ಈ ದೇಶದಲ್ಲಿ ‘ಯೋಧ ನಮನ’ವೂ ಅಪರಾಧ!

15965333_1513180408715858_3128327072827736793_nಇವತ್ತಿಗೂ ನೆನಪಿದೆ. 2016ರ ಫೆಬ್ರವರಿ 18 ಅಥವಾ 19 ಇರಬಹುದು. ಬೆಂಗಳೂರಿನ ಟೌನ್ ಹಾಲ್ ಮಾರ್ಗವಾಗಿ ಆಫೀಸಿಗೆ ಹೋಗುತ್ತಿದ್ದಾಗ ಟೌನ್‌ಹಾಲ್ ಎದುರು ಒಂದಷ್ಟು ಬಿಳಿಮಂಡೆ ಪತ್ರಕರ್ತರು, ‘ಓ’ರಾಟಗಾರರು ಜಮಾಯಿಸಿದ್ದರು. ಅಲ್ಲಿ ಗುಂಗುರು ಕೂದಲಿನ ಒಬ್ಬ ಹುಡುಗನ ಫೋಟೊ ಇಟ್ಟುಕೊಂಡು ‘ಅವನ ಸಾವಿಗೆ ನ್ಯಾಯ ಕೊಡಿಸಿ’ ಎಂದು ಬಳೆ ಒಡೆದುಕೊಂಡು, ಕೂದಲು ಕೆದರಿಕೊಂಡು, ಎದೆ ಬಡಿದುಕೊಳ್ಳುತ್ತಿದ್ದರು. ಕೊನೆಗೆ ಆ ಫೋಟೊದಲ್ಲಿರುವ ವ್ಯಕ್ತಿಯನ್ನು ಗೂಗಲ್ ಮಾಡಿದಾಗ ತಿಳಿಯಿತು. ಆತ ರೋಹಿತ್ ವೇಮುಲಾ.

ಆಂಧ್ರರ ನಾಡಿನಲ್ಲಿ ಅಫ್ಜಲ್ ಗುರುವಿನ ಆಶಯವನ್ನು ಸಾಕಾರಗೊಳಿಸುವುದಕ್ಕೆ ಹೋರಾಡಿದ ವ್ಯಕ್ತಿ, ಸಿಕ್ಕಾಪಟ್ಟೆ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು. ಆದರೆ ಟೌನ್‌ಹಾಲ್ ಮುಂದೆ ಹೋರಾಟ ಮಾಡುತ್ತಿದ್ದವರು ಆತ ಪ್ರತಿಭಾವಂತ, ದೇಶದ ಸತ್‌ಪ್ರಜೆ ಎಂದೆಲ್ಲ ಹೊಗಳುತ್ತಿದ್ದರು. ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದವನ ಸಾವಿಗೆ ನ್ಯಾಯ ಕೊಡಿಸಿ ಎಂದು ಮೋದಿಗೆ ಧಿಕ್ಕಾರ ಕೂಗಿದ್ದರು. ಒಂದು ಅಂಶ ನೆನಪಿಡಿ, ಆಂಧ್ರದ ರೋಹಿತ್‌ಗೆ ಬೆಂಗಳೂರಿನ ಟೌನ್ ಹಾಲ್ ಎದುರು ಎದೆಬಡಿದುಕೊಂಡು, ಧಿಕ್ಕಾರ ಕೂಗಿದ್ದು ದೆಹಲಿಯಲ್ಲಿರುವ ಮೋದಿಗೆ. ಆದರೆ, ಮೊನ್ನೆ ಶೃಂಗೇರಿಯ ಕಾಲೇಜೊಂದರಲ್ಲಿ ಅಭಿಷೇಕ್ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ. ಆತ ಡೆತ್‌ನೋಟ್ ನಲ್ಲಿ – ‘ನಾನು ಮಾಡದ ತಪ್ಪಿಗೆ ನನ್ನ ಮೇಲೆ ಎಫ್‌ಐಆರ್ ದಾಖಲಾಗಿದೆ.

ನಾನು ಹೇಡಿಯಲ್ಲ. ಆದರೆ ನನ್ನ ಕನಸುಗಳೆಲ್ಲ ಎಫ್‌ಐಆರ್‌ನಿಂದ ನುಚ್ಚು ನೂರಾಗಿವೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿಟ್ಟಿದ್ದ. ಹಾಗಾದರೆ ಆತನ ಮೇಲೆ ಎಫ್‌ಐಆರ್ ಹಾಕಿದ್ದಾದರೂ ಯಾಕೆ? ಜ.7ರಂದು ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ‘ಯೋಧ ನಮನ’ ಕಾರ್ಯಕ್ರಮ ಏರ್ಪಾಡು ಮಾಡಿದ್ದರು. ನಮ್ಮ ದೇಶದ ಯೋಧರನ್ನೇ ಕರೆಸಿ ಅವರ ತ್ಯಾಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಯುವ ಮನಸ್ಸುಗಳಲ್ಲಿ ಉತ್ಸಾಹ, ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ನಮ್ಮ ದೇಶದಲ್ಲಿದ್ದುಕೊಂಡು ನಮ್ಮ ಯೋಧರನ್ನು ಗೌರವಿಸುವುದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು ಹೇಳಿ? ಆದರೆ ಎನ್‌ಎಸ್‌ಯುಐಗೆ ಮಾತ್ರ ಇದು ಇಷ್ಟ ಇರಲಿಲ್ಲ. ಮೂರು ಊರುಗಳಿಂದ ನಾಲ್ಕು ಅಪರಿಚಿತರನ್ನು ಕರೆದು ಕೊಂಡು ಬಂದು ಕಾಲೇಜ್ ಎದುರು ಗಲಾಟೆ ನಡೆಸಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರನ್ನು ಮೊದಲು ಆಹ್ವಾನಿಸಲಾಗಿತ್ತಾದರೂ, ಗಲಭೆಗಳಾಗಬಹುದು ಎಂದು ಕಾಲೇಜಿನವರೇ ಫೋನ್ ಮಾಡಿ ಬರುವುದು ಬೇಡ ಎಂದು ಹೇಳಿದ್ದರು. ಆದರೆ ಇದನ್ನೇ ತಮ್ಮ ಜಯ ಎಂದುಕೊಂಡ ಎನ್‌ಎಸ್‌ಯುಐ ಹುಡುಗರು ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ನವರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ಸಣ್ಣ ಪುಟ್ಟ ಜಗಳವೂ ಆಗಿತ್ತು. ಇಲ್ಲಿ ಅಭಿಷೇಕ್‌ನ ಪಾತ್ರ ಏನೂ ಇಲ್ಲ. ಮಾರನೆಯ ದಿನ ಅಭಿಷೇಕ್ ಮತ್ತು ಅವನ ಸ್ನೇಹಿತರು ಎನ್‌ಎಸ್‌ಯುಐ ಸಂಘಟನೆಯವರಲ್ಲಿ, ಯಾಕೆ ಹೀಗೆ ಕಾರ್ಯಕ್ರಮ ತಡೆದಿದ್ದೀರಿ ಎಂದು ಕೇಳಿದ್ದಾರೆ. ಆದರೆ ಇಲ್ಲೂ ಅಭಿಷೇಕ್ ಬೇರೆ ಹುಡುಗರ ಜತೆ ನಿಂತಿದ್ದನಷ್ಟೇ ಹೊರತು ಒಂದು ಮಾತೂ ಆಡಲಿಲ್ಲ. ಎನ್‌ಎಸ್‌ಯುಐ ಅವರು ತಳ್ಳಾಡಿಕೊಂಡು ಪೊಲೀಸ್ ಠಾಣೆಗೇ ಹೋಗಿ ಎನ್‌ಎಸ್ ಯುಐನವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿ ಎಫ್‌ಐರ್ ಸಹ ದಾಖಲಿಸಿದ್ದಾರೆ. ಅಭಿಷೇಕ್ ಹೆಸರೂ ಅದರಲ್ಲಿ ಇತ್ತು.

ಓದುವ ಹುಡುಗನ ಮೇಲೆ ಎಫ್‌ಐಆರ್ ದಾಖಲಿಸಿದರೆ, ಆತನಿಗೆ ಆಗುವ ಆಘಾತವೇನೆಂದು ಎನ್‌ಎಸ್‌ಯುಐ ಹಿಂದಿರುವ ರಾಜಕಾರಣಿ ಗೂಂಡಾಗಳಿಗೆ ಹೇಗೆ ಗೊತ್ತಿರಬೇಕು? ಅಭಿಷೇಕ್ ಜರ್ಜರಿತನಾಗಿದ್ದ. ನಿಮಿಷಕ್ಕೊಮ್ಮೆ ಸ್ನೇಹಿತರ ಬಳಿ ಬರುವುದು – ‘ಲೋ ನಾನ್ ಸರಕಾರಿ ಕೆಲಸ ಮಾಡ್ಬೇಕು ಅನ್ಕೊಂಡಿದೀನಿ… ಎಫ್‌ಐಆರ್ ಆದ್ರೆ ನಂಗ್ ಕೆಲಸ ಸಿಗುತ್ತೇನೋ’ ಎಂದು ಕೇಳುತ್ತಿದ್ದ. ಯಾರೋ ಕೆಲವರು ‘ಎಫ್‌ಐಆರ್ ಆದ್ರೆ ನಿಂಗೆ ಸರಕಾರಿ ಕೆಲಸವೇನು, ಪಾಸ್ ಪೋರ್ಟು ಸಿಗಲ್ಲ’ ಎಂದಿದ್ದರು. ಇದರಿಂದ ಇನ್ನೂ ನೊಂದ ಅಭಿಷೇಕ್ ಸ್ನೇಹಿತರ ಬಳಿ ‘ನನ್ ಲೈಫ್ ಆಗೋಯ್ತು ಕಣ್ರೋ… ನಮ್ ಅಪ್ಪ ಅಮ್ಮಂಗ್ ಕೆಟ್ಟು ಹೆಸ್ರು ತಂದ್ಬಿಟ್ಟೆ… ನನ್ ಲೈಫಲ್ಲಿ ಈ ಎಫ್‌ಐಆರ್ ದೊಡ್ ಬ್ಲ್ಯಾಕ್ ಮಾರ್ಕ್ ಆಗೋಯ್ತು’ ಎಂದು ಅಳುತ್ತಿದ್ದ. ಕೊನೆಗೆ ಎನ್‌ಎಸ್‌ಯುಐ ಅವರಿಗೇ ಕರೆ ಮಾಡಿ, ‘ನಾನು ಯಾವುದರಲ್ಲೂ ಭಾಗಿಯಾಗಿರಲಿಲ್ಲ. ನನ್ನ ಮೇಲೆ ಎಫ್‌ಐಆರ್ ಯಾಕೆ ಹಾಕಿಸಿದ್ರಿ’ ಎಂದು ಕೇಳಿದಾಗ ಅವರೆಲ್ಲ ಶಿಳ್ಳೆ ಹೊಡೆದು ಕೇಕೆ ಹಾಕಿ ನಕ್ಕಿದ್ದರಂತೆ. ಇದರಿಂದ ಇನ್ನೂ ಮನನೊಂದ ಯುವಕ ಕೊನೆ ಬಾರಿ ತನ್ನ ಎಲ್ಲ ಸ್ನೇಹಿತರಿಗೂ ಕರೆ ಮಾಡಿ, ಸುಳಿವು ನೀಡದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎನ್‌ಎಸ್ ಯುಐನವರಂತೆ ಅಭಿಷೇಕ್ ದಾಂಧಲೆ ಮಾಡುವವನಾಗಿರಲಿಲ್ಲ. ಉತ್ತಮ ಅಂಕ ತೆಗೆಯುತ್ತಿದ್ದ ವಿದಾರ್ಥಿಯೊಬ್ಬ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆ ಕರ್ನಾಟಕದಲ್ಲಿಯೇ ನಡೆದಿದ್ದರೂ ಇದರ ಬಗ್ಗೆ ಯಾರೊಬ್ಬರೂ ಮಾತಾಡುತ್ತಿಲ್ಲ.

ನಿನ್ನೆಯೂ ನಾನು ಇದೇ ಟೌನ್ ಹಾಲ್ ದಾರಿಯಲ್ಲಿ ಬರುತ್ತಿದ್ದಾಗ ಅಲ್ಲಿ ಪ್ರೀಪೇಡ್ ಹೋರಾಟಗಾರರು ಬಿಡಿ, ಒಂದು ನಾಯಿಯೂ ಬಿಸಿಲು ಕಾಯಿಸುತ್ತಾ ಕುಳಿತಿರಲ್ಲಿಲ್ಲ. ಅಫ್ಜಲ್ ಗುರು ಬಗ್ಗೆ ಘೋಷಣೆ ಕೂಗಿದ ದೇಶದ್ರೋಹಿ ವೇಮುಲಾನನ್ನು ತನ್ನ ಮಗ, ತನ್ನ ತಮ್ಮ ಎಂದು ಇಂದಿಗೂ ಫೇಸ್ಬುಕ್ಕಲ್ಲಿ ಫೋಟೊ ಹಾಕಿಕೊಂಡಿರುವ ಯಾವ ಬಿಳಿ ಮಂಡೆ ಪತ್ರಕರ್ತೆ, ಬೊಚ್ಚು ಬಾಯಿ ಕವಯತ್ರಿಯರೂ ಬಳೆ ಒಡೆದು, ಎದೆ ಬಡಿದುಕೊಳ್ಳದೇ, ಬಾಯಿಗೆ ಬೂಟು ತುರುಕಿಕೊಂಡು ಕುಳಿತಿದ್ದಾರೆ. ಯಾವ ರಾಜಕಾರಣಿಗೂ ಈ ವಿಷಯವೇ ಗೊತ್ತಿಲ್ಲ. ಗೊತ್ತಾಗುವುದೂ ಇಲ್ಲ. ಏಕೆಂದರೆ ಸತ್ತವನು ರೋಹಿತ್ ವೇಮುಲನ ಹಾಗೆ ಅಫ್ಜಲ್ ಗುರುಗೆ ಬೆಂಬಲ ನೀಡಿ, ಸ್ಕಾಲರ್‌ಶಿಪ್ ಹಣಕ್ಕಾಗಿ ದಲಿತ ಎಂದು ನಕಲಿ ಜಾತಿ ಪ್ರಮಾಣ ಪತ್ರ ಇಟ್ಟುಕೊಂಡವನಲ್ಲ. ಬದಲಿಗೆ
ತನ್ನ ಶ್ರಮವನ್ನೇ ನಂಬಿಕೊಂಡು 75%ಗಿಂತ ಹೆಚ್ಚು ಅಂಕ ತೆಗೆಯುತ್ತಿರುವ ಬುದ್ಧಿವಂತನಲ್ಲವೇ? ಇವೆಲ್ಲ ಹಾಗಿರಲಿ. ಅಭಿಷೇಕ್ ‘ಯೋಧ ನಮನ’ದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಎಂದುಕೊಂಡರೂ, ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಪಾಕಿಸ್ತಾನದ ಯೋಧರನ್ನೇನು ಕರೆದು ಸನ್ಮಾನ ಮಾಡುತ್ತಿರಲಿಲ್ಲವಲ್ಲ? ನಮ್ಮ ದೇಶಕ್ಕಾಗಿ ಗಡಿಯಲ್ಲಿ ನಿಂತು ಕಾಯುವ ಯೋಧರನ್ನು ಕರೆತಂದರೆ ಕಾಲೇಜೇ ಪಾವನವಾಗುತ್ತದೆ.

ನಮ್ಮ ಯೋಧರನ್ನು ಕರೆಯಿಸಿದರೆ ಎನ್‌ಎಸ್‌ಯುಐಗೇಕೆ ಉರಿ? ಹೀಗೆ ದಾಂಧಲೆ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ ಎಂದರೆ, ಇವರಿಗೆ ದೇಶಕ್ಕಿಂತಲೂ ಬೇರೆ ಏನೋ ಮುಖ್ಯ ಎಂದಾಯಿತಲ್ಲ?! ಅಷ್ಟಕ್ಕೂ ಅಲ್ಲಿ ಕಾರ್ಯಕ್ರಮ ನಡೆಯಬಾರದು ಎಂದು ಹೋರಾಟ ಮಾಡಿದವರಲ್ಲಿ ನಾಲ್ಕೈದು ಹುಡುಗರನ್ನು ಬಿಟ್ಟರೆ ಮಿಕ್ಕವರೆಲ್ಲ ಆ ಊರಿನ ಸುತ್ತಮುತ್ತಲಿನ ಪುಡಿ ರೌಡಿಗಳು, ಪೊರ್ಕಿ ಪರೋಡಿಗಳು. ಯಾವುದೋ ಕಾಲೇಜಿನಲ್ಲಿ ಯೋಧ ನಮನ ನಡೆದರೆ ಈ ಪೊರ್ಕಿಗಳಿಗೇಕೆ ಅದರ ಉಸಾಬರಿ? ಅಂದರೆ ಇಲ್ಲಿ ಒಂದು ಸ್ಪಷ್ಟ. ಈ ಕಾಲೇಜಿನಲ್ಲಿ ಎನ್‌ಎಸ್‌ಯುಐ ಪ್ರಾಬಲ್ಯ ಹೊಂದಿದೆ. ತಾವು ಹೇಳಿದ್ದೇ ಆಗಬೇಕು ಎಂಬುದು ಅವರ ವಾದ. ಎನ್‌ಸಿಸಿ ಹುಡುಗರಿಗೆ ಪ್ರಿನ್ಸಿಪಾಲ್ ಮುಂದೆಯೇ ಬಾರಿಸಿದ ಮಹಾಶೂರರು ಎನ್ ಎಸ್‌ಯುಐ ಹುಡುಗರು. ಆದರೆ ಇವರೆಲ್ಲರ ರಾಜಕೀಯದಾಟದಲ್ಲಿ ಬಲಿಯಾದದ್ದು ಮಾತ್ರ ಒಬ್ಬ ಅಮಾಯಕ ಹುಡುಗ.

ಇಂಥ ಸಣ್ಣ ಸಣ್ಣ ಪ್ರಕರಣಗಳನ್ನು ಪೊಲೀಸರು ಹೇಗೆ ದಾಖಲಿಸಿಕೊಂಡರು? ಸಾಮಾನ್ಯವಾಗಿ ಪೊಲೀಸರು ಕಾಲೇಜು ವಿದ್ಯಾರ್ಥಿಗಳ ಮೇಲೆ ದೂರನ್ನೇ ತೆಗೆದುಕೊಳ್ಳುವುದಿಲ್ಲ. ಆದರೆ ಅಭಿಷೇಕ್ ಮತ್ತು ಕೆಲವರ ವಿರುದ್ಧದ ದೂರು ಸ್ವೀಕರಿಸುವುದಲ್ಲದೇ ಆತುರದಲ್ಲಿ ಎಫ್ ಐಆರ್ ಸಹ ಹಾಕಿದ್ದಾರೆ ಎಂದರೆ ಇದರ ಹಿಂದೆ 60 ವರ್ಷ ದೇಶ ಹಾಳು ಮಾಡಿದವರದ್ದೇ ಒತ್ತಡವಿದೆಯೆಂದು ಯಾರಾದರೂ ಹೇಳಬಹುದು. ಇದಕ್ಕೂ ಕಾರಣವಿದೆ – ಎರಡು ವಾರಗಳ ಹಿಂದೆ ಎನ್‌ಎಸ್‌ಯುಐ ಸಂಘಟನೆಯ ಅಂಜನ್ ಎಂಬ ವಿದ್ಯಾರ್ಥಿ ಮತ್ತು ಅವನ ಸ್ನೇಹಿತರು ದ್ವಿತೀಯ ಪಿಯುಸಿ ಹುಡುಗರಿಗೆ ರ್ಯಾಗಿಂಗ್ ಮಾಡಿದ್ದರು. ಆಗಲೂ ಅಭಿಷೇಕ್ ಸ್ನೇಹಿತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ದೂರು ದಾಖಲಿಸಿಕೊಳ್ಳದೇ ಎರಡೂ ಕಡೆಯವರನ್ನು ಕರೆಯಿಸಿ ಸಂಧಾನ ಮಾಡಿ ಕಳುಹಿಸಿದ್ದರು. ಅದೇ ಎನ್‌ಎಸ್‌ಯುಐ ನವರು ಕೊಟ್ಟ ದೂರನ್ನು ಮಾತ್ರ ತಕ್ಷಣ ದಾಖಲಿಸಿಕೊಂಡಿದ್ದಾರೆ. ಇಲ್ಲಿ ಪೊಲೀಸ್ ಇಲಾಖೆ ಸತ್ಯಕ್ಕಾಗಿ ಕೆಲಸ ಮಾಡುತ್ತಿದೆಯೋ ಅಥವಾ ಸ್ಥಳೀಯ ಕಾಂಗ್ರೆಸ್ ನಾಯಕರಿಗಾಗಿ ಕೆಲಸ ಮಾಡುತ್ತಿದೆಯೋ?

ರೋಹಿತ್ ವೇಮುಲಾ ಸತ್ತಾಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಫೇಸ್ಬುಕ್‌ನಲ್ಲಿ – ‘ಪ್ರತಿಭಾವಂತ ರೋಹಿತ್ ವೇಮುಲಾ ಅವರ ಸಾವು ನನಗೆ ಅತೀವ ದುಃಖ ತಂದಿದೆ. ಇದನ್ನು ನಾನು ಖಂಡಿಸುತ್ತೇನೆ’ ಎಂದು ಬರೆದುಕೊಂಡು ಫೇಸ್‌ಬುಕ್‌ನಲ್ಲಿ ಎಲ್ಲರಿಗೂ ಕಾಣುವ ಹಾಗೆ ಜಾಹೀರಾತನ್ನೂ ನೀಡಿದ್ದರು. ಆದರೆ ತಮ್ಮದೇ ರಾಜ್ಯದಲ್ಲಿ ರೋಹಿತ್ ವೇಮುಲಾಗಿಂತಲೂ ಹೆಚ್ಚು ಅಂಕ ತೆಗೆದವನ ಪ್ರಾಣ ಎನ್‌ಎಸ್‌ಯುಐ ನೀಡಿದ ಒಂದು ಸುಳ್ಳು ಕಂಪ್ಲೇಂಟ್‌ನಿಂದ ಹೋಯಿತು ಎಂಬುದು ಅವರ ಗಮನಕ್ಕೇ ಬಂದಿಲ್ಲವೇ? ಅಥವಾ ದಲಿತ ಸತ್ತರೆ ಮಾತ್ರ ಎಲ್ಲರಿಗೂ ಎಚ್ಚರಿಕೆಯ ಗಂಟೆ ಹೊಡೆದುಕೊಳ್ಳುತ್ತದೋ? ಇಂದಿಗೂ ಎನ್‌ಎಸ್‌ಯುಐ ಅವರ ದಾಂಧಲೆ ಅಲ್ಲಿ ನಡೆಯುತ್ತಿದ್ದರೂ ಸ್ಥಳೀಯ ರಾಜಕಾರಣಿಗಳ ಬೆಂಬಲದಿಂದ ಆರಾಮಾಗಿದ್ದಾರೆ. ಹಾಗಾದರೆ ಇವೆಲ್ಲ ದಕ್ಷ ಅಧಿಕಾರಿ ಅಣ್ಣಾಮಲೈ ಅವರ ಗಮನಕ್ಕೆ ಬರಲೇ ಇಲ್ಲವೇ? ನಮ್ಮ ರಾಜ್ಯದಲ್ಲಿ ಎಂ.ಎಂ. ಕಲಬುರಗಿ ಅವರು ಆಸ್ತಿ ವಿವಾದದಿಂದ ಕೊಲೆಯಾದರೆ ಅದು ಹಿಂದೂ ಸಂಘಟನೆಗಳ ಕೈವಾಡ ಎಂದು ಬಿಳಿಮಂಡೆ ಲಂಕಿಣಿಯರು, ಕಾಂಗ್ರೆಸಿಗರು ಬೀದಿಗಿಳಿಯುತ್ತಾರೆ. ಆದರೆ, ಯೋಧರಿಗೆ ನಮನ ಸಲ್ಲಿಸುವವನು ಮಾತ್ರ ಆತ್ಮ ಹತ್ಯೆಯೋ, ಬೀದಿ ಹೆಣವೋ ಆಗಬೇಕೆ?

ರಾಜ್ಯದಲ್ಲಿ ಹೀಗೆ ಸಾಲು ಸಾಲು ಹತ್ಯೆಗಳಾಗಿದ್ದರೂ ಬಿಜೆಪಿಯವರು ಬಾಯಿಗೆ ಗೂಟ ಬಡಿದುಕೊಂಡಿದ್ದಾರೋ ತಿಳಿಯುತ್ತಿಲ್ಲ. ಬಿಜೆಪಿಯವರೇ, ಹೊರರಾಜ್ಯದ ಪೋಲಿ ಹುಡುಗ ಸತ್ತರೆ ಪೀಡೆ ತೊಲಗಿತು ಎಂದು ಮನೆ ಶುದ್ಧ ಮಾಡಿಕೊಳ್ಳುವುದರ ಬದಲು ಇಲ್ಲಿ ಅಂಥವರ ಸಾವಿನ ನ್ಯಾಯಕ್ಕಾಗಿ ಹೋರಾಟವಾಗುತ್ತಿರುವಾಗಂತೂ ನಿಮ್ಮ ಯೋಗ್ಯತೆಗೆ ಮಾತಾಡುವುದಕ್ಕಾಗಲಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳು ಅಥವಾ ನಿಮ್ಮ ದೃಷ್ಟಿಯಲ್ಲೇ ಹೇಳುವುದಾದರೆ ಮುಂದಿನ ಯುವ ಮತದಾರರು ಸಾಯುತ್ತಿದ್ದಾರೆ. ಅಷ್ಟಾದರೂ ಅವರ ಪರ ಒಂದು ಮಾತಾಡಿದರೂ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದಂತಾಗುತ್ತಿತ್ತು. ಆದರೆ ಏನನ್ನೂ ಮಾಡದೇ, ಮಾತಾಡದೇ ಸುಮ್ಮನಿರುವುದು ಮಾತ್ರ ಬಿಜೆಪಿಯವರ ಷಂಡತನವನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ. ಶೃಂಗೇರಿ, ಚಿಕ್ಕಮಗಳೂರಿನ ಕಡೆ ಪರಿಸ್ಥಿತಿ ಹೇಗಿದೆ ಎಂದರೆ, ಹಿಂದೂವೊಬ್ಬ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರೆ ಅವನ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ.

ನಿತ್ಯ ಇದೇ ಗೋಳು ಎಂಬಂತೆ ಎನ್‌ಎಸ್‌ಯುಐ ಮತ್ತು ಯೂತ್ ಕಾಂಗ್ರೆಸ್ ಅವರ ದಾಂಧಲೆಯಿಂದ ಎಬಿವಿಪಿ ಮತ್ತು ಇನ್ನಿತರ ಸಂಘಟನೆಗಳು ತತ್ತರಿಸಿ ಹೋಗಿವೆ. ಈ ಅಭಿಷೇಕ್ ನ ಆತ್ಮಹತ್ಯೆ ಕೇವಲ ಆತ್ಮಹತ್ಯೆಯಷ್ಟೇ ಆಗಿರದೇ ಹಿಂದೂಗಳು, ರಾಷ್ಟ್ರೀಯತಾವಾದಿಗಳ ಮೇಲಾಗುತ್ತಿರುವ ದೌರ್ಜನ್ಯದ ಕರಾಳ ಮುಖ ಪರಿಚಯಿಸುತ್ತದೆ. ಎದೆ ಸೀಳಿದರೆ ಮೂರು ಅಕ್ಷರ ಬರದ ರಾಜಕಾರಣಿಗಳಿಗಂತೂ ಪ್ರತಿಭಾವಂತ ವಿದ್ಯಾರ್ಥಿ ಎಂಬ ಪದ ರಾಕೆಟ್ ಸೈನ್ಸ್‌ನಂತೆ ಗೋಚರಿಸುತ್ತದೆ. ಅಭಿಷೇಕ್ ಸಾವು ಕಲಿಸಿಕೊಟ್ಟಿರುವ ಮತ್ತೊಂದು ಪಾಠವೇನೆಂದರೆ ರಾಜಕಾರಣಿಗಳು ನಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆಯೇ ವಿನಾ ರಾಷ್ಟ್ರೀಯತಾವಾದಿಗಳ ಸಹಾಯಕ್ಕೆ ಯಾರೂ ಬರುವುದಿಲ್ಲ. ದೇಶಭಕ್ತರ ಸಾವು ಯಾವಾಗಲೂ ಅನಾಥವೇ ಹಾಗೂ ಅನ್ಯಾಯವೇ! ಅಭಿಷೇಕ್ ನಿನ್ನ ಸಾವು ವ್ಯರ್ಥವಾಗಲಿಲ್ಲ. ಕಲಿಯುವವರಿಗೆ ನಿನ್ನ ಸಾವೇ ಪಾಠವಾಗಿದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya