ಕುಲಭೂಷಣ್‌ರನ್ನು ನೇಣಿಗೆ ಹಾಕುವ ತಾಕತ್ತಿದೆಯೇ ಪಾಕ್?

ಪಾಕಿಸ್ತಾನ ಮತ್ತೊಮ್ಮೆ ತಮ್ಮದು ದಡ್ಡರ ರಾಷ್ಟ್ರ ಎಂದು ಸಾಬೀತು ಮಾಡಿದೆ. 1971ರ ಯುದ್ಧದಲ್ಲಿ ಸೋತ ನಂತರದ ದಿನದಿಂದಲೂ ಪಾಕಿಸ್ತಾನಕ್ಕೆ ಭಾರತವನ್ನು ನೇರವಾಗಿ ಎದುರಿಸಲು ಆಗೇ ಇಲ್ಲ. ಅದಕ್ಕೆ ಸಣ್ಣ ಸಣ್ಣ ಕೆಲಸ ಮಾಡುತ್ತಿದೆ. ತಮಾಷೆ ಎಂದರೆ, ಪ್ರತಿ ಬಾರಿ ಏನೋ ಮಾಡುವುದಕ್ಕೆ ಹೋಗಿ ಅದು ಇನ್ನೇನೋ ಆಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಮರ್ಯಾದೆ ಹರಾಜು ಹಾಕಿಕೊಳ್ಳುತ್ತಿದೆ. ಈಗ ಮಾಡಿಕೊಂಡಿರುವ ಭಾನಗಡಿ ನೋಡಿದರೆ, ಪಾಕಿಸ್ತಾನ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಲು ಶತಾಯಗತಾಯ ಪ್ರಯತ್ನಿaಸುತ್ತಿದೆ ಎಂಬುದು ಪ್ರಪಂಚಕ್ಕೇ ತಿಳಿಯುತ್ತದೆ.

ಇತ್ತೀಚೆಗೆ ಪಾಕಿಸ್ತಾನದ ನ್ಯಾಯಾಲಯ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಬಗ್ಗೆ ಒಂದು ತೀರ್ಪು ನೀಡಿತ್ತು. ಅದೇನೆಂದರೆ, ಕುಲಭೂಷಣ್ ಜಾಧವ್ ಪಾಕಿಸ್ತಾನದ ಮೇಲೆ ಬೇಹುಗಾರಿಕೆ ಮಾಡಲು ಬಂದಿರುವ ಭಾರತದ ಗುಪ್ತದಳ ಇಲಾಖೆ ನೇಮಿಸಿರುವ ವ್ಯಕ್ತಿ. ಹಾಗಾಗಿ ಅವನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದಿರುವ ಪಾಕ್ ಎಲ್ಲ ರಾಷ್ಟ್ರಗಳ ಕಣ್ಣಲ್ಲಿ ಗುಳ್ಳೆ ನರಿಯಂತೆ ಕಾಣುತ್ತಿದೆ. ಒಬ್ಬ ಗೂಢಚಾರಿಯನ್ನು ಹಿಡಿದರೆ, ಅದು ದೇಶಕ್ಕೆ ಒಳ್ಳೆಯದೇ. ಅದರಿಂದ ಅವರವರ ದೇಶದ ಭದ್ರತೆ ಎಷ್ಟು ಉತ್ತಮವಾಗಿದೆ ಎಂದು ತಿಳಿಯುತ್ತದೆ. ಆದರೆ ಪಾಕ್ ಬುದ್ಧಿ ನಮಗೆ ತಿಳಿದೇ ಇದೆ. ಇಲಿ ಹೊಡೆದು, ಹುಲಿ ಹೊಡೆದೆ ಎನ್ನುವ ಜಾತಿ. ಈ ಬಾರಿ ಆದದ್ದೂ ಅದೇ. ನಮ್ಮ ದೇಶದ ನೌಕಾದಳದ ಮಾಜಿ ಯೋಧನನ್ನು ಹಿಡಿದು, ಗೂಢಚಾರಿಯನ್ನೇ ಹಿಡಿದೆ ಎಂದು ಪೋಸು ಕೊಡುತ್ತಿದೆ. ಇದರಿಂದ ತಿಳಿಯುವುದೇನೆಂದರೆ, ಪಾಕ್‌ಗೆ ಸರಿಯಾದವರನ್ನು ಹಿಡಿಯುವ ತಾಕತ್ತಿಲ್ಲದೇ ಇನ್ಯಾರನ್ನೋ ಹಿಡಿದಿದೆ ಎಂದು.

ಪಾಕಿಸ್ತಾನಕ್ಕೆ ಇಂಥ ಚಾಳಿ ಹೊಸದೇನಲ್ಲ. ಈ ಮೊದಲು ಬಹಳ ಜನರನ್ನು ಬಂಧಿಸಿ ಅವರನ್ನು ಗೂಢಚಾರರು ಎಂದು ಹೇಳಿ ಗಲ್ಲಿಗೇರಿಸಿದೆ ಹಾಗೂ ಕೆಲವರನ್ನು ಸದ್ದಿಲ್ಲದೆ ಹತ್ಯೆಗೈದಿದೆ. 1971 ಯುದ್ಧದ ಸಂದರ್ಭದಲ್ಲಿ ಸುರ್ಜೀತ್ ಸಿಂಗ್ ಎಂಬುವವನನ್ನು ಅಪಹರಿಸಿ ಅವನನ್ನು ಹಿಡಿದು ನೇರವಾಗಿ ಕತ್ತಲೆ ಕೋಣೆಗೆ ದೂಡಿಟ್ಟು 1974ರಲ್ಲಿ ಅವನಿಗೆ ಮರಣದಂಡನೆ ಶಿಕ್ಷೆ ಘೋಷಿಸಿತ್ತು. ಆತ ಸತ್ತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆತ ಇನ್ನೂ ಬದುಕಿದ್ದ. 1985ರಲ್ಲಿ ಆತನಿಗೆ ಮತ್ತೆ ಮರಣ ದಂಡನೆ ಶಿಕ್ಷೆ ಘೋಷಿಸಿತ್ತು. ಅದಾದ ನಾಲ್ಕು ವರ್ಷಗಳ ನಂತರ, ಪಾಕಿಸ್ತಾನದ ಹಂಗಾಮಿ ರಾಷ್ಟ್ರಪತಿ ಗುಲಾಮ್ ಐಶಾಖ್ ಖಾನ್, ಸುರ್ಜೀತ್ ಸಿಂಗ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದರು. 2012ರಲ್ಲಿ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ, ಸುರ್ಜೀತ್ ಸಿಂಗ್ ಅವರನ್ನು ಬಿಡುಗಡೆ ಮಾಡಿದ್ದರು. ಅಂದರೆ ಯಾವ ತಪ್ಪೂ ಮಾಡದೇ ಸುರ್ಜೀತ್ ಸಿಂಗ್ ಅವರು ಬರೋಬ್ಬರಿ 41 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

ಇದಾದ ನಂತರ ಪಾಕ್ ಸರಬ್ಜೀತ್ ಸಿಂಗ್ ಅವರನ್ನು ಭಾರತದ ಗಡಿ ಭಾಗದಿಂದ ಅಪಹರಿಸಿ ಅವರನ್ನೂ ಬೇಹುಗಾರ ಎಂದು ಹೇಳಿ, ಕೊಡಬಾರದ ಹಿಂಸೆ ಕೊಟ್ಟು ಕೊಂದಿತ್ತು. ಈಗ ಕುಲಭೂಷಣ್ ಸಿಂಗ್ ಅವರನ್ನು ಹಿಡಿದು ಕಾಡಲು ಶುರು ಮಾಡಿದೆ. ಅವನಿಗೆ ಮರಣ ದಂಡನೆ ನೀಡುವ ಮೂಲಕ ಭಾರತದ ಘನತೆಗೆ ಮಸಿ ಬಳಿಯಬಹುದೆಂದು ನಿರ್ಧರಿಸಿತ್ತು. ಆದರೆ, ಆ ಪ್ಲಾನ್ ಈಗ ಫ್ಲಾಪ್ ಆಗುತ್ತಿದೆ. ಅದಕ್ಕೆ ಮೊದಲನೇ ಕಾರಣ, ಕುಲಭೂಷಣ್ ಜಾಧವ್ ಅವರನ್ನು ಪಾಕ್ ತಾವು ಬಂಧಿಸಿದ್ದೇವೆ ಎಂದು ಘೋಷಿಸಿಕೊಂಡಿದೆ. ಇದರ ಅಸಲಿಯತ್ತು ಏನೆಂದರೆ, ಕುಲಭೂಷಣ್ ಅವರನ್ನು ಪಾಕ್ ಬಂಧಿಸಲೇ ಇಲ್ಲ. ಬದಲಿಗೆ, ತಾಲಿಬಾನ್ ಉಗ್ರರು ಬಂಧಿಸಿ, ಹಣ ಮತ್ತು ಬಂಗಾರಕ್ಕಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡಿದ್ದಾರೆ. ಅಂದರೆ, ಪಾಕ್‌ಗೆ ತಾಲಿಬಾನ್ ಅವರ ಸಂಪರ್ಕ ಬಹಳ ಚೆನ್ನಾಗೇ ಇದೆ ಎಂದು ಇಡೀ ಪ್ರಪಂಚಕ್ಕೇ ಮತ್ತೊಮ್ಮೆ ತಿಳಿಯುತ್ತದೆ. ಆಯ್ತು, ಕುಲಭೂಷಣ್ ಅವರನ್ನು ಪಾಕಿಸ್ತಾನದಲ್ಲೇ ಹಿಡಿದರಾ? ಅದೂ ಇಲ್ಲ. ಬದಲಿಗೆ ಇರಾನ್‌ನಲ್ಲಿ ಹಿಡಿದು ಪಾಕ್‌ಗೆ ತಂದರು. ಸರಿ ಇಷ್ಟೆಲ್ಲ, ಆಗಿ ಕುಲಭೂಷಣ್ ಗೂಢಚಾರನೇ ಅದೂ, ಅಲ್ಲ.

ಇರಾನ್‌ನಲ್ಲಿ ಒಂದು ವ್ಯಾಪಾರ ಆರಂಭಿಸಬೇಕು ಎಂದು ತಿರುಗಾಡುತ್ತಿದ್ದವನನ್ನು ಹಿಡಿದು ತಂದರು. ಅಲ್ಲಿಗೆ, ಪಾಕಿಸ್ತಾನ ತಾನು ಏನು ಸಾಬೀತು ಪಡಿಸಬೇಕು ಎಂದು ಕುಲಭೂಷಣ್ ಅವರನ್ನು ಹಿಡಿದು ತಂದಿತ್ತೋ, ಯಾವುದೂ ಫಲಕಾರಿಯಾಗದೇ, ಪಾಕಿಸ್ತಾನದ ಕುತ್ತಿಗೆಗೇ ಸುತ್ತಿಕೊಂಡಿದೆ. ಕುಲಭೂಷಣ್ ಅಪಹರಣ ಮತ್ತು ಮರಣದಂಡನೆ ತೀರ್ಪು ಭಾರತದ ಹೆಸರು ಹಾಳು ಮಾಡುವ ಹಾಗೂ ಭಾರತದ ಜತೆ ಕೆಲವೊಂದು ವಿಚಾರದಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹವಣಿಸುತ್ತಿದೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ. ಕುಲಭೂಷಣ್ ಅವರ ಅಪಹರಣ ಮಾಡಿ ಬಂಧಿಸಿದ್ದೇವೆ ಎಂದು ಘೋಷಿಸಿದ್ದು, ಪಠಾಣ್‌ಕೋಟ್ ಮೇಲೆ ಉಗ್ರರು ದಾಳಿ ಮಾಡುವುದಕ್ಕೂ ಕೆಲವೇ ದಿನಗಳ ಮುನ್ನ. ಹೀಗೆ ಮಾಡಿ, ಭಾರತವನ್ನು ಕೆಣಕಬಹುದೆಂದು ಭಾವಿಸಿತ್ತು. ಆದರೆ ಭಾರತ ಗನ್ ಮೂಲಕವೇ ಪಠಾಣ್‌ಕೋಟ್ ದಾಳಿಗೆ ಉತ್ತರ ಕೊಟ್ಟು ಸುಮ್ಮನಾಯಿತು. ಇಲ್ಲ, ಇದಕ್ಕು ಅದಕ್ಕೂ ತಳುಕು ಹಾಕಬೇಡಿ ಎಂದು ನೀವು ಹೇಳಬಹುದು.

ಸರಿ, ಪಠಾಣ್‌ಕೋಟ್‌ಗೂ ಕುಲಭೂಷಣ್ ಬಂಧನಕ್ಕೂ ಸಂಬಂಧವಿಲ್ಲ ಎಂದು ತಿಳಿಯೋಣ. ಎರಡನೇ ಉದಾಹರಣೆ ನೋಡಿ, ಕುಲಭೂಷಣ್ ಅವರಿಗೆ ಮರಣದಂಡನೆ ಯಾವಾಗ ವಿಧಿಸಿದ್ದು? ಇಲ್ಲೊಂದು ರೋಚಕ ಅಧ್ಯಾಯವಿದೆ. ಪಾಕಿಸ್ತಾನ ಸೇನಾಧಿಕಾರಿ ಹಾಗೂ ಐಎಸ್‌ಐ (ಪಾಕಿಸ್ತಾನ ಗುಪ್ತಚರ ಸಂಸ್ಥೆ)ಯ ಮಹಮ್ಮದ್ ಹಬೀಬ್ ಜಹೀರ್ ಭಾರತದ ವಿರುದ್ಧ ಹೊಸ ಪ್ರಾಜೆಕ್‌ಟ್‌‌ಗಾಗಿ ನೇಪಾಳದ ಲುಂಬಿನಿಗೆ ವಿಮಾನದಲ್ಲಿ ಬಂದಿಳಿದ ಮೇಲೆ ಕಾಣೆಯಾಗಿಬಿಟ್ಟ.

ಭಾರತದ ಗುಪ್ತಚರ ಸಂಸ್ಥೆಯವರು(ರಾ) ಕ್ಷಣ ಮಾತ್ರದಲ್ಲಿ ಅವರನ್ನು ಅಪಹರಿಸಿಬಿಟ್ಟರು ಎಂದು ಪಾಕಿಸ್ತಾನ ಮಾಧ್ಯಮಗಳು ಊಳಿಟ್ಟವು. ಇದಾದ ನಾಲ್ಕೇ ದಿನಕ್ಕೆ ಕುಲಭೂಷಣ್ ಅವರ ಮರಣದಂಡನೆಗೆ ಆದೇಶ ನೀಡಿದ್ದು. ಇದು ಪಾಕಿಸ್ತಾನದ ರಾಕ್ಷಸ ಮುಖದ ಅನಾವರಣ.  ಸರಿ, ಇದೂ ಏನೋ ಅಕಸ್ಮಾತ್ ಆಗೇ ಆಗಿದೆ ಎಂದುಕೊಂಡರೂ ಮತ್ತೊಂದು ಉದಾಹರಣೆ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಜಮ್ಮು ಕಾಶ್ಮೀರದ ಬಗ್ಗೆ ಮಾತುಕತೆಗೆ ಅಮೆರಿಕ ಮಧ್ಯಸ್ಥಿಕೆ ವಹಿಸುತ್ತೇನೆ ಎಂದ ಕೇವಲ ಒಂದು ವಾರಕ್ಕೆ ಇಂಥ ತೀರ್ಪು ನೀಡುವುದರಿಂದ, ಭಾರತವೇ ಎಲ್ಲ ಅನಿಷ್ಟಕ್ಕೂ ಕಾರಣ.

ಉಗ್ರಗಾಮಿಗಳನ್ನು ಸೃಷ್ಟಿ ಮಾಡುತ್ತಿರುವುದೇ ಭಾರತ ಎಂದು ಸಾಂಕೇತಿಕವಾಗಿ ಮನವರಿಕೆ ಮಾಡಿ ಕೊಡಲು  ಹೊರಟಿತ್ತು. ಇವೆಲ್ಲದಕ್ಕಿಂತ ಪಾಕಿಸ್ತಾನದ ನರಿ ಬುದ್ಧಿ ಬಯಲಾಗುವುದು, ಅಲ್ಲಿನ ವಿದೇಶಾಂಗ ಸಚಿವನ ಹೇಳಿಕೆಯಿಂದ. ಅಸಲಿಗೆ ಮಾರ್ಚ್ 2016ರಲ್ಲಿ ಕುಲಭೂಷಣ್ ಅವರನ್ನು ಬಂಧಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಪಾಕ್ ವಿದೇಶಾಂಗ ಸಚಿವ ಸತಾರ್ಜ್ ಅಜೀಜ್ ಡಿಸೆಂಬರ್ 2016ರಲ್ಲಿ ‘ಕುಲಭೂಷಣ್ ಅವರು ಗೂಢಚಾರರಾಗಿದ್ದರು ಎಂದು ಹೇಳುವುದಕ್ಕೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಮತ್ತು ಅವರ ಹೇಳಿಕೆಗಳಲ್ಲೂ ಅಂಥದ್ದೇನೂ ಕಂಡು ಬಂದಿಲ್ಲ’ಎಂದು ಹೇಳಿದ್ದರು.

ಇದಾದ ನಂತರ, ಅಂದರೆ, ನಾಲ್ಕೇ ತಿಂಗಳಿಗೆ ದಾಖಲೆಗಳು ಸಿಕ್ಕಿ, ವಿಚಾರಣೆ ನಡೆದು ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದರೆ ಅದು ಫಾಸ್‌ಟ್‌‌ಟ್ರ್ಯಾಕ್ ನ್ಯಾಯಾಲಯವೋ ಅಥವಾ ಕಾಂಗರೂ ನ್ಯಾಯಾಲಯವೋ? ಯಾವ ಗೂಢಚಾರರನ್ನೂ ಸ್ವತಃ ಹಿಡಿಯುವುದಕ್ಕೆ ತಾಕತ್ತಿಲ್ಲದೇ ಇದ್ದರೂ, ಉಗ್ರರರಿಗೆ ಚಿನ್ನ, ಗನ್ನು ಪಿಸ್ತೂಲು ಕೊಟ್ಟು ಬಿಡಿಸಿಕೊಂಡು ಬರುವಷ್ಟು ಪೌರುಷವಂತ ಪಾಕಿಸ್ತಾನಿಯರು, ವಿಚಾರಣೆ ಮಾಡದೆ ಶಿಕ್ಷೆ ಕೊಡುವುದರಲ್ಲಿ ಮಾತ್ರ ಎತ್ತಿದ ಕೈ ಎಂದೂ ಪ್ರಪಂಚಕ್ಕೆ ತಿಳಿಯಿತು. ಇದುವರೆಗೂ ಭಾರತದಿಂದ ಹಲವಾರು ಗೂಢಚಾರರು ಪಾಕಿಸ್ತಾನಕ್ಕೆ ಹೋಗಿ ವಾಪಸ್ ಬಂದಿದ್ದಾರೆ.

ಬಲ್ವೀರ್ ಸಿಂಗ್ ಪಾಕ್ ಜೈಲಿನಲ್ಲಿ 12 ವರ್ಷ ಕಳೆದು 1986ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದಾರೆ ವಿನೋದ್ ಸಾಹ್ನೆ 11 ವರ್ಷ ಜೈಲಿನಲ್ಲಿದ್ದು 1988ರಲ್ಲಿ ವಾಪಸ್ ಬಂದಿದ್ದಾರೆ. ಸುರಾಮ್ ಸಿಂಗ್ 14 ವರ್ಷ ಜೈಲಿನಲ್ಲಿದ್ದು, 1988ರಲ್ಲಿ ವಾಪಸ್ ಬಂದಿದ್ದಾರೆ. ಡೀನಿಯಲ್ ನಾಲ್ಕು ವರ್ಷ ಇದ್ದು 1997ರಲ್ಲಿ ವಾಪಸ್ ಬಂದಿದ್ದಾರೆ. ರಾಮರಾಜ್ 8 ವರ್ಷ ಜೈಲಿನಲ್ಲಿ ಕೊಳೆತು, 2004ರಲ್ಲಿ ವಾಪಸ್ ಬಂದಿದ್ದಾರೆ. ಗುರುಭಕ್‌ಷ್‌ ರಾಮ್ ಬರೋಬ್ಬರಿ 16 ವರ್ಷ ಇದ್ದು, 2006ರಲ್ಲಿ ಬಂದಿದ್ದಾರೆ. ರಾಮ್ ಪ್ರಕಾಶ್ ಎಂಬುವವರು 11 ವರ್ಷ ಕಳೆದು, 2008ರಲ್ಲಿ ವಾಪಸ್ ಬಂದಿದ್ದಾರೆ. ಕಶ್ಮೀರ್ ಸಿಂಗ್, ಎನ್. ಕೆ ರಾವ್ ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ.

ಇನ್ನು ಇವರೆಲ್ಲರ ಹೀರೋ, ರವೀಂದ್ರ ಕೌಶಿಕ್, ಮುಸಲ್ಮಾನನಾಗಿ, ಸುನ್ನತ್ (ಇಸ್ಲಾಂ ಸಂಪ್ರದಾಯದ ಪ್ರಕಾರ ಮರ್ಮಾಂಗದ ತುದಿ ಚರ್ಮ ಕತ್ತರಿಸುವುದು) ಮಾಡಿಸಿಕೊಂಡು ಪಾಕ್‌ನಲ್ಲಿದ್ದು, ಅಲ್ಲಿಯ ಸೇನೆ ಸೇರಿ, ಭಾರತಕ್ಕೆ ವಿಷಯ ರವಾನಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದು, ಚಿತ್ರಹಿಂಸೆಗೊಳಗಾಗಿ ಪ್ರಾಣ ಬಿಟ್ಟರು. ಅಷ್ಟಕ್ಕೂ ಇವರೆಲ್ಲರ ಹಾಗೇ ಕುಲಭೂಷಣ್ ಸಹ ಗೂಢಚಾರರಾಗಿದ್ದರೂ, ಅವರನ್ನು ಪಾಕಿಸ್ತಾನ ನೇರವಾಗಿ ಮರಣದಂಡನೆ ಕೊಡುವುದಕ್ಕೆ ಸಾಧ್ಯವಿಲ್ಲ. ಕಾರಣ, ವಿಯನ್ನಾ ಒಪ್ಪಂದದ ಪ್ರಕಾರ ಯಾವುದೇ ರಾಷ್ಟ್ರದ ನಾಗರೀಕ, ಇನ್ನೊಂದು ರಾಷ್ಟ್ರಕ್ಕೆ ಹೋಗಿ ಅಲ್ಲಿ ಏನಾದರೂ ತಪ್ಪು ಮಾಡಿದರೆ, ಮೊದಲು ಆರೋಪಿಯ ರಾಷ್ಟ್ರಕ್ಕೆ ವಿಷಯ ಮುಟ್ಟಿಸಬೇಕು. ಅಲ್ಲಿನ ಒಬ್ಬ ವಕೀಲನಿಗೆ ಆರೋಪಿಯ ಪರ ವಾದ ಮಾಡುವುದಕ್ಕೆ ಅವಕಾಶ ಕೊಡಬೇಕು. ಆದರೆ, ಕುಲಭೂಷಣ್‌ರನ್ನು ಹಿಡಿದಿರುವುದು ಇರಾನ್‌ನಲ್ಲಿ. ಹಿಡಿದು ಕೊಟ್ಟವರು ತಾಲಿಬಾನಿ ಉಗ್ರರು.

ಇಷ್ಟಾಗಿಯೂ, ಪಾಕಿಸ್ತಾನ ಮಿಲಿಟರಿ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ, ಭಾರತಕ್ಕೆ ಒಂದು ಮಾತು ಹೇಳಿಲ್ಲ. ಪ್ರತಿಯಾಗಿ ಭಾರತವೇ ನಮಗೆ ವಾದ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿ ಬರೆದ ಪತ್ರವನ್ನು ಕಸದಬುಟ್ಟಿಗೆ ಹಾಕಿ ಕೈ ಕಟ್ಟಿ ಕುಳಿತಿದೆ. ಇದು ವಿಯನ್ನಾ ಒಪ್ಪಂದವನ್ನು ಮುರಿದಿದ್ದಲ್ಲದೇ, ಅಂತಾರಾಷ್ಟ್ರೀಯ ದೇಶಗಳ ಒಪ್ಪಂದವನ್ನೂ ಮುರಿದಿದೆ.
ಇವನ್ನೆಲ್ಲ ಮೀರಿ ನಾವು ಕುಲಭೂಷಣ್‌ರನ್ನು ಗಲ್ಲಿಗೇರಿಸುತ್ತೇವೆ ಎಂದರೆ, ಭಾರತದಲ್ಲೇ ಸೆರೆ ಸಿಕ್ಕ ಪಾಕಿಸ್ತಾನಿ ಐಎಸ್‌ಐ ಏಜೆಂಟ್ ಹಂದಿಗಳು ಸುಮಾರಿವೆ. ಆಗ ಅವರೆಲ್ಲರೂ ಉಸಿರಾಡಬೇಕೋ ಬೇಡವೋ ಎಂದು ಭಾರತ ನಿರ್ಧರಿಸುತ್ತದೆ. ಜತೆಗೆ ಇತ್ತೀಚೆಗಷ್ಟೇ ನೇಪಾಳದಿಂದ ಕಣ್ಮರೆಯಾಗಿರುವ ಪಾಕಿಸ್ತಾನಿ ಸೇನಾಧಿಕಾರಿಯನ್ನು ಭಾರತವೇ ಅಪಹರಣ ಮಾಡಿದೆ ಎಂದು ಪಾಕ್ ಆರೋಪಿಸುತ್ತಿರುವಾಗ, ಅವನ ಜೀವವೂ ಭಾರತದ ಕೈಯಲ್ಲೇ ಇದೆ ಎಂದಾಯಿತು.

ಇವೆಲ್ಲದಕ್ಕಿಂತ ಮಿಗಿಲಾಗಿ ಮೋದಿಯ ರಾಜತಾಂತ್ರಿಕ ನಡೆಗಳಿಂದ ಎಲ್ಲ ದೇಶಗಳು ಭಾರತದ ಪರ ನಿಂತು, ಪಾಕ್ ಕುಲಭೂಷಣ್ ಅವರ ಬಾಯಲ್ಲಿ ಬೇಕು ಅಂತಲೇ ‘ನಾನು ಗೂಢಚಾರಿ’ ಎಂದು ಹೇಳಿಸಿ ವಿಡಿಯೊ ಮಾಡಿರಬಹುದು ಎಂದಿವೆ. ಕುಲಭೂಷಣ್‌ರ ಕೂದಲು ಕೊಂಕಿದರೂ, ಬಲೂಚಿಸ್ತಾನಕ್ಕೆ ಹೊಡೆತ ಖಂಡಿತ ಎಂದು ಸುಬ್ರಮಣಿಯನ್ ಸ್ವಾಮಿ ಬಾಂಬ್ ಹಾಕಿದ್ದಾರೆ. ಸುಷ್ಮಾ ಸ್ವರಾಜ್ ‘ತಾಕತ್ತಿದ್ದರೆ ಜಾಧವ್‌ರನ್ನು ನೇಣಿಗೆ ಹಾಕಿ, ಮುಂದೇನಾಗುತ್ತೆ ನೋಡುತ್ತಾ ಇರಿ’ಎಂದಿದ್ದಾರೆ. ಕುಲಭೂಷಣ್‌ರನ್ನು ನೇಣಿಗೆ ಹಾಕುವುದು ಉಗ್ರರಿಗೆ ಚಿನ್ನ ಕೊಟ್ಟು ಹಿಡಿದಂತಲ್ಲ ಎಂದು ಪಾಕ್‌ಗೆ ಈಗ ಅರಿವಾಗುತ್ತಿದೆ. ಈಗ ನಡೆಯಲಿ ಪಾಕ್‌ನ ಪೌರುಷ ಪ್ರದರ್ಶನ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya