ಮೋದಿ ಕೊಟ್ಟ ಗುಳಿಗೆ ಸರಿಯಾಗಿಯೇ ಕೆಲಸ ಮಾಡುತ್ತಿದೆ!

249282-dinesh1
ಒಂ ದು ಮಾತಿದೆ. ಸಿಕ್ಕಿಹಾಕಿಕೊಳ್ಳುವ ತನಕ ಮಾತ್ರ ಸಾಚಾ! ಸಿಕ್ಕಿ ಹಾಕಿಕೊಂಡ ಮೇಲೆ ಎಲ್ಲರೂ ಕಳ್ಳರೇ. ಈ ಮಾತಿಗೆ ಕೆಲ ರಾಜಕಾರಣಿಗಳು ಮತ್ತು ಪಕ್ಷಗಳು ಉದಾಹರಣೆಯಾಗಿದ್ದಾರೆ. ನವೆಂಬರ್ ಎಂಟಕ್ಕೆ ನೋಟು ಬ್ಯಾನ್ ಮಾಡಿದ ಮೇಲೆ ಮೊದಲಿಗೆ ಎಲ್ಲ ರಾಜಕಾರಣಿಗಳೂ ಇದು ಒಳ್ಳೆಯ ನಿರ್ಧಾರ ಎಂದು ಹೊಗಳಿದರು. ಆದರೆ, ಒಂದೆರಡು ದಿನಕ್ಕೇ ಅವರಿಗೆ ಮೋದಿ ಹಾಕಿದ ಉರಿ ತಡೆಯುವುದಕ್ಕೆ ಆಗಲಿಲ್ಲ. ಹಾಗಾಗಿ ಒಂದೊಂದೇ ಇಲಿ ಹೊರಬರಲು ಶುರುವಾಯಿತು. ಮೊದಲಿಗೆ, ಜನರಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದರು. ನಂತರ ಜನರೇ ಬಹಳ ಆರಾಮಾಗಿ ನಮಗೇನೂ ತೊಂದರೆ ಇಲ್ಲ ಎಂದಾಗ, ಈ ನೋಟು ಬದಲಾವಣೆ ನೀತಿಯೇ ದೇಶವನ್ನು ಹಾಳು ಮಾಡುತ್ತದೆ ಎಂದು ಬಿಂಬಿಸಿದರು. ಇದಾದ ಮೇಲೆ ಮಲತಾಯಿ ಧೋರಣೆ ಎಂಬ ಮತ್ತೊಂದು ಪದಬಳಕೆ ಬಂತು. ಆದರೆ ಮಲತಾಯಿ ಧೋರಣೆ ಎಂಬುದು ಕರ್ನಾಟಕದ ಜನರ ಪಾಲಿಗೆ ಹೊಸ ಪದವೇನಲ್ಲ. ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರಕಾರವಿದ್ದಾಗ ರಾಜ್ಯದಲ್ಲಿ ಬಿಜೆಪಿ, ಅಲ್ಲಿ ಎನ್‌ಡಿಎ ಸರಕಾರವಿದ್ದಾಗ ಇಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಮಲತಾಯಿ ಧೋರಣೆ ಎಂಬ ಹುಯಿಲೇಳುತ್ತದೆ. ಕೇಂದ್ರದಿಂದ ಸರಿಯಾದ ನೆರವು ಸಿಗುತ್ತಿಲ್ಲ, ಕಾವೇರಿ ಸಮಸ್ಯೆ ಈಡೇರಿಸುತ್ತಿಲ್ಲ, ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ರಾಜ್ಯ ಸರಕಾರದವರು ದೂರುವುದು ಸರ್ವೇ ಸಾಮಾನ್ಯ. ಈ ಮಲತಾಯಿ ಧೋರಣೆ ಎಂಬ ಪದವನ್ನು ವಾಕರಿಕೆ ಬರುವ ರೀತಿಯಲ್ಲಿ ನವೆಂಬರ್‌ನಲ್ಲಿ ಬಳಸಿದೆ ಕಾಂಗ್ರೆಸ್. ನರೇಂದ್ರ ಮೋದಿ ಇಡೀ ದೇಶಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಎದೆ ಬಡಿದುಕೊಂಡರೂ ಕಳೆದುಕೊಂಡಿರುವ ಒಂದು ಗಾಂಧಿ ನೋಟು ವಾಪಸ್ ಸಿಕ್ಕಲಿಲ್ಲ. ಮನೆಯ ಟಾಯ್ಲೆಟ್ ಕಮೋಡ್‌ನಲ್ಲೋ, ಹಾಸಿಗೆಯೊಳಗೋ ನಗುತ್ತಿದ್ದ ಗಾಂಧಿ ನೋಟು ಕಾಳಧನಿಕರನ್ನು ನೋಡಿಯೇ ನಗುತ್ತಿರುವುದೇನೋ ಎಂಬಷ್ಟರ ಮಟ್ಟಿಗೆ ಕೆಲ ರಾಜಕಾರಣಿಗಳು ಕಂಗಾಲಾಗಿದ್ದರು. ಕಾಂಗ್ರೆಸ್ ರಾಜಕಾರಣಿಗಳ ಸ್ಥಿತಿಯನ್ನಂತೂ, ಮನೆಯಲ್ಲಿರುವ ಅವರ ಹೆಂಡಿರೇ ಬಲ್ಲರು. ಆದರೆ ಈಗ ಕಾಂಗ್ರೆಸಿಗರು ಹೊಸ ನಾಟಕ ಶುರು ಮಾಡಿದ್ದು, ಕೇಂದ್ರ ಸರಕಾರ ನಮ್ಮ ಮೇಲೆ ಬೇಕಂತಲೇ ಸಿಬಿಐ, ಐಟಿ ದಾಳಿ ಮಾಡಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಮತ್ತು ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರಕಾರ ಸುಖಾಸುಮ್ಮನೆ ಕರ್ನಾಟಕ ಕಾಂಗ್ರೆಸ್ ಸರಕಾರದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದಿದ್ದಾರೆ. ಇಷ್ಟು ದಿನ ಕಾಂಗ್ರೆಸಿಗರ ಮೇಲೆ ದಾಳಿಯಾದರೂ ಅವರು ಒಂದು ಮಾತೂ ಆಡುತ್ತಿರಲಿಲ್ಲ. ಕೇವಲ ಮೋದಿಯನ್ನಷ್ಟೇ ಬಯ್ದುಕೊಂಡು ಸುಮ್ಮನಿರುತ್ತಿದ್ದರು. ಆದರೆ ಹೀಗೆ ಹೊಸ ವರಸೆ ಹುಟ್ಟುವಂತೆ ಮಾಡಿದ್ದೂ ಬಿಜೆಪಿಯವರೇ. ಯಡಿಯೂರಪ್ಪನವರು ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯನವರ ಬುಡ ಅಲುಗಾಡಲಿದೆ ಎಂದು ಹೇಳಿದ್ದು ಕಾಂಗ್ರೆಸಿಗರ ಹೊಸ ದೊಂಬರಾಟಕ್ಕೆ ನಾಂದಿಯಾಯ್ತು. ಒಂದು ವಿಚಾರ ಗಮನಿಸಿ, ನವೆಂಬರ್ 8ರಿಂದ ಇವತ್ತಿನ ತನಕವೂ ಸಿಬಿಐ ಮತ್ತು ಐಟಿ ದಾಳಿ ಮಾಡಿದ ಅಷ್ಟೂ ಜಾಗಗಳಲ್ಲೂ ಕೋಟಿಗಳ ಲೆಕ್ಕದಲ್ಲೇ ಕಪ್ಪುು ಹಣ ಸಿಕ್ಕಿದೆ. ಅದರಲ್ಲಿ ಹೊಸ ನೋಟು, ಹಳೇ ನೋಟು ಎಲ್ಲವೂ ಇದೆ. ಹೀಗಿರುವಾಗ ದಾಳಿ ಮಾಡುವುದರಲ್ಲಿ ತಪ್ಪೇನಿದೆ? ತೆರಿಗೆ ಇಲಾಖೆ ಇತ್ತೀಚೆಗೆ ಒಂದು ಇಮೇಲ್ ಐಡಿ ಕೊಟ್ಟಿತ್ತು. ಅದಕ್ಕೆ ಮೇಲ್ ಮಾಡುವುದರ ಮೂಲಕ, ಕಾಳಧನಿಕರ ಬಗ್ಗೆ ರಹಸ್ಯವಾಗಿ ಮಾಹಿತಿ ನೀಡಬಹುದು ಎಂದು ತಿಳಿಸಿತ್ತು. ಅದಕ್ಕೆ ಇದುವರೆಗೂ ನಾಲ್ಕು ಸಾವಿರ ಮೇಲ್ ಗಳು ಬಂದಿವೆ. ಆ ಅಷ್ಟು ಪ್ರದೇಶಗಳ ಮೇಲೆ ದಾಳಿ ಮಾಡುವುದರಲ್ಲಿ ತಪ್ಪೇನಿದೆ? ನಮ್ಮ ಉದ್ದೇಶ ಕಾಳಧನಿಕರನ್ನು ಮಟ್ಟ ಹಾಕುವುದೋ ಅಥವಾ ಕಾಂಗ್ರೆಸ್ ನ ಮೇಲೆ ದಾಳಿ ಮಾಡಬಾರದು ಎಂದು ನಿರ್ಬಂಧಿಸಿಕೊಳ್ಳುವುದೊ? ಹಾಗೆ ನೋಡಿದರೆ, ಐಟಿ ದಾಳಿಯ ವೇಳೆ ಬಹಳಷ್ಟು ಕೈಗಳು ಸಿಕ್ಕಿಬಿದ್ದಿವೆ. ಇನ್ನು ಕೆಲವರು ಕಾಂಗ್ರೆಸ್‌ಗೆ ಹತ್ತಿರವಾಗಿದ್ದವರೂ ಇದ್ದಾರೆ. ಇಷ್ಟಾದರೂ ಕಾಂಗ್ರೆಸ್ ವಿರುದ್ಧವೇ ದೊಡ್ಡ ಪಿತೂರಿ ಮಾಡಲಾಗುತ್ತಿದೆ ಎಂದು ಹೇಳುವ ರಾಜಕಾರಣಿಗಳಿಗೆ ಮೆದುಳು ಎಂಬುದು ತಲೆಯೊಳಗೆ ಇದೆಯೋ ಅಥವಾ ದೇವರು ಇನ್ನೆಲ್ಲಾದರೂ ಅಳವಡಿಸಿದ್ದಾನೋ? ಎಂಬುದೇ ತಿಳಿಯುತ್ತಿಲ್ಲ. ಇವರ ವಾದಗಳು ಕೇವಲ ಹಣ ಕಳೆದುಕೊಂಡಿರುವ ಆಕ್ರೋಶ, ಹತಾಶೆ, ಆಘಾತಗಳ ಮಿಸಳಬಾಜಿಯೇ ಹೊರತು ಯಾವುದರಲ್ಲೂ ಹುರುಳಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆಯಿದೆ, ಆರ್‌ಬಿಐ ಅಧಿಕಾರಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ, ಅವರೆಲ್ಲ ಸರಕಾರಕ್ಕಾಗಿ ಕೆಲಸ ಮಾಡುವವರಲ್ಲವೇ? ನಮ್ಮ ದಿನೇಶ್ ಗುಂಡೂರಾವ್ ಅವರ ಲಾಜಿಕ್ ಪ್ರಕಾರ ಕೇವಲ ಕಾಂಗ್ರೆಸ್ ಮೇಲೆ ಮಾತ್ರ ದಾಳಿ ಮಾಡಲಾಗುತ್ತಿದೆ. ಹಾಗಾದರೆ ಆರ್ ಬಿಐನವರು ಏಕೆ ಹಳ್ಳಕ್ಕೆ ಬಿದ್ದರು? ಈ ಪ್ರಶ್ನೆ ಸ್ವತಃ ಗುಂಡೂರಾಯರೇ ಬಂದರೂ ಉತ್ತರಿಸಲು ತಡಕಾಡುತ್ತಾರೆ ಎನಿಸುತ್ತದೆ. ಕಾಂಗ್ರೆಸ್‌ನ ಮೇಲೆ ಅನ್ಯಾಯದಿಂದಲೇ, ಅಧಿಕಾರ ದುರ್ಬಳಕೆಯಿಂದಲೇ ಟಾರ್ಗೆಟ್ ಮಾಡಿದರು ಎಂದು ಕೊಳ್ಳೋಣ. ಆದರೆ ದಾಳಿ ಮಾಡಿದಲ್ಲೆಲ್ಲ ಹಣ ಸಿಕ್ಕ ಮೇಲೆ, ಉದ್ದೇಶಿತ ದಾಳಿಯಿಂದ ಕಳ್ಳರು ಸಿಕ್ಕರು ಎಂದೇ ಅರ್ಥವಲ್ಲವೇ? ಸಿಎಂಗೆ ಬಹಳ ಆಪ್ತರಾಗಿರುವ ಎಂಜಿನಿಯರ್ ಚಿಕ್ಕರಾಯಪ್ಪ ಮತ್ತು ಎಸ್ ಸಿ ಜಯಚಂದ್ರ ಅವರ ಮನೆಗಳ ಮೇಲೆ ದಾಳಿ ಮಾಡಿದ್ದರಿಂದ ಈ ಅನುಮಾನ ಮೂಡುತ್ತಿದೆ ಎನ್ನುವುದಾದರೆ, ಅಲ್ಲಿಂದ ಐಟಿ ಅಧಿಕಾರಿಗಳು ಖಾಲಿ ಕೈಲಿ ವಾಪಸ್ ಬಂದಿಲ್ಲ. ಭರ್ಜರಿ ಬೇಟೆಯಾಡಿ 150 ಕೋಟಿ ರುಪಾಯಿಯನ್ನು ಹೊರತೆಗೆದಿದ್ದಾರೆ. ಇದರಲ್ಲಿ 5.7 ಕೋಟಿ ರುಪಾಯಿ 2000 ರುಪಾಯಿಯ ಹೊಸ ನೋಟುಗಳೇ ಇವೆ! ವಿಚಿತ್ರ ನೋಡಿ, ಜನರು ಮೂರು ದಿನ ನಿಂತರೂ ಎರಡು ಸಾವಿರದ ಎರಡು ನೋಟು ಕಾಣದ ಪರಿಸ್ಥಿತಿಯಲ್ಲಿ, ಚಿಕ್ಕರಾಯಪ್ಪ ಮತ್ತು ಜಯಚಂದ್ರರ ಮನೆಯಲ್ಲಿ ಹೊಸ ನೋಟುಗಳು ಶವವಾಗಿ ಬಿದ್ದಿತ್ತು. ಇದನ್ನು ಬಯಲು ಮಾಡಿದ್ದು ಐಟಿ ಅಧಿಕಾರಿಗಳು. ಇದರಲ್ಲಿ ತಪ್ಪೇನಿದೆ? ಇವರು ತಿಂದಿದ್ದನ್ನು ತಾನೆ ಬಯಲು ಮಾಡಿದ್ದು? ಅದಕ್ಕೆ ಕೋಪವೇಕೆ? ಇನ್ನು ತನಿಖೆಯಲ್ಲೂ ಜಯಚಂದ್ರ, ತನ್ನ ಮಗನಿಗೆ ದುಬಾರಿ ಕಾರು, ಬೈಕುಗಳ ಶೋಕಿಯಿತ್ತು. ಅದನ್ನು ಕೊಡಿಸುವುದಕ್ಕಾಾಗಿಯೇ ತಾನು ಭ್ರಷ್ಟನಾದೆ ಎಂದಿರುವುದು ಹಾಸ್ಯಾಸ್ಪದ ಹಾಗೂ ಸುಳ್ಳು ಹೇಳಿಕೆಯಂತೆ ಕಾಣಿಸಿದರೂ ಅವರು ದೋ ನಂಬರ್ ದಂಧೆ ಮಾಡಿದ್ದರು ಎಂಬುದನ್ನು ಸ್ವತಃ ಒಪ್ಪಿಕೊಂಡರಲ್ಲ? ದಿನೇಶ್ ಗುಂಡೂರಾವ್ ಅಥವಾ ಬ್ರಿಜೇಶ್ ಕಾಳಪ್ಪ ಟೀಕಿಸುತ್ತಾರೆ ಎಂದು ದಾಳಿ ಮಾಡದೇ ಇದ್ದಿದ್ದರೆ, ಇಷ್ಟು ದೊಡ್ಡ ತಿಮಿಂಗಿಲಗಳನ್ನು ಹಿಡಿಯಲಾಗುತ್ತಿತ್ತೇ? ಸಿಎಂ ಮಗ ದಿ.ರಾಕೇಶ್ ಸಿದ್ದರಾಮಯ್ಯನ ಆಪ್ತ ಸ್ನೇಹಿತ ರೋಹನ್ ಗೌಡನ ಮನೆ ಮೇಲೆಯೂ ಐಟಿ ದಾಳಿ
ನಡೆದಿತ್ತು. ಆಗ ಅಧಿಕಾರಿಗಳು ಹಣ ಇರುವ ಕೊಠಡಿಗೆ ಹೋಗಲು ಯತ್ನಿಸಿದಾಗ, ರೊಚ್ಚಿಗೆದ್ದ ರೋಹನ್ ತಮ್ಮ ಮನೆಯ ನಾಯಿಗಳನ್ನು ಅವರ ಮೇಲೆ ಛೂ ಬಿಟ್ಟಿದ್ದ.
ಕೊನೆಗೆ ಅವೆಲ್ಲವನ್ನೂ ಭೇದಿಸಿ ಒಳ ಹೊಕ್ಕಾಗ ಅವರಿಗೆ ಕೋಟಿ ಕೋಟಿ ಹಣ ಸಿಕ್ಕಿತ್ತು. ಐಟಿ ಅಧಿಕಾರಿಗಳ ಮೇಲೆ ನಾಯಿ ಛೂ ಬಿಡುವಷ್ಟು ತಾಕತ್ತು ಒಬ್ಬನಿಗಿದೆ ಎಂದರೆ ಅಂಥವರನ್ನು ಯಾಕೆ ಟಾರ್ಗೆಟ್ ಮಾಡಬಾರದು. ಟಾರ್ಗೆಟ್ ಮಾಡಿ, ಕಪ್ಪು ಹಣವನ್ನು ಹೊರಗೆ ತೆಗೆಯುವುದಕ್ಕೆ ದಿನೇಶ್ ಗುಂಡೂರಾವ್ ಅಧಿಕಾರ ದುರ್ಬಳಕೆ ಎಂದು ಕರೆಯುತ್ತಾರೆ ಎಂದಾದರೆ, ಹಾಗೇ ಕರೆದುಕೊಳ್ಳಲಿ. ನಾವು ಯೋಚಿಸಬೇಕಾದ ಮತ್ತೊಂದು ಅಂಶ ಏನೆಂದರೆ, ಇಲ್ಲಿ ಅಧಿಕಾರ ದುರ್ಬಳಕೆ ಹೇಗೆ ಸಾಧ್ಯ? ಬಿಜೆಪಿ ರಾಜ್ಯಾಾಧ್ಯಕ್ಷ ಯಡಿಯೂರಪ್ಪ ಅವರಿಗೆ ಯಾವ ರಾಜಕಾರಣಿಗಳ ಮೇಲೆ ದಾಳಿ ನಡೆಯಬಹುದು ಎಂಬುದಷ್ಟೇ ಗೊತ್ತಿರಬಹುದು. ಅದು ಬಿಟ್ಟು ಸಿಬಿಐನವರೇನು ಯಡಿಯೂರಪ್ಪನವರನ್ನು ಕೇಳಿ ದಾಳಿ ಮಾಡುತ್ತಾರಾ? ಅಥವಾ ಯಡಿಯೂರಪ್ಪ ತೋರಿಸಿದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಾರಾ? ಹಾಗಾಗುವುದಕ್ಕೆ ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸಿಬಿಐನವರು ಇಂಥ ನೂರಾರು ಯಡಿಯೂರಪ್ಪನವರನ್ನು ಕಂಡಿರುತ್ತಾರೆ. ಹೀಗೆ ನಾಯಕರು ಹೇಳಿದರೆಂದು ದಾಳಿ ಅಥವಾ ತನಿಖೆ ಮಾಡುತ್ತಾ ಕುಳಿತರೆ ಅದಕ್ಕೆ ಸಿಬಿಐ ಎಂದು ಹೇಳುವುದಿಲ್ಲ, ಸಿಐಡಿ ಎನ್ನುತ್ತಾರೆ. ಏಕೆಂದರೆ ರಾಜ್ಯದಲ್ಲಿ ಸಿಐಡಿ ರಾಜ್ಯ ಸರಕಾರದ ಕಾಲಗತಿಯಿಂದ ಸಿಕ್ಕಾಪಟ್ಟೆ ಮರ್ಯಾದೆ ಗಿಟ್ಟಿಸಿಕೊಂಡಿದೆ. ದಿನೇಶ್ ಗುಂಡೂರಾವ್‌ಗೆ ಕಾನೂನು ಗೊತ್ತಿಲ್ಲ, ಅವರು ರಾಜಕಾರಣಿ ಮಾತ್ರ ಎಂದು ನಾವು ನಂಬಿದ್ದರೂ ಅವರ ಪಕ್ಷದಲ್ಲಿರುವ ಬ್ರಿಜೇಶ್ ಕಾಳಪ್ಪನವರು ಯಾಕೆ ಈ ರೀತಿಯಾದ ಮೌಢ್ಯದಲ್ಲಿ ಮುಳುಗಿದ್ದಾರೋ ನನಗೆ ತಿಳಿಯುತ್ತಿಲ್ಲ. ಒಬ್ಬ ವಕೀಲನಾಗಿ, ಸರಕಾರಕ್ಕೆ ಕಾನೂನು ಸಲಹೆ ನೀಡುವವರಾಗಿ ಇವರು ಆಡುವ ಮಾತೇ ಆಧಾರರಹಿತ. ಸಿಬಿಐ ಯಡಿಯೂರಪ್ಪನವರ ಕೈಯಲ್ಲಿಲ್ಲ ಎಂಬ ಒಂದು ಸಣ್ಣ ಅಂಶವನ್ನೂ ಅರಿಯದ ಇವರು, ಅದೆಷ್ಟರ ಮಟ್ಟಿಗೆ ಸರಕಾರಕ್ಕೆ ಕಾನೂನು ಸಲಹೆ ಕೊಡುತ್ತಾರೋ ಗೊತ್ತಿಲ್ಲ. ನೋಟು ಅಮಾನ್ಯ ಮಾಡಿದಾಗ ಕಾಂಗ್ರೆಸಿಗರ ಮೊದಲ ಹೋರಾಟ ಇದ್ದಿದ್ದು ಜನರಿಗೆ ನೋಟು ಸಿಗುತ್ತಿಲ್ಲ ಎಂಬುದು. ಇದರ ಬಗ್ಗೆ ಮುಖ್ಯಮಂತ್ರಿಯೂ ಪುಂಖಾನುಪುಂಖವಾಗಿ ಹೇಳಿದ್ದರು. ಯಾವುದೋ ಒಂದೂರಲ್ಲಿ ಒಬ್ಬ ವೃದ್ಧ ಸತ್ತರೆ ನೋಟು ಅಮಾನ್ಯದ ಫಲವಿದು ಎಂದು ಟ್ವೀಟ್ ಮಾಡುವ ಮುಖ್ಯಮಂತ್ರಿಗಳು, ದಿನೇಶ್ ಗುಂಡೂರಾವ್ ಅವರು ಚಿಕ್ಕರಾಯಪ್ಪನವರ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ಏಕೆ ಏನೂ ಮಾತಾಡುವುದಿಲ್ಲ? ಯಾವುದೇ ಯೋಜನೆ ತೆಗೆದುಕೊಳ್ಳಿ, ಅದರಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಇದ್ದೇ ಇರುತ್ತವೆ. ಹಾಗೆಯೇ ನೋಟು ಅಮಾನ್ಯದಲ್ಲೂ. ಜನರು ಯೋಚನೆ ಮಾಡಬೇಕಾದ್ದೇನೆಂದರೆ, ಒಂದು ಯೋಜನೆಯಿಂದ ಲಾಭ ಹೆಚ್ಚಿದೆಯೋ ಅಥವಾ ನಷ್ಟವಾಗುತ್ತಿದೆಯೋ ಎಂದು. ಇದರಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು ಎಂದಾದರೆ, ಅದನ್ನು ಒಪ್ಪಿಕೊಳ್ಳಲು ಹಿಂಜರಿಕೆಯೇಕೆ? ಈ ಯೋಜನೆಯಿಂದ ನಮ್ಮ ದೇಶದ ದೊಡ್ಡ ಪಿಡುಗುಗಳಾದ ಖೋಟಾ ನೋಟು ಹಾಗೂ ಕಪ್ಪು ಹಣ ನಿವಾರಣೆಯಾಗುತ್ತದೆ ಎಂದಾದಮೇಲೆ, ರಾಜಕಾರಣಿಗಳ ವಿರೋಧವೇಕೆ? ರಾಹುಲ್ ಗಾಂಧಿ ಈಗ ಪ್ರತೀ ಭಾಷಣದಲ್ಲೂ ನಾವು ದೇಶವನ್ನು ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸ್ವತಃ ನ್ಯಾಷನಲ್ ಹೆರಾಲ್‌ಡ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು, ಜಾಮೀನಿನ ಮೇಲೆ ಹೊರಗಿರುವ ಇವರಿಂದ ಭ್ರಷ್ಟಾಚಾರ ಮುಕ್ತ ಭಾರತದಂಥ ದೊಡ್ಡ ದೊಡ್ಡ ಮಾತುಗಳನ್ನು ಕೇಳುತ್ತಿರುವುದೇ ಜನರ ದೌರ್ಭಾಗ್ಯ. ಇಂಥ ಪಕ್ಷದ ರಾಜಕಾರಣಿಗಳು, ಕಾನೂನು ಸಲಹೆಗಾರರು ನಮ್ಮ ಮೇಲೆ ಅಧಿಕಾರ ದುರುಪಯೋಗ ಮಾಡಿ ಐಟಿ, ಸಿಬಿಐ ದಾಳಿ ನಡೆಯುತ್ತಿದೆಯೆಂದು ಟಿವಿ ಮುಂದೆ ಅಳುತ್ತಿದ್ದಾರೆಂದರೆ, ಮೋದಿ ಕೊಟ್ಟ ಗುಳಿಗೆ ಸರಿಯಾಗೇ ಕೆಲಸ ಮಾಡುತ್ತಿದೆ ಎಂದಾಯಿತು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya