ಇದ್ದವರೊಬ್ಬರು, ಸುನಂದಾರನ್ನು ಕೊಂದವರ್ಯಾರು?

2014ಜನವರಿ 17. ಮಾಧ್ಯಮಗಳಲ್ಲಿ ಒಂದು ದೊಡ್ಡ ಸುದ್ದಿ ಹರಿದಾಡಿತ್ತು. ಸುನಂದಾ ಪುಷ್ಕರ್ ದೇಹ ಲೀಲಾ ಹೋಟೆಲ್‌ನಲ್ಲಿ ಪತ್ತೆ! ಈ ಸುದ್ದಿ ಎಲ್ಲ ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡ ತಕ್ಷಣ ಎಲ್ಲರೂ ಒಮ್ಮೆ ಮೂಕವಿಸ್ಮಿತರಾದರು. ಯಾರಾಗಿರಬಹುದು ಸುನಂದಾರನ್ನು ಕೊಂದವರು ಎಂದು ಚರ್ಚೆ ಶುರುವಿಟ್ಟುಕೊಂಡರು. ಆದರೆ ಇದು ಹೈ ಪ್ರೊಫೈಲ್ ಕೇಸ್ ನೋಡಿ. ಯಾವುದೋ ಯಂಕಣ್ಣ ಮಂಕಣ್ಣ ಬಂದು ಸುಮ್ಮನೆ ಹಣಕ್ಕಾಗಿ ಕೊಲೆ ಮಾಡುವುದಿಲ್ಲ ಎನ್ನುವುದಂತೂ ಸತ್ಯ. ಹಾಗಾದರೆ ಕೊಲೆ ಮಾಡಿದವರ್ಯಾರು? ಬೆರಳು ಒಬ್ಬನ ಕಡೆಗೇ ತೋರುತ್ತಿದ್ದರೂ ಅದಕ್ಕೆ ಸಾಕ್ಷಿ ಬೇಕಲ್ಲವೇ? ಈ ಪ್ರಕರಣವನ್ನು ಗಮನಿಸುತ್ತಾ ಹೋದಂತೆ ಎಲ್ಲವೂ ಕಣ್ಣ ಮುಂದೆ ಬರುತ್ತದೆ.

ಜನವರಿ 17ರಂದು ಪೊಲೀಸರು ಸುನಂದಾ ಶವ ಪರಿಶೀಲನೆಗೆ ಬಂದಾಗ ಅವರು ಮೊದಲೇ, ಇದು ಆತ್ಮಹತ್ಯೆ ಇರಬಹುದು ಎಂದು ಬಿಟ್ಟರು. ಆದರೆ ಸುನಂದಾ ಪುಷ್ಕರ್ ಯಾವಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿಟ್ಟಿದ್ದಳು ಅಥವಾ ಇವರಿಗೆ ಸಿಕ್ಕ ಮಾಹಿತಿಯಾದರೂ ಏನು. ಒಂದು ಕ್ರೈಂ ಸೀನ್ ನೋಡಿದ ಕೂಡಲೇ ಇದು ಹೀಗೇ ಆಗಿರುತ್ತದೆ ಎಂದು ಪೊಲೀಸರಿಗೆ ತಿಳಿಯುತ್ತದೆ. ಆದರೆ ಈ ಪ್ರಕರಣದಲ್ಲಿ ದೂಸ್ರಾ ಮಾತಾಡದೇ, ಸುನಂದಾ ಪುಷ್ಕರ್ ಪ್ರಕರಣ ಆತ್ಮಹತ್ಯೆಯಾಗಿರಬಹುದು ಎಂದು ಅನುಮಾನ ವ್ಯಪಡಿಸುತ್ತಾರೆ ಎಂದರೆ ಆಗಲೇ ಪೊಲೀಸರಿಗೆ ಇಲ್ಲಿ ಲಂಚ ಎಷ್ಟು ಹೋಗಿದೆ ಎಂದು ನಾವೆಲ್ಲರೂ ಲೆಕ್ಕ ಹಾಕಬಹುದು.

ಲಂಚ ಹೋಗಿದೆ ಎಂದು ಹೇಳುವುದಕ್ಕೂ ಕಾರಣವಿದೆ. ನೋಡಿ, ಸುನಂದಾ ಪುಷ್ಕರ್ ಯಾರು? ಆಗರ್ಭ ಶ್ರೀಮಂತೆ. ಅವರಿಗೆ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ದರ್ದೇನಿತ್ತು? ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತಲ್ಲವೆ? ಇದಕ್ಕೆ ಬಾಲಂಗೋಚಿಯಾಗಿ ಇನ್ನೊಂದು ವಾದವಿದೆ. ಅದನ್ನು ಕೊನೆಯಲ್ಲಿ ಹೇಳುತ್ತೇನೆ.  2014ರ ಜನವರಿ 19ಕ್ಕೆ ಸುನಂದಾ ಪುಷ್ಕರ್ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದರು. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಟ್ಟಾಗಲೂ ಆಲ್ ಇಂಡಿಯಾ ಫೊರೆನ್ಸಿಕ್ ಇನ್‌ಸ್‌‌ಟಿಟ್ಯೂಟ್‌ನ ಮುಖ್ಯಸ್ಥರಾದ ಡಾ. ಸುಧೀರ್ ಗುಪ್ತಾ ಎಂಬುವವರ ಮೇಲೆ ಬಹಳ ಒತ್ತಡಗಳು ಬಂದವು. ಆ ಒತ್ತಡಗಳೇನು? ಬಹಳ ನೇರ, ‘ಸುನಂದಾ ಪುಷ್ಕರ್ ಸಾವು ಸಹಜ ಎಂಬಂತೆ ರಿಪೋರ್ಟ್ ಕೊಡಬೇಕು ಇಲ್ಲದಿದ್ದರೆ ನಿಮ್ಮನ್ನು ಕೆಲಸದಲ್ಲಿ ಮುಂದುವರಿಯಲು ಬಿಡುವುದಿಲ್ಲ’ಎಂದು. ಹಾಗೆ ಒತ್ತಡ ಹೇರಿದವರು ಬೇರ್ಯಾಾರೂ ಅಲ್ಲ.

ಅಂದಿನ ಕೇಂದ್ರ ಆರೋಗ್ಯ ಸಚಿವ ಗುಲಾಮ್ ನಭಿ ಆಝಾದ್. ತನಗೆ ಹೀಗೆ ಒತ್ತಡ ಹೇರುತ್ತಿದ್ದಾರೆ ಎಂದು ಸ್ವತಃ ಮುಖ್ಯಸ್ಥ ಡಾ.ಸುಧೀರ್ ಗುಪ್ತಾರವರೇ ಹೇಳಿದ್ದಾರೆ. ಇಲ್ಲಿ ದೊಡ್ಡ ‘ಕೈ’ಗಳ ಕೈವಾಡ ಇಲ್ಲವೆಂದರೆ, ಆರೋಗ್ಯ ಸಚಿವರು ಈ ವಿಷಯದಲ್ಲಿ ತಲೆ ಹಾಕುವ ಅಗತ್ಯವೇನಿತ್ತು? ಇಲ್ಲಿ ಮತ್ತೊಂದು ವಿಷಯ ಸಾಬೀತಾಗಿದ್ದೇನೆಂದರೆ, ಈ ಪ್ರಕರಣದಲ್ಲಿ ದೊಡ್ಡ ಕುಳಗಳೇ ಇದೆ ಎಂಬುದು. ಇದರ ತೀಕ್ಷ್ಣತೆ ಮತ್ತು ಒತ್ತಡಕ್ಕೆ ಕಾರಣವೇನೆಂದು ಫೊರೆನ್ಸಿಕ್ ರಿಪೋರ್ಟ್ ಬಂದಾಗ ತಿಳಿದಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುನಂದಾ ಪುಷ್ಕರ್ ಅವರದ್ದು ಸಹಜ ಸಾವಲ್ಲ. ಅವರ ದೇಹದ ಮೇಲೆ ಐವತ್ತಕ್ಕೂ ಹೆಚ್ಚಿನ ಗಾಯಗಳ ಗುರುತುಗಳಿವೆ ಹಾಗೂ ಅವರ ದೇಹದಲ್ಲಿ ವಿಷದ ಪ್ರಮಾಣ ಹೆಚ್ಚಿದ್ದರಿಂದ ಮೃತಪಟ್ಟರು ಎಂದು ವರದಿಯಲ್ಲಿತ್ತು. ಈ ರೀತಿಯ ವರದಿ ಬರೆಯಬಾರದು ಎಂದೇ ಡಾ.ಸುಧೀರ್ ಗುಪ್ತಾ ಅವರ ಮೇಲೆ ಒತ್ತಡ ಹಾಕಿದ್ದು. ಅವರು ನಿಜವಾದ ವರದಿ ನೀಡಿದ ಬಳಿಕ, ಮೇ 2014ರಂದು ಅವರ ಕೈ ಕೆಳಗೆ ಕೆಲಸ ಮಾಡುವವನನ್ನು ಸುಧೀರ್ ಗುಪ್ತಾ ಜಾಗಕ್ಕೆ ತಂದು ಕೂರಿಸಿ, ಸುಧೀರ್‌ರನ್ನು ಜಾಗ ಖಾಲಿ ಮಾಡಿಸಿದ್ದರು.

ಈ ಮರಣೋತ್ತರ ಪರೀಕ್ಷೆ ಬಂದ ಕೆಲ ದಿನಗಳಲ್ಲಿ ಸುಬ್ರಮಣಿಯನ್ ಸ್ವಾಮಿ ಟ್ವಿಟರ್‌ನಲ್ಲಿ ‘ಸುನಂದಾ ಪುಷ್ಕರ್‌ರನ್ನು ಕೊಲ್ಲಲು ಸುಪಾರಿ ಹಂತಕರನ್ನು ಅರಬ್ ದೇಶದಿಂದ ಕರೆಸಲಾಗಿತ್ತು. ಸುನಂದಾರನ್ನು ಕೊಂದಿದ್ದು ರಷ್ಯಾದಿಂದ ತಂದ, ಅತ್ಯಂತ ವೇಗದಲ್ಲಿ ರಕ್ತದೊಳಗೆ ಸೇರುವ ವಿಷ’ಎಂದಿದ್ದರು. ಇದಾದ ನಂತರ ಬಹಳ ಜನರು ಸುಬ್ರಮಣಿಯನ್ ಸ್ವಾಮಿ ಹುಚ್ಚ, ದಡ್ಡ ಎಂದೆಲ್ಲ ಆಡಿಕೊಂಡರು. ಆದರೆ ಶಶಿ ತರೂರ್ ಗ್ರಹಚಾರ ಎಷ್ಟು ಖರಾಬ್ ಆಗಿತ್ತು ನೋಡಿ, ತನಿಖೆಯ ನಂತರ, ಸುನಂದಾರನ್ನು ಕೊಂದಿದ್ದು ರಷ್ಯಾದಿಂದ ತಂದ ಅದೇ ವಿಷ ಎಂದು ತಿಳಿಯಿತು. ಇಲ್ಲಿ ಇಷ್ಟೆಲ್ಲ ಆಗುತ್ತಿದೆ ಆದರೆ, ಶಶಿ ತರೂರ್ ಮಾತ್ರ ಆರಾಮಾಗಿ ತಿರುಗಾಡಿಕೊಂಡು ಇದ್ದಾರೆ.

ಇದು ನಮ್ಮ ನ್ಯಾಯಾಂಗದ ದುರಂತವೋ ಅಥವಾ ಪೊಲೀಸರ ತನಿಖೆಯ ವೈಖರಿಯೋ ಗೊತ್ತಿಲ್ಲ. ಆದರೆ ಸುನಂದಾ ಸತ್ತು ಇಷ್ಟು ವರ್ಷಗಳಾದರೂ ಯಾರು ಸುನಂದಾರನ್ನು ಕೊಂದದ್ದು ಎಂದು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಅಸಲಿಗೆ ಅವತ್ತು ಸುನಂದಾ ಪುಷ್ಕರ್ ಕೊಲೆಯಾಗುವ ಕೆಲವೇ ಕ್ಷಣಗಳ ಹಿಂದೆ ಶಶಿ ತರೂರ್, ಸುನಂದಾ ಉಳಿದುಕೊಂಡಿದ್ದ ದೆಹಲಿಯ ಲೀಲಾ ಪ್ಯಾಲೆಸ್‌ನ ಅವರ ರೂಮ್ ಗೆ ತುರ್ತಾಗಿ ಹೋಗಿದ್ದರು. ಅದು ಅವರ ಅಚಾನಕ್ ಭೇಟಿಯಾಗಿತ್ತು. ಆದರೆ ಚಾಲಾಕಿ ಶಶಿ ತರೂರ್ ಇವ್ಯಾವುದನ್ನೂ ಇಷ್ಟು ವರ್ಷಗಳ ತನಕ ಪೊಲೀಸರಿಗೆ ಹೇಳಿಯೇ ಇಲ್ಲ. ಇವೆಲ್ಲ ಬಯಲಾಗಿದ್ದು ಅರ್ನಾಬ್ ಗೋಸ್ವಾಮಿ ಶುರು ಮಾಡಿದ ರಿಪಬ್ಲಿಕ್ ಚಾನೆಲ್ ಮೂಲಕ. ಅಲ್ಲಿ ಕೆಲವು ರಹಸ್ಯ ದಾಖಲೆಗಳನ್ನು ಜನರ ಮುಂದೆ ಇಟ್ಟಾಗ ಶಶಿ ತರೂರ್ ಪರದೆ ಸರಿಯುತ್ತಾ ಬಂತು.

ಸುನಂದಾ ಮೃತದೇಹ ಸಿಕ್ಕಿದ್ದು ರೂಮ್ ನಂಬರ್ 345ರಲ್ಲಿ. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ ಸುನಂದಾ ಉಳಿದುಕೊಂಡಿದ್ದು ರೂಮ್ ನಂಬರ್ 307ರಲ್ಲಿ. ಹಾಗಾದರೆ 307ರಿಂದ 345ರ ರೂಮ್‌ಗೆ ಸುನಂದಾ ದೇಹವನ್ನು ಸಾಗಿಸಿದವರ್ಯಾರು? ಅದನ್ನು ಶಶಿ ತರೂರ್ ಒಬ್ಬರೇ ಹೇಳಬೇಕು. ಆದರೆ ಆ ಮನುಷ್ಯ ಮಾತ್ರ ಸುನಂದಾ ಮನೆಯ ಊಟವಿಲ್ಲದಿದ್ದರೇನು, ಬೇರೆ ಮನೆಗಳಿಲ್ಲವೇ ಎಂದು ಲಲನೆಯರ ಜತೆ ಔತಣಕೂಟದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದರೆ ಸುನಂದಾ ಹತ್ಯೆಯನ್ನು ಬೇರೆ ಯಾರೂ ನೋಡಿಯೇ ಇಲ್ಲವಾ? ನೋಡಿರಬಹುದು. ಆದರೆ ಶಶಿ ತರೂರ್ ಮಾತ್ರ ಸುನಂದಾರನ್ನು ಯಾರೂ ನೋಡಬಾರದು ಎಂದು ಪ್ಲಾನ್ ಮಾಡಲು ಶುರು ಮಾಡಿದ್ದರು. ಅವರ ಎಲ್ಲ ಪ್ಲಾನಿಂಗ್ ಶುರುವಾಗಿದ್ದು ಅಲ್ಲಿಂದ.

ಅದಕ್ಕೆ ತಕ್ಕಂತೆ ಸುನಂದಾ ಪುಷ್ಕರ್ ಕೊಲೆಯಾದ ಮೇಲೆ ಶಶಿ ತರೂರ್ ತಮ್ಮ ಪಿಎ ನಾರಾಯಣನ್ ಸೇರಿದಂತೆ ಎಲ್ಲ ಸಂಗಡಿಗರಿಗೆ ಹೋಟೆಲ್‌ನಿಂದ ಹೊರಡುವುದಕ್ಕೆ ಹೇಳಿದರು. ರಿಪಬ್ಲಿಕ್ ಚಾನೆಲ್ ಬಿಡುಗಡೆ ಮಾಡಿರುವ ಟೇಪ್‌ನಲ್ಲಿ ‘ಬಾಸ್ ಹೇಳಿದ್ದಾರೆ ನಾವು ಹೋಟೆಲ್‌ನಲ್ಲಿ ಇರೋದು ಬೇಡ ಅಂತ..’ಎಂದು ನಾರಾಯಣನ್ ಪತ್ರಕರ್ತೆಗೆ ಹೇಳಿದ್ದರು ಸಹ.  ಆದರೆ ಪ್ಲಾನಿಂಗ್ ಇನ್ನೂ ಮುಗಿದಿಲ್ಲ. ಯಾವ ಮಾಧ್ಯಮಗಳೂ ಇದರ ಬಗ್ಗೆ ಪ್ರಸಾರ ಮಾಡಬಾರದು ಎಂದು ತಮ್ಮ ಪ್ರಭಾವ ಬಳಸಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಆಗ ಅರ್ನಾಬ್ ಗೋಸ್ವಾಮಿ ಟೈಮ್‌ಸ್‌ ನೌನಲ್ಲಿ ಇದ್ದರು. ಆಗ ಅವರು ಶಶಿ ತರೂರ್ ಬಗ್ಗೆ ಹೆಚ್ಚು ಮಾತನಾಡದಂತೆ ತಡೆದಿದ್ದರು. ಅದಕ್ಕೆ ದಾಖಲೆಯೆಂಬಂತೆ, ಅಂದು ಟೈಮ್‌ಸ್‌ ನೌದಲ್ಲಿದ್ದ ಪತ್ರಕರ್ತರು ಸುನಂದಾ ಪುಷ್ಕರ್ ಮತ್ತು ಶಶಿ ತರೂರ್ ಪಿಎ ನಾರಾಯಣನ್ ಜತೆ ಮಾತನಾಡಿದ್ದ ಕರೆಗಳ ರೆಕಾರ್ಡ್ ಅನ್ನು ಈಗ ಬಿಡುಗಡೆಗೊಳಿಸಿದ್ದಾರೆ.

ಅರ್ನಾಬ್ ಗೋಸ್ವಾಮಿ ನೇರವಾಗಿಯೇ ‘ಶಶಿ ತರೂರ್, ನಾನು ಇನ್ನೊಂದು ಚಾನೆಲ್‌ನಲ್ಲಿ ಇದ್ದಾಗ ನನ್ನ ಕೈಗಳನ್ನು ಕಟ್ಟಿ ಹಾಕಿದ್ದಿರಿ. ಆದರೆ ಈಗ ರಿಪಬ್ಲಿಕ್ ನಿಮ್ಮನ್ನು ಬಯಲು ಮಾಡಿದೆ.. ತಾಕತ್ತಿದ್ದರೆ ಬಂದು ನಮ್ಮೊಂದಿಗೆ ಚರ್ಚೆ ಮಾಡಿ’ಎಂದು ಪಂಥಾಹ್ವಾನ ನೀಡಿದ್ದಾರೆ. ಆದರೆ ಶಶಿ ತರೂರ್ ಮಾತ್ರ ತಮ್ಮ ಮನೆಯಿಂದ ಹೊರಗೇ ಬರುತ್ತಿಲ್ಲ. 2014ರಲ್ಲಾದ ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯವನ್ನೂ ಕೊಡುವುದಕ್ಕೂ ಸಾಧ್ಯವಾಗಿಲ್ಲ, ಕನಿಷ್ಠ ಆರೋಪಿಯನ್ನೂ ಬಂಧಿಸಲಿಲ್ಲ ಎಂಬುದು ಮಾತ್ರ ನಮ್ಮ ದೇಶದ ದೊಡ್ಡ ದುರಂತ. ಅದೇ ಬೇರೆ ಯಾವುದಾದರೂ ಗಂಡ ತನ್ನ ಹೆಂಡತಿಗೆ ಹೊಡೆದ ಎಂದು ಗೊತ್ತಾದರೂ ಸಾಕು, ಅವರನ್ನು ಠಾಣೆಗೆ ಕರೆತಂದು, ಮೂಳೆ ಮುರಿಯುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಹೆಂಡತಿಯ ಕೊಲೆಯಾಗಿದ್ದರೂ, ಇನ್ಯಾವುದೋ ಹುಡುಗಿಯ ಜತೆ ಊಟಕ್ಕೆ ಕುಳಿತಿದ್ದನ್ನು ನೋಡಿಯೂ ಪೊಲೀಸರು ಸುಮ್ಮನಿದ್ದಾರೆ. ಅಸಲಿಗೆ ಈ ಪ್ರಕರಣ ಮಾಧ್ಯಮದಿಂದ ದೂರಾದ ಮೇಲೆ ಪೊಲೀಸರೂ ಈ ಫೈಲನ್ನು ಮುಚ್ಚಿ ಕುಳಿತಿದ್ದರು.

ಈಗ ಅದೇ ಫೈಲನ್ನು ಮಾಧ್ಯಮಗಳು ಮತ್ತೆ ತೆರೆಯುವಂತೆ ಮಾಡಿದೆ. ಸಹಜವಾಗಿ ಹೆಂಡತಿಯ ಸಾವಿನ ರಹಸ್ಯದ ಬಗ್ಗೆ ತಿಳಿದುಕೊಳ್ಳುವ, ಸೇಡು ತೀರಿಸಿಕೊಳ್ಳುವ ಇರಾದೆ ಗಂಡನಿಗಿರುತ್ತದೆ. ಆದರೆ, ಸುನಂದಾ ಫೈಲ್ ಮತ್ತೆ ತೆರೆದು, ಪೊಲೀಸರು ಪುನಃ ತನಿಖೆ ಆರಂಭಿಸುತ್ತೇವೆ ಎಂದು ಹೇಳಿದಾಗ ಶಶಿ ತರೂರ್ ಖುಷಿಯಾಗುವ ಬದಲು ಹೌಹಾರಿದ್ದಾರೆ. ಅವರ ಬಳಿ ಪ್ರಶ್ನೆ ಕೇಳುವುದಕ್ಕೆ ಬಂದರೆ, ಶಶಿ ತರೂರ್ ಕಡೆ ಗೂಂಡಾಗಳು, ವರದಿಗಾರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ‘ಅಲ್ಲ ಸ್ವಾಮಿ, ನಿಮ್ಮ ಹೆಂಡತಿಯ ಸಾವಿನ ಬಗ್ಗೆ ನೀವು ಏನು ಹೇಳ್ತೀರ?’ಇಷ್ಟು ದಿನ ಯಾಕೆ ಹೊರಗೇ ಬಂದಿಲ್ಲ ಎಂದು ಮಾಧ್ಯಮಗಳು ಕೇಳಿದರೆ, ತರೂರ್ ‘ನಾನು ನನ್ನ ಕ್ಷೇತ್ರದಲ್ಲಿ ಯಾವ್ಯಾವ ಅಭಿವೃದ್ಧಿಯ ಕೆಲಸಗಳನ್ನು ಮಾಡಬೇಕು ಎಂದು ರೂಪುರೇಷೆ ಮಾಡುತ್ತಿ.

ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ಹೇಗೆ ಎಂದು ಚಿಂತನೆ ನಡೆಸುತ್ತಿದ್ದೆ’ಎಂದು ಹೇಳುತ್ತಾರೆ. ಆದರೆ ಅಲ್ಲಿರುವ ಯಾವ ಪೊಲೀಸನಿಗೂ ‘ನೀನು ದೇಶವನ್ನು ಕೊಂಡೊಯ್ಯುವುದು ಆಮೇಲ್ ನೋಡೋಣ, ನಿನ್ನ ಹೆಂಡತಿಯ ದೇಹವನ್ನು 307 ರೂಮ್ ನಂಬರ್‌ನಿಂದ 345 ರೂಮ್ ನಂಬರ್‌ಗೆ ಹೊತ್ತೊಯ್ದಿದ್ದು ಯಾರು?’ಎಂದು ಕೇಳುವ ಗುಂಡಿಗೆ ಇಲ್ಲವೇ ಇಲ್ಲ. ಸುನಂದಾ ಸಾಯುವುದಕ್ಕಿಂತ ಮುನ್ನ ಅವರನ್ನು ನೋಡಿದ ಏಕೈಕ ವ್ಯಕ್ತಿ ಶಶಿ ತರೂರ್.

ಪಾಕಿಸ್ತಾನದ ಪತ್ರಕರ್ತೆ ಹಾಗೂ ಅಲ್ಲಿನ ಗುಪ್ತಚರ ಇಲಾಖೆ ಐಎಸ್‌ಐ ಏಜೆಂಟ್ ಆಗಿರುವ ಮೆಹರ್ ತರಾರ್ ಅವರ ಜತೆ ಶಶಿ ತರೂರ್‌ಗೆ ಇತ್ತೆನ್ನಲಾದ ಸಂಬಂಧದ ಬಗ್ಗೆ ಸುನಂದಾ ಪುಷ್ಕರ್ ಅಂದು ಮಾಧ್ಯಮಗಳಿಗೆ  ಏನೋ ಹೇಳುವವರಿದ್ದರು. ಅಷ್ಟರಲ್ಲಿ, ಸುನಂದಾ ಜತೆಗಿದ್ದ ‘ಚಂದ್ರ’ನೇ ಅವಳನ್ನು ನುಂಗಿ ಬಿಟ್ಟ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya