ಇನ್ನೆಷ್ಟು ವರ್ಷ ಬುದ್ಧಿಜೀವಿಗಳ ಬೂಟು ನೆಕ್ಕುವಿರಿ?

ಮೇಜರ್ ಲೀತುಲ್ ಗೊಗೋಯ್. ಕಾಶ್ಮೀರದಲ್ಲಿ ಸೇನೆಯ ಜೀಪ್‌ಗೆ ಕಲ್ಲು ತೂರಾಟಗಾರನೊಬ್ಬನನ್ನು ಕಟ್ಟಿ ಮೆರವಣಿಗೆ ಮಾಡಿದ ಯೋಧನಿಗೆ ಶೌರ್ಯ ಪ್ರಶಸ್ತಿ. ಇಂಟರ್‌ನೆಟ್‌ನಲ್ಲಿ ಹೀಗೊಂದು ಸುದ್ದಿ ಓದಿದ ತಕ್ಷಣವೇ ಮಾಧ್ಯಮಗಳ, ಎಡಪಂಥೀಯರ, ಪ್ರಗತಿಪರರ ಅರಚಾಟ ಶುರುವಾಗಿತ್ತು. ಎಲ್ಲರೂ ಒಟ್ಟಾಗಿ ಪ್ಲಾನ್ ಮಾಡುವುದಕ್ಕೆ ಶುರು ಮಾಡಿದ್ದರು. ಕೆಲವರು ಆಗಲೇ ಉಮೇದಿ ತಡೆದು ಕೊಳ್ಳುವುದಕ್ಕಾಗದೇ, ಸೇನೆಯನ್ನು ಬಯ್ಯುವುದಕ್ಕೆ ಶುರು ಮಾಡಿದ್ದರು.

ಇವೆಲ್ಲ ಬಿಡಿ ಬಹಳ ಕಾಮನ್. ದಿನಾ ಬಳೆ ಒಡೆದುಕೊಂಡು ಅಳುವ ಎಡಪಂಥೀಯರಿಗೆ ಗಮನ ಕೊಡುವವರ್ಯಾರು? ಆದರೆ ನಮ್ಮ ಮಾಧ್ಯಮಗಳಿಗೆ ಏನಾಗಿದೆ? ಕೆಲಸಕ್ಕೆ ಬಾರದ, ಮೂರು ಪೈಸೆ ದುಡಿಯುವುದಕ್ಕೆ ಯೋಗ್ಯತೆ ಇಲ್ಲದವರನ್ನೆಲ್ಲ ಹೀರೋ ಮಾಡುತ್ತಿರುವುದೇಕೆ ಎನ್ನುವುದೇ ತಿಳಿಯುತ್ತಿಲ್ಲ. ಇಂಗ್ಲಿಷ್ ಮಾಧ್ಯಮವಂತೂ Why Major Gogoi is wrong  ಎಂಬ ಲೇಖನವನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೈಯಲ್ಲಿ ಬರೆಸಲು ಶುರು ಮಾಡಿತು. ಅಸಲಿಗೆ ಸೇನೆ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲು ಓಮರ್ ಯಾವೂ ದೊಣ್ಣೆನಾಯಕ. ಅವನ ಮಾತನ್ನು ಕೇಳುವುದೇಕೆ? ಓಮರ್ ಅಬ್ದುಲ್ಲಾ ಸರಕಾರ ಇದ್ದಾಗ, ಒಂದೇ ಒಂದು ದಿನ ಕಲ್ಲು ತೂರಾಟಗಾರರನ್ನು ತಡೆಯಲು ಸಾಧ್ಯವಾಗದಷ್ಟು, ಅಲ್ಲಿ ಪ್ರವಾಹ ಆದಾಗ ಸಂತ್ರಸ್ತರಿಗೆ ಪುನರ್ವಸತಿ ಕೊಡಲಾಗದಷ್ಟು ನಪುಂಸಕನೊಬ್ಬ ಮೇಜರ್ ಗೊಗೋಯ್ ಮಾಡಿದ್ದು ಯಾಕಾಗಿ ತಪ್ಪು ಎಂಬುದನ್ನು ಯಾವುದೋ ಹಾಳೆಯ ಮೇಲೆ ಗೀಚಿಕೊಂಡರೆ ಅದನ್ನೆಲ್ಲ ಪ್ರಕಟಿಸುವ ದರ್ದೇಕೆ ಮಾಧ್ಯಮಕ್ಕೆ?

ಮೇಜರ್ ಗೊಗೋಯ್ ಏನು ಮಾಡಬೇಕಿತ್ತು ಎಂದು ಎಸಿ ರೂಮ್‌ನಲ್ಲಿ ಕುಳಿತುಕೊಂಡು ಬರೆಯುವುದಲ್ಲ, ಮೇಜರ್ ಗೊಗೋಯ್ ಜಾಗದಲ್ಲಿ ಇದ್ದು ಆ ಮಾತನ್ನಾಡಿದರೆ ಒಪ್ಪಬಹುದಿತ್ತು. ಇನ್ನು ನಮ್ಮ ಕನ್ನಡ ಮಾಧ್ಯಮವೇನು ಕಡಿಮೆಯಿಲ್ಲ. ‘ಜೀಪಿಗೆ ಕಟ್ಟಿ ಎಳೆದುಕೊಂಡು ಹೋದದ್ದು ಶೌರ್ಯವೇ?’ ಎಂದು ಕಲ್ಲು ತೂರಾಟ ಮಾಡಿ ಜೀಪಿಗೆ ಕಟ್ಟಿಸಿಕೊಂಡವನ ಮಾತನ್ನೇ ನಿನ್ನೆ ರಾಜ್ಯಮಟ್ಟದ ಪತ್ರಿಕೆಯೊಂದು ಹೆಡ್‌ಲೈನ್ ಮಾಡಿಕೊಂಡಿತ್ತು. ಆದರೆ ಇದರ ಅವಶ್ಯವೇನಿತ್ತು? ಅವನ ಮಾತನ್ನು ಹೆಡ್‌ಲೈನ್ ಮಾಡುವುದಕ್ಕೆ ಅವನೇನು ಸಾಧನೆ ಮಾಡಿದ್ದಾನೆ ಅಥವಾ ಅವನ ಮಾತಿಗೆ ಬೆಲೆ ಕೊಡುವುದಕ್ಕೆ ಅವನೇನು ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾನೆಯೇ? ಅವನ ಮಾತಿಗೇಕೆ ಮಾನ್ಯತೆ ಕೊಡುತ್ತೀರ ಎಂದು ಕೇಳಿದರೆ, ಅಭಿವ್ಯಕ್ತ ಸ್ವಾತಂತ್ರ್ಯ ಎಂಬ ಬೋರ್ಡನ್ನು ಎಡಗೈಯಲ್ಲೇ ಹಿಡಿದು ನಿಂತಿರುತ್ತಾರೆ.

ಯೋಧರಿಗೆ, ಯೋಧರ ಗಾಡಿಗಳ ಮೇಲೆ ಕಲ್ಲು ಎಸೆಯುವವನ ಮಾತನ್ನೂ ಹೆಡ್‌ಲೈನ್ ಮಾಡುತ್ತಾರೆಂದರೆ, ಮಾಧ್ಯಮಗಳು ಅದೆಂಥಾ ಅಕ್ಷರ ಹಾದರಕ್ಕಿಳಿದಿದ್ದಾವೆ ಎಂಬುದು ಅರಿವಾಗುತ್ತದೆ. ಇಲ್ಲಿ ಸಮಸ್ಯೆಯಿರುವುದು ಕಲ್ಲೆಸೆಯುವವನ ಮಾತನ್ನು ಹೆಡ್‌ಲೈನ್ ಮಾಡಿದ್ದಲ್ಲ. ಬದಲಿಗೆ ಅವನು ಸೇನೆಯಿಂದ ಅನ್ಯಾಯಕ್ಕೊಳಗಾದವನು ಎಂದು ತೋರಿಸುವ ಬಗೆ! ಆತನಿಗೆಷ್ಟು ನೋವಾಗಿದೆ ಎನ್ನುವುದನ್ನೇ ಇಡೀ ವರದಿಯಲ್ಲಿ ಬರೆಯಲಾಗಿತ್ತು. ಅವನ ಎಬ್ರಾ ತಬ್ರಾ ವಾದಗಳನ್ನು ನೋಡಿ, ‘ಜೀಪಿನಲ್ಲಿ ಕಟ್ಟಿಕೊಂಡು ಕರೆದುಕೊಂಡು ಹೋಗುವುದಕ್ಕೆ ನಾವೇನು ಎಮ್ಮೆ ಅಥವಾ ಇನ್ಯಾವುದಾದರೂ ಪ್ರಾಣಿಗಳೇ?’ ಎಂದು ಕೇಳುವಷ್ಟು ಅವನಿಗೆ ಧೈರ್ಯ ತುಂಬಿರುವವರೂ ಇದೇ ಮಾಧ್ಯಮಗಳೇ. ಆದರೆ, ಸೇನೆಯತ್ತ ಕಲ್ಲು ಎಸೆಯುವುದಕ್ಕೆ ಯೋಧರೇನು ನಾಯಿಗಳೇ? ಎಂದು ಕೇಳುವ ಧಮ್ಮು ಒಬ್ಬ ಪತ್ರಕರ್ತನಿಗೂ ಇಲ್ಲದಿರುವುದು, ಅವರ ದಾಸ್ಯವನ್ನು ತೋರಿಸುತ್ತದೆ.

ಇವೆಲ್ಲವನ್ನೂ ಬಿಟ್ಟು ಹಾಕಿ, ಇಂಥ ದೇಶ ವಿರೋಧಿಗಳ ಪರ ವರದಿ ಬರೆದು, ಅದರಿಂದ ಬಂದ ಹಣದಲ್ಲಿ ಹೆಂಡತಿ ಮಕ್ಕಳ ಜತೆ ಅನ್ನ ತಿನ್ನುವಾಗ, ಎಂಜಲು ಕಾಸಲ್ಲಿ ಊಟ ಮಾಡುತ್ತೇನಲ್ಲ ಎಂದು ಆತ್ಮಸಾಕ್ಷಿ ಕಾಡುವುದಿಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಮಾತು ಮಾತಿಗೂ ಕೂಗುವವರಿಗೆ, ಅದನ್ನೇ ಬಂಡವಾಳ ಮಾಡಿಕೊಂಡು ಗುಂಡು ತುಂಡು ಪಾರ್ಟಿ ಮಾಡುತ್ತಿರುವವರ ಪರಿಚಯ ಮಾಡಿಕೊಡಲೇ ಬೇಕು.  ಇತ್ತೀಚೆಗಂತೂ ಮಾಧ್ಯಮಗಳು ಪ್ರೇರಣೆ ತೆಗೆದುಕೊಳ್ಳುತ್ತಿರುವುದೇ ಸಾಮಾಜಿಕ ಜಾಲತಾಣದಿಂದ. ಮೇಜರ್ ಗೊಗೋಯ್‌ಗೆ ಶೌರ್ಯ ಪ್ರಶಸ್ತಿ ಘೋಷಿಸಿದ ಕ್ಷಣದಿಂದ ಟ್ವಿಟರ್‌ನಲ್ಲಿ ಬಹಳವೇ ಚರ್ಚೆ ಶುರುವಾಗಿದೆ. ಮೇಜರ್ ಗೊಗೋಯ್‌ಗೆ ಕೊಟ್ಟ ಪ್ರಶಸ್ತಿಯ ಬಗ್ಗೆ ಹೆಚ್ಚೇನಾದರೂ ಹೊಗಳಿದರೆ ಅದನ್ನು ತೀರಾ ಕೆಳಮಟ್ಟದಲ್ಲಿ ವಿರೋಧಿಸುವವರಿದ್ದಾರೆ.

ಈ ಪ್ರಕರಣದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವಳು ಅರುಂಧತಿ ರಾಯ್. ಹೆಸರಿಗಷ್ಟೇ ಒಂದಷ್ಟು ಗೀಚಿಕೊಂಡು, ಪ್ರಶಸ್ತಿಯನ್ನು ಕಷ್ಟ ಪಟ್ಟು ಪಡೆದುಕೊಂಡಿರುವ ಈಕೆಗೆ ಭಾರತದ ಬಗ್ಗೆ ಬಯ್ಯುವುದೇ ದೊಡ್ಡ ಕೆಲಸ. ಹಾಳು ಮೂಳು ತಿನ್ನುವುದು, ಅದನ್ನರಗಿಸಿಕೊಳ್ಳುವುದಕ್ಕೆ ನಾಲ್ಕಾರು ಕಡೆ ಭಾರತದ ವಿರುದ್ಧ ಭಾಷಣ ಮಾಡುವುದು. ಇದೇ ಇವಳ ನಿತ್ಯ ಕಾಯಕ. ಇತ್ತೀಚೆಗೆ ಇವಳು ಭಾಷಣ ಮಾಡುತ್ತಾ ‘ಜಮ್ಮು ಕಾಶ್ಮೀರ, ಪಂಜಾಬ್, ಗೋವಾ, ಆಂಧ್ರ, ಅರುಣಾಚಲ ಪ್ರದೇಶ ಇವೆಲ್ಲ ಭಾರತದ್ದಲ್ಲ. ಇವೆಲ್ಲವುಗಳನ್ನು ಭಾರತ ಅತಿಕ್ರಮಿಸಿಕೊಂಡಿದ್ದು’ ಎಂದು ಒದರಿದಳು. ಒಪ್ಪೋಣ ಎಡಪಂಥೀಯರೇ, ನಮ್ಮ ದೇಶದ ಅನ್ನ ಉಂಡು ಇದೇ ದೇಶ ಒಡೆದು ಹೋಳಾಗಬೇಕು ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆಂದೇ ತಿಳಿಯೋಣ. ಆದರೆ ಬೇರೆಯವರಿಗೂ ಇಂಥ ಧುರೀಣೆಯನ್ನು ಟೀಕಿಸುವ ಸ್ವಾತಂತ್ರ್ಯವಿದೆ ಅಲ್ಲವೇ? ಅದಕ್ಕೆ ಸರಿಯಾಗಿ ಬಾಲಿವುಡ್‌ನ ಹಿರಿಯ ನಟ ಪರೇಶ್ ರಾವಲ್ ಅವರು ‘ಕಲ್ಲು ಎಸೆಯುವವನನ್ನು ಜೀಪಿಗೆ ಕಟ್ಟಿ ಹಾಕುವ ಬದಲು, ಅರುಂಧತಿ ರಾಯ್‌ರನ್ನು ಕಟ್ಟಿ ಹಾಕಬೇಕಿತ್ತು’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ದಡ್ಡಪಂಥೀಯರ ಸದಸ್ಯರೆಲ್ಲ ಸೇರಿ, ಅಯ್ಯಯ್ಯೋ ಪರೇಶ್ ರಾವಲ್ ಹೇಳಿದ್ದೇ ತಪ್ಪು.

ಇದು ಹೆಣ್ಣಿನ ಶೋಷಣೆ ಎಂದು ಊಳಿಡಲು ಶುರು ಮಾಡಿಕೊಂಡರು. ದೇಶದ ವಿರುದ್ಧ ಮಾತನಾಡಿದ್ದ ಅರುಂಧತಿ ರಾಯ್‌ಗೆ ಈ ರೀತಿಯಾಗಿ ಉತ್ತರಿಸುವ ಪರೇಶ್ ರಾವಲ್‌ರನ್ನು ತಡೆದಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೇ? ಮೂಗಲ್ಲಿ ಸುರಿಸಿಕೊಂಡು ಅತ್ತಿದ್ದು ಎಷ್ಟು ಜೋರಾಯಿತು ಎಂದರೆ, ಟ್ವಿಟರ್ ಕೊನೆಗೆ ಪರೇಶ್ ರಾವಲ್‌ರ ಖಾತೆಯನ್ನು ಬ್ಲಾಕ್ ಮಾಡಿ, ಅರುಂಧತಿ ರಾಯ್ ಬಗ್ಗೆ ಬರೆದಿರುವ ಟ್ವೀಟನ್ನು ತೆಗೆಯುವ ತನಕ ನಿಮ್ಮ ಅಕೌಂಟನ್ನು ಬ್ಲಾಕ್ ಮಾಡಲಾಗಿದೆ ಎಂದು ಸಂದೇಶ ಕಳಿಸಿತ್ತು. ಕೊನೆಗೆ ಅವರು ಟ್ವೀಟ್ ಡಿಲೀಟ್ ಮಾಡಿದ ಮೇಲೆ ಟ್ವಿಟರ್ ಖಾತೆ ತೆರೆದುಕೊಂಡಿದ್ದು.

ಇರಿ, ಅಭಿವ್ಯಕ್ತಿ ಸ್ವಾತಂತ್ರ್ಯದ ದುರಂತ ಇದಲ್ಲ. ಪರೇಶ್ ರಾವಲ್ ಬರೆದ ಮೇಲೆ ಶೆಹ್ಲಾ ರಶೀದ್ ಎಂಬುವವಳು ‘ತಮ್ಮವರನ್ನು ಜೈಲಿನಿಂದ ಬಿಡಿಸಲು ಹಿಂದೂ ಯುವ ವಾಹಿನಿಯವರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಉತ್ತರಪ್ರದೇಶದ ಪೊಲೀಸರು ಯೋಗಿ ಆದಿತ್ಯನಾಥರನ್ನು ಜೀಪಿಗೆ ಕಟ್ಟಿ ಮೆರವಣಿಗೆ ಹೋಗಬೇಕು’ ಎಂದು ಟ್ವೀಟ್ ಮಾಡಿದ್ದಳು. ಈ ಟ್ವೀಟ್ ಮಾತ್ರ ಟ್ವಿಟರ್‌ನಿಂದ ಡಿಲೀಟೂ ಆಗಿಲ್ಲ, ಯಾವ ಎಚ್ಚರಿಕೆಯ ಮೆಸೆಜ್ ಸಹ ಬಂದಿಲ್ಲ. ಇದನ್ನು ಯಾವ ಪತ್ರಕರ್ತನೂ, ದಡ್ಡಪಂಥೀಯನೂ, ಪ್ರಗತಿಪರನೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರನೂ ವಿರೋಧಿಸುತ್ತಿಲ್ಲ. ಅವಳ ಖಾತೆಯೂ ಬ್ಲಾಕ್ ಆಗಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರಂತ ಎಂದರೆ.

ಒಂದು ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಬೇಕಾಬಿಟ್ಟಿ ಮಾತನಾಡುವ ಈಕೆ ಮಹಾನ್ ಸಾಧಕಿಯೇನಲ್ಲ. ಕನ್ಹಯ್ಯ, ಗುರ್‌ಮೆಹರ್ ಕೌರ್‌ರಂಥ ಮತ್ತದೇ ಪ್ರಚಾರದ ತೆವಲಿನ ಹಿಂದೆ ಬಿದ್ದಿರುವ ಜೆಎನ್‌ಯು ಕಾಲೇಜಿನ ಹುಳು. ಜೆಎನ್‌ಯುದಲ್ಲಿ ಬಿಟ್ಟಿ ಕೂಳು ತಿನ್ನುತ್ತಾ ಕಾಲ ಹಾಕುತ್ತಿರುವ ಈಕೆ, ಓದಿ ಎಕ್ಸಾಂ ಪಾಸ್ ಮಾಡಿಕೊಳ್ಳುವ ಬದಲು, ಯೋಗಿ ಆದಿತ್ಯನಾಥರನ್ನು ಜೀಪಿಗೆ ಕಟ್ಟಿ ಎಂದು ಉಪದೇಶ ನೀಡುವ ಉಪದ್ರವೇಕೆ? ಪರೇಶ್ ರಾವಲ್ ಹೇಳಿದ್ದು ಮಾತ್ರ ಕೋಮುವಾದ, ಕ್ರೌರ್ಯ ಎಂದು ಬೊಬ್ಬಿರಿಯುವವರು ಈಕೆಯ ಹೇಳಿಕೆಯನ್ನು ಖಂಡಿಸಲಿಲ್ಲವೇಕೆ? ಬೇಕಾದ್ರೆ ಇದನ್ನು ಗಮನಿಸಿ, ನಾಳೆ ದಿನ ಈಕೆ, ತನಗೆ ಜನರೆಲ್ಲರೂ ಬಯ್ಯುತ್ತಿದ್ದಾರೆ ಎನ್ನುತ್ತಾ ಈಕೆಯ ಅಕ್ಕ ಗುರ್‌ಮೆಹರ್ ಕೌರ್ ಮಾಡಿದ ಹಾಗೇ ಸಂತ್ರಸ್ತೆಯ ಥರಾ ಡ್ರಾಮಾ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾಳೆ. ಇವಳು ಏನೇ ಹೇಳಿದರೂ ಈಕೆಯ ಟ್ವಿಟರ್ ಅಕೌಂಟ್ ಮಾತ್ರ ಬ್ಲಾಕ್ ಆಗುವುದಿಲ್ಲ ಎಂಬುದು ಮಾತ್ರ ನಿಶ್ಚಿತ.

ಇವಳದ್ದೊಬ್ಬಳದ್ದೇ ಅಲ್ಲ, ಯಾವುದೇ ಎಡಪಂಥೀಯರ ಟ್ವಿಟರ್ ಅಕೌಂಟ್ ಸಹ ಬ್ಲಾಕ್ ಆಗುವುದಿಲ್ಲ. ಕಾರಣ, ಭಾರತದ ಟ್ವಿಟರ್ ಅಷ್ಟು ಹದಗೆಟ್ಟು ಹೋಗಿದೆ. ಈ ಮಾತನ್ನು ಕೇಳಿದಾಗ ನಿಮಗೆ ಅಚ್ಚರಿ ಹಾಗೂ ವಿಚಿತ್ರ ಎನಿಸಬಹುದು. ಆದರೆ ಇದು ಸತ್ಯ. ಅದಕ್ಕೆ ದಾಖಲೆಗಳಿವೆ. ಭಾರತದ ಟ್ವಿಟರ್ ನೋಡಿಕೊಳ್ಳುತ್ತಿರುವವನು ರಹೀಲ್ ಖುರ್ಷಿದ್. ಈತನೂ ಪಕ್ಕಾ ಎಡಪಂಥೀಯ. ಮೋದಿ ಕೊಲೆಗಾರ ಎಂದು ಆತನೇ ಒಮ್ಮೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ. ಆಗ ಇವನನ್ನು ಎತ್ತಂಗಡಿ ಮಾಡಿ ಎಂದು ಇಡೀ ದೇಶವೇ ಟ್ವೀಟ್ ಸುರಿಮಳೆಗೈದಿತ್ತು. ಇಂಥವನನ್ನು ಟ್ವಿಟರ್‌ನಲ್ಲಿ ತಂದು ಕೂರಿಸಿದರೆ ಇನ್ನೇನಾಗುತ್ತದೆ ಹೇಳಿ? ಬಲಪಂಥೀಯರು ಅಥವಾ ರಾಷ್ಟ್ರವಾದಿಗಳ ಟ್ವಿಟರ್ ಖಾತೆಗಳನ್ನಷ್ಟೇ ಡಿಲೀಟ್ ಮಾಡುತ್ತಾ ಕುಳಿತಿರುತ್ತಾನೆ. ಈಗ ಆಗುತ್ತಿರುವುದೂ ಅದೇ. ಇದಕ್ಕೆ ಬಾಲಿವುಡ್ ಹಾಡುಗಾರ ಅಭಿಜಿತ್ ಅವರ ಟ್ವಿಟರ್ ಖಾತೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಸ್ಪೆಂಡ್ ಮಾಡಿರುವುದೇ ಉದಾಹರಣೆ. ‘ನೀವೇನು ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡುವುದು? ನಾವೇ ಮಾಡಿಕೊಳ್ಳುತ್ತೇವೆ’ ಎಂದು ಟ್ವಿಟರ್‌ನ ದ್ವಿಮುಖ ನೀತಿಯನ್ನು ಖಂಡಿಸಿ ಗಾಯಕ ಸೋನು ನಿಗಮ್ ಸ್ವಯಂ ಪ್ರೇರಿತರಾಗಿ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿಕೊಂಡಿದ್ದಾರೆ.

ಇವೆಲ್ಲದಕ್ಕೂ ಮೂಲ ಏನು? ಮತ್ತದೇ ಮೇಜರ್ ಗೊಗೋಯ್‌ಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು! ನಿಜವಾದ ಅಸಹಿಷ್ಣತೆ ಅಂದರೆ ಇದು. ಕೈಯಲ್ಲಿ ಗನ್ ಇದ್ದರೂ ಅಂದು ಕಾಶ್ಮೀರದಲ್ಲಿ 1200 ಕಲ್ಲು ಎಸೆಯುವವರ ಮೇಲೆ ಗುಂಡು ಹಾರಿಸದೇ, ಅವರಿಗೂ ಹಿಂಸೆ ನೀಡದೇ, ತಾವೂ ಸುರಕ್ಷಿತವಾಗಿ ಹೋಗಲು ಕಲ್ಲು ಎಸೆಯುವವರ ನಾಯಕನನ್ನು ಬಂಧಿಸಿ, ಜೀಪಿಗೆ ಕಟ್ಟಿದರೆ ಅದು ಶೌರ್ಯವಲ್ಲದೇ ಇನ್ನೇನು? ಪೆಲೆಟ್ ಗನ್‌ನಲ್ಲಿ ಹೊಡೆದರೆ ಇದೇ ಮಂದಿ, ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಹಫ್ಫಿಂಗ್ಟನ್ ಪೋಸ್ಟ್‌ನ ಡೆಪ್ಯುಟಿ ಎಡಿಟರ್, ರಿತುಪರ್ಣ ಚಟರ್ಜಿ ಅವರು ‘ನೀವ್ಯಾರು, ನಿಮ್ಮ ರಾಜಕೀಯ, ನಂಬಿಕೆಗಳು, ನಾನು ಯಾರು ಎಲ್ಲವನ್ನೂ ಮರೆತುಬಿಡಿ, ಕಣ್ಣು ಮುಚ್ಚಿಕೊಂಡು ನಿಮ್ಮ ಕುಟುಂಬ ಸದಸ್ಯನೊಬ್ಬನನ್ನು ಜೀಪ್‌ಗೆ ಕಟ್ಟಿ ಹಾಕಿರುವುದನ್ನು ಊಹಿಸಿಕೊಳ್ಳಿ. ಹೇಗನಿಸುತ್ತೆ ಎನ್ನುವುದನ್ನು ಹೇಳಿ’ ಎಂದು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಇವರು ಹೇಳುತ್ತಾರೆ ಎಂದು ಮಾನವೀಯತೆಯಿಂದ ಸುಮ್ಮನಿದ್ದರೆ, ಇದೇ ಅರುಂಧತಿ ರಾಯ್ ‘70 ಲಕ್ಷ ಯೋಧರಿಗೆ ಕಾಶ್ಮೀರದ ಆಝಾದಿ ಗ್ಯಾಂಗನ್ನು ಸೋಲಿಸಲು ಸಾಧ್ಯವಾಗಿಲ್ಲ’ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡುತ್ತಾರೆ.

ಮಾಧ್ಯಮಗಳಿಗೆ ಸುದ್ದಿ ಇಲ್ಲದಿದ್ದರೆ, ಇನ್ಯಾವುದಾದರೂ ಪೋಲಿ ಫೋಟೊ ಹಾಕಿಯಾದರೂ ಹಣ ಮಾಡಿಕೊಳ್ಳಲಿ. ಅದಾದರೂ ಒಂದು ನಿಯತ್ತಿನ ದುಡಿಮೆ. ಅದು ಬಿಟ್ಟು ದೇಶ ಒಡೆಯುವವರನ್ನು ಪ್ರಚಾರ ಮಾಡಿ ಹಣ ಮಾಡುವ ದರ್ದು ಮಾಧ್ಯಮಗಳಿಗೇಕೆ? ಜಿಹಾದ್‌ಗಾಗಿ ಹೋರಾಡಿ ಬೀದಿ ಹೆಣವಾದ ಬುರ್ಹಾನ್ ವಾನಿಯನ್ನು ರಿಟೈರ್ಡ್ ಹೆಡ್‌ಮಾಸ್ತರರ ಮಗ ಎಂದು ಬೂಟು ನೆಕ್ಕಿದರು, ‘ಒಸಾಮಾ ಬಿನ್ ಲಾಡನ್ ನಾವು ನೋಡಿರದ ಮುಖ, ತನ್ನ ಮಕ್ಕಳ ಅಪ್ಪನಾಗಿ!’ ಅವನ ಗಡ್ಡ ನೀವಿದರು, ಉಗ್ರ ಝಾಕಿರ್ ನಾಯಕ್‌‌ನನ್ನು ಶಾಂತಿ ಹಂಚುವ ಮಹಮ್ಮದನನ್ನಾಗಿ ಮಾಡಿದರು, ಯಾಸಿನ್ ಭಟ್ಕಳ್ ಬಡ ಕುಟುಂಬದ ಹುಡುಗನಾಗಿ ಕಾಣಿಸಿದ, ತಂದೆಯ ಸಾವಿನ ಬಗ್ಗೆಯೂ ಸುಳ್ಳು ಹೇಳಿದ ಸುಳ್ಳುಬುರುಕಿ ಗುರ್ ಮೆಹರ್ ಕೌರ್‌ಳನ್ನು ಝಾನ್ಸಿ ರಾಣಿಯಂತೆ ಧೀರೆಯನ್ನಾಗಿ ಮಾಡಿದರು, ಭಾರತ್ ತೆರೆ ತುಕಡೇ ಹೋಂಗೇ ಎಂದು ಕಾಲೇಜು ಕಾಂಪೌಂಡ್ ಒಳಗೇ ಕೂಗಿದ ಷಂಡ ಕನ್ಹಯ್ಯ ಯುವಕರ ಕಣ್ಮಣಿಯಾದ, ಛೆ ಗುವೇರನಾಗಿ ಕಾಣಿಸಿದ. ಆದರೆ ಕಾಶ್ಮೀರದಲ್ಲಿ 1200 ಜನರ ಬಳಿ ಕಲ್ಲಿನೇಟು ತಿಂದರೂ ಮೇಜರ್ ಗೊಗೋಯ್ ಶಾಂತಮೂರ್ತಿ ಬುದ್ಧನಾಗಿ ಕಾಣಲಿಲ್ಲ, ಎಲೆಕ್ಷನ್ ಬೂತ್‌ಗಳನ್ನು ಹಾಗೂ ಅಲ್ಲಿದ್ದ ಅಧಿಕಾರಿಗಳನ್ನು ರಕ್ಷಿಸಿ ತನ್ನ ಯೋಧರೊಂದಿಗೆ ಸುರಕ್ಷಿತವಾಗಿ ವಾಪಸ್ ಬಂದಾಗ ಯಾರಿಗೂ ಆತ ಶೂರನಾಗಿ ಕಾಣಲೇ ಇಲ್ಲ. ಬುದ್ಧಿಜೀವಿಗಳ ಎಂಜಲು ತಿನ್ನುತ್ತಾ ಬದುಕು ಸಾಗಿಸುತ್ತಿರುವ ಕೆಲ ಪತ್ರಕರ್ತರು ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ.

-ಚಿರಂಜೀವಿ ಭಟ್

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya