ಸುಹಾನಾ ಗುನುಗುತ್ತಿದ್ದಳು, ಮತಾಂಧರು ಗೊಣಗುತ್ತಿದ್ದರು!

chir

2013ರಲ್ಲಿ ಜೈನ್ ಕಾಲೇಜಿನಲ್ಲಿ ಫಯಾಜ್ ಖಾನ್ ಅವರ ಸಂಗೀತ ಕಛೇರಿ ಏರ್ಪಡಿಸಲಾಗಿತ್ತು. ಅಂದು ಅವರು ಪುರಂದರ ವಿಠಲರ ಪದಗಳನ್ನು ಹಾಡಿ ಎಲ್ಲರ ಮೈ ನವಿರೇಳುವಂತೆ ಮಾಡಿದ್ದರು. ಅಬ್ಬಾ! ಅದೆಂಥಾ ಭಾವ, ಲಯ, ಶೃತಿ… ಎಂದು ಅಲ್ಲಿದ್ದ ಜನರೆಲ್ಲ ಮಾತಾಡಿಕೊಳ್ಳುತ್ತಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರನ್ನು ಸಂದರ್ಶನ ಮಾಡುವಾಗ ಒಂದು ಪ್ರಶ್ನೆ ಕೇಳಿದೆ – ‘ನೀವು ಪುರಂದರ ವಿಠಲಾ, ಹರಿ ಎಂದು ಅಷ್ಟು ಭಾವಪೂರ್ಣರಾಗಿ ಹಾಡುತ್ತೀರಲ್ಲ. ಒಬ್ಬ ಮುಸ್ಲಿಂ ಆಗಿ ಇದು ಹೇಗೆ ಸಾಧ್ಯ?’ ಎಂದಾಗ, ಫಯಾಜ್ ಖಾನ್ – ‘ಇಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಮಾಡಿದರೆ ಹಾಡುವುದಕ್ಕಾಗುವುದಿಲ್ಲ. ಸಂಗೀತಕ್ಕೂ ಧರ್ಮಕ್ಕೂ ತಳುಕು ಹಾಕುವುದೇ ದೊಡ್ಡ ಅಪರಾಧ. ನಾವು ಭಕ್ತಿಯಿಂದ ಹಾಡಿದರೆ, ನಮ್ಮ ಇಷ್ಟ ದೇವನಿಗೆ ಅದು ತಲುಪುತ್ತದೆ’ ಎಂದಿದ್ದರು. ಈಗ 2017ರಲ್ಲಿ ಝೀ ಕನ್ನಡದ ಸರಿಗಮಪ ರಿಯಾಲಿಟಿ ಶೋದಲ್ಲಿ ಸುಹಾನಾ ಎಂಬ ಮುಸ್ಲಿಂ ಹುಡುಗಿ ಶ್ರೀನಿವಾಸನ ಗೀತೆ ಹಾಡಿದಾಗ ಜಡ್ಜ್‌ಗಳನ್ನು ಸೇರಿದಂತೆ ಎಲ್ಲರೂ ಆಕೆಯ ಹಾಡುಗಾರಿಕೆಯನ್ನು ಮೆಚ್ಚಿಕೊಂಡರು. ಮುಸ್ಲಿಂ ಆದರೂ ಶುದ್ಧ ಕನ್ನಡ ಮತ್ತು ಗೀತೆಗೆ ಬೇಕಾಗಿರುವ ಭಾವವೆಲ್ಲವನ್ನೂ ಸರಿಯಾಗಿ ಕೊಟ್ಟಿದ್ದೀಯ ನೀನು, ಮುಂದೆ ಒಳ್ಳೆ ಹಾಡುಗಾರ್ತಿಯಾಗುತ್ತೀಯ ಎಂದು ಆಕೆಯನ್ನು ಮೆಚ್ಚಿಕೊಂಡರು.

ಇದರಲ್ಲಿ ಏನಾದರೂ ತಪ್ಪು ಕಾಣಿಸುತ್ತಿದೆಯೇ? ನಮಗೇನೂ ತಪ್ಪು ಕಾಣದಿರಬಹುದು, ಆದರೆ ಕೆಲ ಮುಸ್ಲಿಂ ಮೂಲಭೂತವಾದಿಗಳಿಗೆ ವ್ಯಾಧಿ ಶುರುವಾಗಿದೆ. ಆ ಹುಡುಗಿ ಹಾಡಿದ್ದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ನೀವು ಫೇಸ್ಬುಕ್‌ನಲ್ಲಿ ಇದ್ದೀರೆಂದರೆ, ಮಂಗಳೂರು ಮುಸ್ಲಿಂ ಎಂಬ ಪೇಜನ್ನು ನೋಡಿರುತ್ತೀರಿ. ಅಲ್ಲಿ ಸಹಜವಾಗಿ ಹಿಂದೂಗಳಿಗೆ ಅವಮಾನ ಮಾಡುವ ಪೋಸ್ಟ್‌ಗಳನ್ನೇ ಹಾಕುವುದು. ಅವರು ಸಹ ಸುಹಾನಾ ಬಗ್ಗೆ ಅತ್ಯಂತ ಅಸಹ್ಯವಾಗಿ ಮಾತಾಡುತ್ತಿದ್ದಾರೆ. ಸುಹಾನಾ ಹಾಡಿದ್ದೇ ತಪ್ಪು ಎನ್ನುತ್ತಿದ್ದಾರೆ. ಅವರು ತಮ್ಮ ಪೇಜ್‌ನಲ್ಲಿ ಬರೆದುಕೊಂಡಿರುವ ಸಾಲುಗಳು ಹೀಗಿವೆ – ನಿನ್ನ ಅಪೇಕ್ಷೆಯು ನಿನ್ನಲ್ಲಿರುವ ಪ್ರತಿಭೆಗಳು ಯಾವುದೇ ರೀತಿಯ ಕಟ್ಟುಪಾಡುಗಳು, ಯಾವುದೇ ತೊಂದರೆಗಳು ಅಡ್ಡ ಬರಬಾರದು ಎಂದಾಗಿತ್ತಲ್ಲವೇ? ನಿನಗೆ ಜನ್ಮ ಕೊಟ್ಟ ತಂದೆ ತಾಯಿಗಳೇ ಅಡ್ಡಬಾರದೇ ನಿನ್ನನ್ನು ಪ್ರೋತ್ಸಾಹಿಸಿ ಹತ್ತು ಜನರಿಗೆ ನಿನ್ನ ಸೌಂದರ್ಯವನ್ನೂ, ನಿನ್ನ ಶಬ್ದವನ್ನೂ ಪ್ರದರ್ಶಿಸಿ, ಅವರಿಗೆ ಆಸ್ವಾದಿಸಲು ಸಕಲ ಸೌಕರ್ಯ ಮಾಡಿಕೊಟ್ಟಿರುತ್ತಾರೆ. ಆದರೆ ಖಿಯಾಮತ್ ದಿನದಂದು ಅವರು ಮಾಡಿದ ಒಳಿತು ಕೆಡುಕುಗಳ ವಿಚಾರಣೆ ನಡೆಸಿದಾಗ ಒಳಿತುಗಳೇ ಹೆಚ್ಚಾಗಿ ಸ್ವರ್ಗ ಪ್ರವೇಶಿಸಲು ಅವರಿಗೆ ಅನುಮತಿ ಸಿಕ್ಕಿದಾಗ ನೀನು ಅವರಿಗೆ ತಡೆಯಾಗಿ ನಿಲ್ಲುತ್ತಿ ಎಂಬ ವಿಷಯ ಪಾಪ ಅವರಿಗೆ ಗೊತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇವರಿಗೆ ಮತಾಂಧರು ಎನ್ನದೆ ಇನ್ನೇನು ಹೇಳಬೇಕು ಹೇಳಿ? ಒಬ್ಬಳು ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದಾಳೆ ಎಂದರೆ ಅವಳಿಗೆ ಪ್ರೋತ್ಸಾಹ ಕೊಡುವುದನ್ನು ಬಿಟ್ಟು, ನಿನ್ನ ತಂದೆ ತಾಯಿ ನಿನ್ನಿಂದಾಗಿ ನರಕಕ್ಕೆ ಹೋಗುತ್ತಾರೆ, ನೀನು ಇಸ್ಲಾಂಗೆ ಮಾಡಿರುವುದು ಅವಮಾನ ಎಂದೆಲ್ಲ ಹೇಳುತ್ತಾ ಕುಳಿತಿರುವ ಇವರ ತಲೆಯಲ್ಲಿ ಧರ್ಮದ ಅಫೀಮು ಹೆಚ್ಚಾಗಿದೆಯೇ ವಿನಾ ಬೇರೇನೂ ಅಲ್ಲ. ಮೊದಲೆಲ್ಲ ಹಾಡು, ಶಾಸ್ತ್ರೀಯ ಸಂಗೀತ ಎಂದರೆ ಅದು ಕೇವಲ ಬ್ರಾಹ್ಮಣರು ಮಾತ್ರ ಮಾಡುವುದು ಎಂದಾಗಿತ್ತು. ಆದರೆ, ಕಾಲ ಬದಲಾಗಿದೆ. ಮುಖ ಕಾಣದಂತೆ ಬುರ್ಖಾ ಧರಿಸುವ ಹುಡುಗಿಯರೂ ಹಾಡುವುದಕ್ಕೆ ಮುಂದೆ ಬಂದರೆ, ಸೌಂದರ್ಯ ಪ್ರದರ್ಶನ ಎಂದು ಅತ್ಯಂತ ಹೊಲಸಾಗಿ ಮಾತಾಡುವುದನ್ನು ನಿಲ್ಲಿಸುವುದು ಯಾವಾಗ? ಎಲ್ಲರೂ ಸುಹಾನಾ ಇಸ್ಲಾಂಗೆ ಅವಮಾನ ಮಾಡಿದಳು ಎನ್ನುತ್ತಿದ್ದಾರೆ. ಆದರೆ ನಿಜಕ್ಕೂ ಇಸ್ಲಾಂ ಹೆಸರು ಹಾಳು ಮಾಡುತ್ತಿರುವು ಇಂಥ ಮತಾಂಧರು. ಧರ್ಮವನ್ನೇ ತಲೆಗೇರಿಸಿಕೊಂಡವರು. ರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ವಿಷಯ ಚರ್ಚೆಯಾಗಿತ್ತು. ಅಲ್ಲಿ ಬಂದು ಮಾತಾಡಿದ ಕೆಲ ಮೌಲ್ವಿಗಳು, ಬುದ್ಧಿಜೀವಿ ಮುಸ್ಲಿಮರು, ಆಕೆ ಬುರ್ಖಾ ಧರಿಸಿ ಹಾಡುವಂತಿಲ್ಲ, ಆಕೆ ಬೇರೆ ಬಟ್ಟೆ ಧರಿಸಿ ಹಾಡಲಿ ಎನ್ನುತ್ತಾ, ಆಕೆಯನ್ನು ಇಸ್ಲಾಂ ವಿರೋಧಿಸುತ್ತದೆ ಎಂದು ಬಿಟ್ಟರು.

ಒಂದೇ ಒಂದು ಹಾಡು ಹಾಡಿದ್ದಕ್ಕೆ ಹೆಣ್ಣನ್ನು ಇಷ್ಟೆಲ್ಲ ಹರಿದು ಮುಕ್ಕುತ್ತಿದ್ದಾರಲ್ಲ ಈ ಮುಸ್ಲಿಮರು, ಹಾಗಾದರೆ ಒಂದು ಹಾಡು ಹೇಳುವುದಕ್ಕೂ ಇಸ್ಲಾಂನಲ್ಲಿ ಸ್ವಾತಂತ್ರ್ಯವಿಲ್ಲವಾ? ಎಲ್ಲಿ ಸತ್ತು ಬಿದ್ದಿದ್ದಾರೆ ಹೋರಾಟಗಾರರು? ಮಂಗಳೂರಿನಲ್ಲಿ ಪಬ್ ದಾಳಿಯಾದಾಗ ಅಲ್ಲಿ ಕುಡಿಯುತ್ತಾ ಬಿದ್ದಿದ್ದ, ಮತ್ತಿನಲ್ಲಿ ತೇಲಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಹೆಣ್ಣು ಮಕ್ಕಳಿಗೆ ಹಿಂದೂ ಸಂಘಟನೆಗಳು ನುಗ್ಗಿ ಎಳೆದು ಹೊರಗೆ ತಂದಾಗ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಗಂಟಲು ಹರಿದುಕೊಂಡ ಒಬ್ಬರೂ ಇವತ್ತು ಸುಹಾನಾ ಪರ ಮಾತಾಡುತ್ತಲೇ ಇಲ್ಲ. ಕುಡಿದು ಅಸಭ್ಯವಾಗಿ ವರ್ತಿಸುವುದನ್ನು ಮಹಿಳಾ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಹಾಕುತ್ತೀರೆಂದರೆ, ನಾಲ್ಕು ನಿಮಿಷದ ಹಾಡು ಮಹಿಳಾ ಸ್ವಾತಂತ್ರ್ಯವಲ್ಲವೇ?

ಪ್ರೇಮಿಗಳ ದಿನ ಮಾಡಬೇಡಿ ಎಂದ ಮುತಾಲಿಕ್‌ಗೆ ಪಿಂಕ್ ಚಡ್ಡಿ ಕಳಿಸಿಕೊಟ್ಟವರು, ಈಗ ಸುಹಾನಾ ವಿರುದ್ಧ ಮಾತಾಡುವ ಮೌಲ್ವಿಗಳಿಗೆ ಏನು ಕಳಿಸಿಕೊಡುತ್ತಾರೆ. ಒಂದು ಮುಸ್ಲಿಮ್ ಹುಡುಗಿ ಹಾಡುವುದನ್ನು ಕೇಳಲಾಗದೇ ಮೈಗೆ ಬೆಂಕಿ ಹತ್ತಿಸಿಕೊಳ್ಳುವ ಕೆಲ ಮುಸ್ಲಿಮರದ್ದು ಅದೆಂಥಾ ಸಹಿಷ್ಣುತೆ ಎಂಬುದನ್ನು ಹೇಳಿಬಿಡಿ?! ಅಲ್ಲ ಸ್ವಾಮಿ, ಸರಕಾರಿ ಗಂಜಿಕೇಂದ್ರದ ಕಾಯಂ ಗಿರಾಕಿಗಳು, ಲದ್ದಿಜೀವಿಗಳು, ಹಿಂದೂಗಳು ಯಾವತ್ತೋ ತಿರಸ್ಕರಿಸಿದ್ದ ಮನುಸ್ಮೃತಿಯನ್ನು ಹಿಡಿದು, ಹಿಂದೂಗಳು ಕೋಮುವಾದಿಗಳು, ಅಲ್ಲಿ ಸ್ವಾತಂತ್ರ್ಯವಿಲ್ಲ, ಹೆಣ್ಣನ್ನು ಕೀಳಾಗಿ ನೋಡಿಕೊಳ್ಳುತ್ತಾರೆ ಎಂದು ಬಾಯಿಭೇದಿ ಮಾಡಿಕೊಳ್ಳುವವರು, ಇಸ್ಲಾಂನಲ್ಲಿ ಹೆಣ್ಣಿಗೆ ಹಾಡುವುದಕ್ಕೇ ಅವಕಾಶವಿಲ್ಲ ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ. ಹಿಂದೂ ಧರ್ಮವನ್ನು ಮನುಸ್ಮೃತಿಗೆ ಜೋತು ಬಿಡುವವರು, ಯಾಕೆ ಇಸ್ಲಾಂ ಇಂದಿಗೂ ಜೋತು ಬಿದ್ದಿರುವ ಇಂಥ ಕಟ್ಟುಪಾಡುಗಳ ಬಗ್ಗೆ ಹೇಳುವುದೇ ಇಲ್ಲ? ಅದೇ ಮೌಲ್ವಿಗಳು ತಲೆ ಕಡಿಯಲು ಫಾತ್ವಾ ಹೊರಡಿಸುತ್ತಾರೆ ಎಂಬ ಭಯವೇ?

ಹಾಡು ಹೇಳುವುದಕ್ಕೂ ಸ್ವಾತಂತ್ರ್ಯವಿಲ್ಲದ ಧರ್ಮವನ್ನು ನಮ್ಮ ಸೆಕ್ಯುಲರ್‌ವ್ಯಾಧಿಗಳು, ಮಹಾನ್ ಚಿಂತಕ ಶಿಖಾಮಣಿಗಳು ಜಾತ್ಯತೀತ ಭಾರತದಲ್ಲಿ ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದೇ ಪರಮಾಶ್ಚರ್ಯ. ಕ್ರಿಕೆಟ್ ಗೊತ್ತಿದ್ದವರಿಗೆ, ಅಜರುದ್ದೀನ್ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಅಜರ್, ಮೈದಾನದಲ್ಲಿ ಸಿಕ್ಸರ್ ಬಾರಿಸುತ್ತಿದ್ದರೆ, ಭಾರತದಲ್ಲಿರುವ 80% ಹಿಂದೂಗಳು ‘ಅಂವ ಮುಸ್ಲಿಮ್, ಅವನ ಸಾಧನೆಗೆ ಚಪ್ಪಾಳೆ ತಟ್ಟಿದರೆ ಪಾಪ ಸುತ್ತಿಕೊಳ್ಳುತ್ತದೆ’ ಎಂದು ಸುಮ್ಮನಿದ್ದರೇ? ಅಥವಾ, ಆತ ಮುಸ್ಲಿಮನಾಗಿ ಗಡ್ಡ ಬಿಟ್ಟಿಲ್ಲ ಎಂದು ಮುಸ್ಲಿಮರು ಚಪ್ಪಾಳೆ ತಟ್ಟದೇ ಕುಳಿತಿದ್ದರೇ? ಅಮೀರ್ ಖಾನ್ ಎಂಬ ಭೂಪ ಬಾಲಿವುಡ್‌ನಲ್ಲಿ ನಟಿಸಿದ ಬಹುತೇಕ ಚಿತ್ರಗಳಲ್ಲಿ ಹಿಂದೂಗಳ ಹೆಸರನ್ನೇ ಇಟ್ಟುಕೊಂಡು ನಟಿಸಿದ್ದರು.

ಅವರೂ ಗಡ್ಡ, ಮೀಸೆ ಬೋಳಿಸಿದ್ದವರೇ. ಇಸ್ಲಾಂ ಗಡ್ಡ ಬೋಳಿಸುವುದನ್ನೂ ವಿರೋಧಿಸುತ್ತಿಲ್ಲವೇ? ಅವರ ಬಗ್ಗೆ ಯಾವ ಇಮಾಮ್ ಸಾಬಿಯೂ ಏಕೆ ಬಾಯಿ ಬಿಡುವುದಿಲ್ಲ? ಸಾನಿಯಾ ಮಿರ್ಜಾ ಆಟ ಆಡುವಾಗ ತೊಡೆ ಕಾಣಿಸುವ ಹಾಗೆ ಚಡ್ಡಿ ಹಾಕುತ್ತಾಳೆ ಎಂದು ಮಸೀದಿಗಳಲ್ಲಿ ಆಕೆಯ ವಿರುದ್ಧ ಮೌಲ್ವಿಗಳು ರೊಚ್ಚಿಗೆದ್ದು ಭಾಷಣ ಮಾಡಿದ್ದನ್ನು ನಾವಿಲ್ಲಿ ನೆನೆದರೆ, ಕಟ್ಟುಪಾಡುಗಳು ಏನಿದ್ದರೂ ಹೆಣ್ಣಿಗೆ ಮಾತ್ರವಾ ಎಂಬ ಪ್ರಶ್ನೆ ಮೂಡುತ್ತದೆ. ಮುಸ್ಲಿಂ ಧರ್ಮೀಯನಾಗಿ ಹಿಂದೂ ದೇವರನ್ನು ಹೊಗಳಬಾರದು ಎಂಬುದೇ ಇಸ್ಲಾಂನಲ್ಲಿ ಇದೆ ಎಂದಾದಲ್ಲಿ, ಸಲ್ಮಾನ್ ಖಾನ್ ‘ಬಜರಂಗಿ ಭಾಯ್‌ಜಾನ್’ ಚಿತ್ರದಲ್ಲಿ ಹನುಮಂತನ ಭಕ್ತನಾಗಿ, ಬ್ರಾಹ್ಮಣನ ಪಾತ್ರ ಮಾಡಿದ್ದಾರಲ್ಲ. ಅವರ ಬಗ್ಗೆ ಎಷ್ಟು ಮತಾಂಧರು ಮಾತಾಡಿದ್ದಾರೆ?

ಇಸ್ಲಾಂನಲ್ಲಿ ಹಾಡು ಮತ್ತು ತಂತಿ ವಾದ್ಯಗಳು ನಿಷಿದ್ಧ ಎಂದಾರೆ, ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್, ಉಸ್ತಾದ್ ಅಲ್ಲಾದಿಯಾ ಖಾನ್, ಉಸ್ತಾದ್ ಅಬ್ದುಲ್ ಕರೀಂ ಖಾನ್, ಫರೀದಾ ಖಾನುಂ, ಅಬೀದಾ ಪರ್ವೀನ್, ಉಸ್ತಾದ್ ರಶೀದ್ ಖಾನ್, ಮಹಮ್ಮದ್ ರಫೀ, ಅಮ್ಜದ್ ಅಲಿ ಖಾನ್(ಸರೋದ್ ವಾದಕ) ಮತ್ತು ಅವರ ಮಕ್ಕಳಾದ ಅಯಾನ್ ಅಲಿ ಖಾನ್, ಅಮನ್ ಅಲಿ ಖಾನ್, ವಿಶ್ವವಿಖ್ಯಾತ ತಬಲಾ ವಾದಕ ಝಾಕಿರ್ ಹುಸೇನ್, ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಇಂದು ಟ್ರೆಂಡಿಂಗ್‌ನಲ್ಲಿರುವ ಸಲೀಮ್ ಮತ್ತು ಸುಲೈಮಾನ್ ಎಲ್ಲರ ಸಾಧನೆಗಳನ್ನೂ ಕಸದ ಬುಟ್ಟಿಗೆ ಹಾಕಿ, ನಮ್ಮ ಇಸ್ಲಾಂ ಹಾಡುವುದನ್ನು ಮತ್ತು ತಂತಿ ವಾದ್ಯಗಳನ್ನು ನಿಷೇಧಿಸುತ್ತದೆ ಎಂದು ಹೇಳುವ ಒಬ್ಬ ಮೌಲ್ವಿಯಿದ್ದರೆ ಮುಂದೆ ಬರಲಿ ನೋಡೋಣ!

ಮತಾಂಧರೇ, ನಿಮ್ಮ ಸಂತೋಷಕ್ಕೆ ಒಂದು ವಿಚಾರ ಹೇಳುತ್ತೇನೆ ಕೇಳಿ, ಇಂದಿಗೂ ಉತ್ತರ ಭಾರತದ ಎಷ್ಟೋ ದೇವಸ್ಥಾನಗಳಲ್ಲಿ, ಕೆಲ ಹಿಂದೂಗಳ ಮನೆಗಳಲ್ಲಿ ಬಿಸ್ಮಿಲ್ಲಾ ಖಾನ್ ಶೆಹನಾಯಿ ಇಲ್ಲದಿದ್ದರೆ ಬೆಳಗೇ ಆಗುವುದಿಲ್ಲ. ಅವರು ವಾರಾಣಸಿಯ ದೇವಾಲಯಗಳಲ್ಲಿ ಸುಮಾರು ವರ್ಷಗಳ ಕಾಲ ಶೆಹನಾಯಿ ನುಡಿಸುತ್ತಾ ಸೇವೆ ಸಲ್ಲಿಸಿದವರು. ಅವರ ಸಂಗೀತ ಸಾಧನೆಗೆ 2001ರಲ್ಲಿ ಭಾರತ ರತ್ನವೂ ಲಭಿಸಿದೆ. ಹೇಳಿ, ಇಂಥವರನ್ನು ಇಸ್ಲಾಂ ಒಪ್ಪಿಕೊಳ್ಳುವುದಿಲ್ಲವೇನು? ಇನ್ನು ಮೇಲೆ ತಿಳಿಸಿರುವ ಎಲ್ಲ ಹಾಡುಗಾರರೂ ದೇವರ ನಾಮಗಳನ್ನೂ ಹಾಡಿದ್ದಾರೆ, ಗಜಲ್‌ಗಳನ್ನೂ ಹಾಡಿದ್ದಾರೆ. ಧರ್ಮ ಧರ್ಮ ಎಂದು ಅದನ್ನೇ ತುಂಬಿಕೊಂಡಿರುವ ಕೆಲ ಮತಾಂಧ ಮುಸ್ಲಿಮರಿಗೆ ಗರಾನಾಗಳು ಎಲ್ಲಿ ಅರ್ಥವಾಗಬೇಕು? ಮುಸ್ಲಿಮರಿಂದಲೇ ಸೂಫಿ ಸಂಗೀತ ಜಗತ್ತಿಗೆ ಪರಿಚಯವಾಗಿದ್ದು.

ಅದಕ್ಕೆ ಹೆಮ್ಮೆಯಿಂದ ಎದೆ ತಟ್ಟಿಕೊಳ್ಳುವ ಬದಲು, ಯಕಶ್ಚಿತ್ 20 ವರ್ಷದ ಹುಡುಗಿಯ ಮೇಲೆ ಎಗರಿ ಬೀಳುತ್ತಾರಲ್ಲ? ಇದನ್ನೇಯೇನು ಪವಿತ್ರ ಇಸ್ಲಾಂ ಮತ್ತು ಪೈಗಂಬರ ಮಹಮ್ಮದ್ ಹೇಳಿಕೊಟ್ಟಿದ್ದು? ಒಂದು ಹೆಣ್ಣಿಗೆ ಹಾಡಲು ಬಿಡದೇ ಈ ರೀತಿ ಎಲ್ಲರೂ ಒಮ್ಮೆಲೇ ದಾಳಿ ಮಾಡುವುದನ್ನು ಯಾವ ಅಲ್ಲಾಹ್ ಒಪ್ಪುತ್ತಾನೆ ಎಂಬುದನ್ನು ಮೌಲ್ವಿಗಳು ಹೇಳಲಿ ನೋಡೋಣ. ಇಸ್ಲಾಂ ದೃಷ್ಟಿಯಿಂದಲೇ ನೋಡುವುದಾದರೆ, ಸಾಗರ ಸೀಮೆಯ ಮುಸ್ಲಿಂ ಸಮುದಾಯದ ಹುಡುಗಿ ಟಿವಿಯಲ್ಲಿ ಹಾಡಿ ಎಲ್ಲರೂ ಹೊಗಳಿ ಕರ್ನಾಟಕಕ್ಕೆ ಪರಿಚಯವಾಗಿ, ದೇಶಾದ್ಯಂತ ಹೆಸರು ಮಾಡಿದರೆ, ಇಸ್ಲಾಂಗೇ ಒಳ್ಳೆಯ ಹೆಸರಲ್ಲವೇ? ಬಾಂಬ್ ಸಿಡಿಸುವುದರಲ್ಲಿ, ಉಗ್ರಗಾಮಿ ಕೃತ್ಯಗಳಲ್ಲಿ ಮುಸ್ಲಿಮರ ಹೆಸರು ಕೇಳಿಬರುತ್ತಿರುವಾಗ ಮುಸ್ಲಿಮರೆಂದರೆ ಉಗ್ರಗಾಮಿಗಳಲ್ಲ, ನಮ್ಮನ್ನು ಹಾಗೆ ನೋಡಬೇಡಿ ಎನ್ನುವವರೂ ಇವರೇ, ಅದೇ ಧರ್ಮದಿಂದ ಕಿವಿಗೆ ಇಂಪು ನೀಡುವ ಹಾಗೆ ಹಾಡುವ ಹುಡುಗಿ ಮುಂದೆ ಬಂದರೆ, ಅವಳ ಮೇಲೆ ಎಗರಿ ಬೀಳುವವರೂ ಇವರೇ!

ಮುಸ್ಲಿಂ ಪುರುಷರು ಹೇಳದೇ ಕೇಳದೇ ಎರಡನೇ ಮದುವೆ ಆದಾಗಲೂ ಒಂದೇ ಒಂದು ಮಹಿಳಾ ಸಂಘಟನೆ ನೊಂದ ಮಹಿಳೆಯ ಪರ ನಿಂತಿಲ್ಲ, ತಲಾಖ್ ಎಂದು ಬಾಯಿ ಮಾತಲ್ಲಿ, ವಾಟ್ಸ್‌ಆ್ಯಪ್, ಫೇಸ್ಬುಕ್‌ನಲ್ಲಿ ಹೇಳಿ ಹೆಂಡತಿಯರಿಗೆ ವಿಚ್ಛೇದನ ಕೊಟ್ಟಾಗ ಹೆಣ್ಣಿನ ರಕ್ಷಣೆಗೆ ಯಾರೂ ಬರಲಿಲ್ಲ, ಈಗ ಹಾಡಿ ಪ್ರತಿಭೆ ತೋರಿಸುತ್ತಿರುವ ಹುಡುಗಿಯ ಮೇಲೆ ನೂರು ಜನರು ಇನ್ನೂರು ಮಾತಾಡಿದಾಗಲೂ ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲವೆಂದರೆ, ನಾಳೆ, ನಮ್ಮ ದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಎಂದರೆ, ಕಣ್ಣ ಮುಂದೆ ಬರುವುದು ಕಪ್ಪನೆಯ ಬುರ್ಖಾ ಬಿಟ್ಟರೆ ಬೇರೇನೂ ಅಲ್ಲ. ಬಗಲಲ್ಲೇ ಬಾಂಬ್ ಇಟ್ಟುಕೊಂಡು ಬದುಕುವ ಪಾಕಿಸ್ತಾನಿಯರೇ ಸಂಗೀತಕ್ಕೆ ಮಾನ್ಯತೆ ನೀಡುತ್ತಿರುವಾಗ, ಗಲ್ಲಿಗಲ್ಲಿಗಳಲ್ಲಿ ಸಂಗೀತ, ನಾಟ್ಯ, ಚಿತ್ರಕಲೆ, ಇನ್ನಿತರ ಕಲೆಗಳ ಸೊಗಡು ಸಿಗುವ ನಮ್ಮ ದೇಶ ಯಾರಿಗೇನು ಕಡಿಮೆ? ಆಲೋಚಿಸಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya