾಗಿ ಗುಹೆಯಲ್ಲೇ ಸಂಶೋಧನೆ ಮಾಡಿದ ಇವರ ಬಗ್ಗೆ ಮಾತಾಡುವುದಕ್ಕಿಂತ ಅವರ ವಾದಗಳನ್ನು ಆಲಿಸೋಣ. ಮೊದಲನೇ ವಾದ: ವಿಶ್ವೇಶ್ವರಯ್ಯ ಕೆಆರ್‌ಎಸ್ ಡ್ಯಾಮ್ ಕಟ್ಟಿಲ್ಲ. ನಮ್ಮ ಇತಿಹಾಸ ತಜ್ಞರು ಹೇಳುವುದೇ ಸತ್ಯ ಎಂದು ತಿಳಿದು ಅದರ ಪ್ರಕಾರವೇ ಮಾತಾಡೋಣ. ನಂಜರಾಜೇ ಅರಸರೇ, 1909ರಲ್ಲಿ ಹೈದರಾಬಾದ್ ಸರಕಾರ ಬಹುಮುಖ್ಯವಾದ ಕೆಲಸಕ್ಕಾಗಿ ವಿಶ್ವೇಶ್ವರಯ್ಯನವರನ್ನು ಕರೆಸಿಕೊಂಡಿತ್ತು.

ಆ ಕೆಲಸ ಇಷ್ಟೇ: ಸೆಪ್ಟೆಂಬರ್ 28 1908ರಂದು ಹೈದರಾಬಾದ್‌ನಿಂದ ಹರಿದು ಹೋಗುವ ಮೂಸಿ ನದಿ ಪ್ರವಾಹವಾಗಿ ಇಡೀ ನಗರವನ್ನು ಹಾಳುಗೆಡವಿತ್ತು. ಅದರಲ್ಲಿ ಕೊಸವಾಡಿಯ ಹೆಚ್ಚು ಕಡಿಮೆ 2 ಸಾವಿರ ಮಂದಿ ಕೊಚ್ಚಿಕೊಂಡು ಹೋಗಿದ್ದರು ಅಥವಾ ಮೃತಪಟ್ಟಿದ್ದರು. ಇದು ಆಗ ಬಹಳ ದೊಡ್ಡ ತಲೆನೋವಾಗಿತ್ತು. ಅದಕ್ಕೆ ವಿಶ್ವೇಶ್ವರಯ್ಯನವರನ್ನು ಕರೆಸಿ, ಏನೇನು ಹಾನಿಯಾಗಿದೆ, ಮುಂದೆ ಇದು ಮರುಕಳಿಸದಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಯಲಿಚ್ಛಿಸಿದರು. ವಿಶ್ವೇಶ್ವರಯ್ಯನವರು ಸರ್ವೇ ಮಾಡಿದ ಮೇಲೆ ಮೂಸಿ ನದಿಗೆ ಅಡ್ಡಲಾಗಿ ಮತ್ತು ಈಸಿ ನದಿಗೆ ಅಡ್ಡಲಾಗಿ ಒಂದು ಡ್ಯಾಮ್ ಕಟ್ಟಬೇಕು ಎಂದು ಅಭಿಪ್ರಾಯ ಕೊಟ್ಟರು. ಆಗಲೇ ಒಸ್ಮಾನ್ ಸಾಗರ್ ಮತ್ತು ಹಿಮಾಯತ್ ಸಾಗರ್ ಎಂಬ ಎರಡು ಡ್ಯಾಮ್ ಕಟ್ಟಿದ್ದು. ಇವತ್ತಿಗೂ ಅಲ್ಲಿನ ಜನ ವಿಶ್ವೇಶ್ವರಯ್ಯನವರನ್ನು ನೆನೆಸಿಕೊಳ್ಳುವುದು ಇದಕ್ಕೆ. ಇದಲ್ಲದೇ ಅವರು, ಹೈದರಾಬಾದ್‌ಗೆ ಆಗಿನ ಕಾಲಕ್ಕೆ ಅತ್ಯಾಧುನಿಕವಾದ ಒಳಚರಂಡಿ ವ್ಯವಸ್ಥೆಯನ್ನೂ ನಿರ್ಮಿಸಿ, ಒಂದು ಮಷಿನ್ ಅನ್ನೂ ಸ್ಥಾಪಿಸಿದ್ದರು. ಅದು ಇಂದಿಗೂ ಕೆಲಸ ಮಾಡುತ್ತಿದೆ.

ಇದಕ್ಕಿಂತ ಮೊದಲು ಅವರು ಬಾಂಬೆಯಲ್ಲಿ ಮತ್ತೊಂದು ರೀತಿಯ ನೀರಾವರಿ ಯೋಜನೆ (Block system of irrigation)  ಹಾಕಿಕೊಟ್ಟು ಬಂದಿದ್ದರು. ಅದು ಬಾಂಬೆ ಜನರನ್ನು ಮತ್ತೆ ಕೃಷಿ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು. ಇದಕ್ಕಾಗಿ ನಾಲ್ಕು ವರ್ಷ ಶ್ರಮಿಸಿದ್ದರು. ಇದನ್ನು ಶ್ಲಾಸಿದ್ದ ಬಾಂಬೆ ಸರಕಾರದ ಹಿರಿಯ ಸದಸ್ಯ ಸರ್ ಜಾನ್ ಮುಯ್ನ್‌ ಮ್ಯಾಕೆನ್‌ಝೀ ಅವರು 1908ರಲ್ಲಿ ಪೂನಾದಲ್ಲಾದ ಬಾಂಬೆ ಶಾಸಕಾಂಗ ಸಭೆಯ ಅಧಿವೇಶನದಲ್ಲಿ – ‘ಈ ನೀರಾವರಿ ಯೋಜನೆಯ ಶ್ರೇಯ, ಇದರ ಹಿಂದೆ ಕೆಲಸ ಮಾಡಿದ್ದ ಅಪ್ರತಿಮ ಪ್ರತಿಭಾವಂತ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲಬೇಕು. ಪಬ್ಲಿಕ್ ವರ್ಕ್ಸ್‌ ಡಿಪಾರ್ಟ್ ಮೆಂಟ್‌ನ ಅತ್ಯಂತ ಸಮರ್ಥ ಅಧಿಕಾರಿ ಅವರು. ಅವರ ಜತೆ ಕೆಲಸ ಮಾಡಿದ್ದು ನಮಗೆ ಖುಷಿ ಹಾಗೂ ಗೌರವ ತಂದುಕೊಟ್ಟಿದೆ’ ಎಂದಿದ್ದರು.

ಈ ಸಂಗತಿ 15 ಆಗಸ್ಟ್‌ 1908ರ ಬಾಂಬೆ ಗೌರ್ಮೆಂಟ್ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ನಂಜರಾಜೇ ಅರಸರೇ, ವಿಶ್ವೇಶ್ವರಯ್ಯನವರನ್ನು ಹೊಗಳಿದ್ದು ಟಿಪ್ಪು ಜಯಂತಿ ಮಾಡಿದ ತುಘಲಕ್ ಸರಕಾರವಲ್ಲ. ಬದಲಿಗೆ, ಭಾರತೀಯರ ಮುಖ ಕಂಡರಾಗದ ಬ್ರಿಟಿಷ್ ಸರಕಾರ ಸ್ವಾಮಿ. ಇಷ್ಟೆಲ್ಲ ಮಾಡಿದ್ದ ವಿಶ್ವೇಶ್ವರಯ್ಯನವರಿಗೆ ಒಂದು ಡ್ಯಾಮ್ ಕಟ್ಟುವುದು ಕಷ್ಟ ಅಥವಾ ಕಟ್ಟಲೇ ಇಲ್ಲ ಎಂದು ಅನಿಸುವುದು ಬಹುಶಃ ನಂಜರಾಜೇ ಅರಸರಂಥ ಮಹಾನ್ ಸಂಶೋಧಕರಿಗೆ ಮಾತ್ರ. ಇಲ್ಲದಿದ್ದರೆ ಕಾಮನ್‌ಸೆನ್ಸ್‌ ಇರುವ ಯಾರಿಗಾದರೂ ಕೆಆರ್ ಎಸ್ ಡ್ಯಾಮ್ ಯಾರು ಕಟ್ಟಿದ್ದು ಎಂದು ಅರ್ಥ ಮಾಡಿಸಲು ಕಷ್ಟ ಪಡಬೇಕಾಗಿರಲಿಲ್ಲ. ಇನ್ನು ನಂಜರಾಜೇ ಅವರೇ ಹೇಳುವಂತೆ ಕೃಷ್ಣರಾಜ ಸಾಗರ ಡ್ಯಾಮ್ ಕಟ್ಟಿದ್ದು ಬ್ರಿಟಿಷ್‌ನವನಾದ ಕ್ಯಾಪ್ಟನ್ ಡಾಸ್.

ನಂಜರಾಜೇ ಅವರು ನಂಜನ್ನು ಕಾರಿಕೊಳ್ಳುವ ಭರದಲ್ಲಿ ಒಂದು ಸತ್ಯ ಮರೆತಂತಿದೆ. ಮೊದಲು ಈ ಪ್ರಾಜೆಕ್ಟ್‌ ಶುರು ಮಾಡಬೇಕಿದ್ದರೆ, ಇದನ್ನು ಬ್ರಿಟಿಷ್ ಸರಕಾರದ ಬಳಿ ತೆಗೆದುಕೊಂಡು ಹೋಗಿ ಕಾಡಿ ಬೇಡಿದಾಗ ಕೇವಲ 80 ಅಡಿ ಡ್ಯಾಮ್ ಕಟ್ಟಲು ಅನುಮತಿ ನೀಡಿದ್ದರು. ಆದರೆ ವಿಶ್ವೇಶ್ವರಯ್ಯನವರ ಪ್ಲಾನ್ ಇದ್ದಿದ್ದು 125 ಅಡಿ ಡ್ಯಾಮ್ ನಿರ್ಮಿಸುವುದಾಗಿತ್ತು. ಮೊದಲೇ ಬರ, ಭೂಮಿಯೆಲ್ಲ ಒಣಗಿದೆ. ಜನರು ಆಗಲೇ ಗುಳೆ ಹೋಗುತ್ತಿದ್ದಾರೆ. ಇನ್ನು ಕೆಲವರು ಸಾಯುತ್ತಿದ್ದಾರೆ. ಇದನ್ನು ನೋಡಲಾಗದೇ ನಾಲ್ವಡಿ ಕೃಷ್ಣರಾಜ ಒಡೆಯರೇ, ‘ನಾನೇ ನನ್ನ ಬಂಗಾರವನ್ನೆಲ್ಲ ಮಾರಿಯಾದರೂ ಹಣ ಕೊಡುತ್ತೇನೆ ಡ್ಯಾಮ್ ನಿರ್ಮಿಸಿ’ ಎಂದಾಗ ವಿಶ್ವೇಶ್ವರಯ್ಯನವರು ನಿರ್ಮಾಣಕ್ಕೆ ಮುಂದಾಗಿದ್ದು. ಆದರೆ ಈ ಎಡಪಂಥೀಯ ಸಂಶೋಧಕರು ಹೇಳುತ್ತಾರೆ ಕ್ಯಾಪ್ಟನ್ ಡಾಸ್ ಕೆಆರ್‌ಎಸ್ ನಿರ್ಮಿಸಿದನಂತೆ. ಯೋಜನೆಯೇ ಬೇಡ ಎಂದಿದ್ದ ಬ್ರಿಟಿಷ್ ಸರಕಾರಕ್ಕೆ ಡ್ಯಾಮ್ ಕಟ್ಟಲು ಡೆಪ್ಯುಟಿ ಎಂಜಿನಿಯರ್‌ನನ್ನು ನೇಮಿಸುವುದಕ್ಕೆ ತಲೆ ಕಟ್ಟಿದೆಯಾ ಅಥವಾ ಸಂಶೋಧಕ ನಂಜರಾಜೇ ಅರಸ್ ಅವರ ಸಂಶೋಧನೆ ನೆಟ್ಟಗಿದೆಯಾ?

ಪರಮ ಪೂಜ್ಯ ಸಂಶೋಧಕರೇ, ನೀವು ಕಿಡಿ ಕಾರಿಕೊಂಡಿರುವ ಇದೇ ವಿಶ್ವೇಶ್ವರಯ್ಯನವರು ಬಿಹಾರ್ ಮತ್ತು ಒರಿಸ್ಸಾದ ರೈಲ್ವೆ ಬ್ರಿಡ್ಜ್‌ ನಿರ್ಮಾಣ ಮತ್ತು ನೀರಾವರಿ ಯೋಜನೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನು ಮರೆಯಬೇಡಿ. ಕರ್ನಾಟಕದಲ್ಲೇ ಹುಟ್ಟಿ, ಇಲ್ಲೇ ಬೆಳೆದ ಇವರನ್ನು ಕರ್ನಾಟಕ ಮೊದಲು ಗುರುತಿಸಲಿಲ್ಲ. ಬೇರೆ ರಾಜ್ಯಗಳು ಇವರನ್ನು ಮೇಧಾವಿ ಎಂದು ಕರೆದ ಮೇಲೇ, ಓಹ್ ಇವ್ರು ನಮ್ ವಿಶ್ವೇಶ್ವರಯ್ಯನವರು ಎಂದು ನಿಮ್ಮ ಮೈಸೂರು ಅರಸರಿಗೆ ಗೊತ್ತಾಗಿದ್ದು ಸ್ವಾಮಿ. ಎರಡನೇ ವಾದ: ವಿಶ್ವೇಶ್ವರಯ್ಯನವರು ಕೇವಲ 1909ರಿಂದ 1912ರವರೆಗೆ ಕೆಆರ್‌ಎಸ್ ಯೋಜನೆಯ ಎಂಜಿನಿಯರ್ ಆಗಿದ್ದರು. ನಂತರ 1912ರಿಂದ 1918ರವರೆಗೆ ದಿವಾನರಾಗಿ ಬೆಂಗಳೂರಿನಲ್ಲಿದ್ದರು. ಆದರೆ ಕೆಆರ್‌ಎಸ್ ನಿರ್ಮಾಣ ಕಾರ್ಯ ಮುಗಿದಿದ್ದು 1932ರಲ್ಲಿ. ಇವರು ಯೋಜನೆಯ ಗಮನ ಹರಿಸುತ್ತಿದ್ದದ್ದು ಹೇಗೆಂಬುದೇ ಅಚ್ಚರಿ? ಇದರಿಂದ ತಿಳಿಯುವುದೇನೆಂದರೆ, ಮಾಡಿಲ್ಲದ ಕೆಲಸಕ್ಕೆ ನಾವು ಇಷ್ಟು ವರ್ಷ ವಿಶ್ವೇಶ್ವರಯ್ಯನವರಿಗೆ ಕ್ರೆಡಿಟ್ ಕೊಡುತ್ತಿದ್ದೇವೆ ಎಂದಿದ್ದಾರೆ.

ಇಂಥ ಮಾತನ್ನು ಒಬ್ಬ ಪರಮ ಮೂರ್ಖ ಮಾತ್ರ ಹೇಳುವುದಕ್ಕೆ ಸಾಧ್ಯ. ಈ ಸಂಗತಿಯನ್ನು ಇವರಿಗೆ ಅರ್ಥವಾಗುವ ಹಾಗೆಯೇ ಹೇಳುವುದಾದರೆ, ಈಗ ಸಿದ್ದರಾಮಯ್ಯನವರು ಮುಸ್ಲಿಮರು ದಲಿತರನ್ನು ಓಲೈಸಲು ಹಲವಾರು ಭಾಗ್ಯಗಳನ್ನು ತಂದರು. ಅದನ್ನು ಮುಂಬರುವ ಸರಕಾರ ಮುಂದುವರಿಸಿ, ಇದನ್ನು ನಾವು ಮಾಡಿದ್ದು ಎಂದು ತಿಪ್ಪೆ ಸಾರಿದರೆ, ಅದು ಆ ಸರಕಾರದ್ದಾಗುತ್ತದೆಯೇ?
ಬಸ್‌ಪಾಸ್ ವ್ಯವಸ್ಥೆ ಶುರು ಮಾಡಿದ್ದು ರಾಮಕೃಷ್ಣ ಹೆಗಡೆಯವರು. ಆದರೆ, ಇದನ್ನೇ ದಲಿತರಿಗೆ ಉಚಿತವಾಗಿ ಕೊಟ್ಟು ಬಸ್‌ಪಾಸ್ ಶುರು ಮಾಡಿದ್ದೇ ನಾವು ಎಂದು ಕಾಂಗ್ರೆಸ್ ಹೇಳಿಕೊಂಡರೆ, ಅದು ಆ ಪಕ್ಷದ್ದಾಗುತ್ತದೆಯೇ? ಹಾಗೇ ವಿಶ್ವೇಶ್ವರಯ್ಯನವರು ಹೈದರಾಬಾದ್ ನಲ್ಲಿದ್ದಾಗ ಅವರನ್ನು ಅರಸರೇ ಕರೆಸಿಕೊಂಡು, ಯೋಜನೆಯ ಜವಾಬ್ದಾರಿ ಕೊಟ್ಟರು. ಅದನ್ನು ಅವರು 1932ರ ತನಕ ಮಾಡದಿದ್ದರೂ, ಅಲ್ಲಿಯವರೆಗೆ ಕೆಲಸ ಮಾಡಿದ್ದರಿಂದ ಅದರ ಶ್ರೇಯ ಕೆಂಪು ಮೂತಿಯ ಡಾಸ್‌ಗೇಕೆ ಸಲ್ಲಬೇಕು ನಂಜರಾಜೇಯವರೇ? ನಿಮ್ಮದೆಂಥಾ ಲಾಜಿಕ್ಕು ಮಾರಾಯ್ರೇ? ಇನ್ನು ವಿಶ್ವೇಶ್ವರಯ್ಯನವರು ಸ್ವಯಂ ನಿವೃತ್ತಿ ತೆಗೆದುಕೊಂಡು ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದರು. ಆಗಲೂ ಅವರು ಕೆಆರ್‌ಎಸ್ ಬಗ್ಗೆ ಗಮನ ಹರಿಸಿ, ವಿದೇಶದಿಂದೆಲ್ಲ ಎಂಜಿನಿಯರ್‌ಗಳನ್ನು ಕರೆಸಿ, ಅವರಿಗೆ ಪಾಠ ಹೇಳಿ ಕೆಲಸ ಮಾಡಿಸಿದ್ದರು ಎಂದು ಓದಿದ್ದೇನೆ. ಇದರ ಬಗ್ಗೆ ನಿಮಗೆ ತಿಳಿಯಲೇ ಇಲ್ಲವೇ ನಂಜರಾಜೇಯವರೇ? ಬೇರೆ ಯಾರೋ ಹೇಳಿದ್ದು ನಮಗೇಕೆ?

ನಮ್ಮವರೇ ವಿಶ್ವೇಶ್ವರಯ್ಯನವರ ಬಗ್ಗೆ ಹೇಳಿರುವ ಮಾತು ಕೇಳಿ- ಯುಗಯುಗಗಳ ಅಜ್ಞಾನವನ್ನು ಅಳಿಸಿ, ವಿಜ್ಞಾನ ವಿದ್ಯೆ ನೀಡಿದ ಧೀರಮತಿ ನೀನು ನಿನ್ನ ತಂತ್ರಕ್ಕೆ ಮಣಿದು, ಹರಿವ ನದಿ ನಿಂತಿದೆ, ಮರುಭೂಮಿ ಬೀರಿದೆ ಹಸಿರು ನಗೆಯನು ನೀನು ಗಂಗೆಯನು ತಡೆದು ನಿಲ್ಲಿಸಿದ ಆಧುನಿಕ ಭಗೀರಥ…. ಯಂತ್ರಋಷಿ ಎಂದು ಸ್ವತಃ ಕುವೆಂಪು ಅವರೇ ಇವರ ಬಗ್ಗೆ ಕವನ ಬರೆದಿದ್ದರು. ಒಮ್ಮೆ ಗಾಂಧೀಜಿಯವರು ಮೈಸೂರಿಗೆ ಬಂದಾಗ ಕೆಆರ್‌ಎಸ್ ಡ್ಯಾಮ್ ನೋಡಿ ಅಚ್ಚರಿಗೊಂಡು, ‘ಕೃಷ್ಣರಾಜಸಾಗರ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾಗಿರುವಂಥದ್ದು. ಇದು ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ಸಾಕು. ಕೈಗಾರಿಕಾ ಕ್ಷೇತ್ರದಲ್ಲಿ ಸತತವಾಗಿ ಪ್ರಗತಿ ಹೊಂದುತ್ತಿರುವ ಮೈಸೂರು ಇಡೀ ದೇಶದ ಚಿತ್ತವನ್ನು ಕದಿಯುತ್ತಿದೆ’ ಎಂದು ಮೈಸೂರು ನಗರದಲ್ಲಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದು ಅಂದಿನ ಪತ್ರಿಕೆಗಳಲ್ಲೆಲ್ಲ ವರದಿಯಾಗಿತ್ತು. ಖಂಡಿತವಾಗಿಯೂ ಗಾಂಧೀಜಿ ಅಜ್ಞಾನದಿಂದ ಅಥವಾ ಮೌಢ್ಯದಿಂದ ಇಂಥ ಮಾತಾಡಿರಲಿಕ್ಕಿಲ್ಲ ನಂಜರಾಜೇಯವರೇ. ಎಡಪಂಥೀಯ ಸಂಶೋಧಕರೇ, ನೀವು ಇವತ್ತಿಗೂ ಮಂಡ್ಯದ ಕಡೆ ಹೋದರೆ, ದೇವರ ಮನೆಯಲ್ಲಿ ವಿಶ್ವೇಶ್ವರಯ್ಯನವರ ಫೋಟೊ ಕಾಣಬಹುದು. ನಾನು ಒಮ್ಮೆ ಒಬ್ಬರ ಮನೆಗೆ ಹೋದಾಗ ಏಕೆ ಹೀಗೆ ಎಂದು ಕೇಳಿದ್ದೆ, ಅದಕ್ಕವರು ‘ದೇವರು ನಮಗೆ ನೀರು, ಅನ್ನ ಕೊಡುತ್ತಾನೆ. ಅದನ್ನು ವಿಶ್ವೇಶ್ವರಯ್ಯನವರೇ ನಮಗೆ ಕೊಟ್ಟಿದ್ದಾರೆ. ಅದಕ್ಕೆ ನಾವು ಅವರನ್ನು ಪೂಜಿಸುತ್ತೇವೆ’ ಎಂದರು. ನಾನೂ ವಿಶ್ವೇಶ್ವರಯ್ಯನವರಂತೆಯೇ ಆಗಲಿ ಎಂದು ಅವರ ಫೋಟೊ ತಂದು ನನ್ನ ರೂಮಲ್ಲಿ ನೇತು ಹಾಕಿದ್ದರು ನನ್ನ ಅಪ್ಪ. ಹೀಗಿರುವಾಗ, ನಿಮ್ಮ ಪುಸ್ತಕಕ್ಕೆ ಪ್ರಚಾರ ಬೇಕು ಎಂದು ಮನಸ್ಸಿಗೆ ಬಂದ ಹಾಗೆ ಗೀಚಿಕೊಳ್ಳುವುದು ತಪ್ಪಲ್ಲವೇ ನಂಜರಾಜೇಯವರೇ?

ಗಣಪತಿಯನ್ನು ವ್ಯಾಘ್ರ ಎಂದು ಕರೆದ ಯೋಗೀಶ್ ಎಂಬುವವನ ಪುಸ್ತಕಕ್ಕೂ, ಹಿಂದೂ ಧರ್ಮ ಮತ್ತು ಶಂಕಾರಾಚಾರ್ಯರನ್ನು ಬಯ್ದು ಬರೆಯುವ ಭಗವಾನನ ಪುಸ್ತಕಕ್ಕೂ ಅಥವಾ ಮತ್ಯಾವುದೋ ಅಂಡೆಪಿರ್ಕಿಯ ಪುಸ್ತಕಕ್ಕೂ ವಿಶ್ವೇಶ್ವರಯ್ಯನವರ ಬಗ್ಗೆ ಸುಳ್ಳು ಸಾರುವ ನಿಮ್ಮ ಪುಸ್ತಕ್ಕೂ ಏನು ವ್ಯತ್ಯಾಸ ಆದಂತಾಯ್ತು? ಮಳೆಯಿಲ್ಲದ ನಾಡಲ್ಲಿ ಕೃಷಿ ಹೇಗೆ ಎಂದು ಸಂಶೋಧನೆ ಮಾಡಿದ್ದರೆ ನಂಜರಾಜೇ ಅರಸರು ದೊಡ್ಡವರಾಗುತ್ತಿದ್ದರು. ಆದರೆ ಅಸಂಬದ್ಧಗಳನ್ನೇ ಬರೆದ ಪುಸ್ತಕ ಕಸದ ಬುಟ್ಟಿಗೂ ಭಾರ, ಭೂಮಿಗೂ ಗೊಬ್ಬರವಾಗದೇ, ಲೇಖಕನ ಮನೆಯಲ್ಲಿ ಕೊಳೆಯುವುದಕ್ಕಷ್ಟೇ ಲಾಯಕ್ಕು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya