ಅಷ್ಟಕ್ಕೂ ಸೋನು ನಿಗಮ್ ಹೇಳಿದ್ದರಲ್ಲಿ ತಪ್ಪೆನಿದೆ ಹೇಳಿ?

‘ಕಂಕರ್ ಪತ್ತರ್ ಜೋಡ್ ಕೆ, ಮಸ್ಜಿದ್ ಲಾಯೇ ಬನಾಯ್ ತಾ ಚಡ್ ಮುಲ್ಲಾ ಬಾಂಗ್ ದೇ, ಕ್ಯಾ ಬೆಹ್ರಾ ಹುವಾ ಖುದಾಯೇ’ ‘ಮುಸ್ಲಿಮರು ಮಸೀದಿ ಕಟ್ಟಿ ಅದರ ಮೇಲೆ ಹೋಗಿ, ಎಷ್ಟು ಸಾಧ್ಯವಾಗುತ್ತೋ ಅಷ್ಟು ಜೋರಾಗಿ ಕೂಗಿ ದಿನಕ್ಕೆ ಐದು ಬಾರಿ ಪ್ರಾರ್ಥನೆಗೆ ಕರೆಯುತ್ತಾರೆ. ಕಿರುಚಿದರೂ ಕೇಳದಿರಲು ದೇವರೇನು ಕಿವುಡನೇ?’ ಎಂದು ಸಂತ ಕಬೀರರು 15ನೇ ಶತಮಾನದಲ್ಲೇ ಹೇಳಿದ್ದಾರೆ. ಹಾಗಂತ ಸಂತ ಕಬೀರರೇನು ಮುಸ್ಲಿಮ್ ವಿರೋಧಿಗಳಲ್ಲ. ನಮ್ಮ ದೇಶ ಕಂಡ ಮಹಾನ್ ಕವಿಗಳಲ್ಲಿ ಕಬೀರರು ಅಗ್ರಸ್ಥಾನದಲ್ಲಿದ್ದಾರೆ. ಮುಸ್ಲಿಂ ಕುಟುಂಬದಲ್ಲೇ ಹುಟ್ಟಿ ಬೆಳೆದ, ಸಂತ ಕಬೀರರೇ ಇಂಥ ಮಾತಾಡಿದ್ದಾರೆಂದರೆ, 15ನೇ ಶತಮಾನಗಳಿಂದಲೇ ಅಝಾನ್ ಗದ್ದಲ ಅವೆಷ್ಟು ಜನರ ನಿದ್ದೆ ಹಾಳು ಮಾಡಿತ್ತು ಎಂದು ನೀವು ಊಹಿಸಬಹುದು. ಅಂದಿನಿಂದ ಇಂದಿನವರೆಗೂ ಮೈಕಲ್ಲಿ ಕೂಗುವ ಪದ್ಧತಿಯ ಬಗ್ಗೆ ಜನರು, ಸೆಲೆಬ್ರೆಟಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಅದು ನಿಂತೇ ಇಲ್ಲವೆಂಬುದು ಪರಮಾಶ್ಚರ್ಯ.

ಈಗ ಈ ವಿಷಯ ಏಕೆ ಎಂದರೆ, ಅಝಾನ್(ಪ್ರಾರ್ಥನೆಗೆ ಬರುವಂತೆ ಮಸೀದಿಯಿಂದ ಕೂಗು ವುದು) ಬಗ್ಗೆ ಮೊನ್ನೆ ಖ್ಯಾತ ಹಾಡುಗಾರ ಸೋನು ನಿಗಮ್ ಮಾತಾಡಿರುವುದು. ಇವರು ಆ ಕುರಿತು ಒಂದಷ್ಟು ಟ್ವೀಟ್ ಮಾಡಿದ್ದಾರೆ. ‘ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಮುಸ್ಲಿಮ್ ಅಲ್ಲವಾದರೂ ನಾನು ಬೆಳಗಿನ ಅಝಾನ್ ಮೂಲಕವೇ ಎದ್ದೇಳಬೇಕು. ಭಾರತದಲ್ಲಿ ಇಂಥಾ ಬಲವಂತದ ಧಾರ್ಮಿಕತೆ ಯಾವಾಗ ನಿಲ್ಲುತ್ತೆ? ಇಸ್ಲಾಮ್ ಹುಟ್ಟು ಹಾಕಿದಾಗ ಮಹಮ್ಮದ್ ರ ಬಳಿ ವಿದ್ಯುತ್ ಇರಲಿಲ್ಲ. ಧರ್ಮವನ್ನು ಪಾಲನೆ ಮಾಡದೇ ಇರುವವರಿಗೆ ದೇವಸ್ಥಾನ, ಗುರುದ್ವಾರ, ಮಸೀದಿಗಳಲ್ಲಿ ವಿದ್ಯುತ್ ಬಳಸಿ ಮೈಕ್ ಹಾಕಿ ಕೂಗುವ ಅವಶ್ಯಕತೆಯೇನಿದೆ ಹೇಳಿ?’ ಎಂದು ಟ್ವೀಟ್ ಮಾಡಿದ್ದರಷ್ಟೇ.

ಅಷ್ಟಕ್ಕೇ ದೇಶದಲ್ಲಿ ಏನೋ ಅಲ್ಲೋಲ ಕಲ್ಲೋಲ ಆಯಿತೆಂಬಂತೆ, ಎಲ್ಲರೂ ಊಳಿಡುತ್ತಿದ್ದಾರೆ. ಆದರೆ, ಸೋನು ನಿಗಮ್ ಹೇಳಿದ್ದರಲ್ಲಿ ಏನು ತಪ್ಪಿದೆ? ಹದಿನೈದನೇ ಶತಮಾನದಲ್ಲಿ ಕಬೀರರು ಹೇಳಿದ್ದು ಬೇರೆ ಅಲ್ಲ, ಈಗ ಸೋನು ನಿಗಮ್ ಹೇಳಿದ್ದು ಬೇರೆ ಅಲ್ಲವಲ್ಲಾ? ಆದರೆ ಆಗಿರದ ಎದೆ ಬಡಿದುಕೊಳ್ಳುವ ಕಾರ್ಯಕ್ರಮ ಈಗೇಕೆ? ಎಲ್ಲ ಬಿಡಿ ಒಮ್ಮೆ ಸಹಜವಾಗಿ ಆಲೋಚಿಸಿ. ಹಿಂದೂಗಳ ದೇವಸ್ಥಾನದಲ್ಲೇ ಇಂಥ ಮಂತ್ರಘೋಷಗಳು ಕೇಳುತ್ತಿದ್ದರೆ, ‘ಏನ್ ಗುರೂ ನಿಂದು ದಿನಾ ಸುಪ್ರಭಾತ’ ಎಂದು ಕೇಳುತ್ತೇವೆ. ಇನ್ನು ಬಹುಸಂಖ್ಯಾತ ಹಿಂದೂಗಳೇ ಇರುವ ರಾಷ್ಟ್ರದಲ್ಲಿ ‘ಅಲ್ಲಾಹು ಅಕ್ಬರ್’ ಎಂದು ದಿನಕ್ಕೈದು ಬಾರಿ ಮೈಕಲ್ಲಿ ಕೂಗಿದರೆ ಯಾರಾದರೂ ಎಷ್ಟು ದಿನ ಎಂದು ತಡೆದುಕೊಳ್ಳುತ್ತಾರೆ ಹೇಳಿ? ಇದೇ ಕಾರಣಕ್ಕೆ ಸೋನು ನಿಗಮ್ ಧ್ವನಿ ಎತ್ತಿದ್ದು! ಆದರೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವಿಷಯವನ್ನು ಬೇರೆಡೆಯೇ ತೆಗೆದುಕೊಂಡು ಹೋಗಲಾಗುತ್ತಿದೆ. ಸೋನು ನಿಗಮ್ ಮುಸ್ಲಿಮ್ ವಿರೋಧಿ ಎಂದು ಒಂದು ಪಂಗಡ ಹೇಳಿದರೆ, ಇನ್ನೊಂದು ಪಂಗಡ, ಸೋನು ನಿಗಮ್ ಕೋಮುವಾದಿ ಎಂದೂ ಹೇಳುತ್ತಿದೆ.

ಇನ್ನೊಬ್ಬ ಬುದ್ಧಿವಂತ ಇಮಾಮ್, ಅಬ್ಬರದಲ್ಲಿ ಸೋನು ನಿಗಮ್‌ಗೆ ಫಾತ್ವಾ ಕೊಡುವ ಬದಲು, ಸೋನು ಸೂದ್ ತಲೆ ತೆಗೆಯಲು ಫಾತ್ವಾ ಹೊರಡಿಸಿದ್ದಾನೆ. ಮಾತೆತ್ತಿದರೆ ಸಂವಿಧಾನ, ಕಾನೂನು ಇತ್ಯಾದಿ ಎಂದು ಮಾತಾಡುವ ಬುದ್ಧಿಜೀವಿಗಳೂ ಸೋನು ನಿಗಮ್‌ರನ್ನು ವಿರೋಧಿಸುತ್ತಿರುವುದು ಅಚ್ಚರಿ ತರಿಸಿದೆ. ಬಾಂಬೆ ಹೈ ಕೋರ್ಟ್ 2015ರ ತೀರ್ಪಿನಲ್ಲಿ ಲೌಡ್‌ಸ್ಪೀಕರ್‌ನ್ನು ತೆಗೆಯಬೇಕು ಎಂದು ಬಹಳ ಸ್ಪಷ್ಟವಾಗಿ ಆದೇಶ ನೀಡಿ ಸುಮಾರು 45ಕ್ಕೂ ಅಧಿಕ ಮಸೀದಿಗಳಿಂದ ಸ್ಪೀಕರನ್ನು ತೆಗೆಸಿದೆ. ಇದನ್ನು ಇಮಾಮ್‌ಗಳೂ ಸ್ವಾಗತಿಸಿದ್ದಾರೆ. ಅದನ್ನೇ ಸೋನು ನಿಗಮ್ ಹೇಳಿದರೆ ತಪ್ಪೇನು? ಒಬ್ಬ ಹಿಂದೂ ಹೇಳಿದ ಎಂದು ಇಷ್ಟೆಲ್ಲ ಹಾರಾಟವೇ? ‘ನಮಾಜ್ ಮಾಡುವುದಕ್ಕೆ ಲೌಡ್‌ಸ್ಪೀಕರ್‌ನಲ್ಲಿ ಅಝಾನ್ ಕೂಗುವುದು ಅನಿವಾರ್ಯವಲ್ಲ. ಅಝಾನ್ ಕಿವಿಗೆ ಇಂಪಾಗಿರಬೇಕು. ನಾಗರಿಕರು ಲೌಡ್‌ಸ್ಪೀಕರ್ ಬೇಡವೆನ್ನುತ್ತಿದ್ದಾರೆ ಎಂದರೆ, ಪೊಲೀಸರು ತೆಗೆಯುವುದಕ್ಕೆ ಮುನ್ನವೇ ಮಸೀದಿಗಳು ಅದನ್ನು ತೆಗದುಬಿಡಬೇಕು’ ಎಂದು ಹಲವಾರು ನಾಯಕರೂ ಅಂದು ಹೇಳಿದ್ದರು.

ಆದರೆ ವಿಪರ್ಯಾಸವೆಂದರೆ, ಅಂದು ತೆರವುಗೊಂಡಿದ್ದ ಎಲ್ಲ ಲೌಡ್ ಸ್ಪೀಕರ್‌ಗಳು ಮತ್ತೆ ಮಸೀದಿಯ ಗೋಪುರವನ್ನೇರಿ ಇತರ ಧರ್ಮೀಯರಿಗೆ ಕಿರಿಕಿರಿ ಶುರು ಮಾಡಿವೆ. ಇದು ಒಂದು ಧರ್ಮದ ಹೇರಿಕೆಯಲ್ಲದೇ ಇನ್ನೇನು? ಸ್ವಾಮಿ ಅಝಾನ್ ಮುಸ್ಲಿಮನಿಗೇ ಹೊರತು ಹಿಂದೂಗಳಿಗಲ್ಲ. ಇವರು ಇಲ್ಲದ ಹೊತ್ತಲ್ಲಿ ಅಲ್ಲಾ ಎಂದು ಕೂಗಿದರೆ, ಅದನ್ನು ಕೇಳಿಸಿಕೊಳ್ಳುವ ದರ್ದು ನಮಗೇನು? ಹಾಗೆಂದು ಕೇಳಿಸಿಕೊಳ್ಳಲೇಬಾರದು ಎಂದಲ್ಲ, ವರ್ಷಕ್ಕೆ ಹತ್ತಾರು ಹಬ್ಬಗಳು ಬಂದಾಗ ಕೇಳಿಸಿಕೊಳ್ಳೋಣ… ಸತ್ಯ ಹೇಳಬೇಕೆಂದರೆ, ಸಹಿಸಿಕೊಳ್ಳೋಣ. ಏಕೆಂದರೆ, ನಮ್ಮ ದೇವಾಲಯಗಳಲ್ಲಿ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ಮೈಕ್ ಸೆಟ್ ಹಾಕಿದಾಗ ಮುಸ್ಲಿಮರೂ ಸಹಿಸಿಕೊಳ್ಳುತ್ತಾರೆ ಎಂದು. ಆದರೆ ದಿನಾ ಅದದೇ ಕೇಳಬೇಕು ಎಂದರೆ ಹೇಗೆ?
ಅಷ್ಟಕ್ಕೂ ಅಝಾನ್ ಅಥವಾ ಅಧಾನ್ ಶುರುವಾದ ಬಗ್ಗೆ ತಿಳಿದರೆ ಎಲ್ಲವೂ ಸ್ಪಷ್ಟವಾಗುತ್ತದೆ.

ಇಸ್ಲಾಂನ ಆದಿಯಲ್ಲಿ ಮೆಕ್ಕಾದಲ್ಲಿ ಮುಸ್ಲಿಮರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಪ್ರವಾದಿ ಮಹಮ್ಮದ್ ಮದೀನಾಹ್‌ಗೆ ಬಂದ ಮೇಲೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಒಂದು ಮಸೀದಿ ನಿರ್ಮಿಸಿ ಅಲ್ಲಿ ಎಲ್ಲರಿಗೇ ಸಲಾಹ್(ನಮಾಜ್) ಮಾಡಲು ಅವಕಾಶ ಕೊಟ್ಟ. ಆಗ ಗಡಿಯಾರ ಏನೂ ಇಲ್ಲದ ಕಾರಣ, ಇಂತಿಷ್ಟು ಸಮಯಕ್ಕೆ ಸರಿಯಾಗಿ ಅಸ್-ಲಾತ್-ಉಲ್-ಜಮಾಯಹ್(ನಮಾಜ್ ಮಾಡುವುದಕ್ಕೆ ಎಲ್ಲರನ್ನೂ ಆಹ್ವಾನಿಸುವುದು) ಎಂದು ಕೂಗುತ್ತಿದ್ದರು. ಆಗ ಎಲ್ಲರೂ ಬಂದು ನಮಾಜ್ ಮಾಡುತ್ತಿದ್ದರು. ಈ ಪರಿಪಾಠ ಬೆಳೆದುಕೊಂಡು ಬಂದಿದ್ದು ಹೀಗೆ. ಇದೇ ರೀತಿ ಚರ್ಚ್‌ಗಳಲ್ಲೂ ಪ್ರೇಯರ್‌ಗೆ ಬನ್ನಿ ಎನ್ನಲು ಚರ್ಚ್ ಮೇಲಿರುವ ದೊಡ್ಡ ಗಂಟೆಯನ್ನು ಬಾರಿಸುತ್ತಿದ್ದದ್ದು. ಆದರೆ ಈಗ ಲೌಡ್ ಸ್ಪೀಕರ್ ಹಾಕಿ ಕರೆಯುವ ಅವಶ್ಯಕತೆಯೇನಿದೆ? ಮುಸ್ಲಿಮರು ಗಡಿಯಾರ ಕಟ್ಟಿಕೊಳ್ಳದಷ್ಟೂ ಹಿಂದುಳಿದಿದ್ದಾರೆಯೇ? ಅಥವಾ ಇಸ್ಲಾಂ ನಿಷಿದ್ಧ ಪಟ್ಟಿಯಲ್ಲಿ ಗಡಿಯಾರವೂ ಸೇರಿದೆಯೋ? ಹಾಗೇನು ಇದ್ದಂತಿಲ್ಲ ಎಂದ ಮೇಲೆ ದಿನಕ್ಕೈದು ಬಾರಿ ಕೂಗಿ ಊರವರ ನೆಮ್ಮದಿ ಹಾಳು ಮಾಡುವುದೇಕೆ? ಅಷ್ಟು ಕೂಗುವ ಚಟವಿದ್ದರೆ, ಆಗಿನ ಕಾಲದಲ್ಲಿ ಕೂಗುತ್ತಿದ್ದ ಹಾಗೆ, ಮೌಲ್ವಿಯೋ ಅಥವಾ ಮಸೀದಿ ಯಲ್ಲಿರುವವರೋ ಮಸೀದಿಯ ಗೋಪುರಕ್ಕೆ ಹೋಗಿ ಬಾಯಲ್ಲಿ ಕೂಗಿಕೊಳ್ಳಲಿ ಅಲ್ಲವೇ? ಅದನ್ನು ಲೌಡ್ ಸ್ಪೀಕರ್ ಹಾಕಿ ನಮ್ಮನ್ನು ಕಾಡುವುದೇಕೆ? ಎಷ್ಟೋ ಹಿಂದೂಗಳು ದೇವಸ್ಥಾನಕ್ಕೆ ಹೋಗುವುದಿಲ್ಲ.

ಅದೇ ರೀತಿ ಮುಸಲ್ಮಾನರೂ ಹೋಗುವುದಿಲ್ಲ. ಮೈಕಲ್ಲಿ ಕೂಗಿದಾಗ ಇಂಥವರು ಓಡೋಡಿಯೇನು ಬರುವುದಿಲ್ಲ. ಅಝಾನ್ ಕೂಗಿದ ಮೇಲೂ ಕೆಲ ಮುಸಲ್ಮಾನರು ಬರಲಿಲ್ಲವೆಂದರೆ ಯಾವ ಪುರುಷಾರ್ಥಕ್ಕೆ ಮೈಕ್ ಹಾಕುವುದು? ಇಂಗ್ಲಿಷ್ ಚಾನೆಲ್ ಒಂದರ ಮುಖ್ಯಸ್ಥ ಈ ಬಗ್ಗೆ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಸಂದರ್ಶಿಸುತ್ತಿದ್ದಾಗ ವಿವೇಕ್ ತಮಗೂ ಮಸೀದಿಯ ಲೌಡ್‌ಸ್ಪೀಕರ್‌ನಿಂದ ಕಿರಿಕಿರಿಯಾಗುತ್ತಿದೆ ಎಂದಾಗ, ಆ ಚಾನೆಲ್ ಮುಖ್ಯಸ್ಥ – ‘ನಿಮಗೆ ಅಝಾನ್‌ನಿಂದ ಕಿರಿಕಿರಿಯಾಗುತ್ತಿದೆಯಾ? ಹಾಗಾದರೆ ನೀವೇ ಬೇರೆ ಕಡೆ ಮಸೀದಿಯಿಂದ ದೂರ ಮನೆಮಾಡಿಕೊಳ್ಳಿ’ ಎಂದು ಬಿಟ್ಟಿ ಸಲಹೆ ನೀಡಿದ. ಇದು ಸುಮಾರು ಮುಸ್ಲಿಮ್ ಮುಖಂಡರ ಸಲಹೆ ಕೂಡ. ಆದರೆ ಪತ್ರಕರ್ತನಿಗೆ ನಾನು ಕೇಳಬೇಕೆಂದಿರುವ ಪ್ರಶ್ನೆ ಇಷ್ಟೇ – ಕಳೆದ ವರ್ಷ, ಅಮೀರ್ ಖಾನ್ ಮತ್ತು ಶಾರುಖ್ ಖಾನ್ ತಮಗೆ ಭಾರತದಲ್ಲಿ ಅಸುರಕ್ಷತೆ, ಅಭದ್ರತೆ ಕಾಡುತ್ತಿದೆ ಎಂದಾಗ ಹಲವಾರು ಭಾರತೀಯರು ಆ ನಟರನ್ನು ದೇಶ ಬಿಟ್ಟು ಹೋಗಲು ಹೇಳಿದ್ದರು, ಆಗ ಈ ಪತ್ರಕರ್ತ ಮಹಾಶಯ ಎಲ್ಲಿಗೆ ಹೋಗಿದ್ದ? ಯಾವ ಮಸೀದಿಯಲ್ಲಿ ಲೌಡ್‌ಸ್ಪೀಕರ್ ಸ್ವಿಚ್ ಒತ್ತುತ್ತಿದ್ದ? ಅವರಿಗೂ ಅವರ ಮನಸ್ಸಿನ ತಳಮಳ, ಕಿರಿಕಿರಿ
ಎಲ್ಲವನ್ನು ಹೇಳುವುದಕ್ಕೆ ಅವಕಾಶವಿದೆ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಚಾದರ್ ಹಾಕಿ ಮುಚ್ಚಿಬಿಟ್ಟಿದ್ದರು.

ಅದೇ ಪ್ರಶ್ನೆ ಈಗ ವಿವೇಕ್ ಅಗ್ನಿಹೋತ್ರಿಯೋ, ಸೋನು ನಿಗಮ್ಮೋ ಕೇಳಿದರೆ, ಮನೆ ಬದಲಾಯಿಸಿಕೊಳ್ಳಿ ಎಂದು ಹೇಳಲು ಇವರಿಗೆ ಧೈರ್ಯವಾದರೂ ಹೇಗೆ ಬರುತ್ತೆ? ಇಷ್ಟು ಜನರಿಗೆ ಕಿರಿಕಿರಿಯಾಗುತ್ತಿರುವ ಮಸೀದಿಯನ್ನೇ ಯಾಕೆ ಸಮಾನ ಮನಸ್ಕರ ಪ್ರದೇಶಕ್ಕೆ ವರ್ಗಾಯಿಸಬಾರದು? ಈಗ ಮಾಧ್ಯಮಗಳು ಮತ್ತು ಮುಸ್ಲಿಮ್ ಮೂಲಭೂತವಾದಿಗಳು ಸೋನು ನಿಗಮ್‌ರ ಈ ವಾಕ್ಯವನ್ನೇ ಇಟ್ಟುಕೊಂಡು, ಮತ್ತೊಂದು ಡ್ರಾಮಾ ಶುರು ಮಾಡುತ್ತಿವೆ. ದನದ ಮಾಂಸ ತಿನ್ನಬಾರದು ಎಂದು ಅದನ್ನು ಬ್ಯಾನ್ ಮಾಡಿದರು. ಈಗ ಮಸೀದಿಯ ಲೌಡ್‌ಸ್ಪೀಕರ್ ಅನ್ನೂ ಬಂದ್ ಮಾಡಿಸುತ್ತಿದ್ದಾರೆ. ಇದು ಸಮಾನತೆಯಾ ಎಂದು ಎದೆ ಬಡಿದುಕೊಳ್ಳುತ್ತಿದ್ದಾರೆ. ಇಲ್ಲ, ಖಂಡಿತವಾಗಿಯೂ ಇದು ಸಮಾನತೆ ಅಲ್ಲ. ನಿಜವಾದ ಸಮಾನತೆ ಯಾವುದೆಂದರೆ, ಬೆಂಗಳೂರಿನ ಯಾವ ಶಿವಾಜಿನಗರ ಮಾರ್ಕೆಟ್‌ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಾರೋ ಅದೇ ಅಂಗಡಿಯಲ್ಲಿ ಹಂದಿ ಮಾಂಸವೂ ಸಿಗುವಂಥಾಗುವುದು ಸಮಾನತೆ. ಆದರೆ, ಶಿವಾಜಿನಗರದ ರಸ್ಸಲ್ ಮಾರ್ಕೆಟ್‌ನಲ್ಲಿ ಹಂದಿ ಮಾಂಸವಿರಲಿ, ಒಂದು ಹಂದಿಗೂ ಎಂಟ್ರಿ ಇಲ್ಲ.

ಇದ್ಯಾವ ಬದನೇಕಾಯಿ ಸಮಾನತೆ ಸ್ವಾಮಿ? ಹಂದಿ ಮಾಂಸ ಮಾರಾಟ ಮಾಡುವುದು ಮುಸಲ್ಮಾನರಿಗೆ ನಿಷಿದ್ಧ ಎಂದು ತಿಳಿದಿರುವ ಬೂಟು ನೆಕ್ಕುವ ಪತ್ರಕರ್ತರು, ಬುದ್ಧಿಜೀವಿಗಳಿಗೆ ದನ ಕಡಿಯುವುದು ಹಿಂದೂಗಳಿಗೆ ನಿಷಿದ್ಧ ಎಂದು ಮಾತ್ರ ತಿಳಿದಿಲ್ಲ. ಹಿಂದೂಗಳ ದೇವಸ್ಥಾನ ಭಾರತದಲ್ಲಿ ಕಾಣಿಸುವಷ್ಟು ಬೇರೆ ದೇಶದಲ್ಲಿರುವ ಉದಾಹರಣೆಯೇ ಇಲ್ಲ. ಒಂದು ವೇಳೆ ಕಂಡರೂ ಅದನ್ನು ಧ್ವಂಸ ಮಾಡುತ್ತಾರೆ. ಇದಕ್ಕೆ ಪಾಕ್‌ನಲ್ಲಿದ್ದ ಅನಾದಿಕಾಲದ ದೇವಸ್ಥಾನಗಳು ಧ್ವಂಸಗೊಂಡಿರುವುದೇ ಸಾಕ್ಷಿ. ಇನ್ನು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಮಸೀದಿಗಳನ್ನು ಹೊಂದಿರುವ ದೇಶ ಭಾರತ. ಮುಸಲ್ಮಾನರು ಅತ್ಯಂತ ಸೇಫ್ ಆಗಿರುವುದೂ ಭಾರತದಲ್ಲೇ. ಹೀಗಿರುವಾಗ, ಲೌಡ್‌ಸ್ಪೀಕರ್ ಹಚ್ಚಿ ರಗಳೆ ಮಾಡಬೇಡ್ರಪ್ಪಾ ಎಂದು ಹೇಳಿದರೆ ಅದು ಅಲ್ಪಸಂಖ್ಯಾತರ ತುಳಿತ ಹೇಗಾಗುತ್ತದೆ ಸ್ವಾಮಿ? ಹೇಳಿ

ಯಾವ್ಯಾವ ಮುಸ್ಲಿಮ್ ದೇಶಗಳ ದೇವಸ್ಥಾನಗಳಲ್ಲಿ ‘ಹರೇ ರಾಮ, ಹರೇ ಕೃಷ್ಣ’ಎಂದು ಲೌಡ್‌ಸ್ಪೀಕರ್ ಹಾಕುವ ಅಧಿಕಾರ ಕೊಟ್ಟಿದ್ದಾರೆ? ನಮ್ಮದೇ ಬಾಂಬೆ ಹೈ ಕೋರ್ಟ್, ದೇವಸ್ಥಾನಗಳ ಮೈಕ್ ಸೆಟ್ ತೆರವುಗೊಳಿಸಿದಾಗ ಎಲ್ಲಿ ಹೋಗಿದ್ದರು ಬಿಳಿಮಂಡೆ ಹೋರಾಟಗಾರರು? ಯಾವುದೂ ಬೇಡ ಬುದ್ಧಿಜೀವಿಗಳೇ, ನಮ್ಮ ದೇಶದಲ್ಲೇ ಇರುವ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಮಾಡುವುದಕ್ಕೆ ಅನುಮತಿ ಇಲ್ಲ. ಗಂಟೆ ಸದ್ದು ಜೋರಾಗಿ ಕೇಳಿದರೂ, ದೇವರ ವಿಗ್ರಹಕ್ಕೆ ಚಪ್ಪಲಿಯಲ್ಲೇ ಹೊಡೆದು ಧ್ವಂಸ ಮಾಡಿ ಹೋಗುತ್ತಾರೆ ಅಲ್ಲಿನ ಮುಸಲ್ಮಾನರು. ಹೀಗಿರುವಾಗ, ಲೌಡ್‌ಸ್ಪೀಕರ್ ಹಾಕಬೇಡ್ರಪ್ಪ, ನಿದ್ದೆ ಬರಲ್ಲ ಎಂದು ಸೋನು ನಿಗಮ್ ಎಂಬ ಒಬ್ಬ ಹಿಂದೂ ಹೇಳಿದ ಮಾತ್ರಕ್ಕೆ ಅವರನ್ನು ಹಿಗ್ಗಾ ಮುಗ್ಗಾ ಝಾಡಿಸುತ್ತಿರುವುದು ಮತ್ತದೇ ಪ್ರಶ್ನೆಗೆ ತಂದೊಡ್ಡುತ್ತಿದೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಅಲ್ಪಸಂಖ್ಯಾತರ ಅಪ್ಪನ ಆಸ್ತಿಯೇ? ಹಿಂದೂಗಳಿಗೆ ಅದು ಅನ್ವಯಿಸುವುದಿಲ್ಲವೇ?’

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya